ತಿನ್ನುವುದೆಲ್ಲವೂ ಆಹಾರವಲ್ಲ...

7

ತಿನ್ನುವುದೆಲ್ಲವೂ ಆಹಾರವಲ್ಲ...

Published:
Updated:
Deccan Herald

ನಮ್ಮ ಚಿಕಿತ್ಸಾಲಯಕ್ಕೆ ಬರುವ ರೋಗಿಗಳಲ್ಲಿ ಹೆಚ್ಚಿನವರದ್ದೂ ಒಂದೇ ಪ್ರಶ್ನೆ: ‘ಯಾವ ಆಹಾರವನ್ನು ಸೇವಿಸಬಹುದು?’ ‘ಹಣ್ಣುಗಳನ್ನು ತಿನ್ನಬಹುದಾ?’ ‘ತರಕಾರಿಗಳನ್ನೇ ತಿಂದುಕೊಂಡಿರಬಹುದಾ?’  ‘ಕರಿದ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕವೇ? ಸ್ನ್ಯಾಕ್ಸ್‌, ಪಿಜ್ಜಾ, ಬರ್ಗರ್ ತಿನ್ನಬಹುದೇ?’ – ಹೀಗೇ ಮುಂದುವರಿಯುತ್ತದೆ. ಹಾಗಾದರೆ ಆಹಾರ ಎಂದರೇನು? ಪಥ್ಯ ಎಂದರೇನು? ಈ ವಿವೇಚನೆ ಅಗತ್ಯವಲ್ಲವೇ?

ನಾವು ಬಾಯಿಯ ಮೂಲಕ ಹೊಟ್ಟೆಗೆ ಕಳುಹಿಸುವ ಎಲ್ಲಾ ಪದಾರ್ಥಗಳನ್ನು ‘ಆಹಾರ’ ಎಂದು ಕರೆಯಬಹುದೇ? ಈ ಆಹಾರವನ್ನು ‘ವಿಜ್ಞಾನ’ ಎಂದು ಏಕೆ ಮತ್ತು ಹೇಗೆ? ಕರೆಯುವುದು ಎಂಬ ತಿಳಿವಳಿಕೆ ಬೇಕಲ್ಲವೇ? ‘ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಮಾತೇ ಇದೆ. ಊಟ ಬಲ್ಲವನು ಎಂದರೆ ಕೇವಲ ಆಹಾರ ಸೇವನೆ ಮಾಡಿದರೆ ಸಾಲದು, ಯಾವ ರೀತಿಯ ಆಹಾರವನ್ನು ಎಲ್ಲಿ, ಹೇಗೆ, ಎಷ್ಟು, ಸೇವಿಸಬೇಕು – ಎಂಬ ತಿಳಿವಳಿಕೆಯಿಂದ ಸೇವಿಸುವುದು ವಿಜ್ಞಾನ.

‘ಆಹಾರ’ ಎಂದರೆ ತಿನ್ನುವ ಎಲ್ಲ ಪದಾರ್ಥಗಳೂ ಆಹಾರ ಎಂದು ಗುರುತಿಸಲ್ಪಡುತ್ತದೆ. ಬಾಯಿಯಲ್ಲಿ ಜಗಿದು ತಿಂದದ್ದೆಲ್ಲಾ ಆಹಾರವಾಗುವುದಾದರೆ ಜರದಾ–ಗುಟ್ಕಾಗಳೂ, ಆಹಾರವೇ ಆಗಬೇಕಾಗುತ್ತದೆ! ಆದ್ದರಿಂದ ಯಾವುದು ಜಠರಾಗ್ನಿಯಲ್ಲಿ ಜೀರ್ಣವಾಗಿ ದೇಹದ ಭಾಗವಾಗಿ ಪರಿಣಾಮ ಹೊಂದುತ್ತದೋ ಅದು ಮಾತ್ರವೇ ಆಹಾರ. ಈ ಪ್ರಕ್ರಿಯೆ ಸರಿಯಾಗಿ ನಡೆಯುವ ರೀತಿಯಲ್ಲಿ ಆಹಾರವನ್ನು ಸೇವಿಸುವ ಜಾಣತನವೇ ವಿಜ್ಞಾನ.

ಯಾವುದೇ ಪದಾರ್ಥ ಯಾವುದೇ ವ್ಯಕ್ತಿಗೆ ವೈಯಕ್ತಿಕವಾಗಿ ಜಠರಾಗ್ನಿಯಿಂದ ಪಾಕವಾಗಿ ದೇಹಧಾತುವಾಗಿ ಪರಿಣಮಿಸುವುದಿಲ್ಲವೋ ಅದು ಆ ವ್ಯಕ್ತಿಗೆ, ಆ ಕಾಲದಲ್ಲಿ, ಆ ದೇಶದಲ್ಲಿ ಆಹಾರ ಎಂದು ಕರೆಯಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ, ಒಂದು ದೇಶದಲ್ಲಿ, ಒಂದು ಸಂದರ್ಭದಲ್ಲಿ ಆಹಾರವೆನಿಸುವ ಪದಾರ್ಥವು ಇನ್ನೊಂದು ದೇಶ, ಕಾಲ, ಸಂದರ್ಭಕ್ಕೆ ಹೊಂದಾಣಿಕೆಯಾಗದೇ ಇದ್ದಾಗ ಅದೇ ಆಹಾರಪದಾರ್ಥವು ದೇಹಕ್ಕೆ ವಿಷವಾಗಿ ಪರಿಣಮಿಸಿ ರೋಗಕಾರಕವಾಗಬಹುದು. ಒಟ್ಟಾರೆ ಹೇಳುವುದಾದರೆ ಆರೋಗ್ಯವೃದ್ಧಿಗಾಗಿ ಸೇವಿಸುವ ಎಲ್ಲ ಪದಾರ್ಥಗಳೂ ಆಹಾರಗಳೇ.

ಹಾಗಾದರೆ ಪಥ್ಯ ಯಾವುದು? ಅದನ್ನು ತಿಳಿದುಕೊಳ್ಳುವುದು ಹೇಗೆ? ‘ಪಥಿ ಹಿತಂ ಪಥ್ಯಂ.’  ‘ಪಥ’ ಎಂದರೆ ದಾರಿ. ಯಾವುದು ದಾರಿಗೆ, ಅಂದರೆ ಜೀವನದ ದಾರಿಗೆ ಹಿತವೋ ಅದೇ ಪಥ್ಯ; ಎಂದರೆ ಅದು ಜೀವನವಿಧಾನ. ಪಥ್ಯ ಎನ್ನುವಾಗ ಆಹಾರ, ಆಚಾರ ವಿಚಾರ ಎಲ್ಲವೂ ಸೇರುತ್ತವೆ. ಆದ್ದರಿಂದ ದೇಶ, ಕಾಲ, ವ್ಯಕ್ತಿಗೆ ಅನುಗುಣವಾಗಿ ಪಥ್ಯ ಮತ್ತು ಆಹಾರದ ವಿವೇಚನೆ ಬದಲಾಗುತ್ತದೆ. ‘ಊರಿಗೆಲ್ಲ ಒಬ್ಬಳೇ ಪದ್ಮಾವತಿ’ ಎನ್ನುವಂತೆ, ಇಡೀ ಪ್ರಪಂಚಕ್ಕೆ ಒಂದೇ ರೀತಿಯ ಆಹಾರ, ಪೌಷ್ಟಿಕ ಆಹಾರ ಎನಿಸಲು ಸಾಧ್ಯವಿಲ್ಲ.

ಆರೋಗ್ಯ-ಆಹಾರ

ಆಹಾರವು ಆರೋಗ್ಯವನ್ನು ಹೆಚ್ಚಿಸಿ ದೇಹದ ಅಭಿವೃದ್ಧಿಗೆ ಕಾರಣ ಆಗಬೇಕೆಂದರೆ ಅದು ಮೂರು ಹಂತಗಳನ್ನು ದಾಟಬೇಕು.

1. ಸರಿಯಾದ ಆಹಾರವನ್ನು ಸರಿಯಾದ ಕ್ರಮದಲ್ಲಿ ಸೇವಿಸಿರಬೇಕು.

2. ಅದು ವಾತ, ಪಿತ್ತ, ಕಫ ಮತ್ತು ಅಗ್ನಿಯೊಡನೆ ಸರಿಯಾಗಿ ಪಾಕಕ್ರಿಯೆಗೆ ಒಳಪಟ್ಟಿರಬೇಕು.

3. ದೇಹಧಾತುವಾಗಿ ಪರಿಣಾಮ ಹೊಂದಬೇಕು.

ಈ ಮೂರು ಹಂತಗಳಲ್ಲಿ ಯಾವೊಂದು ಹಂತದಲ್ಲಿ ವ್ಯತ್ಯಾಸವಾದರೂ ಅದೇ ಆಹಾರವು ರೋಗೋತ್ಪತ್ತಿಯನ್ನು ಉಂಟುಮಾಡುತ್ತದೆ. ಆದ್ದರಿಂದಲೇ ಒಂದೇ ಆಹಾರವು ಕೆಲವರಿಗೆ ಆರೋಗ್ಯವನ್ನು ನೀಡಿದರೆ ಕೆಲವರಿಗೆ ರೋಗವನ್ನು ಉತ್ಪತ್ತಿ ಮಾಡುತ್ತದೆ.

ಹಾಗಾದರೆ, ಯಾರು, ಯಾವಾಗ, ಏನನ್ನು, ಹೇಗೆ ಸೇವಿಸಬೇಕು – ಎನ್ನಲು ಏನಾದರೂ ಸೂತ್ರವಿದೆಯೇ – ಎಂದರೆ ಆಯುರ್ವೇದವು ಇದನ್ನು ತಿಳಿಯಲು ‘ಅಷ್ಟವಿಧ ಆಹಾರ ಆಯತನ’ಗಳನ್ನು ಹೇಳಿದೆ. ಅವೆಂದರೆ: ಸ್ವಭಾವ, ಸಂಯೋಗ, ಸಂಸ್ಕಾರ, ರಾಶಿ, ದೇಶ, ಕಾಲ, ಉಪಯೋಕ್ತಾ, ಉಪಯೋಗ ಸಂಸ್ಥಾ.

1. ಸ್ವಭಾವ: ಯಾವುದೇ ಆಹಾರವನ್ನು ಸೇವಿಸಬೇಕಾದರೂ ಆ ಪದಾರ್ಥದ ಮೂಲದ್ರವ್ಯ ಯಾವುದು? ಅದರ ಸ್ವಭಾವವೇನು? ದೇಹದ ಮೇಲೆ ಯಾವ ಪ್ರಭಾವ ಬೀರುತ್ತದೆ? ಈ ಪ್ರಭಾವ ನನ್ನ ಪರಿಸ್ಥಿತಿಗೆ ಅಗತ್ಯವೋ ಇಲ್ಲವೋ? ಇವನ್ನು ತಿಳಿದು ಸೇವಿಸಬೇಕು.

2. ಸಂಯೋಗ: ಯಾವುದೇ ಎರಡು ಪದಾರ್ಥಗಳು ಒಂದರ ಜೊತೆಗೆ ಇನ್ನೊಂದು ಸಂಪೂರ್ಣವಾಗಿ ಬೆರೆಯುವುದನ್ನು ಸಂಯೋಗ ಎನ್ನುತ್ತೇವೆ. ಇನ್ನು ಕೆಲವೊಮ್ಮೆ ಎರಡು ದ್ರವ್ಯಗಳನ್ನು ಒಂದರ ಜೊತೆಯಲ್ಲಿ ಇನ್ನೊಂದನ್ನು ಬೆರೆಸಿ ತಿನ್ನುವುದನ್ನು ಸಂಯೋಗ ಎನ್ನುತ್ತೇವೆ. ಎರಡು ದ್ರವ್ಯಗಳು ಆರೋಗ್ಯಕ್ಕೆ ಉಪಕಾರವಾದದ್ದೇ ಆದರೂ ಅವುಗಳ ಸಂಯೋಗ ತೊಂದರೆಯನ್ನುಂಟುಮಾಡಬಹುದು. ಇದನ್ನು ಆಯುರ್ವೇದದಲ್ಲಿ ‘ವಿರುದ್ಧ ಆಹಾರ’ ಎಂದು ಕರೆದಿದ್ದಾರೆ.

ಉದಾ: ಹಾಲು ಮತ್ತು ಹಣ್ಣು – ಇವೆರಡೂ ಆರೋಗ್ಯಕಾರಕ ದ್ರವ್ಯಗಳೇ. ಆದರೂ ಎರಡನ್ನೂ ಬೆರೆಸಿ ಮಿಲ್ಕ್ ಶೇಕ್ ಮಾಡಿಯೋ ಅಥವಾ ಫ್ರೂಟ್ ಸಲಾಡ್‌ಗೆ ಹಾಲನ್ನು ಬೆರೆಸಿಯೋ ಸೇವಿಸಿದರೆ ಅದು ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗೆಯೇ ಮಾಂಸ ಮತ್ತು ಹಾಲಿನ ಪದಾರ್ಥಗಳು ಮೊಸರು/ಮಜ್ಜಿಗೆ ಮತ್ತು ಹಾಲನ್ನು ಊಟ ಮಾಡುವಾಗ ಬೆರೆಸಿ ಊಟ ಮಾಡುವುದು, ಜಿಡ್ಡಿನ ಪದಾರ್ಥದೊಡನೆ ತಂಪಾಗಿರುವ ಪಾನೀಯ, ಐಸ್‌ಕ್ರೀಂ – ಮೊದಲಾದವುಗಳ ಸೇವನೆ, ಹಾಲಿಗೆ ಉಪ್ಪು ಸೇರಿಸಿ ಅಡುಗೆ ಮಾಡುವುದು ಅಥವಾ ಬಾಣಂತಿಯರು ಅಥವಾ ಎಳೆಯ ಮಕ್ಕಳು ಹಾಲನ್ನಕ್ಕೆ ಉಪ್ಪನ್ನು ಬೆರೆಸಿ ಸೇವಿಸುವುದು. ಇವೆಲ್ಲವೂ ಪ್ರತ್ಯೇಕವಾಗಿ ಆರೋಗ್ಯಕರ ಆಹಾರಗಳೇ ಆದರೂ ಆವುಗಳ ಮಿಶ್ರಣವು ಚರ್ಮವ್ಯಾಧಿ, ಉಬ್ಬಸ, ಕೆಮ್ಮು, ದೀರ್ಘಕಾಲೀನ ನೆಗಡಿ, ಆಮ್ಲ ಪಿತ್ತ, ಹೃದಯಸಂಬಂಧಿ ಕಾಯಿಲೆಗಳು ಬರಲು ಕಾರಣವಾಗುತ್ತವೆ. ಇದೇ ಅತಿಯಾದಾಗ ವಿಕಲಾಂಗಮಕ್ಕಳ ಜನನಕ್ಕೆ ಕಾರಣವಾಗುವ ದೈಹಿಕ ಬದಲಾವಣೆಗಳು, ಬಂಜೆತನ (ಹೆಣ್ಣು ಮತ್ತು ಗಂಡಸರಿಬ್ಬರಲ್ಲಿಯೂ) ಉಂಟಾಗಬಹುದು.

ಹಾಗೆಯೇ ಎರಡು ಪದಾರ್ಥಗಳ ಸಂಯೋಗ ಅದರ ರೋಗಕಾರಕ ಗುಣವನ್ನು ಸರಿಪಡಿಸಲೂಬಹುದು. ಉದಾ: ಹಲಸನ್ನು ಜೇನಿನೊಡನೆ ಸೇವಿಸುವುದು, ಹಲಸಿನ ಹಣ್ಣನ್ನು ತಿಂದ ನಂತರ ಶುಂಠಿ ಹಾಕಿ ತಯಾರಿಸಿದ ಪದಾರ್ಥ ಸೇವಿಸುವುದು, ಅತಿ ಜಿಡ್ಡಿರುವ ಪದಾರ್ಥ ಸೇವಿಸಿದ ನಂತರ ಬೀಸಿನೀರು ಅಥವಾ ಬಿಸಿ ಕಾಫಿ ಸೇವಿಸುವುದು, ಇತ್ಯಾದಿ.

3. ಸಂಸ್ಕಾರ: ಪದಾರ್ಥಗಳ ಗುಣವನ್ನು ಬದಲಾಯಿಸುವ ಪ್ರಕ್ರಿಯೆ. ಆಹಾರ ತಯಾರಿಕಾ ವಿಧಾನ. ಅಕ್ಕಿಯಿಂದ ಅನ್ನ ಮಾಡಿದಂತೆ, ಬೇಯಿಸುವುದು, ರುಬ್ಬುವುದು ಇತ್ಯಾದಿ.

4. ರಾಶಿ: ಸೇವಿಸುವ ಒಟ್ಟು ಎಲ್ಲಾ ವಿಧವಾದ ಆಹಾರದ ಸಮೀಕರಣ. ಈಗ ‘ಬ್ಯಾಲೆನ್ಸ್ ಡಯೆಟ್’ ಎಂದು ‘ಕಾರ್ಬೋಹೈಡ್ರೇಟ್, ಪ್ರೋಟೀನ್, ಫ್ಯಾಟ್ ಮತ್ತು ವಿಟಮಿನ್’ಗಳಲ್ಲಿ ಹೇಳುತ್ತಾರೆ. ಆದರೆ ಅವುಗಳನ್ನು ಸಮತೋಲನ ಮಾಡಲು ಮೊರೆ ಹೋಗಬೇಕಾದ ಮೂಲದ್ರವ್ಯಗಳಲ್ಲಿ ಇರುವುದು ರಸಗಳೇ; ಎಂದರೆ ಎಲ್ಲ ರಸಗಳಿಂದ ಕೂಡಿದ ಪದಾರ್ಥಗಳನ್ನು ಎಷ್ಟೆಷ್ಟು ಸೇವಿಸಿದರೆ ಅನಾರೋಗ್ಯ ಉತ್ಪತ್ತಿಯಾಗುವುದಿಲ್ಲ ಎಂದು ತಿಳಿದು ಉಪಯೋಗಿಸಬೇಕು. ಶಾಸ್ತ್ರಕಾರರು ತಿಳಿಸುವಂತೆ ಮಧುರ(ಸಿಹಿ)ವನ್ನು ಪ್ರಧಾನ ಆಹಾರವಾಗಿಯೂ, ಕಹಿಯನ್ನು ಅಪ್ರಧಾನವಾಗಿಯೂ ಬಳಸಲು ತಿಳಿಸುತ್ತಾರೆ. ಎಂದರೆ ಏಕದಳಧಾನ್ಯ, ದ್ವಿದಳಧಾನ್ಯ, ತರಕಾರಿಗಳಲ್ಲಿ ಅವುಗಳ ಜೈವಿಕತೆಯನ್ನು ಗಮನಿಸಿದಾಗ ಪ್ರಧಾನವಾಗಿರುವುದು ಮಧುರವೇ. ಮಧುರರಸ ಮಾತ್ರವೇ ದೇಹದಲ್ಲಿ ಸರಿಯಾಗಿ ಹೊಂದಿಕೊಂಡು ದೇಹದ ಬೆಳವಣಿಗೆಯನ್ನು ಮಾಡಲು ಸಾಧ್ಯ. ಆದರೆ ಅಕ್ಕಿ, ಗೋಧಿ, ಬೇಳೆಕಾಳು, ತರಕಾರಿಗಳಲ್ಲಿ ಇದರ ಪ್ರಮಾಣ ತರತಮಭಾವದಲ್ಲಿರುತ್ತದೆ. ಯಾವುದರಲ್ಲಿ ಹೆಚ್ಚಿದೆ; ಯಾವುದರಲ್ಲಿ ಕಡಿಮೆ ಇದೆ – ಎಂದು ತಿಳಿದು, ನಮಗೆ ಎಷ್ಟು ಬೇಕು ಎಂದು ನಿರ್ಧರಿಸುವುದೇ ಆಹಾರದ ‘ರಾಶಿ’. ಜೀರ್ಣಿಸಲು ಸುಲಭವಾಗಿರುವ ಪದಾರ್ಥವನ್ನು ತೃಪ್ತಿಯಾಗುವವರೆಗೂ ಸೇವಿಸಬಹುದು. ಇದಲ್ಲದೆ ನಾವು ಮಾಡುವ ಕೆಲಸಕ್ಕೆ ಪೂರಕವಾದ ಆಹಾರ ಅತ್ಯಗತ್ಯ. ಶಾರೀರಿಕ ಶ್ರಮ ಹೆಚ್ಚಿರುವವರು ನಿಧಾನವಾಗಿ ಜೀರ್ಣವಾಗುವ ಆಹಾರಗಳಾದ ರೊಟ್ಟಿ, ಚಪಾತಿ, ಹೆಚ್ಚಿನ ತರಕಾರಿಗಳನ್ನು ಸೇವಿಸಬೇಕು.

5. ದೇಶ: ಜನರು ವಾಸಿಸುವ ದೇಶ ಅಥವಾ ಪ್ರದೇಶ ಮತ್ತು ಆಹಾರ ಬೆಳೆಯುವ ಸ್ಥಳ, ರಕ್ಷಿಸುವ ಸ್ಥಳ, ಬೇಯಿಸುವ ಪಾತ್ರೆ, ತಿನ್ನುವ ಜಾಗ, ಕ್ರಮ – ಇವೆಲ್ಲವೂ ದೇಶ ಎಂಬುದರ ವಿವೇಚನೆಯೇ.

6. ಕಾಲ: ಕಾಲ ಎನ್ನುವುದು ದೇಹದ ಕಾಲ. ಎಂದರೆ ಬಾಲ್ಯ, ಯೌವನ, ವಾರ್ಧಕ್ಯ – ಹೀಗೆ. ಇನ್ನು ವಾತಾವರಣದ ಕಾಲ ಎಂದರೆ ಹಗಲು, ರಾತ್ರಿ, ಋತು, ಆಯನ. ಆರೋಗ್ಯವಾಗಿರುವವರು ಸೇವಿಸುವ ಎಲ್ಲ ಆಹಾರವನ್ನು ರೋಗಿಗಳು ಸೇವಿಸಬಾರದು.

7. ಉಪಯೋಕ್ತ: ಉಪಯೋಕ್ತ ಎಂದರೆ ಉಪಯೋಗಿಸುವವನು. ಯಾರು, ಯಾವ ವಯಸ್ಸಿನವರು, ಯಾವ ಪ್ರದೇಶದವನು, ಯಾವ ವೃತ್ತಿಯವನು, ಎಲ್ಲಿ, ಎಷ್ಟು, ಸೇವಿಸಬೇಕು – ಎಂಬುದನ್ನು ಗಮನಿಸಿ ಆಯಾವೃತ್ತಿಗೆ ಹಿತವೆನಿಸುವ ಆಹಾರವನ್ನು ಸೇವಿಸಬೇಕೇ ಹೊರತು, ಬಾಯಿಯ ಚಪಲಕ್ಕಾಗಲೀ, ರುಚಿಯಾಗಿದೆ ಮತ್ತೆ ಸಿಗುವುದಿಲ್ಲ ಎನ್ನುವ ಕಾರಣಕ್ಕಾಗಲೀ, ಬೇರಾರದೋ ಬಲವಂತಕ್ಕಾಗಲೀ ಆಹಾರವನ್ನು ಸೇವಿಸಬಾರದು.

8. ಉಪಯೋಗಸಂಸ್ಥಾ: ಆಹಾರ ಸೇವಿಸುವಾಗಿನ ನಿಯಮಗಳು. ಸೇವಿಸುವ ಆಹಾರವು ದೇಹದ ಧಾತುಗಳಾಗಿ ಪರಿಣಮಿಸಿ ಆರೋಗ್ಯವೃದ್ಧಿಯನ್ನು ಮಾಡಬೇಕಾದರೆ, ಅದು ಕೆಲವು ನಿಯಮ ಬದ್ಧವಾಗಿರಬೇಕು. ಶುದ್ಧವಾದ, ಬಿಸಿಯಾದ ಆಹಾರವನ್ನು, ಮನಸ್ಸಿಗೆ ಸಮಾಧಾನವಾಗುವಂತೆ ಅತಿ ವೇಗವಾಗಿಯೂ ಅಲ್ಲದೆ, ನಿಧಾನವಾಗಿಯೂ ಅಲ್ಲದೆ, ಅತಿಯಾಗಿ ಮಾತನಾಡದೆ ಅತಿಯಾಗಿ ನಗದೆ, ಸಿಟ್ಟಿಲ್ಲದೆ, ಶುಚಿಯಾದ ಪ್ರದೇಶದಲ್ಲಿ ಕುಳಿತು ಆಹಾರವನ್ನು ಸೇವಿಸಬೇಕು.

‘ಪ್ರಾಣಾ ಪ್ರಾಣಭೃತಾಂ ಅನ್ನಂ ಅನ್ನಂ ಲೋಕೋ ಅಭಿಧಾವತಿ’ – ಪ್ರಾಣಧಾರಿಗಳಗೆ, ಎಂದರೆ ಪ್ರಾಣವಿರುವ ಯಾವುದೇ ವಸ್ತು ಎಂದರೆ ಮನುಷ್ಯ, ಪ್ರಾಣಿ, ಕೀಟ, ಸಸ್ಯ ಎಲ್ಲವೂ ಅನ್ನವನ್ನು ಅರ್ಥಾತ್ ಆಹಾರವನ್ನು ಬಯಸಿ ಹೋಗುತ್ತವೆ. ದೋಷ, ಧಾತು, ಮಲಗಳಿಂದ ಕೂಡಿದ ಶರೀರವನ್ನು ಉಳಿಸಲು, ಬೆಳೆಸಲು ಆಹಾರ ಅತ್ಯಾವಶ್ಯಕ. ಅದನ್ನು ವಿವೇಚನೆಯಿಂದ ಸೇವಿಸುವುದೂ ಅಷ್ಟೇ ಆವಶ್ಯಕ.

 

 

Tags: 

ಬರಹ ಇಷ್ಟವಾಯಿತೆ?

 • 14

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !