ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಮೂಲಕ ಪಡೆದುಕೊಳ್ಳುವ ಅಧ್ಯಾತ್ಮ

Last Updated 19 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ನಾನು ಮತ್ತು ಆರ್.ಬಿ. ತಿಮ್ಮಾಪುರ ಒಂದೇ ಬಡಾವಣೆಯಲ್ಲಿ ಹತ್ತಿರ ಹತ್ತಿರದ ಮನೆಯಲ್ಲಿದ್ದೇವೆ. ನಾನು, ನನ್ನ ಹೆಂಡತಿ ದಿನವೂ ವಾಕಿಂಗ್ ಹೋಗುವಾಗ ತಿಮ್ಮಾಪುರ ಅವರ ತಾಯಿ (ಆರ್.ಬಿ. ತಿಮ್ಮಾಪುರ ಮಾಜಿ ಮಂತ್ರಿ, ದಲಿತ ಸಮಾಜದ ಹಿನ್ನೆಲೆಯವರು) ಕೂಡ ವಾಕಿಂಗ್‌ಗೆ ಬರುವುದನ್ನು ಗಮಿಸಿದ್ದೆವು.

ಒಮ್ಮೆ ಅವರು ಕಾಲಿಗೆ ಪಾದರಕ್ಷೆ ಹಾಕಿರದೆ ವಾಕಿಂಗ್‌ಗೆ ಬಂದಿದ್ದನ್ನು ಗಮನಿಸಿದ ನನ್ನ ಹೆಂಡ್ತಿ ಕೇಳಿದ್ಲು: ‘ಇದು ಟಾರ್ ರಸ್ತೆ, ಒಳ್ಳೆದಲ್ಲ, ಕಾಲಿಗೆ ಏನೂ ಹಾಕ್ಕೊಳದೆ ಓಡಾಡ್ತೀರಲ್ಲ?’. ಅವರ ಉತ್ತರ ನನ್ನನ್ನು ದಿಗ್ಭ್ರಾಂತಗೊಳಿಸಿತು. ‘ಇದು ಶ್ರಾವಣ ಮಾಸ, ನಾನು ಪಾದರಕ್ಷೆ ಹಾಕ್ಕೊಳಲ್ಲ’.

ನಾನು ಒಬ್ಬ ಮಡಿವಂತ ಕುಟುಂಬದಲ್ಲಿ ಹುಟ್ಟಿದವನು, ಚಿಕ್ಕ ವಯಸ್ಸಲ್ಲಿ ಸಂಸ್ಕೃತವನ್ನು ಓದಿದವನು, ನನಗೆ ಇದು ಶ್ರಾವಣ ಮಾಸ ಎನ್ನುವುದು ಮರೆತುಹೋಗಿದೆ. ನಾವು ನಮ್ಮ ಋತು, ನಮ್ಮ ಮಾಸಗಳಿಂದ ಹೊರತಾಗಿಬಿಟ್ಟಿದ್ದೇವೆ. ಆದರೆ ಈ ತಾಯಿಗೆ ಇದು ಶ್ರಾವಣ ಮಾಸ ಎಂಬುದು ಗೊತ್ತಿದೆ. ತಕ್ಷಣ ನನಗೆ ಅವರು ಗುರುವಾದರು. ಹೀಗೆ ಗೊತ್ತಿರುವ ಅನೇಕ ವಿಷಯಗಳ ಜನ ಇದ್ದಾರೆ.

ಕಲ್ಲಹಳ್ಳಿಗೆ ಬಂದಾಗಲೂ ನನಗೆ ಅನಿಸಿದ್ದೇನು? ನಿನ್ನೆ ಇಲ್ಲಿ ಮನೆಯ ಹಿರಿಯ ಹಬ್ಬು ಅವರ ಹತ್ತಿರ ಮಾತನಾಡುತ್ತಾ ಕುಳಿತಿದ್ದೆ. ಆಗ ‘ಇಂತಹ ಜನ ಇರುವ ಊರು ಒಬ್ಬ ದೊಡ್ಡವನನ್ನು ಹಡೆಯುತ್ತೆ. ಇಂಥವರು ತಮ್ಮ ಹೊಟ್ಟೆಯಲ್ಲಿ ಹೊತ್ತು ದೊಡ್ಡದೊಡ್ಡವರಿಗೆ ಜನ್ಮ ಕೊಡ್ತಾರೆ. ಭಾರತದ ಗುಣ ಅದು’.

ಗಾಂಧಿಗೂ ಜನ್ಮ ಕೊಟ್ಟದ್ದು  ಈ ದೇಶ. ಗಾಂಧಿ ಬೇರೆ ಎಲ್ಲೋ ಹುಟ್ಟಿದ್ದರೆ ಮಹಾತ್ಮ ಆಗುತ್ತಿರಲಿಲ್ಲ. ಅವರಿಗೆ ಹಾಗಾಗಲು ಸಾಧ್ಯವಾದದ್ದು ಈ ದೇಶದ ಕಾರಣದಿಂದ. ಹಾಗೇನೇ ಸತ್ಯಕಾಮರನ್ನು ಹೆತ್ತಿರುವುದು ಇಂತಹ ಪ್ರದೇಶವೇ ಮತ್ತು ಈ ಪ್ರದೇಶದಲ್ಲಿ ಮಾತ್ರ ಇರಲಿಕ್ಕೆ ಸಾಧ್ಯವಾಗುವ ಕೆಲವು ಚೇತನಗಳಲ್ಲಿ ಅವರು ಒಬ್ಬರು.

ನಾನು ಮಾತಾಡುವಾಗೆಲ್ಲ ನನ್ನ ವಿಮರ್ಶಾ ಪ್ರಜ್ಞೆಯನ್ನು ಎತ್ತಿಟ್ಟು ಕೆಲವು ವಿಷಯಗಳನ್ನು ಯೋಚಿಸ್ತಿದ್ದೇನೆ. ಈ Rational realismನ ಲೇಖಕರಿಗೆ magical realism ಸಾಧ್ಯವಾಗಬೇಕಾದ್ರೆ ನಾವು ೧೯ನೇ ಶತಮಾನದಿಂದ ಸಂಪಾದಿಸಿಕೊಂಡು ಬಂದ ಈ realism ಅನ್ನು ಸ್ವಲ್ಪ ದೂರ ಮಾಡಬೇಕು.

ಸತ್ಯಕಾಮರ ಆರಾಧನೆ
ಇಂದು ಸತ್ಯಕಾಮರ ೧೫ನೆಯ ಆರಾಧನೆ. ಈ ಸಂದರ್ಭದಲ್ಲಿ, ಸತ್ಯಕಾಮರ ಕಾರ್ಯಕ್ಷೇತ್ರ ಕಲ್ಲಹಳ್ಳಿಯಲ್ಲಿ ‘ಉಪವಾಸ’ ಎಂಬ ನೆನಪಿನ ಭವನ, ‘ಮನನ’ ಎಂಬ ಗ್ರಂಠಾಲಯ, ‘ನಿಮ್ಮನೆ’ ಎಂಬ ಅತಿಥಿ ಗೃಹಗಳ ಉದ್ಘಾಟನೆ ನಡೆಯಲಿದೆ.

‘ಸುಮ್ಮನೆ–ಸತ್ಯಕಾಮರ ಒಡನಾಟ’, ‘ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು’– ಅನುಭವ ಕಥನ; ವೀಣಾ ಬನ್ನಂಜೆ, (ಬಿಬಿಸಿ ಪ್ರಕಾಶನ) ಮತ್ತು ಸತ್ಯಕಾಮರ ಐದು ಕೃತಿಗಳ ಮರು ಪ್ರಕಟಣೆಗಳು (ಅಂಕಿತ ಪುಸ್ತಕ) ಬೆಳಕು ಕಾಣಲಿವೆ.

ನಮ್ಮ past ಅನ್ನು ಸಂಪೂರ್ಣ ಒಪ್ಪಿಕೊಂಡವರು ಭಾರತದಲ್ಲಿ ತುಂಬ ಕ್ರಿಯೇಟಿವ್‌ ಆಗ್ಲಿಲ್ಲ. ಗಾಂಧಿಯವರು untouchabilityಯನ್ನು ಹೇಟ್‌ ಮಾಡುತ್ತಿದ್ದರು. ಅದರ ಬಗ್ಗೆ ತೀವ್ರವಾಗಿ ಹೇಸಿಕೊಳ್ಳದೆ ಇದ್ದಿದ್ದರೆ ಗಾಂಧಿ ಮಹಾತ್ಮನಾಗುವುದು ಸಾಧ್ಯವಿರುತ್ತಿರಲಿಲ್ಲ. ಅವರು ಏನನ್ನು ಪ್ರೀತಿಸಿದರು ಎನ್ನುವುದನ್ನು ಹೇಳುವುದಕ್ಕೆ ಮುಂಚೆ ಯಾವುದನ್ನು ದ್ವೇಷಿಸಿ ದೊಡ್ಡವರಾದರು ಎಂದು ನೀವು ನನ್ನನ್ನು ಕೇಳಿದರೆ ನಾನು ಹೇಳುವುದು: ‘ಅವರು ತೀವ್ರವಾಗಿ ದ್ವೇಷಿಸಿದ್ದು ಈ ದೇಶದಲ್ಲಿದ್ದ ಅಸ್ಪೃಶ್ಯತೆಯನ್ನು’.

ನೀವು ಪೂರ್ವಕಾಲಕ್ಕೆ ಹೋಗಿ ಇಂಥವರೆಲ್ಲ ಅಸ್ಪೃಶ್ಯತೆಯನ್ನು ಒಪ್ಕೊಂಡಿದ್ದರು ಎಂದರೂ ಗಾಂಧೀಜಿ, ಒಪ್ಪಿಕೊಳ್ಳೋಕ್ಕೆ ಆಗೋದಿಲ್ಲ ಎನ್ನುತ್ತಿದ್ದರು. ಇಲ್ಲದಿದ್ದರೆ ಗಾಂಧೀಜಿ ದೊಡ್ಡ ಕ್ರಿಯೇಟಿವ್‌ ಮನುಷ್ಯ ಆಗುತ್ತಿರಲಿಲ್ಲ ಎಂದು ನಂಬುತ್ತೇನೆ.

ಗಾಂಧಿಯವರು ಕೇರಳಕ್ಕೆ ಬಂದು ಸತ್ಯಾಗ್ರಹ ಮಾಡುತ್ತಾರೆ. ವೈಕ್ಕಂ ಸತ್ಯಾಗ್ರಹ. ಅಲ್ಲಿ ಆಗಿದ್ದಿಷ್ಟೆ. ಆ ವೈಕ್ಕಂ ದೇವಸ್ಥಾನದಲ್ಲಿ ಪೂಜಾ ವೇಳೆಯಲ್ಲಿ ಹೆಂಡವನ್ನು ನೇವೇದ್ಯಕ್ಕೆ ಇಡುತ್ತಿದ್ದ ಜಾತಿ ಇದೆ. ಅವರೂ ಕೂಡ ರಸ್ತೆ ಮೇಲೆ ಓಡಾಡುವ ಹಾಗಿರಲಿಲ್ಲ. ಗಾಂಧೀಜಿ ಹೇಳಿದ್ರು: ‘ರಸ್ತೆ ಪಿಡಬ್ಲ್ಯುಡಿಗೆ ಸೇರಿದ್ದು. ಆದ್ದರಿಂದ ಸರಕಾರದ ಕಾನೂನು ಪಾಲನೆಗೆ ಬರೆಯುತ್ತೇನೆ ಎಂದರು. ಆಗ ಅವರ ಹತ್ರ ಕೆಲವರು ಬಂದು ವಾದ ಮಾಡಿದರು: ಅದರಲ್ಲಿ ಬ್ರಾಹ್ಮಣರೂ, ಬ್ರಾಹ್ಮಣೇತರರೂ ಇದ್ದರು.

ತಕ್ಷಣ  ಗಾಂಧಿ ‘ವೇದದಲ್ಲಿ ಎಲ್ಲಿದೆ ತೋರ್‌ಸಪ್ಪ’ ಎನ್ನುತ್ತಾರೆ. ಅವರಿಗೆ ತೋರಿಸೋಕೆ ಆಗುವುದಿಲ್ಲ. ಹಾಗಾದರೆ ನೀವು ಒಂದಷ್ಟು ವೇದಾಂತ ಗೊತ್ತಿರುವ ವಿದ್ವಾಂಸರನ್ನು ಕರಕೊಂಡು ಬನ್ನಿ ಎಂತಾರೆ ಗಾಂಧಿ. ರಾಜಾಜಿಯವರೂ ಕೂಡ ‘ಇಲ್ಲ ಇಲ್ಲ ಇದು ನಮ್ಮ ಪದ್ಧತಿ, ನಾವು ಒಪ್ಪೋದಿಲ್ಲ’ಎನ್ನುತ್ತಾರೆ. ಗಾಂಧೀಜಿ ಅವರನ್ನು ‘ನೀವು ರಾಕ್ಷಸರು ಹಾಗಾದ್ರೆ’ ಎಂದು ಸಿಟ್ಟಾಗುತ್ತಾರೆ. ಮಾರನೆಯ ದಿನ ನಾರಾಯಣಗುರುಗಳು ಗಾಂಧೀಜಿಯನ್ನು ಬಂದು ನೋಡುತ್ತಾರೆ. (ಅವರು ಈಡಿಗರ ಜಾತಿಯಲ್ಲಿ ಹುಟ್ಟಿದವರು.

ಶಂಕರಾಚಾರ್ಯರ ನಂತರ ಬದುಕಿಬಂದ ಅತ್ಯಂತ ದೊಡ್ಡ ಅದ್ವೈತಿ ಕೇರಳದಲ್ಲಿ ಹುಟ್ಟಿದ್ದು ಅಂದರೆ ನಾರಾಯಣಗುರು). ನಾರಾಯಣ ಗುರು ಹೇಗೆ ಗುರುಗಳಾದರು ಎನ್ನುವುದಕ್ಕೆ ಒಂದು ಕಥೆ ಇದೆ. ಮೈಸೂರು ಮಾಹಾರಾಜರ ಆಸ್ಥಾನದಲ್ಲಿ ಒಬ್ಬ ಡಾಕ್ಟ್ರೂ ಇದ್ದರಂತೆ. ಕೇರಳದಲ್ಲಿ ಅವರು ಅನ್‌ಟಚಬಲ್‌ ಅಂತ ಅವರಿಗೆ ಕೆಲಸ ಸಿಕ್ಕಿರಲಿಲ್ಲ.

ಅವರು ನಮ್ಮ ಜನರನ್ನು ಹೇಗೆ ಮೇಲಕ್ಕೆ ಎತ್ತುವುದು ಎಂದು ಯೋಚಿಸುತ್ತಿರುವಾಗಲೇ ಬೆಂಗಳೂರಿಗೆ ವಿವೇಕಾನಂದರು ಬಂದರು. ವಿವೇಕಾನಂದರ ಗಾಡಿಯನ್ನು ಎತ್ತಿನ ಬದಲು ಇವರೇ ಎಳೆದರು. ‘ಸ್ವಾಮೀಜಿ ಹೇಳಿ ನಾನೇನು ಮಾಡ್ಬೇಕು?’. ‘ನೀನು ನಿನ್ನ ದೇಶಕ್ಕೆ ಹೋಗಿ ಅಲ್ಲಿ ಯಾರಾದ್ರೂ ಸಂತ ಇದ್ರೆ ನಿಮ್ಮ ಲೀಡರ್ ಮಾಡು’ ಎಂದರಂತೆ ವಿವೇಕಾನಂದರು. ಅವರು ಹೋದಾಗ ನಾರಾಯಣಗುರು ಏನೂ ಬೇಡ ಅಂತ ಅವರ ಪಾಡಿಗೆ ಸಂತರಾಗಿದ್ದವರು. ತಮ್ಮ ಲೋಕದಲ್ಲಿ ಇದ್ದರು. ಅವರನ್ನು ತನ್ನ ಗುರುಗಳನ್ನಾಗಿ ಮಾಡಿಕೊಂಡು ಮೊದಲು ಒಂದು ದೇವಸ್ಥಾನ ಕಟ್ಟಿದರು.

ಅವರು ಗಾಂಧೀಜಿಯನ್ನು ಭೇಟಿ ಮಾಡಿದರು. ಗಾಂಧಿಯವರಿಗೆ  ತೀವ್ರವಾದ ಅಸಹನೆ ಇತ್ತು. ಗಾಂಧೀಜಿಗೆ ಅವರು ಹೇಳ್ತಾರೆ: ‘ನೀನು ಏನಪ್ಪಾ ಇಷ್ಟಾದ್ರೂ ಸಹಿಸ್ಕೋತೀಯಾ? ದೇವಸ್ಥಾನಕ್ಕೆ ಹೋಗಿ ಆ ಪಾಯಸದ ಡಬ್ಬಿಯನ್ನು ತಗೊಂಬಂದು ಅಲ್ಲಿರುವವರಿಗೆಲ್ಲ ಹಂಚಿಬಿಡು’ ಎಂದು. ಗಾಂಧೀಜಿ ಹೇಳ್ತಾರೆ: ‘ಅದೆಲ್ಲ ನಾನು ಮಾಡೋದಿಲ್ಲ. ಸರಕಾರದ ಕಾನೂನು ಪಾಲನೆಗೆ ನಾವೆಲ್ಲ ಹೊರಟಿರೋದು. ಒಂದು ಹೆಜ್ಜೆ ನನಗೆ ಸಾಕು. One step is enough for me’ ಎಂದರು. ಅವರು ಒಂದು ಮರದ ಕೆಳಗೆ ಕಾಣಿಸ್ತಾರೆ.

‘ನೋಡಪ್ಪಾ ಈ ಎಲೆಗಳನ್ನು. ಒಂದು ಎಲೆ ಇದ್ದಹಾಗೆ ಇನ್ನೊಂದು ಇಲ್ಲ ಅಲ್ವೇ’ ಅಂತಾರೆ ಗಾಂಧೀಜಿ. ಹಲವು ರೀತಿಯ ಜನ ಇರುತ್ತಾರೆ. ಯಾಕಂದ್ರೆ ನಾವೆಲ್ಲ ಒಂದೇ ದೇವರು, ಒಂದೇ ಮತ, ಒಂದೇ ಜಾತಿ ಅಂತ ಹೇಳ್ತಾರೆ. ಹಲವು ದೇವರು, ಹಲವು ಮತಗಳಿರುತ್ತವೆ. ಹಲವು ಭಿನ್ನಾಭಿಪ್ರಾಯಗಳಿರುತ್ತವೆ. ಇದನ್ನೆಲ್ಲ ಒಪ್ಪಿಕೊಂಡು ನಾವು ಬದುಕುವುದಕ್ಕೆ ಕಲಿಯಬೇಕು. ನಾರಾಯಣ ಗುರು ಅದ್ವೈತಿ ಅಲ್ಲವೇ? ‘ರುಚಿ ನೋಡು, ಒಂದೇ ರುಚಿ ಅಲ್ವಾ’ ಎನ್ನುತ್ತಾರೆ.

ಇದು ಅವರಿಬ್ಬರ ನಡುವೆ ನಡೆದ ಮಹತ್ವದ ಒಂದು ಸಂಭಾಷಣೆ. ಇದನ್ನು ನಾನು ಯಾಕೆ ನಿಮಗೆ ಹೇಳಿದೆ ಎಂದರೆ pastಗೂ ನಮಗೂ ಇರುವ ಸಂಬಂಧ ಇದೆಯಲ್ಲ ನಮ್ಮ pastನ್ನು ಸುಮ್ಮನೆ ಗ್ಲೋರಿಫೈ ಮಾಡಿ ಎಲ್ಲವನ್ನೂ ಒಪ್ಕೊಳ್ಳೋಕೆ ಶುರು ಮಾಡಿಬಿಟ್ರೆ ಅದೊಂದು ರೀತಿಯ ಗೊಡ್ಡುತನ ಆಗಿಬಿಡುತ್ತೆ. ಭಾರತೀಯನ ಎದುರುಗಡೆ ಇರುವ ಒಂದು ದೊಡ್ಡ ಸವಾಲೆಂದರೆ ನಮ್ಮ pastನಲ್ಲಿ ಏನನ್ನು ನೀನು ತುಂಬ ಗೌರವದಿಂದ ಒಪ್ಪಿಕೊಳ್ಳುವೆ? ಏನನ್ನು ನೀನು ನಿರಾಕರಿಸ್ತಿಯಾ– ಇದರ ಬಗ್ಗೆ ಒಂದು ಸ್ಪಷ್ಟತೆಗಾಗಿ ನಾವೆಲ್ಲ ಹೋರಾಡುತ್ತಿದ್ದೇವೆ ಎನ್ನಿಸುತ್ತದೆ. ಇವತ್ತಿಗೆ ಒಬ್ಬ ಭಾರತೀಯನಿಗೆ ಇರುವ ಒಂದು ಕಷ್ಟವಾದ ಆಯ್ಕೆ ಅಂದರೆ ಮುಕುಂದೂರು ಸ್ವಾಮಿಗಳನ್ನು ಓದಿದಾಗ ಆ ಆಯ್ಕೆಯ ಆಚೆಗಿದ್ದಾರೆ ಎನ್ನುವುದು.

ಆ ಆಯ್ಕೆಯ ಆಚೆಗೆ ಇರುವವರೂ ಇದ್ದಾರೆ. ಅವರಿಗೆ ಜಾತಿಯಿಲ್ಲ, ಮತ ಇಲ್ಲ. ಭಾರತ ಇಷ್ಟೆಲ್ಲ ಜಾತಿ ಮತ ಎಲ್ಲ ಕಟ್ಟಿಕೊಂಡಿದ್ದರೂ ಅದರಿಂದ ಆಚೆಗೆ ಬಹಳ ದೊಡ್ಡ ಸರಕನ್ನು ಮೊದಲಿಂದ ಸೃಷ್ಟಿಸಿಕೊಂಡೆ ಬಂದಿದೆ. ಭಾರತದಲ್ಲಿ ನಮ್ಮ ಸಪ್ತರ್ಷಿಗಳು ಈ ಆಯ್ಕೆಗೆ ನಮಗೆ ಕೆಲವು ಮಾರ್ಗದರ್ಶನಗಳನ್ನು ತೋರಿಸ್ತಾರೆ. ಮೊದಲಿನವರು ನನಗೆ ಪರಮಹಂಸರು. ಅವರು ಈ ಪ್ರಪಂಚವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತಿದ್ದವರು. ಇನ್ನೊಬ್ಬರು ರಮಣಮಹರ್ಷಿಗಳು ಅವರಷ್ಟು ಈ ಪ್ರಪಂಚದವರಲ್ಲ.

ಇನ್ನೊಬ್ಬ ಋಷಿ ಟ್ಯಾಗೋರ್. ಒಂದೇ ಕಾಲದಲ್ಲಿ ಇದ್ದರೂ ಪರಮಹಂಸರನ್ನು ನೋಡಲಿಕ್ಕೂ ಹೋಗಲಿಲ್ಲ. ಯಾಕೆಂದರೆ ಇವರಿಗೆ ಅನುಮಾನ. ಎಲ್ಲಿ ಪರಮಹಂಸರ ಹತ್ತಿರ ಹೋದರೆ ಮೋಹಬಿಟ್ಟು ಕಂಗಾಲ್ ಮಾಡ್ತಾರೋ ಎಂದು. ಈ ಪ್ರಪಂಚವನ್ನು ಅನ್ಯವಾಗಿ ನೋಡುವ ಶಕ್ತಿಯಿಂದ ಕೆಲವು ರೀತಿಯು ಕ್ರಿಯೇಟಿವಿಟಿ ಇರುತ್ತೆ. ಈ ಕಾದಂಬರಿಕಾರರೊಂದಿಗಿರೋ ದೊಡ್ಡ ಕ್ರಿಯೇಟಿವಿಟಿ ಅಂದ್ರೆ ಇದನ್ನು ಹೊರಗಿದ್ದು ನಿಂತು ನೋಡುವುದು. ಆದರೆ ಕಾದಂಬರಿಯಲ್ಲಿರೋ ಜೀವನವನ್ನೆಲ್ಲ ಇದರ ಒಳಗಿದ್ದು ಎಂದು ನೋಡುವುದು. ಕೇವಲ ಹೊರಗಿದ್ದು ನಿಂತು ನೋಡಿದರೆ ಅದು ಪತ್ರಕರ್ತನ ಹಾಗೆ ಆಗಿಬಿಡುತ್ತೆ.

ಬರೇ ಒಳಗಿದ್ದು ನಿಂತು ನೋಡಿದ್ರೆ ಮುಂದೆ ಮಾತೇ ಇಲ್ಲ ತತ್ವಜ್ಞಾನಿಯ ಹಾಗೆ. ತಾದಾತ್ಮ್ಯದಲ್ಲಿ ಮಾತು ಎಲ್ಲಿದೆ? ಸಂಪೂರ್ಣಮೌನಕ್ಕೆ ಹೋಗೋದಲ್ಲವೇ? ಅದು ತಾದಾತ್ಮ್ಯದಲ್ಲೂ ನೋಡಿರುತ್ತೆ, ಅನ್ಯವಾಗಿಯೂ ನೋಡಿರುತ್ತದೆ. ಆ ಬಗೆ ಟ್ಯಾಗೋರರದು. ಹಾಗಾಗಿ ಟ್ಯಾಗೋರರಿಗೆ ಭಾರತದಲ್ಲಿ ನಾನು ಯಾವುದನ್ನು ನನ್ನ ಫಾಸ್ಟ್‌ನಲ್ಲಿ ಹೀಡೀಬೇಕು ಎನ್ನುವ ಹುಡುಕಾಟದ ಶಕ್ತಿಯೂ ಇತ್ತು. ಅದನ್ನೇ ನಾನು ಬೇಂದ್ರೆಯಲ್ಲಿ, ಮಾಸ್ತಿಯಲ್ಲಿ, ಕುವೆಂಪುನಲ್ಲಿ, ಪ್ರೇಮಚಂದ್ರರಲ್ಲಿ– ನೀವು ಭಾರತದ ಯಾವ ದೊಡ್ಡ ಲೇಖಕರನ್ನೇ ತಗೊಳ್ಳಿ ಅವರೆಲ್ಲರಲ್ಲೂ ಕಾಣುತ್ತೇನೆ.

ಸತ್ಯಕಾಮರನ್ನು ಸಾಹಿತಿ ಅಂತ ನೋಡೋಕೆ ಹೋದಕೂಡಲೇ ಕೆಲವು ಸಮಸ್ಯೆಗಳು ಶುರುವಾಗಿಬಿಡುತವ್ತೆ. ಹಾಗೆ ನೋಡದೇ ಇದೊಂದು ಬರವಣಿಗೆ ಎಂದು ನೋಡಿದರೆ ಯಾವ ತೊಡಕೂ ಇರುವುದಿಲ್ಲ. ಇದು ಇನ್ನೊಂದು ದರ್ಶನಕ್ಕೆ ಸಿದ್ಧಪಡಿಸುವ ರೀತಿಯ ಬರವಣಿಗೆ. ಪ್ರಾಯಶಃ ಹಾಗೆ ಅದನ್ನು ನಾವೆಲ್ಲ ಓದಬೇಕು ಇದೇ ನಾವು ಅವರನ್ನು ಪಡೆದುಕೊಳ್ಳುವ ವಿಧಾನ- ನಮ್ಮ ಓದಿನ ವಿಧಾನದಿಂದ- ಓದುವ ಕ್ರಿಯೆ ಅಂದರೆ ಅದು ಭಜನೆಯ ಕ್ರಿಯೆಯಲ್ಲ. ಓದು ಅಂದರೆ ಚಿಂತನೆ. ಭಜನೆಯಲ್ಲಿ ನಾವು ಮೈಮರೆಯುತ್ತೇವೆ. ಓದಿನಲ್ಲಿ ನಾವು ಎಚ್ಚರಾಗಿರುತ್ತೇವೆ. ಇದನ್ನು ಬಹಳ ಎಚ್ಚರದಲ್ಲಿ ಗ್ರಹಿಸಬೇಕಾದ್ದು.

೨೦ನೆಯ ಶತಮಾನದವರಾದ ನಮಗೆ ನಮ್ಮ ಮನಸ್ಸನ್ನೂ ತುಂಬ ಅಲುಗಾಡಿಸಿದ ವಿಷಯ ಯಾವುದು? ನಾವು ಯಾತಕ್ಕೆ ಪಾಸ್ಟ್‌ಅನ್ನು ಈ ರೀತಿ ಪ್ರಶ್ನೆ ಮಾಡಬೇಕಾಗಿ ಬಂತು. ಪ್ರಶ್ನೆ ಮಾಡಿ ಯಾಕೆ ಆಯ್ಕೆ ಮಾಡಬೇಕಾಗಿ ಬಂತು? ಎಂಬುದು. ಇಡೀ ೨೦ನೆಯ ಶತಮಾನದಲ್ಲಿದ್ದ ದೊಡ್ಡ ಹಸಿವು ಸಮಾನತೆಯುದು. ಅದು ಗಾಂಧಿಯಲ್ಲಿ ಕಾಣುತ್ತೇವೆ. ಆ ಸಮುದ್ರದ ತಡಿಯಲ್ಲಿ ನಡೆದು ಒಂದು ಹಿಡಿ ಉಪ್ಪನ್ನು ಎತ್ತಿದರು.

It is a great tantric act ನನ್ನ ಪ್ರಕಾರ. ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನು ಅಲುಗಾಡಿಸಿಬಿಟ್ಟ ಕ್ರಿಯೆ ಇದು. ಸಾಯೋದಕ್ಕೆ ಮುಂಚೆ ಬಂಗಾಲದಲ್ಲಿ ಬರಿಗಾಲಲ್ಲಿ ನಡ್ಕೊಂಡು ಹೋದ್ರಲ್ಲ- ಕೈಯಲ್ಲೊಂದು ಉದ್ದನೆಯ ಕೋಲು ಹಿಡಿದು. ಅಲ್ಲಿ ಮುಸ್ಲಿಮರನ್ನು ಹಿಂದೂಗಳು ಕೊಲ್ಲುತ್ತಿದ್ದರು. ಗಾಂಧಿ ಅಷ್ಟೂ ಕೊಲೆಯನ್ನು ನಿಲ್ಲಿಸಿದ್ರು. ಅವರೆಲ್ಲ ಗಾಂಧೀಜಿಯ ಮುಂದೆ ತಮ್ಮ ಬಂದೂಕುಗಳನ್ನು ಸರಂಡರ್‌ ಮಾಡಿದರು.

ಮಠದ ಸ್ವಾಮಿಗಳ ಆಧ್ಯಾತ್ಮಿಕತೆ ಗಾಢವಾದದ್ದು ಅಲ್ಲ, ಯಾಕೆಂದರೆ ಅದರಲ್ಲಿ ಸಮಾನತೆಯ ಹಸಿವು ಇಲ್ಲ. ಹೀಗೆ ಸಮಾನತೆಯ ಹಸಿವಿನಿಂದ ಹುಟ್ಟಿದ ಗಾಢವಾದ ಆಧ್ಯಾತ್ಮಿಕತೆ ಮಾರ್ಟಿನ್ ಲೂಥರ್ ಕಿಂಗ್‌ನಲ್ಲಿ, ಗಾಂಧೀಜಿಯಲ್ಲಿ, ಆಮೇಲೆ ಹೀಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಬೆಳಗೆರೆ ಕೃಷ್ಣಶಾಸ್ತ್ರಿಗಳಲ್ಲಿ, ಸತ್ಯಕಾಮರಲ್ಲಿ ಇತ್ತು. ಪ್ರಾಯಶಃ ಆ ಆಧ್ಯಾತ್ಮಿಕತೆ ಹುಟ್ಟೋದಿಕ್ಕೆ ಕಾರಣ ಏನೆಂದರೆ ಅವರು ಈ ಬಗೆಯ ಹುಡುಕಾಟದಲ್ಲಿದ್ದವರು.

ಎಲ್ಲವನ್ನೂ modernise ಮಾಡುವುದರ ಮುಖಾಂತರ ನಾವು ಸಮಾನತೆ ಎನ್ನುತ್ತೇವೆ. ಆಧುನೀಕರಣದ ಮೂಲಕ ಸಮಾನತೆ. ಅದಕ್ಕೆ ಇಂಗ್ಲಿಷ್ ನಮಗೆ ಬೇಕಾಯ್ತು-, ಕುವೆಂಪು ಅವರಿಗೆ ಬೇಕಾಯ್ತು-. ಅದರ ಮುಖಾಂತರ ನಾವು ನಮ್ಮ ಪಾಸ್ಟ್‌ಅನ್ನೇ ಮರೆತು ನಮಗೆ ಬೇಕಾದ್ದನ್ನು ಆಯ್ಕೆ ಮಾಡೋದಕ್ಕಾಗಿ ಈ ಭಾಷೆಯನ್ನು ಉಪಯೋಕೊಂಡೆವು.

ಈಗ modernisation ಅಂದರೆ globalisation ಆಗಿದೆ. ನಮ್ಮ ಜನರಿಂದ ದೂರ ಆಗುವುದಕ್ಕಾಗಿ ನಾವು ಇದನ್ನೆಲ್ಲ ಉಪಯೋಗಿಸಿಕೊಳ್ಳುತ್ತಿದ್ದೇವೆ. ಅದಕ್ಕೆ ನಿನ್ನೆ ನಾವು ಬಂದಾಗ ಜನ ಇಲ್ಲಿ ಊಟ ಮಾಡುತ್ತಿದ್ದುದನ್ನು ನೋಡಿದೆ. ಹಸಿದು ಜನ ಊಟ ಮಾಡುವುದನ್ನು ನೋಡಿದರೆ– ಹೀಗೆ ಜನ ಊಟ ಮಾಡುವುದರಲ್ಲಿ ಒಂದು ಆರಾಧನೆ ಇದೆ ಎಂದು ಕರೆಯೋದಿದೆಯಲ್ಲ ಅದು ಬಹಳ ದೊಡ್ಡದು. ಬೆಂಗಳೂರಿನಲ್ಲಿ ಒಂದು ಪಾರ್ಟಿ ಮಾಡಿದ್ರೆ ಊಟ ಮಾಡ್ಕೊಂಡು ಹೋಗುತ್ತಾರೆ. ಬಂದೋರೆಲ್ಲ ಒಂಚೂರು ತಿಂದು ಹೋಗುತ್ತಾರೆ. ಅದು ಊಟ ಮಾಡುವ ಸಂತೋಷವೇ ಅಲ್ಲ, ಫೋರ್ಕ್‌ನಿಂದ ಎತ್ತಿ ಚೂರು ಚೂರು ತಿನ್ನುವ ಆಹಾರ, ಬಹಳ civilised ಅಗಿದ್ದರೆ. ಅದು ಊಟ ಮಾಡುವ ಕ್ರಮವಲ್ಲ.

ಇಂಗ್ಲಿಷ್ ಮಾತಾಡ್ತಾ ಇರೋ spiritualist ಬಹಳ ಜನ ಇದ್ದಾರೆ ನಮ್ಮ ಸಮಾಜದಲ್ಲಿ. ಅವರು ಭೂಮೀನ ಕದಿಯುತ್ತಿದ್ದಾರೆ. ಭೂವಶ ಮಾಡುತ್ತಿದ್ದಾರೆ. ಸಾವಿರಾರು ಎಕರೇನ, ದೊಡ್ಡ ದೊಡ್ಡ ಮಹಲುಗಳನ್ನು ಕಟ್ಟಿ ನಿಮಗೆಲ್ಲರಿಗೂ ಬದುಕುವ ಕಲೆಯನ್ನು ಹೇಳಿಕೊಡ್ತಿವಿ ಎನ್ನುತ್ತಿರುತ್ತಾರೆ. ಇದು ಈ Globalised worldನಿಂದ ಬರುತ್ತಿರುವ ಒಂದು ಅಧ್ಯಾತ್ಮ.

ಇಂಥ ಸಂದರ್ಭದಲ್ಲಿ ನಾವು ಈ ನೆಲದಲ್ಲಿ ಹುಟ್ಟಿ ಬೆಳೆದ ಮುಕುಂದೂರು ಸ್ವಾಮಿಗಳು, ಪರಮಹಂಸರು ಅಥವಾ ಸತ್ಯಕಾಮರು ನನ್ನ ಕೆಲವು ಬಾಗಿಲುಗಳನ್ನು / ನಮ್ಮ ಬಾಗಿಲನ್ನು ತೆರೆಯುತ್ತಿದ್ದಾರೆ. ಹಾಗೆ ತೆರೆಯುವಾಗ ಒಂದೊಂದು ಸಲ ಬಾಗಿಲು ‘ಕಿರ್ರ್’ ಎನ್ನುವ ಶಬ್ದವನ್ನು ಮಾಡುತ್ತದೆ.. ಆ ಶಬ್ದವನ್ನು ನಾನು ನಿಮಗೆ ಕೇಳಿಸಿದ್ದೇನೆ, ನೀವು ಕೇಳಿದ್ದೀರಿ ನಿಮಗೆ ನಾನು ಕೃತಜ್ಞ. (2004ರ ಅಕ್ಟೋಬರ್‌ 20ರಂದು ಕಲ್ಲಹಳ್ಳಿಯಲ್ಲಿ ನಡೆದ ಸತ್ಯಕಾಮರ ಆರಾಧನೆ ಕಾರ್ಯಕ್ರಮದಲ್ಲಿ ಮಾಡಿದ ಭಾಷಣದ ಆಯ್ದ ಭಾಗಗಳು. ಮಾತಿನಿಂದ ಬರಹಕ್ಕೆ: ವೀಣಾ ಬನ್ನಂಜೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT