ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪುದಾರಿಗೆಳೆಯುವ ಜಾಹೀರಾತು: ಪತಂಜಲಿ ವಿರುದ್ಧ ಸುಪ್ರೀಂ ಕೋರ್ಟ್‌ ಗರಂ

ಉತ್ಪನ್ನಗಳ ಕುರಿತು ತಪ್ಪುದಾರಿಗೆಳೆಯುವ ಜಾಹೀರಾತುಗಳು * ನ್ಯಾಯಾಂಗ ನಿಂದನೆ ಸಂಬಂಧ ನೋಟಿಸ್‌ ಜಾರಿ
Published 27 ಫೆಬ್ರುವರಿ 2024, 16:01 IST
Last Updated 27 ಫೆಬ್ರುವರಿ 2024, 16:01 IST
ಅಕ್ಷರ ಗಾತ್ರ

ನವದೆಹಲಿ: ವಿವಿಧ ಕಾಯಿಲೆಗಳ ಚಿಕಿತ್ಸೆ ಸಂಬಂಧ ಪತಂಜಲಿಯು ತನ್ನ ಉತ್ಪನ್ನಗಳ ಕುರಿತು ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡುತ್ತಿದ್ದರೂ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ.

ಅಲ್ಲದೆ ಈ ರೀತಿಯ ಜಾಹೀರಾತುಗಳನ್ನು ನೀಡದಂತೆ ಅದು ಯೋಗಗುರು ಬಾಬಾ ರಾಮದೇವ್‌ ನಡೆಸುತ್ತಿರುವ ಕಂಪನಿಗೆ ನಿರ್ಬಂಧವನ್ನೂ ವಿಧಿಸಿದೆ.

ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್‌ ಅಮಾನುಲ್ಲ ಆವರ ಪೀಠವು, ಪತಂಜಲಿ ಆಯುರ್ವೇದ ಕಂಪನಿ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕರಿಗೆ ನ್ಯಾಯಾಂಗ ನಿಂದನೆ ಕುರಿತು ಶೋಕಾಸ್‌ ನೋಟಿಸ್‌ ಜಾರಿ ಮಾಡಿದೆ.

‘ನಾನು ಈ ಕುರಿತ ಪ್ರಿಂಟ್‌ಔಟ್‌ಗಳು ಮತ್ತು ಅನುಬಂಧಗಳನ್ನು ತಂದಿದ್ದೇನೆ. ಇಂದು ಅತ್ಯಂತ ಕಠಿಣ ಆದೇಶವನ್ನು ಹೊರಡಿಸುತ್ತೇವೆ’ ಎಂದು ಹೇಳಿದ ನ್ಯಾಯಮೂರ್ತಿ ಅಮಾನುಲ್ಲಾ ಅವರು, ‘ಈ ಸಂಬಂಧ ಹಿಂದೆಯೇ ನಾವು ನಿಮಗೆ ಎಚ್ಚರಿಕೆ ನೀಡಿದ್ದೇವೆ. ಅದರ ಹೊರತಾಗಿಯೂ, ಈ ಉತ್ಪನ್ನಗಳಿಂದ ಕಾಯಿಲೆ ಗುಣವಾಗುತ್ತದೆ ಎಂದು ಹೇಗೆ ನೀವು ಹೇಳುತ್ತೀರಿ? ರಾಸಾಯನಿಕ ಆಧಾರಿತ ಔಷಧಿಗಳಿಗಿಂತ ನಿಮ್ಮ ಉತ್ಪನ್ನ ಉತ್ತಮ ಎಂದು ಹೇಗೆ ಪ್ರತಿಪಾದಿಸುತ್ತಿದ್ದೀರಿ?’ ಎಂದು ಪ್ರಶ್ನಿಸಿದರು.

‘ನಮ್ಮ ಆದೇಶದ ಬಳಿಕವೂ ನೀವು ಜಾಹೀರಾತುಗಳ ಪ್ರಕಟಿಸುವ ಧೈರ್ಯ ತೋರಿಸುತ್ತಿದ್ದೀರಿ. ಈ ಮೂಲಕ ನೀವು ನ್ಯಾಯಾಲಯವನ್ನು ಕೆರಳಿಸುತ್ತಿದ್ದೀರಿ’ ಎಂದು ಪತಂಜಲಿ ಪರ ವಕೀಲರಿಗೆ ಹೇಳಿದರು.

ಸರ್ಕಾರ ಕಣ್ಣು ಮುಚ್ಚಿ ಕೊಂಡಿದೆಯಾ

ಎರಡು ವರ್ಷಗಳಿಂದ ಪತಂಜಲಿ ವಿರುದ್ಧ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರದ ವಿರುದ್ಧವೂ ಪೀಠ ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿತು. ‘ಪತಂಜಲಿ ಜಾಹೀರಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕು’ ಎಂದು ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ. ನಟರಾಜ್‌ ನ್ಯಾಯಪೀಠಕ್ಕೆ ತಿಳಿಸಿದರು. ‘ಹಾಗಾದರೆ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆಯಾ’ ಎಂದು ಪೀಠ ಕೇಳಿತು.

ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡುವುದನ್ನು ಮುಂದುವರಿಸಿದ್ದಕ್ಕಾಗಿ ಪತಂಜಲಿ ಆಯುರ್ವೇದ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರಿಗೆ ನ್ಯಾಯಾಂಗ ನಿಂದನೆಯ ಶೋಕಾಸ್ ನೋಟಿಸ್‌ ಅನ್ನು ಪೀಠ ಜಾರಿಗೊಳಿಸಿತು. ಅಲ್ಲದೆ ರಕ್ತದೊತ್ತಡ, ಮಧುಮೇಹ, ಅಸ್ತಮಾ ಮತ್ತು ಇತರ ಕೆಲವು ಕಾಯಿಲೆಗಳಿಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು ನೀಡದಂತೆ ಪೀಠವು ಕಂಪನಿ ಮೇಲೆ ನಿರ್ಬಂಧ ವಿಧಿಸಿತು.

ಜಾಹೀರಾತಿನಲ್ಲಿ ಭಾವಚಿತ್ರಗಳಿರುವ ಬಾಬಾ ರಾಮದೇವ್‌ ಮತ್ತು ಆಚಾರ್ಯ ಬಾಲಕೃಷ್ಣ ಅವರನ್ನು ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಪಾರ್ಟಿಯನ್ನಾಗಿ ಮಾಡಲಾಗುವುದು ಎಂದು ಪೀಠ ಹೇಳಿತು.

ರಾಮದೇವ್‌ ಅವರು ಸನ್ಯಾಸಿಯಾಗಿದ್ದಾರೆ ಎಂದು ಪತಂಜಲಿ ಪರ ವಾದಿಸಿದ ಹಿರಿಯ ವಕೀಲ ವಿಪಿನ್‌ ಸಂಘ್ವಿ ಹೇಳಿದಾಗ, ‘ಇದಕ್ಕೆಲ್ಲ ನ್ಯಾಯಾಲಯ ತಲೆಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಆದೇಶದ ಬಗ್ಗೆ ಅರಿವಿದೆ ಮತ್ತು ಮೇಲ್ನೋಟಕ್ಕೆ ಅವರು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ’ ಎಂದು ಪೀಠ ಹೇಳಿತು. ಮುಂದಿನ ವಿಚಾರಣೆಯನ್ನು ಮಾರ್ಚ್‌ 19ಕ್ಕೆ ‌ನಿಗದಿಪಡಿಸಿತು. 

ಅಲೋಪತಿ ಔಷಧಗಳ ಕುರಿತು ಅಪಪ್ರಚಾರ ಮಾಡುತ್ತಿರುವ ಕಾರಣ ಬಾಬಾ ರಾಮದೇವ್‌ ಮತ್ತು ಪತಂಜಲಿ ಆಯುರ್ವೇದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸುತ್ತಿದೆ. ಹಲವು ಕಾಯಿಲೆಗಳ ಚಿಕಿತ್ಸೆ ಮತ್ತು ಔಷಧಿಗಳಿಗೆ ಸಂಬಂಧಿಸಿದಂತೆ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಪತಂಜಲಿ ಆರ್ಯುವೇದ ನೀಡುತ್ತಿರುವುದರ ವಿರುದ್ಧ ನವೆಂಬರ್‌ನಲ್ಲಿಯೇ ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿತ್ತು. 

- ಕೇಂದ್ರದ ವಿರುದ್ಧ ಕಾಂಗ್ರೆಸ್‌ ಕಿಡಿ:

ಸಾಂಪ್ರದಾಯಿಕ ಮತ್ತು ಆಯುಷ್‌ ಜ್ಞಾನದ ನ್ಯಾಯಯುತ ಹಂಚಿಕೆಯ ನಿಬಂಧನೆಯನ್ನು ಕೇಂದ್ರದ ನರೇಂದ್ರ ಮೋದಿ ಸರ್ಕಾರ ತೆಗೆದುಹಾಕಿದ್ದು ಪತಂಜಲಿಯಂತಹ ಸಂಸ್ಥೆಗಳಿಗೆ ಬಾಗಿಲು ತೆರೆದಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ‘ಪತಂಜಲಿಯ ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಕ್ರಮ ತೆಗೆದುಕೊಳ್ಳದೇ ಕೇಂದ್ರ ಸರ್ಕಾರ ಕಣ್ಣು ಮುಚ್ಚು ಕುಳಿತಿದೆ ಎಂಬುದನ್ನು ಸುಪ್ರೀಂಕೋರ್ಟ್‌ ಗಮನಿಸಿದೆ’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಸಿ ಜೈರಾಮ್‌ ರಮೇಶ್‌ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT