ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹದಾರ್ಢ್ಯ ಸ್ಪರ್ಧೆ: ತರಕಾರಿ ಮಾರುವ ಧನರಾಜ್ ಬೆಳ್ಳಿ ಸಾಧನೆ

ಸಿಂಗಪುರದ ಅಂತರರಾಷ್ಟ್ರೀಯ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಎರಡು ಪದಕ
Published 10 ಮೇ 2024, 0:19 IST
Last Updated 10 ಮೇ 2024, 0:19 IST
ಅಕ್ಷರ ಗಾತ್ರ

ಮೈಸೂರು: ತರಕಾರಿ ಮಾರುತ್ತಲೇ ಕಸರತ್ತು ನಡೆಸಿದ, ಸರಗೂರು ತಾಲ್ಲೂಕಿನ ಸಾಗರೆ ಗ್ರಾಮದ ಯುವಕ ಧನರಾಜ್‌, ಇತ್ತೀಚೆಗೆ ಸಿಂಗಪುರದಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ.

ಎಫ್‌ಐಎಫ್‌ (ಫಿಟ್‌ನೆಸ್‌ ಇಂಟರ್‌ನ್ಯಾಷನಲ್ ಫೆಡರೇಷನ್) ಆಯೋಜಿಸಿದ್ದ ಸ್ಪರ್ಧೆಯ ಜ್ಯೂನಿಯರ್ ಹಾಗೂ ಕ್ಲಾಸಿಕ್ ಫಿಸಿಕ್ ವಿಭಾಗದಲ್ಲಿ ಬೆಳ್ಳಿ ಪದಕಗಳಿಗೆ ಕೊರಳೊಡ್ಡಿದ್ದಾರೆ.

ಮೈಸೂರಿನ ಅರವಿಂದ ನಗರದಲ್ಲಿರುವ ಸಿ.ಆರ್‌ ಫಿಟ್‌ನೆಸ್‌ ಕೇಂದ್ರದಲ್ಲಿ ಕೋಚ್‌ ಎಂ.ಬಿ.ಚಂದನ್ ಅವರಿಂದ ಕಳೆದ ಒಂದೂವರೆ ವರ್ಷದಿಂದ ಧನರಾಜ್ ತರಬೇತಿ ಪಡೆದಿದ್ದರು. ತರಕಾರಿ ಮಾರಾಟ ಮಾಡಲು ಮೈಸೂರಿಗೆ ಬರುವ ಅವರು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಬಿಡುವಿನ ಸಮಯವನ್ನು ಬಳಸಿಕೊಂಡಿದ್ದಾರೆ.

ಜಿಲ್ಲಾ ಕೇಂದ್ರದಿಂದ 65 ಕಿ.ಮೀ ದೂರವಿರುವ ಸಾಗರೆಯಿಂದ ತರಕಾರಿ ಖರೀದಿಸಲು ನಿತ್ಯ ಸಂಜೆ ಮೈಸೂರಿಗೆ ಬರುತ್ತಿದ್ದ ಅವರು, ಸಂಜೆ 7ರಿಂದ 9ರವರೆಗೆ ಕಸರತ್ತು ನಡೆಸುತ್ತಿದ್ದರು. ರಾತ್ರಿ 12ರವರೆಗೆ ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಲೋಡ್‌ ಮಾಡಿಕೊಂಡು ಎಚ್‌.ಡಿ.ಕೋಟೆಗೆ ತೆರಳಿ ರಾತ್ರಿಯಿಡೀ ವಾಹನದಲ್ಲಿಯೇ ನಿದ್ರೆ ಮಾಡುತ್ತಿದ್ದರು. ಮರುದಿನ ಬೆಳಿಗ್ಗೆ ತರಕಾರಿ ಮಾರಾಟ ಮಾಡಿ ಮನೆಗೆ ಹೋಗುತ್ತಿದ್ದರು. ದುಡಿಮೆಯ ಜೊತೆಗೆ ಕ್ರೀಡಾ ಸಾಧನೆ ಮಾಡಲು ಪೋಷಕರಾದ ಮಹದೇವ– ಲಕ್ಷ್ಮಮ್ಮ ಕೂಡ ನೆರವಾಗಿದ್ದಾರೆ.

ವೈಶಾಖ್‌ ಸಾಧನೆ:

ಕೆ.ಆರ್‌.ಮೊಹಲ್ಲಾ ನಿವಾಸಿ, ಬಿ.ಕಾಂ ವಿದ್ಯಾರ್ಥಿ 22 ವರ್ಷದ ವೈಶಾಖ್ ಇದೇ ಸ್ಪರ್ಧೆಯ ಜ್ಯೂನಿಯರ್‌ ವಿಭಾಗದಲ್ಲಿ ಬೆಳ್ಳಿ, ಕ್ಲಾಸಿಕ್‌ ಫಿಸಿಕ್ ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಅವರಿಗೆ ಪೋಷಕರಾದ ಪುಟ್ಟಸ್ವಾಮಿ– ಬಿ.ಆರ್.ಭಾರತಿ ಪ್ರೋತ್ಸಾಹ ನೀಡುತ್ತಿದ್ದಾರೆ. ‘ಏಕಲವ್ಯ’ ಪ್ರಶಸ್ತಿ ಪಡೆವ ಮಹತ್ವಾಕಾಂಕ್ಷೆ ಅವರದ್ದು.

‘ಸಾಧನೆಗೆ ಪರಿಶ್ರಮದೊಂದಿಗೆ ಸೂಕ್ತ ತರಬೇತಿಯೂ ಮುಖ್ಯ. ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕೆಂಬುದು ಕನಸಾಗಿತ್ತು. ಕೆಲಸದ ನಡುವೆಯೇ ತರಬೇತಿ ಪಡೆದೆ’ ಎಂದು ಧನರಾಜ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕ್ರೀಡಾಸಕ್ತಿ ಜೊತೆಗೆ ಶ್ರದ್ಧೆ, ಶಿಸ್ತು ಅಗತ್ಯ. ಧನರಾಜ್ ಹಾಗೂ ವೈಶಾಖ್ ಅವರ ಪರಿಶ್ರಮವೇ ಪ್ರಶಸ್ತಿ ಬಳಿಗೆ ಅವರನ್ನು ಕರೆದೊಯ್ದಿವೆ. ಆಸಕ್ತ ಕ್ರೀಡಾಪಟುಗಳಿಗೆ ಅಗತ್ಯ ಪ್ರೋತ್ಸಾಹವೂ ಬೇಕಿದೆ’ ಎಂದರು.

ಸಿಂಗಪುರದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಧನರಾಜ್
ಸಿಂಗಪುರದಲ್ಲಿ ನಡೆದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದ ಧನರಾಜ್
ಬೆಳ್ಳಿ ಗೆದ್ದ ವೈಶಾಖ್
ಬೆಳ್ಳಿ ಗೆದ್ದ ವೈಶಾಖ್

ನಿತ್ಯ 65 ಕಿ.ಮೀ ಪ್ರಯಾಣ ಫಿಟ್‌ನೆಸ್‌ ಕೇಂದ್ರದಲ್ಲಿ ಕಸರತ್ತು ಒಂದೂವರೆ ವರ್ಷದಲ್ಲಿ ಗುರಿಸಾಧನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT