ವಾಸ್ತುಶಿಲ್ಪದ ಆಗರ ಅಜಂತಾ – ಎಲ್ಲೋರ

7

ವಾಸ್ತುಶಿಲ್ಪದ ಆಗರ ಅಜಂತಾ – ಎಲ್ಲೋರ

Published:
Updated:
Prajavani

ದಿನದ ಕೆಲಸದ ಒತ್ತಡಗಳಿಗೆ ನೊಂದ ಅಥವಾ ಬಳಲಿದ ಮನಗಳಿಗೆ ಒಂದು ಬದಲಾವಣೆ ಬೇಕಿತ್ತು. ವರ್ಷಪೂರ್ತಿ ದುಡಿದ ದೇಹಕ್ಕೆ ನವಚೈತನ್ಯ ತುಂಬುವ ಪರಿಸರದ ಜರೂರತ್ತಿತ್ತು. ಅದಕ್ಕಾಗಿಯೇ ಚಳಿಗಾಲದ ಆರಂಭದ ದಿನಗಳಲ್ಲಿ ಪ್ರವಾಸವನ್ನು ಆಯೋಜಿಸಿಯೇ ಬಿಟ್ಟೆವು. ಅಜಂತಾ ಮತ್ತು ಎಲ್ಲೋರಾ ನಮ್ಮ ಪ್ರವಾಸದ ಕೇಂದ್ರಬಿಂದುಗಳಾದವು.

ಎಲ್ಲೋರಾ–ಅಜಂತಾ, ಔರಂಗಾಬಾದ್‌ ಜಿಲ್ಲೆಯಲ್ಲಿವೆ. ಇದು ಮಹಾರಾಷ್ಟ್ರದ ಐತಿಹಾಸಿಕ ತಾಣಗಳನ್ನು ತೆಕ್ಕೆಯಲ್ಲಿಟ್ಟುಕೊಂಡಿರುವ ಜಿಲ್ಲೆ. ಒಂಥರಾ ಪ್ರೇಕ್ಷಣೀಯ ಸ್ಥಳಗಳ ಜಂಕ್ಷನ್. ಅಂದು ನಾವೆಲ್ಲ ಎಲ್ಲೋರಾ ಗುಹೆಗಳನ್ನು ನೋಡುವ ತವಕದಲ್ಲಿದ್ದೆವು. ಮುಂಜಾನೆ ಔರಂಗಾಬಾದ್‌ನಲ್ಲಿಯೇ ಇದ್ದ ಮಿನಿ ತಾಜ್‌ಮಹಲ್ ಹಾಗೂ ದೌಲತಾಬಾದ್ ಕೋಟೆ ನೋಡಿ, ಎಲ್ಲೋರಾದತ್ತ ಹೆಜ್ಜೆ ಹಾಕಿದೆವು. 

ದಾರಿಯಲ್ಲಿ ಸಾಗುತ್ತಿದ್ದಾಗ, ಇತಿಹಾಸದ ಕ್ಲಾಸ್‌ನಲ್ಲಿ ಮೇಷ್ಟ್ರುಗಳು ಗುಹೆಗಳ ಬಗ್ಗೆ ನೀಡಿದ ಮಾಹಿತಿ ತಲೆಯಲ್ಲಿ ನುಸುಳುತ್ತಿತ್ತು. ಕೌತುಕ ಉತ್ತುಂಗಕ್ಕೇರಿತ್ತು. ಬೆಟ್ಟ ಗುಡ್ಡಗಳ ನಡುವೆ ಸಾಗುತ್ತ ಎಲ್ಲೋರಾ ತಲುಪಿದಾಗ ಮಧ್ಯಾಹ್ನ ಸುಮಾರು 1 ಗಂಟೆ. ಪ್ರವೇಶ ಶುಲ್ಕ ಕೊಟ್ಟು, ಗುಹೆಗಳಿರುವ ಅಂಗಳ ಪ್ರವೇಶಿಸಿದಾಗ ಮೊದಲು ಕಂಡದ್ದೇ ಗುಹೆ ನಂ 16. ಅದೇ ಕೈಲಾಸ ದೇವಾಲಯ. ಮೊದಲ ನೋಟದಲ್ಲೇ ‘ವಾರೆ ವಾಹ್‌’ ಉದ್ಗಾರ ಹೊರಡುವಂತಿತ್ತು ಆ ಗುಹೆ.

ಗುಹೆಗಳೆಂದರೇನು? ಕತ್ತಲೆಯಲ್ಲಿ ಮೂರ್ತಿಗಳ ಕೆತ್ತನೆ ಹೇಗೆ? ನಾವು ಅವುಗಳನ್ನು ಕತ್ತಲೆಯಲ್ಲಿ ನೋಡಬಹುದಾ? ಎಂಬ ಪ್ರಶ್ನೆಗಳು ಬಹಳ ವರ್ಷಗಳಿಂದ ಕಾಡುತ್ತಿದ್ದವು. ಅವುಗಳಿಗೆಲ್ಲ ತೆರೆ ಬೀಳುವ ಸಮಯ ಅದಾಗಿತ್ತು.

ಎಲ್ಲೋರಾ ಗುಹೆಗಳ ಪ್ರಖ್ಯಾತಿ ನಿಂತಿರುವುದೇ ಈ 16ನೇ ಗುಹೆಯಿಂದ. ಇದು ಕೈಲಾಸ ದೇವಾಲಯ. ಇದನ್ನು ಏಕಶಿಲೆಯಲ್ಲಿ ಕೆತ್ತಲಾಗಿದೆ. ಇಲ್ಲಿನ ಶಿಲ್ಪ ಕೆತ್ತನೆ ಶತಮಾನಗಳ ಹಿಂದಿನದ್ದು. ಇವತ್ತಿಗೂ ತನ್ನ ಆಕರ್ಷಣೆ ಉಳಿಸಿಕೊಂಡಿರುವುದೇ ಅಚ್ಚರಿ. ಅದನ್ನು ನೋಡುತ್ತಿದ್ದಾಗ, ಆ ಕಾಲದವರ ಕಾರ್ಯವೈಖರಿಯನ್ನು ಹೊಗಳಲಾರದೇ ಇರಲಾರೆವು. ಏಕಶಿಲೆಯಲ್ಲಿ ಇರುವ ಈ ಅದ್ಭುತವನ್ನು ಯುನೆಸ್ಕೊ, ವರ್ಲ್ಡ್‌ ಹೆರಿಟೇಜ್ ಸ್ಥಳ ಎಂದು ಗುರುತಿಸಿದೆ.

ಕೈಲಾಸ ದೇವಾಲಯ ರಾಷ್ಟ್ರಕೂಟ ದೊರೆ ಒಂದನೇ ಕೃಷ್ಣನ ಕಾಲದಲ್ಲಿ ನಿರ್ಮಾಣವಾಗಿದೆ. ಇದನ್ನು ಶಿವನಿಗೆ ಅರ್ಪಿಸಲಾಗಿದೆ. ದೇವರು, ದೇವತೆಗಳ ಚಿತ್ರಗಳು, ಹಲವು ದಂತಕತೆಗಳು ಹಾಗೂ ರಾಮಾಯಣ ಮತ್ತು ಮಹಾಭಾರತದ ಅನೇಕ ಸನ್ನಿವೇಶಗಳ ಕೆತ್ತನೆಗಳು ದೇವಾಲಯದಲ್ಲಿವೆ. ಈ ಒಂದೇ ಗುಹೆಯಲ್ಲಿ ಹಲವು ವಿಷಯಗಳು ಲೀನವಾಗಿವೆ. ಅತಿ ಸೂಕ್ಷ್ಮ ಕೆತ್ತನೆ ಹಾಗೂ ಬೃಹತ್ ದೇವಾಲಯ ಮೈನವಿರೇಳಿಸುವಂತೆ ಮಾಡುತ್ತದೆ.

‘ಸುಮಾರು 6ನೇ ಶತಮಾನದಿಂದ 10ನೇ ಶತಮಾನದವರೆಗೆ ಈ ಗುಹೆಗಳು ನಿರ್ಮಾಣವಾಗಿವೆ’ ಎಂದು ಹೇಳಲಾಗುತ್ತದೆ. ಒಟ್ಟು 100 ಗುಹೆಗಳಿವೆ. ಆದರೆ ಜನರಿಗೆ 34 ಗುಹೆಗಳನ್ನು ನೋಡಲು ಅನುಮತಿ ನೀಡಲಾಗಿದೆ. ಇವೆಲ್ಲ ಚರಣಾಂದ್ರಿ ಬೆಟ್ಟಗಳಲ್ಲಿವೆ.

ಚರಣಾಂದ್ರಿ ಬೆಟ್ಟ ಪಶ್ಚಿಮ ಘಟ್ಟದ ಭಾಗ. ಹಿಂದೆ ಸಂಭವಿಸಿದ ಜ್ವಾಲಾಮುಖಿಯಿಂದಾಗಿ ಬಸಾಲ್ಟ್ ಬಂಡೆಗಲ್ಲುಗಳ ಸಿಡಿದು ಬಂದು ಗುಹೆಗಳು ನಿರ್ಮಾಣವಾಗಲು ಕಾರಣವಾಗಿವೆ. ಬಹಳಷ್ಟು ಗುಹೆಗಳು ರಾಷ್ಟ್ರಕೂಟರ ಆಳ್ವಿಕೆಯಲ್ಲಿ ನಿರ್ಮಾಣವಾಗಿವೆ. ಇನ್ನೂ ಕೆಲವು ಜೈನ ಧರ್ಮಕ್ಕೆ ಸಂಬಂಧಪಟ್ಟ ಗುಹೆಗಳಾಗಿದ್ದು, ಯಾದವ ರಾಜನ ಆಳ್ವಿಕೆಯಲ್ಲಿ ನಿರ್ಮಾಣವಾಗಿವೆ. ಈ ಗುಹೆಗಳು ದೇವಾಲಯಗಳಾಗಿ, ಧಾರ್ಮಿಕ ಮಠಗಳಾಗಿ, ಯಾತ್ರಿಗಳ ತಂಗುದಾಣಗಳಾಗಿ ಆಶ್ರಯ ನೀಡಿವೆ. ಬೌದ್ಧ, ಹಿಂದೂ ಮತ್ತು ಜೈನ ಧರ್ಮಕ್ಕೆ ಸಂಬಂಧಿಸಿದ ಗುಹೆಗಳಿರುವುದರಿಂದ ಅಷ್ಟು ಶತಮಾನಗಳ ಹಿಂದೆಯೇ ಧಾರ್ಮಿಕ ಸಾಮರಸ್ಯ ಇಲ್ಲಿ ನೆಲೆಸಿತ್ತು.

ಬೌದ್ಧ ಗುಹೆಗಳು

6 ಮತ್ತು 7ನೇ ಶತಮಾನದಲ್ಲಿ ಕಟ್ಟಿರುವ ಈ ಗುಹೆಗಳು, ಅತಿ ಪ್ರಾಚೀನ ಗುಹೆಗಳು ಎಂದು ಹೇಳಲಾಗುತ್ತಿದೆ. ಇವು ವಿಹಾರಗಳಾಗಿ, ಸನ್ಯಾಸಿ ಮಠಗಳಾಗಿ ಮತ್ತು ಪ್ರಾರ್ಥನಾ ಹಾಲ್‌ಗಳಾಗಿ, ವಿಶ್ರಾಂತಿ ಗೃಹಗಳಾಗಿವೆ. ಗುಹೆ ಹೊಕ್ಕಾಗ, ಅಲ್ಲಿ ಬಹುಮಹಡಿ ಕಟ್ಟಡಗಳೂ ಕಂಡವು. ಜತೆಗೆ ಲಿವಿಂಗ್ ರೂಮ್, ವಿಶ್ರಾಂತಿ ಗೃಹ, ಅಡುಗೆ ಕೋಣೆ ಹಾಗೂ ಇತರೆ ಕೋಣೆಗಳಿದ್ದವು. ಈ ಗುಹೆಗಳಲ್ಲಿ ಗೌತಮ ಬುದ್ಧನ ಮೂರ್ತಿ ಬಹಳ ಸುಂದರವಾಗಿದೆ. ನಂ. 5,10,11,12 ಗುಹೆಗಳು ಪ್ರಮುಖವಾದವು. ಗುಹೆಗಳಲ್ಲಿನ ಬುದ್ಧನ ಮೂರ್ತಿ ಸುಂದರವಾಗಿದೆ.

ಹಿಂದೂ ಗುಹೆಗಳು

ಈ ಗುಹೆಗಳು 6ನೇ ಮತ್ತು 8 ನೇ ಶತಮಾನದಲ್ಲಿ ಕಟ್ಟಲ್ಪಟ್ಟವುಗಳು. ಆಗಲೇ ಹೇಳಿದ ಹಾಗೆ ಗುಹೆ ನಂ. 16 ಕೈಲಾಸ ದೇವಾಲಯ ಬಹಳ ಮುಖ್ಯ ಗುಹೆ. ನಂ 29 ಗುಹೆಯಿಂದ ಜಲಪಾತವನ್ನು ಕಾಣಬಹುದು. ಇದು ಕೇವಲ ಮಳೆಗಾಲದಲ್ಲಿ ಕಾಣುತ್ತದೆ. ಗುಹೆಗಳಲ್ಲಿ ಶಿವ ಪಾರ್ವತಿಗೆ ಸಂಬಂಧಪಟ್ಟ ಕೆತ್ತನೆಗಳಿವೆ. ಪಾರ್ವತಿ ಶಿವನನ್ನು ಪಡೆದ ಚಿತ್ರಗಳು ಹಾಗೂ ಮದುವೆಯ ಚಿತ್ರಗಳಿವೆ. ಮಾತೆ ದುರ್ಗೆ ಹಾಗೂ ಗಂಗಾ ಮತ್ತು ಯಮುನಾ ನದಿಯ ಚಿತ್ರಗಳೂ ಇವೆ. 

ಜೈನ ಗುಹೆಗಳು

ದಿಗಂಬರ ಪಂಗಡಕ್ಕೆ ಸೇರಿದ ಇವು ಸುಮಾರು 9 ನೇ ಮತ್ತು 10ನೇ ಶತಮಾನಕ್ಕೆ ಸಂಬಂಧಿಸಿವೆ. ಬೌದ್ಧ ಮತ್ತು ಹಿಂದೂ ಗುಹೆಗಳಿಗೆ ಹೋಲಿಸಿದರೆ ಇವು ಸ್ವಲ್ಪ ಚಿಕ್ಕ ಗುಹೆಗಳಾಗಿವೆ. ವರಾಂಡ, ಮಂಟಪ ಪೂಜಾ ಗೃಹಗಳಿವೆ. ಇಲ್ಲಿ 24 ತೀರ್ಥಂಕರರ ಅಥವಾ ಜಿನರ ಮೂರ್ತಿಗಳ ಕೆತ್ತನೆ ಇದೆ.

ಈ ಗುಹೆಗಳನ್ನು ಸಂಪೂರ್ಣವಾಗಿ ನೋಡಿ ಅರಗಿಸಿಕೊಳ್ಳುವುದು ಅಷ್ಟೇ ಸವಾಲಿನ ಟಾಸ್ಕ್. ಗುಹೆಗಳ ನೋಡುವವರಿಗೆ ದೇಹದಲ್ಲಿ ಶಕ್ತಿ ಇರಬೇಕು. ಆರೋಗ್ಯವಂತರಾಗೂ ಇರಬೇಕು. ಹೀಗಾಗಿ ಎಲ್ಲವನ್ನು ನೋಡಲಿಚ್ಛಿಸುವವರು, ಅಡ್ಡಾಡಲಿಕ್ಕೆ ಬೇಸರಿಸದವರಿರಬೇಕು‌.

ಎಷ್ಟೋ ಜನ ಬರೀ ಗುಹೆ ನಂ. 16 ಅಂದರೆ ಕೈಲಾಸ ದೇವಾಲಯ ನೋಡಿದಾಕ್ಷಣ ಸುಸ್ತು ಎನ್ನುವವರಿದ್ದಾರೆ. ಹೌದು ಅದು ಅಷ್ಟೊಂದು ಬೃಹತ್ತಾಗಿದೆ. ಇದರಂತೆ ಇತರ ಗುಹೆಗಳು ಇವೆ. ನಂ. 16ರ ಎಡಕ್ಕೆ ಅದ್ಭುತವಾದ ಬೌದ್ಧ ಧರ್ಮದ ಗುಹೆಗಳಿವೆ.

ಕೈಲಾಸ ದೇವಾಲಯ ಹಾಗೂ ಇನ್ನೆರಡು ಗುಹೆಗಳನ್ನು ನೋಡಿ ಸುಸ್ತಾದ ವಯಸ್ಸಾದವರು, ನಡೆಯಲು ಬೇಸರಿಸುವರು ಎಲ್ಲ ಗುಹೆಗಳನ್ನು ನೋಡಿದವರಿಗೆ ಆ ಗುಹೆ ಹೇಗಿದೆ? ಇದು ಇದರಂತೆಯೇ ಇದೆಯಾ? ಯಾವ ಮೂರ್ತಿ ಇದೆ? ಎಂಬ ಪ್ರಶ್ನೆಗಳನ್ನು ಕೇಳುವುದು ಸಾಮಾನ್ಯ. ಆದರೆ ಅಡ್ಡಾಡಲು ಬೇಸರಿಸದೇ ನೋಡುವುದು ಮುಖ್ಯ.

ಹೋಗಿ ಒಮ್ಮೆ ನೋಡಿ ಬನ್ನಿ.

ತಲುಪುವುದು

ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಿಂದ ಔರಂಗಾಬಾದ್‌ಗೆ ರೈಲು, ವಿಮಾನ ಸಂಪರ್ಕವಿದೆ. ಎಲ್ಲೋರಾ ಔರಂಗಾಬಾದ್ನಿಂದ ಕೇವಲ 29 ಕಿ.ಮೀ ಇದೆ.ಔರಂಗಾಬಾದ್ ಗೆ ಬಸ್, ಟ್ರೇನ್ ಹಾಗೂ ವಾಯುಯಾನದ ಸೌಲಭ್ಯವಿದೆ. ಉತ್ತಮ ಹೋಟೆಲ್‌ಗಳು ಔರಂಗಾಬಾದ್‌ನಲ್ಲಿವೆ. ಇಲ್ಲಿ ಅನೇಕ ಐತಿಹಾಸಿಕ ಕಟ್ಟಡಗಳನ್ನು ನಾವು ನೋಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !