ಚುನಾವಣೆಗೂ ಡಿಜಿಟಲ್‌ ಸ್ಪರ್ಶ; ಅಂಗವಿಕಲ ಮತದಾರರಿಗಾಗಿ ಆ್ಯಪ್‌

ಶನಿವಾರ, ಮಾರ್ಚ್ 23, 2019
31 °C
ಸಾರ್ವಜನಿಕರು ಆ್ಯಪ್‌ ಮೂಲಕ ದೂರು ನೀಡಬಹುದು

ಚುನಾವಣೆಗೂ ಡಿಜಿಟಲ್‌ ಸ್ಪರ್ಶ; ಅಂಗವಿಕಲ ಮತದಾರರಿಗಾಗಿ ಆ್ಯಪ್‌

Published:
Updated:
Prajavani

ಚಾಮರಾಜನಗರ: ಆಧುನಿಕ ತಂತ್ರಜ್ಞಾನ ಬಳಕೆಯಲ್ಲಿ ಮುಂದಿರುವ ಭಾರತೀಯ ಚುನಾವಣಾ ಆಯೋಗವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಡಿಜಿಟಲ್‌ ತಂತ್ರ‍ಜ್ಞಾನವನ್ನು ಹೆಚ್ಚು ಬಳಸುತ್ತಿದೆ.

ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾ ಇಡಲು, ಅಂಗವಿಕಲರ ಮತದಾರರು, ಮತದಾರರ ಸಹಾಯಕ್ಕಾಗಿ ಮೊಬೈಲ್‌ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ಅನುಮತಿ ಪಡೆಯುವುದಕ್ಕಾಗಿ ಪ್ರತ್ಯೇಕ ವೆಬ್‌ಸೈಟ್‌ ರೂಪಿಸಿದೆ.

ಸಿ–ವಿಜಿಲ್‌: ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ, ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೆ ನಿಗಾ ಇಡುವುದಕ್ಕಾಗಿ ಸಿ–ವಿಜಿಲ್‌ (cVIGIL) ಆ್ಯಪ್‌ಅನ್ನು ಆಯೋಗ ಪರಿಚಯಿಸಿದೆ.


ಸಿ ವಿಜಿಲ್‌ ಆ್ಯಪ್‌ ನೋಟ

ಸಾರ್ವಜನಿಕರು ಈ ಆ್ಯಪ್‌ ಮೂಲಕ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಬಹುದು. ದೂರಿಗೆ ಸಂಬಂಧಿಸಿದಂತೆ ಫೋಟೊ, ವಿಡಿಯೊಗಳನ್ನೂ ಅಪ್‌ಲೋಡ್‌ ಮಾಡುವ ಅವಕಾಶವೂ ಇದರಲ್ಲಿದೆ. ಈ ಆ್ಯಪ್‌ ಮೂಲಕ ಬಂದ ದೂರನ್ನು 100 ನಿಮಿಷಗಳ ಒಳಗಾಗಿ ಇತ್ಯರ್ಥಪಡಿಸಲಾಗುತ್ತದೆ ಎಂದು ಚುನಾವಣಾ ಆಯೋಗ ಹೇಳುತ್ತಿದೆ.

ಇದುವರೆಗೂ ನೀತಿ ಸಂಹಿತೆ ಉಲ್ಲಂಘನೆಯ ಮಾಹಿತಿ ಅಥವಾ ದೂರುಗಳು ಕ್ಷಿಪ್ರವಾಗಿ ಆಯೋಗಕ್ಕೆ ತಲುಪುತ್ತಿರಲಿಲ್ಲ. ದೂರುಗಳು ಬಂದರೂ ಅದಕ್ಕೆ ಪೂರಕವಾದ ದಾಖಲೆಗಳು ಇರುತ್ತಿರಲಿಲ್ಲ. ಇದರಿಂದ ದೂರಿನ ವಿಶ್ವಾಸಾರ್ಹತೆ ದೃಢಪಡಿಸುವುದು ಕಷ್ಟವಾಗುತ್ತಿತ್ತು. ಆದರೆ, ಸಿ–ವಿಜಿಲ್‌ ಆ್ಯಪ್‌ನಲ್ಲಿ ಈ ಎಲ್ಲ ಕೊರತೆಗಳಿಗೂ ಪರಿಹಾರವಿದೆ. ಫೋಟೊ, ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲು ಸಾಧ್ಯವಾಗುವುದರಿಂದ ಮತ್ತು ಉಲ್ಲಂಘನೆ ನಡೆದಿರುವ ಪ್ರದೇಶದ (ಲೋಕೇಷನ್‌) ವಿವರಗಳು ಸ್ಪಷ್ಟವಾಗಿ ಲಭ್ಯವಾಗುವುದರಿಂದ ಚುನಾವಣಾ ಅಧಿಕಾರಿಗಳು ವೇಗವಾಗಿ ಕ್ರಮ ಕೈಗೊಳ್ಳಬಹುದಾಗಿದೆ.

ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಈ ಆ್ಯಪ್‌ ಲಭ್ಯವಿದ್ದು, ಜನರು ಪ್ಲೇಸ್ಟೋರ್‌ ಮೂಲಕ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಲಕ್ಷಕ್ಕೂ ಹೆಚ್ಚು ಮಂದಿ ಈಗಾಗಲೇ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ.


ಅಂಗವಿಕಲರಿಗಾಗಿ ಇರುವ ಆ್ಯಪ್‌

ಅಂಗವಿಕಲರಿಗಾಗಿ ಆ್ಯಪ್‌

ಅಂಗವಿಕಲ ಮತದಾರರಿಗಾಗಿ ಪ್ರತ್ಯೇಕ ಆ್ಯಪ್‌ ಸಿದ್ಧಪಡಿಸಿರುವುದು ಈ ಬಾರಿಯ ಮತ್ತೊಂದು ವಿಶೇಷ. ಪಿಡಬ್ಲ್ಯುಡಿ ಎಂಬ ಹೆಸರಿನ ಆ್ಯಪ್‌ (PWD app) ಆ್ಯಂಡ್ರಾಯ್ಡ್‌ ಸ್ಮಾರ್ಟ್‌ಪೋನ್‌ಗಳ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ.

ಅಂಗವಿಕಲ ಮತದಾರರು ಆಯೋಗದ ಮುಂದೆ ತಮ್ಮನ್ನು ಗುರುತಿಸಿಕೊಳ್ಳಲು ಈ ಆ್ಯಪ್‌ ಬಳಸಬಹುದಾಗಿದೆ. ಹೊಸದಾಗಿ ಹೆಸರು ನೋಂದಾಯಿಸಲು, ವಿಳಾಸ ಬದಲಾವಣೆ, ಇನ್ನಿತರ ತಿದ್ದು‍ಪಡಿಗಳನ್ನೂ ಮಾಡಬಹುದಾಗಿದೆ. ಮತಗಟ್ಟೆಗಳಲ್ಲಿ ತಮಗೆ ಅಗತ್ಯವಿರುವ ಸವಲತ್ತುಗಳ (ಉದಾ: ವೀಲ್‌ ಚೇರ್‌) ಬಗ್ಗೆ ಮನವಿ ಮಾಡಬಹುದು. ಆಯೋಗಕ್ಕೆ ದೂರುಗಳನ್ನೂ ನೀಡಬಹುದು. ಸದ್ಯ ಈ ಆ್ಯಪ್‌ ಅನ್ನು 10 ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

ಮತದಾರರ ಸಹಾಯವಾಣಿ ಆ್ಯಪ್‌: ಎಲ್ಲ ಮತದಾರರಿಗಾಗಿ ಸಿದ್ಧಪಡಿಸಿರುವ ಆ್ಯಪ್‌ ಇದು. ವೋಟರ್‌ ಹೆಲ್ಪ್‌ಲೈನ್‌ (voter helpline) ಎಂಬ ಹೆಸರಿನ ಆ್ಯಪ್‌ ಮೂಲಕ ಜನರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಬಹುದು. ಹೊಸದಾಗಿ ನೋಂದಣಿಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಕ್ಷೇತ್ರ ವರ್ಗಾವಣೆ, ಹೆಸರು– ವಿಳಾಸ ತಿದ್ದುಪಡಿಗಾಗಿಯೂ ಅರ್ಜಿಗಳನ್ನು ಸಲ್ಲಿಸಬಹುದು.


ಸುವಿಧಾ ವೆಬ್‌ಪುಟದ ನೋಟ

ಅಭ್ಯರ್ಥಿಗಳಿಗಾಗಿ ‘ಸುವಿಧಾ’ ಆ್ಯಪ್‌ ಆರಂಭ

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳಿಗಾಗಿ https://suvidha.eci.gov.in ಎಂಬ ‌ವೆಬ್‌ಸೈಟ್‌ ಆರಂಭಿಸಿದೆ. ಅಭ್ಯರ್ಥಿಗಳು ಈ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡ ಬಳಿಕ, ಇದೇ ಹೆಸರಿನಲ್ಲಿರುವ ಆ್ಯಪ್‌ (suvi‌dha candidate) ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಇದನ್ನು ಬಳಸಿಕೊಂಡು, ಸಲ್ಲಿಸಿರುವ ನಾಮಪತ್ರದ ಪ್ರಸ್ತುತ ಸ್ಥಿತಿ ಸೇರಿದಂತೆ ವಿವಿಧ ಮಾಹಿತಿಗಳನ್ನು ಪಡೆಯಬಹುದು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !