ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತಂಜಲಿ ಜಾಹೀರಾತು: ಸುಪ್ರೀಂ ಮುಂದೆ ಹಾಜರಾದ ಬಾಬಾ ರಾಮದೇವ್, ಆಚಾರ್ಯ ಬಾಲಕೃಷ್ಣ

ಪತಂಜಲಿ ಸುಳ್ಳು ಜಾಹೀರಾತು ಪ್ರಕರಣ
Published 2 ಏಪ್ರಿಲ್ 2024, 6:26 IST
Last Updated 2 ಏಪ್ರಿಲ್ 2024, 6:26 IST
ಅಕ್ಷರ ಗಾತ್ರ

ನವದೆಹಲಿ: ಪತಂಜಲಿ ಸುಳ್ಳು ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗ ಗುರು ಬಾಬಾ ರಾಮದೇವ್‌ ಹಾಗೂ ಪತಂಜಲಿ ಆಯುರ್ವೇದ ಕಂಪನಿಯ ಎಂಡಿ ಆಚಾರ್ಯ ಬಾಲಕೃಷ್ಣ ಅವರು ಇಂದು ಸುಪ್ರೀಂಕೋರ್ಟ್‌ ಎದುರು ಹಾಜರಾದರು.

ಈ ಪ್ರಕರಣದಲ್ಲಿ ಉತ್ತರಿಸಲು ನೋಟಿಸ್ ನೀಡಿದ್ದರೂ ನಿರ್ಲಕ್ಷಿಸಿದ್ದ ಈ ಇಬ್ಬರೂ ಕೋರ್ಟ್ ಮುಂದೆ ಖುದ್ದು ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಇತ್ತೀಚೆಗೆ ತಾಕೀತು ಮಾಡಿತ್ತು.

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಅಹ್ಸಾನುದ್ದೀನ್‌ ಅಮಾನುಲ್ಲಾ ಅವರ ಪೀಠದ ಮುಂದೆ ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಹಾಜರಾಗಿದ್ದಾರೆ. ವಿಚಾರಣೆ ನಡೆಯುತ್ತಿದೆ.

ಈ ವೇಳೆ ಅವರು ಬೇಷರತ್ ಕ್ಷಮೆ ಕೇಳಿದರು ಎಂದು ವರದಿಯಾಗಿದೆ. ಏಪ್ರಿಲ್ 10ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.

ಬಾಬಾ ರಾಮದೇವ್‌ ಹಾಗೂ ಆಚಾರ್ಯ ಬಾಲಕೃಷ್ಣ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇವರ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬಾರದು ಎಂದು ಪೀಠ ಮಾರ್ಚ್ 19ರಂದು ಕೇಳಿತ್ತು.

ನ್ಯಾಯಾಂಗ ನಿಂದನೆ ದಾಖಲಿಸುವ ಬಗ್ಗೆ ಬಾಬಾ ರಾಮದೇವ್ ಅವರಿಗೆ ಪೀಠ ಶೋಕಾಸ್ ನೋಟಿಸ್ ಅನ್ನೂ ಜಾರಿಗೊಳಿಸಿತ್ತು.

ವಿವಿಧ ಕಾಯಿಲೆಗಳ ಚಿಕಿತ್ಸೆ ಸಂಬಂಧ ಪತಂಜಲಿಯು ತನ್ನ ಉತ್ಪನ್ನಗಳ ಕುರಿತು ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ನೀಡುತ್ತಿದ್ದರೂ ಕೇಂದ್ರ ಸರ್ಕಾರ ನಿಷ್ಕ್ರಿಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆ ತರಾಟೆಗೆ ತೆಗೆದುಕೊಂಡಿತ್ತು.

ಅಲ್ಲದೆ ರಕ್ತದೊತ್ತಡ, ಮಧುಮೇಹ, ಅಸ್ತಮಾ ಮತ್ತು ಇತರ ಕೆಲವು ಕಾಯಿಲೆಗಳಿಗೆ ಸಂಬಂಧಿಸಿದ ಯಾವುದೇ ಜಾಹೀರಾತುಗಳನ್ನು ನೀಡದಂತೆ ಪೀಠವು ಕಂಪನಿ ಮೇಲೆ ನಿರ್ಬಂಧ ವಿಧಿಸಿತ್ತು.

ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪತಂಜಲಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT