ಅಪ್ಪನಿಗೆ ಪಪ್ಪಾಯ ಹಲ್ವಾ ಇಷ್ಟ

7

ಅಪ್ಪನಿಗೆ ಪಪ್ಪಾಯ ಹಲ್ವಾ ಇಷ್ಟ

Published:
Updated:
Deccan Herald

ಬಾಲ್ಯದಿಂದಲೂ ನನಗೆ ಅಡುಗೆ ಬಗ್ಗೆ ಆಸಕ್ತಿ. ಹೆಣ್ಣುಮಗಳಾಗಿರುವ ಕಾರಣಕ್ಕೆ ನನಗೆ ಆಸಕ್ತಿ ಹೆಚ್ಚಾಯಿತೇನೋ. ಅಮ್ಮ (ರೇವತಿ ಪುರಾಣಿಕ್) ಅಡುಗೆ ಮಾಡುವುದನ್ನು ನೋಡುತ್ತಲೇ ಅಡುಗೆ ಮಾಡುವುದನ್ನು ಕಲಿತೆ. ಅಮ್ಮ ಮಾಡುವ ಮಾವಿನಕಾಯಿ ಚಿತ್ರಾನ್ನ, ಮೆಂತೆ ಕಡುಬು, ಟೊಮೆಟೊ ಬೇಳೆ ಸಾರು, ಟೊಮೆಟೊ ಸೂಪ್ ಹಾಗೂ ಕ್ಯಾರೆಟ್ ಹಲ್ವಾ ತಂಬಾ ಇಷ್ಟ. ಅಮ್ಮನಂತೆಯೇ ಅಪ್ಪ (ವಿಶ್ವನಾಥ್) ಉಪ್ಪಿಟ್ಟು ಹಾಗೂ ಮೆಣಸಿನ ಸಾರು ಚೆನ್ನಾಗಿ ಮಾಡುತ್ತಾರೆ.

ನಾನು ಹಲವೆಡೆ ಮಾವಿನಕಾಯಿ ಚಿತ್ರಾನ್ನ ತಿಂದಿದ್ದೇನೆ. ಆದರೆ, ಅಮ್ಮ ಮಾಡುವ ಮಾವಿನಕಾಯಿ ಚಿತ್ರನ್ನದ ರುಚಿಯೇ ಬೇರೆ. ಅದಕ್ಕಾಗಿಯೇ, ಅವರ ಹಿಂದೆ ಬಿದ್ದು ಸಾಕಷ್ಟು ಬಾರಿ ಮಾಡಿಸಿಕೊಂಡು ತಿಂದಿದ್ದೇನೆ. ಅವರ ಕೈರುಚಿಯ ಬಹುತೇಕ ಅಡುಗೆಗಳನ್ನು ಚ‍ಪ್ಪರಿಸಿಕೊಂಡು ತಿನ್ನುತ್ತೇನೆ.

5ನೇ ತರಗತಿಯಲ್ಲಿ ಓದುತ್ತಿದ್ದಾಗ ಅಮ್ಮನ ನೆರವಿನಿಂದ ಮೊದಲ ಬಾರಿಗೆ ಅಡುಗೆ ಮಾಡಿದ್ದೆ. ಯಾವ ಅಡುಗೆ ಮಾಡಿದ್ದೆ ಎಂಬುದು ಅಷ್ಟಾಗಿ ನೆನಪಿಲ್ಲ. ನನಗೆ ಬುದ್ಧಿಬಂದ ಬಳಿಕ ಪಪ್ಪಾಯ ಹಲ್ವಾ ಮಾಡಿದ್ದೆ. ಅದನ್ನು ಮಾಡುವಾಗ ಎಲ್ಲಿ ಎಡವಟ್ಟಾಗುತ್ತದೆಂಬ ಸಣ್ಣ ಅಳುಕಿತ್ತು. ಆದರೆ, ಅದು ತುಂಬ ಚೆನ್ನಾಗಿ ಬಂತು. ಅಪ್ಪ ಅದನ್ನು ಚಪ್ಪರಿಸಿಕೊಂಡು ತಿಂದಿದ್ದರು. ‘ನೀನು ಪಪ್ಪಾಯ ಹಲ್ವಾ ಚೆನ್ನಾಗಿ ಮಾಡುತ್ತೀಯಾ. ಮಾಡಿಕೊಡು’ ಎಂದು ಅವರು ಆಗಾಗ ಕೇಳುತ್ತಲೇ ಇರುತ್ತಾರೆ. ಅಪ್ಪ ಹಾಗೆ ನನ್ನನ್ನು ಕೇಳುತ್ತಿದ್ದರೆ, ಖುಷಿಯಾಗುತ್ತದೆ. ಖುಷಿಯಿಂದಲೇ ಮಾಡಿಕೊಡುತ್ತೇನೆ.

ದಕ್ಷಿಣ ಭಾರತದ ಬಹುತೇಕ ಖಾದ್ಯಗಳು ಹಾಗೂ ಇಟಾಲಿಯನ್ ಖಾದ್ಯಗಳನ್ನು ಮಾಡುತ್ತೇನೆ. ಗೋರಿಕಾಯಿ (ಜವಳಿಕಾಯಿ) ಚಿತ್ರನ್ನ ಮಾಡುವುದರಲ್ಲಿ ನನ್ನದು ಎತ್ತಿದ ಕೈ. ನಾನು ಮಾಡುವ ಪತ್ರೊಡೆ ಅಂದರೆ ಅಮ್ಮನಿಗೆ ತುಂಬ ಇಷ್ಟ. ಬ್ರೆಡ್ ಜಾಮೂನು, ಮಾವಿನಹಣ್ಣಿನ ಹಲ್ವಾ ಚೆನ್ನಾಗಿ ಮಾಡುತ್ತೇನೆ. ನಾನು ಯಾವುದೇ ಹೊಸ ಪ್ರಯೋಗ ಮಾಡಿದರೂ ಮೊದಲು ನಾನು ತಿನ್ನುವುದಿಲ್ಲ. ಅದನ್ನು ಬೇರೆಯವರಿಗೆ ತಿನ್ನಿಸಿ ಆಮೇಲೆ ನಾನು ರುಚಿ ನೋಡುತ್ತೇನೆ. ನನ್ನ ಬಹುತೇಕ ಹೊಸ ಪ್ರಯೋಗದ ಅಡುಗೆಗಳು ಸಕ್ಸಸ್‌ ಆಗಿವೆ.

ಸಂಗೀತವಾಗಲಿ ಹಾಗೂ ಅಡುಗೆಯಾಗಲಿ. ಅದರಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವಿಕೆ ಅಗತ್ಯ. ಆ ವಿಚಾರದಲ್ಲಿ ನಾನು ಪಕ್ಕಾ. ಸಂಗೀತವೆಂದರೆ ನನಗೆ ಪಂಚಪ್ರಾಣ. ಅಷ್ಟೇ ಪ್ರೀತಿ ಅಡುಗೆಯ ಮೇಲೂ ಇದೆ. ಹಾಡುವಷ್ಟೇ ಚೆನ್ನಾಗಿ ಅಡುಗೆ ಮಾಡುತ್ತೀನಿ ನನ್ನನ್ನು ಹತ್ತಿರದಿಂದ ಕಂಡವರು ಹೇಳುತ್ತಿರುತ್ತಾರೆ.

ಬೇರೆ ಬೇರೆ ರೀತಿಯ ಅಡುಗೆಗಳಿಗೆ ನಾವು ಒಗ್ಗಿಕೊಳ್ಳಬೇಕು. ಹೊಸ ಹೊಸ ರೀತಿಯ ರುಚಿಯನ್ನು ಸವಿಯುತ್ತಿರಬೇಕು. ಇದು ನನ್ನ ಅನಿಸಿಕೆ. ಸಂಗೀತ ವಿಚಾರದಲ್ಲೂ ನಾನು ಇದೇ ರೀತಿ. ಜನಪದ ಹಾಡುಗಳಿಗೆ ಹೊಸ ರೂಪ ನೀಡುವತ್ತ ಮನಸ್ಸು ತುಡಿಯುತ್ತದೆ. ಅದು ನನ್ನ ಪ್ರಕಾರ ಒಳ್ಳೆಯದೇ. ಆದರೆ, ನನ್ನ ತುಡಿತದಿಂದ ಜನಪದ ಹಾಡುಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸುವುದೂ ನನ್ನ ಜವಾಬ್ದಾರಿಯೇ ಆಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !