ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

IPL 2024: ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯ: ಲಖನೌ ಪ್ಲೇ ಆಫ್‌ ಕನಸು ಭಗ್ನ

ನಿರ್ಣಾಯಕ ಪಂದ್ಯದಲ್ಲಿ ಕೆ.ಎಲ್‌. ರಾಹುಲ್‌ ಬಳಗಕ್ಕೆ ಸೋಲು, ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯ
Published 14 ಮೇ 2024, 19:04 IST
Last Updated 14 ಮೇ 2024, 19:04 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಭಿಷೇಕ್ ಪೊರೆಲ್ ಮತ್ತು ಟ್ರಸ್ಟನ್ ಸ್ಟಬ್ಸ್ ಅವರ ಅರ್ಧಶತಕ ಹಾಗೂ ಇಶಾಂತ್‌ ಶರ್ಮಾ ಅವರ ಪರಿಣಾಮಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಮಂಗಳವಾರ ನಡೆದ ಐಪಿಎಲ್‌ನ ರೋಚಕ ಹಣಾಹಣಿಯಲ್ಲಿ ಲಖನೌ ಸೂಪರ್‌ ಜೈಂಟ್ಸ್‌ ತಂಡವನ್ನು 19 ರನ್‌ಗಳಿಂದ ಮಣಿಸಿತು.

ಈ ಗೆಲುವಿನೊಂದಿಗೆ ಡೆಲ್ಲಿ ತಂಡವು ಲಖನೌ ತಂಡದ ಪ್ಲೇ ಆಫ್‌ ಕನಸಿಗೆ ತಣ್ಣೀರೆರಚಿತು. ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಮುಗ್ಗರಿಸಿದ ಕೆ.ಎಲ್‌. ರಾಹುಲ್‌ ಬಳಗವು ಈ ಆವೃತ್ತಿಯ ಪ್ಲೇಆಫ್‌ನಿಂದ ಬಹುತೇಕ ಹೊರಬಿದ್ದಿದೆ. ಶುಕ್ರವಾರ ಮುಂಬೈ ಇಂಡಿಯನ್ಸ್‌ ವಿರುದ್ಧ ಗೆದ್ದರೂ ಪ್ಲೇ ಆಫ್‌ ಹಾದಿ ಕಠಿಣವಾಗಿದೆ. ಮತ್ತೊಂದೆಡೆ ರಿಷಭ್‌ ಪಂತ್‌ ಬಳಗವೂ ಈ ಬಾರಿಯ ಅಭಿಯಾನ ಮುಗಿಸಿದೆ.

ಅರುಣ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 209 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಲಖನೌ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ನಿಕೋಲಸ್‌ ಪೂರನ್‌ (61; 27ಎ, 4x6, 6x4) ಆಸರೆಯಾದರೆ, ಕೊನೆಯ ಹಂತದಲ್ಲಿ ಅರ್ಷದ್‌ ಖಾನ್‌ (ಔಟಾಗದೇ 58, 33ಎ, 4x3, 6x5) ಹೋರಾಟ ನಡೆಸಿದರು. ಆದರೆ, ಅವರಿಗೆ ಉಳಿದ ಆಟಗಾರರಿಂದ ನಿರೀಕ್ಷಿತ ಬೆಂಬಲ ಸಿಗದೆ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 189 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಈ ಪಂದ್ಯದಲ್ಲೂ ಲಖನೌ ತಂಡದ ಆರಂಭ ಉತ್ತಮವಾಗಿರಲಿಲ್ಲ. ಮೊದಲ ಓವರ್‌ನಲ್ಲೇ ನಾಯಕ ಕೆ.ಎಲ್‌. ರಾಹುಲ್‌ (5) ವಿಕೆಟ್‌ ಒಪ್ಪಿಸಿದರೆ, ಮೂರನೇ ಓವರ್‌ನಲ್ಲಿ ಕ್ವಿಂಟನ್‌ ಡಿ ಕಾಕ್‌ (12) ಔಟಾದರು. ಈ ಎರಡೂ ವಿಕೆಟ್‌ಗಳು ಇಶಾಂತ್‌ ಶರ್ಮಾ ಅವರ ಪಾಲಾದವು. ನಂತರದ ಬಂದ ಮಾರ್ಕಸ್ ಸ್ಟೊಯಿನಿಸ್ (5) ಮತ್ತು ದೀಪಕ್‌ ಹೂಡಾ (0) ಬೇಗನೇ ನಿರ್ಗಮಿಸಿದರು. ಹೀಗಾಗಿ, ತಂಡದ ಮೊತ್ತ 44 ಆಗುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳು ಕಳೆದುಕೊಂಡಿತು.

ಆದರೆ, ಈ ಹಂತದಲ್ಲಿ ಪೂರನ್‌ ಮಿಂಚಿನ ಅರ್ಧಶತಕ ಗಳಿಸಿ ತಂಡದ ಮೊತ್ತವನ್ನು ವಿಸ್ತರಿಸಿದರು. ಅವರು ಕೃಣಾಲ್‌ ಪಾಂಡ್ಯ (18) ಅವರೊಂದಿಗೆ 6ನೇ ವಿಕೆಟ್‌ಗೆ 30 ರನ್‌ ಸೇರಿಸಿದರು. ನಂತರದಲ್ಲಿ ಅರ್ಷದ್‌ ಅವರೊಂದಿಗೆ 33 ರನ್‌ಗಳ ಜೊತೆಯಾಟವಾಡಿದರು. ಪೂರನ್‌ ನಿರ್ಗಮಿಸಿದ ಬಳಿಕ ಪಂದ್ಯವು ಡೆಲ್ಲಿಯತ್ತ ವಾಲಿತು. ಆದರೆ, ಕೊನೆಯ ಹಂತದಲ್ಲಿ ಐದು ಭರ್ಜರಿ ಸಿಕ್ಸರ್‌ ಸಿಡಿದ ಅರ್ಷದ್‌ ಏಕಾಂಕಿ ಹೋರಾಟ ನಡೆಸಿದರೂ ಗೆಲುವು ದಕ್ಕಲಿಲ್ಲ. ಇಶಾಂತ್‌ ಶರ್ಮಾ ಮೂರು ವಿಕೆಟ್‌ ಪಡೆದು ಮಿಂಚಿದರು.

ಇದಕ್ಕೂ ಮೊದಲು ಟಾಸ್ ಗೆದ್ದ ಲಖನೌ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅರ್ಷದ್ ಖಾನ್ ಬೌಲಿಂಗ್ ಮಾಡಿದ ಮೊದಲ ಓವರ್‌ನ ಎರಡನೇ ಎಸೆತದಲ್ಲಿಯೇ ಜೇಕ್ ಫ್ರೇಸರ್ ಮೆಕ್‌ಗುರ್ಕ್ ವಿಕೆಟ್ ಗಳಿಸಿದರು.

ಈ ಹಂತದಲ್ಲಿ ಜೊತೆಗೂಡಿದ ಅಭಿಷೇಕ್ ಪೊರೆಲ್ (58, 33ಎ) ಹಾಗೂ ಶಾಯ್ ಹೋಪ್ (38 ರನ್) ಎರಡನೇ ವಿಕೆಟ್ ಜೊತೆಯಾಟದಲ್ಲಿ 92 (49 ಎಸೆತ) ರನ್‌ ಸೇರಿಸಿ ತಂಡಕ್ಕೆ ಚೇತರಿಕೆ ನೀಡಿದರು. ನಂತರ ನಾಯಕ ರಿಷಭ್ ಪಂತ್ (33 ರನ್) ಕೂಡ ಉಪಯುಕ್ತ ಕಾಣಿಕೆ ನೀಡಿದರು.

ಅಭಿಷೇಕ್ ಅವರು ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಹೊಡೆದರು. ಅವರ ಆಟದಿಂದಾಗಿ ತಂಡಕ್ಕೆ ಪವರ್‌ಪ್ಲೇನಲ್ಲಿ 73 ರನ್‌ ಹರಿದುಬಂದವು. 9ನೇ ಓವರ್‌ನಲ್ಲಿ ರವಿ ಬಿಷ್ಣೋಯಿ ಅವರು ಶಾಯ್ ಹೋಪ್ ವಿಕೆಟ್ ಗಳಿಸಿ, ಜೊತೆಯಾಟ ಮುರಿದರು. ಎರಡು ಓವರ್‌ಗಳ ನಂತರ ಪೊರೆಲ್ ಕೂಡ ಔಟಾದರು. ಆಗ ತಂಡದ ಮೊತ್ತವು 3ಕ್ಕೆ111 (12ನೇ ಓವರ್) ಆಗಿತ್ತು. ಈ ಹಂತದಲ್ಲಿ ಬೌಲರ್‌ಗಳು ಹಿಡಿತ ಸಾಧಿಸುವ ಪ್ರಯತ್ನದಲ್ಲಿದ್ದರು. ಸ್ಪಿನ್ನರ್ ಬಿಷ್ಣೋಯಿ ತಮ್ಮ ಮೂರನೇ ಓವರ್‌ನಲ್ಲಿ ಕೇವಲ ನಾಲ್ಕು ರನ್ ಮಾತ್ರ ನೀಡಿದರು.

ಆದರೆ ಈ ಸಂದರ್ಭದಲ್ಲಿ ಟ್ರಸ್ಟನ್ ಸ್ಟಬ್ಸ್ (ಅಜೇಯ 57 ; 25ಎಸೆತ) ಅವರು ಅಬ್ಬರಿಸಿದರು. 228ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಟ್ರಿಸ್ಟನ್ ನಾಲ್ಕು ಸಿಕ್ಸರ್‌ ಸಿಡಿಸಿದರು. ಕೇವಲ 21 ಎಸೆತಗಳಲ್ಲಿ 50 ರನ್‌ ಹೊಡೆದರು.

ಅವರ ಬಿರುಸಾದ ಆಟದಿಂದಾಗಿ ಕೊನೆಯ ಐದು ಓವರ್‌ಗಳಲ್ಲಿ 72 ರನ್‌ ಹರಿದುಬಂದವು. ಸ್ಟಬ್ಸ್ ಮತ್ತು ಅಕ್ಷರ್ ಪಟೇಲ್ (14 ರನ್) ಜೊತೆಯಾಟದಲ್ಲಿ 50 ರನ್‌ಗಳು ಸೇರಿದವು. ಹೀಗಾಗಿ, ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭಿಕ ಆಘಾತ ಅನುಭವಿಸಿದರೂ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 208 ರನ್‌ ಗಳಿಸಿತು.

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್ ಟ್ರಿಸ್ಟನ್ ಸ್ಟಬ್ಸ್‌  –ಪಿಟಿಐ ಚಿತ್ರ
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್ ಟ್ರಿಸ್ಟನ್ ಸ್ಟಬ್ಸ್‌  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT