ನಾಲ್ಕು ಜನ ಸೇರಿದರೆಂದರೆ ನಲವತ್ತು ವಿಚಾರ ಚರ್ಚೆಯಾಗುತ್ತವೆ. ಅದರಲ್ಲಿ ಅರ್ಧದಷ್ಟು ಸಲಹೆಗೆ ಸಂಬಂಧಿಸಿದ್ದೇ. ಬೇಕಾದ್ದು, ಬೇಡದ್ದು, ಕೇಳಿ ಪಡೆದದ್ದು, ಉಪಯುಕ್ತ ವಿನಿಮಯ, ಉಚಿತವಾಗಿ ಉದುರಿಸಿದ್ದು... ಅಂತೂ ಎಲ್ಲವೂ ಸಲ್ಲುತ್ತವೆ ಇಂಥ ಮಾತುಕತೆಗಳಿಗೆ. ‘ಬಿಟ್ಟಿಯಾದ್ರೇನಂತೆ, ವೆರೈಟಿ ಬೇಕು’ ಅನ್ನುವವರಿಗೆ ಅದು ಸಿಗುವುದು ಸಲಹೆಗಳಲ್ಲಿ ಮಾತ್ರ. ಆಹಾ! ಏನು ವೈವಿಧ್ಯ, ಏನು ವಿಸ್ತಾರ ಈ ಸಲಹಾಸಮುದ್ರ!

ಹಲವರ ಸಲಹೆಗಳು ‘ಹಿತನುಡಿ’ಗಳಿದ್ದಂತೆ. ಅವರು ಪ್ರೀತಿಯಿಂದ ಹೇಳಿದ್ದನ್ನು ಪಾಲಿಸುವುದು ಸುಲಭ, ಪರಿಣಾಮವೂ ಹಿತಕಾರಿ. ಇನ್ನು ಕೆಲವರದ್ದು ‘ಹಿತೋಪದೇಶ’, ಅವರ ಸಲಹೆಯಲ್ಲಿ ಪ್ರೀತಿ, ಕಾಳಜಿಯ ಜೊತೆಗೆ ಅದನ್ನು ಪಾಲಿಸಬೇಕೆಂಬ ಆಗ್ರಹವೂ ಇರುತ್ತದೆ. ಮತ್ತೊಂದಷ್ಟು ಜನರಿರುತ್ತಾರೆ, ಅವರ ಸಲಹೆ ಹಿತವೂ ಇಲ್ಲ, ಮಿತವೂ ಇಲ್ಲ– ಬರೀ ಉಪದೇಶ ಮಾತ್ರ. ಇಂಥ ಜನ ಸಾಮಾನ್ಯವಾಗಿ ‘ನನಗೆಲ್ಲ ಗೊತ್ತು’ ಸಿಂಡ್ರೋಂನಿಂದ ಬಳಲುತ್ತಿರುತ್ತಾರೆ.

ನಿಮ್ಮ ಎಲ್ಲ ಕಾರ್ಯಗಳನ್ನೂ ಅದಕ್ಕಿಂತ ಚೆನ್ನಾಗಿ (ಅದು ಅವರ ಅಭಿಪ್ರಾಯ!) ಮಾಡುವುದು ಹೇಗೆಂಬ ಸಲಹೆ ಅವರ ಬಳಿ ಸದಾ ಸಿದ್ಧ! ಈ ಸಲಹೆ ಕೊಡುವ ಚಪಲ ಅದೆಷ್ಟು ಇರುತ್ತದೆಂದರೆ ಅವರು ಬಾಯಿ ತೆರೆದಾಗೆಲ್ಲ ‘ಸರ್ರ’ಂಥ ಸಲಹಾಮುತ್ತು ಸುರಿಯುವುದಲ್ಲಿ ಸಂದೇಹವಿಲ್ಲ. ನೀವು ಉಣ್ಣೆಯ ಸ್ವೆಟರ್ ಹಾಕಿಕೊಂಡಿರೋ, ಅವರು ‘ಇದಕ್ಕಿಂತ ಕ್ಯಾಶ್ಮೀರ್ ಕಾರ್ಡಿಗನ್ ಚೋಲೋದು’ ಅನ್ನುತ್ತಾರೆ.
ಟ್ರೇನ್ ಟಿಕೆಟ್ ತಗೊಂಡರೆ, ‘ಬಸ್ಸಲ್ಲಿ ಹೋಗೋದು ಬೆಟರ್ರು’ ಅನ್ನುತ್ತಾರೆ. ಆಸ್ಪಿರಿನ್ ತಗೊಳ್ತಾ ಇದ್ದೀರೋ, ‘ಐಬುಪ್ರೊಪೇನ್ ಇನ್ನೂ ಒಳ್ಳೇದು’ ಎಂದು ಉಚಿತವಾಗಿ ಉಪದೇಶಿಸುತ್ತಾರೆ.

ಸಲಹೆಯ ಚಟ ಬಹಳಷ್ಟು ಜನರಿಗೆ ಇರುತ್ತದಾದರೂ ಅದನ್ನು ಕೊಡುವ, ಪಡೆಯುವ ಸಂಭವ ಹೆಂಗಸರಲ್ಲೇ ಹೆಚ್ಚು. ಮೊದಲೇ ಮಾತು ಜಾಸ್ತಿ, ಮೇಲಿಂದ ಊರ ಮೇಲಿನ ಸುದ್ದಿ ಕೇಳುವ, ಹೇಳುವ ಹಂಬಲ ಬೇರೆ... ಕೆಲವರಿಗೆ ಮೈ-ಮಂಡೆ ಶೃಂಗಾರದಲ್ಲಿ ಆಸಕ್ತಿ. ‘ತಲೆ ಸ್ನಾನಕ್ಕೆ ಮೊದ್ಲು ಸ್ವಲ್ಪ ಮೊಸರು ಹಚ್ಕೊಂಡ್ರೆ ಕಂಡೀಶನ್ ಆಗುತ್ತೆ’, ‘ನಿಂಬೆರಸ ತಿಕ್ಕಿಕೊಂಡ್ರೆ ಚರ್ಮದ ಮೇಲಿನ ಕಪ್ಪು ಕಲೆ ಬಿಟ್ಟೋಗತ್ತೆ’ ಎಂದು ಪಟ್ಟಿ ಮಾಡುವ ‘ಚಂದ ಚಕೋರಿ’ಯರು ಅವರು.

ಕೆಲವರು ದುಡ್ಡು, ಕಾಸು, ಚೌಕಾಸಿ ಲೆಕ್ಕಾಚಾರದಲ್ಲಿ ತೀರಾ ಚುರುಕು– ‘ಶೆಟ್ಟಿ ಅಂಗಡೀಲಿ ಅಕ್ಕಿ ತಗೋಬೇಡಿ, ರೇಟು ಜಾಸ್ತಿ’, ‘ಭಟ್ರ ಅಂಗಡೀಗೆ ಬುಧವಾರ ಬೆಳಿಗ್ಗೆ ಹೋಗಿ, ತಾಜಾ ತರಕಾರಿ ಸಿಗುತ್ತೆ’ಯಂಥ ವಿತ್ತ ಸಂಬಂಧಿ ಉಪದೇಶಗಳು ಅಂಥವರಿಂದ ಬರೋದು. ‘ಅಯ್ಯೋ, ಅವಳತ್ರ ಏನೂ ಹೇಳ್ಬೇಡಿ; ಊರಿಗೆಲ್ಲ ಹರಡ್ತಾಳೆ’, ‘ಆ ಮಗು ಭಾರೀ ಹಠಮಾರಿ, ನಿಮ್ಮಗೂನ್ನ ಅದ್ರ ಹತ್ರ ಸೇರಿಸ್ಬೇಡಿ’ಯಂಥ ಹುಳುಕು ಸಲಹೆ ಕೊಡೋರೂ ಕಮ್ಮಿಯಿಲ್ಲ.

ಇನ್ನು ಬಸುರಿಯಾದರನ್ತೂ ಸಲಹೆಗಳ ಸುರಿಮಳೆಯೇ ಸುತ್ತೆಲ್ಲ ಕವಿದುಕೊಳ್ಳುತ್ತದೆ. ಹೋದಲ್ಲಿ ಬಂದಲ್ಲೆಲ್ಲ, ಕುಂತಲ್ಲಿ ನಿಂತಲ್ಲೆಲ್ಲ ಆಪ್ತಸಲಹೆಗಳೆಂಬ ಆಲಿಕಲ್ಲುಗಳ ಧಪಧಪ ದಾಳಿ. ‘ಓ, ಪ್ರೆಗ್ನನ್ಸಿ ಖಾತ್ರಿ ಆಯ್ತಾ, ಇನ್ನು ಭಾರಿ ಹುಶಾರಿ ಇರ್ಬೇಕು ನೀವು, ಬೆಳ್ಳುಳ್ಳಿ, ಹಸಿಮೆಣಸು, ಪಪ್ಪಾಯಿ ತಿನ್ಬೇಡಿ’ ಎಂಬಲ್ಲಿಂದ ಶುರುವಾದರೆ... ‘ಕಾಯಿ ತುರೀಬೇಡಿ, ನೀರು ಸೇದಬೇಡಿ, ಬಿರುಸಾಗಿ ನಡೀಬೇಡಿ, ಏಕ್‍ದಂ ಏಳಬೇಡಿ...’ಗಳಂಥ ‘ಬೇಡ’ಗಳೂ, ‘ಕೇಸರಿ ಹಾಲು ಕುಡೀಬೇಕು, ತುಪ್ಪ ಜಾಸ್ತಿ ತಿನ್ನಬೇಕು, ದಿನಾ ವಾಕ್ ಮಾಡಬೇಕು, ಪುರಾಣ ಪುಣ್ಯ ಕಥೆ ಓದಬೇಕು...’ಗಳಂಥ ‘ಬೇಕುಗಳೂ ಸಾಧ್ಯವಿರೋ ಎಲ್ಲಾ ದಿಕ್ಕು, ಮೂಲಗಳಿಂದ ಯಥೇಚ್ಛ ಪ್ರವಾಹೋಪಾದಿಯಲ್ಲಿ ಹರಿದು ಬಂದು ತೋಯ್ದು ತೊಪ್ಪೆಯಾಗಿಸುತ್ತವೆ.

ಜನರಿಗೆ (ಸ್ತ್ರೀ ಜಾತಿಗೆ ಎಂದು ಓದಿಕೊಳ್ಳಿ) ಬಸುರಿ ಹೆಂಗಸಿನ ಪರಿಚಯವೇ ಇರಬೇಕೆಂದಿಲ್ಲ. ಬಸ್ ನಿಲ್ದಾಣದಲ್ಲೋ, ಮಾರುಕಟ್ಟೆಯಲ್ಲೋ, ಮದುವೆ ಮನೆಯಲ್ಲೋ ಎಲ್ಲಾದರೂ ಸರಿ, ಕೊಂಚ ಉಬ್ಬಿದ ಹೊಟ್ಟೆ, ಬಸವಳಿದ ಮುಖ ಕಂಡರೆ ಸಾಕು, ಒಂದು ಮಂದಹಾಸ ತೂರಿ ‘ಎಷ್ಟು ತಿಂಗಳು’ ಎನ್ನುತ್ತ ಮಾತಿಗೆ ಶುರುವಿಟ್ಟುಕೊಳ್ಳುತ್ತಾರೆ.

‘ಇಂತಿಷ್ಟು...’ ಎಂಬ ಉತ್ತರ ಮುಗಿಯುವುದರೊಳಗೆ ಅವರದ್ದೊಂದು ಸಲಹೆ ಸಿದ್ಧವಿರುತ್ತದೆ– ‘ದಿನಾ ಪಾಲಕ್ ತಿನ್ನಿ... ಕಬ್ಬಿಣಾಂಶ ಇರುತ್ತೆ, ಒಂದೆಲಗ ಸೇವಿಸಿ... ಮಗೂಗೆ ನೆನಪಿನ ಶಕ್ತಿ ಚೆನ್ನಾಗಿರುತ್ತೆ...’ ಹಾಗೆ ಹೀಗೆ...! ವಯಸ್ಸಾದ ಹೆಂಗಸರು, ಎರಡೋ ನಾಲ್ಕೋ ಹೆತ್ತ ಮಾತೆಯರು ಹೇಳಿದರೆ ಅದು ಅವರ ‘ಅನುಭವ ನೀಡಿದ ಹಕ್ಕು’ ಎಂದುಕೊಳ್ಳಬಹುದು, ಆದರೆ ಇನ್ನೂ ಮದುವೆಯೂ ಆಗಿರದ ಕಿರಿಯರು, ಕುಮಾರಿಯರು ಕೂಡ ಬಂದು ಸೆಕೆಂಡ್ ಹ್ಯಾಂಡ್ ಸಲಹೆ ಕೊಟ್ಟಾಗ ಮೊದಲೇ ಓವರ್ ಡೋಸ್ ಅನುಭವಿಸುತ್ತಿರುವ ಭಾವಿ ತಾಯಂದಿರು ಭುಸುಗುಟ್ಟಿದರೆ ಆಶ್ಚರ್ಯವಿಲ್ಲ.

ಬಾಣಂತಿಯರದ್ದು ಇನ್ನೊಂದು ಅವಸ್ಥೆ. ಮೊದಲೇ ಹೊಸ ಮಗುವಿನ ಅಳು–ಅವಶ್ಯಕತೆಗಳಿಗೆ ಹೊಂದಿಕೊಳ್ಳಲಾಗದೇ ಒದ್ದಾಡುತ್ತಿರುತ್ತಾರೆ. ಮೇಲಿಂದ ‘ಮಾತಾಡಿಸಿಕೊಂಡು ಹೋಗಲು’ ಬರುವ ಮಹಾತಾಯಿಯರ ಸಲಹಾ ಪ್ರಹಾರ ಬೇರೆ... ‘ಬಾಳೆಹಣ್ಣು ತಿನ್ನಬೇಡ, ಶಿಶುಗೆ ಶೀತವಾಗುತ್ತೆ’ ಎಂದು ಒಬ್ಬರೆಂದರೆ, ‘ಬಾಳೆಹಣ್ಣು ಚೆನ್ನಾಗಿ ತಿನ್ನು, ಮಗೂಗೆ ಮಲಬದ್ಧತೆ ಬರೋಲ್ಲ’ ಎಂಬ ಉಲ್ಟಾ ದಿಕ್ಕಿನ ಉಪದೇಶ ಕೊಡೋರು ಇನ್ನೊಬ್ಬರು.

ಈ ಶೀತ, ಉಷ್ಣ, ಕಫ, ಪಿತ್ತ ಎಂಬೆಲ್ಲ ಕಾರಣ ಎತ್ತಿಕೊಂಡು ತಲೆಗೊಂದು ಸಲಹೆ ಕೊಟ್ಟು, ತಿನ್ನೋ ಅನ್ನ–ಊಟದ ವಿಷಯದಲ್ಲೂ ತಲೆಬೇನೆ ತಗುಲಿಸಿಬಿಡುತ್ತಾರೆ. ‘ಕಿವಿಗೊಡೋದೇ ಬೇಡ’ ಎಂದು ಕೊಡವಿಕೊಂಡು ನಡೆಯಲೂ ಹೆದರಿಕೆ, ಮಗುವಿನ ಮೇಲೆ ಪರಿಣಾಮ ಬೀರುತ್ತಲ್ಲ ಎಂದು. ಕಿವಿಗೊಟ್ಟರೆ ಬಾಣಂತಿಯ ತಲೆ ಮೇಲೆ ಬಿಟ್ಟಿ ಸಲಹೆಗಳ ಬೇಣ ಬೆಳೆಯುವುದು ಖಂಡಿತ. ನಾವು ಗಂಡ-ಹೆಂಡತಿ ಮದುವೆಯಾದ ಹೊಸದರಲ್ಲಿ ಬೆಂಗಳೂರಿನಲ್ಲಿ ಬಾಡಿಗೆ ಮನೆ ಹಿಡಿದಿದ್ದೆವು. ಮನೆಯ ಯಜಮಾನರ ಮಗನಿಗೆ ಸಿಕ್ಕಾಪಟ್ಟೆ ಸಲಹಾ ಸಿಂಡ್ರೋಂ! ನಮಗೆ ಜಾಸ್ತಿ ರಜ ಇರಲಿಲ್ಲವಾದ್ದರಿಂದ ಗಡಿಬಿಡಿಯಲ್ಲಿ ಒಂದೆರಡು ಅಂಗಡಿ ತಿರುಗಿ ಪಾತ್ರೆ–ಪಗಡೆ, ಫ್ರಿಡ್ಜು, ಟಿವಿ, ಮಂಚ, ಕಪಾಟು ಅಂತೆಲ್ಲ ಖರೀದಿಸಿಕೊಂಡು ಬಂದೆವು.

ಮನೆಗೆ ಬಂದು ಸಜ್ಜುಗೊಳಿಸಲು ಶುರುಮಾಡಿದ್ದೇ ಈ ವ್ಯಕ್ತಿ ಬಂದು ತಲಾ ಒಂದೊಂದು ಐಟಮ್ ಮೇಲೆ ಅರ್ಧರ್ಧ ತಾಸು ‘ಇದಲ್ಲ, ಅದು ತಗೋಬೇಕಿತ್ತು’ ಎಂದು ಸಲಹಾಬಾಂಬ್ ಸುರಿಮಳೆಗೈದರು. ‘ಅಗತ್ಯ ಐಟಮ್ ಎಲ್ಲ ಬಂದವಲ್ಲ’ ಎಂದು ಸಮಾಧಾನಪಟ್ಟುಕೊಳ್ಳುತ್ತಿದ್ದ ನಾವು ‘ಈ ಅನಗತ್ಯ ‘ಐಟಮ್’ ಬಂದಿದ್ದಕ್ಕೆ ಏನು ಮಾಡೋದು’ ಎಂದು ತಿಳಿಯದೇ ತಲೆ ಕೆರೆದುಕೊಂಡೆವು. ಆ ಮನೆಯಲ್ಲಿ ಉಳಿದಷ್ಟೂ ದಿನ ಅವರ ಸಲಹೆಯ ಶೂಲ ನಮ್ಮನ್ನು ಚುಚ್ಚುತ್ತಲೇ ಇತ್ತು.

ಈ ಸಲಹೆಯ ಚಟ ಒಂಥರಾ ಅಂಟುಜಾಡ್ಯವಿದ್ದಂತೆ, ಸಲಹೆಯ ಶೂಲೆಗೆ ತುತ್ತಾದವರು ತಮಗರಿವಿಲ್ಲದಂತೆ ಅದನ್ನು ಅಳವಡಿಸಿಕೊಂಡು, ಇನ್ನೊಬ್ಬರಿಗೆ ದಾಟಿಸುತ್ತಾರೆ. ಆಫೀಸಿನಲ್ಲಿ ಸದಾ ಮೇಲಧಿಕಾರಿಯ (ಬೇಕಾ)ಬಿಟ್ಟಿ ಸಲಹೆಗಳಿಗೆ ತಲೆ ಒಡ್ಡುವ ಪತಿ, ಮನೆಗೆ ಬರುತ್ತಿದ್ದಂತೆ ಅದೇ ಮಾದರಿಯಲ್ಲಿ ‘ಈ ಕೆಲಸ ಹೀಂಗಿದ್ರೆ ಸರಿ ಇರ್ತು ನೋಡು, ಹಾಂಗಲ್ಲ’ ಎಂದು ನನ್ನ ಮೇಲೆರಗುವ ಸಲಹಾಶೂಲ. ಆಮೇಲೆ ತಾವೂ ಮನೆಯಲ್ಲಿ ‘ಬಾಸ್’ ಆಗುತ್ತಿರುವುದು ಲಕ್ಷ್ಯಕ್ಕೆ ಬರುತ್ತಿದ್ದಂತೆ ‘ಥೋ ಮಾರಾಯ್ತಿ...’ ಎಂದು ನಕ್ಕು ಹಗುರಾಗುವುದು. ಆ ಸಲಹೆಗಳೆಲ್ಲ ನನ್ನ ಕಿವಿಯಿಂದ ತಲೆಯೆಂಬೋ ಸುರಂಗ ಹೊಕ್ಕು, ಬಾಯಿ ಮೂಲಕ ಮಗನ ತಲುಪುವುದು ಸರಣಿ ಪ್ರಕ್ರಿಯೆಯ ಮುಂದಿನ ಹಂತ.

ಸಲಹಾ ಚಟ ನಮ್ಮೂರು, ನಮ್ಮ ಜನರಿಗಷ್ಟೇ ಅಂಟಿಕೊಂಡಿಲ್ಲ, ಇದರದ್ದು ಗ್ಲೋಬಲ್ ಔಟ್‍ರೀಚ್. ಸಿಂಗಪುರಕ್ಕೆ ಬಂದ ಹೊಸದರಲ್ಲಿ ಮಗನೊಂದಿಗೆ ಬಸ್ಸಿನಲ್ಲಿ ಪಯಣಿಸುತ್ತಿದ್ದೆ. ಪಕ್ಕದಲ್ಲಿದ್ದ ಸಿಂಗಪುರಿಯನ್ ಅಜ್ಜಿ, ‘ಒನ್ ಚೈಲ್ಡ್?’ ಎಂದು ಪ್ರಶ್ನಿಸಿದಳು. ಹೌದೆಂದೆ. ‘ಒನ್ ಚೈಲ್ಡ್, ನೋ ಗೂ...(ಡ್)’ ಎಂದಳು. ಅಪರಿಚಿತೆ ಅಜ್ಜಿಯ ಮಾತಿಗೆ ಏನೆನ್ನಬೇಕು ತಿಳಿಯದೇ ಸುಮ್ಮನೆ ನಗೆ ಬೀರಿದೆ. ‘ಬಿಕಾಸ್ ಸಿಂಗಲ್ ಚೈಲ್ಡಾ... ಗೋ ಅಬ್ರಾಡ್, ಗೋ ಅವೇ! ಮೋರ್ ಚಿಲ್ಡ್ರನ್ನಾ... ಸ್ಟೇ ಕ್ಲೋಸ್, ಟೇಕ್ ಕೇರ್’ ಆಕೆ ಮುಂದುವರೆಸಿದಳು. ವಿಭಕ್ತಿ ಪ್ರತ್ಯಯಗಳನ್ನೆಲ್ಲ ಉಳಿತಾಯ ಮಾಡಿ ಕರ್ತೃ, ಕರ್ಮ ಮಾತ್ರ ಬಳಸುವ ಪಕ್ಕಾ ಸಿಂಗ್ಲೀಷ್ ಅನ್ನು ನಿಧಾನಕ್ಕೆ ಜೀರ್ಣಿಸಿಕೊಳ್ಳುವಷ್ಟರಲ್ಲಿ ಅಜ್ಜಿಯ ಸಲಹೆ ತೂರಿ ಬಂತು, ‘ಹ್ಯಾವ್ ಮೋರ್ ಚಿಲ್ಡ್ರನ್ ಲಾ!... ಗೂ...(ಡ್) ಫಾರ್ ಯೂ’.

ಸುಪರ್ ಮಾರ್ಕೆಟಿನಲ್ಲಿ ಹಣ್ಣು, ತರಕಾರಿ ತೂಕ ಮಾಡಿಕೊಡುವ ಅಜ್ಜಿ, ‘ದಿ(ಸ್) ವನ್ನಾ.., ವೆರಿ ಬಿತ್ತ...(ರ್)... ಬ(ಟ್) ಗುಡ್ಡಾ!... ದ್ಯಾ(ಟ್) ವನ್ನಾ..., ಟೂ ಸೌರ್... ನಾ(ಟ್) ತೇಸ್ತೀ ಲಾ...!’ ಎನ್ನುತ್ತ ತೂಕದ ಚೀಟಿಯ ಜೊತೆಗೆ ಸಲಹೆಯನ್ನೂ ಅಂಟಿಸಿಕೊಡುತ್ತಾಳೆ. ಸೈಕಲ್ ಸವಾರಿಗೆ ಹೋದಾಗ ಸೀಟಿನ ಎತ್ತರ/ತಗ್ಗು ಬಗ್ಗೆ ಉದ್ದುದ್ದ ಉಪದೇಶಿಸುವ ಸಹಸೈಕಲಿಗ ಹಿರಿಯರು, ಟ್ಯಾಕ್ಸಿಯಲ್ಲಿ ಕುಳಿತಾಗ ‘ಸಿಂಗಪೂರ್ ವೆರಿ ಗೂ...(ಡ್), ಟೇಕ್ ಪಿಆರ್ (ಶಾಶ್ವತ ನಿವಾಸಿ ಸ್ಥಾನಮಾನ) ಲಾ!’ ಎಂಬ ಕೆಲ ಚಾಲಕರು... ಎಲ್ಲರದ್ದೂ ಇದೇ ಕಥೆ!
ಹಾಗಂತ ಎಲ್ಲ ಸಲಹೆಗಳೂ ಬಿಟ್ಟಿ–ಬೇಕಾಬಿಟ್ಟಿ ಎಂದೇನಲ್ಲ. ಇದಕ್ಕೂ ಇತಿಹಾಸ ಇದೆ, ಘನತೆ-ಮಾನ್ಯತೆ ಇದೆ.

ದೇವ-ದಾನವರಿಗೆ ರಾಜಗುರುಗಳಾಗಿದ್ದ ಬೃಹಸ್ಪತಿ, ಶುಕ್ರಾಚಾರ್ಯರು, ವಸಿಷ್ಠ, ನಾರದರು ಇವರೆಲ್ಲರ ಸಲಹೆಗಳಿಗೆ ಮಾನ್ಯತೆ ನೀಡುತ್ತಿದ್ದ ಅಪಾರ ಶಿಷ್ಯವರ್ಗವಿತ್ತು. ಕೌರವರಲ್ಲಿ ವಿವೇಚನೆ ತುಂಬಲೆತ್ನಿಸಿದ ವಿದುರ, ಚಂದ್ರಗುಪ್ತ ಮೌರ್ಯನ ಏಳಿಗೆಯಲ್ಲಿ ಮಹತ್ತರ ಪಾಲು ವಹಿಸಿದ ಚಾಣಕ್ಯ– ಇವರೆಲ್ಲ ಸಲಹೆಗಾರರದ ಹುದ್ದೆಗೆ ಘನತೆ ತುಂಬಿದವರು. ಪುರಾಣ, ಚರಿತ್ರೆಯ ಉದ್ದಕ್ಕೂ ಆಡಳಿತಗಾರರ ಮೆದುಳಾಗಿ ಮೇಧಾವಿ ಸಲಹಾಗಾರರಿದ್ದರು. ಬೀರಬಲ್, ಬೆಂಜಮಿನ್ ಫ್ರಾಂಕ್ಲಿನ್, ಬಿಸ್ಮಾರ್ಕ್ ಅವರಂಥ ಸಮಾಜಮುಖಿ ಸಲಹೆಗಾರರಿದ್ದಂತೆಯೇ ಶಕುನಿ, ಮಂಥರೆ, ಮಾಕಿಯಾವೆಲ್ಲಿ, ರಾಸ್ಪುಟಿನ್‍ರಂಥ ವಿವಾದಾತ್ಮಕ ವ್ಯಕ್ತಿಗಳೂ ಇದ್ದರು.

ಸಲಹೆ ಪಡೆದವರಲ್ಲಿ ಹಂಸಕ್ಷೀರ ನ್ಯಾಯ ಮಾಡಲು ತಿಳಿದವರು ಗೆದ್ದರು, ಉಳಿದವರು ಬಿದ್ದರು. ಇವತ್ತು ವಾಣಿಜ್ಯ, ಭದ್ರತೆ, ಕಾನೂನು, ಶಿಕ್ಷಣ... ಹೀಗೆ ಸಮಾಜದ ಎಲ್ಲ ರಂಗಗಳಲ್ಲಿ, ಸರ್ಕಾರದ ಎಲ್ಲ ಅಂಗಗಳಲ್ಲಿ ಸಲಹೆಗಾರರ ಪ್ರತಿಷ್ಠಿತ ಹುದ್ದೆಗಳಿವೆ. ಆ ಹುದ್ದೆಗಳನ್ನು ತಲುಪಲು ಸೂಕ್ತ ಶಿಕ್ಷಣ, ಅನುಭವದ ಅಗತ್ಯ ಇದೆ. ಅವರ ಸಲಹೆಗಳೂ ಬಿಟ್ಟಿಯಾಗಿ ಸಿಗುವಂಥದ್ದಲ್ಲ– ಕೈತುಂಬ ಸಂಬಳ, ಗೌರವಧನ ಅವುಗಳಿಗುಂಟು. ಸಿನಿಮಾ ಡೈಲಾಗ್ ಒಂದನ್ನು ಅನುಸರಿಸಿ ಹೇಳಬೇಕೆಂದರೆ: ಈ ಜಗತ್ತಿನಲ್ಲಿ ಎರಡು ತರಹದ ಸಲಹೆಗಳು ಇರುತ್ತವೆ. ಒಂದು ಕಸುವಾಗಿದ್ದು ಕಾಸು ಗಳಿಸುವಂಥವು; ಇನ್ನೊಂದು ಬಿಟ್ಟಿ- ಗಿರಗಿಟ್ಟಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.