ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕಾಸುರ ಹುಳುಗಳೂ ಹಾರುವ ಹೂಗಳೂ...

Last Updated 3 ನವೆಂಬರ್ 2012, 19:30 IST
ಅಕ್ಷರ ಗಾತ್ರ

ಬಣ್ಣದ ಬಿನ್ನಾಣದ ಪಾತರಗಿತ್ತಿಗಳು ಹಾರಾಡುವ ಹೂಗಳೆಂದೇ ಹೆಸರುವಾಸಿ. ಅತ್ಯಂತ ಲವಲವಿಕೆಯಿಂದ ಕೂಡಿರುವ, ಹೂವಿಂದ ಹೂವಿಗೆ ಹಾರಾಡುವ ಈ `ಹಾರಾಡುವ ಹೂಗಳು~ ತಮ್ಮ ಚಿಟ್ಟೆ ರೂಪು ಪಡೆಯುವ ಕೆಲ ದಿನಗಳ ಹಿಂದೆ ಸೋಮಾರಿ ಹೊಟ್ಟೆಬಾಕ ಪ್ರಾಣಿ ಆಗಿರುತ್ತದೆಂದರೆ ನಂಬುವುದು ಕಷ್ಟವಲ್ಲವೇ? ಆದರದು ನಿಜ. ಹಾರುವ ಚಿಟ್ಟೆಯ ಹಿಂದೊಂದು ತೆವಳುವ ಹುಳುವಿದೆ!

ಹುಳುವೊಂದು ಚಿಟ್ಟೆಯಾಗುವ ಮೊದಲು ಹಲವಾರು ಘಟ್ಟಗಳನ್ನು ದಾಟುತ್ತದೆ. ಅಂಥದೊಂದು ಅವಸ್ಥೆ, ಸದಾ ತಿನ್ನುವ ಹುಳು!

ಚಿಟ್ಟೆ, ಪತಂಗಗಳ ಜೀವನಾವಸ್ಥೆಯಲ್ಲಿ ನಾಲ್ಕು ಹಂತಗಳಿವೆ. ತಾಯಿಚಿಟ್ಟೆಯು ಒಮ್ಮೆಗೆ ಸಾವಿರಾರು ಮೊಟ್ಟೆಗಳನ್ನು ಇಡುತ್ತವೆ. ಒಂದೊಂದು ಚಿಟ್ಟೆಯೂ ಆಹಾರಕ್ಕಾಗಿ ಒಂದೊಂದು ಸಸ್ಯವನ್ನು ಅವಲಂಬಿಸುವುದರಿಂದ, ಅವು ಮೊಟ್ಟೆಗಳನ್ನು ತಮಗೆ ಆಹಾರವಾಗುವ ಸಸ್ಯಗಳಲ್ಲಿಯೇ ಇಡುತ್ತವೆ.
 
ಹುಟ್ಟಿದ ಮರಿಗಳಿಗೆ ಆ ಗಿಡದ ಚಿಗುರೆಲೆಗಳೇ ಆಹಾರ. ಮೊಟ್ಟೆಯೊಡೆದು ಹೊರಬರುವ ಹುಳುಗಳಿಗೆ ಗ್ರಾಮೀಣಪ್ರದೇಶದಲ್ಲಿ ಕಂಬಳಿಹುಳುಗಳೆಂದು ಹೆಸರು. ಇವುಗಳಿಗೆ ಬಹಳ ಹಸಿವು. ಹೊರಬರುತ್ತಲೇ ಮೊಟ್ಟೆಯ ಚಿಪ್ಪಿನ ಹೆಚ್ಚಿನ ಭಾಗವನ್ನು ತಿಂದುಬಿಡುತ್ತವೆ.

ಇವುಗಳ ಬಾಯಿರಚನೆ ಕಚ್ಚಿ ತಿನ್ನಲು ಅನುಕೂಲಕರವಾಗಿರುತ್ತದೆ. ದಿನವಿಡೀ ತಿನ್ನುತ್ತಿರುತ್ತವೆ. ಇವುಗಳ ತಿನ್ನುವ ವೇಗವೂ ಅಧಿಕ. ಕೇವಲ ತಿನ್ನುವುದು ಮತ್ತು ಹಿಕ್ಕೆ ಹಾಕುವುದಷ್ಟೇ ತಮ್ಮ ಕೆಲಸ ಎನ್ನುವಂತಿರುತ್ತದೆ ಅವುಗಳ ಬಾಯಿಚಪಲ. ಹುಳುವೊಂದು ಒಂದು ದಿನದಲ್ಲಿ ತನ್ನ ದೇಹದ ಭಾರದಷ್ಟೇ ಆಹಾರವನ್ನು ತಿನ್ನಬಲ್ಲದು.

ಎಲೆಕೋಸನ್ನು ಆಹಾರ ಆಗಿಸಿಕೊಂಡಿರುವ ಒಂದು ಪತಂಗ ಎಲೆಕೋಸಿನ ಎಲೆಗಳ ಮಧ್ಯೆ ಮೊಟ್ಟೆಗಳನ್ನಿಡುತ್ತದೆ. ಮೊಟ್ಟೆಯಿಂದ ಕಂಬಳಿ ಹುಳುಗಳು ಹೊರಬಂದ ಕೆಲವೇ ದಿನಗಳಲ್ಲಿ ಎಲೆ ಕೋಸಿನ ದಂಟು ಮಾತ್ರ ಉಳಿಯುವಂತೆ ಎಲ್ಲವನ್ನೂ ಕಬಳಿಸಿಬಿಡುತ್ತವೆ. ಹತ್ತಿ, ಉಣ್ಣೆ ಮತ್ತು ರೇಷ್ಮೆ ಬಟ್ಟೆಗಳನ್ನು ಬಹಳ ದಿವಸ ಉಪಯೋಗಿಸದೆ ಇಟ್ಟಿದ್ದರೆ ಅವುಗಳಲ್ಲಿ ತೂತುಗಳು ಕಾಣಿಸುತ್ತವೆ.
 
ಇದು ಕೂಡ ಒಂದು ಜಾತಿಯ ಪತಂಗದ ಕೆಲಸ. ಪತಂಗವು ತನ್ನ ಮೊಟ್ಟೆಗಳನ್ನು ಬೆಚ್ಚಗಿನ ಬಟ್ಟೆಗಳ ನಡುವೆ ಇಡುವುದರಿಂದ ಹೀಗಾಗುತ್ತದೆ. ಹಲವು ಚಿಟ್ಟೆ, ಪತಂಗಗಳು ಹಣ್ಣು, ತರಕಾರಿ ಮುಂತಾದವುಗಳನ್ನು ತಿಂದು ರೈತರಿಗೆ ಮಾರಕವಾಗಿಯೂ ಪರಿಣಮಿಸುತ್ತವೆ.

ತಿನ್ನುತ್ತಾ ಕೊಬ್ಬುವ ಕಂಬಳಿಹುಳುಗಳಲ್ಲಿ ಕೆಲವು ಹಾಗೆಯೇ ಬೆಳವಣಿಗೆಯಾದರೆ, ಕೆಲವು ಮಾತ್ರ ಪೊರೆಯನ್ನು ಕಳಚುತ್ತಾ ದೇಹವನ್ನು ಬೆಳೆಸಿಕೊಳ್ಳುತ್ತವೆ. ಪೂರ್ತಿ ಬೆಳೆದ ಹುಳು ಒಂದು ವಿಶಿಷ್ಟ ದ್ರವವನ್ನು ಸ್ರವಿಸಿ ರೇಷ್ಮೆದಾರದ ಒಂದು ಮೆತ್ತೆಯನ್ನು ತಯಾರಿಸಿ ಅದನ್ನು ರೆಂಬೆ ಅಥವಾ ಎಲೆಗಳ ಕೆಳಗೆ ಆಧಾರಕ್ಕೆ ಅಂಟಿಸುತ್ತದೆ.

ತಮ್ಮ ದೇಹದ ಒಂದು ತುದಿಯಲ್ಲಿರುವ ಮುಳ್ಳನ್ನು ಮೆತ್ತೆಗೆ ಸಿಕ್ಕಿಸಿ ತಲೆ ಕೆಳಗಾಗಿ ಜೋತಾಡುತ್ತದೆ. ನಂತರ ಚರ್ಮವನ್ನು ಕಳಚಿ ತನ್ನ ಸುತ್ತ ಕೋಶವನ್ನು ನಿರ್ಮಿಸಿಕೊಳ್ಳುತ್ತದೆ. ಒಂದೊಂದು ಹುಳುವೂ ಒಂದೊಂದು ರೀತಿಯಲ್ಲಿ ಕೋಶಗಳನ್ನು ಹೊಂದುತ್ತದೆ.

ಕೋಶದೊಳಗೆ ರೂಪ ಪರಿವರ್ತನೆ ಹೊಂದುವ ಹುಳು ಹೊರಬರುವಾಗ ಪೂರ್ಣಪ್ರಮಾಣದ ಚಿಟ್ಟೆಯಾಗಿರುತ್ತದೆ. ಈ ಪರಿವರ್ತನೆಗೆ ಕೆಲವು ಹುಳುಗಳು ಕೆಲದಿನಗಳನ್ನಷ್ಟೇ ತೆಗೆದುಕೊಂಡರೆ, ಕೆಲವಕ್ಕೆ ತಿಂಗಳುಗಟ್ಟಲೆ ಕಾಲಾವಕಾಶ ಬೇಕು. ಮೊಟ್ಟೆ, ಮರಿಹುಳು, ಪ್ರೌಢಹುಳು, ಕೋಶ ಹಾಗೂ ಹೊರಬರುವ ಚಿಟ್ಟೆಗೂ ರೂಪಗಳಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲದಂತೆ ವಿಭಿನ್ನವಾಗಿರುತ್ತದೆ.

ಸೋಜಿಗವೆಂದರೆ, ಕೆಲ ತಿಂಗಳಷ್ಟೇ ಬದುಕನ್ನು ಹೊಂದಿರುವ ಈ ಚಿಟ್ಟೆ ಮತ್ತು ಪತಂಗಗಳು ತಮ್ಮ ಜೀವಿತಾವಧಿಯಲ್ಲಿ ವಿಭಿನ್ನ ಹಾಗೂ ವಿಚಿತ್ರ ರೂಪಗಳನ್ನು ಧರಿಸುತ್ತಾ ತಮ್ಮ ಸಂತತಿಯ ಮುಂದುವರಿಕೆಗೆ ಕಾರಣವಾಗುತ್ತವೆ.

ಚಿಟ್ಟೆ ಅಥವಾ ಪತಂಗಗಳಿಗೆ `ಲೆಪಿಡಾಪ್ಟಿರ~ (ಹುರುಪೆ ರೆಕ್ಕೆಗಳುಳ್ಳವು) ಎನ್ನುವ ವೈಜ್ಞಾನಿಕ ಹೆಸರಿದೆ. ಕೀಟ ವರ್ಗದಲ್ಲಿ ಅತ್ಯಂತ ಬೆಡಗಿನ ಜೀವಿಗಳಿವು. ಸುಮಾರು 1.5 ಲಕ್ಷ ಪ್ರಬೇಧಗಳ ಚಿಟ್ಟೆ, ಪತಂಗಗಳಿವೆ. ಜಗತ್ತಿನೆಲ್ಲೆಡೆ ಇವು ಪಸರಿಸಿವೆ. ಆದರೆ ಉಷ್ಣವಲಯದಲ್ಲಿ ಕಂಡುಬರುವ ಚಿಟ್ಟೆ, ಪತಂಗಗಳ ವರ್ಣವೈವಿಧ್ಯ, ಗಾತ್ರ, ರೂಪಗಳು ಅನನ್ಯ.

ನಮ್ಮ ದೇಶದಲ್ಲಿ ಸುಮಾರು 1,400 ವಿಧದ ಚಿಟ್ಟೆ ಮತ್ತು ಪತಂಗಗಳಿವೆ. ದಕ್ಷಿಣ ಭಾರತದಲ್ಲಿ ಕಂಡುಬರುವ 300ಕ್ಕೂ ಹೆಚ್ಚು ವಿಧಗಳಲ್ಲಿ ಕೆಲವಂತೂ ಅತ್ಯಂತ ಅಂದದವು. ಪಶ್ಚಿಮಘಟ್ಟಗಳಂತೂ ಚಿಟ್ಟೆಗಳ ಸ್ವರ್ಗವೆನಿಸಿದೆ.

ಚಿಟ್ಟೆ ಮತ್ತು ಪತಂಗಗಳು ಒಂದೇ ಜಾತಿಯಾದರೂ, ಇವುಗಳಲ್ಲಿ ಕೊಂಚ ವ್ಯತ್ಯಾಸಗಳಿವೆ. ಚಿಟ್ಟೆಗಳು ಪತಂಗಗಳಿಗಿಂತ ಹೆಚ್ಚು ಮೆರುಗಿನ ಬಣ್ಣ ಹೊಂದಿರುತ್ತವೆ. ಆದರೆ ಚಿಟ್ಟೆಗಳಷ್ಟೇ ಥಳಥಳಿಸುವ ಪತಂಗಗಳೂ ಇವೆ. ಚಿಟ್ಟೆಗಳ ಚಟುವಟಿಕೆ ಹಗಲಲ್ಲಿ ಹೆಚ್ಚು. ಪತಂಗಗಳು ನಿಶಾಚರಿಗಳು.
 
ಪತಂಗದ ದೇಹ ಹೆಚ್ಚು ದಪ್ಪ. ಹೆಚ್ಚು ರೋಮಗಳಿಂದ ಕೂಡಿರುವ ಇವುಗಳ ತಲೆಯಲ್ಲಿರುವ ದಪ್ಪಗಿನ ಸ್ಪರ್ಶಾಂಗದ ತುದಿ ಮೊನಚಾಗಿರುತ್ತದೆ. ಚಿಟ್ಟೆಯ ಕಿರಿದಾದ ಸ್ಪರ್ಶಾಂಗದ ತುದಿ ಬಾತುಕೊಂಡಿರುತ್ತದೆ. ಚಿಟ್ಟೆ ವಿಶ್ರಮಿಸುವಾಗ ರೆಕ್ಕೆಗಳನ್ನು ಬೆನ್ನಿನ ಮೇಲೆ ನೆಟ್ಟಗೆ ಜೋಡಿಸಿ ಹಿಡಿದರೆ, ಪತಂಗ ತನ್ನ ಬೆನ್ನಿನ ಮೇಲೆ ಏರೋಪ್ಲೇನಿನಂತೆ ರೆಕ್ಕೆಗಳನ್ನು ಬಿಡಿಸಿ ಇರಿಸುತ್ತವೆ.

ಚಿಟ್ಟೆ, ಪತಂಗಗಳ ಕಂಬಳಿಹುಳುಗಳು ಹೇಗೆ ವಿವಿಧ ಸಸ್ಯಗಳನ್ನು ತಿಂದು ತೇಗುತ್ತವೋ, ಅದೇ ರೀತಿ ಇವನ್ನು ತಿನ್ನಲೆಂದೇ ಹುಟ್ಟಿರುವ ಹಲವು ಜೀವಿಗಳಿವೆ. ಕಣಜಗಳು ತಮ್ಮ ಮೊಟ್ಟೆಗಳನ್ನು ಇವುಗಳ ಮೊಟ್ಟೆಗಳ ಬಳಿಯೇ ಇರಿಸುವುದುಂಟು.

ಮೊಟ್ಟೆಯೊಡೆದು ಹೊರಬರುವ ಕಣಜದ ಮರಿಗಳು ತನ್ನ ಸುತ್ತಲಿನ ಚಿಟ್ಟೆ, ಪತಂಗಗಳ ಮೊಟ್ಟೆಗಳನ್ನು ತಿನ್ನುತ್ತವೆ. ಚಿಟ್ಟೆ ಅಥವಾ ಪತಂಗಗಳ ಕಂಬಳಿಹುಳುಗಳು ಹಲವು ಹಕ್ಕಿ ಹಾಗೂ ಬಾವಲಿಗೆ ಆಹಾರ. ಕೃಷಿಕರೂ ರಾಸಾಯನಿಕಗಳನ್ನು ಸಿಂಪಡಿಸಿ ನಾಶಪಡಿಸುತ್ತಾರೆ.
 
ಈ ಅಪಾಯಗಳನ್ನು ಎದುರಿಸುತ್ತಾ ಅವು ತಮ್ಮ ಸಂತತಿಯನ್ನು ಕಾಪಾಡಿಕೊಳ್ಳುವ ಸಾಹಸವನ್ನು ಮಾಡಬೇಕು. ತಮ್ಮ ಆತ್ಮರಕ್ಷಣೆಗಾಗಿ ಕಂಬಳಿಹುಳುಗಳಲ್ಲಿ ಕೆಲವು ಭಯ ಹುಟ್ಟಿಸುವ ರೂಪಗಳನ್ನು ಪಡೆದಿದ್ದರೆ, ಕೆಲವು ವಿಷಭರಿತ ರೋಮಗಳನ್ನು ಹೊಂದಿದ್ದು ಮುಟ್ಟಿದರೆ ತುರಿಕೆಯನ್ನುಂಟು ಮಾಡುತ್ತದೆ.

ಕೆಲ ಚಿಟ್ಟೆ ಮತ್ತು ಪತಂಗಗಳ ಹುಳುಗಳು ಎಲೆಯಂತೆಯೇ ಅಥವಾ ಚಿಗುರಿನಂತೆಯೇ ತೋರುವುದರಿಂದ ನೈಸರ್ಗಿಕ ಪರಿಸರದಲ್ಲಿ ಅವನ್ನು ಗುರುತಿಸುವುದು ಕಷ್ಟ. ಕೆಲವು ಹುಳುಗಳು ಕೆಟ್ಟ ವಾಸನೆಯ ದ್ರವವನ್ನು ಸ್ರವಿಸಿ ವೈರಿಯಿಂದ ತಪ್ಪಿಸಿಕೊಳ್ಳುತ್ತವೆ.

ಈ ಕಂಬಳಿಹುಳುಗಳು ಹಕ್ಕಿ, ಬಾವಲಿಗಳಿಗೆ ಆಹಾರವಾದಂತೆ ಮನುಷ್ಯರಿಗೂ ಆಹಾರವಾಗುತ್ತವೆ! ಅಮೆರಿಕದ ರೆಡ್‌ಇಂಡಿಯನ್ನರು ಕೆಲ ಕಂಬಳಿಹುಳುಗಳಿಂದ ವಿಶೇಷ ಖಾದ್ಯವನ್ನು ತಯಾರಿಸುತ್ತಾರೆ. ರೇಷ್ಮೆ ಕೈಗಾರಿಕೆಗೆ ಆಧಾರವಾದ ರೇಷ್ಮೆ ಹುಳುಗಳೂ ಒಂದು ಜಾತಿಯ ಪತಂಗದ ಕಂಬಳಿಹುಳುಗಳೇ.

ಕಿರಿದಾದರೂ ವರ್ಣರಂಜಿತವಾದ ಕಂಬಳಿಹುಳುಗಳ ಜೀವನಚಕ್ರವನ್ನು ನೋಡಿದರೆ ಮನುಷ್ಯರಾದ ನಮ್ಮ ಬದುಕೇ ನಿಸ್ಸಾರ ಅನಿಸೀತು!

ಚಿತ್ರಗಳು ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT