ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ಮತ್ತು ದುರಾಸೆ

Last Updated 20 ಅಕ್ಟೋಬರ್ 2013, 11:22 IST
ಅಕ್ಷರ ಗಾತ್ರ

ಗಾಂಧಿಯವರು ಅಗತ್ಯ ಮತ್ತು ದುರಾಸೆಯ ಬಗೆಗೆ ಆಡಿದ ಮಾತು ನಮಗೆಲ್ಲರಿಗೂ ಗೊತ್ತಿರುವಂತಹದ್ದು. ‘ಭೂಮಿಯು ಎಲ್ಲರ ಅಗತ್ಯವನ್ನು ಪೂರೈಸುತ್ತದೆ ಆದರೆ ದುರಾಸೆಯನ್ನಲ್ಲ’ ಎಂದು ಗಾಂಧಿ ಹೇಳಿದ್ದರು. ಈ ಮಾತು ಇವತ್ತಿನ ಮಧ್ಯಮ ವರ್ಗ ಮತ್ತು ಹಣವಂತರ ಸಂದರ್ಭದಲ್ಲಿ ಮಹತ್ವದ್ದಾಗಿದೆ.

ಆದರೆ ಯಾವುದು ಅಗತ್ಯ ಯಾವುದು ದುರಾಸೆ ಎಂಬುದು ನಮಗೆ ಹೇಗೆ ತಿಳಿಯುತ್ತದೆ? ಅಗತ್ಯದ ಅರ್ಥ ಏನು ಎಂಬುದು ಇವತ್ತಿನ ಸಂದರ್ಭದಲ್ಲಿ ಅಷ್ಟು ಸರಳವಾಗಿ ಹೇಳಲು ಸಾಧ್ಯವಿಲ್ಲ. ಅಗತ್ಯ ಮತ್ತು ದುರಾಸೆಯ ನಡುವಿನ ಗೆರೆ ಅತ್ಯಂತ ತೆಳುವಾದದ್ದು. ಅಗತ್ಯವೆಂಬ ಪರಿಕಲ್ಪನೆಗೆ ಮಿತಿಯ ಲಕ್ಷಣವಿದೆ. ಆ ಮಿತಿಯನ್ನು ದಾಟಿದರೆ ಅದು ಅಗತ್ಯವಾಗದೆ ದುರಾಸೆಯಾಗುತ್ತದೆ.

ಆದರೆ ಈ ಮಿತಿ ಯಾವುದು? ಹಿಂದಿನ ತಲೆಮಾರಿನಲ್ಲಿ ಕೆಲವರು ತಮ್ಮ ಜೀವಿತಾವಧಿ ದುಡಿದು ಕೊನೆಗೆ ಬರುವ ಪೆನ್ಷನ್ ಹಣವನ್ನೂ ಕೂಡಿಸಿ ಒಂದು ಮನೆಯನ್ನು ಖರೀದಿಸುತ್ತಿದ್ದರು. ಆದರೆ ಈಗ ದುಡಿಯುತ್ತಿರುವ ಇಪ್ಪತ್ತೈದು ಮೂವತ್ತು ವರ್ಷದ ಯುವಕರು ಸಂಪಾದಿಸಿದ ಹಣದಲ್ಲಿಯೋ ಅಥವಾ ಸಂಪಾದಿಸಲಿರುವ ಹಣದ ಆಧಾರದ ಮೇಲೆ ಪಡೆದ ಕಂತಿನ ಸಾಲ ಸೋಲಗಳಿಂದಲೋ ಎರಡು ಮೂರು ಫ್ಲಾಟ್‌ಗಳನ್ನು ಖರೀದಿಸುವುದೂ ಸಾಧ್ಯ.

ಮೊದಲೆಲ್ಲ ಮನೆಗೆ ಒಂದು ಕಾರು ಇದ್ದರೆ ಅದೇ ಹೆಚ್ಚಾಗಿತ್ತು. ಈಗ ಎರಡು ಕಾರುಗಳಿದ್ದರೂ ಜೊತೆಗೆ ಒಂದೆರಡು ಬೈಕುಗಳೂ ಬೇಕಾಗುತ್ತವೆ. ಒಂದು ಸಂಸಾರಕ್ಕೆ ಎಷ್ಟು ಮನೆಗಳು ಬೇಕು? ಈಗ ನಮ್ಮ ಹತ್ತಿರ ಇರುವ ಬಟ್ಟೆ–ಸೀರೆಗಳಲ್ಲಿ ಹೆಚ್ಚಿನವುಗಳನ್ನು ಆರು ತಿಂಗಳಿಗೋ ವರ್ಷಕ್ಕೋ ಒಂದು ಸಾರಿ ಮಾತ್ರ ತೊಡುತ್ತೇವೆ. ಅಷ್ಟು ಬಟ್ಟೆಗಳಿವೆ ನಮ್ಮ ಬಳಿ. ಇದರಲ್ಲಿ ಅಗತ್ಯ ಯಾವುದು, ದುರಾಸೆ ಯಾವುದು?

ಪ್ರಸ್ತುತ ಸಂದರ್ಭವನ್ನು ಕೆಲವರು ‘ಕೊಳ್ಳುಬಾಕ ಸಂಸ್ಕೃತಿ’ ಎಂದು ಕರೆಯುತ್ತಾರೆ. ಒಂದು ಮಾಲ್ಗೆ ಹೋಗಿ ನೋಡಿದರೆ ಕೊಳ್ಳುಬಾಕತನ ಎಂದರೇನು ಗೊತ್ತಾಗುತ್ತದೆ, ಅಗತ್ಯ ಮತ್ತು ದುರಾಸೆಯ ಅರ್ಥ ತಿಳಿಯುತ್ತದೆ. ಮಾಲ್ ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ನಾವು ಒಂದೇ ಅಗತ್ಯ ವಸ್ತುವನ್ನು ಖರೀದಿಸಲಿಕ್ಕೆ ಹೋದಾಗ ಕೂಡಾ ಇನ್ನೂ ಹತ್ತು ಹಲವು ವಸ್ತುಗಳನ್ನು ಖರೀದಿಸುತ್ತೇವೆ. ಈ ಸೂಪರ್ ಮಾರ್ಕೆಟ್ ಮತ್ತು ಹಳೆಗಾಲದ ದಿನಸಿ ಅಂಗಡಿಗಳಿಗೆ ಇರುವ ವ್ಯತ್ಯಾಸವನ್ನು ಗಮನಿಸಿ.

ಹಿಂದಿನ ರೀತಿಯ ಅಂಗಡಿಗಳಲ್ಲಿ ನಾವು ನಮಗೆ ಏನು ಬೇಕು ಎಂಬುದನ್ನು ಅವರಿಗೆ ಹೇಳಬೇಕು. ಆಗ ಅವರು ಒಳಗೆ ಹೋಗಿ ನಮಗೆ ಬೇಕಾದದ್ದನ್ನು ತಂದು ಕೊಡುತ್ತಾರೆ. ಈ ರೀತಿಯ ಅಂಗಡಿಗಳಿಗೆ ಬರುವ ಮೊದಲೇ ನಾವು ಏನೇನು ಬೇಕು ಎಂದು ಪಟ್ಟಿ ಮಾಡಿಕೊಂಡು, ಇಂಥದ್ದನ್ನೇ ಖರೀದಿಸಬೇಕು ಎಂಬ ಖಚಿತತೆಯಲ್ಲಿ ಬಂದಿರುತ್ತೇವೆ.

ಸೂಪರ್ ಮಾರ್ಕೆಟ್ಟುಗಳು ಹಾಗಲ್ಲ. ಅಲ್ಲಿಗೆ ಬರುವಾಗ ಹೆಚ್ಚಿನ ಸಾರಿ ನಮ್ಮ ಕೈಯಲ್ಲಿ ಅಗತ್ಯ ವಸ್ತುಗಳ ಪಟ್ಟಿ ಇದ್ದರೂ ಖರೀದಿಯು ಹಳೆಯ ಅಂಗಡಿಗಳಲ್ಲಿ ಆದಂತೆ ನಡೆಯುವುದಿಲ್ಲ. ಅಲ್ಲಿ ಕೊಳ್ಳಲು ಸಾಧ್ಯವಿರುವ ಸರಕುಗಳನ್ನು ಓರಣವಾಗಿ ಜೋಡಿಸಿಟ್ಟ ಕೊನೆಯಿಲ್ಲದ ಹಾದಿಗಳಲ್ಲಿ ನಾವು ಓಡಾಡುವಂತೆ ಮಾಡುತ್ತಾರೆ. ಈ ಸರಕುಗಳ ಸಮುದ್ರದಲ್ಲಿ ನಡೆಯುತ್ತಿರುವಾಗ ನಮ್ಮನ್ನು ಈ ವಸ್ತುಗಳು ಆಸೆಯ ಬಲೆಯನ್ನು ಬೀಸಿ ಹತ್ತು ಹಲವು ದಿಕ್ಕಿಗೆ ಆಯಸ್ಕಾಂತದ ರೀತಿ ಸೆಳೆಯುತ್ತವೆ.

ಅಲ್ಲಿನ ಸರಕುಗಳನ್ನು ನೋಡುತ್ತಾ ಸಾಗಿ ಬೇಕಾಗಿದ್ದನ್ನು ಖರೀದಿಸುವ ಉದ್ದೇಶ ನಮ್ಮದು. ಆದರೆ ಒಂದೇ ತೆಂಗಿನಕಾಯಿ ಖರೀದಿಗೆ ಎಂದು ಹೋದವನಿಗೆ ಸೋಹನ್ ಪಾಪ್ಡಿ ಕಾಣುತ್ತದೆ. ಒಂದು ಬಲ್ಬನ್ನು ಖರೀದಿಸಲು ಹೋದವಳಿಗೆ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು ಎಂದು ಹೇಳಿಕೊಳ್ಳುವ ಬೇಯಿಸಿದ ಚಿಪ್ಸು, ಗ್ರೀನ್ ಟೀ ಪ್ಯಾಕುಗಳು, ಚಾಕ್ಲೇಟ್, ಚಕ್ಲಿ ಎಲ್ಲವೂ ಕಣ್ಣಿಗೆ ರಾಚುತ್ತದೆ. ಅದರಲ್ಲಿ ಕೆಲವಾದರೂ ಅಂಗಡಿಯ ಅರೆಯಿಂದ ಇಳಿದು ನಮ್ಮ ತಳ್ಳುಗಾಡಿಯಲ್ಲಿ ಬೆಚ್ಚಗೆ ಕುಳಿತುಕೊಳ್ಳುತ್ತವೆ.

ನಮಗೆ ಇದೂ ಬೇಕು ಅದೂ ಬೇಕು. ಸೂಪರ್ ಮಾರ್ಕೆಟ್‌ಗೆ ಕಾಲಿಟ್ಟ ಕ್ಷಣವೇ ಅಲ್ಲಿನವರು ಓಡಿಬಂದು ನಮ್ಮ ಕೈಗೆ ಕೊಡುವ ಬುಟ್ಟಿ ಅಥವ ತಳ್ಳು ಗಾಡಿಯು ‘ಖಾಲಿ’ ಎಂದು ನಮಗೆ ಅನ್ನಿಸಬಹುದು. ಆದರೆ ಅದು ನಮ್ಮ ಆಸೆಗಳನ್ನು ತುಂಬಿಕೊಂಡಂತಹದ್ದು. ಈ ರೀತಿಯ ಶಾಪಿಂಗಿನಲ್ಲಿ ನಮಗೆ ಏನು ಆಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಗತ್ಯವು ನಿಧಾನವಾಗಿ ದುರಾಸೆಯೆಡೆಗೆ ತೆವಳುತ್ತಾ ಹೋಗಿ ಅದರ ಭದ್ರಮುಷ್ಟಿಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಸ್ಪಷ್ಟವಾಗಿ ಕಾಣುತ್ತದೆ.

ಈ ಉದಾಹರಣೆಯ ಮೂಲಕ ನಮಗೆ ದುರಾಸೆ ಎನ್ನುವುದು ಬೇರೆಯದೇ ರೀತಿಯಲ್ಲಿ ಅರ್ಥವಾಗುತ್ತದೆ. ಅಗತ್ಯವಲ್ಲದ ವಸ್ತುಗಳನ್ನು ಶೇಖರಿಸಿಕೊಳ್ಳುತ್ತಾ ಹೋಗುವುದು ನಮ್ಮನ್ನು ದುರಾಸೆಯ ಕತ್ತಲಿಗೆ ದೂಡುತ್ತದೆ. ಈ ರೀತಿ ಆಗುವುದು ಬರಿಯ ಸೂಪರ್ ಮಾರ್ಕೆಟ್‌ಗಳಲ್ಲಿ ಮಾತ್ರವಲ್ಲ. ಮೊದಲು ಇಡ್ಲಿ ಎಂದರೆ ಅದೊಂದು ಸರ್ವೇ ಸಾಮಾನ್ಯ ತಿಂಡಿ ಮಾತ್ರ ಆಗಿತ್ತು. ಈಗ ನಮಗೆ ಮೆನು ಕಾರ್ಡಿನಲ್ಲಿ ಕಾಣುವ ಇಡ್ಲಿ ಬರಿಯ ತಿಂಡಿಯಲ್ಲ.

ಅದು ಹಲವು ತಿಂಡಿಗಳನ್ನು ಪ್ರತಿನಿಧಿಸುವ ವರ್ಗನಾಮವಾಗಿ ಪರಿವರ್ತಿತವಾಗಿದೆ. ಅಂದರೆ ಈಗ ಈ ಇಡ್ಲಿ ವರ್ಗದಲ್ಲಿ ಇಡ್ಲಿ ಮಂಚೂರಿಯನ್, ಫ್ರೈಡ್ ಇಡ್ಲಿ, ಬಟನ್ ಇಡ್ಲಿ, ಇಡ್ಲಿ ಸೆಜುವಾನ್, ಇಡ್ಲಿ ೬೫, ಇಡ್ಲಿ ಚಿಲ್ಲಿ ಇತ್ಯಾದಿ ತಿಂಡಿಗಳು ಇವೆ. ಮೂಲದಲ್ಲಿ ಇದು ಮೊದಲಿನ ಇಡ್ಲಿಯೇ ಆಗಿದ್ದರೂ ಅದಕ್ಕೆ ಹತ್ತು ಅವತಾರಗಳು, ಸಹಸ್ರನಾಮಗಳು ದೊರೆತಿವೆ. ಈ ನಾಮ ಬಹುತ್ವ ಮತ್ತು ರುಚಿಬಹುತ್ವದ ಅಗತ್ಯ ಯಾಕೆ ಕಾಣಿಸಿಕೊಳ್ಳುತ್ತದೆ? ಇದು ಅಗತ್ಯವೇ ದುರಾಸೆಯೇ? ಮೊದಲು ಪ್ರತಿದಿನ ತಿನ್ನುತ್ತಿದ್ದ ಇಡ್ಲಿ ಇವತ್ತು ಮೂರನೆಯ ದಿನಕ್ಕೆ ಬೇಸರವಾಗಿ ಅದಕ್ಕೆ ಬೇರೆ ಹೆಸರು ಅಗತ್ಯವಾಗುತ್ತದೆ.

ಬೇರೆಯ ಹೆಸರಿಟ್ಟು ರುಚಿಯನ್ನು ಸ್ವಲ್ಪ ಬದಲಿಸಿದಾಗ ಅದೇ ಇಡ್ಲಿ ರುಚಿಸತೊಡಗುತ್ತದೆ. ಅದು ಕೂಡಾ ಎರಡು ದಿನಕ್ಕೆ ಬೇಸರಬಂದು ಹೊಸತರ ಹುಡುಕಾಟ ಪ್ರಾರಂಭವಾಗುತ್ತದೆ. ಹೋಟೆಲಿಗೆ ಹೋದಾಗ, ಬಟ್ಟೆ ಖರೀದಿಸುವಾಗ, ಕಾರು ಕೊಳ್ಳುವಾಗ ಹೀಗೆ ಎಲ್ಲೆಲ್ಲೂ ನಮಗೆ ವೆರೈಟಿಯು ಬೇಕಾಗಿದೆ.

ಇವತ್ತಿನ ಜಗತ್ತಿನಲ್ಲಿ ಅತ್ಯಂತ ಪ್ರಮುಖ ಅಗತ್ಯವಾಗಿ ಕಾಣಿಸಿಕೊಳ್ಳುವುದು ವೈವಿಧ್ಯ ಮತ್ತು ಆಯ್ಕೆಯ ಸ್ವಾತಂತ್ರ್ಯ. ಈ ಎರಡು ಅಗತ್ಯಗಳೇ ಆಧುನಿಕ ಮಧ್ಯಮವರ್ಗದ ಲಕ್ಷಣಗಳಾಗಿವೆ. ಈ ವೈವಿಧ್ಯದ ಬಗೆಗಿನ ತುಡಿತವೇ ದುರಾಸೆಯೇ?
ನಮಗೆ ಬಗೆಬಗೆ ರುಚಿಯ ತಿಂಡಿಗಳ ಅಗತ್ಯ ಯಾಕೆ ಉಂಟಾಗುತ್ತದೆ? ನಮ್ಮ ನಾಲಗೆಗೆ ಬೇರೆ ಬೇರೆ ರುಚಿಗಳು ತಿಳಿಯುತ್ತದೆ.

ನಮ್ಮ ಆಹಾರವು ಬೇರೆ ಬೇರೆ ರುಚಿಗಳನ್ನು ಹೊಂದಿರಬೇಕು ಎಂದು ಅದು ಬಯಸುತ್ತದೆ. ನಮ್ಮ ಊಟವನ್ನು ನೋಡಿದರೆ ಅಲ್ಲಿ ಬಡಿಸಲಾಗುವ ಒಂದೊಂದು ಖಾದ್ಯಗಳೂ ಬೇರೆ ಬೇರೆ ರುಚಿಯನ್ನು ನೀಡುತ್ತವೆ. ಒಂದು ಹುಳಿ ಪ್ರಧಾನವಾಗಿದ್ದರೆ ಮತ್ತೊಂದು ಸಿಹಿಯಾಗಿರಬಹುದು. ಮಧ್ಯ ನೆಕ್ಕಿಕೊಳ್ಳಲು ಖಾರದ ಉಪ್ಪಿನಕಾಯಿಯೂ ಆಗಾಗ್ಗೆ ಬೇಕು. ನಾವು ನಮ್ಮ ನಾಲಗೆಯ ದಾಸ್ಯಕ್ಕೆ ಒಳಗಾದರೆ ನಮ್ಮ ಆಸೆಯು ದುರಾಸೆಯಾಗಿ ಬೆಳೆಯುವ ಸಾಧ್ಯತೆಗಳು ಹೆಚ್ಚು.

ಈ ಕಾರಣಕ್ಕಾಗಿಯೇ ಸಾಧು ಸಂತರು ಊಟದ ಬಗ್ಗೆ ಹೆಚ್ಚಿನ ಗಮನ ಕೊಡುತ್ತಾರೆ. ದಿನದಲ್ಲಿ ಒಂದೇ ಹೊತ್ತು ಊಟ ಮಾಡುವುದು, ಹೊತ್ತಿಗೆ ಮೂರೇ ತುತ್ತು ಉಣ್ಣುವುದು, ಒಂದೇ ರೀತಿಯ ಆಹಾರವನ್ನು ಸೇವಿಸುವುದು, ರುಚಿಯಿಲ್ಲದ ತಿಂಡಿಗಳನ್ನು ತಿನ್ನುವುದು ಮುಂತಾದ ಪ್ರಯೋಗಗಳನ್ನು ಅವರು ಮಾಡುತ್ತಾರೆ. ಜಗತ್ತಿನ ಹಲವು ಸಂಸ್ಕೃತಿಗಳ ಸಂತರಲ್ಲಿ ಇದನ್ನು ಕಾಣಬಹುದು. ರುಚಿಯ ದಾಸ್ಯದ ಬಲೆಗೆ ಬಿದ್ದಾಗ ಅದು ನಮ್ಮನ್ನು ಬಲವಾಗಿ ಸೆಳೆದು ದುರಾಸೆಯ ನೇಣಿಗೆ ಸಿಕ್ಕಿಸುತ್ತದೆ. ಕಲೆಯ ಬಗ್ಗೆ ವಿವರಿಸುವ ಸೌಂದರ್ಯಶಾಸ್ತ್ರವು ಕೂಡಾ ರುಚಿ ರಸಗಳ ಪರಿಭಾಷೆಯಲ್ಲಿಯೇ ಮಾತನಾಡುತ್ತದೆ.

ನಾವು ಕಲೆಯನ್ನು ಅನುಭವಿಸುವುದು ಕೂಡಾ ಆಹಾರವನ್ನು ಅನುಭವಿಸುವ ರೀತಿಯಲ್ಲಿಯೇ. ಗಾಂಧಿಯವರ ರುಚಿ ಹೇಗಿದ್ದಿರಬಹುದು? ಅವರು ಹಲವು ದಶಕಗಳ ಕಾಲ ಉಟ್ಟಿದ್ದು ಒಂದೇ ರೀತಿಯ ಧೋತಿ, ಅದೇ ಮೇಲುಹೊದಿಕೆ, ಮೆಟ್ಟಿದ್ದು ಅದೇ ಜೋಡುಗಳನ್ನು, ಹಿಡಿದಿದ್ದು ಅದೇ ಕೋಲನ್ನು, ಪ್ರತಿದಿನ ಹಾಕಿದ್ದು ಅದೇ ಗೋಲಾಕಾರದ ಕನ್ನಡಕ. ಆಯ್ಕೆಯ ಸ್ವಾತಂತ್ರ್ಯದ ಹೆಸರಿನಲ್ಲಿ ಮೈವೆತ್ತಿರುವ ಈ ವೈವಿಧ್ಯವನ್ನು ಅವರು ಮೆಚ್ಚುತ್ತಿದ್ದರೇ? ಗಾಂಧೀಜಿಯವರ ಊಟ ಕೂಡಾ ಅದೇ ರೀತಿ.

ಅವರು ವಿವಿಧ ಮಸಾಲೆ ಪದಾರ್ಥಗಳ ಸೇವನೆಯನ್ನು ನಿಲ್ಲಿಸಿದ್ದರು. ಹಸಿ ಅಥವ ಬೇಯಿಸಿದ ತರಕಾರಿಗಳನ್ನೇ ಅವರು ಹೆಚ್ಚಾಗಿ ತಿನ್ನುತ್ತಿದ್ದರು. ಅವರ ಆಶ್ರಮದ ಆಹಾರ ಕೂಡಾ ಅತ್ಯಂತ ಸರಳವಾಗಿತ್ತು. ಅವರ ಉಪವಾಸಗಳು ಕೂಡಾ ರುಚಿಯಾದ ಆಹಾರದ ಬಗೆಗೆ ಇರಬಹುದಾದ ತೀವ್ರ ಆಸೆಗಳನ್ನು ಮೆಟ್ಟಿ ನಿಲ್ಲುವ ಪ್ರಯೋಗವೇ ಆಗಿತ್ತು. ಆಹಾರದ ರುಚಿಯೆಡೆಗಿನ ಸೆಳೆತ ಮತ್ತು ಇತರ ವಸ್ತು ವ್ಯವಹಾರಗಳ ಬಗೆಗಿನ ತುಡಿತಗಳ ನಡುವಿನ ಸಂಬಂಧವನ್ನು ಗಾಂಧಿ ಕಂಡುಕೊಂಡಿದ್ದರು.

ನಮ್ಮ ಕಣ್ಣೆದುರಿಗೆ ವೈವಿಧ್ಯವು ರಾಚುತ್ತದೆ. ವೈವಿಧ್ಯವಿಲ್ಲದ ಏನನ್ನೂ ನಾವು ಸ್ವೀಕರಿಸಲಾರದಂತೆ ನಾವು ಬದಲಾಗಿದ್ದೇವೆ. ವೈವಿಧ್ಯವು ನಮ್ಮ ಬದುಕಿನ ಭಾಗವೇ ಆಗಿಬಿಟ್ಟಿದೆ. ಆದರೆ ವೈವಿಧ್ಯದ ಆಸೆಯನ್ನು ಪೂರೈಸಿಕೊಳ್ಳಲು ಇರಬಹುದಾದ ಒಂದೇ ಅಡಚಣೆ ಎಂದರೆ ಕೊಳ್ಳುವ ಶಕ್ತಿ. ಇವತ್ತು ನಾವು ಸಿಕ್ಕಿಹಾಕಿಕೊಂಡಿರುವ ದ್ವಂದ್ವ ಇದು. ಹೆಚ್ಚಿನ ಸಂದರ್ಭದಲ್ಲಿ ವಸ್ತು ಸೇವೆಗಳನ್ನು ಖರೀದಿಸುವ ಆಯ್ಕೆ ಮಾಡುವುದು ನಮ್ಮ ಆಯ್ಕೆಯ ಸ್ವಾತಂತ್ರ್ಯವಲ್ಲ, ನಮ್ಮ ಯೋಚನೆಯಲ್ಲ.

ಬದಲಿಗೆ ಅದು ನಮ್ಮ ಕೊಳ್ಳುವ ಶಕ್ತಿ. ಆದರೆ ನಮಗೆ ವೈವಿಧ್ಯ ಮತ್ತು ಕೊಳ್ಳುವ ಶಕ್ತಿ ಎರಡೂ ಇದ್ದಾಗ ನಾವು ಹೇಗೆ ವರ್ತಿಸುತ್ತೇವೆ? ನಮಗೆ ಖರೀದಿಸುವ ಶಕ್ತಿಯೂ ಇದೆ, ಕೊಳ್ಳಲು ಹತ್ತು ಹಲವು ರೀತಿಯ ಸರಕುಗಳೂ ಕೈ ಬೀಸಿ ಕರೆಯುತ್ತಿವೆ. ಇಂತಹ ಸಂದರ್ಭದಲ್ಲಿ ನಾವು ವಸ್ತುವೊಂದನ್ನು ಖರೀದಿಸುವುದೋ ಬಿಡುವುದೋ ಎಂಬುದನ್ನು ಹೇಗೆ ತೀರ್ಮಾನಿಸುತ್ತೇವೆ? ಈ ಪ್ರಶ್ನೆಯನ್ನು ನಾವೆಲ್ಲರೂ ನಮಗೇ ಕೇಳಿಕೊಳ್ಳಬೇಕು. ಈ ಪ್ರಶ್ನೆಯೇ ನಮ್ಮ ಅಗತ್ಯ ಮತ್ತು ದುರಾಸೆಯ ನಡುವೆ ಇರುವ ತೆಳುವಾದ ಗೆರೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT