ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿ ಡಿಕ್ಕಿ... ಅಪಘಾತದ ಕಪ್ಪು ಚುಕ್ಕಿ

Published 16 ಜುಲೈ 2023, 1:35 IST
Last Updated 16 ಜುಲೈ 2023, 1:35 IST
ಅಕ್ಷರ ಗಾತ್ರ

ಘಟನೆ 1

ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆದಾಗ ಈ ವರ್ಷ ಪ್ರಚಾರ ಸಭೆಗೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಮುಳಬಾಗಿಲಿಗೆ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ಗೆ ಹದ್ದೊಂದು ಬಡಿಯಿತು. ಹೆಲಿಕಾಪ್ಟರ್‌ನ ಮುಂಭಾಗದ ಗಾಜು ಒಡೆದು ಹೋಗಿ ಕೆಲಕಾಲ ಆತಂಕ ನಿರ್ಮಾಣವಾಗಿತ್ತು. ಸಮಯಪ್ರಜ್ಞೆ ಮೆರೆದ ಪೈಲಟ್ ಹೆಲಿಕಾಪ್ಟರನ್ನು ಸುರಕ್ಷಿತವಾಗಿ ಕೋಲಾರದ ಹೆಲಿಪ್ಯಾಡ್‌ನಲ್ಲಿ ಇಳಿಸಿ ಆತಂಕವನ್ನು ದೂರ ಮಾಡಿದ್ದರು.

ಘಟನೆ 2

ಕಳೆದ ಅಕ್ಟೋಬರ್ 28ರಂದು ಅಹಮದಾಬಾದ್‌ನಿಂದ ದೆಹಲಿಗೆ ಹಾರುತ್ತಿದ್ದ ಆಕಾಸ ಸಂಸ್ಥೆಯ ಬೊಯಿಂಗ್ ವಿಮಾನಕ್ಕೆ 1900 ಅಡಿ ಎತ್ತರದಲ್ಲಿ ಹಕ್ಕಿಯೊಂದು ಡಿಕ್ಕಿ ಹೊಡೆದದ್ದರಿಂದ ವಿಮಾನದ ರಾಡೋಮ್ (ರೇಡಿಯೋ ಅಲೆಗಳನ್ನು ಗ್ರಹಿಸುವ ವಿಮಾನದ ಮೂತಿ) ನುಜ್ಜು ಗುಜ್ಜಾಗಿತ್ತು. ಸುರಕ್ಷತೆಗಾಗಿ ವಿಮಾನವನ್ನು ವಾಪಸ್ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಮರಳಿ ಕಳಿಸಲಾಗಿತ್ತು.

ಇತ್ತೀಚೆಗೆ ಹಕ್ಕಿಗಳು ವಿಮಾನಗಳಿಗೆ ಡಿಕ್ಕಿ ಹೊಡೆಯುವ ಪ್ರಮಾಣ ಹೆಚ್ಚಾಗುತ್ತಿದೆ. ಇದನ್ನು ತಡೆಯುವ ಪ್ರಾಥಮಿಕ ಪ್ರಯತ್ನವೆಂಬಂತೆ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಯಾವುದೇ ವಿಮಾನ ಹಾರಲು ಸಿದ್ಧವಾದಾಗ ಸಣ್ಣದೊಂದು ವಾಹನ ರನ್‌ವೇಯ ತುಂಬೆಲ್ಲ ಚಲಿಸಿ ಅಲ್ಲಿರುವ ಹಕ್ಕಿಗಳನ್ನು ಓಡಿಸುವ ಕೆಲಸ ಮಾಡುತ್ತದೆ. ಈ ದೃಶ್ಯ ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಕಂಡುಬಂದರೂ ಇದರ ಮಹತ್ವ ಮತ್ತು ಔಚಿತ್ಯ ಎಷ್ಟೋ ಜನರಿಗೆ ತಿಳಿದಿಲ್ಲ. ಹೊರಗಿನಿಂದ ನೋಡುವವರಿಗೆ ಈ ಚಟುವಟಿಕೆ ನಗು ತರಿಸಿದರೆ, ಕಾಕ್‌ಪಿಟ್‌ನಲ್ಲಿ ಕುಳಿತಿರುವ ಚಾಲಕನಿಗೆ ಆತ್ಮವಿಶ್ವಾಸ ತುಂಬುತ್ತದೆ. ನಿಲ್ದಾಣದಿಂದ ಹಾರುವ ಮತ್ತು ಇಳಿಯುವ ವಿಮಾನಗಳಿಗೆ ಅಡ್ಡಬಂದು ಡಿಕ್ಕಿ ಹೊಡೆಯುವ ಹಕ್ಕಿಗಳು ಅಪಘಾತ ಉಂಟುಮಾಡುವಲ್ಲಿ ತಮ್ಮದೇ ಆದ ‘ಇತಿಹಾಸ’ ನಿರ್ಮಿಸಿವೆ.

ಆ ದಿನಗಳು

1912ರಲ್ಲಿ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವಿಮಾನಕ್ಕೆ ರಣಹದ್ದು ಡಿಕ್ಕಿ ಹೊಡೆದಿತ್ತು. ಇದರಿಂದ ವಿಮಾನ ಚಾಲಕರಿಬ್ಬರೂ ಸಾವನ್ನಪ್ಪಿದ್ದರಲ್ಲದೆ ಬೆಲೆಬಾಳುವ ವಿಮಾನವೂ ನಾಶವಾಗಿತ್ತು. ನಂತರ 1960ರಲ್ಲಿ ಸಂಭವಿಸಿದ ಅಪಘಾತ ಇತಿಹಾಸದಲ್ಲೇ ದೊಡ್ಡದು. ಅಮೆರಿಕದ ಈಸ್ಟರ್ನ್ ಏರ್‌ಲೈನ್ಸ್‌ಗೆ ಸೇರಿದ ಲಾಕ್‌ಹೀಡ್ ವಿಮಾನಕ್ಕೆ ಬೋಸ್ಟನ್ ನಗರದ ಹೊರವಲಯದಲ್ಲಿ ಕೊಕ್ಕರೆಯೊಂದು ಬಡಿದದ್ದರಿಂದ ನೆಲಕ್ಕಪ್ಪಳಿಸಿ ಇಡೀ ವಿಮಾನ ನಾಶವಾಗಿತ್ತು. 62 ಮಂದಿ ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು.

ವೈಮಾನಿಕ ಇತಿಹಾಸದಲ್ಲೇ ಹಿಂದೆಂದೂ ಕಂಡು ಕೇಳರಿಯದ ಘಟನೆ ಇದು. ಅಮೆರಿಕದ ಯುಎಸ್ ಏರ್‌ವೇಸ್‌ನ ಏರ್ ಬಸ್ ಎ320 ವಿಮಾನದ ಎರಡೂ ಎಂಜಿನ್‌ಗಳು ಕೆನಡಗೂಸ್ (ಬಾತುಕೋಳಿ) ಹಕ್ಕಿಗಳ ಡಿಕ್ಕಿಯಿಂದಾಗಿ ವಿಫಲವಾದವು. ವಿಮಾನವನ್ನು ಹಡ್ಸನ್ ನದಿಯಲ್ಲಿ ಇಳಿಸಲಾಗಿತ್ತು. ಆಗ 155 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದರು. ವಿಮಾನದ ಕ್ಯಾಪ್ಟನ್ ಸಲೆನ್‌ಬರ್ಗರ್ ಮತ್ತು ಕೊ ಪೈಲಟ್‌ರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿತ್ತು. ಇದೇ ಘಟನೆಯನ್ನಾಧರಿಸಿದ ಟಾಂ ಹ್ಯಾಂಕ್ಸ್ ಅಭಿನಯದ ‘ಸಲ್ಲಿ’ ಎಂಬ ಹಾಲಿವುಡ್ ಸಿನಿಮಾ ಕೂಡ ಕಳೆದ ವರ್ಷ ನಿರ್ಮಾಣವಾಗಿದೆ.

1962ರಲ್ಲಿ ನಮ್ಮಲ್ಲಿ ಸಂಭವಿಸಿದ ಮೊದಲ ಹಕ್ಕಿ-ಡಿಕ್ಕಿ ಅಪಘಾತದಲ್ಲಿ ಕಾಬೂಲ್‌ನಿಂದ ಅಮೃತ್‌ಸರಕ್ಕೆ ಹಾರುತ್ತಿದ್ದ ಡಕೋಟಾ ವಿಮಾನಕ್ಕೆ ಕೊಕ್ಕರೆಯೊಂದು ಬಡಿದಿತ್ತು. ವಿಮಾನದ ವಿಂಡ್‌ಸ್ಕ್ರೀನ್ ನಾಶವಾಗಿ ಒಬ್ಬ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದ. 1975ರಲ್ಲಿ ಪಟಿಯಾಲಾ ವಿಮಾನ ನಿಲ್ದಾಣದ ಬಳಿ ತರಬೇತಿ ಹಾರಾಟದಲ್ಲಿ ನಿರತವಾಗಿದ್ದ ಪುಷ್ಪಕ್ ವಿಮಾನಕ್ಕೆ ಹದ್ದು ಡಿಕ್ಕಿ ಹೊಡೆದದ್ದೇ ವಿಮಾನ ನೆಲಕ್ಕೆ ಬಿದ್ದು ಬೆಂಕಿ ಹತ್ತಿಕೊಂಡು ಸಂಪೂರ್ಣವಾಗಿ ನಾಶವಾಗಿ ಚಾಲಕರಿಬ್ಬರಿಗೂ ಪ್ರಾಣಾಂತಿಕ ಗಾಯಗಳಾಗಿದ್ದವು.

ಮನುಷ್ಯರಿಗೆ ಹಾರಲು ಪ್ರೇರೇಪಿಸಿದ ಹಕ್ಕಿಗಳೇ ಆತನನ್ನು ಸಾವಿನ ಪ್ರಪಾತಕ್ಕೆ ನೂಕುತ್ತಿರುವುದು ವ್ಯಂಗ್ಯ. ಬಹಳಷ್ಟು ಜನ ಎತ್ತರದಲ್ಲಿ, ಅತ್ಯಂತ ವೇಗವಾಗಿ ಹಾರಾಡುವ ದೊಡ್ಡ ಗಾತ್ರದ ವಿಮಾನಕ್ಕೆ ಸಣ್ಣ ಹಕ್ಕಿಯೊಂದು ಡಿಕ್ಕಿ ಹೊಡೆಯುವುದರಿಂದ ಅಪಘಾತಕ್ಕೀಡಾಗುವುದು ಸಾಧ್ಯವಿಲ್ಲ, ವೇಗದ ವಿಮಾನದ ಮುಂದೆ ಹಿಡಿ ಗಾತ್ರದ ಹಕ್ಕಿ ಯಾವ ಲೆಕ್ಕ? ಅಪಘಾತಕ್ಕೆ ಬೇರೇನಾದರೂ ಕಾರಣವಿರುತ್ತದೆ ಎಂದೇ ಭಾವಿಸುತ್ತಾರೆ.

ಡಿಕ್ಕಿಗಿದೋ ಕಾರಣ

ವಿಮಾನಯಾನದ ಪ್ರಾರಂಭದ ದಿನಗಳಲ್ಲಿ ಈ ರೀತಿಯ ಅಪಘಾತಗಳು ಕಡಿಮೆ ಇದ್ದವು. ಆಗ ವಿಮಾನದಲ್ಲಿ ಪಿಸ್ಟನ್ ಎಂಜಿನ್‌ ಬಳಸುತ್ತಿದ್ದುದರಿಂದ ಅದರ ಅತಿಯಾದ ಶಬ್ದದಿಂದಾಗಿ ಹಕ್ಕಿಗಳು ವಿಮಾನದ ಬಳಿ ಅಷ್ಟಾಗಿ ಸುಳಿಯುತ್ತಿರಲಿಲ್ಲ. ಅದಲ್ಲದೆ ವಿಮಾನದ ರೆಕ್ಕೆಗಳ ಮುಂಭಾಗದಲ್ಲಿರುತ್ತಿದ್ದ ಪ್ರೊಪೆಲ್ಲರ್‌ನ ಫ್ಯಾನ್ ಬ್ಲೇಡುಗಳು ವಿಮಾನಕ್ಕೆ ಅಡ್ಡಬರುತ್ತಿದ್ದ ಹಕ್ಕಿಗಳನ್ನು ಕತ್ತರಿಸಿ ಹಾಕುತ್ತಿದ್ದವು. ಆದರೆ ಈಗಿನ ವಿಮಾನಗಳಲ್ಲಿ ಜೆಟ್ ಎಂಜಿನ್‌ ಬಳಸುತ್ತಿರುವುದರಿಂದ ಶಬ್ದ ಕಡಿಮೆ. ಹಾರುವ ಹಕ್ಕಿಗಳು ವಿಮಾನವನ್ನು ದೊಡ್ಡ ಪಕ್ಷಿಯೆಂಬಂತೆ ಭ್ರಮಿಸಿ ಡಿಕ್ಕಿ ಹೊಡೆದು ಎಂಜಿನ್‌ನಲ್ಲಿ ಸಿಲುಕಿಕೊಂಡು ಅಪಘಾತ ಉಂಟು ಮಾಡುತ್ತವೆ.

ಸಮುದ್ರತೀರ ಮತ್ತು ಅತ್ಯಂತ ಜನಬಾಹುಳ್ಯವಿರುವ ಸ್ಥಳಗಳ ಪಕ್ಕದ ನಿಲ್ದಾಣದ ಬಳಿ ಹಕ್ಕಿಗಳ ಹಿಂಡೇ ಇರುವುದರಿಂದ ಅಪಘಾತದ ಸಾಧ್ಯತೆಗಳು ಹೆಚ್ಚು. ಪ್ರತಿ ನಿಲ್ದಾಣಕ್ಕಂಟಿಕೊಂಡಂತೆ ವಿಮಾನಯಾತ್ರಿಗಳಿಗೆ ಆಹಾರ ಸರಬರಾಜು ಮಾಡುವ ಘಟಕವಿರುತ್ತದೆ. ತಯಾರಿಕೆ ಮತ್ತು ಬಳಕೆಯ ನಂತರ ಹೊರಗೆ ಹಾಕುವ ಪದಾರ್ಥಗಳಿಗಾಗಿ ಕಾಗೆ, ಪಾರಿವಾಳ, ಹದ್ದು, ಕೊಕ್ಕರೆ, ರಣ ಹದ್ದು, ಮಿಂಚುಳ್ಳಿ, ಬಾತುಕೋಳಿ ಮತ್ತು ನವಿಲುಗಳು ನೇರವಾಗಿ ವಿಮಾನ ನಿಲ್ದಾಣಕ್ಕೆ ಬಂದು ಏರಿಳಿಯುವ ವಿಮಾನಗಳನ್ನು ಗಮನಿಸುವ ವ್ಯವಧಾನ ತೋರದೆ ಡಿಕ್ಕಿ ಹೊಡೆಯುತ್ತವೆ. ವಿಮಾನಗಳು ರನ್‌ವೇಯಿಂದ ಹಾರುವಾಗ ಮತ್ತು ಇಳಿಯುವಾಗ ಹಗಲಿನಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ.
ಹಕ್ಕಿಗಳು ವಿಮಾನ ನಿಲ್ದಾಣದ ಬಳಿ ಬರುವುದು ವಿಮಾನ ನಿಲ್ದಾಣದ ಟರ್ಫ್ ಗ್ರಾಸ್ (ಹುಲ್ಲಿನ ಹಾಸು) ಆಶ್ರಯಿಸಿ ಬದುಕುವ ಕೀಟ, ಮೊಲ, ಇಲಿ ಮತ್ತು ಹಾವುಗಳಿಗಾಗಿ. ವಿಮಾನಗಳು ರನ್‌ವೇಯಿಂದ ಜಾರಿದಾಗ ಹೆಚ್ಚು ಜಾರದಂತೆ ತಡೆಯಲು, ವಿಮಾನ ತೊಳೆದ ನೀರನ್ನು ಇಂಗಿಸಲು ಮತ್ತು ತುರ್ತು ರಕ್ಷಣೆಯ ಸಂದರ್ಭಗಳಲ್ಲಿ ಬಳಸುವ ವಾಹನಗಳನ್ನು ನಿಲ್ಲಿಸಲು, ಓಡಿಸಲು ಈ ಹುಲ್ಲಿನ ಹಾಸು ನೆರವಿಗೆ ಬರುತ್ತದೆ. ನೋಡಲು ಕಣ್ಣಿಗೆ ಹಿತವೂ ಇರುತ್ತದೆ. ಆದರೆ ಕೆನಡಾಗೂಸ್‌ಗಳಿಗೆ ಈ ಹುಲ್ಲೇ ನೆಚ್ಚಿನ ಆಹಾರ. ಟರ್ಫ್ ಗ್ರಾಸ್ ಬದಲಿಗೆ ಅಗಸ್ಟಿನ್ ಗ್ರಾಸ್ ಬೆಳೆಸಿದರೆ ಅದನ್ನು ಬಾತುಗಳು ಇಷ್ಟಪಡುವುದಿಲ್ಲ. ಆಗ ಅವು ವಿಮಾನ ನಿಲ್ದಾಣಗಳ ಕಡೆ ಸುಳಿಯುವುದೂ ಇಲ್ಲ. ನಿಲ್ದಾಣಗಳ ಸುತ್ತಲಿನ ನೀರಿನ ಕೆರೆ, ಕಾಲುವೆಗಳಿಗೆ ಬರುವ ಹಕ್ಕಿಗಳು ಸಹ ವಿಮಾನ ಹಾರಾಟಕ್ಕೆ ಆಗಾಗ ಅಡ್ಡಿ ಮಾಡುತ್ತಲೇ ಇರುತ್ತವೆ.

ಇದುವರೆಗೂ ಸಂಭವಿಸಿರುವ ದುರಂತಗಳ ಅಧ್ಯಯನದಿಂದ ಕೆಳ ಕಂಡ ಅಂಶಗಳು ಬೆಳಕಿಗೆ ಬಂದಿವೆ. ಚಲನೆಯ ನಿಯಮದಂತೆ ಅರ್ಧ ಕೆ.ಜಿ. ತೂಕದ ಹಕ್ಕಿ ಗಂಟೆಗೆ 965 ಕಿ.ಮೀ. ವೇಗದಲ್ಲಿ ಹಾರುವ ಜೆಂಬೋಜೆಟ್ ವಿಮಾನಕ್ಕೆ ಬಡಿದರೆ ಅದರಿಂದ 12 ಟನ್‌ನಷ್ಟು ಬಲ ವಿಮಾನದ ಮೇಲೆ ಬಿದ್ದಂತಾಗುತ್ತದೆ. ಅಂತೆಯೇ 2 ಕೆ.ಜಿ. ತೂಗುವ ಹಕ್ಕಿ ಗಂಟೆಗೆ 900 ಕಿ.ಮೀ. ವೇಗದಲ್ಲಿ ಹಾರುವ ವಿಮಾನಕ್ಕೆ ಡಿಕ್ಕಿ ಹೊಡೆದರೆ ಪ್ರಯೋಗಗೊಳ್ಳುವ ಬಲ 50 ಟನ್‌ಗಳಷ್ಟಿದ್ದು, ವಿಮಾನ ಬಿರುಗಾಳಿಗೆ ಸಿಕ್ಕ ತರಗೆಲೆಯಂತಾಗಿ ನಿಯಂತ್ರಣ ತಪ್ಪಿ ನೆಲಕ್ಕಪ್ಪಳಿಸುತ್ತದೆ.

ತಡೆಗೆ ಕ್ರಮ

ಹಕ್ಕಿ ಡಿಕ್ಕಿಯಿಂದಾಗುವ ವಿಮಾನಾಪಘಾತ ತಪ್ಪಿಸಲು ವಿಮಾನದ ವಿನ್ಯಾಸವನ್ನೇ ಬದಲಿಸಬೇಕೆಂಬುದು ತಜ್ಞರ ಅಭಿಪ್ರಾಯ. ಹಕ್ಕಿಗಳು ಡಿಕ್ಕಿ ಹೊಡೆದಾಗ ವಿಮಾನದ ವಿಂಡ್ ಶೀಲ್ಡ್ (ಮುಂಭಾಗದ ಗಾಜು)ಗೆ ಹಾನಿಯಾಗದಂತೆ ತಡೆಯಲು ವಿಂಡ್‌ಶೀಲ್ಡ್‌ನ ಗಟ್ಟಿತನ ನೀಡುವ ಪಾಲಿವಿನೈಲ್‌ ಬ್ಯೂಟ್ರೈಲ್ ರಸಾಯನಿಕವನ್ನು ಉಪಯೋಗಿಸಿ ನಿರ್ಮಿಸಲಾಗುತ್ತಿದೆ. ಘರ್ಷಣೆ ಕಡಿಮೆ ಮಾಡಲು ಎಂಜಿನ್‌ಗಳ ಒಳಭಾಗದಲ್ಲಿ ಸಾಫ್ಟ್‌ ಲೈನಿಂಗ್ ಹಾಕಲಾಗುತ್ತಿದೆ. ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುವ ಬೃಹತ್ ಜೆಟ್ ವಿಮಾನಗಳ ಎಂಜಿನ್‌ನ ಬಳಿ ಎರಡು ಕೆ.ಜಿ. ತೂಗುವ ಹಕ್ಕಿಯೇನಾದರೂ ಬಂದರೆ ಹಕ್ಕಿಯು ಎಂಜಿನ್ ಭಾಗಕ್ಕೆ ಅಪ್ಪಳಿಸುವ ವೇಳೆಗೆ ಎಂಜಿನ್‌ಗಳು ಸ್ವಯಂ ಸ್ಥಗಿತಗೊಂಡು ಬಿಡುತ್ತವೆ. ಆಗ ಎಂಜಿನ್‌ಗೆ ಹಾನಿಯಾಗುವುದಿಲ್ಲ. ಎಂಜಿನ್ ಸ್ಥಗಿತಗೊಂಡರೂ ಸುರಕ್ಷಿತ ಲ್ಯಾಂಡಿಂಗ್ ಮಾಡಿದ ಅನೇಕ ಉದಾಹರಣೆಗಳಿವೆ. ವಿಮಾನದ ಮುಂಭಾಗದಿಂದ ಲೇಸರ್ ಕಿರಣಗಳನ್ನು ಹೊಮ್ಮಿಸಿ ಹಕ್ಕಿಗಳನ್ನು ವಿಮಾನದ ದಾರಿಯಿಂದ ದೂರಸರಿಯುವಂತೆ ಮಾಡುವ ವ್ಯವಸ್ಥೆಯೂ ಇದೆ. ಆದರೆ ಲೇಸರ್ ಮತ್ತು ಮೈಕ್ರೋ ತರಂಗಗಳ ಬಳಕೆಯಿಂದ ನಿಲ್ದಾಣಗಳ ರನ್‌ವೇಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಆರೋಗ್ಯಕ್ಕೆ ಹಾನಿ ಸಂಭವಿಸಬಹುದಾದ್ದರಿಂದ ಅವುಗಳ ಬಳಕೆ ಅಷ್ಟು ಸರಿಯಲ್ಲ ಎಂಬ ಅಭಿಪ್ರಾಯ ವಿಜ್ಞಾನಿಗಳದ್ದು.

ವಿಮಾನಗಳ ಹಂಗರ್(ತಂಗುದಾಣ)ಗಳಲ್ಲಿ ಸಾಕಷ್ಟು ತೆರೆದ ಕಿಟಕಿ, ಬಾಗಿಲುಗಳಿರುವುದರಿಂದ ಅಲ್ಲಿಯೂ ಹಕ್ಕಿಗಳು ಗೂಡು ಕಟ್ಟಿ ಸಂಸಾರ ಹೂಡುವುದಿದೆ. ಹಂಗರ್‌ಗಳಿಗೆ ಸುತ್ತಲೂ ಬಲೆ ಅಳವಡಿಸಿ ಹಕ್ಕಿಗಳ ಪ್ರವೇಶ ತಡೆಯಬಹುದು. ಹೊಲ-ಗದ್ದೆಗಳ ಬಳಿ ಬಳಸುವ ಬೆರ್ಚಪ್ಪಗಳನ್ನು ಬಳಸಿ ತಕ್ಕಮಟ್ಟಿಗೆ ಹಕ್ಕಿಗಳ ಹಾವಳಿ ತಡೆಯಬಹುದು. ಬೇಟೆಗಾರ ಹಕ್ಕಿ ಮತ್ತು ನಾಯಿಗಳನ್ನು ಭೂಭರ್ತಿ ತಾಣಗಳ ಬಳಿ ನಿಯೋಜಿಸಿ ವಿಮಾನಗಳಿಗೆ ಅಡ್ಡಿಪಡಿಸುವ ಹಕ್ಕಿಗಳನ್ನು ನಿಯಂತ್ರಿಸಬಹುದು. ಕೆಲವೊಮ್ಮೆ ಬೇಟೆಗಾರ ಹಕ್ಕಿಗಳ ಧ್ವನಿಯನ್ನು ಧ್ವನಿವರ್ಧಕಗಳ ಮೂಲಕ ಪ್ರಸಾರ ಮಾಡಿ ಹಕ್ಕಿಗಳನ್ನು ಓಡಿಸುವ ಪ್ರಯತ್ನ ನಡೆಯುತ್ತದೆ. ರನ್‌ವೇಗೆ ಅಡ್ಡಬರುವ ಹಕ್ಕಿಗಳನ್ನು ಓಡಿಸಲು 130 ಡೆಸಿಬೆಲ್‌ನಷ್ಟು ಕರ್ಕಶ ಶಬ್ದ ಹೊಮ್ಮಿಸುವ ಪ್ರೊಪೇನ್‌ಯುಕ್ತ ಪಟಾಕಿ ಹಾರಿಸುವುದು, ಪಿಸ್ತೂಲ್‌ನಿಂದ ನಕಲಿ ಗುಂಡು ಹಾರಿಸುವ ಪದ್ಧತಿಯೂ ಇದೆ.
ಹಕ್ಕಿಗಳಿಗೆ ಸಹಿಸಲಾಗದಷ್ಟು ದುರ್ವಾಸನೆ ಬೀರುವ ಮೀಥೈಲ್ ಅನ್‌ಥ್ರಾನಿಲೇಟ್ ಮತ್ತು ಅಂಥ್ರಾಕ್ವಿನೊನ್ ರಸಾಯನಿಕಗಳನ್ನು ವಾತಾವರಣದಲ್ಲಿ ಸಿಂಪಡಿಸಿ ಹಕ್ಕಿಗಳನ್ನು ಓಡಿಸಬಹುದು. ಸಂಖ್ಯೆಯಲ್ಲಿ ಮಿತಿ ಮೀರಿದ ಹಕ್ಕಿಗಳನ್ನು ಸಾಮೂಹಿಕವಾಗಿ ವಧಿಸುವ ಕೆಲಸವೂ ಕೆಲವೊಮ್ಮೆ ನಡೆಯುತ್ತದೆ. ತೊಂಬತ್ತರ ದಶಕದ ಆರಂಭದಲ್ಲಿ ಜಾನ್ ಎಫ್. ಕೆನಡಿ ವಿಮಾನ ನಿಲ್ದಾಣದ ಬಳಿ ಎರಡು ವರ್ಷಗಳ ಅವಧಿಯಲ್ಲಿ 30000ಕ್ಕೂ ಹೆಚ್ಚು ಕಡಲಕಾಗೆಗಳನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಇದರಿಂದ ಸಿಟ್ಟಿಗೆದ್ದ ಪರಿಸರವಾದಿಗಳು ಸಿರಿವಂತರ ಶೀಘ್ರ ಪ್ರಯಾಣಕ್ಕೆ ಅಮೂಲ್ಯ ಪಕ್ಷಿ ಸಂಪತ್ತನ್ನು ನಾಶ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಎತ್ತಿ ಬೀದಿಗಿಳಿದು ಹೋರಾಟ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT