ಆಂಬುಲೆನ್ಸ್ ‘ಪುಣ್ಯಕೋಟಿ’

7

ಆಂಬುಲೆನ್ಸ್ ‘ಪುಣ್ಯಕೋಟಿ’

Published:
Updated:
Deccan Herald

ಶಿವಮೊಗ್ಗ ಜಿಲ್ಲೆ ಸಾಗರದಿಂದ 8 ಕಿ.ಮೀ ದೂರದಲ್ಲಿರುವ ಹಸಿರು ಕಾಡಿನ ನಡುವೆ ಕಿರಿದಾದ ಗುಡ್ಡ ಹತ್ತಿದರೆ ‘ಪುಣ್ಯಕೋಟಿ ಗೋ ರಕ್ಷಣಾ ವೇದಿಕೆ’ ನಾಮಫಲಕದ ಕಮಾನು ಕಾಣುತ್ತದೆ. ಅದನ್ನು ಹಾದು ಮುಂದೆ ಹೋದರೆ ಗೋಶಾಲೆ ಕಾಣುತ್ತದೆ. ಅದರೊಳಗೆ ಹೊಕ್ಕರೆ ರಕ್ತ ಸೋರುತ್ತಿರುವ ರಾಸುಗಳು, ಕಿವಿ ಹರಿದುಕೊಂಡಿರುವ ಕರುಗಳು, ಯಾವುದೋ ನೋವಿನ ವೇದನೆಯಿಂದ ನರಳುತ್ತಿರುವ ಜಾನುವಾರುಗಳಂಥವು ಕಾಣುತ್ತವೆ...

‘ಪುಣ್ಯಕೋಟಿ ಗೋ ರಕ್ಷಣಾ ವೇದಿಕೆ’ಯ ಕಾರ್ಯವೇ ಅಂಥದ್ದು. ಅಪಘಾತದಲ್ಲಿ ಗಾಯಗೊಂಡ, ರೋಗದಿಂದ ಬಳಲುತ್ತಾ ಬೀದಿಪಾಲಾದ ರಾಸುಗಳನ್ನು ಗೋಶಾಲೆಗೆ ತಂದು ಚಿಕಿತ್ಸೆಕೊಡಿಸುವುದು, ಜೀವಬಿಡುವವರೆಗೂ ಆರೈಕೆ ಮಾಡುವುದು ಈ ವೇದಿಕೆಯ ಉದ್ದೇಶವಾಗಿದೆ. ಸಾಗರ ತಾಲ್ಲೂಕಿನ ಕಲ್ಮನೆ ಸಮೀಪದ ಹೊಸೂರು ಗ್ರಾಮದ ಕುಂಟಗೋಡಿನ ಪುರುಷೋತ್ತಮ ಹೆಗಡೆ ಇಂಥ ಗೋವುಗಳ ರಕ್ಷಣೆ, ಆರೈಕೆಗೆ ನಿಂತಿದ್ದಾರೆ.

ರಸ್ತೆಗಳಲ್ಲಿ ಅಪಘಾತಕ್ಕೀಡಾದ ಯಾವುದೇ ರಾಸುಗಳನ್ನು ಕಂಡಾಗ, ಪುರುಷೋತ್ತಮರಿಗೆ ಒಂದು ದೂರವಾಣಿ ಕರೆ ಮಾಡಿದರೆ, ಅವರು ‘ಗೋವು ಅಪಘಾತ ನೆರವು ಸೇವಾ ವಾಹಿನಿ’ ವಾಹನದೊಂದಿಗೆ ಬಂದು, ಗಾಯಗೊಂಡ ರಾಸನ್ನು ತಮ್ಮ ಗೋಶಾಲೆಗೆ ಕರೆದೊಯ್ಯುತ್ತಾರೆ. ಪ್ರೀತಿಯಿಂದ ಆರೈಕೆ ಮಾಡುತ್ತಾರೆ. ಪಶು ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸುತ್ತಾರೆ. ಒಂದೊಮ್ಮೆ ಗೋಶಾಲೆಗೆ ತಂದ ರಾಸುಗಳು ಸಾವನ್ನಪ್ಪಿದರೆ ಸಮೀಪದಲ್ಲೇ ಗುಂಡಿ ತೆಗೆದು ಸಂಸ್ಕಾರ ಮಾಡುತ್ತಾರೆ. 

‘ಕೆಲವು ರಾಸುಗಳಿಗೆ ಅಪಘಾತವಾದ ಸ್ಥಳದಲ್ಲೇ ಔಷಧ ಸೂಚಿಸುತ್ತೇನೆ. ವರ್ಷಕ್ಕೆ ಸುಮಾರು 100ರಷ್ಟು ಗಾಯಗೊಂಡ ರಾಸುಗಳು ನಮ್ಮ ಗೋಶಾಲೆಗೆ ಬರುತ್ತವೆ. ಅವುಗಳ ಆರೈಕೆಯಿಂದ ನನ್ನ ಮನಸ್ಸಿಗೆ ತುಂಬ ಸಮಾಧಾನ ಸಿಗುತ್ತದೆ’ ಎನ್ನುತ್ತಾರೆ ಪುರುಷೋತ್ತಮ ಹೆಗಡೆ. 

ಎಂಟು ವರ್ಷ ಸಾಗರದ ಶಿವಪ್ಪನಾಯಕ ನಗರದಲ್ಲಿದ್ದ ಗೋಶಾಲೆಯಲ್ಲಿ ಗೋವಿನ ಸೇವೆ ಮಾಡುತ್ತಿದ್ದ ಹೆಗಡೆಯವರು, ಮೂರು ವರ್ಷದಿಂದೀಚೆಗೆ ಕುಂಟಗೋಡು ಗ್ರಾಮದಲ್ಲಿ ದಾನಿಗಳ ನೆರವಿನಿಂದ ಗೋಶಾಲೆ ಕಟ್ಟಿದ್ದಾರೆ. ಈ ವರ್ಷ ಗೋಸೇವೆಯ ದಶಮಾನೋತ್ಸವ ಆಚರಿಸಬೇಕೆಂಬ ಸಂಕಲ್ಪ ಮಾಡಿದ್ದಾರೆ.

ಈ ಗೋಶಾಲೆಯಲ್ಲಿ ಈಗ 40 ನೊಂದ ಜಾನುವಾರುಗಳಿವೆ. ಬಹುತೇಕ ಅಪಘಾತಕ್ಕೊಳಗಾದವುಗಳೇ. ಈ ಗೋವುಗಳಿಗೆ ವರ್ಷಕ್ಕೆ ಸುಮಾರು 6 ಸಾವಿರ ಹೊರೆ ಮೇವು ಬೇಕು. ಸುಮಾರು 2 ಸಾವಿರ ಹೊರೆಯಷ್ಟು ಹುಲ್ಲನ್ನು ದಾನಿಗಳು ಕೊಡುತ್ತಾರೆ. ಉಳಿದ ಆಹಾರ ಹೊಂದಿಸಲು ಹಣದ ಕೊರತೆಯಾಗುತ್ತದೆ. ಬೇರೆ ಆದಾಯವಿಲ್ಲದ  ಪುರುಷೋತ್ತಮ ಹಾಗೂ ಹೀಗೂ ಮೇವು ಹೊಂದಿಸಿ, ಗೋವುಗಳ ಹೊಟ್ಟೆ ತುಂಬಿಸುತ್ತಾರೆ. ಈಗ ಒಂದೂವರೆ ಎಕರೆ ಜಾಗದಲ್ಲಿ ಮೇವಿನ ಬೆಳೆ ಬೆಳೆಸುವ ಪ್ರಯತ್ನದಲ್ಲಿದ್ದಾರೆ.

ಪುರುಷೋತ್ತಮ ಅವರ ಸೇವೆ ಗಮನಿಸಿದ ಕೆಲವು ದಾನಿಗಳು ಒಂದು ವಾಹನವನ್ನು ಕೊಟ್ಟಿದ್ದಾರೆ. ಜಾನುವಾರುಗಳ ಸಾಗಣೆಗೆ ಇನ್ನೊಂದು ವಾಹನದ ಅಗತ್ಯವಿದೆ. ಜಾನುವಾರುಗಳ ಹೆಚ್ಚಾದರೆ, ಚಿಕಿತ್ಸೆಗಾಗಿ ಇನ್ನೊಂದು ಕೊಠಡಿ ಅಗತ್ಯವಿದೆ. ‘ಈಗಿರುವ ಗೋಶಾಲೆ ವಿಸ್ತರಿಸಿದರೆ ಜಾನುವಾರುಗಳ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಡಲು ಅನುಕೂಲವಾಗುತ್ತದೆ’ ಎಂಬುದು ಅವರ ಅಭಿಪ್ರಾಯವಾಗಿದೆ.

‘ಗೋಶಾಲೆ ಅಭಿವೃದ್ಧಿಗಾಗಿ ಆಗಬೇಕಾದ ಕೆಲಸಗಳು ಬಹಳಷ್ಟಿವೆ’ ಎನ್ನುವ ಪುರುಷೋತ್ತಮ ಹೆಗಡೆ ‘ನನ್ನ ಈ ಪ್ರಯತ್ನಕ್ಕೆ ಸಾಮಾಜಿಕ ಕಾರ್ಯಕರ್ತ ಕುಂಟಗೋಡು ಸೀತಾರಾಮ, ಶೋಭಾ ದೀಕ್ಷಿತ್, ಹೊಸೂರು ಸುರೇಶ್ ಭಟ್ ಹಾಗೂ ಸುದರ್ಶನ ಚಿಪ್ಪಳಿಯವರು ಪ್ರೋತ್ಸಾಹ, ಮಾರ್ಗದರ್ಶನ ಹಾಗೂ ನೆರವು ನೀಡುತ್ತಿದ್ದಾರೆ’ ಎಂದು ಸ್ಮರಿಸುತ್ತಾರೆ. ಪುರುಷೋತ್ತಮ ಅವರ ಗೋಶಾಲೆಯ ಸೇವಾ ಕಾರ್ಯಕ್ಕೆ ನೆರವಾಗಲು ಇಚ್ಛಿಸುವವರು, ಮೊ.9164697791, 7411141843ಗೆ ಸಂಪರ್ಕಿಸಬಹುದು.

ಚಿತ್ರಗಳು: ಲೇಖಕರವು

ಗೋಪೂಜೆಗೆ ‘ಪೂಜಾ’

ನೂತನ ಗೃಹಪ್ರವೇಶದ ಗೋವು ಪೂಜೆಗಾಗಿ ‌ಈ ಗೋಶಾಲೆಯಿಂದ ‘ಪೂಜಾ’ ಎಂಬ ಹೆಸರಿನ ಹಸುವನ್ನೇ ಕರೆದೊಯ್ಯತ್ತಾರಂತೆ. ಈ ಕಾರ್ಯಕ್ರಮಕ್ಕಾಗಿ ಕರೆಸಿದವರು ಗೌರವಧನ ಕೊಡುತ್ತಾರೆ. ಈ ಆಕಳನ್ನು ಪ್ರತಿ ವರ್ಷ ದೀಪಾವಳಿಯಲ್ಲಿ ಗೋವು ಪೂಜೆ ಮಾಡಿ ಪಟ್ಟಣದಲ್ಲಿ ಮೆರವಣಿಗೆಗೆ ಒಯ್ಯಲಾಗುತ್ತದೆ ಎನ್ನುತ್ತಾರೆ ಪುರುಷೋತ್ತಮ. 

ಗೋಶಾಲೆಯಲ್ಲಿರುವ ಅಜ್ಜಪ್ಪ ಎಂಬ ಹೆಸರಿನ ಹಸು ಗೋಶಾಲೆಯಲ್ಲಿ ಏನನ್ನು ಕೊಟ್ಟರೂ ತಿನ್ನುವುದಿಲ್ಲ. ಹೊರಗಡೆ ಹೋಗಿ ಮೇವನ್ನು ತಿಂದು ಬರುತ್ತದೆ. ಮತ್ತೊಂದು ಹಸು ಸಿಂಡ್ರೆಲಾ ಅಪಘಾತಕ್ಕೊಳಗಾಗಿ ತಂದ ಹಸುಗಳ ಮೈ ನೆಕ್ಕಿ ಪ್ರೀತಿ ತೋರುತ್ತದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !