ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಕಾರ ಸ್ಮರಣೆ

ಪ್ರಬಂಧ
Last Updated 9 ಅಕ್ಟೋಬರ್ 2016, 8:52 IST
ಅಕ್ಷರ ಗಾತ್ರ

ಉಪಕಾರಿ’ ಎಂದರೆ ತಾವು ಎಷ್ಟು ಬಾಧೆಪಟ್ಟರೂ ಬೇರೆಯವರಿಗೆ ಸಹಾಯ ಮಾಡುವವರು ಎಂದು ನಾಗಚಂದ್ರ ಹೇಳುತ್ತಾನೆ. ಆದರೆ ಗಾದೆಕಾರನು ‘ಊರು ಉಪಕಾರವರಿಯದು ಹೆಣ ಶೃಂಗಾರವರಿಯದು’ ಎನ್ನುತ್ತಾನೆ.

ಕಷ್ಟದ ಸಮಯದಲ್ಲಿ ಅಥವಾ ನಮಗೆ ಅಗತ್ಯವಿದ್ದ ಸಮಯದಲ್ಲಿ ಯಾರಾದರೂ ಸಹಾಯಹಸ್ತ ಚಾಚಿದರೆ ನಾವು ಮುಕ್ತವಾಗಿ ‘ನಿಮ್ಮ ಉಪಕಾರವನ್ನು ನಾವು ಮರೆಯುವುದಿಲ್ಲ’ ಎನ್ನುತ್ತೇವೆ. ಆದರೆ ಇದು ಸರ್ವಮಾನ್ಯ ಹೇಳಿಕೆಯೇ ಹೊರತು ವಾಸ್ತವವಲ್ಲ.

ಕೆಲವರು ಅದು ಉಪಕಾರ ಅಲ್ಲ ‘ಸೇವೆ’ ಎಂದು ವ್ಯಾಖ್ಯಾನ ಮಾಡುತ್ತಾರೆ. ಕೆಲವರು ‘ಅವರ ಕರ್ತವ್ಯ ಅವರು ಮಾಡಿದರು, ಅದಕ್ಕೆ ವಿಶೇಷ ಸ್ಮರಣೆ ಏಕೆ’ ಎಂದು ಹೇಳುತ್ತಾರೆ. ನನ್ನ ಗೆಳೆಯ ಅಪ್ಪಾಜಿ ಮಾತ್ರ ಆ ಮಾತಿಗೆ ಒಪ್ಪಾಜಿ ಆಗಲಿಲ್ಲ, ಆ ಕಥೆ ಬೇರೆ.

ಇಂಗ್ಲೆಂಡಿನಲ್ಲಿ ಒಂದು ದಿನ ನಾನು, ಕೃಷ್ಣೇಗೌಡ ಹರಟುತ್ತ ಸಾಗಿದ್ದೆವು. ನನ್ನ ಗೆಳೆಯ ಏನೋ ಮಾತಾಡುತ್ತ – ‘ಅದು ಸರಿ, ನಿಮ್ಮ ಹುಡುಗ ಯಾಕೆ ಬರಲೇ ಇಲ್ಲ ನಿನ್ನ ನೋಡೋಕೆ?’ ಅಂತ ಕೇಳಿದ. ‘ಆತ ತುಂಬ ಕೆಲಸದಲ್ಲಿ ಸಿಕ್ಕಿರಬೇಕು’ ಎಂದೆ. ನಮ್ಮ ಮಧ್ಯೆ ಹೊಸ ವೈದ್ಯಕೀಯ ಪದವೀಧರ ತಿರುಗಾಟಕ್ಕೆ ಬಂದಿದ್ದ. ನನ್ನ ಗೆಳೆಯ ಹೇಳಿದ,
‘ನೋಡು ಮರಿ, ಯಾರಿಂದಲೂ ಉಪಕಾರಸ್ಮರಣೆ ನಿರೀಕ್ಷಿಸಬೇಡ. ಅದರ ಅಗತ್ಯವಿಲ್ಲ. ನಮ್ಮ ಕೆಲಸ ನಾವು ಮಾಡಿದ್ದೇವೆ ಎಂದು ನಾವೇ ಸಮಾಧಾನ ತಂದುಕೊಳ್ಳಬೇಕು’.

ಕೃಷ್ಣೇಗೌಡ, ‘ಅಲ್ಲ ಸಾರ್! ಅಷ್ಟು ಕೂಡ ಕೃತಜ್ಞತೆ ಇರಬಾರದೆ ಅವರಿಗೆ?’. ಅಪ್ಪಾಜಿಗೌಡ ಹೇಳಿದ, ‘ನೋಡಿ, ನನ್ನದೇ ಉದಾಹರಣೆ ಕೊಡುತ್ತಿದ್ದೇನೆ. ಈ ಮೂವತ್ತು ವರ್ಷಗಳಲ್ಲಿ ಕೊನೆಯ ಪಕ್ಷ ಎಪ್ಪತ್ತು ಜನ ನನ್ನ ಬಳಿ ಬಂದಿದ್ದಾಗ, ನಾನು ಅವರನ್ನು ಚೆನ್ನಾಗಿ ನೋಡಿಕೊಂಡು ಒಳ್ಳೆ ಕೆಲಸಕ್ಕೆ ಪ್ರಯತ್ನಿಸುವಂತೆ ಸಲಹೆ ಕೊಟ್ಟು, ಕೆಲಸ ಸಿಗುವವರೆಗೂ ನನ್ನ ಮನೆಯಲ್ಲಿ ಇರಿಸಿಕೊಂಡಿದ್ದೇನೆ. ಆಮೇಲೆ ಅವರು ಆಗಾಗ ಬರುತ್ತಾರೆ. ನಾಲ್ಕು ವರ್ಷ ಆದಮೇಲೆ ಅದನ್ನು ಮರೆಯುತ್ತಾರೆ’.

ನನಗೆ ರೇಗಿತು. ‘ಕೊಬ್ಬಿನ ಪಟಿಂಗರು’ ಎಂದೆ.
ಗೆಳೆಯ ಹೇಳಿದ: ‘ಕೊಬ್ಬಿನ ವಿಷಯ ನನಗೆ ಗೊತ್ತಿಲ್ಲ. ಆದರೆ ಅವರದೂ ಏನೂ ತಪ್ಪಿಲ್ಲ. ಅವರ ಮನಸ್ಸಿಗೆ ತಮ್ಮ ಹಿಂದಿನ ದೈನ್ಯದ, ಹುಡುಕಾಟದ ನೀಚದಿನಗಳು ಕಳೆದು ಹೋಗಿ ಮನಸ್ಸು ನಿರ್ಮಲವೂ ಅಸಮಾನವೂ ಆಗಿರುತ್ತದೆ. ಆದ್ದರಿಂದ ಅದನ್ನು ಜ್ಞಾಪಿಸಿಕೊಂಡು ಆ ಹಿಂದಿನ ದೈನ್ಯಸ್ಥಿತಿಗೆ ಬರುವುದನ್ನು ಯಾರೂ ಬಯಸುವುದಿಲ್ಲ. ಏಕೆಂದರೆ ತಾನು ಸ್ವಯಂ ಸಿದ್ಧಗೊಂಡ ಸಾಹಸಿ ಎಂದು ಆತ ಎಲ್ಲರಿಗೂ ಹೇಳಿರುತ್ತಾನೆ. ಈಗ ಅದನ್ನು ಹೇಳಿದರೆ ತಮ್ಮ ಬಗೆಗೆ ಅವರಿಗೆಲ್ಲ ಗೌರವ ಕಡಿಮೆಯಾದೀತೆಂಬ ಭಯ ಬೇರೆ. ಸದಾಕಾಲ ಅದನ್ನೇ ಹೇಳುತ್ತಿದ್ದರೆ ತನ್ನ ವ್ಯಕ್ತಿತ್ವಕ್ಕೆ ಧಕ್ಕೆ ಎಂಬ ಭಾವ ಅವರಲ್ಲಿ ಬಲಿತಿರುತ್ತದೆ. ತನ್ನ ಯಾತನೆಯ ಘಟ್ಟವನ್ನು ಮರೆಯಲೆಂದೇ ಅವನು ಈ ಎಲ್ಲ ತಂತ್ರ ಹೂಡುತ್ತಾನೆ. ಕೊನೆಗೆ ತನ್ನ ವಿವಾಹದ ಆಮಂತ್ರಣ ಪತ್ರವನ್ನು ಕೂಡ ಅವನು ಉಪಕಾರಿಗಳಿಗೆ ಕಳಿಸುವುದಿಲ್ಲ. ನನಗೆ ಅವರ ಮನಸ್ಸು ಅರ್ಥವಾಗುತ್ತದೆ. ನಕ್ಕು ಸುಮ್ಮನಾಗುತ್ತೇನೆ’.

ಎಲ್ಲರೂ ಹಾಗಿರುವುದಿಲ್ಲವಲ್ಲ,
‘ನಿಜ, ಎಲ್ಲರೂ ಹಾಗಿರುವುದಿಲ್ಲ. ನೋಡಿಲ್ಲಿ, ಈಗ ನಮ್ಮನ್ನು ಹುಡುಕಿಕೊಂಡು ಬಂದಿರುವ ಮಲ್ಲಿಕಾರ್ಜುನ ಇದ್ದಾನಲ್ಲ, ಅವನ ಕಡೆ ನೋಡು. ಅವನು ಇನ್ನೂ ನನ್ನನ್ನು ಮರೆತಿಲ್ಲ. ಈಗ ತಾನೇ ಕೆಲಸ ಸಿಕ್ಕಿದೆ, ಅವನಿಗೆ ಮರೆಯಲು ಸಮಯ ಬೇಡವೇ? ಬೇಗ ಮರೆ ಅಂತ ಹೇಳಲಿಕ್ಕಾಗುತ್ತಾ?’

ಅಪ್ಪಾಜಿಗೌಡರ ಮಾತು ಮುಗಿದಿರಲಿಲ್ಲ – ‘ನೋಡು, ಜಗತ್ತಿನಲ್ಲಿ ಉಪಕಾರ ಪಡೆಯದೆ ಇರುವ ವ್ಯಕ್ತಿಯೇ ಇರುವುದಿಲ್ಲ. ನಮಗೆ ಆದ ಉಪಕಾರವನ್ನು ಮರೆಯದೆ ಮುಂದಿನ ಜನಾಂಗದವರಿಗೆ ನಾವು ಅದೇ ರೀತಿ ಉಪಕಾರ ಮಾಡಿದರೆ ನಮ್ಮ ಉಪಕಾರಕ್ಕೆ ರಸೀತಿ ಸಿಕ್ಕಂತಾಯಿತಲ್ಲವೆ! ಅಲ್ಲದೆ ನೀನು ತುಂಬ ಉಪಕಾರ ಮಾಡಿದ್ದೇನು ಹೇಳು, ಅದು ಕೊಚ್ಚಿಕೊಳ್ಳಬೇಕಾದ ಮಾತೇನೂ ಅಲ್ಲವಲ್ಲ’.

ನನ್ನ ಗುರುಗಳ ಮಗಳೂ ಒಂದು ಸಲ ಇದೇ ಮಾತು ಹೇಳಿದಳು. ಅವಳು ಅಮೆರಿಕಾದಲ್ಲಿ ಒಂದು ಸಹಾಯಸಂಸ್ಥೆ ನಡೆಸುತ್ತಿದ್ದಾಳೆ. ವಿವಾಹ ವಿಚ್ಛೇದಿತರಾದ, ಗಂಡನ ಹಿಂಸೆಗೆ ಒಳಗಾದ, ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವ ಹೆಣ್ಣುಮಕ್ಕಳಿಗೆ ನೆರವು ನೀಡುವ ಸಂಸ್ಥೆ ಅದು. ಅದರಿಂದ ಅನೇಕರು ಪ್ರಯೋಜನ ಪಡೆದಿದ್ದಾರೆ. ಆದರೆ ಕೆಲ ಕಾಲದ ನಂತರ ಅದನ್ನು ತುಂಬ ಹಾಯಾಗಿ ಮರೆತುಬಿಡುತ್ತಾರೆ. ಆಕೆ ಹೇಳಿದ್ದ ಒಂದು ಘಟನೆ ನನಗಿನ್ನೂ ಹಸುರಾಗಿದೆ. ಒಬ್ಬ ಹೆಣ್ಣುಮಗಳು ಈ ಸಂಸ್ಥೆಯಿಂದ ಪುನರ್ವಸತಿ ಪಡೆದಿದ್ದರು, ಮತ್ತೆ ಮದುವೆಯಾದಾಗ ಈ ಸಂಸ್ಥೆಯ ಮಾರ್ಗದರ್ಶಿಗೆ ಮಾತ್ರ ಆಹ್ವಾನ ನೀಡಲಿಲ್ಲ.

ಕಾರಣ?
‘ಬಹುಶಃ ನನ್ನ ಮುಖ ನೋಡಿದರೆ ಆಕೆಗೆ ಮತ್ತೆ ಹಳೆಯ ದಾರುಣ ಕಥೆ ಎಲ್ಲಾ ನೆನಪಿಗೆ ಬರುವ ಸಾಧ್ಯತೆ ಇರುವುದರಿಂದ ಹಾಗೆ ಮಾಡುತ್ತಿದ್ದಾರೋ ಏನೋ ಎಂದು ನನಗನ್ನಿಸಿದೆ’.
ಇದೂ ನಿಜವಿರಬಹುದು.

ಅಗ್ನಿಭೂತಿ–ವಾಯುಭೂತಿಗಳೆಂಬ ಸೋದರರ ಕಥೆ ‘ಸುಕುಮಾರ ಚರಿತೆ’ಯಲ್ಲಿ ಬರುತ್ತದೆ. ‘ವಡ್ಡಾರಾಧನೆ’ಯಲ್ಲಿ ಈ ಕಥೆ ಇದೆ. ಇದರ ವಸ್ತು ಇಷ್ಟೆ. ಅಣ್ಣ–ತಮ್ಮದಿಂರಿಬ್ಬರೂ ಅಸಡ್ಡಾಳರಾಗಿ ಬದುಕಿದ್ದವರು. ಇವರ ಸ್ಥಿತಿ ಕಂಡು ತಾಯಿ ಮಹಾವಿದ್ವಾಂಸನಾದ ತನ್ನ ಅಣ್ಣನ ಬಳಿಗೆ ವಿದ್ಯಾಭ್ಯಾಸಕ್ಕೆ ಕಳಿಸಿದಳು. ತಂಗಿಯಿಂದ ಇವರ ಕಥೆಯೆಲ್ಲ ತಿಳಿದ ಅಣ್ಣ ಅವರಿಗೆ ತಾನಾರೆಂಬುದನ್ನೇ ಹೇಳದೆ ಗುರುಕುಲದಲ್ಲಿ ಇರಿಸಿಕೊಂಡ. ತುಂಬ ಶ್ರಮದ ಕೆಲಸ ಕಾರ್ಯಗಳನ್ನು ಕೊಟ್ಟು, ಎಷ್ಟುಬೇಕೊ ಅಷ್ಟು ಮಾತ್ರ ಆಹಾರ ಕೊಟ್ಟು ಮಹಾವಿದ್ಯಾವಂತರನ್ನಾಗಿ ಮಾಡಿದ. ಆದರೆ ಅವರಲ್ಲಿ ಒಬ್ಬನಿಗೆ ಮಾತ್ರ ಮುಂದೆ ಈ ಸಂಗತಿಯೆಲ್ಲ ತಿಳಿದು ಗುರುವಾದ ಸೋದರಮಾವನ ಮೇಲೆ ದ್ವೇಷವೇ ಬೆಳೆಯಿತು. ತನಗೆ ಸರಿಯಾಗಿ ಅನ್ನಹಾಕಿ ಪಾಠ ಕಲಿಸಿದ್ದರೆ ಇವನ ತಾತನ ಗಂಟು ಹೋಗುತ್ತಿತ್ತೇ? ಎಂಬುದು ಆತನ ತರ್ಕ.

ಉಪಕಾರ ಮಾಡುವವರು ಅದನ್ನು ಉಪಕಾರವೆಂದು ಭಾವಿಸುವುದರಿಂದಲೇ ಇಷ್ಟೆಲ್ಲ ಅನರ್ಥ.

ಪರೋಪಕಾರ ಪುಣ್ಯಾಯ
ಪಾಪಾಯ ಪರಪೀಡನಂ

ಎಂದ ವ್ಯಾಸರೇ ಈ ‘ಉಪಕಾರ’ ಭಾವಕ್ಕೆ ಉಪ್ಪುಕಾರ ಹಚ್ಚಿ ವರ್ಣಿಸಿದ್ದಾರೆ. ಉಪಕಾರಗಳನ್ನು ಜ್ಞಾಪಿಸುವುದರ ಬದಲಿಗೆ ‘ಹೊಲಿ ನಿನ್ನ ತುಟಿಗಳನು’ ಎಂದು ಡಿ.ವಿ.ಜಿ. ಶಬ್ದಸೂಜಿಯಿಂದ ನಾಲಗೆಯನ್ನು ಬಂದ್ ಮಾಡಲು ಹೊರಟಿದ್ದಾರೆ.

ಯಾರಿಗೆ ತಾನೇ ಏಕೆ ಉಪಕಾರ ಮಾಡಬೇಕು. ನದಿ ಸುಮ್ಮನೆ ಹರಿಯುತ್ತದೆ ಅಷ್ಟೆ. ಅದರಿಂದ ಹೊಲಗದ್ದೆಗಳಲ್ಲಿ ಫಸಲು ಬಂದು ಜನಕ್ಕೆ ನೀರಿನ ತೊಂದರೆ ತಪ್ಪುವುದು ಒಂದು ಆನುಷಂಗಿಕ ಕಾರ್ಯ ಸ್ಥಿತಿ ಅಷ್ಟೆ. ನದಿಗೆ ಅದು ಗೊತ್ತೇ ಇಲ್ಲ. ಆ ನದಿಯ ಪಾತ್ರದ ಜಮೀನುಗಳೂ ನದಿಗೆ ವಂದನೆ ಹೇಳುವುದಿಲ್ಲ. ಜೇಡರ ದಾಸಿಮಯ್ಯನ ದೃಷ್ಟಿಯಲ್ಲಿ ಇವೆಲ್ಲ ದೇವರ ದಯೆ, ದಾನ.

‘ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ ಸುಳಿದು ಸೂಸುವ ವಾಯು ನಿಮ್ಮ ದಾನ / ನಿಮ್ಮ ದಾನವನುಂಡು ಅನ್ಯರ ಹೊಗಳುವ ಕುನ್ನಿಗಳನೇನೆಂಬೆ ರಾಮನಾಥ’ ಎಂದು ದಾಸಿಮಯ್ಯ ವಿಚಾರವನ್ನು ಬೇರೆ ಕೇಂದ್ರದಿಂದ ನೋಡುತ್ತಾನೆ. ಉಳಿದವರನ್ನು ಹೊಗಳುವ ಅಗತ್ಯವಿಲ್ಲ ಎಂದಂತಾಯಿತಲ್ಲ. ನಮ್ಮ ತುತ್ತೂರಿಯನ್ನು ಮಾತ್ರ ಊದಿಕೊಳ್ಳಲು ನೋಡುವ ನಮಗೆ ಬೇರೆಯವರನ್ನು ಹೊಗಳಲು ಸಮಯ ತಾನೇ ಎಲ್ಲಿದೆ. ಬರಿಯ ಉಪಕಾರ ಸ್ಮರಣೆಯ ಪ್ರಸಂಗವಾಗಿದ್ದರೆ ಅವರು ಖಂಡಿತ ನೆನಪಿಟ್ಟುಕೊಂಡು ಹೇಳುತ್ತಿದ್ದರು. ಆದರೆ ಉಪಕಾರ ಮಾಡಿದ ಸಂದರ್ಭದಲ್ಲಿ ನಾನು ಯಾವ ಸ್ಥಿತಿಯಲ್ಲಿದ್ದೆ, ಎಷ್ಟು ಕಂಗಾಲಾಗಿದ್ದೆ, ಎಂಥ ಅವಮಾನ ಅನುಭವಿಸಿದ್ದೆ, ಎಂಬುದೆಲ್ಲಾ ಅವರಿಗೆ ನೆನಪಿಗೆ ಬರುವುದರಿಂದ ಅಂಥ ದುರ್ದಿನಗಳ ನೆನಪಿನ ಕ್ಯಾಲೆಂಡರ್ ಹಾಳೆಗಳನ್ನೇ ಹರಿದೊಗೆದು ಬಿಟ್ಟರೆ ಆಯಿತಲ್ಲವೇ ಎಂಬುದೂ ಅವರ ಆಲೋಚನೆ ಇದ್ದಿರಬಹುದು.

ನಮ್ಮವರು ಋಣಗಳ ಬಗೆಗೆ ಮಣಗಟ್ಟಲೆ ಮಾತಾಡುತ್ತಾರೆ. ಮಾತೃಋಣ, ಪಿತೃಋಣ, ಸಮಾಜಋಣ, ಗುರುಋಣ, ದೈವಋಣ ಮೊದಲಾದ ಋಣಭಾರದಿಂದ ಜಗ್ಗಿ ಬಿಟ್ಟಿದ್ದಾರೆ. ‘ಬದುಕು ಋಣದ ರತ್ನಗಣಿ’ ಎನ್ನುತ್ತಾರೆ ಜಿ.ಎಸ್. ಶಿವರುದ್ರಪ್ಪ.

ತಂದೆತಾಯಿಗಳ ಬದುಕಿನ ಸಂದರ್ಭದಲ್ಲಿ ಅವರಿಗೆ ಆರ್ಥಿಕ ಆಶ್ರಯ ಅಗತ್ಯ ಎನ್ನಿಸಿದಾಗ ಮಕ್ಕಳಿಗೆ ಈ ಋಣದ ಭಾವನೆಯಿಲ್ಲದಿದ್ದಾಗ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಓಗೊಡುತ್ತಾರೆ. ಗುರುಋಣವನ್ನು ವಿಶ್ವವಿದ್ಯಾಲಯದ ಕಾಲೇಜುಗಳ ಆಡಳಿತಾಧಿಕಾರಿಗಳೇ ಭಾರಿಯ ಪ್ರಮಾಣದಲ್ಲಿ ವಸೂಲು ಮಾಡುವುದರಿಂದ ಆ ಅಗತ್ಯವೂ ಇಲ್ಲ. ದೇವಋಣ ನಾಸ್ತಿಕ ಶಿಖಾಮಣಿಗಳಿಗೆ ಅನ್ವಯಿಸುವುದೇ ಇಲ್ಲವಲ್ಲ. ಇನ್ನು ‘ಸಮಾಜಋಣ’ ನಿಜವಾಗಿ ಪ್ರತಿಯೊಬ್ಬರೂ ಯೋಚನೆ ಮಾಡಬೇಕಾದ ವಿಷಯ. ಅಂಗವಿಕಲರಿಗೆ, ಮಾನಸಿಕ ಅಸ್ವಸ್ಥತೆಯುಳ್ಳವರಿಗೆ, ಬಡವರಿಗೆ, ಹಿಂದುಳಿದವರಿಗೆ, ವರ್ಣ ವರ್ಗಪೀಡೆಗೆ ಒಳಗಾದವರಿಗೆ ನಾವು ಏನಾದರೂ ಮಾಡಲೇಬೇಕಾಗುತ್ತದೆ.

ಈ ಋಣಗಳ ಜೊತೆಗೆ ಕವಿಋಣವನ್ನು ಸೇರಿಸಬಹುದೆಂದು ಕಾಣುತ್ತದೆ. ಆದರೆ ಈ ಗುಂಪಿನಲ್ಲಿ ಋಣಪಾತಕರ ಸಂಖ್ಯೆಯೇ ಹೆಚ್ಚಾಗಿರುವಂತೆ ಕಾಣುತ್ತದೆ. ಬೇರೆ ಕಾಲದ, ಬೇರೆಭಾಷೆಯ ಕವಿಗಳ ಸಾಹಿತಿಗಳ ಭಾವನೆಗಳನ್ನು ಲಕ್ಷಣವಾಗಿ ಕದ್ದು ತಮ್ಮದೇ ಎಂಬಂತೆ ತೋರಿಸಿಕೊಳ್ಳುವ ಮಹಾ ಸಾಹಿತಿಗಳೂ ಇದ್ದಾರೆ. ಆ ಹಿಂದಿನ ಮೂಲ ಕವಿಗಳ ಋಣವಿದು ಎಂದು ಹೇಳುವ ಪ್ರಾಥಮಿಕ ಸೌಜನ್ಯವೂ ಅವರಿಗೆ ಇರುವುದಿಲ್ಲ. ಹೇಳಿಬಿಟ್ಟರೆ ಇವರ ಪ್ರತಿಷ್ಠೆ ಒಣಗಿಹೋಗುತ್ತದೆಂದು ಕಾಣುತ್ತದೆ. ಈ ತೆಂಗಿನ ಮರಗಳು ದೂರದ ಕೆರೆಯ ತನಕ ತಮ್ಮ ಬೇರನ್ನು ಚಾಚಿ ಸೊಂಪಾಗಿ ಬೆಳೆಯುತ್ತವೆ. ಆದರೆ ತೆಂಗಿನ ಗುಣ ತಿಳಿದಿರುವವರಿಗೆ ಅದರ ಬೇರು ಹುಡುಕಲು ಕಷ್ಟವೆ, ಉಪ್ಪುಖಾರ ಹಚ್ಚಿ ಹೇಳಿದ ಮಾತ್ರಕ್ಕೇ ಉಪಕಾರವನ್ನು ಸ್ಮರಿಸಿದಂತಾಯಿತೆ?

ಅರಾಸೇ ಅವರು:
ಪೂರ ಸತ್ತನು ಕೊರಮ
ಅವನಿಗಿದೆ ಚರಮ

ಎಂದು ಹೇಳುತ್ತಾ – ‘ಚರಮ’ ಎಂಬ ಗೀತೆಯಲ್ಲಿ,
‘ಇರುವ ತನಕ ಕಾವ್ಯ ಧರ್ಮವನಿವನು ಸುಟ್ಟನ್
ಕಂಡವರ ಅಕ್ಕಿಯನು ಕದ್ದು ಅಡುಗೆ ಅಟ್ಟನ್’
ಎಂದು ಈ ಋಣಘಾತಕರನ್ನು ಲೇವಡಿ ಮಾಡಿದ್ದಾರೆ.

‘ಉಪ್ಪಿಟ್ಟವನನ್ನು ಮುಪ್ಪಿನ ತನಕ ನೆನೆ’ ಎನ್ನುತ್ತೇವೆ. ದೇವಋಣ, ಪಿತೃಋಣ, ಆಚಾರ್ಯಋಣ, ಲೋಕಋಣ ಎಂಬ ಶಬ್ದಗಳೆಲ್ಲ ನಮಗೆ ಆದ ಸಹಾಯಕ್ಕಾಗಿ ನಾವು ಕಾರ್ಯಮುಖೇನ ಸಲ್ಲಿಸಬೇಕಾದ ಕೃತಜ್ಞತೆ. ಹೊಳೆಯ ಜಲಋಣವನ್ನು ಬದಿಯ ಮರಗಳ, ಹಣ್ಣು ಹೂವು ಸಸ್ಯ ವನೌಷಧ ಮರಗಳ ಮೂಲಕ ತೀರಿಸುತ್ತವಂತೆ.

ಜಿ.ಪಿ. ರಾಜರತ್ನಂ ಬರೆದಿರುವ ‘ನಾಳೀಜಂಘನ ಕಥೆ’ಯಲ್ಲಿ ಪಕ್ಷಿ–ಮಾನವರ ಸ್ವಭಾವ ತುಲನೆ ಮಾಡುವ ಪ್ರಸಂಗ ಬಂದಿದೆ. ನಾಳೀ (ಡೀ) ಜಂಘ ಒಂದು ಪಕ್ಷಿ. ಅದು ಪರೋಪಕಾರಿಯಾದ ಮಾನವ ಮಿತ್ರನಾದ ಒಂದು ಹಕ್ಕಿ. ಅದರೆದುರಿಗೆ ಒಬ್ಬ ವಂಚಕ ಕೊಲೆಗಾರ ಬ್ರಾಹ್ಮಣನನ್ನು ಈ ಕಥೆ ಕಾಣಿಸುತ್ತದೆ.

ಬಡತನವೆಂದು ಗೋಗರೆದ ಬ್ರಾಹ್ಮಣನನ್ನು ತನ್ನ ಗೆಳೆಯನ ಬಳಿಗೆ ಕಳಿಸಿ ಉಪಕಾರ ಮಾಡುತ್ತಾನೆ. ಹಣ ಸಂಪಾದಿಸಿ ಮತ್ತೆ ಹಕ್ಕಿಯ ಬಳಿಗೆ ಬಂದ ಬ್ರಾಹ್ಮಣ ಆ ಹಕ್ಕಿಯನ್ನೇ ಕೊಂದು ತನ್ನ ಹಸಿವನ್ನು ನೂಕುವ ಕಥೆ ಇದು. ಇಂಥ ಕೊಲೆಗಾರರಿಗೆ ಮಾನವೀಯ ಭಾವನೆಯ ಬೇರುಗಳಿರುವುದಿಲ್ಲ. ಮಿತ್ರನ ಸಹಾಯದಿಂದ ಮತ್ತೆ ಜೀವ ಪಡೆದು ಬಂದ ಹಕ್ಕಿ ಬ್ರಾಹ್ಮಣನಿಗೆ ಮತ್ತೆ ಒಳಿತನ್ನು ಹಾರೈಸುವ ಚಿತ್ರವನ್ನು ಈ ಕಥೆಯಲ್ಲಿ ಕಂಡಾಗ ಅವನ ಅಭಿರುಚಿ ಎಷ್ಟು ಕೀಳುಮಟ್ಟದ್ದೆಂಬುದು ಎದ್ದು ಕಾಣುತ್ತದೆ.

ನಾಟಕದಲ್ಲಿ (ಶೇಕ್ಸ್‌ಪಿಯರ್) ಪ್ರಾಸ್ಪರೋ ಒಬ್ಬ ಕಾಡುಮನುಷ್ಯನಿಗೆ ಭಾಷೆ ಕಲಿಸಿ ಉಪಕಾರ ಮಾಡಿದ್ದೇನೆ ಎಂದು ಕ್ಯಾಲಿಬಾನ್‌ಗೆ ಹೇಳಿದರೆ, ಆತ ‘ಹೌದು ನನಗೆ ಭಾಷೆ ಕಲಿಸಿದೆ. ಆದ್ದರಿಂದ ಬೈಗುಳವೇ ನಿನಗೆ ಗುರುದಕ್ಷಿಣೆ’ ಎನ್ನುತ್ತಾನಲ್ಲವೆ. ಇಂಥ ಸಂದರ್ಭಗಳಲ್ಲಿ ಉಪಕಾರಸ್ಮರಣೆ ಮಾಡಲಿಲ್ಲ ಎನ್ನಲಾದೀತೆ? ಈ ಉಪಕಾರದ ನೆಪದಲ್ಲಿ ಪ್ರಾಸ್ಪೆರೂ ನಿಜವಾಗಿ ಆ ನೆಲದ ಪ್ರಭುವಾಗಬೇಕಾಗಿದ್ದವನನ್ನು ಗುಲಾಮನನ್ನಾಗಿ ಮಾಡಿಕೊಂಡ ಭಾಗವಷ್ಟೇ ಅವನಿಗೆ ಕಂಡಿದ್ದರೆ ಆಶ್ಚರ್ಯವಿಲ್ಲ.

ಉಪಕಾರಕ್ಕೆ ವಿರೋಧ ಶಕ್ತಿಗಳಿರುವುದರಿಂದಲೇ ಅದು ಅಷ್ಟು ಶಕ್ತಿಯುತವಾಗಿದೆ ಎನ್ನಬೇಕು. ಎಲ್ಲರೂ ಉಪಕಾರಸ್ಮರಣೆಗೇ ನಿಂತು ಉಪಕಾರಿಯನ್ನು ಹೊಗಳುತ್ತಾ ಹೋದರೆ ಉಪಕಾರದ ಸತ್ವ ಕಡಿಮೆಯಾಗುತ್ತದೆ. ಜನ ಅದರ ಜೊತೆಗೆ ಸಂತೋಷ ತಾಳುವುದನ್ನು ಮರೆತುಬಿಡುತ್ತಾರೆ. ಅದು ಬರಿಯ ಔಪಚಾರಿಕ ಕ್ರಿಯೆಯಾಗುತ್ತದೆ. ಅದಕ್ಕೆ ಮುಖ ತಿರುಗಿಸುವವರು ಇದ್ದಷ್ಟೂ ಅದು ದೃಢಗೊಳ್ಳುತ್ತಾ ಹೋಗುತ್ತದೆ. ಅವನೇನು ಬೇಕಾದರೂ ಮಾಡಲಿ ಉಪಕಾರಿ, ಸೇವೆ, ಸಹಕಾರ, ಕೈಜೋಡಿಸುವುದು ನನ್ನ ಕರ್ತವ್ಯ ಎಂದುಕೊಂಡು ಅವರುಗಳ ಸ್ಮರಣೆಯನ್ನು ಬಯಸದೆ ತಮ್ಮ ಕೆಲಸವನ್ನು ಮುಂದುವರಿಸುತ್ತಾರೆ.

ಉಪಕಾರ ಮಾಡುವವರು ಏನನ್ನೂ ಪ್ರತಿಯಾಗಿ ಬಯಸುವುದಿಲ್ಲ ಎಂದು ಹೇಳುವುದು ತಪ್ಪಾಗುತ್ತದೆ. ತಮಗೆ ಉಪಕಾರವಾಯಿತು ಎಂದು ಮುಕ್ತಕಂಠದಿಂದ ಹೊಗಳಿಸಿಕೊಳ್ಳಬೇಕೆಂಬ ಒಳಬಯಕೆ ಅವನಿಗೆ ಇದ್ದರೆ ತಪ್ಪೆ?
ಆದ್ದರಿಂದ,
ರಾಮಾಯ ಸ್ವಸ್ತಿ
ರಾವಣಾಯ ಸ್ವಸ್ತಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT