ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲಗುವ ಕೋಣೆಯ ಸೂಕ್ಷ್ಮಗಳು...

ವಾಸ್ತುಪ್ರಕಾರ
Last Updated 9 ಜುಲೈ 2015, 19:30 IST
ಅಕ್ಷರ ಗಾತ್ರ

ಮನೆಯನ್ನು ನಿರ್ಮಿಸುವ ಸಂದರ್ಭದಲ್ಲಿ ವಾಸ್ತುಶಾಸ್ತ್ರದ ಬಗ್ಗೆ ಯೋಚಿಸುವವರು ಹೆಚ್ಚು ಗಮನ ನೀಡುವುದು ಅಡುಗೆ ಕೋಣೆ, ಪೂಜಾಗೃಹ ಹಾಗೂ ಬಚ್ಚಲಿನ ರೂಪುರೇಷೆಗಳ ಬಗ್ಗೆ. ಮಲಗುವ ಕೋಣೆಯಲ್ಲಿನ ಸೂಕ್ಷ್ಮಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವವರು ಕಡಿಮೆ. ಆದರೆ, ಮನೆಯ ಇತರ ಭಾಗಗಳಷ್ಟೇ ಮಲಗುವ ಕೋಣೆಯ ವಾಸ್ತುವೂ ಮುಖ್ಯವಾದುದು. ಹಾಗೆ ನೋಡಿದರೆ, ದಿನದ ಹೆಚ್ಚು ಭಾಗ ಕಳೆಯುವ ಈ ಕೋಣೆಯನ್ನು ರೂಪಿಸುವಲ್ಲಿ ಹೆಚ್ಚಿನ ಮುತುವರ್ಜಿ ಅಗತ್ಯ.

ದಣಿದ ದೇಹ ಚೈತನ್ಯವನ್ನು ಮರಳಿ ಪಡೆಯುವುದು ಬೆಡ್‌ ರೂಮಿನಲ್ಲಿಯೇ. ಏಕಾಂತಕ್ಕೆ ಅನುವು ಮಾಡಿಕೊಡುವ ಮತ್ತು ಮೈಮನಗಳಿಗೆ ಉಲ್ಲಾಸ ತಂದುಕೊಡುವ ಕಾರಣದಿಂದಾಗಿ ಈ ಸ್ಥಳದ ಒಪ್ಪ ಓರಣದ ಬಗ್ಗೆ ಹೆಚ್ಚು ಗಮನಕೊಡಬೇಕಿದೆ. ಅಂದಹಾಗೆ, ಬೆಡ್‌ ರೂಂ ಎಂದರೆ ಮಂಚ ಮತ್ತು ಹಾಸಿಗೆಯ ಚಿತ್ರ ಕಣ್ಮುಂದೆ ಬರುತ್ತದೆ. ಆದರೆ ಈ ಮಂಚ–ಹಾಸಿಗೆ ಹೇಗಿರಬೇಕು? ಎಲ್ಲಿರಬೇಕು ಎನ್ನುವುದರ ಬಗ್ಗೆಯೂ ಕಿವಿಮಾತುಗಳಿವೆ.

ಗಾಳಿ–ಬೆಳಕು ಧಾರಾಳವಾಗಿರಬೇಕು ಎನ್ನುವ ವಾಸ್ತುಶಾಸ್ತ್ರದ ಪ್ರಾಥಮಿಕ ಸೂತ್ರ ಮಲಗುವ ಕೋಣೆಗೂ ಅನ್ವಯಿಸುತ್ತದೆ. ಗಾಳಿ–ಬೆಳಕು ಸರಾಗವಾಗಿರುವುದು ದೇಹಕ್ಕೂ ಹಿತ, ಮನಸ್ಸಿಗೂ ಹಿತ. ಹಾಂ, ಹೆಚ್ಚಿನ ವಸ್ತುಗಳನ್ನು ಗುಡ್ಡೆ ಹಾಕಿಕೊಳ್ಳುವ ಅಭ್ಯಾಸದಿಂದ ದೂರ ಉಳಿಯುವುದರಿಂದ ಬೆಡ್‌ ರೂಂ ವಿಶಾಲವಾಗಿ ಕಾಣಿಸುತ್ತದೆ. ಕೋಣೆಯನ್ನು ಪೂರ್ತಿ ಆಕ್ರಮಿಸಿಕೊಳ್ಳುವಷ್ಟು ಮಂಚ ದೊಡ್ಡದಾಗಿರಬಾರದು. ಸುಂದರವಾದ ಮತ್ತು ಚೊಕ್ಕಟವಾದ ಕೋಣೆ ಒಳ್ಳೆಯ ನಿದ್ದೆಗೆ ಕಾರಣವಾಗುತ್ತದೆ. ನಿದ್ದೆ ಸರಿಯಾದರೆ ದೈನಿಕವೂ ಸುಂದರವಾಗಿರುತ್ತದೆ. ಗೋಡೆಯ ಬಣ್ಣ ಕೂಡ ಮನಸ್ಸಿನ ತಿಳಿಯನ್ನು ಕಲಕದಂತೆ ಹಿತವಾಗಿದ್ದರೆ ಚೆನ್ನ. ತಿಳಿ ನೀಲಿ, ಹಸಿರು ಹಾಗೂ ಬಿಳಿ ಬಣ್ಣಗಳು ಮನಸ್ಸಿಗೆ ಉಲ್ಲಾಸ ನೀಡುತ್ತವೆ.

ಹಾಸಿಗೆಯ ಕೆಳಗೆ, ಅಷ್ಟೇಕೆ ಮಂಚದ ಕೆಳಗೆ ವಸ್ತುಗಳನ್ನು ಒಟ್ಟುವುದು ಬೇಡ ಎನ್ನುತ್ತದೆ ವಾಸ್ತುಶಾಸ್ತ್ರ. ಕೆಲವರಿಗೆ ಮಂಚ ಎನ್ನುವುದು ಒಂದು ಬಗೆಯಲ್ಲಿ ಉಗ್ರಾಣ ಇದ್ದಂತೆ. ಬೇಕಾದ, ಬೇಡವಾದ ವಸ್ತುಗಳನ್ನು ಅದರ ಕೆಳಗೆ ಒಟ್ಟಲಾಗುತ್ತದೆ. ವಸ್ತುಗಳನ್ನು ಸಂಗ್ರಹಿಸಲಿಕ್ಕಾಗಿ ಮಂಚವನ್ನು ಪೆಟ್ಟಿಗೆಯಂತೆ ರೂಪಿಸುವುದೂ ಇದೆ. ಈ ಕಸರತ್ತು ಅನಗತ್ಯ. ಮಂಚದ ವಿನ್ಯಾಸ ಸರಳವಾಗಿರಲಿ, ಅದು ಸ್ಟೋರ್‌ ರೂಂ ಆಗದಿರಲಿ. ಅಂತೆಯೇ, ಮಲಗುವ ಹಾಸಿಗೆ ಕೂಡ ಸಹಜವಾಗಿರಲಿ. ಅದು ಅಸಹಜ ಆಕಾರಗಳಲ್ಲಿ ಇರದೆ, ಚೌಕವಾಗಿಯೋ ಆಯತಾಕಾರದಲ್ಲಿಯೋ ಇರಲಿ. ಹಾಂ, ಮಲಗಿದಾಗ ಎದುರು ಭಾಗದಲ್ಲಿ ಯಾವುದೇ ಕನ್ನಡಿ ಇರುವುದು ಬೇಡ. ಹೀಗೆ ಕನ್ನಡಿ ಇರುವುದರಿಂದ ನಿದ್ದೆಗೆ ತೊಡಕು ಉಂಟಾಗುತ್ತದಂತೆ.

ಸಾಮಾನ್ಯವಾಗಿ ಮನೆಯ ಯಜಮಾನ ಮಲಗಿಕೊಳ್ಳುವ ಕೋಣೆ ದಕ್ಷಿಣಕ್ಕೆ ಇರುತ್ತದೆ. ದಕ್ಷಿಣಾಭಿಮುಖವಾಗಿ ಮಲಗುವುದು ಕೂಡ ರೂಢಿ. ಉತ್ತರ ದಿಕ್ಕಿಗೆ ತಲೆಹಾಕಿ ಮಲಗುವುದಕ್ಕೆ ವಾಸ್ತುಶಾಸ್ತ್ರದಲ್ಲಿ ಆಸ್ಪದವಿಲ್ಲ. ಅಂದಹಾಗೆ, ಬೆಡ್‌ರೂಂನ ಬಾಗಿಲು ಪೂರ್ಣ ಪ್ರಮಾಣದಲ್ಲಿ ತೆಗೆಯಲು ಅವಕಾಶ ಇರುವಂತೆ ನೋಡಿಕೊಳ್ಳಿ. ಬಾಗಿಲಿಗೆ ಹೊಂದಿಕೊಂಡಂತೆ ಅಲಮೇರಾ ಅಥವಾ ಮೇಜು ಇರಿಸುವುದು ಒಳ್ಳೆಯ ಯೋಚನೆಯೇನೂ ಅಲ್ಲ. ಧನಾತ್ಮಕ ಶಕ್ತಿಗಳ ಸಂವಹನಕ್ಕೆ ಬಾಗಿಲು ಸರಾಗವಾಗಿರುವುದು ಅವಶ್ಯಕ. ಹಾಂ, ಈ ಬಾಗಿಲು ಅನಗತ್ಯ ಶಬ್ದ ಮಾಡದೆ ಇರುವಂತೆ ನೋಡಿಕೊಳ್ಳಿ.

ನಿಮಗೆ ಓದುವ ಅಭ್ಯಾಸ ಇದ್ದರೆ ಮಲಗುವ ಕೋಣೆಯಲ್ಲೊಂದು ಪುಟ್ಟ ಬುಕ್‌ ಶೆಲ್ಫ್‌ ಮಾಡಿಕೊಳ್ಳಲು ಅವಕಾಶವಿದೆ. ಈ ಶೆಲ್ಫಿಗೆ ಕೋಣೆಯ ಪಶ್ಚಿಮದ ಮೂಲೆ ಪ್ರಶಸ್ತವಾದುದು. ಪುಸ್ತಕಗಳಂತೆಯೇ ಮನಸ್ಸಿಗೆ ಸ್ಫೂರ್ತಿ ನೀಡುವ ಯಾವುದಾದರೂ ಫೋಟೊ, ಕಲಾಕೃತಿಯನ್ನು ಗೋಡೆಗಳ ಮೇಲೆ ಸಿಂಗರಿಸಬಹುದು. ಆದರೆ, ವಿಕಾರ ಚಿತ್ರಗಳು ಬೇಡ. ದೇವರ ಮೂರ್ತಿಗಳನ್ನು ಕೂಡ ಮಲಗುವ ಕೋಣೆಗೆ ತರುವುದು ಬೇಡ. ಅದಕ್ಕೆಂದೇ ಪೂಜಾಕೋಣೆಯನ್ನು ಮೀಸಲಿರುವಾಗ ದೇವರನ್ನು ಏಕಾಂತದೊಳಗೆ ಎಳೆದು ತರುವುದು ವಿಹಿತವಲ್ಲ. ಇಷ್ಟುಮಾತ್ರವಲ್ಲ, ಮೀನಿನ ತೊಟ್ಟಿಗೆ ಬೆಡ್‌ ರೂಂನಲ್ಲಿ ಜಾಗ ಕಲ್ಪಿಸುವುದು ಕೂಡ ಸರಿಯಲ್ಲ. ಮಲಗುವ ಕೋಣೆ ನಮ್ಮ ಮನಸ್ಸಿನ ಸ್ಥಿತಿಯನ್ನು ಪ್ರತಿಫಲಿಸುತ್ತದೆ ಎನ್ನುವ ನಂಬಿಕೆಯಿದೆ. ಅದು ಚೆಲುವಾಗಿದ್ದಷ್ಟೂ ಹಿತವಾಗಿದ್ದಷ್ಟೂ ಮನಸ್ಸು ತಿಳಿಯಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT