'ಅನಂತ ವನ' ಉದ್ಯಾನ ಉದ್ಘಾಟನೆ

7

'ಅನಂತ ವನ' ಉದ್ಯಾನ ಉದ್ಘಾಟನೆ

Published:
Updated:
Deccan Herald

ಬೆಂಗಳೂರು: ಸಂಸದ ದಿವಂಗತ ಅನಂತಕುಮಾರ್ ಸ್ಮರಣಾರ್ಥ 'ಅನಂತ ವನ' ಉದ್ಯಾನ ಸಾರ್ವಜನಿಕರಿಗೆ ಮುಕ್ತವಾಯಿತು. ಎಚ್‌ಎಸ್‌ಆರ್ ಬಡಾವಣೆಯ 7ನೇ ಸೆಕ್ಟರ್‌ನಲ್ಲಿ ನಿರ್ಮಾಣಗೊಂಡ ಉದ್ಯಾನವನ್ನು ಮೇಯರ್ ಗಂಗಾಂಬಿಕೆ ಶನಿವಾರ ಉದ್ಘಾಟಿಸಿದರು.

ಈ ಉದ್ಯಾನದಲ್ಲಿ ಕಸದಿಂದ ಕಾಂಪೋಸ್ಟ್ ಗೊಬ್ಬರ ಉತ್ಪಾದಿಸುವ ಹಲವು ಬಗೆಯ ಪ್ರಾತ್ಯಕ್ಷಿಕೆಗಳನ್ನು ಇಡಲಾಗಿದೆ. ಮನೆ, ಅಪಾರ್ಟ್‌ಮೆಂಟ್‌ಗಳಲ್ಲಿ ಉತ್ಪಾದನೆ ಆಗುವ ಕಸವನ್ನು ಅಲ್ಲೇ ಕಾಂಪೋಸ್ಟ್ ತಯಾರಿಸುವುದನ್ನು ಕಲಿಸುವ ಉದ್ದೇಶದಿಂದ 'ಸ್ವಚ್ಛಾಗ್ರಹ ಕಲಿಕಾ ಕೇಂದ್ರ' ಆರಂಭಿಸಲಾಗಿದೆ. ಅದಮ್ಯ ಚೇತನ ಸಂಸ್ಥೆಯು ಉದ್ಯಾನಕ್ಕೆ ಗಿಡಗಳನ್ನು ನೀಡಿದೆ.

'ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಅನಂತವನದಲ್ಲಿ ಸ್ವಚ್ಛಾಗ್ರಹ ಕಲಿಕಾ ಕೇಂದ್ರ ಮಾದರಿಯಾಗಿದೆ. ಈ ಮಾದರಿಯನ್ನು ನಗರದೆಲ್ಲೆಡೆ ವಿಸ್ತರಿಸುವ ಅಗತ್ಯವಿದೆ.  ಪರಿಸರ ಕಾಳಜಿ ಹೊಂದಿದ್ದ ಅನಂತಕುಮಾರ್ ಅವರ ಹೆಸರನ್ನು ಉದ್ಯಾನಕ್ಕೆ ಇಟ್ಟಿರುವುದು ಸೂಕ್ತವಾದುದು ಎಂದು ಮೇಯರ್ ಹೇಳಿದರು.

'ತ್ಯಾಜ್ಯ ನಿರ್ವಹಣೆಯನ್ನು ದೊಡ್ಡವರು ಕಲಿತಲ್ಲಿ ಮಕ್ಕಳೂ ಕಲಿಯುತ್ತಾರೆ. ಈ ಸ್ವಚ್ಛಾಗ್ರಹ ಕಲಿಕಾ ಕೇಂದ್ರ ದೊಡ್ಡವರ ಕಲಿಕಾ ಕೇಂದ್ರ ಆಗಬೇಕು' ಎಂದು ಅದಮ್ಯ ಚೇತನ ಸಂಸ್ಥೆ ಮುಖ್ಯಸ್ಥೆ, ಅನಂತ್‌ ಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಹೇಳಿದರು.

'ಪಾಲಿಕೆಯ ಅನುದಾನವಿಲ್ಲದೇ ಇಲ್ಲಿನ ಎಚ್ಎಸ್ಆರ್ ಸಿಟಿಜನ್ ಫೋರಂ ಸಂಸ್ಥೆ ಈ ಉದ್ಯಾನ ನಿರ್ಮಿಸಿದೆ. ಅನಂತ ಕುಮಾರ್ ಅವರ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದೇ ಅವರಿಗೆ ಸಲ್ಲಿಸಬಹುದಾದ ನಿಜವಾದ ಶ್ರದ್ಧಾಂಜಲಿ' ಎಂದು ಶಾಸಕ ಸತೀಶ್ ರೆಡ್ಡಿ ಹೇಳಿದರು. ಉಪ ಮೇಯರ್ ಭದ್ರೇಗೌಡ, ಪಾಲಿಕೆ ಸದಸ್ಯ ಗುರುಮೂರ್ತಿರೆಡ್ಡಿ ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಆಯುಕ್ತೆ ಡಾ.ಸೌಜನ್ಯಾ ಇದ್ದರು.

ಜೈವಿಕ ಗೊಬ್ಬರಕ್ಕೆ 20 ಘಟಕಗಳು

1.5 ಎಕರೆ ವಿಸ್ತೀರ್ಣ ಇರುವ ಈ ಉದ್ಯಾನದಲ್ಲಿ 90ರಷ್ಟು ಕಸವನ್ನು ಜೈವಿಕ ಗೊಬ್ಬರವಾಗಿ ಪರಿವರ್ತಿಸುವ 20 ಘಟಕಗಳಿವೆ. ಗೊಬ್ಬರ ತಯಾರಿಕೆ ವಿಧಾನ, ಸಮುದಾಯ ಗೊಬ್ಬರ ತಯಾರಿಕೆ, ಎಲೆ ಗೊಬ್ಬರ, ಕಿಚನ್ ಗಾರ್ಡನ್, ಜೈವಿಕ ಅನಿಲ ಉತ್ಪಾದನಾ ವಿಧಾನ, ಶೂನ್ಯ ತ್ಯಾಜ್ಯ ಹಾಗು ತ್ಯಾಜ್ಯ ವಸ್ತುಗಳ ಪುರ್ನಬಳಕೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಹೇಳಿಕೊಡುವ ವ್ಯವಸ್ಥೆ ಇದೆ. ಯಾವುದೇ ಪ್ರವೇಶ ಶುಲ್ಕ ಇಲ್ಲ. 

 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !