ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಡಿದ ಬಾವಿಗೆ ಕೂಡಿದ ಜಲಸಾಕ್ಷಿ

ಕಥೆ
Last Updated 5 ಜುಲೈ 2014, 19:30 IST
ಅಕ್ಷರ ಗಾತ್ರ

ಬೆವರು, ಚುಟ್ಟಾ ಘಾಟು, ಸೆರೆ ವಾಸನಿ, ಜನ್ಮಾಂತರದ ಉಚ್ಚೆ ಗಂಧ, ಇದೆಲ್ಲದಕ್ಕೂ ಒಗ್ಗಿಹೋದ ಪರಿಸೆ. ಸೈತಾನನ ಒಡ್ಡೋಲಗ. ಅಷ್ಟೊತ್ತಿನಿಂದ ‘ಇಸ್ಸಿ ಬಂದತಿ, ಇಸ್ಸಿ ಬಂದತಿ’ ಅಂತ ಕೀರುತ್ತಲಿದ್ದ ಮಗುವನ್ನು ಬಸ್ಸಿಗಾಗಿ ಕಾಯ್ದು ಕಾಯ್ದು ತಲೆ ಸಿಡಿಯುತ್ತಿದ್ದ ಹೆಂಗಸೊಬ್ಬಳು ತಲೆ ಮೇಲೆ ಫಟಾರ್ ಅಂತ ಕುಟ್ಟಿ ಸಿಡಿಯುವ ತಲೆಗಿಂತಲೂ ಉಗ್ರವಾಗಿ ಸಿಡಿದಳು. ಹುಡುಗನೇ ಗೆದ್ದ. ಚಣ್ಣವನ್ನು ತೆಗೆದು ಹಿಡಿದು ಹುಡುಗನನ್ನು ದರದರ ಎಳೆಯುತ್ತ ‘ಬಾರ್ಲೆ ಸನಾದಿ, ಎಷ್ಟ ದಿನ್ದಿಂದ ಇದಿಯಾಗಿದ್ದಿ’ ಅಂದು ಬದಿಗೆ ಒಯ್ದಳು. ಎಣ್ಣಿ ಕಸುವ್ಗೆ ಮಕಾ ಮಾರಿ ಬಾತುಹೋಗಿದ್ದ ಭವ್ಯ ಭಾರತದ ಪ್ರಜೆ ಒಬ್ಬಂವ ಹೊಟ್ಟ್ಯಾನ ಪರಮಾತ್ಮನ ಮಹಿಮೆಗೆ ಶರಣಾಗಿ ಕಾರಾಕತ್ತಿದ್ದ. ಮಂದಿ ಮಾರಿ ಸಿಂಡರಿಸಿ ಅತ್ಲಾಗ ಇತ್ಲಾಗ ಹೊಳ್ಳಿದರ, ವರ್ಷದಿಂದ ಹಾಕಿದ ಅರಿಬೀನ ತಗಿಲಾರ್ದ ಹುಚ್ಚೊಬ್ಬ ಸ್ವಲ್ಪವೂ ಸಿಬತಗೊಳ್ದಂಗ ಒಳಗೊಳಗ ನಕ್ಕೊಂಡು ನೋಡೇನೋಡ್ತಿದ್ದ.

ಬರಬೋದಾದ ಬಸ್ಸಿಗೆ ಕಾದು ನಾನೂ ಬೇಕಾದಷ್ಟು ಕಂಗಾಲಾಗಿದ್ದೆ. ಭಾಳ ದಿವಸದಿಂದ ಊರಿಗೆ ಹೋಗೇಲ್ಲಾಂಥ ಅಂದ್ಕೊಂಡು ಆಫೀಸ್ನಿಂದ ಮನೀಗ ಮನೀಂದ ಬಸ್ ಸ್ಟ್ಯಾಂಡ್ಗೆ ಓಡ್ಕೊಂಡು ಬಂದಿದ್ದೆ. ಕಟ್ಕೊಂಡ ಹೆಂಡತಿ ಗಿಣೀಗ ಹೇಳ್ದಂಗ ಹೇಳಿದ್ಲು- ‘ಸ್ವಲ್ಪ ಏನರ ತಿಂದ ಹೋಗ್ರಿ’.

‘ಬಸ್ಸು ನಮ್ಮಪ್ಪನ ಮನೀದನು?’ ಬಾಸ್ ಮ್ಯಾಲಿನ ಸಿಟ್ಟು ಹೊರಾಗ ಹಾಕಾಕ ಹೇಳಿ ಮಾಡ್ಸಿದ ಅವಕಾಶ.
ಬಸ್ ಸ್ಟ್ಯಾಂಡ್ಗೆ ಮುಟ್ತಿದ್ದಂಗ ಸಂಕಟ ಶುರುವಾತು. ಹೋಟೆಲ್ಲಿಗೆ ಹೋಗಿ ತಿನ್ಬೇಕಂದ್ರ ಬಸ್ಸು ನಮ್ಮಪ್ಪನ ಮನೀದಲ್ಲ. ಅಲ್ಲೇ ಏನರ ತೊಗೊಂಡು ಸವಿದೇನಂದ್ರ ಬಸ್ ಸ್ಟ್ಯಾಂಡ್ ನನ್ನ ಮನಿಯಲ್ಲ. ಕಕ್ಕಲಾತಿಗೆ ಬಿದ್ದು ಕುಡದ ಸರೇನ ದಕ್ಕಿಸಿಕೊಳ್ಳಲಾರ್ದ ಮಹಾನುಭಾವ ಕಕ್ಕೇ ಕಕ್ತಿದ್ದ. ’ಹೋಗ ಇವನವ್ನ ಕರ್ಮಾನ ಹ...’

‘ಮಳಿ ಬಿಟ್ಟರೂ ಮರದ ಹನಿ ಬಿಡಂಗಿಲ್ಲ’ ಅನ್ನಂಗ ಹುಟ್ಟಿದೂರಿನ ಸಂಬಂಧ ಎಲ್ಲಿ ಬಿಡ್ತತಿ? ಸತ್ತ ಮ್ಯಾಲ ಹುಗಿಯಾಕರ ಅಲ್ಲಿಗೇ ತೊಗೊಂಡು ಹೋಗ್ಬೇಕಲ್ಲ? ಆ ಕಾರಣಕ್ಕರ ಊರ ಮ್ಯಾಲಿನ ಅಭಿಮಾನ ಕಮ್ಮಿ ಆಗಂಗಿಲ್ಲ. ಅದೂ ಇದೂ ಕೆಲಸ್ದಾಗ ಎಷ್ಟೋ ವರ್ಷದಿಂದ ಊರ್ಗೆ ಹೋಗಿದ್ದಿಲ್ಲ.

ಆದರ ನೀವೇನ ಅನ್ರಿ ನಮ್ಮೂರ ಮಂದಿ ಚೊಲೊ. ಹುಬ್ಬಳ್ಳಿಂದ ನಮ್ಮೂರ ಕಡೀಗ ಹೋಗೊ ಬಸ್ಸು ಹತ್ತಿದರ ಸಾಕು, ನಮ್ಮೂರಾಗ ಇದ್ದಂಗ ಅನಸ್ತಿತ್ತು, ಗೊತ್ತನೋರು ಯಾರರ ನೋಡಿ ಕೇಳೇ ಬಿಡ್ತಿದ್ರು: ಯಾಕ ತಮ್ಮಾ ಭಾಳ ದೂಸದಿಂದ ಇತ್ಲಾಗ ಬಂದಿಲ್ಲಾ, ತಂಗೆವ್ವ ಹುಡುಗೂರು ಅರಾಮು ಅದಾರಲ್ಲ?

ಈ ಉಪಚಾರದ ಮಾತಿಗೆ ಮನಸ್ಸು ಕರಗೇ ಹೋಗ್ತಿತ್ತು. ಒಂದ್ವೇಳೆ ಸೀಟು ಸಿಕ್ಕಿದ್ದಿಲ್ಲಂದ್ರ ಯಾವರ ಹರೇದ ಹುಡುಗರಿಗೆ ‘ಲೇ ಎದ್ದು ಅಣ್ಣಗ ಸೀಟು ಬಿಡ್ರಲೇ ಅಂತ ಬಸ್ಸಿನ ಸಪ್ಪಳಾ ಮೀರಿಸಂಗ ಒದರಿಬಿಡ್ತಿದ್ರು.

ಇರ್ಲ್ಲಿ ಬಿಡಪಾ ಕಾಕಾ, ಏಟೊತ್ತು? ಅವ್ರ ಕುಂದರವಲ್ರಾಕ ಅಂತ ಅಕಸ್ಮಾತು ನಾ ಒಂದ್ಮಾತು ಅಂದೆಯಂದ್ರ ’ಏಯ್ .... ನಿಲ್ಲಿ ಬಿಡು, ಅವರಿಗೇನಾಗೇತಿ  ಧಾಡಿ, ಕಡದ್ರ ನಾಕ್ನಾಕು ಆಗ್ತಾರು’ ಎಂದಂದು ಕಾಳಜಿ ತೋರಿಸ್ತಿದ್ರು. ಸ್ವಲ್ಪು ಹಳೆ ಮಂದಿ ಇದ್ದರಂದ್ರ, ನಿಮ್ಮಪ್ಪ ಧರ್ಮರಾಯ್ನಂಥಾ ಮನಷ್ಯಾ ಇದ್ನಪಾ, ದೇವ್ರು ಅಂತಾವ್ರನ್ನ ಲಗೂನ ಕರ್ಕೊಂಡು ಬಿಡ್ತಾನ ಅನ್ನೊ ಮಾತ್ನೂ ಸೇರಿಸ್ತಿದ್ರು. ಅಪ್ಪನ್ನ ನೋಡಿದ ನೆನಪು ನನಗಿಲ್ಲಾಂದರೂ ಅವರು ಹೇಳೊ ಮಾತು ಖರೆ ಇರಾಕಬೇಕು. ನಾ ಸಣ್ಣಂವಿದ್ದಾಗ ಸಾಬ್ರ ಹಮಾಲರು ಮನೀಗ ಬಂದು ಪಡಸಾಲ್ಯಾಗ ಇದ್ದ ಅಪ್ಪನ ಫೋಟೋಕ್ಕ ನಮಸ್ಕಾರ ಮಾಡಿ ಹೋಗ್ತಿದ್ರು. ಅಪ್ಪ ತಾ ಜೀವಂತ ಇದ್ದಾಗ ನಡಕೊಂಡ ರೀತಿಗೆ ಅವರು ತೋರಿಸೋ ಭಕ್ತಿ ಆ ರೀತಿಯಿತ್ತು. ಹಮಾಲ್ರ ನಿಯತ್ತು ಅಪ್ಪನ ನ್ಯಾಯಮಾರ್ಗದಷ್ಟs ದೊಡ್ಡದು. ಹೊಟ್ಟಿ ಹೊರೆಯೊ ಅನಪಡ್ ಮಂದಿ ಸಾಧಿಸೊ ಸಂಸ್ಕಾರಾನ ಮೆಚ್ಬೇಕಾಕ್ತತಿ.

ನಮ್ಮ ಅಪ್ಪ ಶುರು ಮಾಡ್ಸಿದ್ದ ಗಾಂಧೀ ಜಯಂತಿ ಭಾಳ ಪೇಮಸ್ಸಾಗಿತ್ತು. ಊರಾಗ ಪಟ್ಟಿ ಎತ್ತಿ ಹೊಂಡದ ಏರಿಗೆ ಗಾಂಧಿ ಪುತ್ಥಳಿ ನಿಲ್ಸಿದ್ರು. ವರ್ಷಾ ಮುಂಜೇಲಿ ಎಂಟು ಗಂಟೇಕ ಬಂದು ಊರಜನಾ ಜಮಾ ಆದ್ರಂದ್ರ ಮಧ್ಯಾಹ್ನದ ಮಟ ಕಾರ್ಯಕ್ರಮ. ಮಾರ್ವಾಡಿ ವ್ಯಾಪಾರಸ್ಥರು ಎಲ್ಲಾ ಮಕ್ಕಳ ಕೈತುಂಬಂಗ ಬಿಸ್ಕೀಟ್, ಪೆಪ್ಪರಮೆಂಟ್ ಹಂಚತಿದ್ರು. ಹಿಂದಿನ ದಿವಸ ಬೆಳಗಿಂದನ ಪರಪರಿ ಕಟ್ಟಿ, ತೆಂಗಿನಗರಿ ಚಪ್ಪರ ಹಾಕ್ಸಿ, ಬಾಳಿಕಂಭ ಕಟ್ಟಿಸಿ ನಾನಾ ತಯಾರಿ ಮಾಡ್ತಿದ್ರು. ಊರ ಮಂದೀಗ ಗಾಂಧೀಚೌಕಂದ್ರ ಪುಣ್ಯ ಕ್ಷೇತ್ರ ಆಗ್ಬಿಡ್ತು.
ಹುಬ್ಬಳ್ಳಿ ಬಿಟ್ಟು ಅರ್ಧಾ ತಾಸಿಗೆ ತಡಸ ಬರ್ತತಿ. ಅಲ್ಲಿ ನಮ್ಮೂರ ಮಂದಿ ಚಾ ಕುಡ್ಯಾಕಬೇಕು. ನಾ ಒಲ್ಲೆ ಅಂದರೂ ಯಾರರ ಪರಿಚಯದವ್ರು ಎಳ್ಕೊಂಡು ಹೋಗೇಬಿಡ್ತಾರು. ಇಲ್ಲಿಂದನ ಚಾಲೂ ಆಗ್ತಿತ್ತು ನಂಗ ಅವರ್ಗೆ ಹಾಕ್ಯಾಟ.

ಒಂಚೂರು ಏನರ ತಿನ್ನಪಾ, ಕಾಲಿ ಹೊಟ್ಟೀಗ ಚಾ ಕುಡಿಬಾರ್ದು ಅಂತ ಒತ್ತಾಯ ಮಾಡ್ತಿದ್ದರು. ತಿನ್ನಾಕ ಉಣ್ಣಾಕ ಯಾರಾದ್ರೂ ವತಾವತಿ ಮಾಡಿದ್ರ ನಂಗ ಸಿಟ್ಟು ಬಂದ್ಬಿಡ್ತತಿ. ಊರಿಗೆ ಹೋದ್ರೂ ಇದ ಸಮಸ್ಯೆ. ನಾ ಕಾಲೇಜು ಕಲಿವಾಗ ಸೂಟೀಗ ಬಂದೆಯಂದ್ರ ಎಲ್ಲಾರೂ ತಿನ್ನಾಕ ಕರೇವ್ರ. ಅಜೂಬಾಜೂ, ಎದರಾಬದರಾ ಹಿಂಗ ಎಲ್ಲಾರ ಮನ್ಯಾಗ ಒಂದೊಂದು ತುತ್ತು ತಿಂದ್ರೂ ಹೊಟ್ಟಿ ನಿಬ್ಬರಾಗ್ತಿತ್ತು. ಶಾರದೂರಾಗ ಚಿಮಣಿ ಎಣ್ಣಿ ಸ್ಟವ್ ಮ್ಯಾಲ ಅಡಗಿ ಮಾಡ್ಕೊಂಡು ತಿನ್ನಾಕ ಪಟ್ಟ ಪಡಿಪಾಟ್ಲಾ ಏನಂತ ಹೇಳೋದು? ನೀ ಯಾವೂರ ನಾಯಿ ಅಂತ ಮಾತಾಡಿಸೋರೂ ದಿಕ್ಕಿದ್ದಿಲ್ಲ. ಇಲ್ಲಿ ತಮ್ಮನ್ಯಾಗ ಚಾಕ ಹಾಕಾಕ ಹಾಲಿಲ್ಲಂದ್ರೂ ನಂಗ ಅರ್ಧಾ ಲೋಟಾ ಕುಡ್ಯಾಕ ಕೊಡ್ತಿದ್ರು.

ನಮ್ಮ ಸಣ್ಣವ್ವನ ಮನ್ಯಾಗ ಮತ್ತೊಂದು ಹಿಡಿ ಹಿಟ್ಟಿರ್ತಿರಲಿಲ್ಲ. ಇದ್ದಿದ್ದರಾಗ ಎರಡು ರೊಟ್ಟಿ ಮಾಡಿ ನಂಗೊಂದು, ಆಕಿ ಮಗಗೊಂದು ಕೊಡ್ತಿದ್ಲು. ಬಾಜೂ ಇದ್ಲಿ ಒಲಿ ಮ್ಯಾಗ ಸಣ್ಣ ಚಟಗ್ಯಾಗ ಮುಟಗಿ ಬ್ಯಾಳಿ ಕುಚ್ಚಿದಲಂದ್ರ ಹುಳಪಲ್ಯ ರೆಡಿ. ಬೆಳ್ಳ ಸಂದ್ಯಾಗ ಹಳ್ಳುಪ್ಪು ಚಟಚಟ ನುರಿಸಿ ಬ್ಯಾಳಿ ಮ್ಯಾಲ ಉದರ್ಸಿತಿದ್ಲು. ಒಂಚಿಟಿಗಿ ಕಾರಪುಡಿ,  ಯಾಲ್ಡ ಹನಿ ಒಳ್ಳೆಣ್ಣಿ; ಕಲಾಸ್. ಅದೆಂಥಾ ರುಚಿ? ನೆನಸಗೊಂಡ್ರ ಬಾಯಾಗೆಲ್ಲಾ ಜುಳುಜುಳು ನೀರು ಹರಿದಾಡಿ ಕಡಿತಾವು.

ಒಮ್ಮೊಮ್ಮೆ ಅಷ್ಟು ಕಾರಾನೂ ಇರ್ತಿರ್ಲಿಲ್ಲ. ಅದಕ್ಕ ಮಜ್ಜಿಗಿ ಬಳಕಾ ಪುಡಿ ಮಾಡಿ ಹಾಕ್ತಿದ್ಲು. ಸಣ್ಣವ್ವ ಭಾಳ ಖುಷ್ಯಾಗಿದ್ರ ಹಂಚು ಬದಿಗೆ ಸರಿಸಿ ಸಿಮಿಸಿಮಿಯನ್ನೊ ಬೆಂಕಿ ಬಾಯ್ಮುಚ್ಚಿಸಿ ನಿಗಿನಿಗಿ ಕಿಚ್ಚಿನ ಮ್ಯಾಲ ರೊಟ್ಟಿ ಹಾಕಿ ಬುರುಬುರು ಉಬ್ಬಿಸಿ ಕೊಡ್ತಿದ್ಳು. ಏನರ ಮಾಡ್ಲಿ, ಆಕಿ ಕೈ ರುಚೀನ ಬ್ಯಾರೆ.

ಹಿಂಗ ಮನಿಮನೀಗ ಅಡ್ಡಾಡ್ತಿದ್ರೂ, ಸಣ್ಣವ್ವನ ಬಿಟ್ಟು ಬ್ಯಾರೆ ಯಾರರ ತಿನ್ನಾಕ ಒತ್ತಾಯ ಮಾಡಿದ್ರಂದ್ರ ಅವರು ನನ್ನ ಕಡಿಂದ ಬೈಯಸ್ಗೊಳ್ಳೊದು ಗ್ಯಾರಂಟಿ; ಇವತ್ತಿಗೂ. ಆದರ ಇವತ್ತಿನ ಪರಿಸ್ಥಿತಿ ಬ್ಯಾರೇನ ಐತಿ. ಸಂಜಿ ಆಕ್ತಿದ್ದಂಗ ಊರಾನ ಹುಡುಗ್ರೆಲ್ಲ ಬಸ್ ಸ್ಟ್ಯಾಂಡಿನ ಕಡೆ ಸೇರ್ತಾರು. ಸಾಲಾಗಿರೊ ಚಾದಂಗಡಿಯಾಗ ಹದಹದ ತಿಂತಾರು. ದೂಡ ಗಾಡ್ಯಾಗ ಪಸಂದಗಿ ಮಸಾಲಿ ಹಾಕಿದ ಎಗ್ರೈಸ್, ಸಂದಿಸಂದ್ಯಾಗಿನ ಮಂದೀನ ಕೈಮಾಡಿ ಕರೀತೈತಿ. ಕಣ್ಣು ಕುಕ್ಕಂಗ ಗುಲಾಬಿ ಬಣ್ಣಕ್ಕ ತಿರಗಿದ ಗೋಭಿ ಮಂಚೂರಿನ ಕೆದರ್ಕೊಂಡು ಮುಕ್ತಾರು. ಕೆಚಪ್ಪು, ಪಾನಿಪೂರಿ, ಅದರ ಜೋತಿಗ ಕೊಡ್ತಾರಲ್ಲ, ಹರಿವ್ಯಾಗಿನ ಖಾರದ ನೀರು, ಹಿಂಗ ನಾನಾ ನಮನಿ ತಿಂದು, ಕುಡಿದು ಬಾಯಿ ಚಪ್ಪರಿಸ್ತಾರು.

ಯಾರೇನರ ತಿನ್ಲಿ ಬಿಡ್ಲಿ, ಕಡೀಗ ಬೀಡಿ ಅಂಗಡಿ ಮುಚ್ಚಿ ಹೋಗಂಗ ಜೋತು ಬಿಟ್ಟ ಗುಟಕಾ ಚೀಟು ಹರಿದು ಬಾಯಾಗ ಹಾಕ್ಕೊಳ್ಳಾಕ ಮರೆಂಗಿಲ್ಲ. ಪಿಚಿಪಿಚಿ ಉಗಳಿ ರಸ್ತೆ ತುಂಬ ಜಗತ್ತಿನ ನಕಾಶಾ ಬಿಡಿಸ್ತಾರು. ಎಲ್ಲಿ ಹೋದರೂ ಗುಟಕಾದ ಘಮಲು ತುಂಬಿ ತುಳಕಾಡ್ತತಿ. ಅದರಾಗ ಒಂಚೂರು ಸುಧಾರಿಸಿದವ್ರು, ಅನೂಕೂಲಸ್ಥರು ಬಾರಿಗೆ ಹೋಗಿ ತೀರ್ಥ ಸೇವನೆ ಮಾಡ್ತಾರು. ಚಂದಗಿ ಮೀಸಿ ಮೂಡ್ಲಿಲ್ಲದ ಹುಡುಗ್ರೂ ಒಂದು ಕ್ವಾರ್ಟರ್ರು ಹಾಕೊಂಡು ಬರ್ತಾರಂತ ಸುದ್ದಿ.

ಹಿಂದಕ ಕುಡಿಯೋದಂದ್ರ, ಕುಡುಕ ಶಿವಪ್ಪನ ಮೂಲಕ ಮಾತ್ರ ನಮಗ ಗೊತ್ತಾಗ್ತಿತ್ತು. ಅವಗ ಪಿತ್ರಾರ್ಜಿತಾಗಿ ಬಂದಿದ್ದ ಕಂಡಾಬಟ್ಟಿ ಆಸ್ತಿಯಿತ್ತು. ಅಂವಾ ದಿನಾ ಸಂಜೀಕ ಹೊಟ್ಟಿತುಂಬಾ ಕುಡದು ಓಣಿಓಣಿ ಅಡ್ಡಾಡಿ ರಾಮಾಯಣ, ಮಹಾಭಾರತದ ಒಂದೊಂದು ಸನ್ನಿವೇಶ ಹೇಳಿ ತಾನಷ್ಟ ಅಲ್ಲ, ಶ್ರೋತೃಗಳೂ ತೃಪ್ತಿಯಾದ ಮ್ಯಾಲ ಮನಿ ಸೇರತಿದ್ದ. ತಂದಲ್ಲ, ಇಟ್ಟಗೊಂಡಕಿ ಮನೀಗ. ರಾತ್ರೆಲ್ಲಾ ಕಳದು, ನಿಶೇನ್ನೂ ಅಲ್ಲೆ ಬಿಟ್ಟು ಮುಂಜೇಲೆದ್ದು ಕಟ್ಟಗೊಂಡ ಹೆಂಡತಿ ಗೂಡಿಗೆ ಸೇರಿ ಬೆಚ್ಚಗಾಗ್ತಿದ್ದ.

ಅವತ್ತ ಶಿವಪ್ಪಗ ಕುಡಕ ಶಿವಪ್ಪ ಅಂತ ಊರಿಗೆ ಊರ ದಯಪಾಲಿಸಿದ ಉಪಾಧಿಗೆ ಇವತ್ತು ಅಂವಗ ಕುಡುದ ಬಿಟ್ಟು ಬಾಟಲೀಗ ಇರೂ ಕಿಮ್ಮತ್ತೂ ಇಲ್ಲ. ಬಹುತೇಕ ಮಂತ್ಯಾನದಾಗ ಅಪ್ಪ ಒಂದು ಬಾರು, ಮಗಾ ಒಂದು ಬಾರು ತಮ್ಮ ತಮ್ಮ ಶ್ರದ್ಧಾಕೇಂದ್ರ ಮಾಡ್ಕೊಂಡಾರು. ಶಿವಪ್ಪನ ಚಕ್ರಾಧಿಪತ್ಯದೊಳಗ ಪಟ್ಟದರಸಿ, ಅಂತಃಪುರವಾಸಿ ಇಬ್ಳಾರೂ ಖುಷಿಖುಷಿಂದ ಇರೋದು ನೋಡಿ ನಂಗೂ ವಿಚಿತ್ರ ಅನಿಸ್ತಿತ್ತು. ಆಮ್ಯಾಲ ಇಟ್ಟಗೊಂಡಕಿ ಮಗಳ್ನೂ ಇಟ್ಟುಗೊಂಡು ತಿಂದು ತೇಗಿದ. ಹಿರೇರು ಬುದ್ಧಿ ಹೇಳಾಕ ಹೋದ್ರ, ನಾವು ಬಿತ್ತಿದ ಬೀಜಾ ನಾವ ಉಣ್ಬೇಕಂತ ಸಮಜಾಯಿಷಿ ಕೊಟ್ಟ.

ಹೂಂ... ಎಲ್ಲಿ ಬಿಟ್ಟಿದ್ದೆ? ಊರಾಗಿನ ಹುಡುಗ್ರ ಸುದ್ದಿ. ಊರಾಗ ಎಡಗೈ ಬಲಗೈಗೆ ಸಿಗಂಗ ಇಷ್ಟೆಲ್ಲಾ ಸವಲತ್ತಿದ್ರೂ ಕೆಲವರು ಕತ್ತಲ ಜಗಾ ಹುಡಕ್ಕೊಂಡು ಯಾಕ ಹೋಗ್ತಾರೋ ಗೊತ್ತಿಲ್ಲ. ಹೊಳ್ಳಿ ಬರಬೇಕಾರ ಮಾತ್ರ ದೇಹಕ್ಕಾದ ದಣಿವು ಮುಚ್ಚಗೊಳ್ಳಾಕ ಹಸಮಾಡಿದ ಗುರೆಳ್ಳಿನಂತಾ ಮೀಸಿ ಮ್ಯಾಲ ಕೈಯಾಡ್ಸಿಗೊಂಡು ಬೀಜಯಂಗೈತಾರು. ಊರಾನ ಬೀದಿಲೈಟಿನ ಬೆಳಕು ಮಾರಿ ಮ್ಯಾಲ ಬೀಳೋದ್ರೊಳಗ ಗೆಜ್ಜಿಸಪ್ಪಳ, ಬಳಿಸಪ್ಪಳ ಒಳದಾರಿಗುಂಟ ಬಂದು ಓಣಿ ಸೇರ್ಕಂತಾವು.

ಉಳುವನಗೌಡ್ರು, ಸಿದ್ದಪ್ಪಶೆಟ್ರು ಚಾದಂಗಡಿ ಕಡಿಗೆ ಬಂದ್ರ ಸಾಕು ಹುಡುಗ್ರು ಮುಕಳಿ ಸುಟ್ಟ ಬೆಕ್ಕಿನಂಗ ಸಂದಿಸಂದೀಗ ಓಡ್ತಿದ್ವು. ಈಗ ಅಂತಾ ಜಗಕ್ಕ ಹೋದ್ರ ತಮಗ ಮರ್ಯಾದಿ ಕಮ್ಮಿಯಾಗ್ತತಿ ಅನ್ಕಂಡು ಹೊತ್ತು ಮುಳಗೋದ್ರೊಳಗ ಹಿರೇರು ತಮ್ಮ ನೆಲೀಗ ಸೇರ್ತಾರು. ನಂತರ ಅವರ ಮನಿಮಕ್ಕಳು ಹೊರಬೀಳ್ತಾರು.

ಬೀದಿಬೀದ್ಯಾಗ ತುಂಬಿದ್ದ ದೊಡ್ಡಪ್ಪ, ದೊಡ್ಡವ್ವ, ಕಾಕಾ, ಚಿಗವ್ವ, ಅತ್ತ್ಯಾ, ಮುತ್ತ್ಯಾ, ಮಾಂವ, ಮೈದನಾ, ಒಂದೂ ಸತ್ತು ಹೋಗ್ಯಾರ. ಇಲ್ಲಾ ನೆಲ ಕಟ್ಟ್ಯಾರ. ಅಂತವ್ರದು ಹಿರೇತನಾ ಏನೂ ನಡೆಂಗಿಲ್ಲ. ಸೊಸ್ತೆಂದೇರು ಬಂದು ಮಮ್ಮಕ್ಳಾಗಿ ಅವರ ಮರ್ಜೀಗ ತಕ್ಕಂಗ ಇವರು ಹೆಜ್ಜಿ ಇಡಬೇಕಾಗೇತಿ. ಈಗ ಯಾರ್ಬೇಕಾದರ ಮನೀಗ ಯಾರ್ಬೇಕಾದರು ನುಗ್ಗಂಗಿಲ್ಲ. ಅನಿವಾರ್ಯ ಕೆಲಸಿದ್ರ ಹೊರಾಗ ನಿಂತು ಕರಿಬೇಕು. ವ್ಯವಹಾರ ಮುಗಿದ ಮ್ಯಾಲ ಎದ್ದು ಬರ್ತಿರಬೇಕು.

* * *
ಬರಬೇಕಾದ ಬಸ್ಸು ಬರಲೇಲ್ಲ. ವಸ್ತಿ ಬಸ್ಸ ಗತಿಯಾಯ್ತು. ಎರಡು ಬಸ್ಸಿನ ಮಂದಿ ತುಬ್ಕಂಡು ಡಿಚ್ಚಾತು. ಕಾದು ಕಾದು ಕೆಂಡಾಗಿದ್ದ ಮಂದಿ ಸೀಟು ಸಲುವಾಗಿ ಒಬ್ಬರ ಮ್ಯಾಲ ಒಬ್ರು ಬಿದ್ದು ಕಾಗಿ ಕಚ್ಚಾಡ್ದಂಗ ಕಚ್ಚಾಡಿದ್ರು. ನನ್ನ ನೋಡಿ ಗೊತ್ತು ಹಿಡಿದವ್ರೂ, ಹಿಡಿಲಿಲ್ಲದವ್ರು ಎಲ್ಲಾ ದಿಕ್ಕಿನಿಂದನೂ ದೂಡಾಡಿಕೊಂಡು ಹೋದ್ರು. ಒಂಟಿಗಾಲಲ್ಲೆ ಕಂಬಕ್ಕ ಕೈಕೊಟ್ಟು ನಿಂತೆ. ಹುಡುಗ್ರ್ಯಾರು ನಂಗ ಸೀಟು ಬಿಡ್ಲಿಲ್ಲ, ದೊಡ್ಡವ್ರು ಬಿಡ್ರಲೇ ಮಕ್ಳ ಅನ್ಲಿಲ್ಲ. ನೋಡಿದ್ರೂ ನೋಡ್ದಂಗ ಕಿಟಕಿ ಕಡೆ ಮಾರಿ ಮಾಡಿ ಯಥೇಚ್ಚ ಗಾಳಿ ತೊಗೊಂಡ್ರು.

ಒಬ್ಬಂವ ಶಾರೂಕಖಾನ್, ಇನ್ನೊಬ್ಬಂವ ಸಲ್ಮಾನಖಾನ್, ಮತ್ತೊಬ್ಬವ ಅಮೀರಖಾನ್ ಹಿಂಗ ತಮಗ ಪಸಂದ ಬಂದಿರೊ ಸಿನೇಮಾ ನಟರ ಸ್ಟೈಲಿನಾಗ ಮಾತಾಡ್ತಿದ್ರು. ಹುಚ್ಚುಚ್ರಾಕಾರ ಜೋಕ್ ಮಾಡ್ಕೊಂಡು ತಾವ್ತಾವ ನಗ್ತಿದ್ರು. ಹೆಣ್ಮಕ್ಕಳು ತಮ್ಮ ಕಡೆ ಲಕ್ಷ್ಯ ಕೊಟ್ಟು ನೋಡಲ್ಲಿವರ್ಗೂ ದನಿ ಹಂಗ ಏರ್ಕೋತ ಹೋಗ್ತಿತ್ತು.

ಸೆರೆವಾಸ್ನಿ, ಬೀಡಿ ಘಾಟು, ತಂಬಾಕಿನ ಕಾಕು, ಬೆವರಿನ ಅಡ್ಬಾಸು ಒಂದಕ್ಕೊಂದು ಹೊಸ್ಗೊಂಡು ಹಗ್ಗಾಗಿ ಕುತಿಗೀಗ ಬಿಗಿದ್ವು. ಡ್ರೈವರ್ ಖಬರ್ಗೆಟ್ಟು ಗಾಡಿ ಹೊಡಿಯೊ ರೀತಿಗೆ ಎದ್ಯಾಗ ಹುಟ್ಟಾಕಿ ತಿರಿವಾಡ್ದಂಗಾತು. ತಡಸ ಬಂತು. ಹೊಟ್ಟಿ ಹಸ್ತಿದ್ದಕ್ಕ ಇವತ್ತ ತಡಸದಾಗ ಏನರ ತಿನಬೇಕಂತ ಮಾಡಿದ್ದೆ. ತಳ್ಳಾಡ್ಕೊಂಡು ಹೋಗೋರ ನಡುವ ಸೇರ್ಕಂಡು ಹೋಟೆಲ್ಗೆ ಹೋಗಿ ‘ತಿನ್ನಾಕ ಏನೈತೆಪಾ’ ಅಂತ ಆಕಳಿಸಾಕತ್ತಿದ್ದ ಸಪ್ಲಾಯರ್ನ ಕೇಳ್ದೆ. ನನ್ನ ದನಿ ಸೋತಿದ್ದು ನಂಗ ಬರೋಬ್ಬರಿ ಗೊತ್ತಾಗಂಗಿತ್ತು.

ಮುಂಜೇಲಿಂದ ಚಾಕರಿ ಮಾಡಿ ಹೈರಾಣಾಗಿದ್ದ ಮಾಣಿ ಮಕಾ ಕಿವಚ್ಕೊಂಡು ಹೇಳ್ದ, ‘ಇಷ್ಟೊತ್ನಾಗ ಏನು ಸಿಗ್ತತ್ರಿ, ಬರೇ ಚಾ ಅಷ್ಟ ಐತಿ ನೋಡ್ರಿ’. ಆದಷ್ಟು ಲಗೂ ಹಾಳಾಗಿ ಹೋಗ್ರಿ ಅನ್ನಂಗ ಅವ್ನ ಹಾಲಚಾಲಿತ್ತು. ಊರಾನ ಮಂದಿ ಜೊತೀಗ ಗುಂಪನಾಗ ಬಂದಾಗ ಎಷ್ಟ ಚಂದ ನಕ್ಕೋತ ಮಾತಾಡ್ತಿದ್ದ. ಕುದ್ದು ಕುದ್ದು ಇಸಾ ಆಗಿದ್ದ ಚಾ ಕುಡದು ಕಳ್ಳಿನಾಗಿನ ಸಂಕಟ ಪ್ರಾಣಸಂಕಟ ಆತು. ಇವತ್ತ ರಾತ್ರಿ ಬರಬ್ಬರಿ ಉಂಡು ಸೇಡು ತೀರಿಸ್ಕೋಬೇಕು. ಗಿರಗಿಟ್ಲಿ ತಿರಗ್ದಂಗ ಸುತ್ಕೋತ ಹೋಗಿ ಊರ ಮುಟ್ಟಿದಾಗ ಹತ್ತು ಹೊಡದಿತ್ತು. ಅಂಗಡಿ ಹೋಟಲ್ಲು ಮುಚ್ಚಿದ್ರೂ ಬಾರು ಮಾತ್ರ ಹಗಲ್ಯಾವದೊ, ರಾತ್ರಿಯಾವ್ದೊ ಅನ್ನಂಗ ಕುಲುಕುಲು ಅಂತಿತ್ತು. ವಸ್ತಿ ಬಸ್ಸಿನ ಡ್ರೈವರ್, ಕಂಡಕ್ಟರ್ ಸಲುವಾಗಿ ಖಾನಾವಳಿ  ಮಂದಿ ಇನ್ನೂ ತಕ್ಕಂಡು ಕುಂತಿದ್ರು. ಹಸಿದ ಹೊಟ್ಟೀಗ ಖಾನಾವಳಿ ಸಾರಿನ ವಾಸ್ನಿ ಬಡಿದು ಯಾವಾಗ ಮನೀಗ ಹೋಗಿ ಕಬಕಬ ತಿಂದೇನಪಾ ಅನ್ಹಂಗಾಗಿತ್ತು.

ಕತ್ತಲ್ದಾಗ ತಡವರಸ್ಗೋತ ಮನೀಗ ಹೋಗಿ ನೋಡ್ತನಿ, ದೊಡ್ಡ ಕೀಲಿ ಹಾಕಿಬಿಟ್ಟತಿ. ಇದೇನ ಹಿಂಗ ಇದ್ದಕಿದ್ದಂಗ ಎಲ್ಲಿ ಹೋಗಿದ್ದಾರು ಅನ್ಕೊಂಡು ಬಾಜೂ ಮನ್ಯಾಗ ಲೈಟ ಹತ್ತಿದ್ದ ನೋಡಿ ಕೇಳ್ದೆ.

‘ಅವ್ರು ಟೂರ್ಗೆ ಹೋಗ್ತೇವಿ ಅಂದಿದ್ದರಿ’ ಟೀವಿ ನೋಡ್ಕೋತ್ತ ಹುಡುಗಿ ಹೇಳ್ತು. ಕಣ್ಣೆತ್ತಿ ನೋಡಿದ್ರ ಎಲ್ಲಿ ಕಾರ್ಟೂನ್ ಮುಂದಕ ಹೋಗಿಬಿಡ್ತೈತೋ ಅನ್ನಂತ ಮುತವರ್ಜಿ. ಅಷ್ಟರಾಗ ಒಳಗಿಂದ ‘ಏ... ಚಾವಿ ಕೊಟ್ಟು ಹೋಗ್ಯಾರ ನೋಡು, ಕೊಡು ಅವ್ರಿಗೆ’ ಹೆಣ್ಣದನಿ ಬಂತು.

ಕಾರ್ಟೂನ್ ಹುಡುಗಿ ಬಾಯಾಗ ಪಿಚ್‌ಪಿಚ್ ಮಾಡಿ ಕಾಲೆಳ್ಕೊಂಡು ಬಂದು ಕೀಲಿಕೈ ಕೊಡ್ತು. ದೃಷ್ಟಿ ಮಾತ್ರ ಕಾರ್ಟೂನ್ ಮ್ಯಾಲs ಇತ್ತು.
ಮದಲ ಕೀಲಿ ತಗದು ಅಡಗಿ ಮನೀಗ ನುಗ್ಗಿದೆ. ಲೈಟ್ ಹಾಕಿದ ಕೂಡ್ಲೆ ಅನ್ನದ ಡಬರಿ ಕಾಣ್ತು. ಹತ್ತಿರ ಹೋಗಿ ನೋಡಿದ್ರ ಅಲ್ಲೇ ಸಾರಿನ ಗುಂಡೀನೂ ಇತ್ತು. ಸೀದಾ ಬಚ್ಚಲಕ್ವಾಣೀಗ ಹೋಗಿ ಪಲಪಲ ಮಾರಿ ತೊಕ್ಕೊಂಡು ಬಂದೆ. ಮಾಡಿನಾಂದ ಎರಡ್ಮೂರು ಕರೇ ಜೊಂಡಗ್ಯಾ ಹೊರಾಗ ಬಂದು ಸುಳುಸುಳು ಸುಳಿದಾಡಿದ್ವು. ಹೇಸಿಗ್ಯಾಗಿ ನಂದ ಮಾರಿ ಬ್ಯಾರೆ ಕಡೆ ತಿರಗಿಸಿದೆ.

ಗಂಗಾಳಕ್ಕ ಅನ್ನಾ ಹಾಕಿ ಸಾರು ಸುರವ್ಕೊಂಡೆ. ಇನ್ನೇನು ತುತ್ತು ಬಾಯ್ಗೆ ಒಯ್ಬೇಕು ಅನ್ನಷ್ಟರೊಳಗ ಬಸ್... ಅಂತ ಅಡ್ಬಾಸು ಹೊಡಿತು. ಮತ್ತೊಮ್ಮೆ ಎರಡೂ ಡಬರೀನ ಮೂಗಿಗೆ ಹಿಡಿದು ಉಸಿರೆಳಕೊಂಡೆ. ಹೌದು ಇದು ನಿನ್ನೆ ಮಾಡಿದ ಅಡಗೀನ ಸೈ.

ತಾಟು ಮಣಿ ಕೆಳಾಗ ಸರಿಸಿ ಕೈ ತೊಕ್ಕೊಂಡು ಸಣ್ಣವ್ವನ ಮನಿಗೆ ಹೆಜ್ಜಿ ಹಾಕ್ದೆ. ಈಗೇನು ಅಕಿ ಮಕ್ಳು ದುಡಿತಾರು, ಬೇಕಾದಂಗ ವ್ಯವಸ್ಥಾ ಆಗ್ತತಿ. ಸಮೀಪ ಹೋಗ್ತಿದ್ದಂಗ ಯಾಲ್ಡು ಹೆಣ್ಣುಬಾಯಿಗಳು ಒದರಾಟ ಇಟ್ಟಿದ್ವು. ‘ಹಲ್ಗೆ ಹಲ್ಲು ಕೂಡ್ಸಿ ಗಂಜಿ ಹಾಕಿ ಬೆಳಸಿದ್ದಕ ಮಗಾ ಆಗ್ಯಾನು, ನಿನಗೇನು ಗೊತ್ತೈತಿ ಇವತ್ತ ಬಂದಕೀಗ’. ‘ಅದು ನಿನ್ನ ಕರ್ಮ, ನನ್ನ ಕೇಳಿ ಬೆಳಸಿದ್ದೆನು ನಿನ್ನ ಮಗನ್ನ. ನಾನು ನಿನ್ನಂಗ ಈ ಮನೀಗ ಮಳಿ ಹೊಡದು ಬಂದನಿ, ಗುದ್ದಿಗೆ ಹೋಗಾಕ ಬಂದಿ, ಬಾಯ್ಮುಚ್ಕೊಂಡು ಕುಂದರ್ರು’.

ಅತ್ತಿ ಸೊಸಿ ಜಗಳಾ ಅಂತ ಸಣ್ಣ ಮಕ್ಕಳಿಗೂ ತಿಳೆಂಗಿತ್ತು. ಕಟ್ಟಿ ಮ್ಯಾಲ ತಲಿ ಕೆಳಾಗ ಹಾಕ್ಕೊಂಡು ಕುಂತಿದ್ದ ಮಗಗ ಕೇಳ್ದೆ, ‘ಸಣ್ಣವ್ವ ಅದಾಳೇನೊ?’
ಕುಕ್ಕರಗಾಲು ಬಿಡಿಸ್ಕೊಂಡು ಹೇಳ್ದ, ‘ಆಕೆಲ್ಲಿ ಸಾಯ್ತಾಳು? ಒಳಾಗ ಹೆಂಗ ಹೊಯ್ಕಳ್ಳಾಕ ಹತ್ತ್ಯಾಳ ನೋಡು’.
ಈಗ ಕೈಕಾಲಿನ ಶಕ್ತಿ ಮೈಗೆ ಇರಿಬಿ ಹತ್ತಿದ ಹುಳದಂಗ ಒದ್ದಾಡ್ತು. ಖಾನಾವಳಿ ಕಡೀಗ ಓಡ್ದೆ. ಕಿಸೆದಾಗ ಸಾವಿರಾರು ರೂಪಾಯಿ, ಏಟಿಎಮ್ ಕಾರ್ಡು, ಕ್ರೆಡಿಟ್ ಕಾರ್ಡು ಎಲ್ಲಾ ಇದ್ವು. ಆದರ ಜೀವಕ್ಕ ಅನ್ನ ಬೇಕಾಗಿತ್ತು. ಇನ್ನೇನು ಅಂವ ಕಡೇ ಪಡಕು ಮುಚ್ತಾನ ಅನ್ನದರೊಳಗ ಖಾನಾವಳಿಯೊಳಗ ತೂರ್ಕೊಂಡು ‘ಒಂದು ಊಟಕ್ಕ ಹಚ್ಚಪಾ’ ಅಂದೆ

... .... ....

‘ಇದ್ದಂತಾದ್ದು ಕೊಡಪಾ, ಹಸಿವು ಭಾಳಾಗೇತಿ’.
‘ಎಂಥಾ ಕೆಲಸಾತ್ರಿ ಸಾವ್ಕಾರ್ರ. ಈಗ ನಾವೆಲ್ಲ ಉಂಡು ಉಳಿದಿದ್ದನ್ನ ಹೊರಾಗ ಚೆಲ್ಲಿದ್ವಿರಿ’ ಎಂದು ಕೈಮಾಡಿ ತೋರಿಸ್ದ. ರಸ್ತೆ ಬದಿಗೆ ಗುರ್ರಂತ ಅನ್ಕೊಂಡು ನಾಯಿ ಗಬಾಗಬಾ ತಿನ್ನಾಕತ್ತಿತ್ತು.
‘ನೀವು ವಸ್ತಿ ಬಸ್ಸು ಇಳಿದ ಕೂಡ್ಲೆ ಬಂದಿದ್ರ ಎಲ್ಲಾ ಸಿಗ್ತಿತ್ತು ನೋಡ್ರಿ’ ಅಂತನೂ ಸೇರಿಸಿ ಸಂಕಟಾ ಹೆಚ್ಚಿಸ್ದ.

ಇಲ್ಲದ ವ್ಯಾಳೇದಾಗ ಹಸಿವು ಹಾವಾಗಿ ಕಾಡ್ತತಿ, ಸಂಕಟ ಹೆಗ್ಗಣಾಗಿ ಗೆಬರ್ತತಿ, ಸೋಲು ಗುಂಗಿ ಹುಳದಂಗ ಕೊರಿತತಿ. ಅವ್ವ ಆಗಾಗ ಅಂತಿದ್ಲು, ‘ಅನ್ನ ದೇವರ್ಗಿಂತ ಇನ್ನು ದೇವರಿಲ್ಲ’ ಅಂತ. ‘ಒನ್ನಾಕು ಚೂಡಾನರ ಬಾಯಾಡ್ಸಿ ಹೋಗ್ರಿ’ ಅಂದ ಹೆಂಡ್ತಿ ಮಾತು ನೆನಪಾತು.
ಕಾಲು ಬಂದ ದಿಕ್ಕಿಗೆ ತಿರುಗಿದ್ವು. ಫೋನು ಹಚ್ಚಿ ಟೂರ್ಗೆ ಹೋದವ್ರನ್ನ ಮಾತಾಡ್ಸಿದೆ. ತಮ್ಮ ಮನಸಿನ ತುಂಬ ಹಳಾಹಳಿ ಮಾಡ್ಕೊಂಡು ಅಲವತ್ತುಕೊಂಡ. ‘ಫೋನ್ ಮಾಡೆರ ಬರಬೇಕಾಗಿತ್ತು. ಈಗ ಊಟಕ್ಕ ಹೆಂಗ್ಮಾಡ್ತಿ?’ ಅಂತ ಕಕ್ಕಲಾತಿ ತೋರಿಸ್ದ.
ಹಟಕ್ಕ ಬಿದ್ದು ಹೇಳ್ದೆ, ‘ಈಗ ಮನೀಗ ಹೋಗಿ ಅಡಗಿ ಮಾಡ್ಕೊಂಡು ಉಣ್ತಿನಿ’.
‘ಹೆಂಗ ಮಾಡ್ಕಂತಿ? ಗ್ಯಾಸಿನ ಸಿಲೆಂಡರ್ ನಾವು ತೊಗೊಂಡು ಹೋಗೇವಿ. ಕಟಿಗಿ ಒಲಿ ಇತ್ತಿತ್ಲಾಗ ತಗದ ಬಿಟ್ಟೇವಿ’.

... .... ....

ದಾರ್ಯಾಗ ಎದರ್ನಿಂದ ಇಬ್ಬರು ಜೋಲಿ ಹೊಡ್ಕೊಂತ ಬಂದ್ರು. ಕರೆಂಟು ಹೋಗಿ ಕತ್ತಲಾಗಿದ್ದಕ್ಕ ಮುಖ ಕಾಣ್ತಿದ್ದಿಲ್ಲ. ಪ್ರಶ್ನೇನೂ ಬಂತು. ‘ಯಾವಾಗ ಬಂದ್ರಿ ಸಾಹೇಬ್ರ? ಅರಾಮದಿರೇನು?’. ಹುಳಿ ವಾಸ್ನಿ ಸಂಕಟದ ಬಣವೀಗೆ ಬೆಂಕಿ ಹಚ್ತು. ಏನರ ಉತ್ತರ ಕೊಡ್ಬೇಕು ಅನ್ನೋದರೊಳಗ ಮತ್ತೊಬ್ಬಾಂವ ಅಂದ– ‘ಅವರ್ಗೇನು ಬಿಡಪಾ, ನೆಳ್ಳಾನ ನೌಕ್ರಿ, ಆರಾಮ ಚಾಕ್ರಿ, ನಮ್ಮಂಗ ಹಮಾಲಿ ಮಾಡ್ಬೇಕಾಗೇತನು?’.

ನಂಗ ಗ್ಯಾರಂಟಿ ಆತು. ಇವರು ನಮ್ಮ ಅಪ್ಪನ ಫೋಟೋಕ ನಮಸ್ಕಾರ ಮಾಡಾಕ ಬರ್ತಿದ್ದ ಹಮಾಲ್ರು.
ಮನಸ್ಸು ಕೀಸರಿಟ್ಟು ಗಾಂಧೀಚೌಕ್‌ಗೆ ಹೋಗಿ ಕಟ್ಟೀಗ ಕೂತೆ. ಒಮ್ಮೆ ಉಸರೆಳಕೊಂಡು ವಾಚ್ ನೋಡ್ಕೊಂಡೆ. ನಡುರಾತ್ರಿ ಹನ್ನೆರಡು ದಾಟ್ತು. ಹಂಗ ದಿನಾಂಕ ಒಂದನೇ ತಾರೀಖಿಂದ ಎರಡನೇ ತಾರೀಖಿಗೆ ಹೋತು. ಅಕ್ಟೋಬರ್ ಎರಡು. ಸುತ್ತಲೂ ನೋಡ್ದೆ. ಪರಪರಿಯಿಲ್ಲ, ಚಪ್ಪರಿಲ್ಲ, ಬಾಳಿಕಂಬಿಲ್ಲ, ಊರಾನ ಕಸಾ ಎಲ್ಲಾ ಬಂದು ಅಲ್ಲೆ ಗುಡ್ಡಾಗಿ ಬಿದ್ದಿತ್ತು. ಕಸದ ರಾಶಿ ಬದೀಗ ಒಬ್ಬ ಮುದುಕ ಬಿದ್ದು ನರಳ್ತಿದ್ದ. ಅರನಿದ್ದಿಯೊಳಗ ಹಾಡು ಹಾಡ್ದಂಗ ಬಡಬಡಸ್ತಿದ್ದ.
‘ಕಟ್ಟಿಕೊಂಡಕಿ, ಇಟ್ಟುಕೊಂಡಕಿ ಇಬ್ಬರೂ ಕೈ ಕೊಟ್ರೊ,
ಇಟ್ಟಕೊಂಡಕಿ ಮಗಳು ಊರ ಮಧ್ಯಾನ್ನಕ್ಕ ಬಿಟ್ಲೊ...’
ಹಾಡುತ್ತ ಹಾಡುತ್ತ ರಾಮಾಯಣದ್ದೊ, ಮಹಾಭಾರತದ್ದೊ ಕತೀನ ಅಸಂಬದ್ಧಾಗಿ ತೊದಲಾಕತ್ತ.
ಆದರ ನೀವೇನ ಅನ್ರಿ... ನಮ್ಮೂರ ಮಂದಿ ಚೊಲೊ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT