‘ನಕ್ಷತ್ರಯಾನ’– ಹಾಗೆಂದೊಡನೆಯೇ ಅದೊಂದು ಹುಚ್ಚು ಕಲ್ಪನೆಯಷ್ಟೇ ಎಂಬ ಭಾವನೆ ಯಾರಲ್ಲಾದರೂ ಸಹಜವೇ ತಾನೇ? ಅದಕ್ಕೆ ಎರಡು ಪ್ರಬಲ ಕಾರಣಗಳಿವೆ. ಮೊದಲಿಗೆ ನಕ್ಷತ್ರಗಳನ್ನು ತಲುಪುವುದಿರಲಿ ಹಲವಾರು ಸಾವಿರ ಡಿಗ್ರಿ ಮೇಲ್ಮೈ ಉಷ್ಣತೆಯ ತಾರೆಗಳನ್ನು ಸಮೀಪಿಸುವುದೂ ಅಸಾಧ್ಯ.

ಎರಡನೆಯ ಕಾರಣ ನಮಗೂ ನಕ್ಷತ್ರಗಳಿಗೂ ನಡುವಣ ಅಗಾಧ, ಕಲ್ಪನಾತೀತ ಅಂತರ. ನಮಗೆ ಅತ್ಯಂತ ಹತ್ತಿರದ ಸೌರೇತರ ನಕ್ಷತ್ರ ‘ಪ್ರಾಕ್ಸಿಮಾ ಸೆಂಟೌರಿ’ ನಮ್ಮಿಂದ 4.2 ಜ್ಯೋತಿರ್ವರ್ಷ ದೂರದಲ್ಲಿದೆ. ಹಾಗೆಂದರೆ ಬೆಳಕಿನ ವೇಗದಲ್ಲಿ (ಸೆಕೆಂಡ್ಗೆ ಮೂರು ಲಕ್ಷ ಕಿ.ಮೀ.) ನಿರಂತರ ಪಯಣಿಸಿದರೂ ಈ ತಾರೆಯನ್ನು ತಲುಪಲು 4.2 ವರ್ಷ ಬೇಕು. ಹಾಗಿರುವಾಗ ಹತ್ತಾರು ನೂರಾರು ಸಾವಿರಾರು ಲಕ್ಷಾಂತರ ಕೋಟ್ಯಂತರ ಜ್ಯೋತಿರ್ವರ್ಷ ದೂರಗಳ ದೂರದ ನಕ್ಷತ್ರಗಳತ್ತ ಪಯಣ? ಅದು ಕಲ್ಪನೆಯಲ್ಲೂ ಸಾಧ್ಯವಿಲ್ಲ.

ಅದೆಲ್ಲ ಬೆಳಕಿನ ವೇಗದ ಪಯಣದ ಮಾತು. ವಾಸ್ತವ ಏನೆಂದರೆ ಈವರೆಗೆ ರೂಪಿಸಲಾಗಿರುವ ಯಾವ ವ್ಯೋಮನೌಕೆಯ ವೇಗವೂ ಸೆಕೆಂಡ್ಗೆ ಸಾವಿರ ಕಿ.ಮೀ. ವೇಗದಲ್ಲೂ ಮುಟ್ಟಿಲ್ಲ. ಪ್ರಸ್ತುತದ (ಚಿತ್ರ–6) ರಾಕೆಟ್ಗಳ ವೇಗ ಸೆಕೆಂಡ್ಗೆ ಹನ್ನೆರಡು ಕಿ.ಮೀ! ಈವರೆಗೆ ವ್ಯೋಮನೌಕೆಯೊಂದು ಪಯಣಿಸಿರುವ ಗರಿಷ್ಠ ವೇಗ (ಹೀಲಿಯೋಸ್–2ರದು) ಸೆಕೆಂಡ್ಗೆ ಏಳುನೂರು ಕಿ.ಮೀ. ಈವರೆಗೆ ಅತ್ಯಂತ ದೂರ ಸಾಗಿರುವ ವ್ಯೋಮನೌಕೆ ‘ವಾಯೇಜರ್’ (ಚಿತ್ರ–3) ಕ್ರಮಿಸಿರುವ ಒಟ್ಟು ದೂರ 54 ಕೋಟಿ ಕಿ.ಮೀ.; ಅದರ ವೇಗ ಸೆಕೆಂಡ್ಗೆ 17 ಕಿ.ಮೀ. ಹೀಲಿಯೋಸ್ನ ವೇಗದಲ್ಲಿ ಪ್ರಾಕ್ಸಿಮಾ ಸೆಂಟಾರಿಯನ್ನು ತಲುಪಲು ಹದಿನೇಳು ಸಾವಿರ ವರ್ಷ ಬೇಕು; ವಾಯೇಜರ್ನ ವೇಗದಲ್ಲಾದರೆ 74 ಸಾವಿರ ವರ್ಷ! ತಕ್ಷಣ ಹೊರಟು ವಾಪಸ್ಸಾಗಲೂ ಮತ್ತಷ್ಟೇ ಕಾಲ.

ಮಾನವಸಹಿತ ವ್ಯೋಮನೌಕೆಗಳ ಈವರೆಗಿನ ಗರಿಷ್ಠ ದೂರದ ಯಾನ ನಡೆದಿರುವುದು ನಮ್ಮ ಚಂದ್ರನವರೆಗೆ ಮಾತ್ರ (ಚಿತ್ರ–1). ಎಂದರೆ ಸುಮಾರು ನಾಲ್ಕು ಲಕ್ಷ ಕಿ.ಮೀ. ಅಷ್ಟೆ! ಇಸವಿ 1973ರ ನಂತರ ಇಂದಿನವರೆಗೂ ಭೂ ನೆಲದಿಂದ 700 ಕಿ.ಮೀ. ದೂರದಾಚೆಗೆ ಮಾನವ ಸಹಿತ ವ್ಯೋಮಯಾನ ಒಂದೂ ನಡೆದಿಲ್ಲ! ವಸ್ತುಸ್ಥಿತಿ ಹೀಗಿರುವಾಗ ತಾರಾಯಾನದ ಯೋಚನೆ ಹುಚ್ಚು ಕಲ್ಪನೆಯಲ್ಲದೆ ಇನ್ನೇನು?

ಹಾಗಿದ್ದರೂ ತಾರಾ ಪ್ರವಾಸದ ಆಲೋಚನೆಯನ್ನು, ಆಸಕ್ತಿಯನ್ನು ವಿಜ್ಞಾನಿಗಳು–ತಂತ್ರಜ್ಞರು ಕೈಬಿಟ್ಟಿಲ್ಲ. ಅಂತರಿಕ್ಷ ವಿಜ್ಞಾನಿಗಳ ವಾಸ್ತವ ಗುರಿ ನಕ್ಷತ್ರಗಳ ಮೇಲಿಳಿಯುವುದೇನಲ್ಲ. ಇಂಥ ಯಾನಗಳ ಉದ್ದೇಶ ನಮ್ಮ ಸೌರವ್ಯೂಹಕ್ಕೇ ಸೇರಿದ ‘ಕ್ಷುದ್ರಗ್ರಹಗಳು’ (ಚಿತ್ರ–4) ಮತ್ತು ಸೌರವ್ಯೂಹ ಸನಿಹದ ಇತರ ನೂರಾರು ನಕ್ಷತ್ರಗಳ ಸುತ್ತ ಪತ್ತೆಯಾಗಿರುವ ‘ಅನ್ಯಗ್ರಹಗಳು’ (ಚಿತ್ರ–7 ಮತ್ತು ಚಿತ್ರ–8). ಏಕೆಂದರೆ ಹೇರಳ ಕ್ಷುದ್ರಗ್ರಹಗಳು ಅಪಾರ ಅಮೂಲ್ಯ ನಿಧಿ–ನಿಕ್ಷೇಪಗಳನ್ನು ಧರಿಸಿವೆ. ಬೇಕಾದಷ್ಟು ಅನ್ಯಗ್ರಹಗಳು ಭೂಸದೃಶವಾಗಿರುವ, ಜೀವಿಸಹಿತವೂ ಆಗಿರುವ ಸಾಧ್ಯತೆಯೂ ಇದೆ. ಆದರೆ ಈ ಅನ್ಯಗ್ರಹಗಳ ದೂರಗಳು ಅಷ್ಟಿಷ್ಟಲ್ಲ. ಭೂಮಿಗೆ ಅತಿ ಸನಿಹದ ಮೊದಲ 130 ಅನ್ಯಗ್ರಹ ಸಹಿತ ನಕ್ಷತ್ರಗಳ (ಚಿತ್ರ–10) ಕನಿಷ್ಟ ದೂರ ಹತ್ತು ಜ್ಯೋತಿರ್ವರ್ಷ ಮತ್ತು ಗರಿಷ್ಠ ದೂರ ಇನ್ನೂರು ಜ್ಯೋತಿರ್ವರ್ಷ! ಎಂಥ ಕಲ್ಪನಾತೀತ, ಯಾನಾತೀತ ದೂರ! ಅಲ್ಲವೇ?

ಆದ್ದರಿಂದ ಸ್ಪಷ್ಟವಾಗಿಯೇ ಇಂತಹ ಪ್ರಯಾಣಗಳನ್ನು ಕೈಗೊಳ್ಳಲು ವಿಪರೀತ ವೇಗದ, ಪ್ರತಿ ಸೆಕೆಂಡ್ಗೂ ಒಂದು–ಎರಡು ಲಕ್ಷ ಕಿ.ಮೀ. ವೇಗದಲ್ಲಿ ವರ್ಷಾಂತರ ಕಾಲ ಪಯಣಿಸಬಲ್ಲ ಹಿಂದಿರುಗಬಲ್ಲ ವ್ಯೋಮನೌಕೆಗಳು ಅತ್ಯವಶ್ಯ. ಅದೆಲ್ಲ ಸುಲಭವಾಗಿ, ಕ್ಷಿಪ್ರವಾಗಿ, ಕೈಗೆಟುಕುವ ವೆಚ್ಚದಲ್ಲಿ ಸಿದ್ಧವಾಗಬಲ್ಲ ಯೋಜನೆಗಳಲ್ಲವೇ ಅಲ್ಲ. ಆದರೂ ಈ ದಿಸೆಯ ಪ್ರಯತ್ನಗಳನ್ನು ವಿಜ್ಞಾನಿಗಳು ಕೈಬಿಟ್ಟಿಲ್ಲ. ದೂರದೃಷ್ಟಿಯ, ಅತ್ಯದ್ಭುತ ತಾಂತ್ರಿಕತೆಯ ಅಂತಹ ವ್ಯೋಮನೌಕೆಗಳ ರೂಪುರೇಶೆಗಳನ್ನು ಸಿದ್ಧಪಡಿಸುತ್ತಿದ್ದಾರೆ (ಚಿತ್ರ 5, 9, 11 ರಿಂದ 14). ಆ ಕುರಿತ ಅತ್ಯಂತ ಪ್ರಮುಖ ಕೆಲ ಸ್ಯಾಂಪಲ್ಗಳು:

* ಫ್ಯೂಶನ್ ಇಂಪಲ್್ಸ ರಾಕೆಟ್ ಅಥವಾ ನ್ಯೂಕ್ಲಿಯಾರ್ ಪಲ್್್ಸ ಪ್ರೊಪಲ್ಷನ್ ಎಂಬ ಯೋಜನೆಯಲ್ಲಿ ಒಂದು ಬೃಹತ್ ವ್ಯೋಮನೌಕೆಯಲ್ಲಿ ಸಾವಿರಾರು ಜಲಜನಕ ಬಾಂಬ್ಗಳನ್ನು ಕೊಂಡೊಯ್ಯಲಾಗುತ್ತದೆ. ಕನಿಷ್ಟ ಒಂದು ದಶಲಕ್ಷ ಟನ್ ಟಿ.ಎನ್.ಟಿ. ಸ್ಫೋಟಶಕ್ತಿಯ ಆ ಬಾಂಬ್ಗಳೊಂದೊಂದನ್ನು ಆಗಿಂದಾಗ್ಗೆ ನೌಕೆಯ ಹಿಂಬದಿಯ ಹೊರಗೆ ಸಿಡಿಸಿ ಆ ಸ್ಫೋಟಗಳು ಒದಗಿಸುವ ತಳ್ಳುಬಲದಿಂದ ವ್ಯೋಮನೌಕೆಯನ್ನು ಮುನ್ನಡೆಸಲಾಗುತ್ತದೆ. ಈ ಕ್ರಮದಿಂದ ಸೆಕೆಂಡ್ಗೆ ಸುಮಾರು ಎಂಟು ಸಾವಿರ ಕಿ.ಮೀ. ವೇಗ ಗಳಿಸುವುದು ಸಾಧ್ಯವಾಗುತ್ತದಾದರೂ ಅತಿ ಸನಿಹದ ತಾರೆಯನ್ನು ತಲುಪಲೂ ಶತಮಾನಗಳೇ ಬೇಕು (ಚಿತ್ರ 5, 6).

* ನ್ಯೂಕ್ಲಿಯಾರ್ ಫ್ಯೂಶನ್ ಪ್ರೊಪಲ್ಷನ್ ಎಂಬ ಇನ್ನೊಂದು ವಿಧಾನದಲ್ಲಿ ವ್ಯೋಮನೌಕೆಯ ಒಂದು ವಿಶೇಷ ಕೋಣೆಯಲ್ಲಿ ‘ಡ್ಯುಟೇರಿಯಂ’ನ (ಜಲಜನಕದ ಒಂದು ಸಮಸ್ಥಾನಿ) ತುಣುಕುಗಳನ್ನು ಎಲೆಕ್ಟ್ರಾನ್ ಗನ್ಗಳಿಂದ ಬಿಸಿಯಾಗಿಸಿ ಸ್ಫೋಟಗೊಳಿಸಲಾಗುತ್ತದೆ. ಪ್ರತಿ ಸೆಕೆಂಡ್ಗೆ ಇನ್ನೂರೈವತ್ತು ಬಾರಿ ನಡೆಸುವ ಇಂತಹ ಸ್ಫೋಟಗಳು ನೌಕೆಯನ್ನು ಸೆಕೆಂಡ್ಗೆ ಹತ್ತಿಪ್ಪತ್ತು ಸಾವಿರ ಕಿ.ಮೀ. ವೇಗದಲ್ಲಿ ಮುನ್ನಡೆಸುತ್ತವೆ (ಚಿತ್ರ 11, 12).

* ಆ್ಯಂಟಿ ಮ್ಯಾಟರ್ ಪ್ರೊಪಲ್ಷನ್ ಎಂಬ ಮತ್ತೊಂದು ಯೋಜನೆ ಇದೆ. ವ್ಯೋಮನೌಕೆಯ ಒಂದು ಕೊಠಡಿಯಲ್ಲಿ ಪ್ರೋಟಾನ್ಗಳು ಮತ್ತು ‘ಪ್ರತಿ ಪ್ರೋಟಾನ್’ (ಆ್ಯಂಟಿ ಪ್ರೋಟಾನ್) ಕಣಗಳನ್ನು ಬೆರೆಸುತ್ತ ಅವುಗಳ ಪ್ರಬಲ ಸ್ಫೋಟಗಳು ಹೊಮ್ಮಿಸುವ ಶಕ್ತಿಯಿಂದ ವ್ಯೋಮನೌಕೆಯನ್ನು ಚಾಲನೆಗೊಳಿಸುವ ತಂತ್ರ ಇದು. ಪ್ರತಿ ಸೆಕೆಂಡ್ಗೆ ಹಲವು ಹತ್ತು ಸಾವಿರ ಕಿ.ಮೀ. ವೇಗ ಗಳಿಸುವ ಇಂಥ ನೌಕೆಗೆ ಸನಿಹದ ತಾರೆಯನ್ನು ತಲುಪಲು ಕೆಲವು ದಶಕಗಳು ಸಾಕು (ಚಿತ್ರ–14).

* ಈ ಬಗೆಯ ಅಪಾಯಕಾರಿಯೂ ಆದ ಯಾವುದೇ ಸ್ಫೋಟಗಳೂ ಇಲ್ಲದ ಸರಳ ಸುರಕ್ಷಿತ ವಿಧಾನವೂ ಒಂದಿದೆ. ನಕ್ಷತ್ರ ನೌಕೆಯ ಮುಂಬದಿಯಲ್ಲಿ ವಿಶೇಷವಾಗಿ ತಯಾರಿಸಿದ, ಸಾವಿರಾರು ಚದರ ಕಿ.ಮೀ. ವಿಸ್ತಾರದ ತೆಳ್ಳನೆಯ ಪ್ಯಾರಾಶೂಟ್ನಂಥ ‘ಹಾಯಿಪಟ’ವೊಂದನ್ನು ಜೋಡಿಸಲಾಗುತ್ತದೆ. ಭೂಮಿಯ ಮೇಲೆ ಸ್ಥಾಪಿಸಿದ ಅತೀವ ಶಕ್ತಿಯ ಲೇಸರ್ ಕಿರಣಗಳನ್ನು ಅದರತ್ತ ನಿರ್ದೇಶಿಸಿದರೆ ಆ ಹಾಯಿಪಟ ಲೇಸರ್ನ ತಳ್ಳುಬಲದಿಂದ ಮುನ್ನಡೆಯುತ್ತ ವ್ಯೋಮನೌಕೆಯನ್ನೂ ಎಳೆಯುತ್ತ ನಿರಂತರ ವೇಗೋತ್ಕರ್ಷ ಗಳಿಸುತ್ತ ಸಾಗುತ್ತದೆ. ಸನಿಹದ ನಕ್ಷತ್ರಗಳನ್ನು ಶತಮಾನಗಳ ಕಾಲದ ನಂತರ ತಲುಪುತ್ತದೆ (ಚಿತ್ರ–13).

ಎಂತೆಂತಹ ಯೋಜನೆಗಳು! ಈ ಯಾವ ವಿಧಾನವೂ ಇನ್ನೂ ಪರೀಕ್ಷಾ ಪ್ರಯೋಗ ಹಂತಕ್ಕೂ ಬಂದಿಲ್ಲ. ಸದ್ಯದಲ್ಲಂತೂ ಇನ್ನೂ ಹಲವು ದಶಕಗಳವರೆಗೂ ಇಂಥ ಪ್ರಯೋಗಗಳು ಸಾಧ್ಯವೂ ಇಲ್ಲ. ಅಲ್ಲಿಯವರೆಗೂ ತಾರಾ ಪ್ರವಾಸ ಕೇವಲ ಕಲ್ಪನಾ ವಿಲಾಸವಷ್ಟೇ! ಅಲ್ಲವೇ?
– ಎನ್ ವಾಸುದೇವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.