ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯ ಕಾಲುವೆ: ವಿಜಯನಗರ ಅರಸರ ಮೇರು ಕಾಣಿಕೆ

Published 25 ಮೇ 2024, 23:35 IST
Last Updated 25 ಮೇ 2024, 23:35 IST
ಅಕ್ಷರ ಗಾತ್ರ

ವಿಜಯನಗರ ಅರಸರ ಕಾಲದಲ್ಲಿ ತುಂಗಭದ್ರಾ ನದಿಯಿಂದ ನೀರು ಪಡೆಯಲು ನಿರ್ಮಾಣವಾದ ಹತ್ತಾರು ಕಾಲುವೆಗಳ ಪೈಕಿ ‘ರಾಯ’ ಹೆಸರಿನ ಕಾಲುವೆಯ ವೈಭವವೇ ಬೇರೆ. ಅದರ ಉದ್ದ, ಸಾಗುವ ಮಾರ್ಗ, ಹಠಾತ್‌ ತಿರುವುಗಳು ಚಕಿತಗೊಳಿಸುತ್ತವೆ. 600 ವರ್ಷಗಳ ಹಿಂದಿನ ನೀರಾವರಿ ಕಾಲುವೆ ತಂತ್ರಜ್ಞಾನದ ಉತ್ಕೃಷ್ಟ ಉದಾಹರಣೆ.

ಹಂಪಿಯಲ್ಲಿ ವೈವಿಧ್ಯಮಯ ಜಲಮೂಲಗಳು, ನೀರಿನ ರಚನೆಗಳು, ಅಣೆಕಟ್ಟುಗಳು, ಕಾಲುವೆಗಳು ಹೆಜ್ಜೆಹೆಜ್ಜೆಗೂ ಕಂಡುಬರುತ್ತವೆ. ಮಹಾನವಮಿ ದಿಬ್ಬದ ಬಳಿಯ ಮೆಟ್ಟಿಲು ಕಲ್ಯಾಣಿ, ವಿರೂಪಾಕ್ಷ ದೇವಾಲಯದ ಪಕ್ಕದಲ್ಲಿರುವ ಮನ್ಮಥ ಹೊಂಡ, ಕೃಷ್ಣ ದೇವಾಲಯದ ಮುಂದಿನ ಬಾಲಕೃಷ್ಣ ಹೊಂಡ, ವಿಜಯ ವಿಠಲ ದೇವಾಲಯಕ್ಕೆ ಹೋಗುವ ಹಾದಿಯ ಅಕ್ಕಪಕ್ಕ ಹಲವಾರು ಕಲ್ಯಾಣಿಗಳು, ಕಲ್ಲಿನ ಮೇಲ್ಕಾಲುವೆ, ಕೂಪಾರಾಮ ವಾಟಿಕೆ, ರಾಣಿ ಸ್ನಾನಗೃಹ, ಅಷ್ಟಕೋನದ ಈಜುಕೊಳ, ಸಾರ್ವಜನಿಕ ಈಜುಕೊಳ ಇತ್ಯಾದಿ ರಚನೆಗಳಿವೆ.

ಇವುಗಳ ಜೊತೆಗೆ ಆ ಕಾಲದ ಕಾಲುವೆ ನೀರಾವರಿ ವ್ಯವಸ್ಥೆ ಇಂದಿಗೂ ಬಳಕೆಯಾಗುತ್ತಿದೆ.  ತುಂಗಾಭದ್ರಾ ನದಿಗೆ ಹೊಸಪೇಟೆಯಿಂದ ರಾಯಚೂರಿನ ಬಿಚ್ಚಾಲಿಯವರೆಗೆ ಚಿಕ್ಕಚಿಕ್ಕ ಅಣೆಕಟ್ಟುಗಳನ್ನು ನಿರ್ಮಿಸಿ ಕಾಲುವೆಗಳ ಮೂಲಕ ನೀರು ಪಡೆಯಲಾಗುತ್ತಿತ್ತು. ಇವುಗಳಲ್ಲಿ ಹೆಚ್ಚಿನವು ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣಗೊಂಡಿವೆ. ಒಂದು ಎಕರೆಯೂ ಮುಳುಗಡೆಯಾಗದಂತೆ ಅಣೆಕಟ್ಟೆಗಳನ್ನು ಹಾಕಿ ಸುಮಾರು 11 ಸಾವಿರ ಹೆಕ್ಟೇರ್ ಜಮೀನಿಗೆ ನೀರುಣಿಸುವ ಜಾಣ್ಮೆ ಇದು.

ಬಸವ, ಬೆಲ್ಲ, ಕಾಳಘಟ್ಟ, ಹಿರಿಯ–ಹೀಗೆ ಅವುಗಳ ಹೆಸರೇ ವಿಭಿನ್ನ. ಒಟ್ಟು 18 ಕಾಲುವೆಗಳಿದ್ದವು. ಇವುಗಳ ಪೈಕಿ ‘ರಾಯ’ ಹೆಸರಿನ ಕಾಲುವೆ ಅತ್ಯಂತ ಪ್ರಮುಖವಾದುದು. ಉಳಿದೆಲ್ಲವುಗಳಿಗಿಂತ ಅತ್ಯಂತ ಉದ್ದನೆಯ ಕಾಲುವೆ ಇದು. ಅಲ್ಲದೆ ಅತಿ ಹೆಚ್ಚು ಪ್ರದೇಶ ಮತ್ತು ಹೆಚ್ಚು ಗ್ರಾಮಗಳಿಗೆ ನೀರುಣಿಸುತ್ತದೆ.

ವಿಜಯನಗರ ಅರಸರ ಕಾಲದಲ್ಲಿ ಹೊಸಕೋಟೆ ಬಳಿ ತುಂಗಾಭದ್ರಾ ನದಿಗೆ ಹಾಕಿದ್ದ ಕುರುವಗಡ್ಡೆ ಅಣೆಕಟ್ಟಿನಿಂದ ಈ ಕಾಲುವೆ ಆರಂಭವಾಗುತ್ತಿತ್ತು. ತುಂಗಭದ್ರಾ ಜಲಾಶಯ ನಿರ್ಮಾಣವಾದಾಗ ಈ ಗ್ರಾಮ, ಅಣೆಕಟ್ಟೆ ಮತ್ತು ಕಾಲುವೆಯ ಸ್ವಲ್ಪ ಭಾಗ ಮುಳುಗಡೆಯಾದವು. ಪ್ರಸ್ತುತ ತುಂಗಭದ್ರಾ ಜಲಾಶಯದಿಂದಲೇ ಈ ಕಾಲುವೆಗೆ ನೀರೊದಗಿಸಲಾಗುತ್ತಿದೆ. ಹೊಸಪೇಟೆ ತಾಲ್ಲೂಕಿನ 18 ಹಳ್ಳಿಗಳು ಇದರ ಉಪಯೋಗ ಪಡೆಯುತ್ತಿವೆ. ‌18 ಕಾಲುವೆಗಳು ಸೇರಿ 11 ಸಾವಿರ ಹೆಕ್ಟೇರಿಗೆ ನೀರುಣಿಸುತ್ತಿದ್ದರೆ ಅದರಲ್ಲಿ ‘ರಾಯ’ ಕಾಲುವೆಯೊಂದೇ 2300 ಹೆಕ್ಟೇರುಗಳನ್ನು ಒಳಗೊಂಡಿದೆ.

ಈಗಿನ ಕಾಲುವೆಯ ಉದ್ದವೇ 28 ಕಿ.ಮೀಗಳಿದ್ದು ತುಂಗಭದ್ರಾ ಜಲಾಶಯ ನಿರ್ಮಾಣಕ್ಕೂ ಮುನ್ನ ಇದರ ಉದ್ದ ಸುಮಾರು 40 ಕಿ.ಮೀಗಳಷ್ಟು. 600 ವರ್ಷಗಳ ಹಿಂದೆಯೇ ಇಷ್ಟು ಉದ್ದದ ಕಾಲುವೆ ನಿರ್ಮಿಸಿರುವುದು ಅಚ್ಚರಿಯೇ ಸರಿ. ಈ ಕಾಲುವೆಯು ಹೊಸಪೇಟೆ ನಗರದ ಚಿತ್ತವಾಡಿಗಿ ಮತ್ತು ರಾಣಿಪೇಟೆಯ ಪಕ್ಕದಲ್ಲಿ ಸಾಗುತ್ತದೆ. ಮಾಜಿ ಸಚಿವ ಆನಂದ್‌ ಸಿಂಗ್‌ ಅವರ ಹೊಸ ಬಂಗಲೆಯು ಕಾಲುವೆಯ ದಡದಲ್ಲಿಯೇ ಇದೆ. ಹೀಗೆ ಮುಂದುವರಿಯುವ ಕಾಲುವೆ ವಿಜಯನಗರ ಕಾಲದಲ್ಲಿ  ನಿರ್ಮಾಣವಾಗಿರುವ ನಾಗೇನಹಳ್ಳಿಯನ್ನು ದಾಟಿ ಬಿದಿರುಕಲ್ಲು ಗುಡ್ಡ ಹಾಗೂ ಸಿಂಗನಾಥನಹಳ್ಳಿ ಗುಡ್ಡಗಳನ್ನು ಹೇರ್‌ಪಿನ್‌ ತಿರುವಿನಂತೆ ಬಳಸಿಕೊಂಡು ಕಾಮಲಾಪುರ ಕೆರೆಯನ್ನು ಸೇರುತ್ತದೆ. ನಾಗೇನಹಳ್ಳಿಯ ನಂತರ ಹಲವು ಕಿಲೋಮೀಟರ್ ಗುಡ್ಡಗಳ ಅರ್ಧ ಎತ್ತರದಲ್ಲಿಯೇ ಸಾಗುವ ಕಾಲುವೆ ಹತ್ತಾರು ತಿರುವುಗಳನ್ನು ತೆಗೆದುಕೊಳ್ಳುತ್ತದೆ. ಆ ಕಾಲದಲ್ಲಿಯೇ ಭೂಕ್ಷಿತಿಜ ಮಟ್ಟವನ್ನು ಆಧರಿಸಿ ಕಾಲುವೆ ಹರಿವನ್ನು ನಿರ್ಮಿಸಿರುವುದು ಸ್ಪಷ್ಟ.

ವಿಜಯನಗರದ ರಾಜಧಾನಿ ಕೇಂದ್ರವಾಗಿದ್ದ ಮಹಾನವಮಿ ದಿಬ್ಬ ಹಾಗೂ ಸುತ್ತಮುತ್ತಲ ರಾಜ ಪ್ರಾಂಗಣ (ರಾಯಲ್‌ ಸೆಂಟರ್)‌ ಪ್ರದೇಶಕ್ಕೆ ನೀರೊದಗಿಸುತ್ತಿದ್ದುದು ಕಾಮಲಾಪುರ ಕೆರೆ. ಈ ಕೆರೆಯ ಮೂರು ತೂಬುಗಳು ರಾಜ ಪ್ರಾಂಗಣಕ್ಕೆ ಸಂಪರ್ಕ ಹೊಂದಿದ್ದವು. ಅಲ್ಲಿನ ರಾಣಿಯರ ಈಜುಕೊಳ, ಸಾರ್ವಜನಿಕ ಈಜುಕೊಳ, ಮೆಟ್ಟಲು ಪುಷ್ಕರಣಿ, ಅಷ್ಟಕೋನಾಕೃತಿಯ ಬಾವಿ, ಭೋಜನ ಶಾಲೆ ಬಳಿಯ ಬೃಹತ್‌ ಕಲ್ಯಾಣಿ ಹಾಗೂ ಹತ್ತಾರು ಸಂಖ್ಯೆಯಲ್ಲಿರುವ ಸಣ್ಣ ಕಲ್ಯಾಣಿ, ಕುಡಿಯುವ ನೀರಿನ ಬಾನಿ ಮತ್ತು ಬಾವಿಗಳಿಗೆ ಇದೇ ಕೆರೆಯು ವರ್ಷವಿಡೀ ನೀರುಣಿಸುತ್ತಿತ್ತು. ಇಷ್ಟು ಬೃಹತ್‌ ಪ್ರಮಾಣದಲ್ಲಿ ನೀರು ಹರಿಸಬೇಕಾದರೆ ಅದಕ್ಕೆ ಇದ್ದ ಆಧಾರ ‘ರಾಯ’ ಕಾಲುವೆ. ಕೇವಲ ಮಳೆ ನೀರಿನಿಂದ ಈ ಕೆರೆ ತುಂಬಲು ಸಾಧ್ಯವೇ ಇರಲಿಲ್ಲ.

ನಿರ್ಮಾಣ ಕಾಲ

ತನ್ನ ಹರಿವಿನುದ್ದಕ್ಕೂ ವಿಜಯನಗರ ಸಾಮ್ರಾಜ್ಯದ ವಿವಿಧ ಭಾಗಗಳನ್ನು ಹಾದು ಹೋಗುವ ‘ರಾಯ’ ಕಾಲುವೆಯನ್ನು ಯಾವ ಅವಧಿಯಲ್ಲಿ ನಿರ್ಮಿಸಲಾಯಿತು ಎಂಬುದಕ್ಕೆ ಶಾಸನಗಳಾಗಲೀ ಇತರೆ ದಾಖಲೆಗಳಾಗಲಿ ಲಭ್ಯವಿಲ್ಲ. ಆದರೆ ಕ್ರಿ.ಶ. 1521ರಲ್ಲಿ ರಾಮನಗಡ್ಡೆ ಬಳಿ ‘ರಾಯ’ ಕಾಲುವೆಗೆ ಶ್ರೀಕೃಷ್ಣದೇವರಾಯ ಅಣೆಕಟ್ಟು ನಿರ್ಮಿಸಿ ಬಗ್ಗೆ ಶಾಸನವೊಂದರಲ್ಲಿ ನಮೂದಿಸಲಾಗಿದೆ. ಆದರೆ ಇದಕ್ಕೂ ಮುನ್ನವೇ ಕಾಲುವೆ ನಿರ್ಮಾಣವಾಗಿದ್ದು ಅದಕ್ಕೆ ನೀರಿನ ಹರಿವನ್ನು ಹೆಚ್ಚಿಸಲು ಕೃಷ್ಣದೇವರಾಯ ಹೆಚ್ಚುವರಿ ಅಣೆಕಟ್ಟು ನಿರ್ಮಿಸಿರಬಹುದೆಂದು ಇತಿಹಾಸಕಾರರ ಅಭಿಪ್ರಾಯ. ಇದು ನಿಜವಿರಬಹುದು. ಏಕೆಂದರೆ ಕ್ರಿ.ಶ.1420ರಲ್ಲೇ (ಎರಡನೇ ದೇವರಾಯನ ಕಾಲ) ಕಾಮಲಾಪುರ ಕೆರೆ ನಿರ್ಮಾಣವಾಗಿದ್ದು, ಆಗ ಅದನ್ನು ‘ಚಿಕ್ಕರಾಯ ಕೆರೆ’ ಎಂದು ಕರೆಯಲಾಗುತ್ತಿತ್ತು. ಕೆರೆ ನಿರ್ಮಾಣವಾಗಿತ್ತು ಎಂದರೆ ಅದಕ್ಕೆ ನೀರುಣಿಸಲು ಕಾಲುವೆಯನ್ನೂ ಆಗಲೇ ಕಟ್ಟಲಾಗಿತ್ತು ಎಂಬುದು ಸ್ಪಷ್ಟ. ಹಾಗಾಗಿ ಈ ಕಾಲುವೆಯು ಎರಡನೇ ದೇವರಾಯನ ಕಾಲದಲ್ಲಿ ನಿರ್ಮಾಣವಾಗಿ ನಂತರದ ಹಲವು ಅರಸರು ಸುಧಾರಣೆ ಮಾಡಿದ್ದಾರೆ ಎನ್ನಬಹುದು. ವಿಜಯನಗರ ಅರಸರ ನೆನಪಿಗಾಗಿಯೇ ಈ ಕಾಲುವೆಯನ್ನು ಹಿಂದಿನಿಂದಲೂ ‘ರಾಯ’ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ.

ಆ ಕಾಲದ ಜಲ ತಂತ್ರಜ್ಞಾನಕ್ಕೆ ಅತ್ಯುತ್ತಮ ಸಾಕ್ಷಿಯಾಗಿರುವ ಈ ಕಾಲುವೆಯು ವಿಜಯನಗರ ಅರಸರು ನಮಗೆ ನೀಡಿರುವ ಉಡುಗೊರೆ. ಇದು ಮುಂದಿನ ಸಾವಿರ ವರ್ಷವೂ ಹೀಗೇ ಹರಿಯುತ್ತಿರಲಿ.

ಕಾಮಲಾಪುರ ಕೆರೆ
ಕಾಮಲಾಪುರ ಕೆರೆ

ಚಿತ್ರ: ಬಿ.ಎಸ್.ಅಡಪ್ಪ

ರಾಯಕಾಲುವೆ
ರಾಯಕಾಲುವೆ

ಚಿತ್ರ: ಬಿ.ಎಸ್.ಅಡಪ್ಪ

ಸಿಂಗನಾಥನಹಳ್ಳಿಯ ಗುಡ್ಡವನ್ನು ಬಳಸಿಕೊಂಡು ಹರಿಯುವ ಕಾಲುವೆ –

ಸಿಂಗನಾಥನಹಳ್ಳಿಯ ಗುಡ್ಡವನ್ನು ಬಳಸಿಕೊಂಡು ಹರಿಯುವ ಕಾಲುವೆ –

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT