ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಪವಿತ್ರ ಗ್ರಂಥವಲ್ಲ

Last Updated 19 ಜನವರಿ 2019, 19:30 IST
ಅಕ್ಷರ ಗಾತ್ರ

‘ಸಂವಿಧಾನವೇ ತಮ್ಮ ಪಾಲಿನ ಧರ್ಮಗ್ರಂಥ’ ಎಂದು ದೇಶದ ಅಧಿಕಾರ ಕೇಂದ್ರದಲ್ಲಿದ್ದವರು ಹೇಳಿದ್ದಾರೆ. ನಂತರ, ಸಂವಿಧಾನದ ಆಶಯಗಳನ್ನು ಉಲ್ಲಂಘಿಸಿದ ಆರೋಪವನ್ನೂ ಎದುರಿಸಿದ್ದಾರೆ. ಹಾಗಾದರೆ, ‘ಧರ್ಮಗ್ರಂಥ’ ಎಂದು ಒಂದೆಡೆ ಹೇಳಿ, ನಂತರ ಅದನ್ನು ಉಲ್ಲಂಘಿಸಿದ್ದು ಎಷ್ಟು ಸರಿ?

ಮೊದಲನೆಯದಾಗಿ, ಭಾರತದ ಸಂವಿಧಾನವನ್ನು ‘ಧರ್ಮಗ್ರಂಥ’, ‘ಪವಿತ್ರ ಗ್ರಂಥ’ ಎಂದು ಕರೆಯುವುದೇ ತಪ್ಪು. ಎರಡನೆಯದಾಗಿ, ಭಾರತದ ಬಹುಸಂಖ್ಯಾತ ಹಿಂದೂ ಸಂಸ್ಕೃತಿಯ ಪಾಲಿಗೆ ‘‍ಪವಿತ್ರ ಗ್ರಂಥ’ ಎಂಬ ಪರಿಕಲ್ಪನೆಯೇ ಹೊರಗಿನಿಂದ ಬಂದಿದ್ದು.

ಧರ್ಮಗ್ರಂಥ ಅಂದರೆ ಸಾಮಾನ್ಯವಾಗಿ ದೇವರ ಮಾತುಗಳು ಅಥವಾ ಆತನ ಉದ್ದೇಶಗಳ ಹೇಳಿಕೆಗಳಿಂದ ಕೂಡಿರುವ ಪುಸ್ತಕ. ಅದನ್ನು ಬದಲಿಸಲು ಮನುಷ್ಯ ಮಾತ್ರರಿಗೆ ಅಧಿಕಾರವಿಲ್ಲ. ಹಾಗಾಗಿಯೇ, ಜುದಾಯಿಸಂ, ಕ್ರೈಸ್ತಮತ ಮತ್ತು ಇಸ್ಲಾಂಗಳಲ್ಲಿ ಮೂಲಭೂತವಾದಿಗಳು ಪವಿತ್ರ ಗ್ರಂಥಗಳಲ್ಲಿ ಹೇಳಿರುವುದನ್ನು ಜನ ಸಾಧ್ಯವಾದಷ್ಟರಮಟ್ಟಿಗೆ ಪಾಲಿಸಬೇಕು ಎಂದು ಬಯಸುತ್ತಾರೆ. ದೇವರ ಮಾತುಗಳು ತಪ್ಪಾಗಲು ಸಾಧ್ಯವಿಲ್ಲ. ಹಾಗಾಗಿಯೇ ಅವುಗಳನ್ನು ಪ್ರಶ್ನಿಸಲೂ ಆಗದು! ಪವಿತ್ರ ಗ್ರಂಥಗಳನ್ನು ಪ್ರಶ್ನಿಸುವವರು ದೇವರನ್ನೇ ಪ್ರಶ್ನೆ ಮಾಡಿದಂತೆ. ಹಾಗಾಗಿ, ಅಂಥವರು ಶಿಕ್ಷೆಗೆ ಗುರಿಯಾಗಬೇಕು. ಬದುಕುವ ಸರಿಯಾದ ಮಾರ್ಗವೆಂದರೆ, ಪವಿತ್ರ ಗ್ರಂಥದಲ್ಲಿ ಹೇಳಿರುವುದನ್ನು ಚಾಚೂ ತಪ್ಪದೆ ಪಾಲಿಸುವುದು. ಹಿಂದೆ ಅಥವಾ ಇಂದು ಪವಿತ್ರ ಗ್ರಂಥಗಳಲ್ಲಿ ಹೇಳಿರುವುದನ್ನು ತುಸುವೂ ತಪ್ಪಿಲ್ಲದೆ ಪಾಲಿಸಲು ಎಲ್ಲರಿಂದಲೂ ಆಗಿಲ್ಲ.

ಭಾರತದ ಸಂವಿಧಾನವು ಓಲ್ಡ್ ಟೆಸ್ಟಾಮೆಂಟ್ (ಹಳೆಯ ಒಡಂಬಡಿಕೆ), ಬೈಬಲ್ ಅಥವಾ ಕುರ್‌ಆನ್‌ಗಿಂತ ತೀರಾ ಭಿನ್ನ. ಸಂವಿಧಾನ ಎಂಬುದು ಪವಿತ್ರ ಅಲ್ಲ. ಅದು ಮಾನವ ಸೃಷ್ಟಿಸಿದ ಗ್ರಂಥ. ತಾನು ಪರಿಪೂರ್ಣ ಎಂದು ಸಂವಿಧಾನ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ಬದಲಿಗೆ, ತಾನು ಅಪರಿಪೂರ್ಣ ಎಂಬುದನ್ನು ಒಪ್ಪಿಕೊಳ್ಳುತ್ತದೆ, ತಾನು ರಾಜಿ ಮಾಡಿಕೊಂಡಿದ್ದೇನೆ ಎಂದು ಹೇಳುತ್ತದೆ. ಹಾಗಾಗಿಯೇ, ತನ್ನನ್ನು ತಿದ್ದುಪಡಿಗೆ ಒಳಪಡಿಸಬಹುದು ಎಂಬ ಅವಕಾಶ ನೀಡುತ್ತದೆ. ಸಂವಿಧಾನ ತಪ್ಪು ಮಾಡಬಹುದು, ಅದು ಕಾಲನ ಜೊತೆ ಹೆಜ್ಜೆ ಹಾಕದೆ ಇರಬಹುದು, ಸಂವಿಧಾನವನ್ನು ಪ್ರಶ್ನಿಸಲೂ ಅವಕಾಶವಿದೆ. ದೇಶದ ಜನ ತಮ್ಮ ಪ್ರತಿನಿಧಿಗಳ ಮೂಲಕ ಸಂವಿಧಾನವನ್ನು ತಿದ್ದಬಹುದು– ಮೂಲ ಸ್ವರೂ‍ಪವೊಂದನ್ನು ಹೊರತುಪಡಿಸಿ. ಆ ತಿದ್ದುಪಡಿಯನ್ನು ದೇಶದ ಸುಪ್ರೀಂ ಕೋರ್ಟ್‌ ವ್ಯಾಖ್ಯಾನಕ್ಕೆ ಒಳಪಡಿಸಬಹುದು. ಸರಿಯಾದ ಜೀವನ ವಿಧಾನ ಅಂದರೆ ಇದು ಎಂದು ಸಂವಿಧಾನ ಹೇಳುವುದಿಲ್ಲ. ಆದರೆ, ನಮಗಾಗಿ ಅದು ಹಕ್ಕುಗಳನ್ನು ಕೊಡುತ್ತದೆ, ಜವಾಬ್ದಾರಿಗಳನ್ನು ನಿಗದಿ ಮಾಡುತ್ತದೆ. ಶಕ್ತಿಯನ್ನು ಒಬ್ಬ ದೇವನಲ್ಲಿ ಇರಿಸುವ ಬದಲು ಸಂವಿಧಾನವು ಶಕ್ತಿಯನ್ನು ತಪ್ಪು ಮಾಡಬಹುದಾದ ಮನುಷ್ಯರ ಕೈಯಲ್ಲಿ ಹಂಚಿಕೆ ಮಾಡುತ್ತದೆ. ಸಂವಿಧಾನ ಎಂಬುದು ತರ್ಕ ಹಾಗೂ ಸಕಾರಣಗಳಿಂದ ಆಗಿರುವ ಸೃಷ್ಟಿ.

ಸಿಖ್ ಧರ್ಮವನ್ನು ಹೊರತುಪಡಿಸಿದರೆ, ಭಾರತದಲ್ಲಿ ಹುಟ್ಟಿದ ಯಾವ ಧರ್ಮವೂ ‘ಪವಿತ್ರ ಗ್ರಂಥ’ ಹೊಂದಿಲ್ಲ. ಹಿಂದೂಗಳು ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಜೊತೆ ಮುಖಾಮುಖಿ ಆದ ನಂತರವಷ್ಟೇ ತಮಗೆ ‘ಪವಿತ್ರ ಗ್ರಂಥ’ ಬೇಕು ಎಂದು ಅವರಿಗೆ ಅನಿಸಿತು. ಭಗವದ್ಗೀತೆಯು ಹಿಂದೂಗಳ ಪವಿತ್ರ ಗ್ರಂಥ ಎಂದು ಕೆಲವರಿಗೆ ಅನಿಸಿತು. ‘ಉಪನಿಷತ್ತುಗಳೇ ಭಾರತದ ಬೈಬಲ್‌ ಇದ್ದಂತೆ. ಹೊಸ ಒಡಂಬಡಿಕೆಗೆ ಇರುವ ಸ್ಥಾನವೇ ಇವುಗಳಿಗೂ ಇದೆ’ ಎಂದು ಸ್ವಾಮಿ ವಿವೇಕಾನಂದರು ಘೋಷಿಸಿದರು. ಭಾರತದಲ್ಲಿ ಇನ್ನು ಕೆಲವರು ವೇದಗಳಿಗೆ ಪವಿತ್ರ ಗ್ರಂಥದ ಸ್ಥಾನ ನೀಡಿದರು. ಹೀಗಿದ್ದರೂ, ಈ ಯಾವುದೇ ಗ್ರಂಥಗಳ ಒಂದೇ ಒಂದು ಸಾಲು ಓದದೆಯೂ ಶ್ರದ್ಧಾವಂತ ಹಿಂದೂ ಆಗಿರಲು ಸಾಧ್ಯವಿದೆ. ವಾಸ್ತವದಲ್ಲಿ, ಹಿಂದೂಗಳು ತಮ್ಮ ಧಾರ್ಮಿಕ ಕೃತಿಗಳಲ್ಲಿ ಇರುವ ಚಿಕ್ಕ– ಪುಟ್ಟ ಅಂಶಗಳನ್ನು ಹೊರತುಪಡಿಸಿದರೆ ಇನ್ನುಳಿದಿರುವುದನ್ನು ಓದದೆ ಇರುವ ಸಾಧ್ಯತೆಯೇ ಹೆಚ್ಚು. ಭಾರತದ ಮಟ್ಟಿಗೆ ಒಳ್ಳೆಯ ಜೀವನ ಸಾಗಿಸುವುದು ಹೇಗೆ, ಪ್ರಾರ್ಥನೆ ಮಾಡುವುದು ಹೇಗೆ, ಯಾವ ರೀತಿಯ ಧಾರ್ಮಿಕ ಆಚರಣೆಗಳನ್ನು ಪಾಲಿಸಬೇಕು, ಯಾವುದು ತಪ್ಪು, ಯಾವುದು ಸರಿ ಎಂಬುದೆಲ್ಲ ಹತ್ತು ಹಲವು ರೀತಿಯ ಸಂಪ್ರದಾಯಗಳ ಮೂಲಕ, ಆಚರಣೆಗಳ ಮೂಲಕ ಮತ್ತು ಸಾಮಾಜಿಕ ಕಟ್ಟುಪಾಡುಗಳ ಮೂಲಕ ಜನರಿಂದ ಜನರಿಗೆ ಗೊತ್ತಾಗುತ್ತದೆಯೇ ವಿನಾ ಒಂದು ಪುಸ್ತಕದಿಂದ ಅವೆಲ್ಲ ಗೊತ್ತಾಗುವಂಥದ್ದಲ್ಲ. ಈ ವಿಚಾರದಲ್ಲಿ ಸಿಖ್ಖರು ಮಾತ್ರು ತುಸು ಭಿನ್ನ. ಅವರು ಗ್ರಂಥಸಾಹಿಬ್‌ಅನ್ನು ತಮ್ಮ ಗುರು ಎಂದು ಪರಿಗಣಿಸುತ್ತಾರೆ. ಭಾರತ ಉಪಖಂಡಕ್ಕೆ ಇಸ್ಲಾಂ ಪ್ರವೇಶಿಸಿದ ಶತಮಾನಗಳ ನಂತರ ಸಿಖ್ ಧರ್ಮ ಹುಟ್ಟಿದ್ದು ಇದಕ್ಕೆ ಕಾರಣವಿರಬಹುದು.

ಒಟ್ಟಾರೆಯಾಗಿ ಹೇಳುವುದಿದ್ದರೆ, ನಾವು ಬಹುತೇಕ ಭಾರತೀಯರು ‘ಪವಿತ್ರ ಗ್ರಂಥ’ದ ವಿಚಾರದಲ್ಲಿ ಬಿಗಿಯಾದ ನಿಲುವನ್ನೇನೂ ಹೊಂದಿಲ್ಲ. ಇದರ ಪರಿಣಾಮವಾಗಿ, ಸಂವಿಧಾನದ ಬಗ್ಗೆಯೂ ನಾವು ತುಸು ಸಡಿಲ ನಿಲುವನ್ನೇ ಹೊಂದಿದ್ದೇವೆ. ಸಂವಿಧಾನ ಎಂಬ ಗ್ರಂಥ ಮತ್ತು ಅದು ಏನು ಹೇಳುತ್ತದೆ ಎನ್ನುವುದನ್ನು ನಾವು ಗೌರವಿಸುತ್ತೇವೆ. ಆದರೆ ಬೇರೆಯವರೆಲ್ಲ ಏನು ಮಾಡುತ್ತಾರೋ ನಾವೂ ಅದನ್ನೇ ಮಾಡುತ್ತೇವೆ.

ನಾವು ಮಹಿಳೆಯರನ್ನು ದೇವತೆ ಎಂದು ಸಾಂಕೇತಿಕವಾಗಿ ಗೌರವಿಸಿದಂತೆ, ಅವರನ್ನು ಸಾಂಕೇತಿಕವಾಗಿ ರಾಜಕೀಯ ಹುದ್ದೆಗಳಿಗೆ ಚುನಾಯಿಸಿ ದಿನನಿತ್ಯದ ಬದುಕಿನಲ್ಲಿ ಅವರ ಮೇಲೆ ದಬ್ಬಾಳಿಕೆ ನಡೆಸುವಂತೆ, ಸಂವಿಧಾನವನ್ನು ಕೂಡ ನಾವು ಸಾಂಕೇತಿಕವಾಗಿ ಮಾತ್ರ ಗೌರವಿಸಿ ಆಚರಣೆಯಲ್ಲಿ ಅದಕ್ಕೆ ಅಗೌರವ ತೋರುತ್ತೇವೆ. ಅಲ್ಲದೆ, ಮಹತ್ವವನ್ನೇ ಅರಿಯದೆ ನಾವು ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ಆಚರಿಸುತ್ತೇವೆ. ಗಣರಾಜ್ಯೋತ್ಸವ ಎಂಬುದು ನಾವು ನಮ್ಮ ರಕ್ಷಣಾ ಪಡೆಗಳಿಗೆ ಗೌರವ ತೋರಿಸುವ ದಿನವೊಂದೇ ಅಲ್ಲ, ಅದು ನಮ್ಮ ಸಂವಿಧಾನ ಜಾರಿಗೆ ಬಂದ ಸಂಭ್ರಮದ ದಿನ.

ಪವಿತ್ರ ಗ್ರಂಥವನ್ನು ಅದರ ಅನುಯಾಯಿಗಳು ಪೂಜಿಸಬೇಕಾಗುತ್ತದೆ. ಆದರೆ ಸಂವಿಧಾನವನ್ನು ಪ್ರಜೆಗಳು ಗೌರವಿಸಬೇಕಾಗುತ್ತದೆ. ವಾಸ್ತವದಲ್ಲಿ ಸಂವಿಧಾನವನ್ನು ಪೂಜಿಸುವುದು ಸಂವಿಧಾನದ ಆಶಯಕ್ಕೇ ವಿರುದ್ಧವಾದ ಸಂಗತಿ!

ಸಂವಿಧಾನವನ್ನು ಗೌರವಿಸುವುದು ಅಂದರೆ, ಅದರಲ್ಲಿನ ಆಶಯಗಳನ್ನು ಕಾರ್ಯರೂಪಕ್ಕೆ ತರುವುದು. ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರು ತಮ್ಮ ಕರ್ತವ್ಯ ಪಾಲಿಸುವುದು, ಮಿತಿಗಳನ್ನು ಮೀರದಿರುವುದು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT