ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತಾನ – ರೈತಾಪಿ ಸಮೃದ್ಧಿಯ ಸಂಭ್ರಮ

Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ
-ರಹಮತ್‌ ತರೀಕೆರೆ
 
**
ಭಕ್ತಿ, ಆರ್ಥಿಕತೆ, ಮನರಂಜನೆ, ಸಂಬಂಧಗಳು ಮತ್ತು ಮೌಢ್ಯ – ಹೀಗೆ ಜಾತ್ರೆಗಳನ್ನು ಐದು ದೃಷ್ಟಿಕೋನಗಳಲ್ಲಿ ನೋಡಬಹುದು.
 
ಜಾತ್ರೆ ಎಂದಾಕ್ಷಣ ಹಿಂದೂಗಳ ಜಾತ್ರೆಯಷ್ಟೇ ಅಂದುಕೊಳ್ಳಬಾರದು. ಉರುಸ್‌ಗಳನ್ನೂ ಪರಿಗಣಿಸಬೇಕು. ಉರುಸ್‌ಗಳಿಗೂ ಜಾತ್ರೆಗಳಿಗೂ ಬಹಳ ವ್ಯತ್ಯಾಸವಿಲ್ಲ. 
ಜಾತ್ರೆಯ ಮುಖ್ಯ ಲಕ್ಷಣ ಭಕ್ತಿಯ ವಿಸ್ತರಣೆ. ಏಕಾಂತದಲ್ಲಿ ದೇವರ ಧ್ಯಾನ ಮಾಡುವುದು ಒಂದು ಸ್ತರ. ಹಬ್ಬದ ಸಂದರ್ಭಗಳಲ್ಲಿ ಆ ಭಕ್ತಿ ಕುಟುಂಬಕ್ಕೆ ವಿಸ್ತರಣೆಯಾಗುತ್ತದೆ. ಅದೇ ದೇವಸ್ಥಾನ ಅಥವಾ ದರ್ಗಾಕ್ಕೆ ಹೋದಾಗ ಇನ್ನೊಂದಿಷ್ಟು ಸಾರ್ವಜನಿಕವಾಗುತ್ತದೆ. ಭಕ್ತಿಯ ಮುಂದಿನ ಹಂತದ ಸಾರ್ವಜನಿಕ ವಿಸ್ತರಣೆಯ ರೂಪ, ಜಾತ್ರೆ ಅಥವಾ ಉರುಸ್‌. 
 
ಜಾತ್ರೆಗಳನ್ನು ಸಾಮಾನ್ಯವಾಗಿ ನಾವು ಧರ್ಮಕೇಂದ್ರಿತವಾಗಿ, ದೈವಕೇಂದ್ರಿತವಾಗಿ, ಸಂತ ಕೇಂದ್ರಿತವಾಗಿ ನೋಡುತ್ತೇವೆ. ಜಾತ್ರೆಯ ಕೇಂದ್ರದಲ್ಲಿ ಧರ್ಮ, ದೈವ, ಸಂತರು ಇದ್ದರೂ ಸೂಕ್ಷ್ಮವಾಗಿ ನೋಡಿದರೆ ಅವು ನಮ್ಮ ನಾಡಿನ ಐದು ಮುಖ್ಯ ಆರ್ಥಿಕತೆಗಳು ಒಂದೆಡೆ ಸೇರುವ ಜಾಗವೂ ಹೌದು. ಅವುಗಳನ್ನು ಗಮನಿಸಿದರೆ ಧರ್ಮಕೇಂದ್ರಿತವಾಗಿ ಜಾತ್ರೆಯನ್ನು ನೋಡುವ ನನ್ನ ದೃಷ್ಟಿಕೋನವೇ ಬದಲಾಗಿಬಿಡುತ್ತದೆ. ದೈವ ಅನ್ನುವುದು ಶೇ. 5–6ರಷ್ಟೇ ಪ್ರಮಾಣ ಇರುತ್ತದೆ. ಉಳಿದುದು ಕೊಡು–ಕೊಳುವುದಕ್ಕೆ ಸಂಬಂಧಿಸಿದ್ದು. ಪೂಜೆ ಮಾಡುವುದು ಐದು ಹತ್ತು ನಿಮಿಷಗಳಷ್ಟೆ. ಉಳಿದ ಸಮಯವನ್ನು ಕೊಡು–ಕೊಳ್ಳುವ ವ್ಯಾಪಾರದಲ್ಲಿಯೇ ಕಳೆಯುತ್ತಿರುತ್ತಾರೆ. ಆದ್ದರಿಂದ ಜಾತ್ರೆಗಳನ್ನು ನಮ್ಮ ಸಾಂಪ್ರದಾಯಿಕ ಮಾರುಕಟ್ಟೆಗಳನ್ನಾಗಿ ಕೂಡ ಗ್ರಹಿಸಬೇಕು. 
 
ರೈತರು ತಾವು ಬೆಳೆದ ವಸ್ತುಗಳನ್ನು ತಂದು ಮಾರುವ ‘ಕೃಷಿ ಆರ್ಥಿಕತೆ’. ವ್ಯಾಪಾರಿಗಳು ಮಾರಾಟ ಮಾಡುವ ‘ವ್ಯಾಪಾರಿ ಆರ್ಥಿಕತೆ’, ಹಾಗೆಯೇ ಬಡಗಿಗಳು, ಕಮ್ಮಾರರು ತಾವು ತಯಾರುಮಾಡಿದ ವಸ್ತುಗಳನ್ನು ತಂದು ಮಾರುವ ‘ಕರಕುಶಲ ಆರ್ಥಿಕತೆ’, ‘ಮನರಂಜನಾ ಆರ್ಥಿಕತೆ’, ‘ಪಶುಪಾಲನಾ ಆರ್ಥಿಕತೆ’ – ಈ ಐದು ಆರ್ಥಿಕತೆಗಳು ಜಾತ್ರೆಯ ಸಂದರ್ಭದಲ್ಲಿ ಒಂದೆಡೆ ಸೇರುತ್ತವೆ. 
 
ಜಾತ್ರೆಗಿರುವ ಇನ್ನೊಂದು ಪ್ರಮುಖ ಲಕ್ಷಣ ಮನರಂಜನೆ. ನಮ್ಮ ನಾಡಿನ ಜಾತ್ರೆಗಳಲ್ಲಿ ಎಷ್ಟು ಬಗೆಯ ಕಲೆಗಳ ಪ್ರದರ್ಶನ ಆಗುತ್ತದೆ ಎಂಬುದನ್ನು ಗಮನಿಸಿದರೆ ಅವುಗಳಿಗಿರುವ ಮನರಂಜನಾ ಆಯಾಮದ ಅಗಾಧತೆ ಅರಿವಿಗೆ ಬರುತ್ತದೆ. 
 
ಬನಶಂಕರಿ ಜಾತ್ರೆಯಲ್ಲಿಯಂತೂ ಅದನ್ನು ಲೆಕ್ಕ ಹಾಕುವುದೇ ಕಷ್ಟ. ಅರವತ್ತನಾಲ್ಕು ಥಿಯೇಟರ್‌ಗಳು, ಪ್ರತಿ ರಂಗಮಂದಿರದಲ್ಲಿ ಪ್ರತಿದಿನ ಮೂರು ಪ್ರದರ್ಶನ – ಮೂರು ತಿಂಗಳುಗಳ ಕಾಲ ನಿರಂತರವಾಗಿ ನಡೆಯುತ್ತದೆ. ಈ ಮನರಂಜನಾ ಮಾಧ್ಯಮದವರಿಗೆ ವಿವಿಧ ಜಾತ್ರೆಗಳಿಗೆ ತೆರಳುವ ಅವರದ್ದೇ ಆದ ದಿನದರ್ಶಿಕೆ ರೂಪಿಸಿಕೊಂಡುಬಿಟ್ಟಿರುತ್ತಾರೆ. 
 
ಮನುಷ್ಯ ಸಂಬಂಧಗಳ ಬೆಸುಗೆಯ ಇನ್ನೊಂದು ಆಯಾಮವೂ ಜಾತ್ರೆಗಳಿಗಿದೆ.  ಜಾತ್ರೆ ಎಂದರೆ ನಮ್ಮ ಕುಟುಂಬಗಳು, ಸಮಾಜಗಳು ರೂಪಿಸಿದ ಉಸಿರುಗಟ್ಟುವ ವಾತಾವರಣದಿಂದ ಬಿಡುಗಡೆ ಪಡೆಯುವ ಅವಕಾಶ ಇರಬಹುದಾ ಅನಿಸುತ್ತದೆ. ಜಾತ್ರೆಯ ಜನಸಾಗರ, ನೂಕು ನುಗ್ಗಲಿನ ನಡುವೆ ಯಾರೂ ತಮ್ಮ ಮಡಿವಂತಿಕೆಯನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. 
 
ನಾವು ಜಾತ್ರೆಗಳಿಗೆ ಹೋಗುವುದು ಸ್ವಾತಂತ್ರ್ಯವನ್ನು ಅನುಭವಿಸುವುದಕ್ಕಾಗಿ. ಅಲ್ಲಿ ಹುಡುಗ–ಹುಡುಗಿಯರು ನಿರುದ್ದಿಶ್ಯವಾಗಿ ಓಡಾಡುತ್ತಿರುತ್ತಾರೆ. ಕುಟುಂಬದ ವಾತಾವರಣದಲ್ಲಿ ಅನುಭವಿಸಲು ಸಾಧ್ಯವಿಲ್ಲದ ಸ್ವಾತಂತ್ರ್ಯವನ್ನು ಅನುಭವಿಸುವ ಜಾಗವಾಗಿ ಅವರಿಗೆ ಜಾತ್ರೆ ಒದಗಿಬರುತ್ತಿರುತ್ತದೆ. 
 
ನಾನು ಬನಶಂಕರಿ ಜಾತ್ರೆಯಲ್ಲಿ ಅಡ್ಡಾಡುತ್ತಿದ್ದಾಗ ಅಲ್ಲಿ ಹೆಂಡತಿಯನ್ನು ಬಿಟ್ಟ ಕುಂಬಾರನೊಬ್ಬನ ಸಂಸಾರವನ್ನು ಮತ್ತೆ ಒಂದುಗೂಡಿಸುವ ಕೆಲಸ ನಡೆಯುತ್ತಿರುವುದನ್ನು ನೋಡಿದ್ದೇನೆ. ಎಂದೋ ಆಡಿದ ಜಗಳಗಳನ್ನು ಬಗೆಹರಿಸಿಕೊಂಡು ಮತ್ತೆ ಸಂಬಂಧಗಳನ್ನು ಬೆಸೆದುಕೊಳ್ಳುವ ರಾಜಿಸ್ಥಳಗಳಾಗಿಯೂ ಜಾತ್ರೆಗಳು ಒದಗಿಬರುತ್ತವೆ. 
 
ಇನ್ನೊಂದು ಅಂಶವನ್ನು ಇಲ್ಲಿ ಹೇಳಲೇಬೇಕು. ಜಾತ್ರೆಗಳಿಗೆ ಮೌಢ್ಯಗಳ ಆಚರಣೆಯ ಇನ್ನೊಂದು ಮುಖವೂ ಇದೆ. ಉದಾಹರಣೆ ಜೋಗತಿಗೆ ಬಿಡುವಂಥ ಪದ್ಧತಿ. ಜಾತ್ರೆಯಲ್ಲಿ ಮುತ್ತು ಕಟ್ಟಿಸಿಕೊಳ್ಳುವುದೆಂದರೆ ಆ ಹೆಣ್ಣುಮಗಳ ಬದುಕಿನ ದುರಂತದ ಕಡೆಗಿನ ಪ್ರಯಾಣದ ಆರಂಭದ ಘಟ್ಟವಾಗಿರುತ್ತದೆ. 
 
ಜಾತ್ರೆಗಳಲ್ಲಿ ಎಲ್ಲರೂ ತಮ್ಮ ಜಾತಿ ಮತಗಳನ್ನು ಬಿಟ್ಟು ಸೇರುತ್ತಾರೆ ಎಂದು ಹೇಳುತ್ತೇವಲ್ಲ, ಅದು ಅರ್ಧ ಸತ್ಯ. ಜಾತ್ರೆಗಳು ಅಷ್ಟೇ ಅದ್ಭುತವಾಗಿ ಜಾತಿಪದ್ಧತಿಯನ್ನು ಅಭಿನಯ ಮಾಡುತ್ತವೆ. ಯಾರು ತಮಟೆ ಹೊಡೆಯಬೇಕು, ಯಾರು ಕೋಣ ಕಡಿಯಬೇಕು, ಯಾರ್‍ಯಾರು ಯಾವ್ಯಾವ ಕೆಲಸ ಮಾಡಬೇಕು ಎಂಬುದು ನಿಗದಿಯಾಗಿಬಿಟ್ಟಿರುತ್ತದೆ. ಆದ್ದರಿಂದ ಜಾತ್ರೆಗಳಿಗೆ ಇಂಥ ನೋವಿನ ಆಯಾಮವೂ ಇದೆ.
 
ಸಾಮಾನ್ಯವಾಗಿ ರೈತರು ಬೆಳೆದ ಬೆಳೆಗಳು ಕೈಗೆ ಬಂದ ಮೇಲೆಯೇ ಜಾತ್ರೆಗಳು ಆರಂಭವಾಗುತ್ತವೆ. ಅವು ನಿಜವಾಗಲೂ ರೈತಾಪಿ ಸಂಸ್ಕೃತಿಯ ಸಂಭ್ರಮಾಚರಣೆ ಅಂತಲೇ ಅನಿಸುತ್ತದೆ ನನಗೆ. ದೈವ ಒಂದು ನೆಪ ಅಷ್ಟೆ. 
 
ಸಂತಾನದ ಹರಕೆಗಾಗಿ ಜಾತ್ರೆಗಳಿಗೆ ಬರುವವರ ಸಂಖ್ಯೆಯೂ ಸಾಕಷ್ಟಿದೆ. ಹೊಸತಾಗಿ ಮದುವೆಯಾದವರು ತೇರಿನ ಕಳಸ ನೋಡಬೇಕು ಎಂಬ ಸಂಪ್ರದಾಯ ಇದೆ. ಹಸು ಕರು ಹಾಕಿದ್ದರೆ ಮೊದಲ ಹಾಲಿನ ಗಿಣ್ಣ ತೆಗೆದುಕೊಂಡು ಬರುತ್ತಾರೆ, ಬೆಳೆದ ಬೆಳೆ ತೆಗೆದುಕೊಂಡು ಬರುತ್ತಾರೆ, ಹಡೆದ ಕೂಸನ್ನೂ ಅವುಚಿಕೊಂಡು ಬರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT