ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀರೊ ಸೈಜಿನಲ್ಲಿ ಸಿಕ್ಕ ಜೀವ

ಕವಿತೆ
Last Updated 21 ನವೆಂಬರ್ 2015, 19:59 IST
ಅಕ್ಷರ ಗಾತ್ರ

1
ಹೀರೋಗಿರಿಯ  ಹಡದಿಯ ಮೇಲೆ
ಉರುಳುತ್ತಿದೆ ಜೀರೋ ಸೈಜಿನ ಜೀವ

ಕಾಡಕಾಮಿಯ ನಾಡ ಆಕೃತಿಗೆ
ಕಣ್ಣೆಂಬ ಕೋರೆಹುಳು ಮೈಯೇರಿ
‘ಚಿಟಾರನೆ.... ಚೀರಿದರೂ’
ಅಬ್ಬಾ....!  ಎಂತಹ  ನಟನೆಯೆನ್ನುವ
ಹವ್ಯಾಸಿ ವಿಲಾಸಿಗಳು

2
ನಿದಿರೆಯ ಪಣಕಿಟ್ಟು
ತುಂಡುಡಿಗೆ ಕನಸುಗಳಲ್ಲಿ ಕುಣಿವ–
‘ನಾಗರೀಕತೆಯ ನವಿಲುಗಳೇ’
ನಿಮ್ಮ ಕಣ್ಣೀರಿಗೆಂದೂ ಕದ್ದು ಬಸಿರಾಗೆವು

ಮೈಗಂಟಿದ ಕ್ಯಾಮೆರಾ ಷಷ್ಠೇಂದ್ರಿಯ ಈಗ
ಖಾಸಗಿ ಕನವರಿಕೆಗಳ ತೋರುವ ಭಾಗ

3
ವೈಯಾರ, ಲಾವಣ್ಯ, ಹೂನಗೆ
ಮುಖದ ಮೇಲೆ ಹೆಪ್ಪು ಹಾಕಿದ್ದಾರೆ.
ಈಗೀಗ ನೋವ ನಟಿಸುವುದು ಕಲಿಯದಿದ್ದರೆ
ನೆಲ ಡೊಂಕು ಎನ್ನಲಾಗದು

ಶೀತಾಗಾರದಲ್ಲಿ ಕಣ್ಣೀರನೊರೆಸುವ
ಕರವಸ್ತ್ರಕ್ಕೆ ಕಣ್ಣಿಲ್ಲ!

ಲೋಕಾಂತದೊಳಗಿಂದ ಏಕಾಂತಕ್ಕೆ
ತೇಲಿ ಬರುತ್ತವೆ, ಶೀಲದ ಸೂಟುಕೇಸುಗಳು
ಮೈಮೇಲೆ ವಿಲೇವಾರಿ ಮಾಡಿ
ತಲೆಯೆತ್ತಿ ಓಡಿದ್ದಾರೆ ತಲೆಯಿಲ್ಲದವರು!

4
ಬಾತ್‌ರೂಮಿನಲ್ಲಿ ಬೆತ್ತಲೆ ತೊಳೆದರು
ಹಾಗೇ ಉಳಿದ
ಜಿಡ್ಡುಗಟ್ಟಿದ ಆತ್ಮದ ಕಲೆ;
ಅಣಕಿಸುತ್ತಿದೆ ಎಲ್ಲ ಸೋಪಿನ ನೊರೆಯನ್ನು

ಎದೆಯ ಗ್ಯಾಲರಿ ಮೇಲೆ
ಕೈ ಬರೆದ ಚಿತ್ರಗಳಲ್ಲಿ
ಕಾಲುಗಳೇ ಇಲ್ಲ...
ಹೆಜ್ಜೆಗುರುತಿನ ಮಾತೆಲ್ಲಿ!?

5
ಯಾರದೋ ಕಥೆಯ ಬಣ್ಣ
ನನ್ನದೇ ಮುಖಕ್ಕೆ–

ತೆರೆಯ ಮೇಲೆ ತೆರೆದ ಗಾಯ
ಗಾಸಿಫ್‌ನ ಗೂಡಿನಲ್ಲಿ ಮಲಗದ ಮನಕ್ಕೆ
ಸಂಭಾವನೆಯೆಂಬ ಸಕ್ಕರೆ ನಿದ್ದೆ!
*
(ದೀಪಾವಳಿ ಕವನಸ್ಪರ್ಧೆ 2015ರ ವಿದ್ಯಾರ್ಥಿ ವಿಭಾಗದ ಬಹುಮಾನಿತ ಕವಿತೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT