ಮಂಗಳವಾರ, ಆಗಸ್ಟ್ 16, 2022
29 °C

ಸತ್ಯದ ಸುತ್ತ... ಗಾಂಧಿ ಚಿಂತನೆ

ಜಿ.ಎನ್‌. ದೇವಿ Updated:

ಅಕ್ಷರ ಗಾತ್ರ : | |

ಚಾರಿತ್ರಿಕ ಸಂಕಥನಗಳು ಪದಗಳಷ್ಟೇ ಆಗಿ ಹುದುಗಿಹೋದಾಗ, ಸಮಷ್ಟಿ ನೆನಪಿಗೆ ಬೆಳಕು ಚೆಲ್ಲಲು ಐತಿಹ್ಯಗಳು ನೆರವಾಗುತ್ತವೆ. ಕೆಲ ವರ್ಷಗಳ ಹಿಂದೆ ನಾನು ಬರ್ಲಿನ್‌ನಲ್ಲಿ ಇದ್ದೆ. ಅದು ಪೆರಸ್ಟ್ರೋಯಿಕಾ ನಂತರದ ಮತ್ತು ಏಕೀಕೃತ ಬರ್ಲಿನ್‌ನ ದಿನ. ಒಂದೂವರೆ ಶತಮಾನದ ಹಿಂದೆ ಕಾರ್ಲ್‌ ಮಾರ್ಕ್ಸ್‌ ವಿದ್ಯಾರ್ಥಿಯಾಗಿದ್ದ ಬರ್ಲಿನ್‌ ವಿಶ್ವವಿದ್ಯಾಲಯದ ಭವ್ಯ ಕಟ್ಟಡಗಳ ಸಮೀಪದಲ್ಲಿ ನಡೆದು ಹೋಗುತ್ತಿದ್ದಾಗ ಕುತೂಹಲ ಹುಟ್ಟಿಸುವ ಆ ರಚನೆ ಕಣ್ಣಿಗೆ ಬಿತ್ತು.

ವಿಶ್ವವಿದ್ಯಾಲಯ ಗ್ರಂಥಾಲಯದ ಹೊರ ಭಾಗದಲ್ಲಿಯೇ ಇದ್ದ ಆ ವಿನ್ಯಾಸವು ನನ್ನಲ್ಲಿ ಅಚ್ಚರಿ ಮತ್ತು ಆಘಾತಗಳೆರಡನ್ನೂ ಹುಟ್ಟಿಸುವಂತೆ ಇತ್ತು. ರಸ್ತೆ ಪ‍ಕ್ಕದಲ್ಲಿ ಸಾಗುವಾಗ ಗಾಜಿನಿಂದ ಆವೃತವಾದ ಆ ಬಿಲದಂತಹ ರಚನೆ ಧುತ್ತನೆ ಎದುರಾಗುತ್ತದೆ. ಯುದ್ಧರಂಗದ ಬಂಕರ್‌ ಎಂಬಂತೆ ಅದು ಕಾಣಿಸುತ್ತದೆ. ಒಳಗಡೆ ಮಂದ ಬೆಳಕು ಇದೆಯಾದರೂ ಒಳಗೆ ಬೇರೆ ಏನೇನಿದೆ ಎಂಬುದನ್ನು ತೋರಿಸುವಷ್ಟು ಪ್ರಖರವಾಗಿಲ್ಲ. ಗಾಜಿನ ಚಾವಣಿಯಿಂದ ಒಳಗೆ ಇಣುಕಿ, ಅಲ್ಲಿನ ಮಂದ ಬೆಳಕಿಗೆ ಕಣ್ಣು ಹೊಂದಿಕೊಂಡರೆ ಪುಸ್ತಕದ ಕಪಾಟೊಂದು ಕಾಣಿಸುತ್ತದೆ. ಆದರೆ, ಅದರಲ್ಲಿ ಪುಸ್ತಕಗಳಿಲ್ಲ. ಬಹುಶಃ ಒಂದೋ, ಎರಡೋ ಪುಸ್ತಕ ಅದರಲ್ಲಿ ನಿರ್ಜೀವವಾಗಿ ಬಿದ್ದುಕೊಂಡಿತ್ತೋ ಏನೋ. ಗಾಜಿನ ಮೇಲಿನ ಬರಹ ಹೀಗಿತ್ತು: ‘ಹಲವು ಚಿಂತಕರ ಪುಸ್ತಕಗಳನ್ನು ಗ್ರಂಥಾಲಯದಿಂದ ಹೊರಗೆಳೆದು ಹಾಕಿ 1932ರ ಮೇಯಲ್ಲಿ ಸುಟ್ಟು ಹಾಕಿದ ಸ್ಥಳವಿದು’. ಮುಕ್ತ ಚಿಂತನೆಯ ಮೇಲಿನ ದಾಳಿಯೇ ಹೆಮ್ಮೆಯ ವಿಚಾರ ಎಂದು ಭಾವಿಸಿದ್ದ ಆಡಳಿತದ ಕ್ರೌರ್ಯವನ್ನು ಈ ಬರಹ ತೋರಿಸುತ್ತದೆ. ಹಿಟ್ಲರ್‌ ದಮನಿಸಿದ ಮಾರ್ಕ್ಸ್‌ನ ಪರಂಪರೆಯನ್ನು ಈ ರಚನೆಯು ಸಮಪರ್ಕವಾಗಿಯೇ ಬಿಂಬಿಸುತ್ತದೆ. 

ಅತ್ಯಂತ ಯುಕ್ತವಾದ ಈ ರಚನೆಯು ಮರೆಯಲಾಗದ ಅನುಭವವಾಗಿ ನನ್ನ ನೆನಪಿನಲ್ಲಿ ಉಳಿಯಿತು. ಇದೇ ರೀತಿಯ ರಚನೆಯೊಂದನ್ನು ಹಾದುಹೋಗುವಾಗ ಈ ನೆನಪು ನನ್ನ ಸ್ಮೃತಿಪಟದಲ್ಲಿ ಮತ್ತೆ ಮೂಡಿತು. ಈ ಬಾರಿ ಇದು ಮಿಷಿಗನ್‌. ಮುಕ್ತ ಚಿಂತನೆಯ ಕೇಂದ್ರವಾದ ಈ ನಗರವು ಅಮೆರಿಕದ ಈಗಿನ ಆಳ್ವಿಕೆಯ ಅಡಿಯಲ್ಲಿ ತನ್ನ ಅಸ್ಮಿತೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿದೆ. ಸ್ಪೇನ್‌ನ ಹೆಚ್ಚು ಪ್ರಸಿದ್ಧವಲ್ಲದ ಕಲಾವಿದರ ಸಮೂಹವು ಇಲ್ಲಿ ಒಂದು ಇನ್‌ಸ್ಟಾಲೇಷನ್‌ (ಕಲಾ ರಚನೆ) ಮಾಡಿದೆ. ಲಿಬರ್ಟಿ ಸ್ಟ್ರೀಟ್‌ನಲ್ಲಿ ಸಾವಿರಾರು ಪುಸ್ತಕಗಳನ್ನು ಬಳಸಿ ಈ ರಚನೆ ಮಾಡಲಾಗಿದೆ.

ಯಾರೋ ಓದುತ್ತಿದ್ದಾರೆ ಎಂಬಂತೆ ಮತ್ತು ಅರ್ಧ ಓದಿ ಇರಿಸಿದ ರೀತಿಯಲ್ಲಿ ಈ ಪುಸ್ತಕಗಳನ್ನು ತೆರೆದು ಇರಿಸಲಾಗಿದೆ. ಇವುಗಳಲ್ಲಿ ಮಕ್ಕಳ ಕತೆಗಳು, ಪಠ್ಯ ಮತ್ತು ವಿನ್ಯಾಸದ ಬಗೆಗಿನ ಪುಸ್ತಕಗಳು, ಪ್ರವಾಸ ಕಥನಗಳು ಇವೆ. ಆದರೆ, ಹೆಚ್ಚಿನ ಪುಸ್ತಕಗಳು ತತ್ವಶಾಸ್ತ್ರದ್ದಾಗಿವೆ. ಒಂದು ಕಡೆ ಒಂದು ಸಂಕೋಚದ ಬರಹವೂ ಇದೆ, ಅದು ಹೀಗೆನ್ನುತ್ತದೆ: ‘ಈ ಪುಸ್ತಕಗಳ ಮೇಲೆ ನಡೆದಾಡಲು ನಿಮಗೆ ಸ್ವಾಗತ, ಇವುಗಳನ್ನು ತೆಗೆದುಕೊಳ್ಳಿ ಮತ್ತು ಇವುಗಳನ್ನು ಬಳಸಿಕೊಂಡು ನಿಮಗೆ ಇಷ್ಟ ಬಂದದ್ದನ್ನು ನೀವು ಮಾಡಬಹುದು’. ‍ಪುಸ್ತಕಪ್ರೇಮಿಯಾದ ಯಾವುದೇ ವ್ಯಕ್ತಿಗೆ ಇದು ವೇದನೆ ಉಂಟು ಮಾಡುತ್ತದೆ. ಆದರೆ, ‘ಸತ್ಯೋತ್ತರ’ ಎಂಬ ನುಡಿಯ ಅರ್ಥ, ಚಿಂತನೆಗಳ ಬಗ್ಗೆ ಸಂಪೂರ್ಣ ಅಸಡ್ಡೆ ಎಂಬುದನ್ನು ಪರಮ ಸ್ಪಷ್ಟವಾಗಿ ನಿಮಗೆ ತಿಳಿಸುತ್ತದೆ. 

ಮಿಷಿಗನ್‌ ಇನ್‌ಸ್ಟಾಲೇಷನ್‌ನ ಪಕ್ಕದಲ್ಲಿ ನಾನು ಸಾಗಿದ ಮರುದಿನ, ಸಿಎನ್‌ಎನ್‌ ಕಚೇರಿ ಮತ್ತು ಬರಾಕ್‌ ಒಬಾಮ ಹಾಗೂ ಹಿಲರಿ ಕ್ಲಿಂಟನ್‌ ಅವರ ಮನೆಗಳಿಗೆ ಹೇಗೆ ಪೈಪ್‌ ಬಾಂಬ್‌ಗಳನ್ನು ಕಳುಹಿಸಲಾಗಿತ್ತು ಎಂಬ ಬಗ್ಗೆ ಅಮೆರಿಕದ ಸುದ್ದಿವಾಹಿನಿಗಳು ವರದಿ ಮಾಡುತ್ತಿದ್ದವು. ಇಡೀ ದೇಶವು ಒಂದೇ ಧ್ವನಿಯಲ್ಲಿ ಈ ಕೃತ್ಯವನ್ನು ಖಂಡಿಸಬೇಕಾದ ಸಮಯ ಇದು; ಈ ಅಪಾಯಕಾರಿ ವಸ್ತುವನ್ನು ಕಳುಹಿಸಿದವರಿಗೆ ಎಚ್ಚರಿಕೆ ಕೊಡುವ ಜಂಟಿ ಹೇಳಿಕೆ ನೀಡಬೇಕು ಎಂದು ವಿಶ್ಲೇಷಕರು ಒಮ್ಮತದಿಂದ ಹೇಳುತ್ತಿದ್ದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಡೆಮಾಕ್ರಟರನ್ನು ನಿಂದಿಸಿದ್ದೇ ಇಂತಹ ಹಿಂಸಾತ್ಮಕ ಸಾಧನವನ್ನು ಅವರಿಗೆ ಕಳುಹಿಸಲು ಈ ಕೃತ್ಯ ಎಸಗಿದವರಿಗೆ ಧೈರ್ಯ ಕೊಟ್ಟಿರಬಹುದು ಎಂಬುದರತ್ತಲೂ ಅವರು ಬೆರಳು ತೋರಿದ್ದರು. ಈ ಘಟನೆ ಬಗ್ಗೆ ಟ್ರಂಪ್ ನೀಡಿದ ಹೇಳಿಕೆಯಲ್ಲಿ ಪಶ್ಚಾತ್ತಾಪದ ಛಾಯೆ ಇರಬಹುದು ಎಂಬ ನಿರೀಕ್ಷೆಯೂ ಇತ್ತು. ಆದರೆ, ಅವರು ಮಾತನಾಡಿದಾಗ ಅಂತಹುದೇನೂ ಇರಲಿಲ್ಲ. ಶಾಲಾ ಶಿಕ್ಷಕರು ಮಕ್ಕಳನ್ನು ಗದರಿಸುವ ಧಾಟಿಯೇ ಅವರ ಮಾತಿನಲ್ಲಿ ಇತ್ತು. ಒಬಾಮ ಮತ್ತು ಹಿಲರಿಗೆ ಅವರು ಛೀಮಾರಿ ಹಾಕಿದರು– ‘ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳನ್ನು ಖಳ ಎಂದು ಯಾರೂ ಬಣ್ಣಿಸಬಾರದು, ಇತಿಹಾಸದ ಕೆಟ್ಟ ವ್ಯಕ್ತಿಗಳ ಹೆಸರು ಹಿಡಿದು ನಿಂದಿಸಬಾರದು’ ಎಂದರು. ಗುಂಪು ಹಲ್ಲೆ ಅಥವಾ ದನದ ಮಾಂಸ ತಿಂದಿದ್ದಾರೆ ಎಂಬ ಶಂಕಿತರ ಮೇಲೆ ನಡೆದ ಹಿಂಸೆಗೆ ಕೊಟ್ಟ ಸ್ವರೂಪದ್ದೇ ಪ್ರತಿಕ್ರಿಯೆ ಇದು.  

ಬಂಡವಾಳವಾದದಲ್ಲಿ ಹಲವು ಹುಳುಕುಗಳಿದ್ದವು, ಆದರೆ ಅದಕ್ಕೆ ನೈತಿಕ ಘನತೆಯೂ ಇತ್ತು. ಬಂಡವಾಳಶಾಹಿ ಪ್ರಜಾಪ್ರಭುತ್ವವು ಒಮ್ಮತ ಮತ್ತು ಸಂವಾದ ಆಧರಿತ ಎಂಬ ಸೋಗನ್ನು ಕೂಡ ದೂರಕ್ಕೆಸೆದು, ಸತ್ಯೋತ್ತರ ಕಾಲದ ಪ್ರಭುತ್ವಗಳು ಬಂಡವಾಳವಾದವನ್ನು ಇನ್ನಷ್ಟು ಬೆತ್ತಲಾಗಿಸಿವೆ. ಜಗತ್ತಿನ ಹಲವು ಭಾಗಗಳಲ್ಲಿರುವ ಸತ್ಯೋತ್ತರ ಕಾಲದ ಸ್ವಜನಪಕ್ಷಪಾತಿ ಬಂಡವಾಳವಾದದ ಪ್ರಭುತ್ವಗಳಿಗೆ ಟೀಕೆ ಮತ್ತು ಪ್ರಶ್ನೆ ಎಂಬುದೇ ಕೆಟ್ಟ ಪದಗಳಾಗಿವೆ. ಹಾಗಾಗಿ, ನಡೆದಾಡಲೆಂದೇ ಇಲ್ಲಿ ಪುಸ್ತಕಗಳಿವೆ ಎಂಬುದು ಅಂತಹ ಆಶ್ಚರ್ಯವೇನೂ ಅಲ್ಲ.  

ಪುಣೆಯ ಅಘಾಖಾನ್‌ ಅರಮನೆಯಲ್ಲಿನ ಕಸ್ತೂರಬಾ ಸ್ಮಾರಕವೊಂದು ಇದಕ್ಕೆ ಸಂಬಂಧಿಸಿದಂತೆ ನನ್ನ ನೆನಪಿಗೆ ಬರುತ್ತದೆ. ಎರಡನೇ ಜಾಗತಿಕ ಯುದ್ಧ ಮತ್ತು ಭಾರತ ಬಿಟ್ಟು ತೊಲಗಿ ಚಳವಳಿಯ ಉತ್ತುಂಗದ ಸಂದರ್ಭದಲ್ಲಿ ಕಸ್ತೂರಬಾ, ಗಾಂಧೀಜಿ ಮತ್ತು ಮಹಾದೇವ ದೇಸಾಯಿ ಅವರನ್ನು ಇಲ್ಲಿ ಸೆರೆಯಲ್ಲಿ ಇರಿಸಲಾಗಿತ್ತು. ಕಳೆದ ವರ್ಷ, ಪೆನ್‌ ದಕ್ಷಿಣ ಭಾರತ ಘಟಕವು ಇಲ್ಲಿ ದೊಡ್ಡ ವಿಚಾರಸಂಕಿರಣವನ್ನು ಆಯೋಜಿಸಿತ್ತು. ಅದರಲ್ಲಿ 87 ದೇಶಗಳ ಬರಹಗಾರರು ಭಾಗವಹಿಸಿದ್ದರು. ವಿಚಾರ ಸಂಕಿರಣದ ನಿರ್ದೇಶಕನಾಗಿದ್ದ ನನಗೆ, ಈ ಬರಹಗಾರರನ್ನು ಕಸ್ತೂರಬಾ ಸ್ಮಾರಕಕ್ಕೆ ಕರೆದೊಯ್ಯುವುದು ಒಳ್ಳೆಯದು ಅನ್ನಿಸಿತು. ನಾನು ಹಾಗೇ ಮಾಡಿದೆ. ದೂರದ ದೇಶಗಳ ಸಾಹಿತಿಗಳು ಈ ಸ್ಥಳವನ್ನು ನೋಡಿ, ಕೆಲವು ಫೋಟೊಗಳನ್ನು ತೆಗೆದು ನಂತರ ಅಲ್ಲಿಂದ ಹೊರಡಬಹುದು ಎಂದು ನಾನು ಅಂದಾಜಿಸಿದ್ದೆ. ಆದರೆ, ನನಗೆ ಅಚ್ಚರಿಯಾಯಿತು– ಈ ಬರಹಗಾರರು ಅಲ್ಲಿನ ನೆಲದಲ್ಲಿ ಕೆಲ ಹೊತ್ತು ಕುಳಿತು, ಮೌನ ಆಚರಿಸಿ, ಗಾಂಧೀಜಿ ಮತ್ತು ಕಸ್ತೂರಬಾಗೆ ನಮನ ಸಲ್ಲಿಸಲು ಬಯಸಿದ್ದರು. ತಮಗೆ ಸಂಪೂರ್ಣವಾಗಿ ಅಪರಿಚಿತರಲ್ಲಿ ಕೂಡ ನೈಜ ಗೌರವ ಹಾಗೂ ಪ್ರೀತಿಯ ಸ್ಫೂರ್ತಿ ಉಕ್ಕಿಸುವ ಅವರ ಕೆಲಸ ಮತ್ತು ಚಿಂತನೆಗಳು ಅಪೂರ್ವವೇ ಸರಿ. 

ಗಾಂಧೀಜಿಗಿಂತ ಹಿಟ್ಲರ್‌ ಸುಮಾರು ಇಪ್ಪತ್ತು ವರ್ಷ ಸಣ್ಣವನು. ಹಾಗಿದ್ದರೂ ಒಂದು ಕಾಲದಲ್ಲಿ ಜಾಗತಿಕವಾಗಿ ವ್ಯಾಪಿಸಿಕೊಂಡಿದ್ದ ಈ ಇಬ್ಬರನ್ನು ಸಮಕಾಲೀನರು ಎನ್ನಬಹುದು. ಹಿಟ್ಲರ್‌ ಪುಸ್ತಕ ಸುಟ್ಟದ್ದು ಮತ್ತು ಗಾಂಧೀಜಿಯವರು ವಸಾಹತುಶಾಹಿ ಉಪ್ಪಿನ ಕಾನೂನನ್ನು ತಿರಸ್ಕರಿಸಿ ಜೈಲಿಗೆ ಹೋಗುವುದನ್ನು ಆಯ್ಕೆ ಮಾಡಿಕೊಂಡಿದ್ದು ಸರಿ ಸುಮಾರು ಒಂದೇ ಕಾಲದಲ್ಲಿ. ಅನ್ಯಾಯದ ವಿರುದ್ಧ ನೈತಿಕ ಸ್ಥೈರ್ಯದ ಪ್ರತೀಕವಾಗಿ ಕಾನೂನುಭಂಗ ಚಳವಳಿ ಆರಂಭಿಸುವ ಚಿಂತನೆ ಮಾಡಿದ್ದು ಮತ್ತು ಸರ್ವೋಚ್ಚ ನಾಯಕನ ಮುಂದೆ ಎಲ್ಲರೂ ಸಂಪೂರ್ಣ ಶರಣಾಗತಿ ತೋರಬೇಕು ಎಂದು ಹಿಟ್ಲರ್‌ ಆಗ್ರಹಿಸಲು ಆರಂಭಿಸಿದ್ದು ಕೂಡ ಸರಿಸುಮಾರು ಒಂದೇ ಕಾಲದಲ್ಲಿ. ಹಿಂಸೆಯನ್ನು ಎಲ್ಲ ರೂಪದಲ್ಲಿ ಸಮರ್ಥಿಸಿ, ಉತ್ತೇಜಿಸಿದವನು ಹಿಟ್ಲರ್‌; ಅಹಿಂಸೆಯ ಪ್ರತಿಪಾದನೆಗೆ ಗಾಂಧೀಜಿ ತಮ್ಮನ್ನು ಮುಡಿಪಾಗಿಟ್ಟರು. ಪ್ರಾಬಲ್ಯದ ಹಕ್ಕಿಗಾಗಿ ಅಪಪ್ರಚಾರವನ್ನೇ ಹಿಟ್ಲರ್‌ ನೆಲೆಗಟ್ಟಾಗಿ ಇರಿಸಿಕೊಂಡಿದ್ದರೆ, ಸ್ವಾತಂತ್ರ್ಯದ ಮಾರ್ಗವಾಗಿ ಗಾಂಧೀಜಿ ಸತ್ಯವನ್ನೇ ಮಾತನಾಡಿದರು.

ಗಾಂಧೀಜಿ ಹುಟ್ಟಿದ ದಿನದ 150ನೇ ವರ್ಷವನ್ನು (2018–19) ಆಚರಿಸುವ ಈ ಹೊತ್ತಿನಲ್ಲಿ ಹಲವು ದೇಶಗಳ ಆಡಳಿತಗಾರರು ಹಿಟ್ಲರ್‌ ಪ್ರತಿಪಾದಿಸಿದ್ದ ಪ್ರವೃತ್ತಿಗಳನ್ನೇ ರೂಢಿಸಿಕೊಳ್ಳಲು ಆರಂಭಿಸಿದ್ದಾರೆ ಎಂಬುದು ಇತಿಹಾಸದ ವ್ಯಂಗ್ಯ. ಅವರು ಮೃತರಾಗಿ ಬಹಳ ಕಾಲವಾಗುವ ಮೊದಲೇ ಅವರ ಚಿಂತನೆಗಳನ್ನು ಜಗತ್ತು ತೊರೆಯುವಷ್ಟು ಗಾಂಧೀಜಿಯ ಸತ್ಯದ ಚಿಂತನೆಯು ದುರ್ಬಲವೇ? ರಾಷ್ಟ್ರ, ಧರ್ಮ, ಭಾಷೆ ಮತ್ತು ಜನಾಂಗಗಳನ್ನೆಲ್ಲ ಮೀರಿ ಮಾನವ ಕುಲವು ಗಾಂಧೀಜಿಯನ್ನು ಸ್ವಾತಂತ್ರ್ಯದ ಪ್ರವಾದಿ ಎಂದೇ ಪರಿಗಣಿಸುತ್ತಿದೆ ಎಂಬುದನ್ನು ಪುಣೆಯಲ್ಲಿ ಸೇರಿದ್ದ ಬರಹಗಾರರು ನನ್ನ ಗಮನಕ್ಕೆ ತಂದದ್ದು ಹೃದಯಸ್ಪರ್ಶಿ. ಪ್ರೀತಿ, ಸ್ವಾತಂತ್ರ್ಯ ಮತ್ತು ಸತ್ಯ ಎಲ್ಲೆಲ್ಲ ದಮನವಾಗುತ್ತಿದೆಯೋ ಅಲ್ಲೆಲ್ಲ ಅವರು ಜನರ ಮನಸ್ಸಿಗೆ ಮರಳುತ್ತಾರೆ. ವಸಾಹತುಶಾಹಿ ಮತ್ತು ಹಿಟ್ಲರ್‌ನ ಹಿಂಸೆಯ ಜಾತ್ರೆಯ ಅವಧಿಯಲ್ಲಿ ಅವರು ಎಷ್ಟು ಪ್ರಸ್ತುತವಾಗಿದ್ದರೋ ಇತಿಹಾಸದ ಸತ್ಯೋತ್ತರ ಯುಗದಲ್ಲಿಯೂ ಅವರು ಅಷ್ಟೇ ಪ್ರಸ್ತುತ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಯಾವುದೇ ಇನ್‌ಸ್ಟಾಲೇಷನ್‌ ಅವರನ್ನು ಹಳಬ ಎಂದು ಕಾಣಿಸುವಂತೆ, ಮುಜುಗರಗೊಳ್ಳುವಂತೆ ಮಾಡಲಾಗದು. ಗಾಂಧೀಜಿಯನ್ನು ತಿರಸ್ಕಾರದಿಂದ ಕಾಣುವವರ ನೆಚ್ಚಿನ ಯೋಜನೆಯ ‍ಪ್ರಚಾರಕ್ಕಾಗಿ ಗಾಂಧೀಜಿಯನ್ನು ಕನ್ನಡಕವಷ್ಟೇ ಆಗಿಸಿದ ಸರ್ಕಾರಿ ರೇಖಾಚಿತ್ರಕ್ಕೂ ಅದು ಸಾಧ್ಯವಾಗದು. 

ಇದನ್ನೂ ಓದಿ: ಮಹಾತ್ಮ ಗಾಂಧೀಜಿ ಬದುಕಿನ ಅಪರೂಪದ 30 ಫಿಲ್ಮ್‌ ರೀಲ್‌ ಪತ್ತೆ

ಯಾವ ಅಂಕುಶವೂ ಇಲ್ಲದ ಲೋಭವು ಅಮಿತ ಹಿಂಸೆಗೆ ಕಾರಣವಾಗಿದೆ. ನಮ್ಮಲ್ಲಿರುವ ಜಾತಿ ದ್ವೇಷ, ವರ್ಗ ಸಂಘರ್ಷಗಳು, ಲಿಂಗ ತಾರತಮ್ಯ, ಜನಾಂಗೀಯ ಅಸಮಾನತೆ, ಧಾರ್ಮಿಕ ಮೂಲಭೂತವಾದ, ಮೌಲ್ಯ ಕಳೆದುಕೊಂಡ ಮಾಧ್ಯಮ ಮತ್ತು ಸ್ವಯಂ ವೈಭವೀಕರಣದ ಗೀಳುಗೆಲ್ಲವೂ ನಮ್ಮ ಚಿಂತನೆ, ಮಾತು ಮತ್ತು ಅಸ್ತಿತ್ವದಲ್ಲಿ ಎಷ್ಟೊಂದು ಹಿಂಸೆಯನ್ನು ನಾವು ಅಂತರಂಗೀಕರಿಸಿಕೊಂಡಿದ್ದೇವೆ ಎಂಬುದನ್ನು ತೋರಿಸುತ್ತದೆ. ಆಗಾಗ ಉಂಟಾಗುವ ಹಿಂಸಾಚಾರವು ಅಹಿಂಸೆಯ ವಿಚಾರದಲ್ಲಿ ಆಧುನಿಕ ಕಾಲದ ಅತಿಶ್ರೇಷ್ಠ ಪ್ರವಾದಿಯನ್ನೇ ಗುರಿಯಾಗಿಸುತ್ತದೆ. ಗಾಂಧೀಜಿಯ ಹತ್ಯೆಯಾದ ಏಳು ದಶಕಗಳಲ್ಲಿ, ಪಶ್ಚಾತ್ತಾಪದ ಸುಳಿವೂ ಇಲ್ಲದ ಹಂತಕನ ಆರಾಧಕರು ಆತನನ್ನು ‘ಸಂಭ್ರಮಿಸಿದ್ದಾರೆ’. ಹತ್ಯೆಯಂತಹ ಘೋರ ಪಾಪವನ್ನು ದೇಶಭಕ್ತಿಯ ಕೃತ್ಯ ಎಂದು ಕೊಂಡಾಡಿದ್ದಾರೆ. ಇದು ಮಾನವ ಕುಲವನ್ನು ಆಘಾತಕ್ಕೆ ಒಳಪಡಿಸುತ್ತದೆ ಮತ್ತು ಸತ್ಯದ ಬಗ್ಗೆ ಕಾಳಜಿ ಇರುವವರೆಲ್ಲರನ್ನೂ ಆಘಾತಕ್ಕೆ ಒಳಪಡಿಸಲೇಬೇಕು.

ಇದನ್ನೂ ಓದಿ: ಮಹಾತ್ಮ ಗಾಂಧಿ ಸ್ಮಾರಕ: ಭಾರತ ನಂತರ ಅಮೆರಿಕದಲ್ಲಿ ಅತಿ ಹೆಚ್ಚು

ಹತ್ಯೆಯಾಗುವುದಕ್ಕೆ ಒಂದು ವಾರದ ಮೊದಲು ಗಾಂಧೀಜಿ ತಮ್ಮ ಯುವ ಸಹವರ್ತಿ ಮನುವಿಗೆ ಹೇಳಿದ್ದನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. ‘ನನ್ನದು ಸಾಮಾನ್ಯ ಸಾವಾದರೆ ನಾನೊಬ್ಬ ವಂಚಕ ಎಂದೇ ಭಾವಿಸು; ನಾನು ಹುತಾತ್ಮನಾದರೆ, ಸಾಯುವ ಹೊತ್ತಿಗೆ ನನ್ನ ತುಟಿಗಳಲ್ಲಿ ರಾಮನ ಹೆಸರಿದ್ದರೆ ಸತ್ಯದ ಜೊತೆಗಿನ ನನ್ನ ಶೋಧ ಫಲ ನೀಡಿದೆ ಎಂದೇ ತಿಳಿ’ ಎಂದಿದ್ದರು. ಕಕ್ಕುಲತೆ ಮತ್ತು ಕ್ಷಮೆಯ ‘ಹೇ ರಾಮ್‌’ ಎನ್ನುತ್ತಾ ಅವರು ಬಿದ್ದದ್ದೇ ಅಹಿಂಸೆಯಿಂದ ಸತ್ಯ ಹುಟ್ಟುತ್ತದೆ ಎಂಬುದಕ್ಕೆ ಅತಿ ದೊಡ್ಡ ಪ್ರಮಾಣೀಕರಣ. ನಮ್ಮ ಕಾಲದ ವೈರಲ್‌ ಸುಳ್ಳು ಸುದ್ದಿಗಳು ಮತ್ತು ಸತ್ಯೋತ್ತರದ ಸುನಾಮಿಯಲ್ಲಿ ಗಾಂಧೀಜಿಯ ನಿರ್ಭೀತವಾದ ಸತ್ಯದ ಅನ್ವೇಷಣೆಯ ಸಾಂತ್ವನ ನಮಗೆ ಬೇಕಿದೆ– ಗಾಂಧೀಜಿಗೆ ಅವರ ಕಾಲದಲ್ಲಿ ಬೇಕಿದ್ದುದಕ್ಕಿಂತ ಇಂದು ಇದರ ಅಗತ್ಯ ನಮಗೆ ಇನ್ನೂ ಹೆಚ್ಚಾಗಿದೆ.

ಲೇಖಕ: ಸಾಹಿತಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತ. ಕನ್ನಡ ಅನುವಾದ: ಹಮೀದ್‌ ಕೆ.

(ಲೇಖಕರ ಇತ್ತೀಚಿನ ಪುಸ್ತಕ ‘ಕೌಂಟರಿಂಗ್‌ ವಯಲೆನ್ಸ್‌’ನ ಕೆಲವು ಭಾಗಗಳನ್ನು ಇಲ್ಲಿ ಬಳಸಿಕೊಳ್ಳಲಾಗಿದೆ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು