ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮ್ಮು ಮತ್ತು ಮಸೀದಿ

Last Updated 30 ಜನವರಿ 2016, 19:30 IST
ಅಕ್ಷರ ಗಾತ್ರ

ಮಸೀದಿಯನ್ನು ಹೊಡೆದುರುಳಿಸಲು ಹಾರೆಯನ್ನು ಎತ್ತಿ ಕಟ್ಟಡಕ್ಕೆ ಮೊದಲನೇ ಏಟು ಹಾಕಿದರು.
ಅದೇ ಹೊತ್ತಿಗೆ ಇತ್ತ ಬುಕ್ಕಾಂಬುಧಿ ಎಂಬ ಊರಿನಲ್ಲಿ ಉಮ್ಮುಸಲ್ಮಾಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತು.
ತಿಪ್ಪೇಶಣ್ಣ ಮತ್ತು ಬ್ಯಾಂಕ್ ಮ್ಯಾನೇಜರ್ ಶಾಕೀರ್ ಸಾಹೇಬರ ಸ್ನೇಹವೇ ಹಾಗೆ. ಬರೀ ಹುಡುಗಾಟ. ಬರೀ ತಮಾಷೆ. ಅವರಿಬ್ಬರು ಸೇರಿದರೆ ಬರೀ ಚ್ಯಾಷ್ಟೆ ಮಾತುಗಳು ಪ್ರಾರಂಭವಾಗುತ್ತವೆ. ಈಗ್ಗೆ ಸುಮಾರು ಇಪ್ಪತ್ತೈದು ವರ್ಷಗಳ ಅವರ ಸ್ನೇಹ ಹೆಮ್ಮರವಾಗಿ ಬೆಳೆದಿದೆ.

ಶಾಕೀರ್ ಸಾಹೇಬರು ಬುಕ್ಕಾಂಬುಧಿಗೆ ಬ್ಯಾಂಕ್ ಕೆಲಸಕ್ಕೆ ಬಂದು ಸೇರಿದಾಗ ಗುಮಾಸ್ತರ ಹುದ್ದೆಯಲ್ಲಿದ್ದರು. ಇನ್ನೂ ಹುಡುಗನಂತಿದ್ದು ಅವಿವಾಹಿತರಾಗಿದ್ದ ಶಾಕೀರ್ ಸಾಹೇಬರಿಗೆ ಬಾಡಿಗೆಗೆ ಮನೆ ಕೊಡಲು ಎಲ್ಲರೂ ಹಿಂದುಮುಂದು ನೋಡುತ್ತಿದ್ದಾಗ ತಿಪ್ಪೇಶಣ್ಣ ತಮ್ಮ ಮನೆಯ ಒಂದು ಭಾಗವನ್ನೇ ಬಾಡಿಗೆಗೆ ಬಿಟ್ಟುಕೊಟ್ಟರು. ಎರಡು ಮನೆಗೂ ಒಂದೇ ಹಿತ್ತಲು. ಎರಡು ಮನೆಗೆ ಮುಂಭಾಗದಲ್ಲಿ ಅವೇ ಮೆಟ್ಟಿಲುಗಳು. ಇಪ್ಪತ್ತೈದು ವರ್ಷಗಳ ಅಂತರದಲ್ಲಿ ಶಾಕೀರ್ ಸಾಹೇಬರಿಗೆ ಬಡ್ತಿಯಾಗಿ ಈಗ ಮ್ಯಾನೇಜರ್ ಆಗಿದ್ದಾರೆ.

ತಿಪ್ಪೇಶಣ್ಣ ಮನೆಗೆ ಎರಡೆರಡು ಹೊಸ ರೂಮುಗಳನ್ನು ಕಟ್ಟಿಸಿ ಶಾಕೀರ್ ಸಾಹೇಬರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಬುಕ್ಕಾಂಬುಧಿಗೆ ಬಂದ ಕೆಲವೇ ತಿಂಗಳುಗಳಲ್ಲಿ ಮದುವೆಯಾದ ಶಾಕೀರ್ ಸಾಹೇಬರಿಗೆ ಎರಡು ಮಕ್ಕಳು. ದೊಡ್ಡವಳು ಉಮ್ಮುಸಲ್ಮಾ, ಎರಡನೆಯವನು ಅಖ್ತರ್. ತಿಪ್ಪೇಶಣ್ಣರಿಗೆ ರಾಜೇಶ್ ಮತ್ತು ಮಗಳು ಮುತ್ತು. ಅವರೆಲ್ಲ ಸರಿಸುಮಾರು ಒಂದೇ ವಯಸ್ಸಿನವರು. ಮೂರ್ನಾಲ್ಕು ಸಲ ವರ್ಗವಾದರೂ ಶಾಕೀರ್ ಸಾಹೇಬರು ಬುಕ್ಕಾಂಬುಧಿಯನ್ನಾಗಲೀ, ತಿಪ್ಪೇಶಣ್ಣರ ಮನೆಯನ್ನಾಗಲೀ ಬಿಟ್ಟವರಲ್ಲ. ಅಲ್ಲೇ ಹತ್ತಿರದ ಅಜ್ಜಂಪುರ, ಕಡೂರು, ಬೀರೂರುಗಳಿಗೆ ವರ್ಗ ಮಾಡಿಸಿಕೊಂಡು ಬುಕ್ಕಾಂಬುಧಿಯಿಂದಲೇ ವರ್ಗಾಯಿಸಿದ ಸ್ಥಳಗಳಿಗೆ ಅಡ್ಡಾಡುತ್ತಾ ಕೆಲಸ ನಿರ್ವಹಿಸಿದವರು.

ತಿಪ್ಪೇಶಣ್ಣ: ಯಾರ್ರೀ ನಿಮ್ಮನ್ನು ಸಾಬ್ರು ಅನ್ನೋದು? ಹಿಂದೂಗಳ ಮನೆ ಸೇರಿ ಹಿಂದೂಗಳೇ ಆಗಿ ಹೋಗಿದ್ದೀರಿ!
ಶಾಕೀರ್ ಸಾಹೇಬ್: ನಿಮ್ಮನ್ನ ಯಾರ್ರೀ ಹಿಂದೂಗಳನ್ನೋದು? ಸಾಬ್ರಿಗೆ ಮನೆ ಬಾಡಿಗೆ ಕೊಟ್ಟು ನೀವೇ ಸಾಬ್ರು ಆಗಿ ಹೋಗಿದ್ದೀರಿ!
ಒಬ್ಬರಿಗೊಬ್ಬರು ರೇಗಿಸುತ್ತ ಜಿದ್ದಾಜಿದ್ದಿಗೆ ಬೀಳುತ್ತಾರೆ. ಯಾರೂ ಸೋಲುವುದಿಲ್ಲ.

ತಿಪ್ಪೇಶಣ್ಣ: ನಿಮಗೆ ಯಾರ್ರೀ ಶಾಕೀರ್ ಅನ್ನೋರು? ನೀವು ಶೇಖರಪ್ಪ ಕಣ್ರಿ!
ಶಾಕೀರ್ ಸಾಹೇಬ್: ನಿಮಗೆ ಯಾರ್ರೀ ತಿಪ್ಪೇಶಣ್ಣ ಅನ್ನೋರು? ನೀವು ಟೀಪಣ್ಣ ಕಣ್ರಿ!

ತಿಪ್ಪೇಶಣ್ಣ: ನಿಮ್ಮನೆಯವ್ರು ಜರೀನಾ ಅಲ್ಲ, ಜಯಮ್ಮ ಕಣ್ರಿ!
ಶಾಕೀರ್ ಸಾಹೇಬ್: ನಿಮ್ಮನೆಯವರ್ರು ಹಾಲಮ್ಮ ಅಲ್ಲ, ಹಲೀಮ ಕಣ್ರಿ!

ತಿಪ್ಪೇಶಣ್ಣ: ನಿಮ್ಮ ಮಗಳ ಹೆಸರು ಉಮ್ಮು ಅಲ್ಲ ಉಮಾ ಕಣ್ರಿ! ಮಗ ಅಖ್ತರ್ ಅಲ್ಲ, ಅತ್ರಿ ಕಣ್ರಿ!
ಶಾಕೀರ್ ಸಾಹೇಬ್: ನಿಮ್ಮ ಮಗಳ ಹೆಸರು ಮುತ್ತು ಅಲ್ಲ, ಮುಮ್ತಾಜ್ ಕಣ್ರಿ  ಮಗ ರಾಜೇಶ್ ಅಲ್ಲ ರಾಜಾಸಾಬ್ ಕಣ್ರಿ!
ಹೀಗೆ ಮಾತಿಗೆ ಮಾತು, ಜೋಕಿಗೆ ಜೋಕು, ಮೊದಲಿಲ್ಲ ಕೊನೆಯಿಲ್ಲ.

ಮದುವೆಯಾಗಿ ಶಾಕೀರ್ ಸಾಹೇಬರ ಸಾಂಸಾರಿಕ ಜೀವನ ಪ್ರಾರಂಭಿಸಿದ್ದೇ ತಿಪ್ಪೇಶಣ್ಣರ ಮನೆಯಲ್ಲಿ. ಹೊಸತರದಲ್ಲಿ ಜರೀನಮ್ಮರಿಗೆ ಅಡುಗೆ ಮಾಡಲು ಬಾರದು. ಅವರಿಗೆ ಹಾಲಮ್ಮನೇ ಮಾರ್ಗದರ್ಶಿ. ಜರೀನಮ್ಮ ಮುದ್ದೆ ಮಾಡಿದರೆ ಬರೀ ಗಂಟು ಗಂಟು ಆಗುತ್ತಿತ್ತು. ಅನ್ನ ಮಾಡಿದರೆ ಮುದ್ದೆ ಮುದ್ದೆ! ಹಾಲಮ್ಮನೇ ತಿದ್ದಿ ತೀಡಿ ಅಡುಗೆ ಮಾಡಲು ಕಲಿಸಿದ್ದು. ಸರಿಯಾಗಿ ಸೀರೆ ಉಡಲು ಕಲಿಸಿದ್ದು. ಹಳ್ಳಿ ಹೆಂಗಸಾದ ಹಾಲಮ್ಮ ಎಲ್ಲದರಲ್ಲೂ ಗಟ್ಟಿ. ಹಾಲಮ್ಮ ಎಂದರೆ ಜರೀನಮ್ಮಗೆ ಧೈರ್ಯ. ಒಂದು ಸಲ ಮನೆಯೊಳಗೆ ನುಗ್ಗಿದ ನಾಗರಹಾವನ್ನು ಒಂದೇ ಏಟಿಗೆ ಸಾಯುವಂತೆ ಹೊಡೆದ ಗಟ್ಟಿಗಿತ್ತಿ ಹಾಲಮ್ಮ.
ಶಾಕೀರ್ ಸಾಹೇಬ್ರು ಬುಕ್ಕಾಂಬುಧಿಗೆ ಬಂದಾಗ ತಿಪ್ಪೇಶಣ್ಣರ ಆರ್ಥಿಕ ಸ್ಥಿತಿ ಎಡವಟ್ಟಿನಲ್ಲಿತ್ತು. ಆಗ ಶಾಕೀರ್ ಸಾಹೇಬರು ಸಹಾಯಹಸ್ತ ನೀಡಿದರು.

ಬ್ಯಾಂಕ್‌ನಿಂದ ತಾವೇ ಜಾಮೀನಾಗಿ ಸಾಲ ಕೊಡಿಸಿದರು. ಸ್ವಭಾವತಃ ಸಜ್ಜನರೂ ಕ್ರಿಯಾಶೀಲ ವ್ಯಕ್ತಿಯೂ ಆಗಿದ್ದ ತಿಪ್ಪೇಶಣ್ಣ ಇಂಥ ಸಹಾಯ, ಉತ್ತೇಜನಕ್ಕೆ ಕಾದಿದ್ದರೋ ಎಂಬಂತೆ ಪುಟಿದೆದ್ದರು. ಹಿತ್ತಲಲ್ಲಿ ನಾಲ್ಕು ನಾಲ್ಕು ಎಮ್ಮೆ ಬಂದವು. ಹೊಲಗಳು ನಳನಳಿಸಿದವು. ತಿಪ್ಪೇಶಣ್ಣ ಮತ್ತು ಹಾಲಮ್ಮ ಮೈಮುರಿದು ದುಡಿದರು. ಕಾಸಿಗೆ ಕಾಸು ಗಂಟಿಕ್ಕಿ ಇದ್ದ ಹೊಲಗಳನ್ನು ಚೆನ್ನಾಗಿ ನೋಡಿಕೊಂಡರು, ಹೊಸತಾಗಿ ಜಮೀನು ಕೊಂಡರು, ಕೆಲವು ಹೊಲಗಳನ್ನು ತೋಟಗಳನ್ನಾಗಿ ಮಾರ್ಪಡಿಸಿದರು. ಕಾಲಕ್ರಮೇಣದಲ್ಲಿ ಸುತ್ತ ನಾಲ್ಕೂರಲ್ಲಿ ಮರ್ಯಾದಸ್ಥರಷ್ಟೇ ಅಲ್ಲ ಅನುಕೂಲಸ್ಥರೂ ಆಗಿ ಹೆಸರಾದರು.

ಶಾಕೀರ್ ಸಾಹೇಬರು ತಮ್ಮ ಸಹಾಯವನ್ನು ದೊಡ್ಡದೆಂದು ಬಗೆದವರಲ್ಲ. ತಿಪ್ಪೇಶಣ್ಣ, ಶಾಕೀರ್ ಸಾಹೇಬರ ಸಹಾಯವನ್ನು ಮರೆತವರಲ್ಲ. ಶಾಕೀರ್ ಸಾಹೇಬರು ಬಹಳ ಜನಾನುರಾಗಿಯಾಗಿದ್ದರು. ಬ್ಯಾಂಕಿನ ವ್ಯವಹಾರ ಇವರು ಬಂದ ಮೇಲೆ ಉತ್ತಮ ಸ್ಥಿತಿಗೇರಿತು. ಲಕ್ಷಗಳಲ್ಲಿದ್ದ ವ್ಯವಹಾರ ಕೋಟಿಗಳಿಗೇರಿತು. ಇಡೀ ರಾಜ್ಯದಲ್ಲೇ ಬುಕ್ಕಾಂಬುಧಿಯ ಬ್ಯಾಂಕ್ ಶಾಖೆ ಹೆಸರಾಯಿತು. ಶಾಕೀರ್ ಸಾಹೇಬರಂತಹ ಕ್ರಿಯಾಶೀಲ ಹೃದಯವಂತ ನೌಕರರಿಗೆ ಸಹಜವಾಗಿ ಬೇಗ ಬೇಗ ಬಡ್ತಿಗಳು ದೊರೆತವು. ಬಹುಜನಗಳ ಒತ್ತಾಯದ ಮೇರೆಗೆ ಅವರನ್ನು ದೂರಕ್ಕೆ ವರ್ಗ ಮಾಡದೆ ಹತ್ತಿರದ ಹಾಗೂ ಕೇಳಿಕೊಂಡ ಶಾಖೆಗಳಿಗೆ ವರ್ಗಾಯಿಸಿದರು. ಅವರು ಬುಕ್ಕಾಂಬುಧಿಯವರೇ ಆಗಿಹೋದರು. ಅಲ್ಲಿನ ಜೀವನ ಒಗ್ಗಿ ಹೋಯಿತು. ಮಕ್ಕಳು ಅಲ್ಲಿಯೇ ಶಾಲೆಗೆ ಸೇರಿದರು, ಶಿಕ್ಷಣ ಪಡೆದರು.

ಇತ್ತ ಈ ಹೊತ್ತಿಗೆ ಮಸೀದಿಯ ಮಿನಾರು ಮತ್ತು ಗುಂಬಜ್‌ಗಳು ನೆಲಕಚ್ಚಿದವು. ದೂರದರ್ಶನದ ಎಲ್ಲಾ ವಾಹಿನಿಗಳವರು ಈ ದೃಶ್ಯಗಳನ್ನು ಬಿತ್ತರಿಸುತಿದ್ದರು. ಅಲ್ಲಲ್ಲಿ ಕೋಮುಗಲಭೆಗಳಾದವು. ದ್ವೇಷ ರೋಷ ಶಂಕೆ ಭಯಗಳು ಎಲ್ಲರ ಮನಸ್ಸನ್ನಾಕ್ರಮಿಸಿದವು. ಬುಕ್ಕಾಂಭುದಿಯಲ್ಲಿ ಮಾತ್ರ ಯಾವ ಅನಾಹುತವೂ ಜರುಗಲಿಲ್ಲ.

ಆ ಎರಡು ಮನೆಗಳ ಮಕ್ಕಳು ಉಮ್ಮು, ಅಖ್ತರಿ, ರಾಜೇಶ, ಮುತ್ತು ಮುಕ್ತವಾಗಿ ಬೆಳೆದರು. ಎಲ್ಲಿ ಹೊಟ್ಟೆ ಹಸಿಯಿತೋ ಆ ಮನೆಯಲ್ಲಿ ಉಂಡರು. ಬಚ್ಚಲು ಎಲ್ಲಿ ಖಾಲಿಯಿತ್ತೋ ಅಲ್ಲಿ ಸ್ನಾನ ಮಾಡಿದರು. ತಿಪ್ಪೇಶಣ್ಣರ ಮನೆಯಲ್ಲಿದ್ದರೆ ಕುಂಕುಮ ಇಟ್ಟುಕೊಂಡರು, ವಿಭೂತಿ ಸಿಕ್ಕರೆ ಅದನ್ನು ಹಚ್ಚಿಕೊಂಡರು. ಜರೀನಮ್ಮನೋ, ಹಾಲಮ್ಮನೋ ಹೆಣ್ಣುಮಕ್ಕಳ ಜಡೆ ಹೆಣೆದರು, ಗಂಡುಮಕ್ಕಳ ತಲೆಗೆ ಎಣ್ಣೆ ಹಚ್ಚಿ ಬೈತಲೆ ತೆಗೆದು ಗುಬ್ಬಿ ಕೂರಿಸಿದರು. ನಿದ್ದೆ ಬಂದಲ್ಲಿ ಮಲಗಿದರು. ಅವರಿಗೆ ಎರಡೂ ಮನೆಗಳು ಸೇರಿ ಒಂದೇ ಮನೆಯಾಗಿತ್ತು. ಮಕ್ಕಳು ವಿಶಾಲವಾದ ಮನೆಯಲ್ಲಿ ಮತ್ತು ಸುತ್ತ ಇರುವ ತೋಟದಲ್ಲಿ ಕುಣಿಯುತ್ತ ಬೆಳೆದರು. ಮನೆಯಲ್ಲಿ ಸಾಕಿದ್ದ ನಾಯಿ, ಬೆಕ್ಕುಗಳ ಜೊತೆ, ಹಿತ್ತಲಲ್ಲಿದ್ದ ಹಸು, ಎಮ್ಮೆ, ಕರುಗಳ ಜೊತೆ ಆಟವಾಡುತ್ತ ಬೆಳೆದರು. ಜೊತೆಜೊತೆಗೆ ಕೊಟ್ಟಿಗೆ ತೊಳೆದು ಹುಲ್ಲು, ನೀರು ಹಾಕಿದರು. ಆಗದಿದ್ದರೂ ಹಾಲು ಕರೆದರು. ಕಿತ್ತಾಡಿದರು. ಒಂದಾದರು. ತಾಜಾ ಪರಿಸರದಲ್ಲಿ ಆರೋಗ್ಯಪೂರ್ಣವಾಗಿ ಬೆಳೆದರು.

ಮನೆಗೆ ಬಂದ ಹೊಸಬರು ಕೇಳಿದರು: ಯಾರು ಉಮ್ಮು ಯಾರು ಮುತ್ತು?
ಶಾಲೆಯಲ್ಲಿ ಮೇಷ್ಟ್ರು ಕೇಳಿದರು: ಯಾರು ಶಾಕೀರ್ ಸಾಹೇಬರ ಮಕ್ಕಳು, ಯಾರು ತಿಪ್ಪೇಶಣ್ಣರ ಮಕ್ಕಳು?
ದೇವಸ್ಥಾನದ ಅರ್ಚಕ ಪ್ರಸಾದವನ್ನು ಉಮ್ಮು ಅಖ್ತರಿಯ ಕೈಗಿತ್ತು ಹರಸಿದರು. ದರ್ಗಾದ ಮಿಯಾ ಸಾಹೇಬರು ಸಕ್ಕರೆಯನ್ನು ರಾಜೇಶ, ಮುತ್ತುಗೆ ಕೊಟ್ಟು ದುವಾ ಮಾಡಿದರು. ಮನೆಗೆ ಬಂದ ಅಂಚೆಯ ಅಣ್ಣ ಗಲಿಬಿಲಿಗೊಂಡ.

ಬುಕ್ಕಾಂಬುಧಿಯಲ್ಲಿ ಒಂದು ಬೆಟ್ಟವಿದೆ ಮತ್ತು ಒಂದು ದೊಡ್ಡ ಕೆರೆಯಿದೆ. ಆ ಕೆರೆಯ ಬದಿಯಲ್ಲಿರುವ ತೋಟದಲ್ಲಿಯೇ ತಿಪ್ಪೇಶಣ್ಣ ಮತ್ತು ಶಾಕೀರ್ ಸಾಹೇಬರ ಮನೆಗಳಿದ್ದದ್ದು. ಅಲ್ಲಿ ರಾತ್ರಿಯ ಪ್ರಶಾಂತ ವಾತಾವರಣದಲ್ಲಿ ಎಂಥವರೂ ಮಂತ್ರಮುಗ್ಧರಾಗುತ್ತಿದ್ದರು. ಹುಣ್ಣಿಮೆಯ ರಾತ್ರಿಗಳಲ್ಲಿಯಂತೂ ಅತ್ಯಂತ ಸುಂದರ ದೃಶ್ಯಾವಳಿಗಳು ಇವರ ಮನೆಯ ಮುಂದೆ ಕೆರೆ ಮತ್ತು ಬೆಟ್ಟಗಳ ಹಿನ್ನೆಲೆಯಲ್ಲಿ ಅನಾವರಣಗೊಳ್ಳುತ್ತಿದ್ದವು. ರಾತ್ರಿ ಎಲ್ಲರೂ ಸೇರಿ ಹುಣ್ಣಿಮೆ ಊಟದ ನಂತರ ಮನೆಯ ಮುಂದೆ ಕಟ್ಟೆಯ ಮೇಲೆ ಕುಳಿತು ಹೊತ್ತು ಕಳೆಯುತ್ತಿದ್ದರು.

ಮನೆಯ ಹಿರಿಯರಿಂದ ಹಿಡಿದು ಮುತ್ತು, ಅಖ್ತರ್‌ವರೆಗೆ ಎಲ್ಲರೂ ಎಲೆ ಅಡಿಕೆ ಜಗಿಯುತ್ತ ಮಾತಿಗೆ ತೊಡಗುತ್ತಿದ್ದರು. ಮಾತನಾಡುತ್ತ ಮಾತನಾಡುತ್ತ ಯಾವುದೋ ಲೋಕದಿಂದ ಸುರಿಯುತ್ತಿದ್ದಂತ ಸೌಂದರ್ಯದಲ್ಲಿ ಮುಳುಗೇಳುತ್ತಿದ್ದಾರೋ ಎಂಬಂತೆ ಗಪ್‌ಚುಪ್ ಆಗುತ್ತಿದ್ದರು. ಮಕ್ಕಳಂತೂ ಮೈದುಂಬಿದಂತೆ ಇದ್ದಕ್ಕಿದ್ದಂತೆ ನಿದ್ರೆ ಹೋಗುತ್ತಿದ್ದರು. ದೊಡ್ಡವರು  ಮಕ್ಕಳನ್ನು  ಕಟ್ಟೆಯ  ಮೇಲೆ ಮಲಗಿಸಿ ನಿಧಾನಕ್ಕೆ ತಾವೇ ತೂಕಡಿಸಲು ಪ್ರಾರಂಭಿಸುತ್ತಿದ್ದರು.          
               
ಭೂಮ್ಯಾಕಾಶದ ನಡುವೆ ಎಲ್ಲೋ ಅಂತರದಲ್ಲಿ ಮಿಂಚುವ ಮಿಂಚು ಹುಳ, ಎಲ್ಲೋ ವಟಗುಟ್ಟುವ ಕಪ್ಪೆ, ಬಿಟ್ಟು ಬಿಟ್ಟು ಕೇಳುವ ಅದೃಶ್ಯ ಕೀಟಗಳ ಕಿಟರ್ ಎಂಬ ಶಬ್ದ, ದೂರದಲ್ಲೆಲ್ಲೋ ಪಕ್ಷಿಗಳ ಕೂಗು, ಕೆರೆಯ ಪುಟ್ಟ ಪುಟ್ಟ ಅಲೆಗಳ ಲೊಳಕ್ ಬಳಕ್ ಎಂಬ ಎಡಬಿಡದ ಸಂಗೀತ, ಧ್ಯಾನದಲ್ಲಿ ನಿದ್ದೆ ಹೋಗಿರುವ ಗಿಡಮರಗಳು, ಇಡೀ ಲೋಕದ ಮೇಲೆ ಚೆಲ್ಲಿರುವ ಚಂದ್ರನ ಬೆಳಕಲ್ಲಿ ಒಂದು ಮಾಯಾಲೋಕವೇ ಸೃಷ್ಟಿಯಾಗಿರುತ್ತಿತ್ತು. ಇಂಥ ಒಂದೊಂದು ರಾತ್ರಿಗೆ ಸಾಕ್ಷಿಯಾದಾಗಲೂ ಚಿಕ್ಕವರು ದೊಡ್ಡವರೆನ್ನದೆ ಎಲ್ಲರೂ ಅನುಭೂತಿಗೊಳಗಾಗಿ ಹತ್ತಿರತ್ತಿರದವರಾಗುತ್ತಿದ್ದರು.

ಸುತ್ತಣ ಬದುಕಿನಿಂದ ಸ್ಪೂರ್ತಿ ಪಡೆದಂತೆ ರಾಜೇಶ ನೋಡುನೋಡುತ್ತಲೇ ಗಣಿತದಲ್ಲಿ ಸ್ನಾತಕೋತ್ತರ ಪದವಿಯ ನಂತರ ತನ್ನ ಪ್ರತಿಭೆಯಿಂದ ಅಮೇರಿಕಾದ ಮೆಸಾಚುಸೆಟ್ ವಿಶ್ವವಿದ್ಯಾಲಯದಿಂದ ಆಹ್ವಾನಿತನಾದರೆ, ಅಖ್ತರ್ ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಹತ್ತಿದ.

ಇತ್ತ ಕಡೆ ಮಸೀದಿಯನ್ನು ಕೆಡವುವವರಲ್ಲಿ ಸ್ಪರ್ಧೆ ಏರ್ಪಟ್ಟಿತ್ತು. ರೋಷಾವೇಶದಿಂದ ಹಾರೆ, ಗುದ್ದಲಿ, ಪಿಕಾಸಿ, ಮಚ್ಚು, ಗರಗಸಗಳನ್ನು ಹಿಡಿದು ಮೆಹರಾಬ್ ಮತ್ತು ಮಿಂಬರ್‌ಗಳನ್ನು ಪುಡಿಗೈದಿದ್ದರು. ಮಸೀದಿಯ ಪುಡಿಗೈಯಲು ಸಾಕಷ್ಟು ಜನರಿದ್ದರು. ಯಾರೋ ಕೆಲವರ ತಲೆಯ ಮೇಲೆ ಮಸೀದಿಯ ಗೋಡೆ ಬಿದ್ದು ಸತ್ತು ಹೋದರು. ಪತ್ರಕರ್ತರ ಮೇಲೆ ಹಲ್ಲೆ ಮಾಡಲಾಯಿತು. ಛಾಯಾಚಿತ್ರಕಾರರ ಕ್ಯಾಮೆರಾ ಕಸಿದುಕೊಂಡು ಅವರನ್ನು ಓಡಿಸಲಾಯಿತು. ಇಡೀ ವಾತಾವರಣವೇ ಕ್ರೌರ್ಯ ಮತ್ತು ಹಿಂಸೆಯಿಂದ ಕೂಡಿತ್ತು.

ಉಮ್ಮುಳ ಹೆರಿಗೆ ನೋವು ಪ್ರಾರಂಭವಾಗಿರುವ ಬಗ್ಗೆ ಬುಕ್ಕಾಂಬುಧಿಯ ಪ್ರಸೂತಿ ತಜ್ಙೆ ಡಾ. ಸಮತಾರ ಆಸ್ಪತ್ರೆಗೆ ತಿಳಿಸಲು ದೌಡಾಯಿಸುತ್ತಿದ್ದ ತಿಪ್ಪೇಶಣ್ಣರ ಮನಸ್ಸಿನಲ್ಲಿ ಭಾವನೆಗಳ ಮಹಾಪೂರವೇ ಇತ್ತು. ಉಮ್ಮುಳ ನೋವು ನೆನಪಿಸಿಕೊಂಡ ಅವರಿಗೆ ಹೆಣ್ಣಿನ ಮೇಲೆ ನಿಸರ್ಗವೂ ಸಹ ರೂಕ್ಷವಾಗಿರುವಂತೆ ತೋರಿತು. ಹೆರಿಗೆಯ ಭೀಕರ ನೋವನ್ನು ಹೆಣ್ಣಿನ ಮೇಲೆ ಹಾಕಿ ಕೈತೊಳೆದುಕೊಂಡಿರುವಂತೆಯೂ, ಪುರುಷನ ಬಗ್ಗೆ ಧಾರಾಳತನವನ್ನು ಕರುಣಿಸಿದಂತೆಯೂ ತೋರಿತು. ಉಮ್ಮುಳನ್ನು ಹುಟ್ಟಿನಿಂದಲೇ ಕಂಡಿರುವ ತಿಪ್ಪೇಶಣ್ಣ ಅವಳ ಬಗ್ಗೆ ಕಂಬನಿದುಂಬಿ ಯೋಚಿಸಿದರು.

ಉಮ್ಮುಳ ಸೌಂದರ್ಯ ಕೇವಲ ಅವಳ ಬಣ್ಣದಲ್ಲಿಲ್ಲ, ರೂಪದಲ್ಲಿಲ್ಲ, ಆಕಾರದಲ್ಲಿಲ್ಲ, ಬಟ್ಟೆಬರೆಗಳಲ್ಲಿಲ್ಲ. ಅವಳ ಸೌಂದರ್ಯ ಅವಳ ನಡೆ ನುಡಿಯಲ್ಲಿದೆ. ಅವಳ ವಿನಯದಲ್ಲಿದೆ. ಅವಳ ಮುಗ್ಧತೆಯಲ್ಲಿದೆ. ಅವಳು ಬೇರೆಯವರ ಬಗ್ಗೆ ಕೆಟ್ಟದಾಗಿ ವರ್ತಿಸಿದ ಉದಾಹರಣೆಯೇ ತಿಪ್ಪೇಶಣ್ಣಗೆ ನೆನಪಾಗಲಿಲ್ಲ. ಅವಳ ತಾಳ್ಮೆಗೆ, ಮೃದುತನಕ್ಕೆ ಜೈ ಎನ್ನಬೇಕೆನಿಸಿತು. ಎಲ್ಲ ತರಗತಿಗಳಲ್ಲಿಯೂ ಕಡಿಮೆ ಅಂಕ ಪಡೆದು ಪಾಸಾಗುತ್ತಿದ್ದ ಉಮ್ಮುಳ ಅಭಿರುಚಿಗಳೇ ಬೇರೆ ಇದ್ದವು. ಅವಳು ತೋಟದಲ್ಲಿಯ ವಿವಿಧ ಮರಗಿಡ ಬಳ್ಳಿ ಪಕ್ಷಿಗಳ ಹೆಸರು ಮತ್ತಿತರ ವಿವರಗಳನ್ನು ಕಲೆಹಾಕುವುದು, ರಂಗೋಲಿ ಬಿಡಿಸುವ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವುದು ಮುಂತಾದ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಳು.

ಭಾರೀ ಕಷ್ಟಪಟ್ಟು ಎಸ್ಸೆಸ್ಸೆಲ್ಸಿ, ಪಿಯುಸಿ, ಬಿಎ ಮಾಡಿದಳು. ಬಹುಶಃ ಇಂಥ ಸ್ತ್ರೀ ಶರೀರದಲ್ಲಿಯೇ ಮುಂದಿನ ತಲೆಮಾರು ಕುಡಿಯೊಡೆಯಲಿ ಎಂದು ನಿಸರ್ಗವು ಬಸಿರು, ಹೆರಿಗೆ, ಬಾಣಂತನಗಳನ್ನು ಹೆಣ್ಣಿಗೆ ಕರುಣಿಸಿರಬೇಕು ಎಂದು ತಿಪ್ಪೇಶಣ್ಣನಿಗೆನಿಸಿತು. ಉಮ್ಮುಳಂತಹವಳ ಹೊಟ್ಟೆಯಲ್ಲಿ ಕೆಟ್ಟವರುಟ್ಟುವುದುಂಟೇ ಹರಹರಾ ಶ್ರೀ ಚನ್ನಸೋಮೇಶ್ವರಾ ಎಂದು ಎಂದಿನಂತೆ ತಮ್ಮ ತಮಾಷೆಯ ಲಹರಿಯಲ್ಲಿ ಗುನುಗುಟ್ಟುತ್ತಾ ಹಗುರಾದರು ತಿಪ್ಪೇಶಣ್ಣ.

ಕೂಡಲೇ ಉಮ್ಮುಳನ್ನು ಡಾ. ಸಮತಾರ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಜರೀನಾ ಮತ್ತು ಹಾಲಮ್ಮ ಬೆಳಿಗ್ಗೆಯಿಂದ ಉಮ್ಮುಳ ಪಕ್ಕಬಿಟ್ಟು ಕದಲಿರಲಿಲ್ಲ. ವಿಷಯ ತಿಳಿದ ಕೂಡಲೇ ಶಾಕೀರ್ ಸಾಹೇಬರು ಬಂದರು. ಬೇಕರಿಯ ನಾಡಿಗರು, ಗಾಂಧಿ ಮನೆಯ ಪಾರ್ವತಮ್ಮ, ಅನಂತಶಾಸ್ತ್ರಿಗಳು, ಜವಳಿ ಅಂಗಡಿಯ ಗಂಗಾಧರ, ಪಶು ಆಸ್ಪತ್ರೆಯ ನಿಸಾರ್, ಹಮಾಲಿ ರಹಮಾನ್, ಬೀಡಾ ಅಂಗಡಿ ಇಮಾಮ್ ಸಾಬ್ ಮುಂತಾದವರು ಹಾಗೂ ಬ್ಯಾಂಕಿನ ಸಹಾಯ ಪಡೆದ ಹಲವರು ಆಸ್ಪತ್ರೆಗೆ ನುಗ್ಗತೊಡಗಿದರು. ಶಾಕೀರ್ ಸಾಹೇಬ್ ಮತ್ತು ಡಾ. ಸಮತಾರವರು ಬಂದು ವಿನಂತಿಸಿಕೊಂಡ ಮೇಲೆ ನೂಕುನುಗ್ಗಲು ಕಡಿಮೆಯಾಯಿತು. ಆಗ ಆ ನೂಕುನುಗ್ಗಲಿನಲ್ಲಿ ಸಿಕ್ಕು ಒಳ ಬರದಂತಾಗಿದ್ದ ಉಮ್ಮುಳ ಪತಿ ಮಹಬೂಬ್ ಅಲಿ ಅಲಿಯಾಸ್ ಮಾಬಣ್ಣ ಒಳಬಂದರು. ಅವರು ವೃತ್ತಿಯಿಂದ ಇಂಜಿನಿಯರ್ ಆಗಿದ್ದು ದಾವಣಗೆರೆಯಲ್ಲಿ ಕೆಲಸದಲ್ಲಿದ್ದು, ಆ ದಿನ ಬೆಳಿಗ್ಗೆ ವಿಷಯ ತಿಳಿದು ಬುಕ್ಕಾಂಬುಧಿಗೆ ಉಮ್ಮುಳ ಧೈರ್ಯಕ್ಕೆ ಮತ್ತು ಮನೆಯವರೆಲ್ಲರ ನೋವು ಆತಂಕದಲ್ಲಿ ಭಾಗಿಯಾಗಲು ಬಂದಿಳಿದಿದ್ದರು. ಹೇಳಿ ಮಾಡಿಸಿದ ದಂಪತಿಗಳಾಗಿದ್ದ ಉಮ್ಮು ಮಾಬಣ್ಣರು ಜೀವದ ಗೆಳೆಯರೂ ಸಹ ಆಗಿದ್ದರು.

ಹಲವು ನಿಮಿಷಗಳು ಕಳೆದಿರಬೇಕು. ಆಗ ಡಾ. ಸಮತಾರವರು ಕರೆಂಟ್ ಹೊಡೆದಂತೆ ಸುದ್ದಿ ಮುಟ್ಟಿಸಿದರು: ಉಮ್ಮುಗೆ ರಕ್ತಹೀನತೆ ಇದೆ. ಕೂಡಲೇ ರಕ್ತ ಬೇಕು. ರಕ್ತದಾನಿ ಯಾರಿದ್ದರೂ ಕರೆತನ್ನಿ. ಉಮ್ಮುಳದು ಬಹಳ ಅಪರೂಪದ ‘ಬಿ ನೆಗೆಟಿವ್’ ರಕ್ತ ಗುಂಪು!

ಶಾಕೀರ್ ಸಾಹೇಬರು, ಜರೀನಾ, ಹಾಲಮ್ಮ, ಮಾಬಣ್ಣ ಮುಂತಾದವರೆಲ್ಲ ಕುಳಿತಲ್ಲೇ ನೆಟ್ಟು ಬಿದ್ದರು. ‘ಬಿ ನೆಗೆಟಿವ್’! ತಮ್ಮದು ಯಾರದೂ ಆ ರಕ್ತಗುಂಪು ಅಲ್ಲ. ಆಸ್ಪತ್ರೆಯ ಒಳಗಿದ್ದವರು ಗುಜುಗುಜು ಪ್ರಾರಂಭಿಸಿದರು.

‘ಯಾವ ರಕ್ತದ ಗುಂಪು?’
‘ಬಿ ನೆಗೆಟಿವ್?’
‘ನಂದು ಆ ರಕ್ತದ ಗುಂಪಲ್ಲ’.
‘ಆ ರಕ್ತದವರು ಬಹಳ ಅಪರೂಪವಂತೆ ಕಣಲೆ!’.

‘ಶಾಕೀರ್ ಸಾಹೇಬರ ಮಗಳಿಗಾದರೆ 10 ಲೀಟರ್ ರಕ್ತ ಕೊಡ್ತೀನಿ. ಆದ್ರೆ ನಂದು ಆ ಗುಂಪಲ್ಲ’.
ತಾವರೆಕೆರೆಯ ನಂಜುಂಡಪ್ಪ ಹೇಳಿದ– ‘ಏನ್ ಸಾರ್ ಹಿಂಗೆ ಹೇಳ್ತೀರಾ? ಎಲ್ಲ ಮನುಷ್ಯರದ್ದು ಒಂದೇ ರಕ್ತ. ಕೆಂಪು ರಕ್ತ. ಏನೇನೋ ಹೇಳ್ಬೇಡಿ. ನಂದೇ ರಕ್ತ ತಗಳಿ ಎಷ್ಟು ಬೇಕೋ ಅಷ್ಟು!’.

ಹಮಾಲಿ ರಹಮಾನ್ ಕೂಗಿದ– ‘ಬೇರೆ ಯಾರ್ದೂ ಬ್ಯಾಡಿ. ನನ್ನದು ತಗಳಿ. ಕೂಲಿ ಮಾಡಿ ಕಮಾಯಿಸಿದ ಗಟ್ಟಿ ರಕ್ತ’.
ಹೀಗೆ ತರಾವರಿ ಮಾತು, ಒತ್ತಾಯ.

ಆಸ್ಪತ್ರೆಯ ನರ್ಸ್ ಮೇರಿಯಮ್ಮ ಹೇಳಿದಳು– ‘ನಮ್ಮೂರಿನಲ್ಲಿ ಬಿ ನೆಗೆಟಿವ್‌ನವರು ಒಬ್ಬರೇ ಒಬ್ಬರಿದ್ದಾರೆ. ರಿಜಿಸ್ಟರ್‌ನಲ್ಲಿ ದಾಖಲಿಸಿಕೊಂಡಿದ್ದೇನೆ’.
‘ಎಲ್ಲರೂ ಒಟ್ಟಿಗೆ ಯಾರು ಯಾರು? ಹೆಸರೇಳಮ್ಮ ಫಸ್ಟು!’.
ಮೇರಿಯಮ್ಮ: ‘ಇಲ್ಲಿರಲೇ ಬೇಕಿತ್ತವರು. ಯಾಕೆ? ಎಲ್ಲೋದ್ರು?’
ಎಲ್ಲರೂ: ‘ಅದ್ಯಾರೇಳಮ್ಮ ತಾಯಿ! ಕೈಮುಗಿತೀವಿ!’.
‘ಈವಮ್ಮಗೇನಾಗೈತೆ?’

ಮೇರಿಯಮ್ಮ: ‘ತಡೀರಪ್ಪ ಹೇಳೋತಂಕ. ತಿಪ್ಪೇಶಣ್ಣಂದೆ ಬಿ ನೆಗೆಟಿವ್. ತುರ್ತು ಬಂದಾಗ ಒಂದೆರಡು ಸಲ ರಕ್ತ ಕೊಟ್ಟು ಹೋಗಿದ್ದಾರೆ’.
ಮೇರಿಯಮ್ಮ ಹೇಳಿದ್ದೇ ತಡ ಜನರೆಲ್ಲ ಹುಯ್ ಎಂದು ಹೊರ ಓಡಿದರು. ಸರಿಯಾದ ಸಮಯದಲ್ಲಿ ತಿಪ್ಪೇಶಣ್ಣ ಎಲ್ಲೋ ಹೋಯ್ತು ನೋಡು ಹಿಡಿರಲೆ ತಿಪ್ಪೇಶಣ್ಣನ್ನ ಎಂದು ಖುಷಿಯಲ್ಲಿ ಮಾತುಗಳು ಕೇಳಿಬಂದವು.

ಒಳಗಿನ ದೃಶ್ಯ ನೋಡಲಾಗದೆ ಆಸ್ಪತ್ರೆಯ ಹೊರಗೆ ಮರದ ಕೆಳಗೆ ತಿಪ್ಪೇಶಣ್ಣ ಕಣ್ಣು ಮುಚ್ಚಿ ಕೂತುಬಿಟ್ಟಿದ್ದರು. ಸುಸೂತ್ರ ಹೆರಿಗೆಯಾಗಿ ತಾಯಿ ಮಗು ಆರೋಗ್ಯದಿಂದ ಹೊರಬರಲಿ ಎಂದು ಹಲವಾರು ದೇವಾನುದೇವತೆಗಳ ಬೇಡಿಕೊಳ್ಳುತ್ತ, ಹರಕೆ ಮಾಡಿಕೊಳ್ಳುತ್ತ ಕುಳಿತಿದ್ದ ತಿಪ್ಪೇಶಣ್ಣ ಮದುವೆ ನಿಶ್ಚಯವಾಗಿರುವ ತನ್ನ ಮಗಳು ಮುತ್ತುವಿಗೂ ಏನೇನು ಕಾದಿದೆಯೋ ಎಂದು ದಿಗಿಲುಬಿದ್ದಿದ್ದರು.

ತಿಪ್ಪೇಶಣ್ಣರನ್ನು ಯಾರೋ ಪತ್ತೆ ಮಾಡಿ ವಿಷಯ ತಿಳಿಸಿ ಆಸ್ಪತ್ರೆಯೊಳಗೆ ಕರೆತಂದರು. ‘ಬರೀ ರಕ್ತವಲ್ಲ, ಕಿಡ್ನಿ ಬೇಕಿದ್ರೂ ಕೊಡ್ತೀನಿ ಡಾಕ್ಟ್ರೇ’ ಎಂದರು ತಿಪ್ಪೇಶಣ್ಣ. ಡಾ. ಸಮತಾರವರು ನಗುತ್ತಾ ತಿಪ್ಪೇಶಣ್ಣರವರನ್ನು ರಕ್ತದಾನಕ್ಕೆ ಅಣಿಗೊಳಿಸತೊಡಗಿದರು.

ಇದುವರೆಗೆ ರಕ್ತವನ್ನು ನೋಡಿದ ಕೂಡಲೇ ತಲೆಸುತ್ತು ಬಂದಂತಾಗುತ್ತಿದ್ದ ತಿಪ್ಪೇಶಣ್ಣರಿಗೆ ಈ ಬಾರಿ ಹಾಗಾಗಲಿಲ್ಲ. ಒಂದೊಂದೇ ತೊಟ್ಟು ರಕ್ತ ಹರಿದು ಹೋಗುತ್ತಿದ್ದಂತೆ ತಿಪ್ಪೇಶಣ್ಣರಿಗೆ ಮಂಪರು ಕವಿದಂತಾಯಿತು. ಬೆಳಿಗ್ಗೆಯಿಂದ ತೀವ್ರ ಒತ್ತಡದಲ್ಲಿದ್ದ ತಿಪ್ಪೇಶಣ್ಣ ಈಗ ಎಚ್ಚರ ಮತ್ತು ನಿದ್ದೆಯ ನಡುವೆ ತುಯ್ದಾಡತೊಡಗಿದರು. ಈ ರಕ್ತ ಉಮ್ಮು ದೇಹವನ್ನು ಹನಿಹನಿಯಾಗಿ ಸೇರುತ್ತದೆ. ಅದು ಅವಳ ಹೃದಯ, ಶ್ವಾಸಕೋಶ, ಮೆದುಳು ಎಲ್ಲವನ್ನೂ ನಿಧಾನಕ್ಕೆ ಆವರಿಸುತ್ತದೆ. ಪ್ರತಿ ಜೀವಕೋಶವನ್ನು ಹೊಕ್ಕು ಹೊರಹೊಮ್ಮುತ್ತದೆ. ಪೋಷಕಾಂಶ, ಆಮ್ಲಜನಕವನ್ನು ಪೂರೈಸಿ ಕಲ್ಮಶವನ್ನು ಹೊತ್ತೊಯ್ಯುತ್ತದೆ. ಈ ನನ್ನ ಮೈಯ ಹನಿಹನಿ ರಕ್ತ ಉಮ್ಮು ಮಗುವಿಗೂ ಬಲ ನೀಡುತ್ತದೆ. ಆಹಾ! ರಕ್ತದಲ್ಲಡಗಿರುವ ಕಾಣದ ಚೈತನ್ಯವೇ! ಹೋಗು ಹನಿಹನಿಯಾಗಿ, ಜೀವವನ್ನುಳಿಸು. ಜೀವವನ್ನು ಶುದ್ಧಗೊಳಿಸು. ಜೀವವನ್ನು ಬಲಿಷ್ಠಗೊಳಿಸು.

ಇತ್ತ ಮಸೀದಿಯ ಕಟ್ಟಡವನ್ನು ಸಂಪೂರ್ಣವಾಗಿ ಕೆಡವಿ, ಬಿದ್ದ ಗೋಡೆಯ ತುಂಡುಗಳನ್ನು ಬೇಗ ಬೇಗ ಖಾಲಿ ಮಾಡಿಸಿ, ಕಸ ಗುಡಿಸಿ, ಸ್ವಚ್ಛಗೊಳಿಸಿ, ಮಸೀದಿಯಿದ್ದ ಕುರುಹು ಇಲ್ಲದಂತೆ ಮಾಡಿ ನೂರಾರು ಜನ ಭೀಕರವಾಗಿ ಕುಣಿದರು. ದ್ವೇಷ ತುಂಬಿದ ಭಾಷಣಗಳನ್ನು ಬಿಗಿದರು. ಗಹಗಹಿಸಿ ನಕ್ಕರು. ಅವರ ಕಣ್ಣುಗಳು ಕೆಂಪಾಗಿದ್ದವು. ಧ್ವನಿ ಕರ್ಕಶವಾಗಿತ್ತು. ಮುಖಗಳು ಭಯಾನಕವಾಗಿದ್ದವು.

ಎಷ್ಟೋ ಹೊತ್ತಿನ ಮೇಲೆ ಮಗುವಿನ ಅಳುವ ಶಬ್ದ ಕೇಳಿ ತಿಪ್ಪೇಶಣ್ಣಗೆ ಎಚ್ಚರವಾಯಿತು. ಮಂಪರು ಕಳೆದು ಮನಸ್ಸು ತಿಳಿಯಾಗಿತ್ತು. ಮಗುವಿನ ಶಬ್ದ ಕೇಳಿ ರೂಮಿನ ಆಚೆ ಇದ್ದ ಎಲ್ಲರೂ ರೋಮಾಂಚಿತರಾದರು. ಚಿಂತಾಕ್ರಾಂತರಾಗಿದ್ದವರೆಲ್ಲ ಒಬ್ಬರು ಇನ್ನೊಬ್ಬರನ್ನು ನೋಡುತ್ತಾ ಮೈದಡವುತ್ತಾ ಕಂಬನಿದುಂಬಿ ‘ಶಿವ ಶಿವ ಶಿವ, ಯಾಲ್ಲಾ ಪರ್ವರ್ದಿಗಾರ್’ ಎಂದು ಹರ್ಷೋದ್ಗಾರ ಮಾಡಿದರು. ಅವರ ಕಣ್ಣುಗಳು ಕರುಣೆಯಿಂದ ತುಂಬಿದ್ದವು. ಧ್ವನಿ ಆರ್ದ್ರವಾಗಿ ಪಕ್ಕದವರಿಗಷ್ಟೆ ಕೇಳುವಷ್ಟು ಸಣ್ಣದಾಗಿತ್ತು. ಅವರ ಕೈಗಳಲ್ಲಿ ಹಣ್ಣುಗಳು, ಎಳನೀರು ಮತ್ತು ಬಿಸ್ಕತ್ತುಗಳಿದ್ದವು.

‘ಹೆಣ್ಣು ಮಗು’ ಎಂದು ಡಾ. ಸಮತಾರವರು ಪ್ರಕಟಪಡಿಸಿದರು.
ಸಂತೋಷದಿಂದ ತುಂಬಿ ಹೋಗಿದ್ದ ಜರೀನಮ್ಮನವರು ಬಾಗಿ ಮೊಮ್ಮಗಳ ಕಿವಿಯಲ್ಲಿ ಮೆಲ್ಲನೆ ‘ಅಮೀನಾ’ ಎಂದು ಉಸುರಿದರು. ಅದು ಮೊಮ್ಮಗಳ ಹೆಸರಾಗಿತ್ತು.

ಅಲ್ಲೇ ಇದ್ದ ತಿಪ್ಪೇಶಣ್ಣ ‘ನೀವು ಅಮೀನಾ ಎಂದು ಕರೆಯಿರಿ. ನಾವು ಅವಳನ್ನು ಮೀನಾ ಎಂದು ಕರೆಯುತ್ತೇವೆ’ ಎಂದು ನುಡಿದರು. ರೂಮಿನಲ್ಲೆಲ್ಲಾ ನಗೆಯ ಅಲೆಗಳೆದ್ದವು. ಅದರಲ್ಲಿ ಉಮ್ಮು ನಗೆಯೂ ಸೇರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT