ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪತಂಜಲಿಯನ್ನು ಕಟಕಟೆಗೆ ತಂದ IMA ಅಧ್ಯಕ್ಷರ ಕ್ಷಮೆಯೂ ಸ್ವೀಕಾರಕ್ಕೆ ಅರ್ಹವಲ್ಲ: SC

Published 14 ಮೇ 2024, 12:28 IST
Last Updated 14 ಮೇ 2024, 12:28 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಸರ್ವೋಚ್ಛ ನ್ಯಾಯಾಲಯದ ವಿರುದ್ಧ ಸಂದರ್ಶನವೊಂದರಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಆರ್.ವಿ.ಅಶೋಕನ್ ಅವರ ಬೇಷರತ್ ಕ್ಷಮೆಯನ್ನೂ ನಿರಾಕರಿಸಿ, ಪ್ರಶ್ನೆಗಳ ಸುರಿಮಳೆಗರೆದಿದೆ.

ಪಿಟಿಐ ಸುದ್ದಿ ಸಂಸ್ಥೆ ಇತ್ತೀಚೆಗೆ ನಡೆಸಿದ ಸಂದರ್ಶನದಲ್ಲಿ ಪತಂಜಲಿ ಆಯುರ್ವೇದ ಸಂಸ್ಥೆಯ ದಾರಿತಪ್ಪಿಸುವ ಜಾಹೀರಾತು ಪ್ರಕರಣ ಕುರಿತು ಆರ್.ವಿ.ಅಶೋಕನ್ ಮಾತನಾಡಿದ್ದರು. ‘ದುರದೃಷ್ಟಕರ ಸಂಗತಿ ಎಂದರೆ, ಭಾರತೀಯ ವೈದ್ಯಕೀಯ ಸಂಘವನ್ನು ಹಾಗೂ ಜತೆಗೆ ಖಾಸಗಿ ವೈದ್ಯರ ವೃತ್ತಿಯನ್ನು ಸುಪ್ರೀಂ ಕೋರ್ಟ್ ಟೀಕಿಸಿದೆ’ ಎಂದಿದ್ದರು.

ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂ ಕೋರ್ಟ್, ‘ನೀವು ಬೇರೊಬ್ಬರ ಮೇಲೆ ಆರೋಪ ಮಾಡುವಾಗ ಒಂದು ಬೆರಳು ಅತ್ತ ಇದ್ದರೆ, ಉಳಿದ ನಾಲ್ಕು ಬೆರಳುಗಳು ನಿಮ್ಮ ಕಡೆಯೇ ತೋರಿಸುತ್ತಿರುತ್ತವೆ ಎನ್ನುವುದನ್ನು ಮರೆಯದಿರಿ’ ಎಂದಿತ್ತು.

ಇದೇ ವಿಷಯವಾಗಿ ಮಂಗಳವಾರ ವಿಚಾರಣೆ ಮುಂದುವರಿಸಿದ ನ್ಯಾ. ಹಿಮಾ ಕೊಹ್ಲಿ ಹಾಗೂ ನ್ಯಾ. ಅಸನುದ್ದೀನ್ ಅಮಾನುಲ್ಲಾ ಅವರಿದ್ದ ಪೀಠವು, ‘ಸಂದರ್ಶನದಲ್ಲಿ ಕೂತು ನ್ಯಾಯಾಲಯದ ವಿರುದ್ಧ ಮಾತನಾಡುವುದು ಸರಿಯಲ್ಲ. ವಾಕ್ ಸ್ವಾತಂತ್ರ್ಯವನ್ನು ಎತ್ತಿಹಿಡಿದಿದ್ದು, ಮುಕ್ತ ಆಲೋಚನೆ ಮತ್ತು ಮುಕ್ತ ವಿಚಾರ ಮಂಡನೆಗೆ ಒತ್ತು ನೀಡಿರುವುದೇ ನ್ಯಾಯಾಲಯ. ಹಾಗೆಂದ ಮಾತ್ರಕ್ಕೆ ಸ್ವಯಂ ನಿಯಂತ್ರಣ ಹಾಕಿಕೊಳ್ಳುವ ಜವಾಬ್ದಾರಿಯೂ ಇರಬೇಕಿರುವುದು ಮುಖ್ಯ’ ಎಂದಿದೆ.

ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿದ ಅಶೋಕನ್, ಬೇಷರತ್ ಕ್ಷಮೆ ಕೋರಿದರು. 

ಇದನ್ನು ತಿರಸ್ಕರಿಸಿದ ನ್ಯಾಯಪೀಠ, ‘ನೀವು ಮಾಡಿದ ಕೆಲಸವನ್ನು ಅಷ್ಟು ಸುಲಭವಾಗಿ ಕ್ಷಮಿಸಲು ಸಾಧ್ಯವಿಲ್ಲ. ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿರುವಾಗ ಮತ್ತು ನೀವೂ ಅದರ ಭಾಗವಾಗಿರುವಾಗ ಹೇಳಿಕೆ ನೀಡಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿತು.

‘45 ವರ್ಷಗಳ ವೃತ್ತಿ ಅನುಭವ ಹಾಗೂ ಐಎಂಎದಂಥ ಉನ್ನತ ಸಂಸ್ಥೆಯ ಅಧ್ಯಕ್ಷರಾಗಿಯೂ, ನಿಮಗೆ ಆ ಹುದ್ದೆ ಘನತೆ ಹಾಗೂ ಜವಾಬ್ದಾರಿಗಳ ಅರಿವು ಇರಬೇಕಾಗಿತ್ತು. ನಿಮ್ಮ ಅಂತರಾಳದ ಭಾವನೆಗಳನ್ನು ಮಾಧ್ಯಮಗಳ ಮುಂದೆ ಹಂಚಿಕೊಳ್ಳಬಾರದಿತ್ತು. ಅದರಲ್ಲೂ ನ್ಯಾಯಾಲಯದ ಆದೇಶದ ವಿರುದ್ಧ ಹೇಳಿಕೆ ನೀಡುವಾಗ ಹೆಚ್ಚು ಜಾಗರೂಕರಾಗಿರಬೇಕಿತ್ತು’ ಎಂದು ಪೀಠ ಕಟುವಾಗಿ ಹೇಳಿದೆ.

‘ಅಲೋಪಥಿ ಚಿಕಿತ್ಸಾ ಪದ್ಧತಿಯನ್ನು ಟೀಕಿಸಿದ ಪತಂಜಲಿ ಆಯುರ್ವೇದ ಕಂಪನಿಯನ್ನು ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸಿದ್ದೇ ಐಎಂಎ. ನಿಮ್ಮ ಆರೋಪವನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸಿದೆ. ಅವರು ಮೂರು ಬಾರಿ ಕ್ಷಮೆ ಕೋರಿದರೂ, ಅದು ಹೃದಯಾಳದಿಂದ ಬಂದಿಲ್ಲವೆಂದು ಪೀಠ ತಿರಸ್ಕರಿಸಿತು. ಈಗ ನಿಮ್ಮ ಕ್ಷಮಾಪಣಾ ಪತ್ರಕ್ಕೂ ಅದನ್ನೇ ಹೇಳಬೇಕಾಗಿದೆ’ ಎಂದು ಪೀಠ ಹೇಳಿತು.

‘ದೇಶದ ಅತಿ ದೊಡ್ಡ ಸಂಸ್ಥೆಯಾಗಿರುವ ಐಎಂಎ, 3.5 ಲಕ್ಷ ವೈದ್ಯರನ್ನು ಹೊಂದಿದೆ. ನಿಮ್ಮ ಈ ಕಾರ್ಯದಿಂದ ನಿಮ್ಮ ಸಂಘದ ಸದಸ್ಯರಿಗೆ ಯಾವ ಸಂದೇಶವನ್ನು ಕೊಡಲು ಬಯಸಿದ್ದೀರಿ. ಸಾರ್ವಜನಿಕವಾಗಿ ನೀವು ಏಕೆ ಕ್ಷಮೆ ಕೋರಿಲ್ಲ? ಇಲ್ಲಿಗೆ ಬರುವವರೆಗೂ ಕ್ಷಮೆ ಕೋರಲು ಏಕೆ ಕಾದಿರಿ?’ ಎಂದು ಪ್ರಶ್ನೆಗಳ ಸುರಿಮಳೆಗರೆದಿದೆ.

‘ಇಲ್ಲಿ ವೈಯಕ್ತಿಕ ಸಂಘರ್ಷವಿಲ್ಲ. ಆದರೆ ನೀವು ದಾಳಿ ನಡೆಸಿದ್ದು ಸುಪ್ರೀಂ ಕೋರ್ಟ್‌ ಮೇಲೆ. ವೈಯಕ್ತಿಕವಾಗಿ ನಾವು ವಿಶಾಲ ಮನಸ್ಸಿನವರು. ಹೀಗಾಗಿ ವೈಯಕ್ತಿಕ ನೆಲೆಯಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ’ ಎಂದು ಪೀಠ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಐಎಂಎ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿ.ಎಸ್.ಪಟವಾಲಿಯಾ, ‘ನಮಗೆ ಒಂದು ಅವಕಾಶ ನೀಡಿ. ಆಗಿರುವ ತಪ್ಪನ್ನು ಸರಿಪಡಿಸಿಕೊಳ್ಳುತ್ತೇವೆ’ ಎಂದು ಮನವಿ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT