ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ ಹೊಕ್ಕಿದ ಹಕ್ಕಿಪಿಕ್ಕಿಗಳ ಹಕೀಕತ್ತು

ಹಕ್ಕಿಪಿಕ್ಕಿಗಳ ಬದಲಾಗದ ಅಲೆಮಾರಿ ಬದುಕು, ವಿದೇಶಕ್ಕೆ ಹಾರಿದರೂ ಎತ್ತೆರಕ್ಕೇರದ ಬದುಕು
Published 29 ಏಪ್ರಿಲ್ 2023, 19:36 IST
Last Updated 29 ಏಪ್ರಿಲ್ 2023, 19:36 IST
ಅಕ್ಷರ ಗಾತ್ರ

ಮೈಸೂರಿನ ಪಕ್ಷಿರಾಜಪುರದಿಂದ ಸುಡಾನ್‌ ತರಹದ ದೇಶಕ್ಕೆ ಹಕ್ಕಿ–ಪಿಕ್ಕಿಗಳು ಹೋಗುವುದೀಗ ಸಹಜ ಎನ್ನುವಂತಾಗಿದೆ. ಹಸನಾದ ಬದುಕು ಕಟ್ಟಿಕೊಳ್ಳುವ ಕನಸು ಹೊತ್ತು ಹೋಗುವವರಲ್ಲಿ ಅನೇಕರು ಲುಕ್ಸಾನು ಮಾಡಿಕೊಂಡು ವಾಪಸ್ಸಾಗಿ, ಮತ್ತೆ ಲೇವಾದೇವಿದಾರರತ್ತ ಕೈಚಾಚುವ ಪರಿಸ್ಥಿತಿ ಇದೆ.

‘ಒಂದು ಕಾಲದಲ್ಲಿ ನಾವು ಕಾಡಿಗೆ ರಾಜರಾಗಿದ್ದೆವು. ಪಕ್ಷಿಸಂಕುಲಕ್ಕೆಲ್ಲ ನಾವೇ ಒಡೆಯರು. ಆಗ ಸಿಕ್ಕಸಿಕ್ಕ ಪಕ್ಷಿಗಳನ್ನು ಮಾತ್ರವಲ್ಲ ಕಾಡುಪ್ರಾಣಿಗಳನ್ನು ಒಂದೇ ಏಟಿಗೆ ಹೊಡೆದುರುಳಿಸಿ ತಿಂದು ತೇಗುತ್ತಿದ್ದೆವು. ಅವುಗಳ ಚರ್ಮವನ್ನೇ ಉಟ್ಟುಕೊಂಡು ನೆಮ್ಮದಿಯ ಬದುಕು ಸಾಗಿಸುತ್ತಿದ್ದೆವು. ಆದರೆ, ಅರಣ್ಯ ರಕ್ಷಣೆಯ ಕಾನೂನುಗಳು ನಮ್ಮನ್ನು ಅಲೆಮಾರಿಯನ್ನಾಗಿಸಿತು. ಮನೆ ಮನೆಯ ಮುಂದೆ ಭಿಕ್ಷೆ ಬೇಡುವಂತಹ ದೈನೇಸಿ ಬದುಕನ್ನು ನೀಡಿತು’ ಎಂದು ಇಲ್ಲಿನ ಬೀರಪ್ಪ ವಿಷಾದದ ಉಸಿರು ಹೊರಹಾಕುತ್ತಾ ನಿಂತರು.

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರ ಮತ್ತೊಮ್ಮೆ ಸುದ್ದಿಯಲ್ಲಿದೆ. ತುತ್ತಿನಚೀಲವನ್ನು ತುಂಬಿಸಿಕೊಳ್ಳಲು ಸುಡಾನ್‌ ದೇಶಕ್ಕೆ ಹೋದವರು ಅಲ್ಲಿ ಸಿಲುಕಿದ್ದು, ಸರ್ಕಾರ ರಕ್ಷಣೆಗೆ ಕ್ರಮ ತೆಗೆದುಕೊಳ್ಳುತ್ತಿದೆ. ಆದರೆ, ಈ ಹಕ್ಕಿಪಿಕ್ಕಿಗಳ ಅಲೆಮಾರಿ ಬದುಕಿನ ಸಿಕ್ಕುಗಳನ್ನು ಶಾಶ್ವತವಾಗಿ ಬಿಡಿಸಲು ಆಗುತ್ತಿಲ್ಲ. ವಿದೇಶಕ್ಕೆ ಹಾರಿದರೂ ಪಕ್ಷಿರಾಜಪುರದ ಹಕ್ಕಿಪಿಕ್ಕಿಗಳ ಬದುಕಿನ ಸ್ವರೂಪವಾಗಲಿ, ಅವರ ಬವಣೆಯಾಗಲಿ ಬದಲಾಗಿಲ್ಲ. ಈಗಲೂ ಲೇವಾದೇವಿಗಾರರ ಕಪಿಮುಷ್ಟಿಗೆ ಸಿಲುಕುವುದು ಇವರಿಗೆ ಅನಿವಾರ್ಯ.

ಹಕ್ಕಿಗಳ ಪಿಕ್ಕೆಗಳನ್ನು ಅರಸುತ್ತ ಕಾಡಿನಿಂದ ನಾಡಿಗೆ ಬಂದ ಈ ಹಕ್ಕಿಪಿಕ್ಕಿ ಸಮುದಾಯದವರನ್ನು ಒಪ್ಪಿಕೊಳ್ಳದೇ ಕಳ್ಳರೆಂದು ಭಾವಿಸಿ ಸಮಾಜ ದೂರ ಇಟ್ಟಿದ್ದೇ ಹೆಚ್ಚು. ಇದರಿಂದ ಇಂದಿಗೂ ಇವರದ್ದು ಅಲೆಮಾರಿ ಬದುಕೇ. ಹಿಂದೆ ಇಲ್ಲಿಯೇ ಒಂದೂರಿನಿಂದ ಮತ್ತೊಂದೂರಿಗೆ ಅಲೆದಾಡುತ್ತಿದ್ದವರು ಈಗ ದೇಶದಿಂದ ದೇಶಕ್ಕೆ ಅಲೆದಾಡುತ್ತಿದ್ದಾರೆನ್ನುವುದಷ್ಟೆ ಬದಲಾವಣೆ.

ಪಕ್ಷಿರಾಜಪುರದಲ್ಲಿ ಶ್ರೀಮಂತರಿಂದ ಬಡವರವರೆಗೆ ಎಲ್ಲರೂ ಇದ್ದಾರೆ. ಐಷಾರಾಮಿ ಬೈಕು–ಕಾರುಗಳೊಂದಿಗೆ ಇರುವವರು, ಏನೂ ಇಲ್ಲದೇ ತುತ್ತು ಅನ್ನಕ್ಕಾಗಿ ಪರಿತಪಿಸುವವರು ಎರಡೂ ಬಗೆಯವರು ಸಿಗುತ್ತಾರೆ. ಮಾಟ, ಮಂತ್ರಗಳಂತಹ ಮೂಢನಂಬಿಕೆ ಪೋಷಿಸುವವರಿಂದ ಹಿಡಿದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯಗಳಂತಹ ಆಧ್ಯಾತ್ಮಿಕ ಕೇಂದ್ರಗಳೂ ಇಲ್ಲಿವೆ.

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರದಲ್ಲಿ ಎಲ್ಲೆಂದರಲ್ಲಿ ಕಾಣಸಿಗುವ ಆಯುರ್ವೇದಿಕ್ ಎಣ್ಣೆಗಳ  ಜಾಹೀರಾತು ಫಲಕಗಳು
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರದಲ್ಲಿ ಎಲ್ಲೆಂದರಲ್ಲಿ ಕಾಣಸಿಗುವ ಆಯುರ್ವೇದಿಕ್ ಎಣ್ಣೆಗಳ  ಜಾಹೀರಾತು ಫಲಕಗಳು

1958ರಲ್ಲಿ ಗುಜರಾತ್‌ನಿಂದ ಊರೂರು ಅಲೆಯುತ್ತಾ ಬಂದ ಹಕ್ಕಿಪಿಕ್ಕಿಗಳು ಹುಣಸೂರು ತಾಲ್ಲೂಕಿನಲ್ಲಿ ಟೆಂಟ್‌ ಹಾಕಿಕೊಂಡಿದ್ದರು. ಬಿರುಗಾಳಿಯೊಂದು ಇವರು ಹಾಕಿಕೊಂಡಿದ್ದ ಟೆಂಟ್‌ ಹಾಗೂ ಅದರೊಳಗಿದ್ದ ಸಾಮಾನು ಸರಂಜಾಮುಗಳನ್ನೆಲ್ಲ ಕಿ.ಮೀಗಟ್ಟಲೆ ದೂರಕ್ಕೆ ತೆಗೆದುಕೊಂಡು ಹೋಯಿತು. ಬಟ್ಟೆಯೂ ಇಲ್ಲದೇ ನಿಂತ ಇವರ ಬದುಕನ್ನು ಆಗ ಕಂಡಿದ್ದ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪನವರ ಗಮನಕ್ಕೆ ತಂದರು. ಅವರಿಬ್ಬರ ಪರಿಶ್ರಮದ ಫಲವಾಗಿ ಅಂದು 40 ಕುಟುಂಬದವರಿಗೆ ಶಾಶ್ವತ ಸೂರನ್ನು ಕಲ್ಪಿಸಿಕೊಡಲಾಯಿತು. ಈಗ ಪಕ್ಷಿರಾಜಪುರಗಳ ಸಂಖ್ಯೆಯೇ ಒಟ್ಟು 3ಕ್ಕೇರಿದೆ. ಪಕ್ಕದಲ್ಲೇ ಇರುವ ಶಂಕರಪುರವೂ ಸೇರಿದಂತೆ ಹುಣಸೂರು ತಾಲ್ಲೂಕಿನಲ್ಲಿ 479 ಕುಟುಂಬಗಳು ಜೀವನ ಸಾಗಿಸುತ್ತಿವೆ.

ಇಂದಿಗೂ ಅರಸು, ನಿಜಲಿಂಗಪ್ಪ ಇವರಿಬ್ಬರ ಹೆಸರುಗಳೇ ಇಲ್ಲಿನ ಜನರ ಬಾಯಲ್ಲಿದೆಯೇ ಹೊರತು ಉಳಿದ್ಯಾವ ರಾಜಕಾರಣಿಗಳನ್ನೂ ನೆನೆಯುವುದಿಲ್ಲ.

‘ದೇವರಾಜ ಅರಸು ಇಲ್ಲಿ ನೆಲೆಯೂರಲು ಅವಕಾಶ ನೀಡಿದರೂ ಇಲ್ಲಿನ ಜನರು ನಮ್ಮನ್ನು ಸುಲಭವಾಗಿ ಒಪ್ಪಿಕೊಳ್ಳಲಿಲ್ಲ. ಕಳ್ಳರೆಂಬ ದೃಷ್ಟಿಯಿಂದಲೇ ನೋಡತೊಡಗಿದರು. ಕೆಲಸಕ್ಕೂ ಕರೆಯುತ್ತಿರಲಿಲ್ಲ. ಮದುವೆ ಮೊದಲಾದ ಸಮಾರಂಭಗಳು ನಡೆದಾಗ ಎಲ್ಲರೂ ತಿಂದು ಮುಗಿಸಿದ ಬಳಿಕ ಹೋಗಿ, ಅವರ ಎಲೆ ಎತ್ತೆಸೆದು ಉಳಿದುದನ್ನು ನಾವು ತಿನ್ನಬೇಕಿತ್ತು. ಹೋಟೆಲ್‌ಗಳಲ್ಲೂ ನಮಗೆಂದೇ ಪ್ರತ್ಯೇಕ ಲೋಟ, ತಟ್ಟೆಗಳನ್ನು ಇರಿಸಿದ್ದರು. ಇಂತಹ ಪರಿಸ್ಥಿತಿಯಲ್ಲಿ ನಮಗೆ ಅಲೆಮಾರಿ ಬದುಕು ಬಿಟ್ಟರೆ ಬೇರೇನೂ ದಾರಿ ಕಾಣಲಿಲ್ಲ’ ಎಂದು ಸಮುದಾಯದ ಮುಖಂಡ ನಂಜುಂಡಸ್ವಾಮಿ ಅನುಭವ ಹಂಚಿಕೊಂಡರು.

ಸರ್ಕಾರದಿಂದ ಭೂಮಿ ಪ‍ಡೆದವರು ಕೃಷಿ ಮಾಡುವಷ್ಟು ಕಸುಬುದಾರರಾಗಿರಲಿಲ್ಲ. ಸುತ್ತಮುತ್ತಲಿನ ಲೇವಾದೇವಿಗಾರರು ಭೂಮಿ ಒತ್ತೆ ಇಟ್ಟು ಹಣ ಪಡೆಯುವಂತೆ ಆಮಿಷ ಒಡ್ಡಿದರು. ಶಾಲೆಗಳಲ್ಲಿ ಹಕ್ಕಿಪಿಕ್ಕಿಗಳ ಮಕ್ಕಳನ್ನು ಬೇರೆ ಸಮುದಾಯದ ಮಕ್ಕಳು ಹತ್ತಿರವೂ ಬಿಟ್ಟುಕೊಳ್ಳಲಿಲ್ಲ. ಇದರಿಂದಾಗಿಯೇ ಕೆಲವರು ಓದನ್ನು ಅರ್ಧಕ್ಕೇ ಬಿಟ್ಟರು.

ಬಹುತೇಕ ಹಕ್ಕಿಪಿಕ್ಕಿ ಸಮುದಾಯದವರು ವಿದೇಶಗಳಲ್ಲಿ ಅಲೆಮಾರಿ ಬದುಕನ್ನು ನಡೆಸುತ್ತಿರುವುದರಿಂದ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರದ ಬೀದಿಗಳು ಜನರಿಲ್ಲದೇ ಬಿಕೊ ಎನ್ನುತ್ತಿವೆ
ಬಹುತೇಕ ಹಕ್ಕಿಪಿಕ್ಕಿ ಸಮುದಾಯದವರು ವಿದೇಶಗಳಲ್ಲಿ ಅಲೆಮಾರಿ ಬದುಕನ್ನು ನಡೆಸುತ್ತಿರುವುದರಿಂದ ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪಕ್ಷಿರಾಜಪುರದ ಬೀದಿಗಳು ಜನರಿಲ್ಲದೇ ಬಿಕೊ ಎನ್ನುತ್ತಿವೆ

ಪಾರಂಪರಿಕವಾಗಿ ಬಂದಿದ್ದ ಔಷಧ ಗಿಡಮೂಲಿಕೆಗಳ ಮಾರಾಟವನ್ನೇ ತಮ್ಮ ಗೌರವಯುತ ಬದುಕಿಗೆ ಆಧಾರವೆಂದು ಆಯ್ಕೆ ಮಾಡಿಕೊಂಡರು. ದಾಸವಾಳದ ಹೂವು, ನೆಲನೆಲ್ಲಿ, ತುಳಸಿ ಸೇರಿ ಹಲವು ಬಗೆಯ ಬೇರು, ಎಲೆ, ಹೂವು, ಕಾಯಿ ಹೀಗೆ ಕಾಡಿನಲ್ಲಿ ಸಿಗುವ ಕಿರು ಉತ್ಪನ್ನಗಳನ್ನು ಹೆಕ್ಕಿ, ಮನೆಗಳಲ್ಲಿಯೇ ಕಟ್ಟಿಗೆ ಒಲೆಗಳನ್ನು ಬಳಸಿಕೊಂಡು ತಲೆಕೂದಲು ಬೆಳೆಯುವ ಎಣ್ಣೆ, ನೋವು ನಿವಾರಕ ಎಣ್ಣೆ ಮತ್ತು ಮಸಾಜ್ ಎಣ್ಣೆಗಳನ್ನು ತಯಾರಿಸಿದರು. ಅವನ್ನು ತಮಿಳುನಾಡು, ಕೇರಳಗಳಲ್ಲಿ ಮಾರಾಟ ಮಾಡುತ್ತಿದ್ದರು. ನಂತರ, ಕೆಲವರು ವಿದೇಶಕ್ಕೂ ಹೋಗಿ ಮಾರಾಟ ಮಾಡಿ ಬಂದು ಬೆರಗಾಗುವಂತಹ ಮನೆಗಳನ್ನು, ಬದುಕನ್ನು ಕಟ್ಟಿಕೊಂಡರು. ಇದಕ್ಕೆ ಮಾರುಹೋದ ಇಲ್ಲಿನ ಜನರು ಹಣ ಇಲ್ಲದಿದ್ದರೂ ಲೇವಾದೇವಿಗಾರರ ಬಳಿ ಹೆಚ್ಚಿನ ಬಡ್ಡಿಗೆ ಸಾಲ ಮಾಡಿ ವಿದೇಶಕ್ಕೆ ಹೋಗಲಾರಂಭಿಸಿದರು.

ವಿದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚಿದಂತೆಲ್ಲ ಇವರಲ್ಲೇ ಪೈಪೋಟಿಯೂ ಆರಂಭವಾಯಿತು. ಹೆಚ್ಚಿನ ಮಂದಿ ವ್ಯಾಪಾರ ಇಲ್ಲದೇ ಬರಿಗೈಲಿ ವಾಪಸ್ಸಾದರು. ಲೇವಾದೇವಿಗಾರರ ಕಿರುಕುಳ ಸಹಿಸಲಾರದೇ ಅಡ್ಡದಾರಿ ತುಳಿದವರೂ ಇದ್ದಾರೆ.

‘ನಾವು ಕೆಲವೊಂದು ಗಿಡಮೂಲಿಕೆಗಳನ್ನು ಕೇರಳದ ತಲಚೇರಿ, ಮಾನಂದವಾಡಿಗೆ ತೆರಳಿ ಹುಡುಕಿ ತರುತ್ತೇವೆ. ಆದರೂ, ವಿದೇಶದಲ್ಲಿ ಹೋದ ಎಲ್ಲರಿಗೂ ವ್ಯಾಪಾರ ಆಗುವುದಿಲ್ಲ. ಅದೃಷ್ಟ ಇದ್ದವರು ಭರಪೂರ ವ್ಯಾಪಾರ ನಡೆಸಿ ಕಿಸೆ ತುಂಬಿಸಿಕೊಂಡು ಬರುತ್ತಾರೆ. ಹೆಚ್ಚಿನ ಮಂದಿ ಬರಿಗೈಯಲ್ಲಿ ವಾಪಸ್ ಬರುತ್ತಾರೆ. ಮತ್ತೆ ಅದೇ ಲೇವಾದೇವಿಗಾರರ ಬಳಿ ಕೈಯೊಡ್ಡಿ ಮತ್ತೊಂದು ದೇಶಕ್ಕೆ ಹಾರುತ್ತಾರೆ. ವ್ಯಾಪಾರವಾದ ಹಣದ ಬಹುಭಾಗ ಸಾಲ ಕೊಟ್ಟವರ ಕಿಸೆಗೆ ಹೋಗುತ್ತದೆ. ನಮಗುಳಿಯುವುದು ಕೊನೆಗೆ ಊಟ ಮಾಡುವಷ್ಟು ಮಾತ್ರ’ ಎಂದು ಕಾಶೀನಾಥ್ ಹೇಳುತ್ತಾರೆ.

‘ನಮ್ಮ ಮನೆಯಿಂದ ಐವರು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು ಸುಡಾನ್ ದೇಶಕ್ಕೆ ಹೋಗಿ ಒಂದು ತಿಂಗಳಾಗಿಲ್ಲ. ಅಲ್ಲಿ ಯುದ್ಧ ಆರಂಭವಾಯಿತು. ಅವರು ವಾಪಸ್ ಬಂದರೂ ಇಲ್ಲಿನ ಸಾಲ ತೀರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ’ ಎಂದು ತಲೆ ಕಾಶೀನಾಥ್  ತಲೆ ಮೇಲೆ ಕೈ ಹೊತ್ತು ಕುಳಿತರು.

ಇಂದಿಗೂ ಹಕ್ಕಿಪಿಕ್ಕಿಗಳಲ್ಲಿ ಶಿಕ್ಷಣ ಪಡೆದವರ ಸಂಖ್ಯೆ ಕಡಿಮೆ. ಶೈಕ್ಷಣಿಕವಾಗಿ ಹಿಂದುಳಿದ, ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪಟ್ಟಿಯಲ್ಲೂ ಹಿಂದಿರುವಂಥ ದೇಶಗಳನ್ನೇ ಇವರು ಮಸಾಜ್ ತೈಲಗಳ ಮಾರಾಟಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಪ್ರವಾಸಿ ವೀಸಾದಡಿ ಆ ದೇಶಗಳಿಗೆ ಹೋಗಿ, ಅಲ್ಲಿ ಊರಿಂದೂರಿಗೆ ಅಲೆದಾಡಿ ಆಯುರ್ವೇದಿಕ್ ಎಣ್ಣೆಗಳನ್ನು ಮಾರಾಟ ಮಾಡುತ್ತಾರೆ. ಬದಲಾದ ಕಾಲಘಟ್ಟಕ್ಕೆ ಹೊಂದಿಕೊಂಡಿರುವ ಕೆಲವರು ತಮ್ಮ ಆಯುರ್ವೇದಿಕ್ ಎಣ್ಣೆಗಳನ್ನು ಆನ್‌ಲೈನ್‌ನಲ್ಲೂ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದಾರೆ.

ಗಳಿಕೆಯ ಹೊಸ ದಾರಿಗಳು ತೆರೆದುಕೊಂಡರೂ, ಆರ್ಥಿಕ ಅಶಿಸ್ತಿನಿಂದ ಲೇವಾದೇವಿದಾರರ ಹಿಡಿತಕ್ಕೆ ಸಿಲುಕುತ್ತಿರುವವರೇ ಹೆಚ್ಚು ಎಂದು ಸ್ಥಳೀಯರೇ ವಸ್ತುಸ್ಥಿತಿಗೆ ಕನ್ನಡಿ ಹಿಡಿಯುತ್ತಾರೆ. 

ಸುಡಾನ್ ದೇಶಕ್ಕೆ ತೆರಳಿರುವ ತಮ್ಮ ಕುಟುಂಬದವರ ಬರುವಿಕೆಯ ನಿರೀಕ್ಷೆಯಲ್ಲಿರುವ ಕಾಶೀನಾಥ ಅವರ ಕುಟುಂಬ
ಸುಡಾನ್ ದೇಶಕ್ಕೆ ತೆರಳಿರುವ ತಮ್ಮ ಕುಟುಂಬದವರ ಬರುವಿಕೆಯ ನಿರೀಕ್ಷೆಯಲ್ಲಿರುವ ಕಾಶೀನಾಥ ಅವರ ಕುಟುಂಬ

ನನೆಗುದಿಗೆ ಬಿದ್ದ ಯೋಜನೆ: ಬುಡಕಟ್ಟು ಸಮುದಾಯದವರ ಪಾರಂಪರಿಕ ವೈದ್ಯ ಪದ್ಧತಿಯನ್ನು ಉಳಿಸುವ ದೃಷ್ಟಿಯಿಂದ ಕೇಂದ್ರ ಬುಡಕಟ್ಟು ವ್ಯವಹಾರಗಳ ಇಲಾಖೆ ಇಲ್ಲಿ ಒಂದು ಔಷಧ ಸಂಸ್ಕರಣಾ ಘಟಕ ಸ್ಥಾಪನೆಗೆ ಯೋಜನೆ ರೂಪಿಸಿತ್ತು. ಆದರೆ ಅದು ಇನ್ನೂ ಜಾರಿಯಾಗದೇ ನನೆಗುದಿಗೆ ಬಿದ್ದಿದೆ. ಆಯುಷ್ ಇಲಾಖೆ ಹಾಗೂ ಉಪ ಔಷಧ ನಿಯಂತ್ರಕರ ಕಚೇರಿ ಸಹಯೋಗದಲ್ಲಿ ಔಷಧ ಗುಣವುಳ್ಳ ವಿವಿಧ ಬಗೆಯ ಎಣ್ಣೆಗಳ ತಯಾರಿಕೆ ಮತ್ತು ಸಂಸ್ಕರಣಾ ಘಟಕ ಸ್ಥಾಪಿಸುವ ಯೋಜನೆ ಒಂದು ವೇಳೆ ಕಾರ್ಯಗತವಾದರೆ ಇವರ ಎಣ್ಣೆಗಳಿಗೆ ಪ್ರತ್ಯೇಕ ಬ್ರಾಂಡ್‌ವೊಂದು ಸೃಷ್ಟಿಯಾಗಿ ವಿಶ್ವಾಸಾರ್ಹತೆ ವೃದ್ಧಿಸಿ ವಿದೇಶದಿಂದಲೇ ಇಲ್ಲಿಗೆ ಎಣ್ಣೆ ಹುಡುಕಿಕೊಂಡು ಬರುವಂತಾಗಬಹುದು ಎಂಬ ನಿರೀಕ್ಷೆ ಇವರಲ್ಲಿದೆ. ಆಗಲಾದರೂ ಅಲೆಮಾರಿ ಬದುಕು ಕೊನೆಯಾಗಬಹುದು ಎಂಬ ಲೆಕ್ಕಾಚಾರ ಇವರದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT