ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲತಡಿಯಲ್ಲಿ ಯಕ್ಷಬೊಂಬೆಯ ಮೋಡಿಯಾಟ

Published 25 ಜೂನ್ 2023, 0:33 IST
Last Updated 25 ಜೂನ್ 2023, 0:33 IST
ಅಕ್ಷರ ಗಾತ್ರ

ಪುಟ್ಟ ಗೂಡಿನಂತಹ ವೇದಿಕೆಯ ಮೇಲಿನ ಪರದೆ ಸರಿಯುತ್ತಿದ್ದಂತೆಯೇ ಚೆಂಡೆ, ಮದ್ದಳೆ, ಭಾಗವತಿಕೆಯ ಹಿಮ್ಮೇಳದ ಸುಶ್ರಾವ್ಯ ಧ್ವನಿ ಮೊಳಗಲಾರಂಭಿಸುತ್ತದೆ. ಆಗ ಪ್ರತ್ಯಕ್ಷವಾಗುವ ಯಕ್ಷಗಾನದ ಬೊಂಬೆಗಳು, ಸೂತ್ರಧಾರರ ಆಣತಿಯಂತೆ ಅಭಿನಯದಲ್ಲಿ ತೊಡಗುತ್ತವೆ. ನಿರ್ಜೀವ ಬೊಂಬೆಗಳಲ್ಲಿ ಕ್ಷಣಾರ್ಧದಲ್ಲೇ ಜೀವಕಳೆ. ಸೂತ್ರಧಾರರ ಕೈಚಳಕದಲ್ಲಿ ಮೇಳೈಸುವ ದೃಶ್ಯಪ್ರಧಾನವಾದ ಈ ಬೊಂಬೆಯಾಟವು ವೀಕ್ಷಕರನ್ನು ಭಾವಯಾನಕ್ಕೆ ಕೊಂಡೊಯ್ಯುತ್ತದೆ.

ಕಟ್ಟಿಗೆಯ ಈ ಬೊಂಬೆಗಳು, ವಿಶಿಷ್ಟ ಅಲಂಕಾರದಲ್ಲಿ ಕಂಗೊಳಿಸುವುದಷ್ಟೇ ಅಲ್ಲ, ಕೃಷ್ಣ, ಅಸುರನ ವಧೆ, ರಾಮ ಮತ್ತು ರಾವಣರ ಮಧ್ಯದ ಕದನ... ಹೀಗೆ ಯಕ್ಷಗಾನದ ವಿವಿಧ ಪ್ರಸಂಗಗಳ ಪ್ರದರ್ಶನದಲ್ಲಿ ಮನುಷ್ಯ ಪಾತ್ರಧಾರಿಯಂತೆ ‘ನೈಜತೆಯ ಪಾತ್ರ’ ನಿರ್ವಹಿಸುತ್ತವೆ.

ಕೇರಳದ ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ 1981ರಿಂದಲೇ ಈ ಬೊಂಬೆಯಾಟದ ಕಲೆ ಪ್ರದರ್ಶನ ಮತ್ತು ಈ ಕಲೆಯ ಉಳಿವಿಗೆ ಶ್ರಮಿಸುತ್ತಿದೆ. ತೆಂಕುತಿಟ್ಟು ಯಕ್ಷಗಾನ ಶೈಲಿಯಲ್ಲಿ ಪ್ರದರ್ಶನ ನೀಡುವ ಏಕೈಕ ಬೊಂಬೆಯಾಟದ ಸಂಘ ಇದು. ಬೆಡಗುತಿಟ್ಟು ಯಕ್ಷಗಾನ ಶೈಲಿಯಲ್ಲಿ ಬೊಂಬೆಯಾಟ ಪ್ರದರ್ಶಿಸುವ ಸಂಘ ಉಡುಪಿ ಜಿಲ್ಲೆ ಉಪ್ಪಿನಕುದ್ರುವಿನಲ್ಲಿ ಇದೆ. ಅದರ ಹೆಸರು ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ. ಕೆಲ ವರ್ಷಗಳ ಹಿಂದೆ ಬೆಡಗುತಿಟ್ಟು ಮತ್ತು ತೆಂಕುತಿಟ್ಟು ಶೈಲಿಯ ಯಕ್ಷಗಾನದ ಬೊಂಬೆಯಾಟ ಪ್ರದರ್ಶಿಸುವ ತಲಾ 30ಕ್ಕೂ ಹೆಚ್ಚು ಸಂಘಗಳು ಇದ್ದವು.

ಯಕ್ಷಬೊಂಬೆಗಳನ್ನು ನೋಡುವುದೇ ಬಲು ಚಂದ. ಕೃಷ್ಣ, ಸತ್ಯಭಾಮೆ, ಗಣಪತಿ, ದೇವಿ, ರಾಕ್ಷಸ, ಗರುಡ, ಹನುಮಂತ, ದೇವೇಂದ್ರ, ಋಷಿಗಳು, ಭೂತಗಳು, ಶೂರ್ಪನಖಿ... ಹೀಗೆ ಯಕ್ಷಗಾನದ ಕಥಾ ಪ್ರಸಂಗಗಳಲ್ಲಿ ಬರುವ ಪ್ರತಿಯೊಂದು ಪಾತ್ರದ ಬೊಂಬೆಯೂ ಇರುತ್ತದೆ.

ಕಾಸರಗೋಡಿನ ಪಿಲಿಕುಂಜೆಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ‘ಯಕ್ಷಬೊಂಬೆ ಮನೆ’ ಯಲ್ಲಿ ಯಕ್ಷಗೊಂಬೆಗಳೊಂದಿಗೆ ರಮೇಶ್ ಕೆ.ವಿ.
 ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಕಾಸರಗೋಡಿನ ಪಿಲಿಕುಂಜೆಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ‘ಯಕ್ಷಬೊಂಬೆ ಮನೆ’ ಯಲ್ಲಿ ಯಕ್ಷಗೊಂಬೆಗಳೊಂದಿಗೆ ರಮೇಶ್ ಕೆ.ವಿ.  ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದವರು ಒಂದು ಪ್ರಸಂಗದಲ್ಲಿ 30ರಿಂದ 35 ಬೊಂಬೆಗಳನ್ನು ಬಳಸುತ್ತಾರೆ. ಒಂದು ಪ್ರದರ್ಶನ ನೀಡಲು ಸೂತ್ರಧಾರರು ಸೇರಿ ಏಳು ಜನರ ತಂಡ ಇರುತ್ತದೆ. ಯಕ್ಷಗಾನದ ರೀತಿಯಲ್ಲಿ ಹಿಂದೆ ಈ ಬೊಂಬೆಯಾಟದಲ್ಲೂ ಹಿಮ್ಮೇಳ ಬಳಸಲಾಗುತ್ತಿತ್ತು. ಭಾಗವತರು, ಚೆಂಡೆ– ಮದ್ದಳೆಯವರು ಸೇರಿ 20ರಷ್ಟು ಕಲಾವಿದರು ಇರುತ್ತಿದ್ದರು. ಆದರೆ, ಕಲಾವಿದರ ಕೊರತೆಯ ಕಾರಣ ಹಿಮ್ಮೇಳದ ಬಳಕೆ ನಿಲ್ಲಿಸಲಾಗಿದೆ. ಧ್ವನಿ ಮುದ್ರಿಕೆಯನ್ನು ಬಳಸಿ ಪ್ರದರ್ಶನ ನೀಡಲಾಗುತ್ತಿದೆ.

‘ಬೊಂಬೆಯಾಟಕ್ಕೂ ಈಗ ಕಾಲಮಿತಿ ಬಂದಿದೆ. ಹಿಂದೆ ಪ್ರದರ್ಶನದ ಅವಧಿ ಎರಡೂವರೆ ಗಂಟೆ ಇತ್ತು. ಜನರಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ ಒಂದು ಗಂಟೆಯ ಕಾಲಮಿತಿಯಲ್ಲಿ ಪ್ರದರ್ಶನ ನೀಡುತ್ತಿದ್ದೇವೆ. ಹಿಂದೆ ವರ್ಷಕ್ಕೆ 50ಕ್ಕೂ ಹೆಚ್ಚು ಪ್ರದರ್ಶನ ಇರುತ್ತಿದ್ದವು. ಈಗ ಒಂದು ವರ್ಷಕ್ಕೆ ಪ್ರದರ್ಶನಗಳ ಸಂಖ್ಯೆ ಸರಾಸರಿ 15ಕ್ಕೆ ಸೀಮಿತಗೊಂಡಿದೆ. ಆಸಕ್ತರು ಕಡಿಮೆಯಾಗಿರುವುದೇ ಇದಕ್ಕೆ ಕಾರಣ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ಪ್ರಧಾನ ಸೂತ್ರಧಾರ ರಮೇಶ ಕೆ.ವಿ.

ಯಕ್ಷಪುತ್ಥಳಿ ಬೊಂಬೆ ಮನೆ

ಕಾಸರಗೋಡಿನ ಪಿಲಿಕುಂಜೆಯಲ್ಲಿ ರಮೇಶ್‌ ಮತ್ತು ಅವರ ಸಹೋದರರಾದ ಹಾಸನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಡಾ. ಓಂಪ್ರಕಾಶ್‌ ಕೆ.ವಿ., ಬೆಂಗಳೂರಿನಲ್ಲಿ ಎಂಜಿನಿಯರ್‌ ಆಗಿರುವ ಶ್ರೀವತ್ಸ ಕೆ.ವಿ., ಬೆಂಗಳೂರಿನಲ್ಲಿ ನೆಲೆಸಿರುವ ಅಕ್ಕಂದಿರಾದ ಗೀತಾ, ಅನಿತಾ ಎಲ್ಲರೂ ಸೇರಿ ಯಕ್ಷಪುತ್ಥಳಿ ಬೊಂಬೆ ಮನೆ ನಿರ್ಮಿಸಿದ್ದಾರೆ.

ಮನೆಯ ಮಹಡಿಯಲ್ಲಿ ಯಕ್ಷಪುತ್ಥಳಿ ವಸ್ತುಸಂಗ್ರಹಾಲಯ ಸ್ಥಾಪಿಸಿ, ಅಲ್ಲಿ ಒಂದು ಸಾವಿರ ಯಕ್ಷಗೊಂಬೆಗಳನ್ನು ಪ್ರದರ್ಶನಕ್ಕಿಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

ಇಲ್ಲಿಗೆ ಭೇಟಿ ನೀಡಿದ್ದ ಹಾಗೂ ಯಕ್ಷಬೊಂಬೆಯಾಟಕ್ಕೆ ಮನಸೋತ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಡಾ.ಸಿ. ಸೋಮಶೇಖರ ಅವರು ಈ ವಸ್ತುಸಂಗ್ರಹಾಲಯಕ್ಕೆ ಪ್ರಾಧಿಕಾರದಿಂದ ₹20 ಲಕ್ಷ ಅನುದಾನ ಮಂಜೂರು ಮಾಡಿದ್ದಾರೆ.

ಕಾಸರಗೋಡಿನ ಪಿಲಿಕುಂಜೆಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ‘ಯಕ್ಷಬೊಂಬೆ ಮನೆ’ ಯಲ್ಲಿ ಯಕ್ಷಗೊಂಬೆಗಳನ್ನು ತಯಾರಿಸುತ್ತಿರುವ ರಮೇಶ್ ಕೆ.ವಿ. - ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಕಾಸರಗೋಡಿನ ಪಿಲಿಕುಂಜೆಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ‘ಯಕ್ಷಬೊಂಬೆ ಮನೆ’ ಯಲ್ಲಿ ಯಕ್ಷಗೊಂಬೆಗಳನ್ನು ತಯಾರಿಸುತ್ತಿರುವ ರಮೇಶ್ ಕೆ.ವಿ. - ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ರಮೇಶ್‌ ಅವರ ಮನೆಯಲ್ಲಿ ಈಗ 150 ಬೊಂಬೆಗಳು ಇವೆ. ವಸ್ತು ಸಂಗ್ರಹಾಲಯದಲ್ಲಿ ಇಡಲು ಒಂದು ಸಾವಿರ ಯಕ್ಷಬೊಂಬೆಗಳನ್ನು ತಯಾರಿಸುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ. ಮನೆಯಲ್ಲೇ ಬೊಂಬೆ ತಯಾರಿಸುವುದು ಈ ಕುಟುಂಬದ ವಿಶೇಷತೆ. ಇವರು ತಮ್ಮ ಮನೆಯ ಆವರಣದಲ್ಲೇ ವರ್ಕ್‌ಶಾಪ್‌ ಮಾಡಿಕೊಂಡಿದ್ದಾರೆ. ಕಟ್ಟಿಗೆಯ ಕೆತ್ತನೆಯಿಂದ ಹಿಡಿದು, ಅದಕ್ಕೆ ಮೂರ್ತಿ ರೂಪ ನೀಡುವುದು, ಬಣ್ಣ ಬಳಿದು ಅಂದಗೊಳಿಸುವ ಎಲ್ಲ ಕೆಲಸವನ್ನೂ ರಮೇಶ್‌ ಮಾಡುತ್ತಾರೆ. ಅವರ ಸಹೋದರಿಯರಾದ ಗೀತಾ ಮತ್ತು ಅನಿತಾ ಅವರು ಬೊಂಬೆಗಳ ಬಟ್ಟೆ, ಆಭರಣ ಸಿದ್ಧಪಡಿಸಿಕೊಡುತ್ತಾರೆ.

ಬೊಂಬೆಗಳ ತಯಾರಿಕೆಗೆ ಹಗುರವಾದ ಸಾಗವಾನಿ, ಹಾಲೆ ಮರ, ಶಿವನೆ ಮರದ ಕಟ್ಟಿಗೆ ಬಳಸಲಾಗುತ್ತಿದೆ. ಸಾಗವಾನಿ ಮರದಿಂದ ತಯಾರಿಸಿದ ಬೊಂಬೆಗಳು 500 ವರ್ಷ ಬಾಳಿಕೆ ಬಂದರೆ ಉಳಿದವು 50 ವರ್ಷವಾದರೂ ಬಾಳಿಕೆ ಬರುತ್ತವೆ ಎನ್ನುತ್ತಾರೆ ಇವರು.

ಒಂದು ಬೊಂಬೆ ತಯಾರಾಗಲು ಕನಿಷ್ಠ ಆರು ವಾರ ಬೇಕು. ಬೊಂಬೆ ತಯಾರಿಸಲು ₹30 ಸಾವಿರದಿಂದ ₹50 ಸಾವಿರದ ವರೆಗೂ ವೆಚ್ಚವಾಗುತ್ತದೆ. ಒಂದೊಂದು ಬೊಂಬೆ ಅದರ ಪಾತ್ರಕ್ಕೆ ಅನುಗುಣವಾಗಿ 3ರಿಂದ 6 ಕೆ.ಜಿ. ಭಾರ ಇರುತ್ತದೆ ಎನ್ನುತ್ತಾರೆ ರಮೇಶ್. ಪ್ರದರ್ಶನಕ್ಕೆ ಬಳಸುವ ಬೊಂಬೆಗಳಿಗೆ ಎರಡು ವರ್ಷಕ್ಕೊಮ್ಮೆ ಬಣ್ಣ ಬಳಿಯಬೇಕು; ಹೊಸ ಬಟ್ಟೆ ತೊಡಿಸಬೇಕಾಗುತ್ತದೆ.

ಒಂದು ಬೊಂಬೆಯಲ್ಲಿ ತಲೆ, ಕತ್ತು, ಕಾಲು, ಪಾದ, ಮೊಣಕಾಲು ಹೀಗೆ 13 ಭಾಗಗಳು ಇರುತ್ತವೆ. ಸಾಮಾನ್ಯವಾಗಿ ಬೊಂಬೆಗಳಿಗೆ ಆರು ಸೂತ್ರದ ದಾರಗಳನ್ನು ಬಳಸಲಾಗುತ್ತಿದ್ದು, ಬಾಲ ಇರುವ ಹನುಮಂತ, ಕೈಯಲ್ಲಿ ಗದೆ ಹಿಡಿದುಕೊಂಡಿರುವ ನರಕಾಸುರ ಇಂತಹವುಗಳಿಗೆ ಏಳು ಸೂತ್ರದ ದಾರ ಬಳಸಲಾಗುತ್ತದೆ.

ಮೂರು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿರುವುದು ಈ ತಂಡದ ಹೆಗ್ಗಳಿಕೆ. ಐದು ದೇಶಗಳಲ್ಲಿ ಹಾಗೂ ಭಾರತದ ಬಹುತೇಕ ರಾಜ್ಯಗಳಲ್ಲಿ ಇವರ ಪ್ರದರ್ಶನಗಳು ನಡೆದಿವೆ. ಬೊಂಬೆಗಳೇ ಪ್ರಮುಖ ಆಕರ್ಷಣೆ ಮತ್ತು ಇದು ದೃಶ್ಯ ಪ್ರಧಾನ ಕಲೆಯಾಗಿರುವುದರಿಂದ ಪ್ರದರ್ಶನದ ವೇಳೆ ಭಾಷೆಯ ಸಮಸ್ಯೆ ಆಗಿಲ್ಲ ಎನ್ನುತ್ತಾರೆ ಅವರು. ಈ ಕಲೆ ಬೆಳೆಯಬೇಕು ಎಂಬ ಕಾರಣಕ್ಕಾಗಿ ಇವರು ಆಸಕ್ತರಿಗೆ ಬೊಂಬೆಯಾಟದ ತರಬೇತಿ ನೀಡುತ್ತಿದ್ದಾರೆ. ಇವರಲ್ಲಿ ಕಲಿತ ಐವರು ಸೂತ್ರದ ಬೊಂಬೆಯಾಟದಲ್ಲಿ ಪಳಗಿದ್ದಾರೆ.

ಕಾಸರಗೋಡಿನ ಪಿಲಿಕುಂಜೆಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ‘ಯಕ್ಷ ಬೊಂಬೆ ಮನೆ’ಯಲ್ಲಿಯ ಯಕ್ಷ ಬೊಂಬೆಗಳು
ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್
ಕಾಸರಗೋಡಿನ ಪಿಲಿಕುಂಜೆಯ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘದ ‘ಯಕ್ಷ ಬೊಂಬೆ ಮನೆ’ಯಲ್ಲಿಯ ಯಕ್ಷ ಬೊಂಬೆಗಳು ಪ್ರಜಾವಾಣಿ ಚಿತ್ರ / ಫಕ್ರುದ್ದೀನ್ ಎಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT