ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜಸ್ಥಾನ ರಾಯಲ್ಸ್ ವಿರುದ್ಧ ಸೂಪರ್ ಕಿಂಗ್ಸ್‌ಗೆ ಜಯ: ಪ್ಲೇಆಫ್ ಸನಿಹಕ್ಕೆ ಚೆನ್ನೈ

Published 12 ಮೇ 2024, 17:02 IST
Last Updated 12 ಮೇ 2024, 17:02 IST
ಅಕ್ಷರ ಗಾತ್ರ

ಚೆನ್ನೈ: ಐದು ಬಾರಿಯ ಐಪಿಎಲ್‌ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಭಾನುವಾರ ರಾಜಸ್ಥಾನ ರಾಯಲ್ಸ್‌ ತಂಡದ ವಿರುದ್ಧ ಸುಲಭ ಜಯ ಸಾಧಿಸಿತು. ಈ ಮೂಲಕ ಪಾಯಿಂಟ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದ ಚೆನ್ನೈ ತಂಡದ ಪ್ಲೇ ಆಫ್‌ ಹಾದಿ ಮತ್ತಷ್ಟು ಸನಿಹವಾಯಿತು.

ತವರಿನಲ್ಲಿ ನಡೆದ ಪಂದ್ಯದಲ್ಲಿ ಋತುರಾಜ್ ಗಾಯಕವಾಡ್ ಬಳಗವು ರಾಯಲ್ಸ್ ತಂಡದ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 14 ಅಂಕ ಗಳಿಸಿದೆ. ರಾಯಲ್ಸ್ ತಂಡ 16 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ ಸಂಜು ಸ್ಯಾಮ್ಸನ್ ನಿರ್ಧಾರ ಕೈಕೊಟ್ಟಿತ್ತು. ರಾಯಲ್ಸ್ ತಂಡಕ್ಕೆ ಆರಂಭದಲ್ಲಿಯೇ ವೇಗಿ ಸಿಮ್ರನ್‌ಜೀತ್ ಸಿಂಗ್ (26ಕ್ಕೆ3) ಬಲವಾದ ಪೆಟ್ಟು ಕೊಟ್ಟರು. 20 ಓವರ್‌ಗಳಲ್ಲಿ 5 ವಿಕೆಟ್‌ಗೆ 141 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. ಈ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಚೆನ್ನೈ ತಂಡ ಇನ್ನು ಹತ್ತು ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್‌ಗೆ 145 ರನ್ ಗಳಿಸಿತು. 

ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಯೊಂದಿಗೆ ಚೆನ್ನೈ ತಂಡ ಕಣಕ್ಕಿಳಿಯಿತು. ಆರಂಭಿಕ ಆಟಗಾರ ರಚಿನ್ ರವೀಂದ್ರ (27, 18ಎ) ಅವರ ವಿಕೆಟ್ ಅನ್ನು ಬೇಗನೆ ಕಳೆದುಕೊಂಡಿತು. ಅಶ್ವಿನ್ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಡೇರಿಲ್‌ ಮಿಚೆಲ್ (22 ) ಮೊಯಿನ್ ಅಲಿ (10), ಶುಭಂ ದುಬೆ (18) ರವೀಂದ್ರ ಜಡೇಜ (5) ಅವರು ಹೆಚ್ಚು ಪ್ರತಿರೋಧ ತೋರಲಿಲ್ಲ. 

ಸಂಕಷ್ಟದಲ್ಲಿ ತಂಡಕ್ಕೆ ನಾಯಕ ಋತುರಾಜ್ ಗಾಯಕವಾಡ್ ಆಸರೆಯಾದರು. ರಾಯಲ್ಸ್ ಬೌಲರ್‌ಗಳನ್ನು ಕಾಡಿದ ಅವರು, 41 ಎಸೆತಗಳಲ್ಲಿ 42 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರಲ್ಲಿ ಒಂದು ಬೌಂಡರಿ, ಎರಡು ಸಿಕ್ಸರ್ ಸೇರಿತ್ತು. ಸಮೀರ್ (ಅಜೇಯ 15) ಸಹ ತಂಡದ ಗೆಲುವಿಗೆ ಕಾಣಿಕೆ ನೀಡಿದರು.  

ಇದಕ್ಕೂ ಮೊದಲು ರಾಜಸ್ಥಾನ ರಾಯಲ್ಸ್‌ ಆರಂಭದಲ್ಲಿಯೇ ಮೂರು ವಿಕೆಟ್ ಕಳೆದುಕೊಂಡಿತು. ಸಿಮ್ರನ್‌ಜೀತ್ ಸಿಂಗ್ ಅವರು ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ನಾಯಕ ಸಂಜು ಸ್ಯಾಮ್ಸನ್ ಅವರ ವಿಕೆಟ್‌ ಪಡೆಯುವ ಮೂಲಕ ಆರಂಭಿಕ ಆಘಾತ ನೀಡಿದರು.

ನಂತರ ದಾಳಿಗಿಳಿದ ತುಷಾರ್ ದೇಶಪಾಂಡೆ, ಶುಭಂ ದುಬೆಗೆ ಖಾತೆ ತೆರೆಯಲು ಅವಕಾಶ ನೀಡಲಿಲ್ಲ. ಧ್ರುವ್‌ ಜುರೇಲ್ (28, 18ಎ) ಅವರು ತುಷಾರ್ ಬೌಲಿಂಗ್‌ನಲ್ಲಿ ಠಾಕೂರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ತಂಡ ಸಂಕಷ್ಟಕ್ಕೆ ಸಿಲುಕಿತು.

ಒಂದೆಡೆ ವಿಕೆಟ್‌ಗಳು ಉರಳುತ್ತಿದ್ದರೆ, ಮತ್ತೊಂದೆಡೆ ರಿಯಾನ್ ಪರಾಗ್ (ಅಜೇಯ 47, 35ಎ) ತಾಳ್ಮೆಯ ಆಟವಾಡಿ ಅಲ್ಪ ಮೊತ್ತಕ್ಕೆ ಕುಸಿಯುವುದನ್ನು ತಪ್ಪಿಸಿದರು. ಒಂದು ಬೌಂಡರಿ, ಮೂರು ಸಿಕ್ಸರ್‌ ಬಾರಿಸಿ ಮೂಲಕ ತಂಡದ ಮೊತ್ತ ಹೆಚ್ಚಳಕ್ಕೆ ಕಾರಣದರು.  

ಸಂಕ್ಷಿಪ್ತ ಸ್ಕೋರ್: ರಾಜಸ್ಥಾನ ರಾಯಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 141 (ಯಶಸ್ವಿ ಜೈಸ್ವಾಲ್ 24, ರಿಯಾನ್ ಪರಾಗ್‌ ಅಜೇಯ 41, ಧ್ರುವ್ ಜುರೇಲ್ 28, ಸಿಮ್ರನ್‌ಜೀತ್ ಸಿಂಗ್ 28ಕ್ಕೆ3, ತುಷಾರ್ ದೇಶಪಾಂಡೆ 30ಕ್ಕೆ2).

ಚೆನ್ನೈ ಸೂಪರ್ ಕಿಂಗ್ಸ್‌: 18.5 ಓವರ್‌ಗಳಲ್ಲಿ 5 ವಿಕೆಟ್‌ಗೆ 145. (ರಚಿನ್ ರವೀಂದ್ರ 27, ಋತುರಾಜ್ ಗಾಯಕವಾಡ್ ಅಜೇಯ 42, ಡೇರಿಲ್ ಮಿಚೆಲ್ 22, ರವಿಚಂದ್ರನ್ ಅಶ್ವಿನ್ 35ಕ್ಕೆ2, ಯಜುವೇಂದ್ರ ಚಾಹಲ್ 22ಕ್ಕೆ1). ಪಂದ್ಯ ಶ್ರೇಷ್ಠ: ಸಿಮ್ರನ್‌ಜೀತ್ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT