ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

LS Polls ಮೋದಿ ಅಲ್ಲ, ಶಾ ಪ್ರಧಾನಿ; ನೇಪಥ್ಯಕ್ಕೆ ಯೋಗಿ ಆದಿತ್ಯನಾಥ: ಕೇಜ್ರಿವಾಲ್

ಬಿಜೆಪಿ ಗೆದ್ದರೆ ನೇಪಥ್ಯಕ್ಕೆ ಯೋಗಿ ಆದಿತ್ಯನಾಥ: ಕೇಜ್ರಿವಾಲ್
Published 12 ಮೇ 2024, 0:00 IST
Last Updated 12 ಮೇ 2024, 0:00 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಂದಿನ ವರ್ಷ 75 ವರ್ಷ ವಯಸ್ಸಾಗಲಿದ್ದು, ಅವರು ಯೋಗಿ ಆದಿತ್ಯನಾಥ ಸೇರಿದಂತೆ ಬಿಜೆಪಿಯ ಎಲ್ಲ ನಾಯಕರನ್ನು ಬದಿಗೆ ಸರಿಸಿ, ವಿರೋಧ ಪಕ್ಷಗಳ ನಾಯಕರನ್ನು ಜೈಲಿಗೆ ಕಳುಹಿಸಿ, ಅಮಿತ್ ಶಾ ಅವರು ಪ್ರವರ್ಧಮಾನಕ್ಕೆ ಬರಲು ಅನುವು ಮಾಡಿಕೊಡಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು.

ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆಯೇ ಚುನಾವಣಾ ಪ್ರಚಾರ ಕಣಕ್ಕೆ ಇಳಿದ ಕೇಜ್ರಿವಾಲ್ ಅವರು ಮೋದಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು 220ರಿಂದ 230 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ಅಂದಾಜಿಸಿದರು.

ಬಿಜೆಪಿಯು ಮತ್ತೆ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಅಮಿತ್ ಶಾ ಅವರಿಗೆ ಪ್ರಧಾನಿ ಹುದ್ದೆಗೆ ಏರಲು ಅವಕಾಶ ಕಲ್ಪಿಸಿಕೊಡಲು ಯೋಗಿ ಆದಿತ್ಯನಾಥ ಅವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಲಾಗುತ್ತದೆ ಎಂದರು. ಬಿಜೆಪಿಯೊಳಗೆ ಅಧಿಕಾರದಲ್ಲಿ ಇರಲು 75 ವರ್ಷ ವಯಸ್ಸು ಮೀರಿರಬಾರದು ಎಂಬ ನಿಯಮವನ್ನು ಮೋದಿ ಅವರೇ ರೂಪಿಸಿದ್ದಾರೆ ಎಂದು ಹೇಳಿದರು.

ಮೋದಿ ಅವರು ಸರ್ವಾಧಿಕಾರಿಯ ಮನಃಸ್ಥಿತಿ ಹೊಂದಿದ್ದಾರೆ, ‘ಒಂದು ರಾಷ್ಟ್ರ, ಒಬ್ಬನೇ ನಾಯಕ’
ತತ್ವವನ್ನು ಅನುಷ್ಠಾನಕ್ಕೆ ತರಲು ಅವರು ಬಯಸಿದ್ದಾರೆ ಎಂದು ಆರೋಪಿಸಿದರು. ಮೋದಿ ಅವರು ತಮಗಾಗಿ ಮತ ಯಾಚಿಸುತ್ತಿಲ್ಲ, ಬಿಜೆಪಿಗೆ ಮತ ನೀಡುವವರಿಗೆ ತಾವು ಮತ ಹಾಕುವುದು ಮೋದಿ ಅವರಿಗಾಗಿ ಅಲ್ಲ, ಅದು ಅಮಿತ್ ಶಾ ಅವರಿಗಾಗಿ ಎಂಬುದು ಗೊತ್ತಿರಬೇಕು ಎಂದರು. ಅಲ್ಲದೆ, ಅಮಿತ್ ಶಾ ಅವರು ‘ಮೋದಿಯವರ ಗ್ಯಾರಂಟಿಗಳನ್ನು’ ಅನುಷ್ಠಾನಕ್ಕೆ ತರುವರೇ ಎಂದು ಪ್ರಶ್ನಿಸಿದರು.

ಬಂಧನದ ನಂತರವೂ ತಾವು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸದೆ ಇದ್ದುದನ್ನು ಸಮರ್ಥಿಸಿಕೊಂಡ ಕೇಜ್ರಿವಾಲ್, ಬಂಧನವು ಎಎಪಿಯನ್ನು ಮುಗಿಸಲು ಪ್ರಧಾನಿ ಹೆಣೆದಿದ್ದ ಒಂದು ಜಾಲವಾಗಿತ್ತು ಎಂದರು. ಜೆಎಂಎಂ ಪಕ್ಷದ ನಾಯಕ ಹೇಮಂತ್ ಸೊರೇನ್ ಅವರೂ ಜಾರ್ಖಂಡ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬಾರದಿತ್ತು ಎಂದು ತಮಗೆ ಅನ್ನಿಸಿದ್ದಾಗಿ ಹೇಳಿದರು.

ತಿಹಾರ್ ಜೈಲಿನಿಂದ ಬಿಡುಗಡೆ ಆದ ಮಾರನೆಯ ದಿನವೇ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ‘ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಕೇಜ್ರಿವಾಲ್‌ನಿಂದ ಕಲಿಯಿರಿ’ ಎಂದು ಮೋದಿ ಅವರಿಗೆ ಹೇಳಿದರು. ಭ್ರಷ್ಟಾಚಾರದ ಆರೋಪ ಹೊತ್ತವರು ಬಿಜೆಪಿಯನ್ನು ಸೇರಿರುವ ಬಗ್ಗೆ ಉಲ್ಲೇಖಿಸಿದರು.

‘ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿರುವುದಾಗಿ ಪ್ರಧಾನಿ ಹೇಳುತ್ತಾರೆ. ಆದರೆ ಅವರು ಕಳ್ಳರು ಮತ್ತು ಡಕಾಯಿತರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ₹70,000 ಕೋಟಿ ಮೊತ್ತದ ಹಗರಣದಲ್ಲಿ
ಭಾಗಿಯಾಗಿರುವುದಾಗಿ ತಾವು ಆರೋಪಿಸಿದ ನಾಯಕರೊಬ್ಬರನ್ನು ಮೋದಿ ಅವರು ಆರೋಪ ಹೊರಿಸಿದ ಹತ್ತು ದಿನಗಳ ನಂತರ ಪಕ್ಷಕ್ಕೆ ಸೇರಿಸಿಕೊಂಡರು’ ಎಂದು ಟೀಕಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ವಿರೋಧ ಪಕ್ಷಗಳ ನಾಯಕರಾದ ಮಮತಾ ಬ್ಯಾನರ್ಜಿ, ತೇಜಸ್ವಿ ಯಾದವ್, ಎಂ.ಕೆ. ಸ್ಟಾಲಿನ್ ಮತ್ತು ಉದ್ಧವ್ ಠಾಕ್ರೆ ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಎಚ್ಚರಿಸಿದ ಕೇಜ್ರಿವಾಲ್, ತಮ್ಮ ಬಂಧನವೂ ಒಂದು ಸಂದೇಶವಾಗಿತ್ತು; ಕೇಜ್ರಿವಾಲ್ ಅವರನ್ನು ವಶಕ್ಕೆ ಪಡೆಯಬಹುದು ಎಂದಾದರೆ ಯಾರನ್ನು ಬೇಕಿದ್ದರೂ ವಶಕ್ಕೆ ಪಡೆಯಬಹುದು ಎಂಬ ಸಂದೇಶ ನೀಡುವ ಉದ್ದೇಶ ಇತ್ತು ಎಂದು ಆರೋಪಿಸಿದರು.

‘ಅವರ ಕಾರ್ಯಯೋಜನೆಯ ಹೆಸರು ಒಂದು ದೇಶ, ಒಂದೇ ನಾಯಕ ಎಂಬುದನ್ನು ಜನರು ತಿಳಿಯಬೇಕು. ಇದನ್ನು ಸಾಧಿಸಲು ಎರಡು ದಾರಿಗಳಿವೆ. ಒಂದು, ವಿರೋಧ ಪಕ್ಷಗಳ ನಾಯಕ ರೆಲ್ಲರನ್ನೂ ಜೈಲಿಗೆ ಅಟ್ಟುವುದು. ಎರಡನೆಯದು, ಜಯ ಗಳಿಸಿದರೆ ಬಿಜೆಪಿಯಲ್ಲಿನ ಎಲ್ಲ ನಾಯಕರನ್ನೂ ನೇಪಥ್ಯಕ್ಕೆ ಸರಿಸುವುದು. ಅವರು ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಸುಮಿತ್ರಾ ಮಹಾಜನ್, ಶಿವರಾಜ್ ಸಿಂಗ್ ಚೌಹಾಣ್, ವಸುಂಧರಾ ರಾಜೆ, ಎಂ.ಎಲ್. ಖಟ್ಟರ್ ಅವರನ್ನು ಈಗಾಗಲೇ ನೇಪಥ್ಯಕ್ಕೆ ತಳ್ಳಿದ್ದಾರೆ’ ಎಂದು ಕೇಜ್ರಿವಾಲ್ ಹೇಳಿದರು.

‘ಮುಂದೆ ಯಾರು? ಅದು ಯೋಗಿ ಆದಿತ್ಯನಾಥ. ಇದನ್ನು ಬರೆದಿಟ್ಟುಕೊಳ್ಳಿ. ಬಿಜೆಪಿ ಜಯ ಗಳಿಸಿದರೆ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಎರಡು ತಿಂಗಳಲ್ಲಿ ಬದಲಿಸಲಾಗುತ್ತದೆ. ಅವರು ದೇಶದಲ್ಲಿ ಜನತಂತ್ರವನ್ನು ಹೊಸಕಿಹಾಕಲು ಯತ್ನಿಸುತ್ತಿದ್ದಾರೆ. ನಾನು ಅದರ ವಿರುದ್ಧ ಹೋರಾಡುತ್ತಿದ್ದೇನೆ’ ಎಂದರು.

ಪ್ರಜಾತಂತ್ರವನ್ನು ಜೈಲಿಗೆ ಕಳುಹಿಸಬಹುದು ಎಂದಾದರೆ, ಅದನ್ನು ಜೈಲಿನಿಂದಲೇ ನಡೆಸಬಹುದು ಎಂಬುದನ್ನು ತೋರಿಸಬೇಕಿದ್ದ ಕಾರಣಕ್ಕೆ ತಾವು ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ
ಎಂದು ಹೇಳಿದರು.

ಮೋದಿಗೆ 75 ವರ್ಷ ವಯಸ್ಸಾದ ನಂತರ ನೀವು ಖುಷಿ ಪಡಬೇಕಾಗಿಲ್ಲ ಎಂದು ಅರವಿಂದ ಕೇಜ್ರಿವಾಲ್ ಮತ್ತು ಅವರ ಸಂಗಡಿಗರಿಗೆ ಹೇಳಬಯಸುವೆ. ಮೋದಿ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಾರೆ
-ಅಮಿತ್ ಶಾ, ಕೇಂದ್ರ ಗೃಹ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT