ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಡು ಕೊನರುವುದಯ್ಯ...

Last Updated 23 ಮೇ 2015, 19:30 IST
ಅಕ್ಷರ ಗಾತ್ರ

ನಮ್ಮೂರು ಅಂತ ನಾ ಹೇಳ್ತಾ ಇಲ್ಲ. ನಮ್ಮೂರು ಚಂದಾಪುರ ಅಂದ್ರೆ ಭಾಳ ಚಂದದ ಊರು. ಅದೆಷ್ಟು ಚಂದದ ಊರು ಅಂದ್ರೆ ‘ಚಂದಾಪುರದಂಥ ಚಂದದ ಊರನ್ನ ಆ ಚಂದ್ರಾಮನೂ ನೋಡಿರ್ಲಿಕ್ಕಿಲ್ಲ’ ಅಂತ ನಮ್ಕಡೆ ಗಾದೇನೇ ಇದೆ.

ಈ ಚಂದದ ಊರು ಚಂದಾಪುರವನ್ನು ಚೈತ್ರಮಾಸದಲ್ಲಿ ನೋಡ್ಬೇಕು. ನೋಡೋಕೆ ಎರಡು ಕಣ್ಣು ಸಾಲದು. ಆಗ ಎಲ್ಲಿ ನೋಡಿದರೂ ಹಸಿರೋ ಹಸಿರು. ಆ ಗಿಡ ಬಳ್ಳಿ ಎಲೆ ಚಿಗುರು ಅವುಗಳಲ್ಲಿ ಗಿಳಿ, ಕೋಗಿಲೆ, ಪಿಕಲಾರ ಇವನ್ನೆಲ್ಲ ನೋಡ್ತಾ ಇದ್ರೆ ನಂದನದ ತುಣುಕೊಂದು ಬಿದ್ದಿದೆ ಅಂತ ಬೇಂದ್ರೆ ಹೇಳ್ತಾರಲ್ಲ, ಹಾಗಿರ್ತದೆ ಇಲ್ಲಿಯ ಪ್ರಕೃತಿಯ ಸಿಂಗಾರ.

ಊರ ಪೂರ್ವಕ್ಕೆ ಉದ್ದೋ ಉದ್ದಾನೆಯ ಕೆರೆ. ಕೆರೆಯ ಮಾಗಾಣಿಯಿಂದ ಹೊಲಗದ್ದೆ ತೋಟ ಸಮೃದ್ಧಿಯಾಗಿ ಬೆಳೆದಿವೆ. ಇಲ್ಲಿ ಎಲ್ಲಿ ನೋಡಿದರೂ ಫಲವತ್ತಾದ ಮಿದು ಮಣ್ಣು. ಎಲ್ಲಿ ಏನೇ ಬೀಜ ಬಿದ್ದರೂ ಮೊಳಕೆಯೊಡೆದು ಸಸಿಯಾಗಿ ಕಣ್ತುಂಬುವ ಪರಿ ಅನನ್ಯ. ಗಿರಿಧರ ರಾವ್‌ ಊರಿನ ತಾಲ್ಲೂಕು ಕಚೇರಿಯಲ್ಲಿ ಹಿರಿಯ ಶ್ರೇಣಿಯ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ. ನಡೆ ನುಡಿಯಲ್ಲಿ ಸಾತ್ವಿಕ ಸ್ವಭಾವದವರಾದ ಇವರು ತಮ್ಮ ಕಚೇರಿಯ ಕೆಲಸದಲ್ಲಿ ಅಷ್ಟೇ ನಿಷ್ಠಾವಂತರು– ‘ಕಾಯಕವೇ ಕೈಲಾಸ’ ಎಂದು ನಡೆದಂತೆ ನುಡಿವವರು.‌

ಅವರ ಹೆಂಡತಿ ರುಕ್ಮಿಣಿ ಗಂಡನಿಗೆ ತಕ್ಕ ಹೆಂಡತಿ. ಈಕೆ ಕನ್ನಡದಲ್ಲಿ ಎಂ.ಎ., ಆಗಿದ್ದರೂ ಅದಕ್ಕೆ ತಕ್ಕ ಕೆಲಸ ಎಲ್ಲೂ ದೊರೆಯದಿದ್ದುದರಿಂದ ಇದ್ದೊಬ್ಬ ಮಗ ಪ್ರದ್ಯುಮ್ನನ ಏಳಿಗೆಯನ್ನೇ ಗಮನಿಸುತ್ತಾ ನೆಮ್ಮದಿಯ ಗೃಹಸ್ವಾಮಿನಿ ಆಗಿದ್ದಾರೆ.

ಇನ್ನು ನೆರೆಮನೆಯ ಶಿವಲಿಂಗಯ್ಯ. ಅವರೂ ಹಾಗೆಯೇ ಶುದ್ಧಾತಿ ಶುದ್ಧ ಸಜ್ಜನರು. ‘ಎನಗಿಂತ ಕಿರಿಯರಿಲ್ಲ. ಶಿವಶರಣರಿಗಿಂತ ಹಿರಿಯರಿಲ್ಲ’ ಎಂದು ನಂಬಿ ನಡೆವವರು. ರುದ್ರಮ್ಮನೂ ಹಾಗೇ ಅವರಿಗೆ ಅನುರೂಪಳಾದ ಪತ್ನಿ. ಇವರಿಗೆ ಮಕ್ಕಳಿಲ್ಲ ಎಂಬ ಒಂದು ಕೊರಗನ್ನು ಬಿಟ್ಟರೆ ಇವರದ್ದು ಸಂತೃಪ್ತ ಜೀವನ, ತಾವು ಮುಖ್ಯ ಗುರುಗಳಾಗಿ ಕೆಲಸ ಮಾಡುತ್ತಿರುವ ಶಾಲೆಯಲ್ಲಿನ ಮಕ್ಕಳೇ ತಮ್ಮ ಮಕ್ಕಳು ಎಂದು ತಿಳಿದವರು.

ಗಿರಿಧರ ರಾವ್‌, ಶಿವಲಿಂಗಯ್ಯನವರು ತಮ್ಮ ತಮ್ಮ ಕೆಲಸಗಳಿಗೆ ಹೋದ ಮೇಲೆ ರುಕ್ಮಿಣಿ – ರುದ್ರಮ್ಮನವರಿಗೆ ತಮ್ಮ ಮನೆ ಕೈದೋಟಗಳಲ್ಲಿ ಬಿಡುವಿಲ್ಲದ ಕೆಲಸ. ರುಕ್ಮಿಣಿ ತುಳಸಿಯಿಂದ ತೇಗದವರೆಗೆ ನೀರುಣಿಸಿದರೆ ವಿವಿಧ ತರಕಾರಿಯ ಮಡಿಗಳಿಗೆ ರುದ್ರಮ್ಮ ನೀರೆರೆಯುತ್ತಾರೆ.

ಬಿಡುವಿನ ಸಮಯದಲ್ಲೆಲ್ಲ ಪ್ರದ್ಯುಮ್ನ ತೋಟದಲ್ಲೇ ಇರುತ್ತಾನೆ. ಅವನಿಗೆ ಗಿಡದಲ್ಲಿ ಬಿಟ್ಟಿರುವ ಟೊಮ್ಯಾಟೊ, ಅಂಜೂರ ತಿನ್ನುವುದೆಂದರೆ ಬಹಳ ಇಷ್ಟ. ಎಲ್ಲಿ ಬೀಜ ಮೊಳಕೆಯೊಡೆದಿದೆ, ಯಾವ ಗಿಡದಲ್ಲಿ ಹೂಕಾತಿದೆ, ಯಾವ ದೊರೆಗಾಯಿ ಹಣ್ಣಾಗಿದೆ ಎನ್ನುವ ಸಮಾಚಾರ ಅವನಿಗೆ ಬಹಳ ಚೆನ್ನಾಗಿ ಗೊತ್ತು.

ಹೀಗಿರುತ್ತಿರಲು ಒಂದು ದಿನ ಇದ್ದಕ್ಕಿದ್ದ ಹಾಗೆ ರುಕ್ಮಿಣಿಯವರ ತೋಟದಲ್ಲಿ ಫಲಭರಿತ ಮರವೊಂದು ಒಣಗಿ ಬರಡಾಯಿತು! ದಿನವೂ ನೀರುಣಿಸುವ ಕಾಯಕವ ಕೈಗೊಂಡ ರುಕ್ಮಿಣಿ ಮಮ್ಮಲ ಮರುಗಿದಳು. ರುದ್ರಮ್ಮನೂ ಈ ಸನ್ನಿವೇಶದಲ್ಲಿ ಕಣ್ಣೀರಾದರು. ಎರಡೂ ಮನೆಯ ಮನೆ ಮಂದಿಯೆಲ್ಲ ಅವಳೊಡನೆ ಕೊರಗಿದರು. ನೆರೆಹೊರೆಯವರೆಲ್ಲಾ ಕಣ್ಣೀರು ಕರೆದರೂ ಒಂದಿನಿತೂ ಫಲವಿಲ್ಲವಾಯಿತು.

ದಶದಿಕ್ಕುಗಳಿಗೂ ತನ್ನ ಕೊಂಬೆ ರೆಂಬೆಗಳನ್ನು ಚಾಚಿ ಗರುಡಗಂಬದ ಗತಿಯಲ್ಲಿ ಗಗನದಲಿ ತಲೆಯೆತ್ತಿ ನಿಂತ, ಎರಡು ಮಾವಿನ ಮರವನ್ನು ದಿನವೂ ಆಶೆಗಣ್ಣಲ್ಲಿ ಅಳೆಯುತ್ತಿದ್ದ ಯಮದೂತನಂಥವನು ಕೊಡಲಿ ಹೆಗಲೊಳಗಿಟ್ಟು ದಿನವೂ ಬಂದು ‘ಅಯ್ಯ ಈ ಮರ ಎಂಗೂ ಬರಡಾಗೈತೆ, ಬಡವ ಸ್ವಾಮಿ. ಕಡಕಂಡು ಓಗ್ಲೇನಯ್ಯಾ....’ ಎಂದು ಪೀಡಿಸುತ್ತಿದ್ದ. ಅವನ ಬಯಕೆ ಸೂತಕದ ಮನೆಯಲ್ಲಿ ಸಿಹಿ ಬೇಡಿದಂತಿತ್ತು. ನೀರೆರೆದು ಕೈಯಾರೆ ಬೆಳೆಸಿದ ಮರವನ್ನು ಅಷ್ಟು ಸುಲಭದಲ್ಲಿ ಬಿಟ್ಟು ಕೊಡಲು ರಾಯರಿಗೆ ಮನಸ್ಸಾಗಲಿಲ್ಲ.

ಹೀಗೇ ದಿನಗಳು ಉರುಳಿದವು. ಅದೊಂದು ಮಳೆ ಸುರಿದ ಪುಣ್ಯ ದಿನ. ಅಂದು ಭಾನುವಾರ. ಆರಾಮವಾಗಿ ‘ಪ್ರಜಾವಾಣಿ’ ಓದುತ್ತ ಶಿವಲಿಂಗಯ್ಯನವರು ಕುಳಿತಿದ್ದರು. ಬೆಳಗಿನ ತಿಂಡಿಗೆ ಕರಿಬೇವು ತರಲೆಂದು ಹೋದ ರುದ್ರಮ್ಮ ಯಾಕೋ ಬೇಲಿಯಂಚಿನ ಮರದ ಹತ್ತಿರ ಹೋಗಿ ನೋಡುತ್ತಾಳೆ. ಅವಳಿಗೆ ದಿಗ್ಭ್ರಮೆಯಾಗುತ್ತದೆ.

ಮರದ ಕೊಂಬೆರೆಂಬೆಗಳಲ್ಲಿ ಅಲ್ಲಲ್ಲಿ ಹಸಿರು ಕಾಣಿಸತೊಡಗಿದೆ! ಅರೆ, ಒಣಗಿದ್ದ ಮರ ಮತ್ತೆ ಚಿಗುರೊಡೆಯುತ್ತಿದೆಯಲ್ಲ ಎನಿಸಿ ಓಡಿ ಬರುತ್ತಾಳೆ. ‘ರಾಯರೇ, ಮಾವಿನ ಮರ ಚಿಗುರ್ತಾ ಇದೆ. ರುಕ್ಮಿಣಮ್ಮ ಬನ್ನಿ ಬನ್ನಿ’ ಎನ್ನುತ್ತಾ ಅವರನ್ನೆಲ್ಲ ಕರೆಯುತ್ತಾಳೆ. ಇದೆಲ್ಲ ಹೇಗಾಯಿತು ಎಂದು ಒಂದು ಕ್ಷಣ ಅವರಿಗೆ ಏನೂ ಅರ್ಥವಾಗುವುದಿಲ್ಲ. ಆದರೂ ಎಲ್ಲರೂ ಅವಳ ಹಿಂದೆ ದಾಪುಗಾಲಾಗುತ್ತಾರೆ.

ಅಲ್ಲಿದ್ದ ಶಿವಲಿಂಗಯ್ಯನವರು ಒಂದು ಕ್ಷಣ ಭಾವುಕರಾಗಿ, ‘ನೋಡಿದಿರಾ ನೀನೊಲಿದಡೆ ಕೊರಡು ಕೊನರುವುದಯ್ಯ ಎಂಬ ಬಸವಣ್ಣನವರ ಮಾತು ಇಲ್ಲಿ ಹುಸಿಹೋಗಲಿಲ್ಲ’ ಅಂತ ಎಲ್ಲರ ಮುಖವನ್ನು ನೋಡಿದರು, ಮತ್ತು ಪ್ರದ್ಯಮ್ನನನ್ನು ಕುರಿತು– ‘ನೋಡು ಪ್ರದ್ಯುಮ್ನ, ರೋಗ ರುಜಿನ ಮನುಷ್ಯನಿಗೆ ಬಾರದೆ ಮರಕ್ಕೆ ಬರ್ತದೇನು ಅಂತ ಜನರು ಅಂತಿರ್ತಾರೆ.

ಇದು ಸುಳ್ಳು. ಕೆಲವು ಪೋಷಕಾಂಶಗಳ ಕೊರತೆಯಿಂದ ಹಾಗೂ ಮರದಲ್ಲಿನ  ಹಾರ್ಮೋನುಗಳ ವ್ಯತ್ಯಾಸದಿಂದಲೂ ಮರಗಿಡ ಒಣಗುವುದುಂಟು. ಆದರೆ ಪ್ರಾಕೃತಿಕವಾಗಿ ಕೊರತೆಗಳು ನೀಗಲ್ಪಟ್ಟಾಗ ಒಣಗಿದ ಸಸ್ಯ ಮತ್ತೆ ಚೇತರಿಸಿಕೊಳ್ಳಬಹುದು. ಇಲ್ಲೂ ಹಾಗೇ ಆಗಿರಬೇಕು. ಸಸ್ಯ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆಗೈದಿರುವ ಜಗದೀಶ್‌ ಚಂದ್ರ ಬೋಸ್‌, ಬಿ.ಜಿ.ಎಲ್‌. ಸ್ವಾಮಿ ಅವರ ಪುಸ್ತಕಗಳನ್ನು ನೀನು ಓದು...! ಸಸ್ಯಗಳ ಬಗ್ಗೆ ನಿನಗೆ ಇನ್ನೂ ಹೆಚ್ಚು ಗೊತ್ತಾಗುತ್ತದೆ’ ಎಂದು ಹೇಳಿದರು.

‘ಸರಿ, ಈ ವರ್ಷ  ಮಾವಿನ  ಹಣ್ಣು ತಿನ್ಬೋದಲ್ಲಾ ಅಂಕಲ್’ ಅಂತ ಪ್ರದ್ಯುಮ್ನ ಕೇಳಿದ. ‘ಇಲ್ಲ, ಬರೋವರ್ಷ ತಿನ್ಬೋದು’ ಅಂತಾರೆ ಶಿವಲಿಂಗಯ್ಯನವರು. ಆಗ ಪ್ರದ್ಯುಮ್ನನ ಗೋಳು ಮುಖವನ್ನು ನೋಡಿ ಎಲ್ಲರೂ ನಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT