ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗದ ಮೇಲೆ ‘ಸೋಲಿಗರ ಬಾಲೆ’

ಮಹಾಜನ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರದರ್ಶನ
Last Updated 17 ಜುಲೈ 2022, 3:28 IST
ಅಕ್ಷರ ಗಾತ್ರ

ಮೈಸೂರು: ನಾಟಕ ಕಲೆಯ ಚಟುವಟಿಕೆಗಳ ಸೊಲ್ಲೇ ಇಲ್ಲದ ಸರ್ಕಾರಿ ಬಾಲಮಂದಿರಗಳು, ನಾಗರಹೊಳೆ, ಬಂಡೀಪುರ, ಬಿಳಿಗಿರಿ ಅರಣ್ಯ ವಲಯದ ಗಿರಿಜನ ಹಾಡಿಗಳಲ್ಲಿ ರಂಗ ಶಿಬಿರಗಳನ್ನು ಆಯೋಜಿಸಿ ಗಮನಸೆಳೆದಿದ್ದ ರಂಗಯಾನ ಟ್ರಸ್ಟ್ ಇದೀಗ, ನಗರದ ಯುವಕ–ಯುವತಿಯರಿಂದ ‘ಸೋಲಿಗರ ಬಾಲೆ’ಯನ್ನು ರಂಗದ ಮೇಲೆ ತಂದಿದೆ.

ಮೈಸೂರಿನ ಮಹಾಜನ ಪ್ರಥಮ ದರ್ಜೆ ಕಾಲೇಜಿನ (ಸಾರಂತ) ವಿದ್ಯಾರ್ಥಿಗಳಿಗೆ ತಿಂಗಳವರೆಗೆ ಆಯೋಜಿಸಿದ್ದ ‘ಯುವ ರಂಗ ಶಿಬಿರ’ ಯಶಸ್ವಿಯಾಗಿದ್ದು, ಯುವ ಕಲಾವಿದರು ಜಾನಪದ ಸಂಶೋಧಕಿ ಡಾ.ಸುಜಾತಾ ಅಕ್ಕಿ ರಚನೆಯ ‘ಸೋಲಿಗರ ಬಾಲೆ’ ನಾಟಕವನ್ನು ಜುಲೈ 17 ಮತ್ತು 18ರಂದು ಕಲಾಮಂದಿರದ ಕಿರು ರಂಗಮಂದಿರದಲ್ಲಿ ಪ್ರದರ್ಶಿಸಲಿದ್ದಾರೆ. ಶಿಬಿರದ ಸಮಾರೋಪದ ಅಂಗವಾಗಿ ನಟನಾ ಕೌಶಲ ಪ್ರದರ್ಶಿಸಲಿದ್ದಾರೆ. ವಿಕಾಸ್ ಚಂದ್ರ ವಿನ್ಯಾಸ ಹಾಗೂ ನಿರ್ದೇಶನದಲ್ಲಿ ನಾಟಕ ಮೂಡಿಸ ಬಂದಿದೆ.

ನಾಟಕದಲ್ಲೇನಿದೆ?:

‘ಸೋಲಿಗರ ಬಾಲೆ’ಯು ಜಾನಪದ ಹಿನ್ನೆಲೆಯಲ್ಲಿ ಮೂಡಿಬಂದಿರುವ ನಾಟಕ. ಚಾಮರಾಜನಗರ ಜಿಲ್ಲೆಯ ಈಗಿನ ಬಿಳಿಗಿರಿರಂಗನ ಬೆಟ್ಟ ಮೊದಲು ಬಿಳಿಕಲ್ಲು ಬೆಟ್ಟವಾಗಿ ಗಂಗಾಧರಯ್ಯನ ಸ್ಥಾನವಾಗಿತ್ತು. ಬ್ರಹ್ಮನ ಮಾತು ಕೇಳಿ ನಾರಾಯಣ ದಾಸಯ್ಯನ ವೇಷದಲ್ಲಿ ಬಂದು ಈಶ್ವರನಿಗೆ ಕೂರಲು ಜಾಗ ಕೇಳಿದನಂತೆ. ತನ್ನ ಶಂಖ–ಜಾಗಟೆಯಿಟ್ಟು ಅದು ಆಕಾಶದಷ್ಟಗಲವಾಗಿ ಶಿವನನ್ನು ಅಲ್ಲಿಂದ ಒಕ್ಕಲೆಬ್ಬಿಸಿ ರಂಗನಾಥ ತನ್ನ ಸ್ಥಾನವಾಗಿಸಿಕೊಂಡನಂತೆ. ಮುಂದೆ ನಾರಾಯಣ ದಾಸಯ್ಯನ ವೇಷ ತೊಟ್ಟು ಹೋಗುವಾಗ ಬೆಳ್ಳಿ ಬೆಟ್ಟದ ಸುಂದರ ಕಾನನದಲ್ಲಿ ವಾಸವಾಗಿದ್ದ ಸೋಲಿಗ ಬೊಮ್ಮೇಗೌಡನ ಕಡೆಯ ಮಗಳನ್ನು ಕಂಡು ತನ್ನ ಲೀಲೆಗಳಿಂದ ಆಕೆಯನ್ನು ವರಿಸಿಕೊಳ್ಳುತ್ತಾನೆ.

ಗಂಡ ಬೇರೊಂದು ಹೆಣ್ಣಿಗೆ ಒಲಿದಿರುವುದನ್ನು ತಿಳಿದ ಲಕ್ಷ್ಮದೇವಿ–ತುಳಸಮ್ಮ ನಾರಾಯಣಗೆ ಬುದ್ಧಿ ಹೇಳುತ್ತಾರೆ. ಆದರೂ ಕೇಳದಿದ್ದಾಗ ಅವನ ವೈದೀಕ ಮಾಡಲು ಸಿದ್ಧತೆ ನಡೆಸುತ್ತಾರೆ. ಈ ವಿಚಾರ ತಿಳಿದು ನಾರಾಯಣ ಅಡ್ಡಿಪಡಿಸಿ ಬೆಣ್ಣೆ ಕಡಿಯಲು ಕೆಲಸದಾಕೆ ಕರೆತರುತ್ತೇನೆ ಎಂದು ಕುಸುಮಾಲೆಯನ್ನು ಕರೆತರುತ್ತಾನೆ. ಸವತಿಯರ ಜಗಳ ಹೆಚ್ಚಾಗಿ ಕುಸುಮಾಲೆಯು ಮತ್ತೆ ಕಾಡಿನತ್ತ ಹೋಗುತ್ತಾಳೆ. ಈ ಮೂವರನ್ನು ಒಂದು ಮಾಡಲೆಂದು ನಾರಾಯಣ ಹೊಟ್ಟೆ ನೋವಿನ ನಾಟಕವಾಡಿ ಬುಡುಬುಡುಕೆಯವನಿಂದ, ‘ಕುಸುಮಾಲೆ ಇದಕ್ಕೆ ವೈದ್ಯ ಮಾಡಬೇಕು; ಇಲ್ಲದಿದ್ದರೆ ಜೀವಕ್ಕೆ ಅಪಾಯ’ ಎಂದು ಹೇಳಿಸುತ್ತಾನೆ. ಇದರಿಂದ ಹೆದರಿದ ಲಕ್ಷ್ಮಿದೇವಿ ತಾನೇ ಹನುಮಂತನ ಜೊತೆಯಲ್ಲಿ ಕುಸುಮಾಲೆಯನ್ನು ಕಂಡು ಚಿಕಿತ್ಸೆ ಮಾಡಿಸುತ್ತಾರೆ. ಕುಸುಮಾಲೆಯ ಮುಗ್ದತೆ ಮತ್ತು ಅವಳ ಮನಸ್ಸನ್ನು ಅರಿತ ಲಕ್ಷ್ಮಿದೇವಿ–ತುಳಸಮ್ಮ ಅವಳನ್ನು ಒಪ್ಪಿಕೊಳ್ಳುತ್ತಾರೆ.

ಸುಜಾತಾ ಅಕ್ಕಿ ಅವರು ನಾಟಕದ ಕಡೆಯಲ್ಲಿ ಬಹು ಪತ್ನಿತ್ವ ಗಮನದಲ್ಲಿರಿಸಿಕೊಂಡು ಕುಸುಮಾಲೆ ರಂಗನಾಥನನ್ನು ವಿರೋಧಿಸುವಂತೆ ಮಾಡಿದ್ದಾರೆ. ಇದು ಪ್ರಸ್ತುತ ಕಾಲಘಟ್ಟಕ್ಕೆ ಹೊಂದಾಣಿಕೆ ಆಗಿದೆಯಾದರೂ ಸ್ಥಳ ಪುರಾಣ ಗಮನದಲ್ಲಿಟ್ಟುಕೊಂಡು ಕಡೆಯ ದೃಶ್ಯ ಬದಲಾಯಿಸಲಾಗಿದೆ. ನಾರಾಯಣ, ಕುಸುಮಾಲೆ-ರಂಗನಾಯಕಿಯನ್ನು ಸಮಾನತೆಯ ದೃಷ್ಟಿಯಿಂದ ತನ್ನ ಪಟ್ಟದರಸಿಯರನ್ನಾಗಿ ಮಾಡಿಕೊಂಡಿರುವುದಾಗಿ ಹೇಳುವ ಮೂಲಕ ನಾಟಕ ಸುಖಾಂತ್ಯವಾಗುತ್ತದೆ ಎನ್ನುತ್ತಾರೆ ನಿರ್ದೇಶಕ ವಿಕಾಸ್ ಚಂದ್ರ.

ಪಾತ್ರಧಾರಿಗಳು:

ಸುಪ್ರೀತ್ ಎಸ್. ಭಾರದ್ವಾಜ್, ಗಂಗಾಧರ ಎಂ., ಸುಭೀಕ್ಷಾ ಎಂ., ಶ್ರೇಯಾ ಎಚ್‌.ಆರ್., ಸಿಂಧುಶ್ರೀ ಎಚ್‌.ಸಿ., ವಿವೇಕ್‌ ಎಚ್‌.ಜಿ., ಪೂರ್ಣಚಂದ್ರ ಹೆಗಡೆ, ದೀಪಕ್ ಎ.ಆರ್., ಅರ್ಚನಾ ಪಿ. ಹೆಗಡೆ, ಸೃಷ್ಟಿ ಆರ್. ಜೋಯಿಸ್, ಯೋಗೇಶ್ವರಿ ಟಿ.ಡಿ., ವೇಣುಗೋಪಾಲ್ ಆರ್., ವಿಖ್ಯಾತ್ ಎಚ್., ರೋಹಿತ್‌ ಎಚ್‌.ಕುಮಾರ್, ಐಶ್ವರ್ಯಾ ಎಂ., ತೇಜಸ್ವಿನಿ ಎಸ್.ಪಿ. ರೋಶಿಣಿ ಎಂ.ಪಿ., ಬೇಬಿ ಮನ್ಮಯಿ ವಶಿಷ್ಠ, ಸಂದೀಪ್‌ಕುಮಾರ್, ಅನನ್ಯ, ಭುವನ ಕೆ.ಎನ್. ಮತ್ತು ಧೀರಜ್‌ ವಿವಿಧ ಪಾತ್ರಗಳಲ್ಲಿ ಮಿಂಚಲು ಸಜ್ಜಾಗಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT