ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಡಿಗೆ ನಮಸ್ಕಾರ’ ನೂರರ ಸಂಭ್ರಮ

Last Updated 13 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕರ್ನಾಟಕದ ಸಾಂಸ್ಕೃತಿಕ ಲೋಕದ ಅಂತರ್ಜಲವನ್ನು ಸಂಪನ್ನಗೊಳಿಸುತ್ತಿರುವ ಒಂದು ಕಿರುತೊರೆಯಂತೆ ಕಾರ್ಯ ನಿರ್ವಹಿಸುತ್ತಿರುವ ಕಾಂತಾವರದ ಕನ್ನಡ ಸಂಘ ಈಗ ಮತ್ತೊಂದು ಸಂಭ್ರಮದಲ್ಲಿದೆ. ಕನ್ನಡ ಸಂಘದ ಮಹತ್ವದ ಪ್ರಕಟಣೆಯಾದ ‘ನಾಡಿಗೆ ನಮಸ್ಕಾರ’ ಮಾಲಿಕೆ ಈಗ ನೂರರ ಸಂಭ್ರಮದಲ್ಲಿದೆ.

ಅಂದಹಾಗೆ, ಒಂದು ಪ್ರದೇಶದ ಚೌಕಟ್ಟಿನಲ್ಲಿ ಆ ಪ್ರದೇಶದ ಮಹತ್ವದ ವ್ಯಕ್ತಿತ್ವಗಳನ್ನು ಪರಿಚಯಿಸುವ, ತನ್ಮೂಲಕ ನಾಡಿನ ಸಾಂಸ್ಕೃತಿಕ ಚರಿತ್ರೆಯನ್ನು ಹೊಸದಾಗಿ ಅರ್ಥವಿಸುವ ಪ್ರಯತ್ನ ಈ ‘ನಾಡಿಗೆ ನಮಸ್ಕಾರ’ ಪ್ರಯೋಗದ್ದು. ಕಾಂತಾವರ ಕನ್ನಡ ಸಂಘಕ್ಕೆ 30 ತುಂಬಿದ ವರ್ಷವೇ ‘ಸುವರ್ಣ ಕರ್ನಾಟಕ’ ಸಂದರ್ಭವೂ ಆಗಿತ್ತು. ಈ ಎರಡನ್ನು ನೆಪವಾಗಿಟ್ಟುಕೊಂಡು ನಾಡೇ ತಲೆದೂಗುವಂತಹ ಸಾಧನೆ ಮಾಡಿದ ವ್ಯಕ್ತಿತ್ವಗಳನ್ನು ಪುಟ್ಟ ಹೊತ್ತಗೆ ರೂಪದಲ್ಲಿ ಪ್ರಕಟಿಸುವ ‘ನಾಡಿಗೆ ನಮಸ್ಕಾರ’ ಯೋಜನೆಯನ್ನು ಸಂಘದ ಅಧ್ಯಕ್ಷರಾದ ಡಾ. ನಾ. ಮೊಗಸಾಲೆ ಆರಂಭಿಸಿದರು.

ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳನ್ನು ಒಂದು ಪ್ರಾದೇಶಿಕ ಮಿತಿಯಾಗಿಟ್ಟುಕೊಂಡು ಈ ಮಾಲಿಕೆ ಆರಂಭಗೊಂಡಿತು. ಶುರುವಿಗೆ 30 ಕೃತಿಗಳ ಗುರಿ ಹೊಂದಿದ್ದ ಈ ಯೋಜನೆ ಇದೀಗ ನೂರನ್ನು ತಲುಪಿದೆ. ಮಹನೀಯರ ಪರಿಚಯ ಪುಸ್ತಿಕೆಗಳನ್ನು ಹೊರತರುವ ಮಾದರಿ ಹೊಸತೇನಲ್ಲ. ಆದರೆ ಈ ಮಾಲಿಕೆಯ ಕೃತಿಗಳು ಪರಿಚಯಗಳಲ್ಲ. ಬದಲಾಗಿ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿಂದ ಆಯಾಯ ವ್ಯಕ್ತಿಗಳ ಸಾಧನೆಯೇನು ಎಂಬುದನ್ನು ಗುರುತಿಸುವುದು ಇಲ್ಲಿನ ಪ್ರಮುಖ ಉದ್ದೇಶ.

ಈ ಬಗೆಯ ಉದ್ದಿಶ್ಯವನ್ನಿಟ್ಟುಕೊಂಡು ಒಂದು ಪ್ರಾದೇಶಿಕ ವೃತ್ತ ಹಾಕಿಕೊಂಡು ವ್ಯಕ್ತಿಪ್ರಭೆಯ ಸಾಂಸ್ಕೃತಿಕ ಚರಿತ್ರೆಯನ್ನು ರೂಪಿಸುವ ಈ ಮಾದರಿ ಕನ್ನಡದಲ್ಲೇ ಮೊದಲನೆಯದು ಅನ್ನಬೇಕು. ಕಾಂತಾವರ ಕನ್ನಡ ಸಂಘ ಆರಂಭವಾದ 1976ರಲ್ಲಿಯೇ ದಕ್ಷಿಣ ಕನ್ನಡ ಕಾವ್ಯ 1970-76 ಎಂಬ ಕೃತಿಯನ್ನು ಪ್ರಕಟಿಸಿ ‘ಒಂದು ಜಿಲ್ಲೆಯೊಳಗಿನ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪರಂಪರೆಯ ಅಧ್ಯಯನ ಮತ್ತು ಅಂಥವುಗಳ ಪ್ರಕಾಶನದಿಂದ ನಾಡನ್ನು ಅರಿಯುವ ಮತ್ತು ಎಚ್ಚರಿಸುವ’ ಭಾವ ತನ್ನದೆನ್ನುವುದನ್ನು ಪ್ರಕಟಿಸಿತ್ತು.

ಬಳಿಕ ದಕ್ಷಿಣ ಕನ್ನಡದ ಶತಮಾನದ ಕಾವ್ಯ, ದಕ್ಷಿಣ ಕನ್ನಡ ಜಿಲ್ಲೆಯ ಶತಮಾನದ ಸಣ್ಣಕಥೆ ಮೊದಲಾದ ಬೃಹತ್ ಸಂಪುಟಗಳನ್ನು ಪ್ರಕಟಿಸಿದೆ. ತೀರಾ ಹಳ್ಳಿಯಾದ ಕಾಂತಾವರದಲ್ಲಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಭಾಗವಹಿಸಿದ ಕಾಂತಾವರ ಬಾರಾಡಿಬೀಡು (ಕೆ.ಬಿ) ಜಿನರಾಜ ಹೆಗ್ಡೆಯವರ ನೆನಪಿನಲ್ಲಿ ಹರಸಾಹಸಪಟ್ಟು ನಿರ್ಮಿಸಿದ ‘ಕನ್ನಡ ಭವನ’ದ ನಿರ್ಮಾಣವೂ ಈ ಸ್ಥಳೀಯ ಸಾಂಸ್ಕೃತಿಕ ಮಹತ್ವವನ್ನು ಬೆಳಕಿಗೆ ತರುವ ಉದ್ದೇಶದ ದ್ಯೋತಕವೇ ಆಗಿದೆ.

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ಹಲವು ಕಾರಣಗಳಿಂದ ಮಹತ್ವದ ನೆಲ. ಪ್ರಾಸತ್ಯಾಗ ಮಾಡಿ ಕನ್ನಡ ಕಾವ್ಯಲೋಕದಲ್ಲಿ ಕ್ರಾಂತಿಕಾರಿ ಹೆಜ್ಜೆಯಿಟ್ಟ ಮಂಜೇಶ್ವರ ಗೋವಿಂದ ಪೈಗಳು ನವೋದಯ ಕಾವ್ಯ ಪರಂಪರೆಗೆ ಮುನ್ನುಡಿಯನ್ನು ತಮ್ಮ ‘ಗಿಳಿವಿಂಡು’ ಕವಿತೆಗಳ ಮೂಲಕ ಮಾಡಿದ್ದು ನಾಡಿನ ಗಮನ ಸೆಳೆದಿಲ್ಲ.

‘ಚಂದಮಾಮ’ದ ಮೂಲಕ ಒಂದು ತಲೆಮಾರಿನ ಮಕ್ಕಳ ಭಾವಕೋಶವನ್ನು ನಿರ್ಮಿಸಿದ ಸಂಪಾದಕರಾದ ಸುರತ್ಕಲ್‌ನ

ನವಗಿರಿನಂದರು, ತುಳು ಭಾಷಾ ಸಂಶೋಧನೆಗೆ ಮಹತ್ವದ ಕೊಡುಗೆ ನೀಡಿದ ಯು.ಪಿ.ಉಪಾಧ್ಯಾಯರು, ಕುವೆಂಪು ಅವರಿಂದಲೇ ಮುಕ್ತಕಂಠದ ಹೊಗಳಿಕೆಗೆ ಪಾತ್ರರಾದ  ಕನ್ನಡದಲ್ಲಿ ಬೇಟೆ ಸಾಹಿತ್ಯವನ್ನು ಜನಪ್ರಿಯಗೊಳಿಸಿದ ಕೆದಂಬಾಡಿ ಜತ್ತಪ ರೈ, ಪುಸ್ತಕ ಪರಿಚಾರಿಕೆಯ ಮೂಲಕ ನಾಡಿಗೆ ಮಾದರಿಯಾದ ಬೋಳಂತಕೋಡಿ ಈಶ್ವರ ಭಟ್ಟ, ಸಾಂಸ್ಕೃತಿಕ ರಾಯಭಾರಿ ಕು.ಶಿ ಹರಿದಾಸ ಭಟ್, ಸಾಮಾಜಿಕ ಪ್ರಗತಿಪರ ಚಿಂತಕ ಬಿ.ವಿ ಕಕ್ಕಿಲ್ಲಾಯ ಹೀಗೆ ಕನ್ನಡ ನಾಡು ನುಡಿ ಸಂಸ್ಕೃತಿಗೆ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದ ಅನೇಕ ಮಹನೀಯರ ಕುರಿತು ಪುಸ್ತಕಗಳು ಹೊರಬಂದಿವೆ.

ಈ ಕೃತಿಗಳಲ್ಲಿ ಸಾಹಿತ್ಯದ ಜತೆಗೆ ಚಾರಿತ್ರಿಕ, ಸಾಮಾಜಿಕ, ಪರಿಸರ ಸಂಬಂಧಿಯಾದ ಅಪರೂಪದ ಹಲವು ಸಂಗತಿಗಳು ದಾಖಲಾಗಿವೆ ಉದಾಹರಣೆಗೆ ‘ಸಾಧನೆಯ ಬೆಳಕು ನಾವರಿಯದ ದೇರಾಜೆ’ ಕೃತಿಯಲ್ಲಿ ಒಂದು ಪ್ರಸಂಗ ಇದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭ. ದೇರಾಜೆ ಸೀತಾರಾಮಯ್ಯನವರು ಆಗ ಊರಿನ ಪಟೇಲರಾಗಿದ್ದವರು. ದಲಿತ ಕುಟುಂಬದ ಒಬ್ಬ ವ್ಯಕ್ತಿ ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದ. ಒಂದು ದಿನ ಪೊಲೀಸರು ಅವನನ್ನು ಬಂಧಿಸಲು ಬಂದಿದ್ದರು.

ಆಗ ಏನು ಮಾಡುವುದೆಂದು ತೋಚದೆ ದೇರಾಜೆಯವರ ಹತ್ತಿರ ಬರುತ್ತಾನೆ. ದೇರಾಜೆಯವರು ತನ್ನ ಮನೆಯ ದೇವರ ಕೋಣೆಯ ಒಳಗಡೆ ಈ ದಲಿತನನ್ನು ಇರಿಸಿ ರಕ್ಷಿಸುತ್ತಾರೆ. ಪೊಲೀಸರು ದೇವರ ಕೋಣೆಯನ್ನು ಹುಡುಕಲಾರರು ಎಂಬ ಕಾರಣಕ್ಕಾಗಿ ಹೀಗೆ ಮಾಡಿದ್ದರು. ಸ್ವಾತಂತ್ರ್ಯಪೂರ್ವ ಸಂದರ್ಭದಲ್ಲಿಯೇ ಇಂಥ ದಿಟ್ಟತನವನ್ನು ದೇರಾಜೆಯವರು ತೋರಿದ್ದು ಒಂದು ಚಾರಿತ್ರಿಕ ಸಂಗತಿಯೇ.

ಮೀನು ಸಾಕಣೆ, ಜೇನು ಸಾಕಣೆಯನ್ನು ವಿಜ್ಞಾನವೆಂದು ಆ ಕಾಲದಲ್ಲಿಯೇ ಪರಿಗಣಿಸಿದ್ದ ಪೈಲೂರು ಲಕ್ಷ್ಮೀನಾರಾಯಣರಾಯರು, ಕೃಷಿ ಸಾಧಕ ಚೇರ್ಕಾಡಿ ರಾಮಚಂದ್ರರಾಯರು, ಕರ್ನಾಟಕದಲ್ಲಿಯೇ  ಮೊದಲಬಾರಿಗೆ ಸಂಪೂರ್ಣ ಟೆಲಿಕಾಂ ಜಿಲ್ಲೆಯೆಂಬ ಹೆಗ್ಗಳಿಕೆಗೆ ದಕ್ಷಿಣಕನ್ನಡವನ್ನು ಪಾತ್ರವಾಗುವಂತೆ ಮಾಡಿದ ಕಜಂಪಾಡಿ ರಾಮ, ತನ್ನ ವರಮಾನದ ಒಂದು ಭಾಗವನ್ನು ಸರಕಾರಿ ಶಾಲಾಭಿವೃದ್ಧಿಗೆ ಮುಡಿಪಿಟ್ಟ ಆದರ್ಶ ಮೆರೆದ ಹರೇಕಳ ಹಾಜಬ್ಬ ಹೀಗೆ ವಿವಿಧ ಸ್ಥರದ, ಕ್ಷೇತ್ರಗಳ ಸಾಧಕರನ್ನು ಪರಿಚಯಿಸಿದ ಕೀರ್ತಿ ಈ ಮಾಲಿಕೆಯದ್ದು.

ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನಿಟ್ಟುಕೊಂಡು, ವಿವಿಧ ಕ್ಷೇತ್ರದ ಸಾಧನೆಗಳನ್ನು ಗುರುತಿಸಿಕೊಂಡು ಅವೆಲ್ಲವೂ ಸ್ಥಳೀಯ ಸಾಂಸ್ಕೃತಿಕ ಮನಸ್ಸನ್ನು ಅರ್ಥಮಾಡಿಕೊಳ್ಳುವ ಪ್ರಯತ್ನದ ಭಾಗವಾಗಬೇಕೆಂಬ ದೃಷ್ಟಿಕೋನವನ್ನು ಹೊಂದಿರುವುದರಿಂದ ಇಲ್ಲಿನ ಕೃತಿಗಳು ಮಹತ್ವದ್ದೆನಿಸಿವೆ. ಇಂತಹ ಕೃತಿಗಳನ್ನು ಬರೆಯುವವರನ್ನು ಆಯ್ಕೆ ಮಾಡುವಾಗಲೂ ಗುಣಮಟ್ಟದ ಕಾಳಜಿಯನ್ನು ಹೊಂದಿದ್ದು ಈ ಮಾಲಿಕೆಯ ಮೌಲಿಕತೆಯನ್ನು ಹೆಚ್ಚಿಸಿದೆ.

ಶ್ರೀನಿವಾಸ ಹಾವನೂರು, ಶೇಷನಾರಾಯಣ, ಕೆ. ಚಿನ್ನಪ್ಪಗೌಡ, ನರೇಂದ್ರ ರೈ ದೇರ್ಲ, ವಿ.ಗ. ನಾಯಕ, ನಿತ್ಯಾನಂದ ಬಿ. ಶೆಟ್ಟಿ, ಜನಾರ್ದನ ಭಟ್, ಸಬಿಹಾ ಭೂಮಿಗೌಡ, ಡಾ. ವಸಂತಕುಮಾರ್ ಪೆರ್ಲ, ಡಾ.ವಾಮನ ನಂದಾವರ, ಡಾ.ಗಣನಾಥ ಎಕ್ಕಾರು, ಕಬ್ಬಿನಾಲೆ ವಸಂತ ಭಾರಧ್ವಾಜ್, ಡಾ. ಎಸ್.ಪಿ. ಪದ್ಮಪ್ರಸಾದ್, ಬಿ.ಎಂ.ರೋಹಿಣಿ, ಮುಳಿಯ ರಾಘವಯ್ಯ, ಬೆಳಗೋಡು ರಮೇಶ್ ಭಟ್, ಜಾನಕಿ ಬ್ರಹ್ಮಾವರ, ನಾ. ದಾಮೋದರ ಶೆಟ್ಟಿ, ಡಾ. ಪಾದೆಕಲ್ಲು ವಿಷ್ಣುಭಟ್, ಡಾ. ವರದಾ ಶ್ರೀನಿವಾಸ  ಮೊದಲಾದ ಪ್ರಸಿದ್ಧರು ಈ ಮಾಲಿಕೆಯಲ್ಲಿ ಕೃತಿರಚನೆಯನ್ನು ಮಾಡಿದ್ದಾರೆ. ಕಲ್ಲೂರು ನಾಗೇಶರ ಮುದ್ರಣ ವಿನ್ಯಾಸ ಕೃತಿಗೆ ವಿಶೇಷ ಮೆರಗನ್ನು ನೀಡಿದೆ.

ಈಗಾಗಲೇ ‘ಮುದ್ದಣ ಕಾವ್ಯ ಪ್ರಶಸ್ತಿ’, ‘ಸಂಸ್ಕೃತಿ ಸಂವರ್ಧನ’ ಸರಣಿಯ ತಿಂಗಳ ಉಪನ್ಯಾಸ ಕಾರ್ಯಕ್ರಮ, ಅಲ್ಲಮ ಪ್ರಭು ಪೀಠ, ಅಲ್ಲಮ ಕುರಿತ ಚಿಂತನ ಉಪನ್ಯಾಸ ಮಾಲಿಕೆ, ಹಾಗೂ ಮೌಲಿಕ ಕೃತಿಗಳ ಮೂಲಕ ಕನ್ನಡ ಸಂಸ್ಕೃತಿ ಪರಿಚಾರಿಕೆಯಲ್ಲಿ ತೊಡಗಿಕೊಂಡಿರುವ ಕಾಂತಾವರ ಕನ್ನಡ ಸಂಘ ನಾ ಮೊಗಸಾಲೆಯವರ ನೇತೃತ್ವದಲ್ಲಿ ಅಪರೂಪದ ಸಾಧನೆಯನ್ನು ಮಾಡಿದೆ. ಅವೆಲ್ಲಕ್ಕೆ ಕಿರೀಟವಿಟ್ಟಂತೆ ಈ ‘ನಾಡಿಗೆ ನಮಸ್ಕಾರ’ ಮಾಲಿಕೆ ರೂಪುಗೊಂಡಿದೆ.

ಇಂದು (ಸೆ.14) ಮಾಲಿಕೆಯ ಹದಿಮೂರು ಕೃತಿಗಳು ಕಾಂತಾವರದಲ್ಲಿ ಬಿಡುಗಡೆಗೊಳ್ಳಲಿದ್ದು, ಇದರೊಂದಿಗೆ ಮಾಲಿಕೆ ನೂರು ಪುಸ್ತಕಗಳನ್ನು ಹೊಂದಿದಂತಾಗುತ್ತದೆ. ಇದೇ ಸಂದರ್ಭದಲ್ಲಿ ‘ನಾಡಿಗೆ ನಮಸ್ಕಾರಕ್ಕೆ ನೂರ ಒಂದು ನಮಸ್ಕಾರ’ ಎಂಬ ಸಮಗ್ರ ಸಂಕಲಿತ ಕೃತಿಯೂ ಬಿಡುಗಡೆಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT