ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಭಿನ್ನ ಬೆಳೆಗಳ ವೈವಿಧ್ಯ ಪ್ರಯೋಗ

ಅಮೃತ ಭೂಮಿ 60
Last Updated 20 ಜನವರಿ 2014, 19:30 IST
ಅಕ್ಷರ ಗಾತ್ರ

ಕೃಷಿ ಪದವಿ ಪಡೆದ ಯುವಕರು ನೌಕರಿಗಾಗಿ ಅಲೆದಾಡದೇ ತಮ್ಮ ಶಿಕ್ಷಣದಿಂದ ಗಳಿಸಿದ ಜ್ಞಾನವನ್ನು ಭೂಮಿಗೆ ಧಾರೆ ಎರೆದರೆ ಗ್ರಾಮಗಳು ಸಂಪೂರ್ಣ ಸ್ವಾವಲಂಬಿಯಾಗುವುದಲ್ಲದೇ ದೇಶದ ಅಭಿವೃದ್ಧಿಗೂ ಸಹಾಯಕವಾಗುತ್ತದೆ ಎಂಬುದನ್ನು ಸಾಬೀತು ಪಡಿಸಿ ತೋರಿಸಿದ್ದಾರೆ ವಿಜಾಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಬಳೂತಿ ಗ್ರಾಮದ ನಂದಬಸಪ್ಪ ಚೌಧರಿ.
ಒಂದೂವರೆ ದಶಕದಿಂದ ತಮ್ಮ 13 ಎಕರೆ ಭೂಮಿಯಲ್ಲಿ ನೈಸರ್ಗಿಕ ಕೃಷಿಯ ಜೊತೆಗೆ ಸಾವಯವ ಕೃಷಿ ಪದ್ಧತಿಯನ್ನೂ ಅಳವಡಿಸಿಕೊಂಡು ಭೇಷ್‌ ಎನಿಸಿಕೊಂಡಿದ್ದಾರೆ. ವಿಭಿನ್ನ ಬೆಳೆಗಳನ್ನು ಬೆಳೆಯುತ್ತ ವೈವಿಧ್ಯ ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿರುವ ಅವರು ಇಂದು ಈ ಭಾಗದಲ್ಲಿ ಹೆಸರುವಾಸಿ.

ತಮ್ಮ ತೋಟದಲ್ಲಿ ಸುಮಾರು 40 ಜಾನುವಾರುಗಳನ್ನು ಸಾಕಿರುವ ಅವರು ಅವುಗಳ ಸೆಗಣಿ, ಮೂತ್ರಗಳಿಂದ ಎರಡು ಗೋಬರ್ ಗ್ಯಾಸ್‌ಗಳನ್ನು ನಿರ್ಮಿಸಿ ಅಡುಗೆ ಮನೆ ಹಾಗೂ ಸೈಕಲ್ ಮೋಟರ್‌ಗಳಿಗೆ ಇಂಧನ ಪೂರೈಸಿಕೊಳ್ಳುತ್ತಿದ್ದಾರೆ.

ತಮ್ಮ ಜಮೀನಿಗೆ ಬೇಕಾಗುವ ಗೊಬ್ಬರವನ್ನು ನಿರ್ಮಿಸಲು ಎರೆಹುಳು ಘಟಕವನ್ನು ನಿರ್ಮಿಸಿಕೊಂಡು, ಕೊಳೆತ ಸಸ್ಯಗಳ ತ್ಯಾಜ್ಯದಿಂದ ಬರುವ ಎರೆಜಲವನ್ನು ಹೊಲದ ಬೆಳೆಗಳಿಗೆ ಸಿಂಪಡಿಸಿ ಬೆಳೆಗಳನ್ನು ಆರೋಗ್ಯಕರವಾಗಿ ಬೆಳೆಸಿದ್ದಾರೆ.

ಇವರ ಹೊಲದ ಯಾವುದೇ ಭಾಗದಲ್ಲಿ ಕೈಯಾಡಿಸಿದರೂ ಎರೆಹುಳಗಳಿಂದ ತಯಾರಿಸಿದ ಸಾವಯವ ಗೊಬ್ಬರ ಹಾಗೂ ಅದರಿಂದ ಬೆಳೆದ ವೈವಿಧ್ಯಮಯ ಬೆಳೆಗಳದೇ ರಾಜ್ಯಭಾರ. ‘ಒಂದು ಕೆ.ಜಿ ಎರೆಹುಳು ತಂದು ಬೆಳೆಸಿದರೆ 90ದಿನ ಬದುಕುತ್ತವೆಯಲ್ಲದೇ, ಒಂದು ಕ್ವಿಂಟಲ್‌ನಷ್ಟು ಮರಿಗಳನ್ನು ಹಾಕಿ ಗೊಬ್ಬರ ತಯಾರಿಸಲು ಸಹಾಯಕವಾಗುತ್ತವೆ’ ಎಂದು ತಮ್ಮ ಕೃಷಿ ಅನುಭವ ತಿಳಿಸುತ್ತಾರೆ ನಂದಬಸಪ್ಪ.

13 ಎಕರೆ ಹೊಲದಲ್ಲಿ 6 ಎಕರೆ ಕಬ್ಬು ಬೆಳೆಯಲು ತಯಾರಿ ಮಾಡಿಕೊಂಡಿದ್ದಾರೆ. 86032 ತಳಿಯ ಕಬ್ಬಿನ ಸಸಿಗಳನ್ನು ಪ್ಲಾಸ್ಟಿಕ್‌ ಡಬ್ಬಗಳಲ್ಲಿ ತಾವೇ ಬೆಳೆಸುತ್ತಿದ್ದಾರೆ. ‘ಇವುಗಳಿಂದ ಹೆಚ್ಚು ಇಳುವರಿ ಬರುವುದಲ್ಲದೇ ಬೇಗ ಕೆಡುವುದಿಲ್ಲ. ಈ ಬಾರಿ ಎಕರೆ 200 ಟನ್ ಕಬ್ಬು ಬೆಳೆಯುವ ಆತ್ಮವಿಶ್ವಾಸ ಇದೆ’ ಎನ್ನುತ್ತಾರೆ ಅವರು.

ಬದುಗಳಲ್ಲಿ ಮೇವು
ತಮ್ಮ ಹೊಲದ ಬದುಗಳಲ್ಲಿ 40 ಜಾನುವಾರುಗಳಿಗೆ ಬೇಕಾಗುವ ಮೇವನ್ನು ಬೆಳೆಯುತ್ತಾರೆ. ತೆಂಗು, ಮಾವು, ಸಾಗುವಾನಿ, ದಾಳಿಂಬೆ, ಪೇರಲ, ಬಾಳೆ, ಕಬ್ಬು, ಈರುಳ್ಳಿ, ನುಗ್ಗೆ ಸಹಿತ ವಿವಿಧ ಬೆಳೆಗಳನ್ನು ಬೆಳೆದು ಲಾಭದತ್ತ ಮುಖ ಮಾಡಿರುವ ಇವರು, ಪ್ರತಿ ವರ್ಷ ಒಂದು ಎಕರೆ ದಾಳಿಂಬೆ ಗಿಡಗಳಿಂದ ಸಸಿಗಳನ್ನು ತಯಾರಿಸಿ ಮಾರಿ ₨ 25ಲಕ್ಷ  ಲಾಭ ಗಳಿಸುತ್ತಿದ್ದಾರೆ.

‘ಕೃಷಿ ಮಾಡುವಾಗ ತಾಳ್ಮೆ, ಸಹನೆ ಮುಖ್ಯ ಎನ್ನುವ ಇವರು, ರೈತರು ಒಂದೇ ಪ್ರಯತ್ನಕ್ಕೆ ಸರಿಯಾದ ಬೆಲೆ ಸಿಗಲಿಲ್ಲವೆಂದು ಆತ್ಮವಿಶ್ವಾಸ ಕಳೆದುಕೊಳ್ಳಬಾರದು. ಬೆಳೆಗಳನ್ನು ಬೆಳೆಯುವ ಕಲೆಯನ್ನು ಅನುಭವದಿಂದ ಕರತಲಾಮಲಕ ಮಾಡಿಕೊಂಡರೇ ಒಕ್ಕಲುತನದಲ್ಲಿ ರೈತನಿಗೆ ಸೋಲೇ ಇಲ್ಲ’ ಎನ್ನುತ್ತಾರೆ.

‘2007ರಲ್ಲಿ ಹಚ್ಚಿದ ಬಾಳೆಯನ್ನು ಸಾವಯವ ಕೃಷಿ ಪದ್ಧತಿಯಿಂದಾಗಿ ಇನ್ನೂ ಬೆಳೆಯುತ್ತಿದ್ದೇನೆ. ಕಬ್ಬಿನ ನಡುವೆ ಅಂತರ ಬೆಳೆಯಾಗಿ

ಕಲ್ಲಂಗಡಿ ಹಣ್ಣುಗಳನ್ನು ಬೆಳೆಯುತ್ತೇನೆ. ಹೊಲದ ಬದುಗಳಲ್ಲಿ ಮಾವಿನಗಿಡ, ತೆಂಗು, ಸಾಗುವಾನಿ, ನುಗ್ಗೆಗಿಡ, ಹಾಗೂ ಅವರೆ ಬಳ್ಳಿ ಬೆಳೆಯುತ್ತಾ ಸಂತೋಷದಿಂದ ಇದ್ದೇನೆ’ ಎನ್ನುವ ಅವರು, ಈ ಬೆಳೆಗಳಿಗೆ ನೀರಿನ ಅನುಕೂಲಕ್ಕಾಗಿ 52/32 ಅಡಿ ಉದ್ದಗಲದ ಹಾಗೂ 6ಅಡಿ ಆಳದ ನೀರಿನ ಹೊಂಡ ನಿರ್ಮಿಸಿಕೊಂಡಿದ್ದಾರೆ. ಇದರಿಂದ ವಿದ್ಯುತ್ ಇಲ್ಲದ ಸಮಯದಲ್ಲಿ ಇಡೀ ಹೊಲಕ್ಕೆ ನೀರುಣಿಸಲು ಅನುಕೂಲ ಕಲ್ಪಿಸಿಕೊಂಡಿದ್ದಾರೆ.

ಪ್ರಶಸ್ತಿಗಳಿಗೆ ಭಾಜನ
ಇವರ ಈ ಪ್ರಗತಿಪರ ಕೃಷಿ ಪದ್ಧತಿಯ ಅನುಸರಣೆಯಿಂದಾಗಿ ಸಾಕಷ್ಟು ಪ್ರಶಸ್ತಿಗಳೂ ಬಂದಿವೆ. ಕೃಷಿ ಇಲಾಖೆಯ ಕೃಷಿ ಪಂಡಿತ ಪ್ರಶಸ್ತಿ ಸೇರಿದಂತೆ ಇತರ ಸಂಘ ಸಂಸ್ಥೆಗಳೂ ಸನ್ಮಾನಿಸಿವೆ. ಕೃಷಿ ಸಂಪನ್ಮೂಲ ವ್ಯಕ್ತಿಯಾಗಿ ಹಲವು ಕಡೆ ಉಪನ್ಯಾಸಕನಾಗಿ ದುಡಿದಿದ್ದಾರಲ್ಲದೇ, ಕೃಷಿಯಲ್ಲಿ ಅಧ್ಯಯನಕ್ಕಾಗಿ ಚೀನಾ ದೇಶದ ಪ್ರವಾಸವನ್ನೂ ಮಾಡಿಬಂದು ಅಲ್ಲಿನ ರೈತರ ಪ್ರಗತಿಪರ ವಿಚಾರಗಳನ್ನು ತಮ್ಮ ಹೊಲದಲ್ಲಿ ಅಳವಡಿಸಿಕೊಂಡಿದ್ದಾರೆ.

ಇಂದು ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿರುವುದು ಕಳವಳದ ಸಂಗತಿ ಎನ್ನುವ ಇವರದ್ದು 45 ಮಂದಿ ಒಟ್ಟಾಗಿ ಬಾಳುವ ತುಂಬು ಸಂಸಾರ. ವಿಭಕ್ತ ಕುಟುಂಬದಿಂದ ಕೃಷಿ ಕೆಲಸಗಳಿಗೆ ಕಾರ್ಮಿಕರ ಸಮಸ್ಯೆಯಾಗುವುದಿಲ್ಲ ಎಂದು ಸಂತಸದಿಂದ ನುಡಿಯುತ್ತಾರೆ.

‘ಕೃಷಿ ಕಾರ್ಯವ ಮಾಡುವ ಸದ್ಭಕ್ತನ ಪಾದವ ತೋರಿ ಎನ್ನನು ಬದುಕಿಸಯ್ಯ’ ಎಂದು 12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ನೇಗಿಲಯೋಗಿಯ ಬದುಕಿನ ಶ್ರೀಮಂತಿಕೆಯನ್ನು ತಮ್ಮ ವಚನಗಳಲ್ಲಿ ಬಣ್ಣಿಸಿದ್ದಾರೆ. ಆದರೂ ಆಧುನಿಕತೆಯ ಭರಾಟೆಯಿಂದ ಇಂದು ಕೃಷಿಯಿಂದ ಹಲವರು ವಿಮುಖರಾಗುತ್ತಿರುವ ಹೊತ್ತಿನಲ್ಲಿ ಕೃಷಿಯಿಂದಲೇ ಸಮಾಜದಲ್ಲಿ ನೆಲೆ ಬೆಲೆಯನ್ನು ಕಂಡುಕೊಂಡಿರುವ ನಂದಬಸಪ್ಪ ಚೌಧರಿಯವರು ಕೃಷಿಯಿಂದ ಸ್ವಾವಲಂಬಿತನ ಎಂದರೆ ಏನು ಎಂಬುದನ್ನು ತೋರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಸಂಪರ್ಕಕ್ಕೆ  9845510624.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT