ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡು ವಚನಗಳು

Last Updated 29 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಬತ್ತಲೆಯ ಮಾದರಿ

ಆಕಾಶದೊಂದಿಗೆ ಒಮ್ಮೆ ಚುಕ್ತ
ಮಾಡಿಕೊಳ್ಳುವುದುಚಿತ ಅಂತ
ಅನ್ನಿಸಿದೆ ಇತ್ತೀಚೆಗೆ.

ಅಡಗಿಸಿಟ್ಟದ್ದೆಲ್ಲ ಹೊರಬಂದು ಹಾರೈಸುತ್ತಿದೆ
ಕೈಚಾಚಿ ನಿನ್ನ ಕಡೆಗೆ,
ಅಂಟಿರುವ ನಂಟುಗಳೆಲ್ಲ ಹಳಸಿ
ಗಳಿಸಿದ್ದೆಲ್ಲ ಗೆದ್ದಲು ಹಿಡಿದು
ವಶವಾಗಿದೆ ಕಾಲನ ವರಸೆಗೆ.

ಎಲ್ಲ ಎಲ್ಲವ ಕಳಚಿ
ನೀಲಿಮ ನಭದ ಅಂತ್ಯರಹಿತಾದಿಮ ಪ್ರಭೆಯ
ಧ್ಯಾನಿಸುತ್ತ ಬೆತ್ತಲಾಗಬೇಕೆನಿಸುತ್ತದೆ ನಿನ್ನಂತೆ.
ಏಳುತ್ತೇನೆ ನನ್ನದೇ ಉಸಿರನ್ನ
ಮೈಯಲ್ಲಿ ತುಂಬಿಕೊಂಡು ಹಗುರವಾಗುತ್ತ
ಒಂದೊಂದೆ ಕ್ಷಿತಿಜಗಳ ಉಡುದಾರದಂತೆ ಕಳಚುತ್ತ
ನಿನ್ನಂತೆ ಬಯಲಾಗುವುದಕ್ಕೆ. ಆದರೆ
ಬಯಲು ಆಗಲೇ ಹಗಲು ಹೊತ್ತು ಬಿಸಿಲಿನ,
ರಾತ್ರಿ ಹೊತ್ತು ಕತ್ತಲೆ ಇಲ್ಲವೆ ಚಂದ್ರತಾರಾದಿಗಳ
ಮಂದ ಬೆಳಕಿನ ದಿರಸಿನಲ್ಲಿ
ಮರ್ಯಾದೆ ಮುಚ್ಚಿಕೊಂಡಿರುವಾಗ
ನಿನ್ನ ಬತ್ತಲೆಗೆ ಮಾದರಿಯನಿನ್ನೆಲ್ಲಿ ಹುಡುಕಲಿ
ಶಿವಲಿಂಗಾ?

ನಿಶ್ಶಬ್ದ

ನೀನು
ನಭದ ನೀಲಿಮದಲ್ಲಿ
ಚಂದ್ರತಾರಾದಿಗಳ ಬರೆದು
ಕೆಳಗೆ ನೀರ ನಿರ್ಮಿತಂಗಳ ಸೃಷ್ಟಿಸಿದಾಗಲೇ
ನಾನೂ ಹುಟ್ಟಿದೆ.

ಒಬ್ಬಂಟಿ; ಘನ ಮೌನಕ್ಕೆ ಹೆದರಿ
ಕರೆದರೆ ಬರಬಹುದೆಂದು ಶಬ್ದವ ಸೃಷ್ಟಿಸಿ
ನಿನ್ನ ಕರೆದೆ.

ಬಾರದ್ದಕ್ಕೆ ಕಾಡಿಗೆ ಓಡಿ
ದಟ್ಟ ಹಸಿರಿಗೆ ಕಿವಿ ಹಚ್ಚಿ
ನಿನ್ನ ಉಸಿರಾಟ ಕೇಳಿಸುವುದೇ ಅಂತ
ಸ್ವಗತ ಮಾತಾಡಿದೆ.

ಕೊನೆಗೆ ಗಿಜಿ ಗಿಜಿ ಸಿಟಿಗಳ ಕಟ್ಟಿ
ಶಬ್ದಸಾಗರವ ಪ್ರಕ್ಷುಬ್ದಗೊಳಿಸಿ ನೋಡಿದರೆ
ಶಬ್ದಕ್ಕೆ ಹೆದರಿ ನೀನಾಗಲೇ
ಬಯಲಾಗಿ
ನಿಶ್ಶಬ್ದವಾಗಿದ್ದೀಯಲ್ಲೋ ಶಿವಲಿಂಗಾ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT