ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವತ್ತರ ನಂತರ ಸಂಗೀತ!

Last Updated 3 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಸಂಗೀತ ಕಲಿಯುವುದಕ್ಕೆ ವಯಸ್ಸಿನ ಮಿತಿ ಇದೆಯೆ? ಹಲವಾರು ಸುಪ್ರಸಿದ್ಧ ಸಂಗೀತಗಾರರು ತಮ್ಮ ಸಾಧನೆಯ ಉತ್ತುಂಗವನ್ನು ಮುಟ್ಟಿದ್ದರೂ `ಕಲಿಯುವುದು ಇನ್ನೂ ಇದೆ~ ಎಂದೇ ಹೇಳುತ್ತಾರೆ. ಸಂಗೀತವೆಂಬುದು ಕಲಿತು ಮುಗಿಸಲಾರದ ವಿದ್ಯೆ ಎಂಬುದು ಎಲ್ಲ ಕಲಾವಿದರ, ಸಂಗೀತ ವಿದ್ವಾಂಸರ ಅನುಭವ. ಇದಕ್ಕೆ ಅತ್ಯುತ್ತಮ ಉದಾಹರಣೆ ಪಂಚಾಕ್ಷರಿ ಗವಾಯಿಗಳು.

ಪಂಚಾಕ್ಷರಿ ಗವಾಯಿಗಳು ಮೊದಲಿಗೆ ಕರ್ನಾಟಕಿ ಸಂಗೀತ ಕಲಿತರು. ನಂತರ ಹಿಂದೂಸ್ತಾನಿ ಸಂಗೀತವನ್ನು ತಮ್ಮ ಪ್ರೌಢ ವಯಸ್ಸಿನಲ್ಲಿ ಕಲಿಯಲಾರಂಭಿಸಿದರು.

ಇದಕ್ಕಾಗಿ ರಾಮಕೃಷ್ಣಬುವಾ ವಝೆ ಮೊದಲಾಗಿ ಹಲವಾರು ಗುರುಗಳಲ್ಲಿ ಶಿಷ್ಯತ್ವವನ್ನು ವಹಿಸಿಕೊಂಡರು. ತಮ್ಮ ಮಧ್ಯವಯಸ್ಸಿನಲ್ಲಿ ಹಿಂದುಸ್ತಾನಿ ಕಲಿತು ಅದರಲ್ಲಿ ಪರಿಣತಿಯನ್ನೂ ಸಾಧಿಸಿದರು. ಅಷ್ಟು ಸಾಲದೆಂಬಂತೆ ಹಲವು ವಾದ್ಯಗಳನ್ನು ಕಲಿತುಕೊಂಡರು. ಆದರೂ ಅವರು ತಮ್ಮ ವಿದ್ಯಾರ್ಥಿಗಳಿಗೆ `ನಾನು ಕಲಿಯುವುದಿನ್ನೂ ಮುಗಿದಿಲ್ಲ~ ಎಂದು ಕೊನೆಯವರೆಗೂ ಹೇಳುತ್ತಿದ್ದರು. ಈ ಅಭಿಪ್ರಾಯವನ್ನು ಧ್ವನಿಸುವ `ಗಾನ ವಿದ್ಯಾ ಬಡೀ ಕಠಿಣ ಹೈ~ ಎಂಬ ಬಂದಿಶ್ ಅನ್ನು ಅವರು ತಮ್ಮ ಬೈಠಕ್‌ಗಳಲ್ಲಿ ಹಾಡುತ್ತಿದ್ದರು.

ಪಂಚಾಕ್ಷರಿ ಗವಾಯಿಗಳ ಆದರ್ಶವನ್ನು, ಸಂಗೀತವನ್ನು ಮತ್ತು ಅವರು ಕಟ್ಟಿದ `ಶ್ರೀ ವೀರೇಶ್ವರ ಪುಣ್ಯಾಶ್ರಮ~ವನ್ನು ಯಥಾವತ್ತಾಗಿ ಮುನ್ನಡೆಸಿಕೊಂಡು ಬಂದ ಕೀರ್ತಿ ಪಂ.ಪುಟ್ಟರಾಜ ಗವಾಯಿಗಳದು. ಪುಟ್ಟರಾಜ ಗವಾಯಿಗಳು ನಮ್ಮ ನಡುವೆ ಬದುಕಿದ್ದ ಸಂಗೀತದ ಸಂತ. ಕರ್ನಾಟಕಿ-ಹಿಂದುಸ್ತಾನಿ ಎರಡರಲ್ಲೂ ಸಾಧನೆ ಮಾಡಿದ ಹಾಡುಗಾರ.

ಜೊತೆಗೆ ಹಾರ್ಮೋನಿಯಂ, ತಬಲಾ ಮೊದಲಾಗಿ ಕೆಲವು ವಾದ್ಯಗಳನ್ನು ನುಡಿಸಬಲ್ಲವರಾಗಿದ್ದರು. ಗುರುಗಳಂತೆಯೇ ನೂರಾರು ಶಿಷ್ಯರಿಗೆ ವಿದ್ಯಾದಾನ ಹಾಗೂ ಅನ್ನದಾನ ಮಾಡಿದ ಕೀರ್ತಿ ಅವರದು. ಇತ್ತೀಚೆಗೆ ನಮ್ಮನ್ನಗಲಿದ ಸಂಗೀತದ ಈ ಮೇರುಪರ್ವತ ತಮ್ಮ ಶಿಷ್ಯರಿಗೆ ಹೇಳುತ್ತಿದ್ದರು- `ಸಂಗೀತವನ್ನು ಕಲಿಯುವುದು ಮುಗಿಯುವುದೇ ಇಲ್ಲ~.  

ಪುಟ್ಟರಾಜ ಗವಾಯಿಗಳು ತಮ್ಮ ಇಳಿ ವಯಸ್ಸಿನವರೆಗೂ ಸಂಗೀತವನ್ನು ಕಲಿಸುವುದರಲ್ಲಿ ಸುಖ ಕಾಣುತ್ತಿದ್ದರು. ದೇಹ ತೀರಾ ಕೃಶವಾದ ನಂತರವಷ್ಟೇ ಅವರು ಪ್ರತ್ಯಕ್ಷ ಕಲಿಸುವುದು ನಿಂತುಹೋಯಿತು. ಆದರೂ ಹಿರಿಯ ಶಿಷ್ಯರು ಬಂದಾಗ ಅವರೊಂದಿಗೆ ಚರ್ಚೆ ಮಾಡಿ, ಸೂಕ್ತ ಮಾರ್ಗದರ್ಶನ ನೀಡುತ್ತಿದ್ದರು. ನಾಲ್ಕಾರು ವರ್ಷಗಳ ಹಿಂದೆ ನಡೆದ ರಸನಿಮಿಷವಿದು.

ಅವರ ಪ್ರಮುಖ ಶಿಷ್ಯರಲ್ಲಿ ಒಬ್ಬರಾದ ಪಂ.ವೆಂಕಟೇಶಕುಮಾರ ಒಮ್ಮೆ ಅವರಲ್ಲಿಗೆ ಬಂದಿದ್ದರು. ಗುರುವಂದನೆ ಮುಗಿದ ನಂತರ ಗವಾಯಿಗಳು ಬಂದ ಕಾರಣವನ್ನು ಕೇಳಿದರು. ಅದಕ್ಕೆ ವೆಂಕಟೇಶಕುಮಾರರು, ಅವರಲ್ಲಿಗೆ ರಾಗವೊಂದನ್ನು ಹೇಳಿಸಿಕೊಳ್ಳಲು ಬಂದಿರುವುದಾಗಿ ವಿನಂತಿಸಿಕೊಂಡರು.

`ಯಾವ ರಾಗ ಕಲೀಬೇಕಂತಿ?~ - ಗುರುಗಳ ಪ್ರಶ್ನೆ.
`ಭೂಪ ರಾಗ ಕಲಿಯೂದೈತಿ~ - ಶಿಷ್ಯನ ಉತ್ತರ.

ಗುರುಗಳಿಗೆ ಆಶ್ಚರ್ಯ. ಸಾಕಷ್ಟು ಹೆಸರು ಮಾಡಿರುವ ಈ ಶಿಷ್ಯ, ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳು ಕಲಿಯುವ ಭೂಪರಾಗವನ್ನು ಕಲಿಯಬಯಸಿದ್ದಾನೆ!
`ಇದ ರಾಗ ಯಾಕ ಬೇಕು?~- ಗುರುಗಳು ಆಶ್ಚರ್ಯದಿಂದಲೇ ಪ್ರಶ್ನಿಸಿದರು.

`ಯಾಕಂದ್ರ ಭೂಪ ಹಾಡುವಾಗ ಒಮ್ಮಮ್ಮೆ ಶುದ್ಧಕಲ್ಯಾಣ ಆಗತೈತಿ, ಇಲ್ಲಂದ್ರ ದೇಸಕಾರ ಆಗತೈತಿ. ಬರೋಬ್ಬರಿ ಭೂಪ ಹಾಡೋದು ಹ್ಯಾಗ?~
ಪುಟ್ಟರಾಜ ಗವಾಯಿಗಳು ನಕ್ಕರು. ಮತ್ತು ಹೇಳಿದರು-

`ನೀ ಹೇಳೋದು ಬರೋಬ್ಬರಿ ಐತಿ. ಯಾಕಂದ್ರ ಸಂಗೀತಗಾರಗ ಸರಿಯಾಗಿ ಸ್ವರಾ ಹಚ್ಚೂದು ಹೆಂಗ ಅಂತ ತಿಳಿಯೂದ ಅರವತ್ತ ವರ್ಷಕ್ಕ. ನೀ ಭೂಪ ರಾಗ ಕೇಳೂದು ಬರೋಬ್ಬರಿ ಐತಿ~.

ಅದು ಪುಟ್ಟರಾಜ ಗವಾಯಿಗಳ ಅನುಭವದ ಆಳದಿಂದ ಬಂದ ಮಾತಾಗಿತ್ತು. ಕಲಾವಿದನ ನಿಜವಾದ ಸಂಗೀತ ವ್ಯಕ್ತಗೊಳ್ಳಲು ಆರಂಭವಾಗುವುದೇ ಆತ ಪಕ್ವವಾದ ಮೇಲೆ.

ಅಲ್ಲಿಯವರೆಗೂ ಅವನದೇನಿದ್ದರೂ ಕಸರತ್ತು ಮಾತ್ರ. ಸಂಗೀತದಿಂದ ರಸಾನುಭವವಾಗುವುದು ಪ್ರೌಢಾವಸ್ಥೆಯನ್ನು ತಲುಪಿದ ನಂತರವೇ ಎಂಬುದನ್ನು ಪುಟ್ಟರಾಜ ಗವಾಯಿಗಳು ಅಂದು ಬಹಳ ಧ್ವನಿಪೂರ್ಣವಾಗಿ ಹೇಳಿದ್ದರು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT