ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

SSLCಯಲ್ಲಿ ಪ್ರಥಮ ಸ್ಥಾನ ಪಡೆದ ಅಂಕಿತಾಗೆ ₹ 5 ಲಕ್ಷ ನೀಡಿದ ಡಿಕೆಶಿ

ತೃತೀಯ ಸ್ಥಾನ ಪಡೆದ ನವನೀತ್‌ಗೆ ₹ 2 ಲಕ್ಷ
Published 14 ಮೇ 2024, 10:28 IST
Last Updated 14 ಮೇ 2024, 10:28 IST
ಅಕ್ಷರ ಗಾತ್ರ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಅಂಕಿತಾಗೆ ₹ 5 ಲಕ್ಷ ಮತ್ತು ಮೂರನೇ ಸ್ಥಾನ ಗಳಿಸಿರುವ ಮಂಡ್ಯದ ನವನೀತ್‌ಗೆ ₹ 2 ಲಕ್ಷ ಪ್ರೋತ್ಸಾಹಧನ ನೀಡಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗೌರವಿಸಿದರು.

ಶಿವಕುಮಾರ್‌ ಅವರ ಆಹ್ವಾನದ ಮೇರೆಗೆ ಪೋಷಕರೊಂದಿಗೆ ಬೆಂಗಳೂರಿಗೆ ಬಂದಿದ್ದ ಅಂಕಿತಾ, ಉಪ ಮುಖ್ಯಮಂತ್ರಿಯವರನ್ನು ಮಂಗಳವಾರ ಭೇಟಿಮಾಡಿದರು. ಆಗ, ವಿದ್ಯಾರ್ಥಿನಿಗೆ ₹ 5 ಲಕ್ಷ ಮೊತ್ತದ ಚೆಕ್‌ ನೀಡಿ ಗೌರವಿಸಿದರು.

ಅದೇ ಸಂದರ್ಭದಲ್ಲಿ ತಮ್ಮನ್ನು ಭೇಟಿಮಾಡಿದ ನವನೀತ್‌ಗೂ ಗೌರವ ಸಲ್ಲಿಸಿದ ಶಿವಕುಮಾರ್‌, ₹ 2 ಲಕ್ಷ ಪ್ರೋತ್ಸಾಹಧನ ನೀಡುವುದಾಗಿ ಪ್ರಕಟಿಸಿದರು. ವಿದ್ಯಾರ್ಥಿಗೆ ಚೆಕ್‌ ನೀಡುವಂತೆ ತಮ್ಮ ಕಚೇರಿ ಸಿಬ್ಬಂದಿಗೆ ಸೂಚಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಿವಕುಮಾರ್‌, ‘ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡಿದಾಗ, ಬಾಗಲಕೋಟೆಯ ಬಸವರಾಜು ಅವರ ಪುತ್ರಿ ಅಂಕಿತಾ 625 ಕ್ಕೆ 625 ಅಂಕಗಳನ್ನು ಪಡೆದಿರುವುದನ್ನು ಕಂಡು ಸಂತೋಷವಾಗಿತ್ತು. ಬಹಳ ಹೆಮ್ಮೆ ಎನಿಸಿತು. ನಮ್ಮ ಸರ್ಕಾರಿ ಶಾಲೆ ಮಕ್ಕಳು ಹಾಗೂ ಅಲ್ಲಿನ ಶಿಕ್ಷಕರು ಬಹಳ ಸಮರ್ಥರಿದ್ದಾರೆ. ಅಂಕಿತಾಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೆ. ಬೆಂಗಳೂರಿಗೆ ಬಂದಾಗ ನನ್ನ ಮನೆಗೆ ಬರುವಂತೆ ಆಹ್ವಾನಿಸಿದ್ದೆ. ಅವರು ಇಂದು ಬಂದಿದ್ದಾರೆ. ಸರ್ಕಾರದ ಪರವಾಗಿ ನಾನು ಈ ಹೆಣ್ಣುಮಗಳು ಹಾಗೂ ಆಕೆಯ ಪೋಷಕರನ್ನು ಅಭಿನಂದಿಸುತ್ತೇನೆ’ ಎಂದರು.

‘ವಿದ್ಯಾರ್ಥಿನಿಯ ಮುಂದಿನ ವಿದ್ಯಾಭ್ಯಾಸಕ್ಕೆ ₹ 5 ಲಕ್ಷ ಹಣವನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ. ಇನ್ನು ಮಂಡ್ಯದ ನವನೀತ್ ಕೂಡ ಸರಕಾರಿ ಶಾಲೆಯಲ್ಲಿ ಓದಿ ಮೂರನೇ ಸ್ಥಾನ ಪಡೆದಿದ್ದು, ಈತನಿಗೆ 2 ಲಕ್ಷ ಉಡುಗೊರೆಯಾಗಿ ನೀಡುತ್ತಿದ್ದೇನೆ. ಇವರಿಗೆ ಒಳ್ಳೆಯದಾಗಲಿ’ ಎಂದು ಹಾರೈಸಿದರು.

<div class="paragraphs"><p>ಮಂಡ್ಯದ ನವನೀತ್‌ಗೆ ₹ 2 ಲಕ್ಷ ಪ್ರೋತ್ಸಾಹಧನ ನೀಡಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗೌರವಿಸಿದರು.</p></div>

ಮಂಡ್ಯದ ನವನೀತ್‌ಗೆ ₹ 2 ಲಕ್ಷ ಪ್ರೋತ್ಸಾಹಧನ ನೀಡಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಗೌರವಿಸಿದರು.

‘ನನ್ನ ಆಸಕ್ತಿ ರಾಜಕಾರಣವಾದರೂ ನನ್ನ ಆಯ್ಕೆ ಶಿಕ್ಷಣ ಕ್ಷೇತ್ರ ಎಂದು ಯಾವಾಗಲೂ ಹೇಳುತ್ತಲೇ ಇರುತ್ತೇನೆ. ಗ್ರಾಮೀಣ ಭಾಗದ ಪಂಚಾಯ್ತಿ ಮಟ್ಟದಲ್ಲಿ ಸರ್ಕಾರಿ ಶಾಲೆಗಳನ್ನು ವಿಶ್ವ ಗುಣಮಟ್ಟದ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಮಾಡುವುದು ನನ್ನ ಗುರಿ’ ಎಂದರು.

‘ಸರ್ಕಾರದ ಹಣ ಬಳಸದೇ, ಕಾರ್ಪೋರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿ ಮೂಲಕ ಈ ಶಾಲೆಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದು, ಚುನಾವಣೆ ನೀತಿ ಸಂಹಿತೆ ಮುಗಿದ ನಂತರ ಇವುಗಳ ನಿರ್ಮಾಣದ ಸಭೆ ಕರೆಯುತ್ತೇನೆ. ರಾಮನಗರ ಜಿಲ್ಲೆಯಲ್ಲಿ ಈಗಾಗಲೇ 20 ಶಾಲೆಗಳ ನಿರ್ಮಾಣ ಕಾರ್ಯ ಆರಂಭವಾಗಿದೆ. ಈ ಶಾಲೆಗಳ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಶಿಕ್ಷಣ ಕೊಡಿಸಬೇಕು ಎಂಬ ಉದ್ದೇಶ ನಮ್ಮದಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT