ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿವಾಳ ದಂಪತಿ ಮತ್ತು ರಶ್ಮಿ

ಚಂದ ಕಥೆ
Last Updated 6 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಶಾಲೆಯಿಂದ ಮನೆಗೆ ಬಂದ ರಶ್ಮಿ ಹಿತ್ತಿಲಿಗೆ ಹೋಗಿ ಕೈಕಾಲು ಮುಖ ತೊಳೆದುಕೊಂಡಳು. ಕೈತೋಟದತ್ತ ಗಮನ ಹರಿಸಿದ ಅವಳಿಗೆ ಅನಿರೀಕ್ಷಿತ ಕಾದಿತ್ತು. ಹೌದು, ಆ ಗೂಡಿನೊಳಗೆ ಹಕ್ಕಿಯೊಂದು ಹೊಕ್ಕು ಹೊರಬಂದಿತ್ತು. ಇದನ್ನು ನೋಡಿದ ಅವಳಿಗೆ ಆದ ಅಚ್ಚರಿ, ಖುಷಿ ಅಷ್ಟಿಷ್ಟಲ್ಲ. ತಕ್ಷಣ ಗುಡಗುಡನೆ ಮನೆಯೊಳಗೆ ಓಡಿ, ಅಪ್ಪನಿಗೆ ರಿಂಗ್ ಮಾಡಿದಳು. ಆಕಡೆಯಿಂದ ಅಪ್ಪ ಹಲೋ ಅನ್ನುತ್ತಿದ್ದಂತೆ ರಾಗವಾಗಿ ಹೇಳಿದಳು:  
ಅಪ್ಪಾ ಅಪ್ಪಾ ಭಯ ಬಿಟ್ಟು
ಹೊಕ್ಕಿದೆ ನೋಡು ನಿನ ಫ್ರೆಂಡು
ನೀ ಕಟ್ಟಿದ ಗೂಡಲಿ ಇಷ್ಟದಿ ಕುಳಿತು 
ಮಾಡಿದೆ ಏನು ಮರಿಗಳ ಪ್ಲ್ಯಾನು
‘ಓಹೋ! ಹೌದೇ! ನಾನೂ ಬಂದೆ ಇರು’ ಎಂದರು ಅಪ್ಪ.

ಅರ್ಧಗಂಟೆಯಲ್ಲಿ ಅಪ್ಪನ ಸ್ಕೂಟರು ‘ಕುಟರ್‌ರ್ರ್’ ಅನ್ನುತ್ತ ಮನೆಯ ಅಂಗಳದಲ್ಲಿ ನಿಂತಿತ್ತು. ‘ಅಯ್ಯೋ ಮುದ್ದು ಮಗಳೇ! ನಿಂಗೂ ನನ್ನ ಹಾಗೇ ಹಕ್ಕಿಯ ಹುಚ್ಚಲ್ಲೇ’ ಎಂದು ಅಪ್ಪ ರಶ್ಮಿಯನ್ನು ಮುದ್ದಿಸಿದರು. ‘ಬಾ, ಹಕ್ಕಿ ತೋರಿಸು’ ಎಂದು ರಶ್ಮಿಯನ್ನು ಹಿಂಬಾಲಿಸಿದರು. ಹೌದು, ಪೊದೆಯ ಮೇಲೊಂದು ಕಪ್ಪು-ಬಿಳುಪು ಬಣ್ಣದ ಹಕ್ಕಿ ಕುಳಿತಿತ್ತು. ಗುಬ್ಬಚ್ಚಿಗಿಂತಲೂ ಸ್ವಲ್ಪ ದೊಡ್ಡದಾದ ಆ ಹಕ್ಕಿಯ ತಲೆ, ಬೆನ್ನು, ರೆಕ್ಕೆ ಕಡುನೀಲಿಯ ಕಪ್ಪುಬಣ್ಣ ಹೊಂದಿತ್ತು. ಹೊಟ್ಟೆ ಹಾಲು ಬಿಳುಪಾಗಿದ್ದರೆ, ರೆಕ್ಕೆಗಳ ಮೇಲೆ ಎದ್ದು ಕಾಣುವ ಬಿಳಿಪಟ್ಟಿಯಿತ್ತು.

‘ಇದು ಗಂಡು ಮಡಿವಾಳ ಹಕ್ಕಿ.... ಹೆಣ್ಣು ಇಲ್ಲೇ ಇರಬೇಕು’ ಎಂದರು ಅಪ್ಪ.
ಅಷ್ಟರಲ್ಲಿ  ಗೂಡೊಳಗಿಂದ ಮತ್ತೊಂದು ಹಕ್ಕಿ ಹೊರಬಂತು. ‘ನೋಡು ರಶ್ಮಿ, ಗಂಡು ಹಕ್ಕಿಗೆ ಕಪ್ಪು ಬಣ್ಣ ಇರುವಲ್ಲಿ ಹೆಣ್ಣು ಹಕ್ಕಿಗೆ ಕಪ್ಪು ಬಣ್ಣದ ಬದಲು ಕಂದು ಬಣ್ಣದ ಚುಕ್ಕೆಗಳಿವೆ’ ಎಂದರು ಅಪ್ಪ.
‘ಹೌದು ಹೌದು’ ಎಂದು ರಶ್ಮಿ ತಲೆದೂಗುತ್ತ ಹಾಡೊಂದನ್ನು ಕಟ್ಟಿದಳು:
ಅಪ್ಪನ ಗೂಡಲಿ ಮಡಿವಾಳ
ತವರಿಗೆ ಬಂದಿದೆ ಮಗಳು
ಹೆರಿಗೆಯ ಮುಗಿಸಿ ಹೋಗುವವರೆಗು
ಕಾಯಲು ಇರುವೆನು ನಾನು!
* * *

ಕಳೆದ ರವಿವಾರ ಅಪ್ಪ ರಟ್ಟಿನ ಡ್ರಮ್ ಒಂದನ್ನು ತಯಾರಿಸಿ, ಮಲ್ಲಿಗೆ ಪೊದೆಯ ಒಳಗೆ ಇಡತೊಡಗಿದ್ದ. ಆಗ ಅಲ್ಲಿಗೆ ಬಂದ ರಶ್ಮಿ ‘ಅಪ್ಪಾ, ಏನು ಮಾಡುತ್ತಿದ್ದಿ?’ ಎಂದು ಕೇಳಿದ್ದಳು.    
   
‘ಏನಿಲ್ಲಮ್ಮ, ಯಾವುದಾದರೂ ಹಕ್ಕಿ ಮೊಟ್ಟೆಯಿಡಲು ಸಹಾಯವಾಗಲಿ ಎಂದು ರಟ್ಟಿನ ಡಬ್ಬಿ ಇಡುತ್ತಿದ್ದೇನೆ’ ಎಂದಿದ್ದರು ಅಪ್ಪ. ಅಷ್ಟರಲ್ಲಿ ಅಮ್ಮನೂ ಅಲ್ಲಿಗೆ ಬಂದಿದ್ದಳು. ‘ಹಕ್ಕಿಗಳಿಗೆ ಗೂಡು ಕಟ್ಟಿಕೊಳ್ಳಲು ಬರುತ್ತದೆ... ಮನುಷ್ಯರು ಕಟ್ಟಿಕೊಡಬೇಕಾಗಿಲ್ಲ’ ಎಂದು ಮೂಗು ಮುರಿದಿದ್ದಳು. ‘ನೋಡೋಣ... ಅದೃಷ್ಟವಿದ್ದರೆ ಹಕ್ಕಿಯ ಮನೆಯಾದೀತು’ ಎಂದು ಅಪ್ಪ ಹೇಳಿದ್ದರು. ಅವನಿಗೆ ಹಕ್ಕಿಗಳ ಫೋಟೋ ತೆಗೆಯುವ ಹವ್ಯಾಸ.

ಪುಸ್ತಕ ಹಿಡಿದು ಅಭ್ಯಾಸ ಮಾಡುತ್ತಿದ್ದ ರಶ್ಮಿಗೆ ಇದೆಲ್ಲಾ ನೆನಪಾಗಿ, ‘ಅಪ್ಪಾ, ಅಂತೂ ಅಮ್ಮನ ಮಾತು ಸುಳ್ಳಾಯ್ತು’ ಎಂದಳು.
‘ಯಾವ ಮಾತು?’
‘ಅದೇ, ಹಕ್ಕಿಗಳಿಗೆ ಗೂಡು ಕಟ್ಟಿಕೊಳ್ಳಲು ಬರುತ್ತದೆ. ನಾವು ಕಟ್ಟಿಕೊಡಬೇಕಾಗಿಲ್ಲ’ ಎಂದಿದ್ದಳು ಅಮ್ಮ.
‘ಇಲ್ಲಮ್ಮ, ಅವಳು ಹೇಳಿದ್ದು ಸರಿ. ಹಕ್ಕಿಗಳು ತಮ್ಮ ಗೂಡನ್ನು ತಾವೇ ಕಟ್ಟಿಕೊಳ್ಳುತ್ತವೆ. ಗೂಡು ಕಟ್ಟಿಕೊಳ್ಳಲು ರೂಢಿಯಿಲ್ಲದ ಹಕ್ಕಿಗಳು ಮರದ ಪೊಟರೆ, ಮಣ್ಣಿನ ಬಿಲ ಅಥವಾ ಬೇರೆ ಹಕ್ಕಿಗಳ ಗೂಡುಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ನಾವು ಮನುಷ್ಯರು ಕಟ್ಟಿಕೊಡಬೇಕೆಂದಿಲ್ಲ. ಆದರೆ ಕೆಡವದಿದ್ದರೆ ಸಾಕು’.
‘ಅಂದ್ರೆ, ಈ ಮಡಿವಾಳಕ್ಕೆ ಗೂಡು ಕಟ್ಟಲು ಬರುವುದಿಲ್ಲವೇ?’

‘ಬರುತ್ತದಮ್ಮ.... ಹಿಂದೆಲ್ಲಾ ನಮ್ಮ ಈ ಭಾಗದಲ್ಲಿ ದೊಡ್ಡ ಕಾಡಿತ್ತು. ಆಗೆಲ್ಲಾ ಈ ಪಕ್ಷಿ ದೊಡ್ಡ ದೊಡ್ಡ ಮರದ ಪೊಟರೆಗಳಲ್ಲಿ ಗೂಡು ಕಟ್ಟುತ್ತಿತ್ತು. ಈಗ ಮರಗಳೆಲ್ಲಾ ನಾಶವಾಗಿರುವುದರಿಂದ ಮನೆಯ ಹಂಚಿನ ಸಂದುಗಳಲ್ಲಿ, ಗೊಡೆಯ ಬಿರುಕುಗಳಲ್ಲಿ, ಎಸೆದ ಒಡಕು ಮಡಕೆ, ಪ್ಲಾಸ್ಟಿಕ್ ಬಕೆಟ್ ಮುಂತಾದ ಕಡೆಗಳಲ್ಲಿ ಗೂಡು ಕಟ್ಟುತ್ತದೆ’.
‘ಓಹೋ!’ ಎಂದು ರಶ್ಮಿ ಗುನುಗತೊಡಗಿದಳು:
ಹಕ್ಕಿಗಳು ಗೂಡು ಕಟ್ಟುವವು
ಮನುಜ ಕಟ್ಟಿಕೊಡಬೇಕಿಲ್ಲ
ಮರಗಳೇ ಅವುಗಳ ವಾಸಸ್ಥಾನ     
ಬೆಳೆಸುವ ಮನಸು ಬೇಕಪ್ಪ
* * *

ಬೆಳಿಗ್ಗೆ ಸ್ವೀ....ಸ್ವೀ....ಸ್ವೀ.... ಎಂಬ ಇಂಪಾದ ಹಾಡಿನೊಂದಿಗೆ ರಶ್ಮಿಗೆ ಎಚ್ಚರವಾಯಿತು. ಎದ್ದುಹೋಗಿ ನೋಡುತ್ತಾಳೆ ಮನಸೋತ ಗಂಡುಹಕ್ಕಿ ಹಾರಿಬಂದು ಮಡದಿಯನ್ನು ಮುದ್ದಿಸಿತು.
ಅಷ್ಟರಲ್ಲಿ ಗುಬ್ಬಚ್ಚಿಗಿಂತ ಚಿಕ್ಕದಾದ ಹಸಿರುಹಕ್ಕಿ ಅಲ್ಲಿಗೆ ಬಂದಿತು. ರೆಕ್ಕೆ, ತಲೆ, ಬೆನ್ನು ಗಾಢ ಹಸಿರು ಬಣ್ಣ. ಎದೆಯಲ್ಲಿ ಇಟ್ಟಿಗೆಗೆಂಪು ಪಟ್ಟಿ. ಎದೆ, ಹೊಟ್ಟೆ, ಕುತ್ತಿಗೆ ಬಿಳಿ ಬಣ್ಣ ಹೊಂದಿರುವ ಆ ಹಕ್ಕಿಯನ್ನು ಅಪ್ಪ ಹಸಿರು ಟುವ್ವಿ ಹಕ್ಕಿಯೆಂದು ಗುರುತಿಸಿ ಹಿಂದೊಮ್ಮೆ ತಿಳಿಸಿದ್ದರು. ಈ ಹಸಿರು ಟುವ್ವಿ ಮಲ್ಲಿಗೆ ಪೊದೆಗೆ ಬರುತ್ತಿದ್ದಂತೆ ಮಡಿವಾಳ ಫ್ಹೀ....ಫ್ಹೀ.... ಎಂದು ಶಿಳ್ಳೆತರದಲ್ಲಿ ಕೂಗಿ ಹೆದರಿಸಲು ಪ್ರಯತ್ನಿಸಿತು.   
    
ಈ ಟುವ್ವಿ ಕೇಳಬೇಕಲ್ಲ. ಟುವ್ವಿ... ಟುವ್ವಿ... ಟುವ್ವಿ... ಎಂದು ಜೋರಾಗಿ ಒದರತೊಡಗಿತು. ಇದರಿಂದ ಸಿಟ್ಟಿಗೆದ್ದ ಮಡಿವಾಳದ ಸ್ವರವೂ ತಾರಕಕ್ಕೇರಿತು. ಇನ್ನೇನು ಒಬ್ಬರಿಗೊಬ್ಬರು ಮೈಮೇಲೆ ಹಾರಿ ಕೊಕ್ಕು, ಉಗುರುಗಳ ಮೂಲಕ ಯುದ್ಧ ಮಾಡುವಷ್ಟರ ಮಟ್ಟಿಗೆ ಹೋಗುತ್ತದೇನೋ ಅಂದುಕೊಂಡಳು ರಶ್ಮಿ. ಆದರೆ ಆದದ್ದೇ ಬೇರೆ. ಎರಡೂ ಹಕ್ಕಿಗಳು ಶಬ್ದದಲ್ಲೇ ಯುದ್ಧ ಮಾಡತೊಡಗಿದವು. ಕೊನೆಗೆ ಮಡಿವಾಳದ ಧ್ವನಿ ಮೀರಿಸಲಾಗದೆ, ‘ಈ ಪೊದೆ ನೀನೇ ಇಟ್ಟುಕೊ’ ಎಂಬಂತೆ ಹಸಿರು ಟುವ್ವಿ ಹಕ್ಕಿ ಅಲ್ಲಿಂದ ಕಾಲ್ಕಿತ್ತಿತು.

ಅಪ್ಪ ರಶ್ಮಿಯ ಹಿಂದೆ ನಿಂತು ಇದನ್ನೆಲ್ಲಾ ಗಮನಿಸುತ್ತಿದ್ದರು. ಅಪ್ಪನನ್ನು ಕಂಡ ರಶ್ಮಿ ‘ಅಪ್ಪಾ, ನಿನ್ನ ಮಗಳು ತುಂಬಾ ಜೋರು. ಬೇರೆ ಹಕ್ಕಿ ಇಲ್ಲಿಗೆ ಬರ್ಲೇಬಾರ್ದು ಅಂತಾಳೆ. ಹೇಗೆ ಟುವ್ವಿ ಹಕ್ಕಿಯನ್ನು ಓಡಿಸಿಬಿಟ್ಟಿತು ನೋಡು’ ಎಂದಳು.

‘ಅದರಲ್ಲಿ ತಪ್ಪೇನಿದೆ? ಇದು ತನ್ನ ಪೊದೆಯೆಂದು ಎಚ್ಚರಿಕೆ ನೀಡಿ ಕಳಿಸಿದ್ದಾಳೆ. ಅದರಲ್ಲೂ ಮರಿ ಹಾಕುವ ಸಮಯದಲ್ಲಿ ತನ್ನ ಗೂಡಿನತ್ತ ಯಾರೂ ಬರದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ. ನಮ್ಮ ಮನೆಗೆ ಯಾರಾದರೂ ಅಪರಿಚಿತರು ಬಂದರೆ, ‘ಯಾರು ನೀವು? ಏಕೆ ಬಂದಿರಿ?’ ಎಂದು ಕೇಳುವುದಿಲ್ಲವೇ? ಹಾಗೆ ಅದು’ ಎಂದು ಅಪ್ಪ ತಮ್ಮ ಹಕ್ಕಿ ಮಗಳನ್ನು ಸಮರ್ಥಿಸಿಕೊಂಡರು.
* * *

ಬಟ್ಟಲು ಗೂಡು ಅರಳಿದೆ ನೋಡು
ಅಪ್ಪನು ಇಟ್ಟ ಡ್ರಮ್ಮಿನಲಿ                         
ಒಂದೇ ದಿನದಿ ಮೂರು ಮೊಟ್ಟೆ
ಇಟ್ಟು ಹೋದುದು ಎಲ್ಲಿಗೆ?
ರಶ್ಮಿ ಮಡಿವಾಳ ಹಕ್ಕಿಗಳಿಗಾಗಿ ಹುಡುಕಾಡಿದಳು. ಗಂಡು ಮಡಿವಾಳ ಅಲ್ಲಿ ದೂರದಲ್ಲಿ ನೆಲದಲ್ಲಿರುವ ಹುಳಹುಪ್ಪಡಿಯನ್ನು ಹೆಕ್ಕಿ ಹೆಕ್ಕಿ ತಿನ್ನತೊಡಗಿತ್ತು. ಇತ್ತ ಬಚ್ಚಲು ಮನೆಯ ಹೊರಗೆ ಅಮ್ಮ ಎಸೆದಿದ್ದ ಮುಸುರೆ ಅನ್ನ ತಿನ್ನುತ್ತಿದ್ದ ಪಕ್ಕದ ಮನೆಯ ಬೆಕ್ಕಿಗೂ, ಹೆಣ್ಣು ಮಡಿವಾಳಕ್ಕೂ ಯುದ್ಧ ಆಗುವುದರಲ್ಲಿದ್ದಿತು.
ಬೆಕ್ಕು ಅನ್ನವನ್ನು ಯಾರಿಗೂ ಕೊಡುವುದಿಲ್ಲ ಎಂಬಂತೆ ಗುರುಗುಡುತ್ತ ತಿನ್ನುತ್ತಿದ್ದರೆ, ಹೆಣ್ಣು ಮಡಿವಾಳ ದೂರ ಬಿದ್ದಿದ್ದ ಅನ್ನದ ಅಗಳುಗಳನ್ನು ಒಂದೊಂದೆ ಹೆಕ್ಕಿ ತಿನ್ನತೊಡಗಿತ್ತು. ಬೆಕ್ಕು ಚೋಟಿನಿಂದ ಹೊಡಿಯಲು ಬಂದಾಗ ದೂರ ಸರಿಯುತ್ತಿತ್ತು ಮಡಿವಾಳ. ಬೆಕ್ಕು ಮತ್ತೆ ಅನ್ನ ತಿನ್ನುವುದರಲ್ಲಿ ಮಗ್ನವಾದಾಗ ಹತ್ತಿರ ಸರಿದು ಅನ್ನ ತಿನ್ನುತ್ತಿತ್ತು ಮಡಿವಾಳ. ಹೀಗೆ ಹಲವಾರು ಬಾರಿ ನಡೆದು ಕೊನೆಗೆ ಕೋಪಗೊಂಡ ಬೆಕ್ಕು ಮಡಿವಾಳವನ್ನು ಕಚ್ಚಿ ಹಿಡಿಯಲು ಹಾರಿತು. ಮಡಿವಾಳ ಫಕ್ಕನೆ ತಪ್ಪಿಸಿಕೊಂಡು ಪೊದೆಯತ್ತ ಹಾರಿತು.

‘ಏಯ್! ಬೆಕ್ಕಣ್ಣ ಹೋಗಾಚೆ, ಎಂದು ರಶ್ಮಿ ಗದರಿದರೂ ಕೇರು ಮಾಡದೆ ಬೆಕ್ಕು ಮತ್ತೆ ಅನ್ನ ತಿನ್ನುವುದರಲ್ಲಿ ಮಗ್ನವಾಯಿತು. ರಶ್ಮಿ ಕಲ್ಲು ಹೆಕ್ಕಿದಾಗಲೇ ಅದು ಅಲ್ಲಿಂದ ಓಟ ಕಿತ್ತಿತು. ಸಂಜೆ ಅಪ್ಪ ಮನೆಗೆ ಬಂದಾಗ ರಶ್ಮಿ ಬೆಕ್ಕಿನ ಮೇಲೆ ದೂರು ನೀಡಿದಳು.
‘ಓಹ್! ಹೌದು ಪುಟ್ಟಿ, ಬೆಕ್ಕು ಒಂದೇ ಅಲ್ಲ.... ಕೆಂಬೂತ, ಕಾಗೆಗಳಿಂದಲೂ ಇವನ್ನು ರಕ್ಷಿಸಬೇಕು’ ಎಂದು ಅಪ್ಪ ಹಿತ್ತಿಲಿಗೆ ಬಂದರು. ಕೈತೋಟದ ಹಿಂದಿದ್ದ  ಮುಳ್ಳು-ಕಂಟಿಗಳನ್ನು ತಂದು ಗೂಡಿನ ಸುತ್ತಮುತ್ತ ಹರಡಿದರು. ಮನೆಯವರೆಲ್ಲರೂ ಗೂಡಿನ ಮೇಲೆ ನಿಗಾ ಇಡುವಂತೆ ಆಗ್ರಹಿಸಿದರು.
* * *     

ರಶ್ಮಿ ದಿನಾಲೂ ಮಡಿವಾಳ ದಂಪತಿಗಳ ಚಲನವಲನವನ್ನು ನೋಡಿ ಕುತೂಹಲ ತಣಿಸಿಕೊಳ್ಳುತ್ತಿದ್ದಳು. ಹೆಂಡತಿ ಮಡಿವಾಳ ಮೊಟ್ಟೆಗಳಿಗೆ ಕಾವು ಕೊಡುತ್ತಿತ್ತು. ಗಂಡ ಮಡಿವಾಳ ಗೂಡಿನ ಸುತ್ತಮುತ್ತಲೇ ಕಾಯುತ್ತ ಗೂಡಿನ ರಕ್ಷಣೆಯ ಜವಾಬ್ದಾರಿ ನಿರ್ವಹಿಸುತ್ತಿತ್ತು.
ಮಡಿವಾಳ ಮೊಟ್ಟೆಯಿಟ್ಟು ಸುಮಾರು ಹತ್ತು ದಿನಗಳು ಕಳೆದಿದ್ದವು. ಇನ್ನು ಎರಡು ಮೂರು ದಿನಗಳಲ್ಲಿ ಮರಿಗಳು ಮೊಟ್ಟೆಯೊಡೆದು ಹೊರಬರುತ್ತವೆ ಎಂದಿದ್ದರು ಅಪ್ಪ. ಹಾಗಾಗಿ ರಶ್ಮಿಗೆ ಕುತೂಹಲ. ಶಾಲೆಯಿಂದ ಮನೆಗೆ ಬಂದ ಕೂಡಲೇ ಗೂಡೊಳಗೆ ಇಣುಕಿ ನೋಡುತ್ತಿದ್ದಳು. ಆದರೆ ಇಂದು ಹಾಗೆ ಇಣುಕಿದ ಅವಳು ದಂಗಾಗಿ ನಿಂತಳು. ಗೂಡು ಬರಿದಾಗಿತ್ತು! ಮೂರೂ ಮೊಟ್ಟೆಗಳು ಕಾಣೆಯಾಗಿದ್ದವು!

‘ಅಮ್ಮಾ! ಗೂಡಲ್ಲಿ ಮೊಟ್ಟೆ ಇಲ್ಲ!’ ಎಂದು ಕೂಗಿಕೊಂಡಳು ರಶ್ಮಿ. ಅಷ್ಟರಲ್ಲಿ ಪೊದೆಯಲ್ಲಿ ಏನೋ ಸರಿದಾಡಿದಂತಾಯಿತು. ಕಣ್ಣಗಲಿಸಿ ನೋಡಿದರೆ ಕೇರೆ ಹಾವು! ಹಾವು ಸರಸರನೆ ಓಡುತ್ತ ಮಾಯವಾಯಿತು. ಆಗ ಅಲ್ಲಿಗೆ ಬಂದ ಮಡಿವಾಳ ದಂಪತಿಗಳ ರೋದನ ಮುಗಿಲು ಮುಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT