ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಘರ್‌ವಾಪ್ಸಿ

ಸುಮಂಗಲಾ
Published 12 ಮೇ 2024, 20:09 IST
Last Updated 12 ಮೇ 2024, 20:09 IST
ಅಕ್ಷರ ಗಾತ್ರ

‘ರಾಹುಲಣ್ಣ ಚುನಾವಣೆದಾಗೆ ಎರಡೂ ಕಡೆ ಸೋತಮ್ಯಾಗೆ ಎಲ್ಲಿ ಹೋಗತಾನೆ ಅಂತ ಗೊತ್ತೈತೇನ್?’ ಬೆಕ್ಕಣ್ಣ ಮುಗುಮ್ಮಾಗಿ ಕೇಳಿದಾಗ ಗೊತ್ತಿಲ್ಲವೆಂದು ತಲೆಯಲ್ಲಾಡಿಸಿದೆ.

‘ನಮ್‌ ಶಾ ಅಂಕಲ್ಲು ಅವಂಗ ಇಟಲಿ ವಿಮಾನದ ಟಿಕೆಟ್‌ ತೆಗೆಸಿಟ್ಟಾರೆ. ಬರೀ ಹೋಗಾಕೆ ಮಾತ್ರ! ವಾಪಸು ಬರಂಗಿಲ್ಲ… ಅಂವಾ ಅಲ್ಲೇ ಸೆಟಲ್‌ ಆಗಲಿ ಅಂತ ಶಾ ಅಂಕಲ್ಲು ಹುಕುಂ ಹೊರಡಸ್ಯಾರೆ’ ಎಂದು ಮೀಸೆಯಂಚಿನಲ್ಲಿ ನಕ್ಕಿತು.

‘ಅಂವಾ ಎದಕ್ಕ ಇಟಲಿಗೆ ಹೋಗತಾನಲೇ? ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅಲ್ಲಿ ಚುನಾವಣೆ ದಾಗೆ ಸೋತರೆ ಭಾರತಕ್ಕೆ ಹೋಗಿ ಸೆಟಲ್‌ ಆಗಪಾ ಅಂತ ಅಲ್ಲಿಯ ಮಂದಿ ವಾಪಸ್ ಕಳಿಸತಾರೇನು? ಕಮಲಾ ಹ್ಯಾರಿಸ್‌ ಅಮೆರಿಕದಾಗೆ ಚುನಾವಣೆಯಲ್ಲಿ ಸೋತರೆ ಭಾರತಕ್ಕೆ ಬಂದು ಸೆಟಲ್‌ ಆಗತಾರೇನು?’

‘ಅವರೆಲ್ಲ ಭಾಳ ಹಿಂದೇನೆ ಆ ದೇಶಗಳಿಗೆ ಹೋಗಿ ಸೆಟಲ್‌ ಆಗಿ, ಭಾರತದ ಪತಾಕೆ ಹಾರಿಸ ಲಾಕೆ ಹತ್ಯಾರೆ. ರಾಹುಲಣ್ಣಂಗೆ ಇಟಲಿ ನಂಟೈತಿ, ಹಂಗಾಗಿ ಅಂವನ್ನ ಅಲ್ಲಿಗೇ ಕಳಿಸಬಕು ಅಂತ ಶಾ ಅಂಕಲ್ಲು ಹೇಳ್ಯಾರೆ’ ಎಂದು ಮತ್ತೊಂದು
ವಿತಂಡವಾದವನ್ನು ಮುಂದಿಟ್ಟಿತು.

‘ರಾಹುಲಣ್ಣ ಇಲ್ಲೇ ಹುಟ್ಟಿ, ಬೆಳೆದಾನ. ನೀ ಎಷ್ಟ್‌ ಭಾರತೀಯ ಅದೀಯೋ ಅಂವನೂ ಅಷ್ಟೇ ಭಾರತೀಯ ಅದಾನ’.

‘ನಾ ಜಾಸ್ತಿ ಭಾರತೀಯ ಅದೀನಿ. ನಮ್ಮವ್ವ ಅಚ್ಚಗನ್ನಡದಾಗೆ ಮ್ಯಾಂವ್‌ ಅನ್ನತಾಳೆ, ಸೋನಿಯಾ ಗಾಂಧಿ ಹಂಗ ಇಟಲಿಯಾಕಿ ಅಲ್ಲ’ ಎಂದಿತು ಕೋಪದಿಂದ.

‘ಸೋನಿಯಾನೂ ಪಕ್ಕಾ ಹಿಂದಿವಳಗೆ ಅಚ್ಛಾ ಹೈ ಅನ್ನತಾರೆ’ ಎಂದೆ.

‘ಅಚ್ಛಾ ಹೈ, ಅಚ್ಛೇ ದಿನ್‌ ಇವೆಲ್ಲ ನಮ್‌ ಮೋದಿಮಾಮನ ನುಡಿಮುತ್ತು. ಆಕಿ ಇಟಾಲಿಯನ್‌ ಭಾಷೆವಳಗೆ ಮೋಲ್ತೊ ಬೆನೆ ಅಂತಾರಷ್ಟೆ’ ಬೆಕ್ಕಣ್ಣ ಮತ್ತೆ ಗುರುಗುಟ್ಟಿತು.

‘ಅಲ್ಲಲೇ… ರಾಹುಲಣ್ಣನನ್ನ ಇಟಲಿಗೆ ಕಳಿಸೋ ವಿಚಾರ ಆಮೇಲೆ. ಮೊದ್ಲು ವಿದೇಶ
ದೊಳಗೆ ತಲೆತಪ್ಪಿಸಿಕೊಂಡಾನಲ್ಲ ಹಾಸನದ ಕುವರ, ಅವನ ಘರ್‌ವಾಪ್ಸಿ ಮಾಡಾಕೆ ನಿಮ್ಮ ಶಾ ಅಂಕಲ್ಲಿಗೆ ಹೇಳಲೇ’ ಎಂದು ಕಿಚಾಯಿಸಿದೆ.
ಬೆಕ್ಕಣ್ಣ ಮರುಮಾತಾಡದೆ ಬಾಲಮುದುರಿ ಕೂತಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT