ತಾಯ್ತನವೇ ಅಹಂಕಾರವನ್ನು ಕಳೆದುಕೊಳ್ಳುವ, ನಿತಾಂತವಾಗಿ ತನ್ನ ಮಕ್ಕಳನ್ನು, ಆಪ್ತರನ್ನು ಪೊರೆಯುವ ಶಕ್ತಿ ಸಂಚಯದ ಮಾರ್ಗವೇನೋ ಎನ್ನುವುದಕ್ಕೆ ಗಂಗವ್ವ ಒಂದು ಪ್ರತಿಮೆಯಾಗಿ ನಿಲುತ್ತಾಳೆ.

ರಂ.ಶಾ. ಲೋಕಾಪುರ ಅವರ ‘ತಾಯಿಸಾಹೇಬ’ದ ನರ್ಮದೆ ಇದರ ಸಾಧ್ಯತೆಯನ್ನು ಇನ್ನೂ ವಿಸ್ತರಿಸುತ್ತಾಳೆ. ಒಂದು ಹೆಜ್ಜೆ ಮುಂದು ಎನ್ನುವಂತೆ ಇವಳು ಕಾಣಿಸುತ್ತಾಳೆ. ಹಾಗೆ ನೋಡಿದರೆ ಬಾಳಾಸಾಹೇಬರ ಎರಡನೆಯ ಹೆಂಡತಿಯಾಗಿ ಇವಳದ್ದು ಕೇಂದ್ರವೇ ಇಲ್ಲದ ಬದುಕು ಎನಿಸಿಬಿಡುತ್ತದೆ ಕಾದಂಬರಿಯ ಆರಂಭದಲ್ಲಿ. ತನ್ನ ಸ್ವಂತ ಮಕ್ಕಳಿಲ್ಲದ, ಗಂಡನ ಪ್ರೀತಿ ಮತ್ತು ಗೌರವದ ಭದ್ರತೆಯಿಲ್ಲದ, ಕೊನೆಗೆ ಗಂಡನೂ ಇಲ್ಲದ ನಿರಾಕಾರ, ನಿರಾಧಾರ ಸ್ಥಿತಿಯಿಂದ ನರ್ಮದೆ ನಿಧಾನವಾಗಿ ತನ್ನದೇ ಕುಟುಂಬ ವಿಶ್ವವನ್ನು ಕಟ್ಟಿಕೊಳ್ಳುವುದರ ಕಡೆಗೆ ಸಾಗುತ್ತಾಳೆ. ಬದುಕು ಇವಳಿಗಾಗಿ ಏನನ್ನೂ ಕೊಡದ, ಉಳಿಸದ ಜಿಪುಣತೆಯನ್ನು ತೋರಿಸುತ್ತಿದೆ ಎನ್ನುವುದನ್ನು ಸಾವಧಾನವಾಗಿ ತಾನು ಕೊಡುವ ಕ್ರಿಯೆಯಿಂದಲೇ ಪಡೆಯುವ ಸಾಧ್ಯತೆಯನ್ನು ನರ್ಮದೆಯ ಪಾತ್ರ ಸ್ಥಾಪಿಸುತ್ತಾ ಹೋಗುತ್ತದೆ.

ಒಂದುಕಡೆ ಗಂಡನ ಮೊದಲನೆಯ ಹೆಂಡತಿ ರಾಧಾಬಾಯಿ ಇನ್ನೊಂದು ಕಡೆ ಅವನ ಪ್ರೇಯಸಿ ಎಂದೂ ಮೂರನೆಯ ಹೆಂಡತಿಯೆಂದೂ ಕರೆಯಬಹುದಾದ ಚಂದ್ರಿ ಇವರ ನಡುವೆ ನರ್ಮದೆ ಅಳಿಸಿಹೋಗಿಬಿಡಬಹುದಿತ್ತು. ಆದರೆ ಗಂಡನ ಸಾವಿನ ನಂತರ ನರ್ಮದೆ ತನ್ನನ್ನು ತಾನೇ ಹೊಸದಾಗಿ ‘ಕಟ್ಟಿಕೊಳ್ಳುತಾಳೆ’. ‘ಮೈಯ್ಯೆ ಭಾರ ಮನವೆ ಭಾರ’ದ ನಡುಹರೆಯದ ತಲ್ಲಣಗಳನ್ನು ತನಗೆ ಪ್ರತಿಸ್ಪರ್ಧಿಗಳಾಗಿ ಕಾಣಬಹುದಾದವರ ಬದುಕನ್ನು ನೇರ್ಪು ಮಾಡುವ ಕೆಲಸದಲ್ಲಿ ತನ್ನನ್ನು ಮುಳುಗಿಸಿಕೊಂಡು ಕುಟುಂಬವಿಶ್ವವೊಂದನ್ನು ಸೃಷ್ಟಿಸಿಕೊಳ್ಳುತ್ತಾಳೆ.

ಕಾದಂಬರಿಯ ಆರಂಭವೇ ನರ್ಮದೆಯ ಅಂತರಂಗದಲ್ಲಿ ನಡೆಯುತ್ತಿರುವ ಯುದ್ಧದ ಪರಿಚಯವನ್ನು ಮಾಡಿಕೊಡುತ್ತದೆ. ಗಂಡನ ವೈಕುಂಠ ಸಮಾರಾಧನೆಯಲ್ಲಿ ನರ್ಮದೆ ತೀವ್ರ ತಲೆನೋವಿನಿಂದ ಬಳಲುತ್ತಿರುವ ವಿವರಗಳಿಂದ ಕಾದಂಬರಿ ಆರಂಭವಾಗುತ್ತದೆ. ಕಾದಂಬರಿಯುದ್ದಕ್ಕೂ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಅವಳ ಈ ತಲೆನೋವು ಅವಳ ಸಂಕೀರ್ಣ ಮನಸ್ಥಿತಿಯ ಮತ್ತು ಅವಳೆದುರಿಗಿನ ಸವಾಲುಗಳ ಸೂಚಕದಂತೆಯೇ ಭಾಸವಾಗುತ್ತದೆ.

ಬಂಜೆ ಎನ್ನುವ ಕಾರಣಕ್ಕಾಗಿ ಗಂಡನಿಂದ ತೀವ್ರ ಅನಾದರಕ್ಕೊಳಗಾಗುವ ರಾಧಾಭಾಯಿ ಮತ್ತು ನರ್ಮದ ಅದನ್ನು ಭಿನ್ನ ರೀತಿಗಳಲ್ಲಿ ನಿಭಾಯಿಸುತ್ತಾರೆ. ನೋವು, ಅವಮಾನಗಳನ್ನು ತನ್ನ ಬದುಕಿನ ವಿಧಿಯೋ ಎಂಬಂತೆ ರಾಧಾಭಾಯಿ ನಿಭಾಯಿಸಿದರೆ, ನರ್ಮದೆ ಅವುಗಳನ್ನೇ ತನ್ನ ಬದುಕಿನ ತಳಹದಿಯಾಗಿ ಮಾಡಿಕೊಳ್ಳುತ್ತಾಳೆ.

ವಿಲಕ್ಷಣವಾದ ಸಂದರ್ಭದಲ್ಲಿ ಗಂಡನ ತಿಥಿಯಂದೇ ವಾಡೆ ಬೆಂಕಿಗೆ ಆಹುತಿಯಾದಾಗ, ರಾಧಾಭಾಯಿ ಸಂಬಂಧಿ ಗೋವಿಂದಪ್ಪನ ಮಗ ನಾರಾಯಣನನ್ನು ದತ್ತು ತೆಗೆದುಕೊಳ್ಳುವುದೆಂದು ನಿರ್ಧರಿಸಿದಾಗ ನರ್ಮದೆ ತನ್ನ ಪಾಡನ್ನು ಮಾತ್ರ ತಾನು ನೋಡಿಕೊಂಡರೆ ಸಾಕೆಂದು ನಿರ್ಧರಿಸುತ್ತಾಳೆ. ಇಲ್ಲದ ಉಸಾಬರಿಯೂ ತನಗೆ ಬೇಡವೆನ್ನುವ ತೀರ್ಮಾನಕ್ಕೆ ಬರುತ್ತಾಳೆ. ತನಗೆ ಅನುಕೂಲವಾಗಿ ಕಂಡ ಮನೆಯೊಂದನ್ನು ಮಾಡಿಕೊಂಡು ಕೇಸರಿ ಪತ್ರಿಕೆಯನ್ನು ಓದುತ್ತಾ ಬದುಕು ಕಳೆಯುವ ಸನ್ನಾಹದಲ್ಲಿರುವ ನರ್ಮದೆಗೆ ರಾಧಾಬಾಯಿಯ ಸಾವಿನ ನಂತರ ತನ್ನ ಕಣ್ಣೆದುರಿಗೇ ಕರಗಿಹೋಗುತ್ತಿರುವ ಆಸ್ತಿ ಮಾತ್ರವಲ್ಲ, ಅದು ಅಪಾತ್ರ ದಾನವೂ ಆಗುತ್ತಿರುವ ದುರಂತ ಹೊಸ ಬಗೆಯ ಜ್ನಾನೋದಯಕ್ಕೆ ಅವಕಾಶ ಮಾಡಿಕೊಡುತ್ತದೆ.

ಈ ಅರಿವು ಒಳಗೇ ಅಮೂರ್ತವಾಗಿದ್ದ ಸ್ವಪ್ರಜ್ಞೆಯನ್ನು ಮುನ್ನೆಲೆಗೆ ತರುತ್ತದೆ. ಈ ಅರಿವಿಗೆ ಅನೇಕ ಮುಖಗಳಿವೆ. ತನ್ನ ವ್ಯಕ್ತಿತ್ವದ ಅರಿವು ಮತ್ತು ಅದು ನಿಭಾಯಿಸಬೇಕಾದ ಹೊಣೆಗಾರಿಕೆಯ ಅರಿವು ಒಂದು ಕಡೆಗಾದರೆ, ಕೇಂದ್ರವೇ ಇಲ್ಲದ ಬದುಕಿಗೆ ಕೇಂದ್ರವೊಂದನ್ನು ಕಟ್ಟಿಕೊಳ್ಳುವುದು ಇನ್ನೊಂದು ಕಡೆ.

ನರ್ಮದೆಯ ಪಾತ್ರ ಮುಖ್ಯವಾಗುವುದು ಈ ಎರಡನೆಯ ಕಾರಣಕ್ಕಾಗಿ. ತನ್ನ ವೈವಾಹಿಕ ಬದುಕಿನಲ್ಲಿ ಖಳನಾಯಕಿಯಂತೆಯೇ ಭಾಸವಾಗಬಹುದಿದ್ದ ಚಂದ್ರಾ ಮತ್ತು ಅವಳ ಮಕ್ಕಳನ್ನು ನರ್ಮದೆ ತನ್ನ ಕೇಂದ್ರವಾಗಿಸಿಕೊಳ್ಳುತ್ತಾಳೆ. ಮೇಲ್ನೋಟಕ್ಕೆ ಅವಳಿಗೆ ಈ ಆಯ್ಕೆ ಅನಿವಾರ್ಯವಾಗಿತ್ತು, ಅದು ಏಕೈಕ ಆಯ್ಕೆಯಾಗಿತ್ತು ಎನಿಸಿದರೂ ಈ ಆಯ್ಕೆಯನ್ನು ಕುರಿತ ತನ್ನ ಬದ್ಧತೆಯನ್ನು ಉಳಿಸಿಕೊಳ್ಳುವುದು, ಅದನ್ನು ಅಕ್ಷರಶಃ ತನ್ನ ಜೀವನ್ಮರಣದ ಪ್ರಶ್ನೆಯಾಗಿಸಿಕೊಳ್ಳುವುದು ಸುಲಭದ ಸಂಗತಿಯಲ್ಲ. ಹಾಗೆಂದು ಇದನ್ನು ತ್ಯಾಗಮಯಿ ಎನ್ನುವ ಚೌಕಟ್ಟಿನಲ್ಲಿಡುವುದು ನರ್ಮದೆಯು ನಡೆಸುವ ಹೋರಾಟದ ಮಹತ್ವವನ್ನು ಕಡೆಗಣಿಸಿದಂತೆ.

ಗಂಗವ್ವನೂ ಸೇರಿದಂತೆ ಈ ಮಹಿಳೆಯರು ನಡೆಸುವ ಹೋರಾಟ ಮತ್ತು ಪಡೆಯುವ ಫಲಶ್ರುತಿಗಳನ್ನು ಅಪವಾದಗಳೆಂದೋ, ಅಗತ್ಯಬಿದ್ದಾಗ ಬದುಕಿನ ಜೊತೆ ಅವರು ನಡೆಸುವ ಹೋರಾಟಗಳೆಂದೋ ನೋಡುವ ಗ್ರಹಿಕೆಯೇ ಸಮಸ್ಯಾತ್ಮಕ ಮತ್ತು ಸೀಮಿತ.
ಅಥವಾ ಇವುಗಳನ್ನು ಹೆಣ್ಣು ತನ್ನ ವ್ಯಕ್ತಿತ್ವದ ಅಧಿಕೃತತೆಗಾಗಿ ನಡೆಸುವ ಪ್ರಯತ್ನಗಳೆಂದು ನೋಡುವುದು ಇವತ್ತಿನ ಅಗತ್ಯ. ಹೆಣ್ಣಿನ ಸವಾಲುಗಳ ರಾಜಕೀಯ ಆಯಾಮದ ಚರ್ಚೆ ಅಥವಾ ಅವಳ ವ್ಯಕ್ತಿತ್ವದ ಅಧಿಕೃತತೆಯ ರಾಜಕೀಯ ಪ್ರಶ್ನೆ ಎಂದರೆ ಇದೇ. ಅನೇಕ ಬಾರಿ ಇವುಗಳನ್ನು ವಿಸ್ತಾರಗೊಂಡ ಸಾಮಾಜಿಕ ಪ್ರಶ್ನೆಗಳೆಂದೇ ಚರ್ಚಿಸಲಾಗುತ್ತಿದೆ. ಮತ್ತು ಇದು ಹೆಣ್ಣಿನ ವಿಷಯಕ್ಕೆ ಮಾತ್ರ ಹೀಗಾಗುತ್ತದೆ ಎನ್ನುವುದೇ ನಮ್ಮೆದುರಿಗಿರುವ ಸವಾಲು.

ಚೋಮನ ಪ್ರಯತ್ನ ಮತ್ತು ಚಲನೆಗಳನ್ನು ಅನಾಯಾಸವಾಗಿ ಎಂಬಂತೆ ರಾಜಕೀಯ ನೆಲೆಯಲ್ಲಿಟ್ಟು ನೋಡಲಾಗುತ್ತದೆ ಮತ್ತು ಕೊನೆಯಿಲ್ಲದ ಚರ್ಚೆಗಳಿಗೆ ಎತ್ತಿಕೊಳ್ಳಲಾಗುತ್ತದೆ. ಆದರೆ ಹೆಣ್ಣಿನ ಚಲನೆಗಳು ಮತ್ತು ಪ್ರತಿರೋಧದ ಮಾದರಿಗಳನ್ನು ಸಾಹಿತ್ಯ ವಿಮರ್ಶೆಯಲ್ಲಿ ಸಾಮಾನ್ಯವಾಗಿ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಮಾತ್ರ ಚರ್ಚಿಸಲಾಗುತ್ತದೆ. ಇದೊಂದು ಬಹು ಸಂಕೀರ್ಣವಾದ ಸಂಗತಿ.

ಕನ್ನಡದ ಮುಖ್ಯ ಸ್ತ್ರೀಪಾತ್ರಗಳನ್ನು ಮರುಓದಿಗೆ ಒಳಪಡಿಸಬೇಕಾದ ಅಗತ್ಯವಿರುವುದು ಈ ಕಾರಣಕ್ಕಾಗಿಯೇ. ಸ್ತ್ರೀ ಪಾತ್ರಗಳ ಶಕ್ತಿ ಮತ್ತು ಸಾಧ್ಯತೆಯನ್ನು ತಾತ್ವಿಕವಾಗಿ ಸ್ಥಾಪಿಸುವುದೆಂದರೆ ಮಹಿಳಾ ಸಂಕಥನದ ಪರಂಪರೆಯನ್ನು ಕಟ್ಟಿಕೊಳ್ಳುವ ಪ್ರಯತ್ನವೆಂದೇ ಅರ್ಥ.

ಮತ್ತೆ ನರ್ಮದೆಗೆ ಮರಳುವುದಾದರೆ, ತನಗೆ ಕೊಡಬೇಕಾದ ಪೋಟಗಿಯ ಹಣವನ್ನು ಪಡೆಯುವಾಗ ಪೋಟಗಿ ಹಣ ಎಂದಿದ್ದದ್ದನ್ನು ಪೋಟಗಿಯ ಪೈಕಿ ಎಂದು ತಿದ್ದುವುದರ ಮೂಲಕ, ಈ ಬಗ್ಗೆ ನನ್ನ ತಕರಾರು ಇಲ್ಲ ಎನ್ನುವುದನ್ನು ಹೊಡೆದು ಹಾಕುವ ಮೂಲಕ ಆರಂಭವಾಗುವ ನರ್ಮದೆಯ ಈ ಅಧಿಕೃತತೆಯ ಪ್ರಯತ್ನ ಕೊನೆಯಲ್ಲಿ ನಾರಾಯಣನ ದತ್ತಕವನ್ನು ರದ್ದು ಪಡಿಸುವುದರೊಂದಿಗೆ ಮತ್ತು ಅದಕ್ಕಾಗಿ ನಡೆಯುವ ಜಿದ್ದಾಜಿದ್ದಿಯಲ್ಲಿ ತನ್ನ ಪ್ರಾಣವನ್ನೇ ಕಳೆದುಕೊಳ್ಳುವುದರೊಂದಿಗೆ ಮುಗಿಯುತ್ತದೆ.

ಕೊನೆಯಲ್ಲಿ ಅವಳು ಚಂದ್ರಿಗೆ ಹೇಳುವ ‘ಕಾಯಿದೆ ಮಾಡುವವರಿಗೆ ಕಾಯ್ದೇ ಮೂಲಕನೇ ಉತ್ತರ ಕೊಟ್ಟೇನಿ’ಎನ್ನುವ ಮಾತು ನರ್ಮದೆಯ ಇಡೀ ಜೀವನದ ಘೋಷ ವಾಕ್ಯದಂತಿದೆ. ಕಾನೂನಿನ ಅಪರಿಚಿತ ಜಗತ್ತಿನ ಮೂಲಕವೇ, ಅದನ್ನು ಕುರಿತ ಹೆಣ್ಣಿನ ಅಜ್ಞಾನದ ಮಿತಿಯನ್ನೇ ಬಳಸಿಕೊಂಡು ಹೆಣ್ಣನ್ನು ಕೊನೆಗೂ ತನ್ನ ಹಿಡಿತದಲ್ಲಿಯೇ ಇಟ್ಟುಕೊಳ್ಳುವ ವ್ಯವಸ್ಥೆಯ ಶಕ್ತಿಯನ್ನು ಕಾನೂನಿನ ಜ್ಞಾನದ ಮೂಲಕವೇ ಎದುರಿಸುವ ನರ್ಮದೆಯ ಪ್ರಯತ್ನಗಳನ್ನು ಹೊಸಹೆಣ್ಣಿನ ಹುಟ್ಟೆಂದು ನೋಡಬೇಕೊ? ಹೆಣ್ಣಿನ ಮೂಲಶಕ್ತಿಯ ಅನಾವರಣವೆಂದು ನೋಡಬೇಕೋ? ಲೇಖಕರ ಅಪ್ರಜ್ಞಾಪೂರ್ವಕವಾದ ಲಿಂಗರಾಜಕಾರಣದ ಮಾದರಿಗಳನ್ನು, ಒತ್ತಡಗಳನ್ನು ಮೀರಿ ಕಲಾಕೃತಿಯಲ್ಲಿ ವ್ಯಕ್ತವಾಗುವ ಹೆಣ್ಣಿನ ಅಥವಾ ವಿಶಾಲಾರ್ಥದಲ್ಲಿ ಮಾನವ ಸ್ವಭಾವದ, ಅದರ ಶಕ್ತಿ ಮತ್ತು ದೌರ್ಬಲ್ಯದ ದರ್ಪಣನಿಷ್ಠ ಚಿತ್ರಣವೆನ್ನಬೇಕೊ? ಎಂದರೆ, ನಮ್ಮ ಮೆಚ್ಚುಗೆ ಸಲ್ಲಬೇಕಾದ್ದು ಯಾರಿಗೆ? ಕಲೆಯ ಅದಮ್ಯ ಶಕ್ತಿಗೊ? ಲೇಖಕನಿಗೋ?

ಕಾನೂನು ಇಡೀ ಕಾದಂಬರಿಯಲ್ಲಿ ನಿರ್ಣಾಯಕವಾದ ಪಾತ್ರ ವಹಿಸುತ್ತದೆ. ದತ್ತ ಮಗ ನಾರಾಯಣ ಚಂದ್ರಿಯ ಮಗಳು ಮಂಜರಿಯನ್ನೇ ಮದುವೆಯಾಗಲು ಬಯಸುತ್ತಾನೆ. ಅವಳೂ ನರ್ಮದೆಯ ಗಂಡ ಬಾಳಾಸಾಹೇಬರ ರಕ್ತವೇ ಆದ್ದರಿಂದ ಅವಳನ್ನು ಬೇರೆಯವರಿಗೆ ದತ್ತ ಕೊಟ್ಟು ಅವಳನ್ನು ನಾರಾಯಣನಿಗೆ ಮದುವೆ ಮಾಡುವ ಸಾಧ್ಯತೆಗಳನ್ನು ಹುಡುಕುವ ಪ್ರಯತ್ನಗಳೂ ನಡೆಯುತ್ತವೆ. ಮತ್ತೆ ನರ್ಮದೆ ಕಾನೂನಿನ ಸಹಾಯವನ್ನೇ ಪಡೆಯುತ್ತಾಳೆ.

‘ಹಿಂದೂ ಲಾ’ ಪ್ರಕಾರ ಹೆಣ್ಣುಮಕ್ಕಳನ್ನು ದತ್ತಕ ಕೊಡಲು ಬರುವುದಿಲ್ಲ ಎನ್ನುವ ಅಂಶದ ನೆರವು ಪಡೆದು ಅವಳು ಆ ಇಡೀ ಹುನ್ನಾರವನ್ನು ಗೆಲ್ಲುತ್ತಾಳೆ. ಕಾನೂನೇ ಹೆಣ್ಣಿಗೆ ವರವೂ ಶಾಪವೂ ಆಗುವ ವಿಲಕ್ಷಣ ಸನ್ನಿವೇಶ ಈ ಕಾದಂಬರಿಯಲ್ಲಿದೆ. ಕಾದಂಬರಿಯ ಮೊದಲ ಮಾತುಗಳಲ್ಲಿ ರಂ.ಶಾ ಅವರು ತಾವು ಕಾನೂನನ್ನು ಅಭ್ಯಾಸ ಮಾಡಿದ್ದನ್ನೂ ಅದಕ್ಕೆ ಕೆಲವರು ಸಹಾಯ ಮಾಡಿದ್ದನ್ನೂ ನೆನೆಯುತ್ತಾರೆ. ಹಾಗೆ ನೋಡಿದರೆ, ಕಾನೂನು ಮತ್ತು ಮಹಿಳಾ ಸಂಕಥನದ ನಡುವಿನ ಸಂಬಂಧವೇ ಒಂದು ರೋಚಕ ಅಧ್ಯಯನ. ಈ ಕಾದಂಬರಿಯಲ್ಲಿಯೇ ಆದರೂ ಕಾನೂನು ವ್ಯಕ್ತಿಯ ಅಥವಾ ಸಂದರ್ಭದ ಪರವಾಗಿದ್ದರೂ ಅದನ್ನು ತೀರ್ಪಾಗಿ ಪರಿವರ್ತಿಸಿಕೊಳ್ಳುವ ಕಷ್ಟವನ್ನು, ಅದು ಯಾವ ಘಳಿಗೆಯಲ್ಲಾದರೂ ವಿರುದ್ಧವಾಗಿ ಬಿಡಬಹುದಾದ ವಿರೋಧಬಾಸವನ್ನು ಕಾದಂಬರಿ ಅದರ ಸೂಕ್ಷಾತ್ಮಿಸೂಕ್ಷ್ಮ ವಿವರಗಳಲ್ಲಿ ಬಿಚ್ಚಿಡುತ್ತದೆ.

ಗಂಗವ್ವನ ಬಗ್ಗೆ ಚರ್ಚಿಸುವಾಗ ಆರಂಭಿಸಿದ್ದನ್ನು ಇಲ್ಲಿ ಮುಂದುವರಿಸುವುದಾದರೆ, ಮಗನನ್ನೇ ಕೇಂದ್ರವಾಗಿಸಿಕೊಳ್ಳುವ ಗಂಗವ್ವ ಒಂದು ಕಡೆಯಾದರೆ ಇಲ್ಲದ ಕೇಂದ್ರವನ್ನು ಸೃಷ್ಟಿಸಿಕೊಳ್ಳುವ ನರ್ಮದೆ ಇನ್ನೊಂದು ಕಡೆ. ಆದರೆ ಇಬ್ಬರೂ ಕೊನೆಗೂ ಪ್ರತಿನಿಧಿಸುವುದು ಅಥವಾ ಸಾಕ್ಷಾತ್ಕರಿಸಿಕೊಡುವುದು ತಾಯ್ತನವೆನ್ನುವುದು ಸಿದ್ಧಸ್ಥಿತಿಗಿಂತ ಹೆಚ್ಚಾಗಿ ಕಟ್ಟಿಕೊಳ್ಳಬೇಕಾದ ಮತ್ತು ಕಾಪಾಡಿಕೊಳ್ಳಬೇಕಾದ ಮನೋಬೌದ್ಧಿಕ ವಿನ್ಯಾಸ ಎನ್ನುವುದನ್ನು.

ಈ ಎರಡರಲ್ಲಿ ಯಾವುದು ಹೆಚ್ಚು ಶಕ್ತ ಅಥಾವಾ ಅಧಿಕೃತ ಎನ್ನುವ ಪ್ರಶ್ನೆಯೇ ಅಪ್ರಸ್ತುತವಾಗುವಷ್ಟು ಈ ಪಾತ್ರಗಳು ಸ್ವಯಂ ಪೂರ್ಣವಾಗಿವೆ. ಇದನ್ನು ಇನ್ನೊಂದು ದಿಕ್ಕಿನಿಂದ ನೋಡುವುದಾದರೆ, ಈ ಎರಡೂ ಕಾದಂಬರಿಗಳಿಗಿರುವ ತೆರೆದಅಂಚು ಈ ಎರಡೂ ಪಾತ್ರಗಳನ್ನು ಮಾತ್ರವಲ್ಲ ಒಟ್ಟೂ ಕಾದಂಬರಿಯ ತಾತ್ವಿಕತೆಯನ್ನೇ ಅವುಗಳ ಘೋಷಿತ ಚೌಕಟ್ಟಿನಿಂದ ಹೊರತಂದು ನೋಡುವ ಸಾಧ್ಯತೆಯನ್ನು ಜೀವಂತವಾಗಿರಿಸಿಕೊಂಡಿವೆ. ಕನ್ನಡದ ಮಹತ್ವದ ಎಂದು ಪ್ರಖ್ಯಾತವಾಗಿರುವ ಎಷ್ಟೋ ಕೃತಿಗಳಿಗೆ ಈ ಶಕ್ತಿಯಿಲ್ಲ ಎನ್ನುವುದು ಈ ಕಾದಂಬರಿಗಳ ಮಹತ್ವವನ್ನು ಹೇಳುತ್ತದೆ.

‘ತಾಯಿಸಾಹೇಬ’ ಕೃತಿಯ ಶೀರ್ಷಿಕೆಯೂ ಕುತೂಹಲಕರವಾಗಿದೆ. ಜೈವಿಕವಾಗಿ ತಾಯಿಯೇ ಆಗದ ನರ್ಮದೆ ತಾಯ್ತನದ ಎಲ್ಲ ಜವಾಬ್ದಾರಿ ಹಾಗೂ ವಾತ್ಸಲ್ಯವನ್ನು ಆರೋಹಣ ಎನಿಸುವ ಪ್ರಕ್ರಿಯೆಯೆಲ್ಲಿ ಪಡೆಯುತ್ತಾ ಹೋಗುತ್ತಾಳೆ. ಆ ಮೂಲಕ ವ್ಯಕ್ತಿತ್ವದ ಗಟ್ಟಿತನವನ್ನು ಪಡೆಯುತ್ತಲೇ ಅವಳ ಅಂತರಂಗ ವಿಕಾಸವಾಗುವ ಪರಿಯನ್ನೂ ನಾವು ಗುರುತಿಸಬಹುದು. ನರ್ಮದೆಗೆ ಅವಳ ಬಗೆಗಿನ ವಿಶ್ವಾಸವು ಹರಳುಗಟ್ಟುತ್ತಾ ಹೋಗುವ, ಅವಳು ಚೈತನ್ಯದಾಯಕಳಾಗುವ ರೀತಿಯಿಂದಾಗಿಯೇ ಅದು ವ್ಯಕ್ತಿತ್ವದ ಆರೋಹಣ ಎನ್ನುವ ಅನುಭವ ಓದುಗರಿಗೆ ಆಗುತ್ತದೆ. ಸಾಹೇಬ ಎನ್ನುವ ಪರಿಕಲ್ಪನೆಯೇ ಫ್ಯೂಡಲ್ ಎನಿಸಿದರೂ ನರ್ಮದೆಯ ವ್ಯಕ್ತಿತ್ವದ ಬೆಳವಣಿಗೆಯ ಹಿನ್ನೆಲೆಯಲ್ಲಿ ಇದನ್ನು ಒಪ್ಪುಬಹುದೇನೋ.

ನ್ಯಾಯಾಲಯದಲ್ಲಿ ತನ್ನ ಗಂಡನ ಮೂರನೆಯ ಹೆಂಡತಿ ಚಂದ್ರಿ ಎನ್ನುವುದನ್ನು ಸಾಬೀತುಪಡಿಸಬೇಕಾದ ಹೊತ್ತಿನಲ್ಲಿ ಸಾಕ್ಷಿಕಟ್ಟೆಯಲ್ಲಿ ನಿಂತು ನರ್ಮದೆ ಅವರಿಬ್ಬರ ನಡುವೆ ಗಂಡ ಹೆಂಡತಿಯ ಸಂಬಂಧವೇ ಇತ್ತು ಎನ್ನುವುದಕ್ಕೆ, ಅವಳ ಜೊತೆ ಸಂಬಂಧ ಬೆಳೆದಾಗಿನಿಂದ ಗಂಡ ಒಂದು ರಾತ್ರಿಯೂ ತನ್ನ ಮನೆಯಲ್ಲಿ ಕಳೆದಿರಲಿಲ್ಲ ಎನ್ನುವುದನ್ನು ಹೇಳುತ್ತಾಳೆ. ಈ ಮಾತನ್ನು ನ್ಯಾಯಾಲಯದಲ್ಲಿ ಎಲ್ಲರ ಮುಂದೆ ಹೇಳುವಾಗ ಅವಳಿಗೆ ದುಃಖ, ಹಿಂಸೆ ಆದರೂ ಚಂದ್ರಿಯ ಮಕ್ಕಳಿಗೆ ಆಸ್ತಿ ಒದಗಿಸಿಕೊಡಬೇಕಾದ ಅನಿವಾರ್ಯತೆಯಲ್ಲಿ ನರ್ಮದೆ ಇದನ್ನೆಲ್ಲ ಎದುರಿಸುತ್ತಾಳೆ.

ಒಬ್ಬ ತಾಯಿ ತನ್ನ ಮಕ್ಕಳ ಸಲುವಾಗಿ ಇಡೀ ಜಗತ್ತನ್ನು ಎದುರು ಹಾಕಿಕೊಳ್ಳುವ ಧೀರತೆಯಲ್ಲಿ ನರ್ಮದೆ ಇದನ್ನೆಲ್ಲ ನಿಭಾಯಿಸುತ್ತಾಳೆ. ಯಾವುದನ್ನು ನಾನು ಅಹಂಕಾರವನ್ನು ಕಳೆದುಕೊಳ್ಳುವ ಪ್ರಕ್ರಿಯೆಯೆಂದು ಗುರುತಿಸುತ್ತಿದ್ದೇನೋ ಅದನ್ನು ನರ್ಮದೆಯಲ್ಲೂ ಗುರುತಿಸಬಹುದು. ಒಂದು ಘಟ್ಟದಲ್ಲಿ ನರ್ಮದೆ ಅವರಿಬ್ಬರ ಮದುವೆಯನ್ನು ನಾನು ನೋಡಿದ್ದೆ ಎಂದಿದ್ದರೆ ಕೇಸಿಗೆ ಬಲ ಬರುತ್ತಿತ್ತೇನೋ ಎಂದೂ ಯೋಚಿಸುತ್ತಾಳೆ. ಆದರೆ ಈ ಯಾವ ಘಟ್ಟದಲ್ಲೂ ಕಾದಂಬರಿಕಾರರು ನರ್ಮದೆಯನ್ನು ವೈಭವೀಕರಿಸುವುದಿಲ್ಲ, ಬದಲಿಗೆ ಇಂಥ ಆಲೋಚನೆ ಮತ್ತು ತೀರ್ಮಾನಗಳನ್ನು ತೆಗೆದುಕೊಳ್ಳುವ ಘಳಿಗೆಯ ನರ್ಮದೆಯ ತಲ್ಲಣಗಳ ಕಡೆಗೇ ಅವರ ಗಮನವಿದೆಯೆಂದೇ ಆ ಪಾತ್ರ ಅಂಥ ಬೆಳವಣಿಗೆಯನ್ನು ಕಾಣುತ್ತದೆ.

ಸ್ವಮರುಕದಲ್ಲಿ ಮುಳುಗೇಳಬಹುದಾಗಿದ್ದ ನರ್ಮದೆ ಅಪಾರ ಆತ್ಮಘನತೆಯಲ್ಲಿ, ಕೊಟ್ಟು ಪಡೆಯುವ ಪ್ರೀತಿ ಮತ್ತು ವಾತ್ಸಲ್ಯದಲ್ಲಿ ಬದುಕು ಮತ್ತು ಮನುಷ್ಯರಲ್ಲಿನ ನಂಬಿಕೆಯನ್ನು ಉಳಿಸುತ್ತಾಳೆ ಮತ್ತು ಬೆಳೆಸುತ್ತಾಳೆ.
saptahika@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.