ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಲಿ ಮೇಲೂ ಭಾರಿ ಫಸಲು

Last Updated 17 ಜೂನ್ 2013, 19:59 IST
ಅಕ್ಷರ ಗಾತ್ರ

ಒಂದೆಡೆ ತರಕಾರಿ ರಾಶಿ, ಇನ್ನೊಂದೆಡೆ ಹಣ್ಣುಗಳ ರಾಜ್ಯ, ಮತ್ತೊಂದೆಡೆ ಕಾಳು-ಕಡಿಗಳ ಕಾರುಬಾರು, ಬೇಲಿಯ ಮೇಲೂ ಬೆಳೆಗಳ ಫಸಲು... ಇವೆಲ್ಲವೂ ನೈಸರ್ಗಿಕ, ರಾಸಾಯನಿಕ ಮುಕ್ತ.

ಇದು ಸವಣೂರ ತಾಲ್ಲೂಕು ಕಳಸೂರ ಗ್ರಾಮದಲ್ಲಿ ಶಾಂತಪ್ಪ ಅಂಬಣ್ಣನವರ್ ಅವರ ನೈಸರ್ಗಿಕ ಕೃಷಿ ಕಮಾಲ್! `ಕೃಷಿ ಕ್ಷೇತ್ರದಲ್ಲಿನ ಸಮಸ್ಯೆ ಸವಾಲುಗಳಿಗೆ ಕೇವಲ ನೈಸರ್ಗಿಕ ಕೃಷಿಯೊಂದೇ ಸೂಕ್ತ ಪರಿಹಾರ ನೀಡುತ್ತದೆ. ಆಹಾರ ಭದ್ರತೆ, ಪರಿಸರ ಸುರಕ್ಷತೆ, ದೇಶಿ ತಳಿಯ ಜಾನುವಾರುಗಳ ಸಂರಕ್ಷಣೆ, ಕೃಷಿಕನ ಸ್ವಾವಲಂಬನೆಯ ಆಶಯಗಳನ್ನೂ ಶೂನ್ಯ ಬಂಡವಾಳದಿಂದ ಸಾಧಿಸಬಹುದಾಗಿದೆ' ಎನ್ನುವ ಶಾಂತಪ್ಪ ಅವರ ಜೀವನಕ್ಕೆ ಭದ್ರತೆ ನೀಡಿರುವುದು ನೈಸರ್ಗಿಕ ಕೃಷಿ.

ಪಿತ್ರಾರ್ಜಿತವಾದ 20 ಎಕರೆ ಕೃಷಿ ಭೂಮಿಯನ್ನು ಹೊಂದಿರುವ ಶಾಂತಪ್ಪ ಅವರು, ನಾಲ್ಕು ಎಕರೆಗಳಲ್ಲಿ ಪೇರಲ ಹಣ್ಣಿನ ತೋಟ ಮಾಡಿದ್ದಾರೆ. 20 ವರ್ಷಗಳ ಕಾಲ ರಾಸಾಯನಿಕ ಕೃಷಿಯ ಸಂಕಷ್ಟಗಳನ್ನು ಅನುಭವಿಸಿ, ಇಂದು ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿಗೆ ಮರಳಿದ್ದಾರೆ. ಸುಸ್ಥಿರವಾದ ಸಮಗ್ರ ಕೃಷಿಗೆ ತಮ್ಮ ತೋಟದಲ್ಲಿ ಮುನ್ನುಡಿ ಬರೆದಿದ್ದಾರೆ. ನೈಸರ್ಗಿಕ ವಿಧಾನದಲ್ಲಿ 264 ಪೇರಲ, 140 ಚಿಕ್ಕು ಗಿಡಗಳನ್ನು ಬೆಳೆಸಿದ್ದಾರೆ.

ಇನ್ನಷ್ಟು, ಮತ್ತಷ್ಟು
ಮನೆಗೆ ಅಗತ್ಯವಾದ ತರಕಾರಿಗಳೊಂದಿಗೆ ನಿಂಬು, ನೇರಳೆ, ಸಾಗುವಾನಿ ಗಿಡಗಳಿಗೂ ತೋಟದಲ್ಲಿ ಅವಕಾಶ ಕಲ್ಪಿಸಿದ್ದಾರೆ. ತಂತಿ ಬೇಲಿಯೊಂದಿಗೆ ಸುಬಾಬುಲ್ ಪೈಪೋಟಿ ನೀಡಿ ಜೀವಂತ ಬೇಲಿ ರೂಪುಗೊಂಡಿದೆ. ಎರಡನೇ ಸುತ್ತಿನಲ್ಲಿ ಜಾನುವಾರುಗಳಿಗೆ ಹೈಬ್ರಿಡ್ ಹುಲ್ಲು ನಳನಳಿಸುತ್ತಿದೆ. ಜೊತೆಗೆ ಅತ್ಯಂತ ಅಪರೂಪ ಹಾಗೂ ಪೌಷ್ಠಿಕ ಮೇವಾದ ಕುದುರೆ ಮೆಂತೆ ಇಲ್ಲಿ ಸಮೃದ್ಧವಾಗಿ ಬೆಳೆದಿದೆ. ಅಲ್ಲಲ್ಲಿ ಅರಿಶಿಣ ಗಿಡಗಳೂ ಕಾಣುತ್ತವೆ.

ತೋಟದ ಗಿಡಗಳ ನಡುವಿನ ಸ್ಥಳವನ್ನೂ ಸೂಕ್ತವಾಗಿ ಬಳಸಿಕೊಂಡಿರುವ ಇವರು, ಸೋಯಾಬೀನ್, ಅಲಸಂದೆ, ಶೇಂಗಾ, ಕಡಲೆ, ಹೆಸರು, ಬಟಾಣಿ ಮೊದಲಾದ ಬೆಳೆಗಳನ್ನೂ ಬೆಳೆದಿದ್ದಾರೆ. ಅಂತರ ಬೇಸಾಯದ ಮೂಲಕವೇ ಕೃಷಿಯ ಖರ್ಚು ವೆಚ್ಚಕ್ಕೆ ಸರಿದೂಗಿಸಿಕೊಂಡಿದ್ದಾರೆ. ಒಂದೂವರೆ ವರ್ಷದಲ್ಲಿಯೇ ಮೊದಲ ಫಲವನ್ನು ನೀಡಿದ ಪೇರಲ ಹಣ್ಣು ಮೊದಲ ಹಂಗಾಮಿನಲ್ಲಿ 60 ಸಾವಿರ, ಎರಡನೇ ಹಂಗಾಮಿಗೆ 1 ಲಕ್ಷ ನಿವ್ವಳ ಆದಾಯ ನೀಡಿದೆ. ಈ ಹಂಗಾಮಿನಲ್ಲಿ 1.5 ಲಕ್ಷ ರೂಗಳ ಆದಾಯವನ್ನು ಅಂಬಣ್ಣನವರ್ ನಿರೀಕ್ಷಿಸಿದ್ದಾರೆ.

ಉತ್ತಮವಾದ ಗಾತ್ರ ಹಾಗೂ ರುಚಿ ಹೊಂದಿರುವ ಇವರ ತೋಟದ ಹಣ್ಣಿಗೆ ಗರಿಷ್ಠ ಬೇಡಿಕೆ, ಮಾರುಕಟ್ಟೆ ಇದೆ. ತೋಟಕ್ಕೆ ಬಂದು ಹಣ್ಣು ಖರೀದಿಸಲಾಗುತ್ತದೆ. ಪಾಲಕ್, ಬದನೆ, ಮೆಣಸು, ಮೆಂತ್ಯೆ ಮೊದಲಾದ ತೋಟದ ಸೊಪ್ಪು, ತರಕಾರಿ ಮನೆಗೆ ಬಳಕೆಯಾಗುತ್ತದೆ.

ಚಿಕ್ಕು, ಪೇರಲ ಹಣ್ಣಿನ ತೋಟವನ್ನು ಬೆಳೆಸಲು ಮಾಡಿದ್ದ 45 ಸಾವಿರ ರೂಗಳ ವೆಚ್ಚ ಪೇರಲ ಹಣ್ಣಿನ ಮೊದಲ ಹಂಗಾಮಿಗೆ ಮರಳಿ ಕೈಸೇರಿದೆ. 2 ರಿಂದ 3 ತಿಂಗಳ ಹಂಗಾಮಿನಲ್ಲಿ ಪ್ರತಿನಿತ್ಯ 2000 ಪೇರಲ ಹಣ್ಣಿನ ಇಳುವರಿ ಆಗಲಿದೆ ಎಂಬ ವಿಶ್ವಾಸ ಅವರಲ್ಲಿದೆ.

ಎಲ್ಲವೂ ನೈಸರ್ಗಿಕ
ಆರಂಭದಲ್ಲಿ ಪೇರಲ ಹಣ್ಣಿನ ಗಿಡಗಳಿಗೆ ವ್ಯಾಪಿಸಿದ್ದ ಬಿಳಿ ಹೇನು ಕೀಟಬಾಧೆಯನ್ನು ನೈಸರ್ಗಿಕ ವಿಧಾನದಲ್ಲಿಯೇ ನಿಯಂತ್ರಿಸಲಾಗಿದೆ. ಬೇವು-ಗೋಮೂತ್ರ ಮಿಶ್ರಣದ ನೀಮಾಸ್ತ್ರ, ಬೇವು, ಬೆಳ್ಳುಳ್ಳಿ, ಹಸಿಮೆಣಸು, ತಂಬಾಕು, ಗೋಮೂತ್ರ ಮಿಶ್ರಣದ ಬ್ರಹ್ಮಾಸ್ತ್ರಗಳಿಂದ ಬಿಳಿ ಹೇನು ಸಂಪೂರ್ಣ ಹತೋಟಿಗೆ ಬಂದಿದೆ. ಈ ಫಲಿತಾಂಶ ರಾಸಾಯನಿಕ ಬಳಕೆಯಿಂದ ಕಷ್ಟಸಾಧ್ಯ ಎನ್ನುತ್ತಾರೆ ಮಗ ವಿಜಯ ಕುಮಾರ.

ಗರಿಷ್ಠ ವೆಚ್ಚ, ಕನಿಷ್ಠ ಇಳುವಳಿಯ ರಾಸಾಯನಿಕ ಕೃಷಿಯಲ್ಲಿ ದುಷ್ಪರಿಣಾಮಗಳೇ ಅಧಿಕ ಎನ್ನುವ ಅಂಬಣ್ಣನವರ್,' ರಾಸಾಯನಿಕಗಳ ಬಳಕೆಯಿಂದ ಭೂಮಿ ಕಠಿಣವಾಗುತ್ತದೆ. ಗೊಬ್ಬರದ ಪ್ರಮಾಣವನ್ನು ಸತತವಾಗಿ ಹೆಚ್ಚಿಸಬೇಕಾಗುತ್ತದೆ. ಕೂಲಿ ಕಾರ್ಮಿಕರು ಸೇರಿದಂತೆ ಅನ್ಯ ನಿರ್ವಹಣಾ ವೆಚ್ಚವೂ ಹೆಚ್ಚಳವಾಗುತ್ತಿದೆ.

ಆರೋಗ್ಯದ ಮೇಲೂ ಪರಿಣಾಮವಾಗುತ್ತದೆ. ಮಳೆ ನೀರಿನ ಇಂಗುವಿಕೆಯೂ ಕಡಿಮೆಯಾಗುತ್ತದೆ. ನೈಸರ್ಗಿಕ ವಿಧಾನದಲ್ಲಿ ಮೊದಲ ವರ್ಷ ಇಳುವರಿ ಮಧ್ಯಮ ಪ್ರಮಾಣದಲ್ಲಿದ್ದರೂ ಬಳಿಕ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತದೆ. ನಿರ್ವಹಣಾ ವೆಚ್ಚ ಇಳಿಮುಖವಾಗುತ್ತದೆ. ಹೊಲದ ಮಣ್ಣು ಜೀವಂತಿಕೆ ಪಡೆಯುತ್ತದೆ.

ನೀರಿನ ಇಂಗುವಿಕೆ, ತೇವಾಂಶದ ಉಳಿಕೆ, ಆರೋಗ್ಯದ ಸುಧಾರಣೆ ಮೊದಲಾದ ಅನುಕೂಲತೆಗಳಿವೆ. ದೇಶಿ ತಳಿಯ ಜಾನುವಾರುಗಳ ಸಾಕಾಣಿಕೆಯೊಂದಿಗೆ ಹೈನುಗಾರಿಕೆಯೂ ಸಾಧ್ಯವಾಗುತ್ತದೆ. ಹೆಚ್ಚುವರಿ ಸಗಣಿ ಗೊಬ್ಬರ, ಗೋಮೂತ್ರವೂ ಕೃಷಿಗೆ ಲಭ್ಯವಾಗುತ್ತದೆ' ಎನ್ನುತ್ತಾರೆ.

ಈ ಬಾರಿಯ ಮಳೆಗಾಲದಲ್ಲಿ ಬೆಂಗಳೂರಿನಿಂದ ಅರ್ಕ ಸಹನಾ ತಳಿಯ 300 ಸೀತಾಫಲ ಗಿಡಗಳನ್ನು ತಂದು ನೆಡಲಾಗುತ್ತದೆ. 500ಕ್ಕೂ ಹೆಚ್ಚು ನುಗ್ಗೆ, ಲಿಂಬು, ಕರಿಬೇವು ಮೊದಲಾದ ಗಿಡಗಳನ್ನು ಬೆಳೆಯಲು ಉದ್ದೇಶಿಸಲಾಗಿದೆ ಎಂದು ತಿಳಿಸುವ ವಿಜಯಕುಮಾರ, ತಿಂಗಳಿಗೆ ಒಂದು ಬಾರಿ ಪ್ರತಿ ಎಕರೆಗೆ 200 ಲೀಟರ್ ಜೀವಾಮೃತಮಾತ್ರ ಬೆಳೆಗಳಿಗೆ ನೀಡಲಾಗುತ್ತದೆ.

ವರ್ಷಕ್ಕೆ ಒಂದು ಬಾರಿ ಮನೆಯ ತಿಪ್ಪೆ ಗೊಬ್ಬರ ಹಾಕಲಾಗುತ್ತದೆ. ಕೂಲಿ ಕಾರ್ಮಿಕರನ್ನು ಹೊರತು ಪಡಿಸಿ ಉಳಿದ ಯಾವುದೇ ವೆಚ್ಚಗಳು ಇಲ್ಲದ ನೈಸರ್ಗಿಕ ಕೃಷಿ ರೈತರನ್ನು ಸ್ವಾವಲಂಬಿಗೊಳಿಸುವ ಮೆಟ್ಟಿಲಾಗಿದೆ ಎಂದು ತಿಳಿಸಿದ್ದಾರೆ.

ಕೇವಲ ಕೃಷಿ ಚಟುವಟಿಕೆಗಳು ಮಾತ್ರ ನೈಸರ್ಗಿಕವಾದರೆ ಸಾಲದು, ರೈತರ ಚಿಂತನೆಗಳು, ಬದುಕು ಸಹಜವಾಗಬೇಕು. ಚಿಕ್ಕ ಕೃಷಿ ಭೂಮಿಯಲ್ಲಿಯೇ ಸಮಗ್ರ ಹಾಗೂ ಸುಸ್ಥಿರವಾದ ಕೃಷಿಯನ್ನು ಕೈಗೊಳ್ಳುವ ಮೂಲಕ ಆರ್ಥಿಕ ಉನ್ನತಿಯನ್ನೂ ಸಾಧಿಸಬಹುದು ಎನ್ನುವ ವಿಜಯಕುಮಾರ, ಕಳೆದ ಮೂರು ವರ್ಷಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಮಾಡಿದ ಖರ್ಚು ವೆಚ್ಚಗಳ ಲೆಕ್ಕಾಚಾರವನ್ನೂ ಬರೆದು ಇಟ್ಟುಕೊಂಡಿದ್ದಾರೆ.

ಪ್ರತಿಯೊಬ್ಬ ರೈತರೂ ಕೃಷಿಗಾಗಿ ಮಾಡಿದ ವೆಚ್ಚವನ್ನು ಸಮರ್ಪಕವಾಗಿ ನಿರ್ವಹಿಸಿದಲ್ಲಿ ರಾಸಾಯನಿಕ ಕೃಷಿಯ ನಿಜ ಸ್ವರೂಪ ಬಯಲಾಗುತ್ತದೆ. ಆಹಾರ ಬೆಳೆಗಳನ್ನು ತೊರೆದು, ವಾಣಿಜ್ಯ ಬೆಳೆಗಳ ಬೆನ್ನು ಹತ್ತಿದ ಫಲವೂ ಗೋಚರಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಸಾಯನಿಕ ಕೃಷಿಯಲ್ಲಿ ಗಳಿಸುವುದಕ್ಕಿಂತ ಕಳೆದುಕೊಳ್ಳುವದೇ ಹೆಚ್ಚು. ನೈಸರ್ಗಿಕ ಕೃಷಿಯಲ್ಲಿ ಮಾತ್ರ ನಿಜವಾದ ಸಮೃದ್ಧಿ ಎಂದು 35 ವರ್ಷಗಳ ತಮ್ಮ ಕೃಷಿ ಅನುಭವದ ಅಡಿ ತಿಳಿಸುವ ಅವರು, ನೈಸರ್ಗಿಕ ಕೃಷಿಯನ್ನು ಪುಸ್ತಕಗಳ ಮೂಲಕ ಕೃಷಿಕರಿಗೆ ಪರಿಚಯಿಸಿದ ಸುಭಾಷ್ ಪಾಳೇಕರ್ ಅವರ ಉಪಕಾರವನ್ನೂ ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT