ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸತ್ಯಾಗ್ರಹ: ಸಾಕ್ಷ್ಯಚಿತ್ರದ ಹರವು

Last Updated 8 ಏಪ್ರಿಲ್ 2023, 22:15 IST
ಅಕ್ಷರ ಗಾತ್ರ

ಜೂ ನ್‌ 5, 2020–ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯ ಹೊರಗೂ ಮಾರಾಟ ಮಾಡಲು ಅವಕಾಶ ನೀಡುವ, ಕೃಷಿಯಲ್ಲಿ ಕಾರ್ಪೊರೇಟ್ ಕಂಪನಿಗಳ ಹೂಡಿಕೆಗೂ ಅವಕಾಶ ನೀಡುವ ನೂತನ ಕೃಷಿ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮೂರು ಸುಗ್ರೀವಾಜ್ಞೆಗಳನ್ನು ಹೊರಡಿಸಿದ ದಿನ. ಅಲ್ಲಿಂದಲೇ ದೇಶದಲ್ಲಿ ದೊಡ್ಡ ರೈತ ಹೋರಾಟದ ಕಿಡಿಯೊಂದು ಹೊತ್ತಿಕೊಂಡಿದ್ದು.

2020ರ ಸೆಪ್ಟೆಂಬರ್‌ನಲ್ಲಿ ಈ ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ದೊರೆತು, ರಾಷ್ಟ್ರಪತಿಗಳ ಅಂಕಿತವೂ ಸಿಕ್ಕಿತು. ಈ ಕಾಯ್ದೆಗಳು ಕೃಷಿಗೆ, ರೈತರಿಗೆ ಮಾರಕ ಮತ್ತು ಕಾರ್ಪೊರೇಟ್‌ ಕಂಪನಿಗಳ ಪರವಾಗಿವೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಯಾವ ಆಕ್ಷೇಪಕ್ಕೂ ತಲೆಕೆಡಿಸಿಕೊಳ್ಳದೇ ನೂತನ ಕೃಷಿ ನೀತಿ ಜಾರಿಗೆ ತರಲು ಹೆಜ್ಜೆ ಇಟ್ಟಿತು. ಇದರ ಪರಿಣಾಮವೇ ಬಳಿಕ ಪಂಜಾಬ್‌ನಿಂದ ಪ್ರಾರಂಭಿಸಿ ರಾಷ್ಟ್ರ ರಾಜಧಾನಿವರೆಗೆ ಹಬ್ಬಿದ ರೈತ ಹೋರಾಟ. ಇದರ ಹೆಜ್ಜೆಗುರುತನ್ನು ದಾಖಲಿಸುವ ಯತ್ನವೇ ಕೇಸರಿ ಹರವೂ ಅವರ ‘ಕಿಸಾನ್‌ ಸತ್ಯಾಗ್ರಹ’ ಸಾಕ್ಷ್ಯಚಿತ್ರ.

‘ಹಲವು ದಶಕಗಳಿಂದ ಪರಿಸರ ಮತ್ತು ಸುಸ್ಥಿರ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡು, ಅಧ್ಯಯನ ಮಾಡುತ್ತ ಬಂದಿರುವೆ. ನನ್ನ ಸುಸ್ಥಿರ ಕೃಷಿ ಮತ್ತು ಪರಿಸರದ ಅಧ್ಯಯನ ಭಾಗವಾಗಿ ಕೃಷಿ ಕಾಯ್ದೆಯ ವಿಷಯ ಗಮನ ಸೆಳೆಯಿತು. ಕಾಯ್ದೆ ಏನು ಹೇಳಲು ಹೊರಟಿದೆ? ಇದರ ಸಾಧಕ–ಬಾಧಕಗಳೇನು? ಎಂದು ಹುಡುಕುತ್ತ ಹೊರಟೆ. ಪಂಜಾಬ್‌ನಲ್ಲಿ ಒಂದಷ್ಟು ಸಂಘಟನೆಗಳು ಇದರ ಕುರಿತು ಜಾಗೃತವಾಗಿದ್ದು ಕಣ್ಣಿಗೆ ಬಿತ್ತು. ಅಲ್ಲಿನ 30–40 ಸಂಘಟನೆಗಳು ಒಟ್ಟಾಗಿ ಹೋರಾಡಲು ನಿರ್ಧರಿಸಿದವು. ಕಾಯ್ದೆ ಏನು ಹೇಳುತ್ತದೆ ಎಂಬುದನ್ನು ಪಂಜಾಬಿ ಭಾಷೆಗೆ ತರ್ಜುಮೆ ಮಾಡಿಕೊಂಡು, ಅಲ್ಲಿನ ರೈತ ಸಂಘಟನೆಗಳು ವಿಚಾರವನ್ನು ಪ್ರತಿ ಹಳ್ಳಿಗೂ ತೆಗೆದುಕೊಂಡು ಹೋದರು. ಬಳಿಕ ಹೋರಾಟ ರೂಪುಗೊಂಡಿತು’ ಎಂದು ತಮ್ಮ ಸಾಕ್ಷ್ಯಚಿತ್ರದ ಪಯಣ ಪ್ರಾರಂಭವಾದ ಬಗೆ ವಿವರಿಸಿದರು ಹರವೂ.

ಏನಿದು ಸಾಕ್ಷ್ಯಚಿತ್ರ?

‘ಕಿಸಾನ್‌ ಸತ್ಯಾಗ್ರಹ’ ದೇಶದಲ್ಲಿ ಇತ್ತೀಚೆಗೆ ನಡೆದ ಬೃಹತ್‌ ರೈತ ಹೋರಾಟವನ್ನು ದಾಖಲಿಸುವ ಕನ್ನಡ ಮತ್ತು ಆಂಗ್ಲಭಾಷೆಯ ಸಾಕ್ಷ್ಯಚಿತ್ರ. 90 ನಿಮಿಷ ಅವಧಿಯ ಈ ಚಿತ್ರದಲ್ಲಿ 2020ರ ನವೆಂಬರ್‌ 26ರಿಂದ ದೆಹಲಿಯಲ್ಲಿ ಪ್ರಾರಂಭವಾದ ರೈತ ಹೋರಾಟದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಜತೆಗೆ ಕೃಷಿ ಕಾಯ್ದೆಯ ಸಾಧಕ–ಬಾಧಕಗಳನ್ನು ಅವಲೋಕಿಸುವ, ಈ ಬಗ್ಗೆ ರೈತರ ಪ್ರತಿಕ್ರಿಯೆ ಪಡೆಯುವ ಯತ್ನವಿದೆ. ದೃಶ್ಯಗಳಿಗೆ ಅಲ್ಲಲ್ಲಿ ವಾಯ್ಸ್‌ ಓವರ್‌ ಬಳಸಲಾಗಿದೆ. ನಿರೂಪಣೆ ಶೈಲಿಯ ಸಾಕ್ಷ್ಯಚಿತ್ರವಿದು.

‘ಬಿಜೆಪಿ ವಿರುದ್ಧದ ಅಥವಾ ಕಾಂಗ್ರೆಸ್‌ ಪರವಾದ ಸಾಕ್ಷ್ಯಚಿತ್ರ ಇದಲ್ಲ. ಕೃಷಿಯನ್ನು ಕಾರ್ಪೊರೇಟ್‌ ಜಗತ್ತಿನ ಕೈಗೆ ಕೊಡುವುದು ಅಪಾಯಕಾರಿ. ಯುಪಿಎ ಆಡಳಿತವಿದ್ದಾಗ ಈ ನಿಟ್ಟಿನಲ್ಲಿ ಮಾಡಿರುವ ತಪ್ಪನ್ನೂ ಇದರಲ್ಲಿ ಉಲ್ಲೇಖಿಸಲಾಗಿದೆ. ಮಾಜಿ ಪ್ರಧಾನಿ ದಿವಂಗತ ಪಿ.ವಿ.ನರಸಿಂಹರಾವ್‌ ಗ್ಯಾಟ್‌ ಒಪ್ಪಂದಕ್ಕೆ ಸಹಿ ಹಾಕಿದಾಗಲೇ ಕೃಷಿ ಕ್ಷೇತ್ರಕ್ಕೆ ದೊಡ್ಡ ಏಟು ಬಿದ್ದಿರುವುದನ್ನು ಹೇಳಲಾಗಿದೆ. ಸುಸ್ಥಿರ ಕೃಷಿ ಎಂದಿಗೂ ಪರಿಸರಕ್ಕೆ ಪೂರಕ. ಕೃಷಿ ಚಟುವಟಿಕೆ ಉದ್ಯಮವಾದರೆ ಭೂಮಿಯನ್ನು ಶೋಷಿಸಿ ವಹಿವಾಟು ನಡೆಸಿದಂತಾಗುತ್ತದೆ.

ಗುತ್ತಿಗೆ ಆಧಾರಿತ ಕೃಷಿಯಲ್ಲಿ ರೈತ ಮಾಲೀಕನಾದರೂ, ಗುತ್ತಿಗೆ ನೀಡುವ ಕಂಪನಿ ಹೇಳಿದ ರೀತಿಯಲ್ಲೇ ಉತ್ತಬೇಕು. ಕಂಪನಿ ಹೇಳಿದ ಬೀಜವನ್ನೇ ಬಿತ್ತಬೇಕು. ನಾವು ಬೆಳೆಯುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ. ರೈತರು ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸರಬಹುದು. ಆದರೆ ಕಾಯ್ದೆ ಹಿಂದಿನ ವಿಷಯ ಎಂದಿಗೂ ಪ್ರಸ್ತುತ ಮತ್ತು ಅಧ್ಯಯನಯೋಗ್ಯ. ಹೀಗಾಗಿ ಇಡೀ ಹೋರಾಟವನ್ನು ದಾಖಲಿಸಬೇಕೆಂದು ನಿರ್ಧರಿಸಿದೆವು’ ಎನ್ನುತ್ತಾರೆ ನಿರ್ದೇಶಕರು.

ಯಾವಾಗ ಪ್ರಾರಂಭವಾಯಿತು?

ಇಂದು ಕೃಷಿ ಮಾಡುವವರ ಸಂಖ್ಯೆ ಕುಸಿದಿದೆ. ಗುತ್ತಿಗೆ ಆಧಾರದಲ್ಲಿಯೋ, ಕಾರ್ಪೊರೇಟ್‌ ಕಂಪನಿಗಳಿಂದಲೂ ಕೃಷಿ ಉಳಿಯುತ್ತದೆ ಎಂಬುದು ದೊಡ್ಡ ಮೂರ್ಖತನ. ಈ ಮೂರು ಕಾಯ್ದೆಗಳನ್ನು ತರುವುದಕ್ಕೆ ಮುಂಚೆಯೇ ಕೃಷಿ ಸಾರ್ವಭೌಮತ್ವವನ್ನು ಉಳಿಸಿಕೊಳ್ಳುವ ಯತ್ನ ನಡೆದಿತ್ತು. 1980–90ರ ದಶಕದಲ್ಲಿ
ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ರಾಜ್ಯ ರೈತ ಸಂಘವು ದೊಡ್ಡ ಕಂಪನಿಗಳು ಕೃಷಿ ವಹಿವಾಟಿನಲ್ಲಿ ತೊಡಗಿಸಿಕೊಳ್ಳುವುದರ ವಿರುದ್ಧ, ಬೀಜ ಮಾರಾಟ ಕಂಪನಿಗಳ ವಿರುದ್ಧ ಹೋರಾಟ ಮಾಡಿತ್ತು. ಮಹೇಂದ್ರ ಸಿಂಗ್‌ ಟಿಕಾಯತ್‌, ಮೇಧಾ ಪಾಟ್ಕರ್‌ ಮುಂತಾದವರು ಬೆಂಗಳೂರಿನ ಸಮಾವೇಶದಲ್ಲಿ ಭಾಗವಹಿಸಿದ್ದರು. ಇವೆಲ್ಲ ಕೃಷಿಯನ್ನು ಉಳಿಸಿಕೊಳ್ಳುವ ಯತ್ನವೇ ಆಗಿದೆ ಎಂಬುದು ಹರವು ಅವರ ಅಭಿಮತ.

‘ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ–ಸೌಲಭ್ಯ) ಕಾಯ್ದೆ ಅಥವಾ ಕೃಷಿ ಮಾರುಕಟ್ಟೆ ಕಾಯ್ದೆ, ಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳ (ಸಬಲೀಕರಣ ಮತ್ತು ರಕ್ಷಣೆ) ಕಾಯ್ದೆ, ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ ಕೇಂದ್ರ ಸರ್ಕಾರ ರೂಪಿಸಿದ್ದ ನೂತನ ಕೃಷಿ ನೀತಿಯ ಮುಖ್ಯಾಂಶಗಳು. ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಇದಕ್ಕೆ ಪೂರಕ ಚಟುವಟಿಕೆ ಹಿಂದಿಯೇ ನಡೆದಿತ್ತು. ಕರ್ನಾಟಕದಲ್ಲಿ ಬಿ.ಎಸ್‌.ಯಡಿಯೂರಪ್ಪ ಆಡಳಿತದಲ್ಲಿ ಭೂ ಸುಧಾರಣಾ ಕಾಯ್ದೆಗೆ ಹಾಗೂ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಬಿಜೆಪಿ ಆಡಳಿತದ ಇತರ ರಾಜ್ಯಗಳಲ್ಲಿಯೂ ಈ ರೀತಿ ತಿದ್ದುಪಡಿ ನಡೆದಿದೆ. ಈ ಎರಡು ಕಾಯ್ದೆಗಳು ಬಹಳ ಅಪಾಯಕಾರಿ. ಇದನ್ನು ವಿರೋಧಿಸಿ ಎಂದು ಕರ್ನಾಟಕದಲ್ಲಿ ನಾವು ಹಲವರು ರೈತ ಸಂಘಗಳಿಗೆ ಕೇಳಿಕೊಂಡಿದ್ದೆವು. ಈ ರೈತ ಸಂಘಟನೆಗಳು ಸಾಂಕೇತಿಕ ಹೋರಾಟ ನಡೆಸಿದವೇ ಹೊರತು ಗಟ್ಟಿಯಾದ ಹೋರಾಟ ರೂಪಿಸಲಿಲ್ಲ. ಇವೆಲ್ಲ ದೆಹಲಿಯಲ್ಲಿ ಕುಳಿತವರು ಹೇಳಿ ಮಾಡಿಸಿದ ತಿದ್ದುಪಡಿ’ ಎನ್ನುತ್ತಾರೆ ಅವರು.

ಪಂಜಾಬ್‌ನಲ್ಲಿ ನೂತನ ಕೃಷಿ ನೀತಿ ವಿರೋಧಿಸಿ ಪ್ರಾರಂಭವಾದ ಹೋರಾಟ ಹರಿಯಾಣ ಮತ್ತು ಇತರ ಉತ್ತರದ ರಾಜ್ಯಗಳಿಗೂ ವ್ಯಾಪಿಸಿತು. 2020ರ ನವೆಂಬರ್‌ 26 ರಂದು ಈ ರಾಜ್ಯಗಳ ರೈತರು ದೆಹಲಿಗೆ ಮುತ್ತಿಗೆ ಹಾಕಿದರು. ಆಗ ಕೇಸರಿ ಹರವೂ ಅವರು ತಾವು ದೆಹಲಿಗೆ ಹೊರಡಲು ನಿರ್ಧರಿಸಿದರು. ನ.29ರಂದು ಅವರು ತಮ್ಮ ಚಿತ್ರತಂಡದೊಂದಿಗೆ ಹೋರಾಟದ ಸ್ಥಳ ತಲುಪಿದರು.

‘ನಮ್ಮ ಕ್ಯಾಮೆರಾಮನ್‌ ಗೊತ್ತು ಮಾಡಿಕೊಂಡು ಈ ಹೋರಾಟ ದಾಖಲಿಸಬೇಕೆಂದು ಹೊರಟೆ. ಕೈಯಲ್ಲಿ ದುಡ್ಡಿರಲಿಲ್ಲ. ₹50 ಸಾವಿರ ಸಾಲ ಮಾಡಿಕೊಂಡು ದೆಹಲಿಗೆ ಹೋದೆ. ಸುಮಾರು 12 ದಿನಗಳ ಕಾಲ ಅಲ್ಲಿಯೇ ತಂಗಿದ್ದು ಹೋರಾಟದ ದೃಶ್ಯಗಳನ್ನು ಚಿತ್ರೀಕರಣ ಮಾಡಿದೆವು. ನಂತರ ನಡೆದಿದ್ದು ಗೊತ್ತಿದೆ. 2021ರ ಜನವರಿ 26 ರಂದು ರೈತರು ಟ್ರ್ಯಾಕ್ಟರ್‌ ಪರೇಡ್‌ ಆಯೋಜಿಸಿದರು. ಅದನ್ನೂ ದಾಖಲಿಸಲು ಮತ್ತೆ ದೆಹಲಿಗೆ ತೆರಳಿದೆವು. ಬಳಿಕ ಪಂಜಾಬ್‌, ಹರಿಯಾಣ, ಉತ್ತರಾಖಂಡ ರಾಜ್ಯಗಳಿಗೂ ಭೇಟಿ ನೀಡಿ ಚಿತ್ರೀಕರಣ ನಡೆಸಿದೆವು’ ಎಂದು ಹರವೂ ಅನುಭವ ಹಂಚಿಕೊಂಡರು.

ಮೊದಲ ಸಲದ ಚಿತ್ರೀಕರಣದ ನಂತರ ಫಂಡಿಂಗ್‌ ಮೂಲಕ ಸಾಕ್ಷ್ಯಚಿತ್ರ ನಿರ್ಮಾಣಕ್ಕೆ ಹರವೂ ಕೇಸರಿ ಮುಂದಾದರು. ಒಂದಷ್ಟು ಸ್ನೇಹಿತರು ಅವರ ಬೆಂಬಲಕ್ಕೆ ನಿಂತರು. ಹೋರಾಟದ ಹೊರತಾಗಿ ಇದಕ್ಕೆ ಬೇಕಾದ ಪೂರಕ ಅಂಶಗಳನ್ನು ಚಿತ್ರೀಕರಿಸಿ ಸಾಕ್ಷ್ಯಚಿತ್ರ ಸಿದ್ಧಪಡಿಸಿದರು.

ಚಿತ್ರವನ್ನು ಎಲ್ಲಿ ನೋಡಬಹುದು?

2022ರ ಅ.9ರಂದು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಸಾಕ್ಷ್ಯಚಿತ್ರದ ಮೊದಲ ಪ್ರದರ್ಶನ ಕಂಡಿತ್ತು. 2023ರ ಮಾ.23, 25ರಂದು ಧಾರವಾಡ ಮತ್ತು ಗಜೇಂದ್ರಗಡದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿದೆ. ಇಲ್ಲಿವರೆಗೆ ಒಟ್ಟು 40 ಪ್ರದರ್ಶನಗಳಾಗಿವೆ. ಐದು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದ್ದು, ಎರಡು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಬಂದಿದೆ. ಇಸ್ರೇಲ್‌ನ ಚಿತ್ರೋತ್ಸವವೊಂದರಲ್ಲಿ ಪ‍್ರಶಸ್ತಿ ಬಂದಿದೆ. ‘14ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೂ ಈ ಸಾಕ್ಷ್ಯಚಿತ್ರ ಕಳುಹಿಸಲು ಪ್ರಯತ್ನಿಸಿದ್ದೆ. ಆದರೆ ಈ ಸಲ ಸಾಕ್ಷ್ಯಚಿತ್ರವಿಲ್ಲ ಎಂದು ಇದನ್ನು ಪರಿಗಣಿಸಲಿಲ್ಲ. ನಂತರ ನೋಡಿದರೆ 2–3 ಬೇರೆ ಸಾಕ್ಷ್ಯಚಿತ್ರಗಳು ಪ್ರದರ್ಶನಗೊಂಡಿವೆ. ಈ ತಾರತಮ್ಯ ನೋಡಿ ಬಹಳ ಬೇಸರವಾಯಿತು. ಚಿತ್ರವನ್ನು ಒಟಿಟಿಗೆ ತರುವ ಯತ್ನ ನಡೆದಿದೆ. ₹99 ನೀಡಿದರೆ https://filmshow.co.in ತಾಣದಲ್ಲಿ ಚಿತ್ರ ವೀಕ್ಷಿಸಬಹುದು’ ಎಂದು ಕೇಸರಿ ಹರವೂ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT