ಸಂಕಷ್ಟದಲ್ಲಿ ದಿನ ದೂಡುತ್ತಿರುವ ಆಶಾ ಕಾರ್ಯಕರ್ತೆಯರು..!

7
ಎಎನ್‌ಎಂ, ಆಶಾ ಕಾರ್ಯಕರ್ತೆಯರ ತೀರದ ಗೋಳು

ಸಂಕಷ್ಟದಲ್ಲಿ ದಿನ ದೂಡುತ್ತಿರುವ ಆಶಾ ಕಾರ್ಯಕರ್ತೆಯರು..!

Published:
Updated:

ವಿಜಯಪುರ: ‘ತಿಂಗಳ ಪಗಾರ ಬ್ಯಾಂಕ್‌ ಖಾತೆಗೆ ಜಮೆಯಾಗುವುದು ಒಂದೆರೆಡು ದಿನ ವಿಳಂಬವಾದರೂ; ದಿನ ದೂಡುವುದು ಭಾರಿ ಕಷ್ಟ. ಅಂಥಾದ್ರಾಗಾ ಮೂರ್ನಾಲ್ಕ್‌ ತಿಂಗಳಾದ್ರೂ ಪಗಾರ ಬಾರದಿದ್ದ್ರೇ ನಮ್ ಕಷ್ಟ ಯಾರಿಗೆ ಹೇಳ್ಕೋಳ್‌ಬೇಕು..!’

‘ಜನರ ಆರೋಗ್ಯಕ್ಕಾಗಿ ಹಗಲು–ರಾತ್ರಿ ದುಡಿತೀವಿ. ಆದ್ರಾ ನಮ್ ಶ್ರಮಕ್ಕ ಮೂರ್ ಕಾಸಿನ ಬೆಲೆ ಇಲ್ಲವಾಗೈತಿ. ಸರ್ಕಾರಕ್ಕ ನಮ್‌ ಕಾಳಜಿನೇ ಇಲ್ಲ. ನಾವು ಬದುಕೋದೇ ಕಷ್ಟವಾಗೈತಿ...’ ಆರೋಗ್ಯ ಇಲಾಖೆಯ ಎಎನ್‌ಎಂ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಅಂತರಾಳದ ನುಡಿಗಳಿವು.

‘ಆರೋಗ್ಯ ಇಲಾಖೆಯ ಎಲ್ಲರಿಗೂ ಪ್ರತಿ ತಿಂಗಳು ತಪ್ಪದೇ ವೇತನವಾಗುತ್ತದೆ. ಆದರೆ, ಎ.ಎನ್‌ಎಂ. ಕಾರ್ಯಕರ್ತರಿಗೆ ಮಾತ್ರ ಮೂರು–ನಾಲ್ಕು ತಿಂಗಳಿಗೊಮ್ಮೆ ಸಂಬಳ ಮಾಡಲಾಗುತ್ತದೆ. ಇದರಿಂದ ಪ್ರತಿ ತಿಂಗಳು ಅವರಿವರ ಬಳಿ ಸಾಲ ಮಾಡುವುದು ಅನಿವಾರ್ಯ. ಕಿರಾಣಿ ಅಂಗಡಿಗಳಲ್ಲಿ ಉದ್ರಿ ಕೊಡ್ತಿಲ್ಲ. ಮನೆಗಳನ್ನು ಬಾಡಿಗೆ ಕೊಡಲು ಯೋಚಿಸ್ತಿದ್ದಾರೆ. ಯಾರಿಗೂ ಆಗದ ಬಜೆಟ್‌ ಸಮಸ್ಯೆ ನಮಗ್ಯಾಕೆ’ ಎಂದು ಹೆಸರು ಹೇಳಲು ಇಚ್ಚಿಸದ ಎಎನ್‌ಎಂ ಕಾರ್ಯಕರ್ತೆಯೊಬ್ಬರು ‘ಪ್ರಜಾವಾಣಿ’ ಬಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಬಾಕಿಯಿದ್ದ ನಾಲ್ಕು ತಿಂಗಳ ವೇತನದ ಪೈಕಿ ಕೇವಲ ಮೂರು ತಿಂಗಳ ವೇತನವನ್ನು ಈ ತಿಂಗಳು ಪಾವತಿಸಿದ್ದು, ನವೆಂಬರ್‌ ತಿಂಗಳದ್ದು ಇನ್ನೂ ಬಾಕಿ ಉಳಿದಿದೆ. ಮತ್ತೆ ವೇತನಕ್ಕಾಗಿ ಮೂರ್ನಾಲ್ಕು ತಿಂಗಳು ಕಾಯಲೇಬೇಕು. ಹಲವು ಸಮಸ್ಯೆಗಳ ಮಧ್ಯೆಯೂ ಎಲ್ಲರಂತೆ ನಾವು ತಿಂಗಳ ಪೂರ್ತಿ ಕಷ್ಟಪಟ್ಟು ದುಡಿಯುತ್ತೇವೆ. ಅವರಂತೆ ನಮಗೂ ಪ್ರತಿ ತಿಂಗಳ ಅಂತ್ಯದಲ್ಲಿ ವೇತನ ಪಾವತಿಸಿ ಪುಣ್ಯ ಕಟ್ಕೊಳ್ಳಿ. ಇದರಿಂದ ಅವರಿವರ ಬಳಿ ಹಣಕ್ಕಾಗಿ ನಾವು ಕೈ ಚಾಚುವುದು ತಪ್ಪುತ್ತದೆ’ ಎಂದು ಅವರು ಕಿಡಿಕಾರಿದರು.

‘ಮನೆ ಮನೆಗಳಿಗೆ ಅಲೆದಾಡಿ ಗರ್ಭಿಣಿಯರ ಮಾಹಿತಿ ಸಂಗ್ರಹ. ನಂತರ ಮೂರು ತಿಂಗಳ ಗರ್ಭಿಣಿಯರ ಆರೋಗ್ಯ ವಿಚಾರಣೆ, ಬಾಣಂತನ ಆದ ಮೇಲೆ ಮಗುವಿಗೆ ಇಂಜೆಕ್ಷನ್‌, ಬಾಣಂತಿಯರ ಆರೈಕೆ ಹಾಗೂ ಆನೆಕಾಲು ರೋಗ, ಕುಷ್ಠ ರೋಗ, ಡೆಂಗಿ ಸೇರಿದಂತೆ ಇತರೆ ಕಾಯಿಲೆಗಳ ಸರ್ವೇ ಹಾಗೂ ಜಾಗೃತಿ ಕಾರ್ಯಗಳಿಗೆ ನಿತ್ಯ ಮುಂಜಾನೆಯಿಂದ ಮುಸ್ಸಂಜೆವರೆಗೂ ನಮ್ಮನ್ನು ಬಳಸಿಕೊಳ್ಳುತ್ತಾರೆ.

ಆದರೆ ದುಡಿತಕ್ಕೆ ತಕ್ಕಂತೆ ವೇತನ ನೀಡುತ್ತಿಲ್ಲ. ಕೊಡುವ ಗೌರವ ಧನ ಸಹಿತ ಐದಾರು ತಿಂಗಳಿಗೊಮ್ಮೆ ಕೊಡುತ್ತಾರೆ. ಆರು ತಿಂಗಳ ವೇತನದ ಪೈಕಿ ಮೂರು ತಿಂಗಳ ಪಗಾರ ಮಾತ್ರ ಹಾಕಿದ್ದಾರೆ. ಉಳಿದಿದ್ದು ಮತ್ತ ಐದಾರು ತಿಂಗಳ ನಂತರವೇ ಬರುತ್ತದೆ. ಮೇಲಾಧಿಕಾರಿಗಳಿಗೆ ಪಗಾರ ಕುರಿತು ಕೇಳಿದ್ರೆ, ಸರಿಯಾಗಿ ಸ್ಪಂದಿಸುವುದಿಲ್ಲ ಎಂದು ಆಶಾ ಕಾರ್ಯಕರ್ತೆಯರು’ ದೂರಿದರು.

‘ಜಿಲ್ಲೆಯಲ್ಲಿ 157 ಎ.ಎನ್‌.ಎಂ ಕಾರ್ಯಕರ್ತೆಯರು ಹಾಗೂ 1800 ಆಶಾ ಕಾರ್ಯಕರ್ತೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಸೆಪ್ಟೆಂಬರ್‌ ತಿಂಗಳವರೆಗೆ ವೇತನವಾಗಿದ್ದು, ಬಜೆಟ್‌ ಬಂದ ಮೇಲೆ ಬಾಕಿ ವೇತನ ಪಾವತಿಸಲಾಗುವುದು. ಸರ್ಕಾರದಿಂದ ಅನುದಾನ ಬಿಡುಗಡೆಯಲ್ಲಿ ವಿಳಂಬ ಹಾಗೂ ಕೆಲ ತಾಂತ್ರಿಕ ತೊಂದರೆಗಳಿಂದ ವೇತನ ಪಾವತಿಗೆ ಸಮಸ್ಯೆ ಆಗುತ್ತದೆ. ಜಿಲ್ಲಾ ಪಂಚಾಯ್ತಿ ಬದಲು ನೇರವಾಗಿ ಆರೋಗ್ಯ ಇಲಾಖೆಗೆ ಅನುದಾನ ಬಿಡುಗಡೆಗೊಳಿಸಿದರೆ, ತಾಂತ್ರಿಕ ಅಡೆತಡೆ ತಿಳಿದು ಪರಿಹರಿಸಬಹುದು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ.ಮಹೇಂದ್ರ ಕಾಪಸೆ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !