ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶ್ರೀ’ ವಿಶೇಷ

Last Updated 20 ಜನವರಿ 2014, 19:30 IST
ಅಕ್ಷರ ಗಾತ್ರ

ಭತ್ತ ಬೆಳೆಯಬೇಕೆಂಬ ಆಸೆ. ಆದರೆ ಸಾಕಷ್ಟು ನೀರಿಲ್ಲವೆಂಬ ಚಿಂತೆ. ಇದಕ್ಕೇನು ಪರಿಹಾರ? 
ಮೂರು ವರ್ಷಗಳ ಹಿಂದೆ ಇದೇ ಚಿಂತೆಯಲ್ಲಿದ್ದರು ಕೋಲಾರ ಜಿಲ್ಲೆಯ ದೊಡ್ಡ ಪೊನ್ನಂಡಹಳ್ಳಿಯ ಗ್ರಾಮಸ್ಥರು. ಆ ಊರಲ್ಲಿ ಯಾವುದೇ ನದಿಯಿಲ್ಲ. ಪಕ್ಕದಲ್ಲಿರುವ ಕಾಮಸಂದ್ರದ ಕೆರೆ ಕೋಡಿ ಬಿದ್ದರೆ ಮಾತ್ರ ಕಾಲುವೆಯಲ್ಲಿ ನೀರು ಹರಿದು ಬರುತ್ತದೆ. ಆದರೆ ಆ ಕೆರೆ ನಾಲ್ಕೈದು ವರ್ಷಗಳಿಂದ ಭರ್ತಿಯಾಗಲೇ ಇಲ್ಲ. ಪರಿಸ್ಥಿತಿ ಹೀಗಿದ್ದರೂ ಇಲ್ಲಿ ಕಳೆದ ವರ್ಷ ನಲ್ವತ್ತೇಳು ಜನ ರೈತರು ಭತ್ತ ಬೆಳೆದಿದ್ದರು. ಐವತ್ತಮೂರು ಎಕರೆ ಭತ್ತ ನಾಟಿಯಾಗಿತ್ತು!

ಅದುವೇ ಈ ಊರಿನ ವಿಶೇಷ. ಒಂದರ್ಥದಲ್ಲಿ ಇದು ‘ಶ್ರೀ’  ಭತ್ತದ ಊರು. ಇಲ್ಲಿ ಎಲ್ಲಾ ರೈತರು ಭತ್ತ ಬೆಳೆಯುವುದು ‘ಶ್ರೀ’  ಪದ್ಧತಿಯಿಂದ. ನಾವು ಊಟ ಮಾಡುವ ಅನ್ನ ನಾವೇ ಬೆಳೆಯಬೇಕು ಅನ್ನುವ ಹಂಬಲ ಇಲ್ಲಿಯ ಹಿರಿಯರಿಗೆ.

ಈಗಿನ ದರದಲ್ಲಿ ಭತ್ತ ಬೆಳೆದರೂ ಲಾಭವೇ ಅಂತ ಲೆಕ್ಕ ಹಾಕುವ ಯುವಕರು ಇದಕ್ಕೆ ದನಿಗೂಡಿಸಿದರು. ‘ಶ್ರೀ’ ಪದ್ಧತಿಯಲ್ಲಿ ಭತ್ತ ಬೆಳೆಯುವ ಯೋಚನೆ ಇವರ ತಲೆಗೆ ತುಂಬಿದ್ದು ಬೆಂಗಳೂರಿನ ‘ಎ.ಎಂ.ಇ ಪ್ರತಿಷ್ಠಾನ’. ಈ ಸಂಸ್ಥೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಉಪಕುಲಪತಿಗಳಾದ ಡಾ. ದ್ವಾರಕೀನಾಥ್‌ರವರ ಕನಸಿನ ಕೂಸು.

ಕಡಿಮೆ ಒಳಸುರಿ ಬಳಸಿ ಸುಸ್ಥಿರ ಕೃಷಿಯತ್ತ ಸಾಗುವುದು ಈಗಿನ ಕೃಷಿರಂಗದ ಮೊದಲ ಆದ್ಯತೆಯಾಗಬೇಕು ಅನ್ನುವುದು ಈ ಪ್ರತಿಷ್ಠಾನದ ನಿಲುವು. ಅದಕ್ಕಾಗಿ ‘ಶ್ರೀ’ ಪದ್ಧತಿ ಭತ್ತದ ಅನುಕೂಲಗಳನ್ನು ರೈತರಿಗೆ ಮನದಟ್ಟುಮಾಡುವಲ್ಲಿ ಯಶಸ್ವಿಯಾಯಿತು.

ನಾಟಿ ವಿಧಾನ ಹೀಗೆ
‘ಶ್ರೀ’ ಪದ್ಧತಿಯಲ್ಲಿ ಎಂಟು ದಿನದ ಒಂಟಿ ಪೈರನ್ನು ದೂರ ದೂರ ನಾಟಿ ಮಾಡಬೇಕು. ಗದ್ದೆಯಲ್ಲಿ ನೀರು ನಿಲ್ಲಿಸುವಂತಿಲ್ಲ. ಮಣ್ಣಿನಲ್ಲಿ ತೇವಾಂಶ ಇರುವಂತೆ ನೋಡಿಕೊಂಡು ನೀರು ಕಟ್ಟಿದರೆ ಸಾಕು. ಇದಕ್ಕೆ ಕೊಳವೆ ಬಾವಿಯ ನೀರಿದ್ದರೂ ಸಾಕು. ಕಡಿಮೆ ಬಿತ್ತನೆ ಬೀಜ ಉಪಯೋಗಿಸುವುದರಿಂದ ಖರ್ಚೂ ಕಡಿಮೆ.

ತಿಪ್ಪೆ ಗೊಬ್ಬರ ಯಥೇಚ್ಚವಾಗಿ ಹಾಕಿರುವುದರಿಂದ ರಾಸಾಯನಿಕ ಗೊಬ್ಬರಕ್ಕೆಂದು ಜಾಸ್ತಿ ದುಡ್ಡು ಖರ್ಚು ಇಲ್ಲ. ಕಳೆ ಕೀಳಲು ಕೋನೋ ವೀಡರ್ ಅನ್ನುವ ಸರಳ ಉಪಕರಣ ಬಳಸಿದ್ದರಿಂದ ಕೂಲಿಯವರ ಅವಲಂಬನೆ ಇಲ್ಲ. ಯಾವುದೇ ರೋಗ ಮತ್ತು ಕೀಟದ ಬಾಧೆಯೂ ಇರಲಿಲ್ಲ. ಹಾಗಾಗಿ ಔಷಧಿ ಹೊಡೆಯುವ ಪ್ರಸಂಗವೇ ಬಂದಿಲ್ಲವೆಂದು ಹೇಳುತ್ತಾರೆ ನಾರಾಯಣ ರಾವ್‌ರವರು. ಅವರು ಈ ವರ್ಷ ಒಂದೂವರೆ ಎಕರೆಯಲ್ಲಿ ಬಿಪಿಟಿ ಸೋನಾ ಭತ್ತ ಬೆಳೆದಿದ್ದಾರೆ.

ಪ್ರತಿ ಬುಡದಲ್ಲೂ ಐವತ್ತರಿಂದ ಅರವತ್ತು ತೆಂಡೆಯೊಡೆದು ತೆನೆಗಳು ಕಾಳು ಕಟ್ಟಿದ್ದು, ಉತ್ತಮ ಫಸಲು ಬಂದಿದೆ. ಈಗ ಕೊಯಿಲು ಮಾಡಲು ಸಜ್ಜಾಗಿ ನಿಂತಿದೆ. ಅವರು ಕಳೆದ ಹಂಗಾಮಿನಲ್ಲಿ ಮುಕ್ಕಾಲು ಎಕರೆಗೆ ಇಪ್ಪತ್ತೇಳು ಚೀಲ ಭತ್ತ ಬೆಳೆದಿದ್ದರು.

ಈ ವರ್ಷ ಇನ್ನಷ್ಟು ರೈತರು ಈ ವಿಧಾನದಲ್ಲಿ ಭತ್ತ ಬೆಳೆಯುವ ಉತ್ಸಾಹದಲ್ಲಿದ್ದರು. ಆದರೆ ಮಳೆಯ ಅಭಾವದಿಂದಾಗಿ ಹೆಚ್ಚಿನವರ ಕೊಳವೆ ಬಾವಿಗಳು ಬತ್ತಿ ಹೋಗಿದೆ. ಕೇವಲ ಮಳೆಯಾಧಾರಿತವಾಗಿ ಭತ್ತ ಬೆಳೆಯುವುದು ಕಷ್ಟ ಅನ್ನುತ್ತಾರೆ ಸಂಸ್ಥೆಯ ಪ್ರೇರಕರಾದ ಲಕ್ಷ್ಮಣ ರಾವ್‌ರವರು. ನೀರಿನ ಅನುಕೂಲವಿದ್ದ ಒಂಬತ್ತು ರೈತರು ಹದಿನೈದು ಎಕರೆಯಲ್ಲಿ ಈ ವರ್ಷವೂ ಭತ್ತ ಬೆಳೆದಿದ್ದಾರೆ. ಅದೂ ‘ಶ್ರೀ’ ಪದ್ಧತಿಯಲ್ಲೇ.

ರಾಗಿಗೂ ‘ಶ್ರೀ’ ಪದ್ಧತಿ!
ಭತ್ತದ ‘ಶ್ರೀ’ ಪದ್ಧತಿಯನ್ನು ಹೋಲುವ ರೀತಿಯಲ್ಲೇ ರಾಗಿಯನ್ನೂ ಬೆಳೆಯಲಾಗಿದೆ. ಆದರೆ ಇದು ಪೂರ್ತಿ ಮಳೆಯಾಶ್ರಿತ ಬೆಳೆ. ಇದಕ್ಕೆ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡಿ ಮಳೆನೀರು ಇಂಗಿಸುವ ಕೆಲಸ ಮೊದಲು ಮಾಡುತ್ತಾರೆ. ನಾಟಿ ಮಾಡುವ ಹದಿನೈದು ದಿನಕ್ಕೆ ಮೊದಲು ಸಸಿಮಡಿ ಮಾಡಬೇಕು. ಎಂಟು ದಿನ ಕಳೆದು ಮತ್ತೊಂದು ಸಸಿಮಡಿ ಮಾಡಿದರೆ ಉತ್ತಮ. ನಾಟಿ ಮಾಡುವ ಸಮಯದಲ್ಲಿ ಮಳೆ ಕೈಕೊಡಬಹುದೆಂದು ಈ ಮುನ್ನೆಚ್ಚರಿಕೆ. ಸಾಲಿನಿಂದ ಸಾಲಿಗೆ ಒಂದೂವರೆ ಅಡಿ ಅಂತರವಿಟ್ಟು ಅಡಿಗೊಂದರಂತೆ ಗುಳಿ ಮಾಡಿ ಅದಕ್ಕೆ ತಿಪ್ಪೇ ಗೊಬ್ಬರ ಹಾಕಬೇಕು. ಹದಿನೈದು ದಿವಸದ ಪೈರು ನಾಟಿ ಮಾಡಬೇಕು.

ಲಕ್ಷ್ಮಣ ರಾವ್‌ರವರು ಈ ವಿಧಾನದಲ್ಲಿ ಎರಡು ಎಕರೆಯಲ್ಲಿ ‘ಎಮ್‌.ಆರ್ -೧’ ರಾಗಿ ಬೆಳೆದಿದ್ದರು. ಎಕರೆಗೆ ಇಪ್ಪತ್ತೆರಡು ಮೂಟೆ ರಾಗಿ ಸಿಕ್ಕಿದೆ. ಮೊದಲು ಈ ರೀತಿ ರಾಗಿ ಬೆಳೆಯುತ್ತಿದ್ದದ್ದನ್ನು ಹಿರಿಯರು ನೆನಪಿಸಿಕೊಳ್ಳುತ್ತಾರೆ. ಆಗ ಇದನ್ನು ಗುಳಿ ರಾಗಿ ಅಂತ ಕರೆಯುತ್ತಿದ್ದರು. ರಾಗಿಯ ಮಧ್ಯೆ ಅವರೆ ಮತ್ತು ತೊಗರಿ ಬಿತ್ತುವುದು ಕಡ್ಡಾಯ. ಇದು ಮಣ್ಣಿನ ಫಲವತ್ತತೆ ಹೆಚ್ಚಿಸಲು ಇರುವ ಉಪಾಯ.

ಬೆಂಗಳೂರಿಗೆ ಹೋಗಲು ರೈಲಿನ ಅನುಕೂಲವಿರುವುದರಿಂದ ಈ ಊರಿನ ಯುವಕರು ಕೂಡಾ ನಗರದತ್ತ ವಲಸೆ ಹೋಗುತ್ತಿದ್ದರು. ಆದರೆ ಸಂಸ್ಥೆಯ ಈ ಪ್ರಯತ್ನ ಯುವಕರಲ್ಲೂ ಕೃಷಿಯತ್ತ ಆಸಕ್ತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಕೆಲವು ಯುವಕರು ಈಗಾಗಲೇ ನಗರದ ಜಂಜಾಟದ ಬದುಕಿನಿಂದ ಬೇಸತ್ತು ಪುನಃ ಹಳ್ಳಿಗೆ ವಾಪಸಾಗಿದ್ದಾರೆ.

ಇಂತಹ ಪ್ರಯತ್ನಗಳು ಪ್ರತಿ ಹಳ್ಳಿಯಲ್ಲೂ ನಡೆಯಬೇಕಾಗಿದೆ. ಇಲ್ಲದೇ ಹೋದರೆ ನಮ್ಮ ದೇಶದ ಆಹಾರ ಉತ್ಪಾದನೆ ಕುಂಠಿತಗೊಳ್ಳುವ ಅಪಾಯ ತಪ್ಪಿದ್ದಲ್ಲ. ಹೆಚ್ಚಿನ ಮಾಹಿತಿಗೆ; ೯೯೦೦೪೩೬೨೩೬.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT