ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರತೀಯಮಾನ’ ಮಾರ್ಗಿಯ ನಿರ್ಗಮನ

Last Updated 10 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

‘ಪ್ರತೀಯಮಾನ’ ಎಂಬ ಪದ ಆನಂದವರ್ಧನನ ‘ಧ್ವನ್ಯಾಲೋಕ’ದ್ದು. ‘ಹೊಳಹು’ ಎನ್ನುವ ಅರ್ಥದಲ್ಲಿ ಇದು ಬಳಕೆಯಾಗಿದೆ ಎಂದು ತೀ.ನಂ.ಶ್ರೀ ವಿವರಿಸುತ್ತಾರೆ. ಇದಕ್ಕೆ ‘ಕಾಣುವ’, ‘ತೋರುವ’ ಎಂಬ ಕೋಶಾರ್ಥಗಳೂ ಇವೆ. ‘ಅಭಿಗಮನ’ ಎಂದರೆ ಎದುರಾಗಿ ಹೋಗುವುದು ಎಂದರ್ಥ.

ಭಾರತೀಯ ಮತ್ತು ಪಾಶ್ಚಾತ್ಯ ತತ್ವಶಾಸ್ತ್ರ ಹಾಗೂ ಕಾವ್ಯಶಾಸ್ತ್ರಗಳ ಅಭಿಗಮನದಲ್ಲಿ ಅಪರೂಪದ ‘ಪ್ರತೀಯಮಾನ’ವನ್ನು ಎದ್ದುಕಾಣಿಸಿದ ಅಗ್ಗಳಿಕೆ ಹಿರಿಯ ವಿದ್ವಾಂಸ ಡಾ. ಸುರೇಂದ್ರನಾಥ ಬಿ. ಮಿಣಜಗಿ ಅವರದು. ಅತ್ಯಂತ ಸೂಕ್ಷ್ಮ ಸಂವೇದನೆಯ ಮಿಣಜಗಿ ಇದೇ ಅ.1ರಂದು ತಮ್ಮ ಎಂಬತ್ತೊಂಬತ್ತರ ಇಳಿವಯಸ್ಸಿನಲ್ಲಿ ನಿಧನರಾದರು. ಅವರ ನಿರ್ಗಮನದೊಂದಿಗೆ ಕನ್ನಡದಲ್ಲಿ ಅಪರೂಪದ ವಿದ್ವತ್ತಿನ ಪರಂಪರೆಯ ಕೊಂಡಿಯೊಂದು ನೇಪಥ್ಯಕ್ಕೆ ಸರಿಯಿತು. ಮುಂಜಾನೆ ಪುಸ್ತಕವೊಂದರ ಓದಿನ ಕೆಲಸದಲ್ಲೇ ಅವರು ತಮ್ಮ ಸಾವಿನ ಅಭಿಗಮನವನ್ನೂ ಸಾಧಿಸಿದರು.

ಆಳವಾದ ಅಧ್ಯಯನ, ಪಾಂಡಿತ್ಯ, ವಿಸ್ತಾರವಾದ ಹಾಗೂ ಸ್ವತಂತ್ರವಾದ ಚಿಂತನೆ ಹಾಗೂ ಬೆರಗುಗೊಳಿಸುವ ಸ್ಮರಣ ಶಕ್ತಿ ಅವರ ವ್ಯಕ್ತಿತ್ವದ ವಿಶೇಷಗಳು. ಪಾಶ್ಚಾತ್ಯ ಹಾಗೂ ಭಾರತೀಯ ದರ್ಶನಗಳ ಕುರಿತು ಈ ವಯಸ್ಸಿನಲ್ಲೂ ಅವರ ಮನಸ್ಸು ಹೊಸದೊಂದು ಕೃತಿ ರಚನೆಗೆ ತಯಾರಿ ನಡೆಸಿತ್ತು. ದೇವರ ಪರಿಕಲ್ಪನೆ ಪೂರ್ವ ಹಾಗೂ ಪಶ್ಚಿಮದ ದರ್ಶನಗಳಲ್ಲಿ ಹೇಗೆ ಬೆಳೆದುಬಂದವು ಎಂಬುದರ ಬಗ್ಗೆ ಅವರ ಚಿಂತನ ಮಂಥನಗಳೂ ಸರೀಕರೊಂದಿಗಿನ ಸಂವಾದಗಳೂ ನಡೆಯುತ್ತಿದ್ದವು. ಈ ಕಾಲದ ಅನಿವಾರ್ಯಗಳಾದ ಪ್ರಸಿದ್ಧಿ–ಪ್ರಚಾರಗಳಿಂದ ಅವರು ದೂರ ಉಳಿದಿದ್ದರು. ತಾವು ಮಂಡಿಸುವ ವಿಚಾರಗಳ ಬಗ್ಗೆ ಆಳವಾದ ತಿಳಿವಳಿಕೆ, ಆತ್ಮವಿಶ್ವಾಸ ಇದ್ದೂ ಅನುಮಾನಗಳಿಗೆ, ಪ್ರಶ್ನೆಗಳಿಗೆ ಸದಾಸಿದ್ಧವಿದ್ದ ಅಪರೂಪದವರು ಅವರು. ‘ಪ್ರತೀಯಮಾನ’ ಎಂದರೆ Logical Revelation ಎಂಬ ಪರಿಕಲ್ಪನೆ ಮಂಡಿಸಿದವರು ಅವರೇ.

ಹಳಗನ್ನಡ – ಹೊಸಗನ್ನಡ ಸಾಹಿತ್ಯದ ಬಗ್ಗೆ ಆಳ ತಿಳಿವಳಿಕೆಯುಳ್ಳ ಮಿಣಜಗಿ ಅವರು, ಇಂಗ್ಲಿಷ್‌ ಸಾಹಿತ್ಯ ಪರಂಪರೆಯ ವಿವಿಧ ಧಾರೆಗಳನ್ನು ಹಾಗೂ ಸಂಸ್ಕೃತ – ಪ್ರಾಕೃತಗಳನ್ನು ತಲಸ್ಪರ್ಶಿಯಾಗಿ ಕಲಿತಿದ್ದರು. ಭಾರತೀಯ ಮತ್ತು ಪಾಶ್ಚಿಮಾತ್ಯ ದರ್ಶನ ಮತ್ತು ಸೌಂದರ್ಯ ಶಾಸ್ತ್ರಗಳಲ್ಲಿ ನುರಿತವರಾಗಿದ್ದರು. ಅವರು ತಮ್ಮ ‘ಸೃಜನಕ್ರಿಯೆ ಮತ್ತು ಸಂವೇದನೆ’ ಕೃತಿಯನ್ನು ತಮಗೆ ಕನ್ನಡ, ಇಂಗ್ಲಿಷ್‌, ಸಂಸ್ಕೃತ ಪಾಠ ಹೇಳಿದ ಮೇಷ್ಟ್ರವರ್ಗಕ್ಕೆ ಕೃತಜ್ಞತೆಯಿಂದ ಕೈಮುಗಿದು ಅರ್ಪಿಸಿದ್ದಾರೆ. ಅವರ ಎಲ್ಲಾ ಪುಸ್ತಕಗಳ ಲೇಖಕನ ಮಾತಿನ ಕೊನೆಗೆ– ‘ಅಭಿಪ್ರಾಯ, ಸಂಶಯ, ಸಂದಿಗ್ಧತೆಗಳಿಗಾಗಿ ಓದುಗರು ಲೇಖಕರನ್ನು ಸಂಪರ್ಕಿಸಬಹುದೆನ್ನುವ’ ಆಹ್ವಾನ, ಅವರ ಫೋನ್‌ ನಂಬರ್‌ – ವಿಳಾಸದೊಂದಗೆ ಇರುತ್ತಿತ್ತು.

ಮಿಣಜಗಿ ಅವರಿಗೆ ಬರೆಯುವ ಹಾಗೂ ಪ್ರಕಟಿಸುವ ವಿಚಾರಕ್ಕೆ ಅತೀವ ಸಂಕೋಚವಿತ್ತು. ಶಂಕರ ಮೊಕಾಶಿ ಹಾಗೂ ಕೀರ್ತಿನಾಥ ಕುರ್ತಕೋಟಿ ಅವರು ಮಿಣಜಗಿ ಅವರ ಪ್ರತಿಭಾವಂತ ಗೆಳೆಯರು. ಇವರ ನಡುವೆ ಸ್ವಲ್ಪ ಅಳುಕಿನಿಂದಲೇ ತಮ್ಮ ಬರವಣಿಗೆ ಆರಂಭಿಸಿದ ಮಿಣಜಗಿ, ಆ ಇಬ್ಬರ ಮಟ್ಟಕ್ಕೆ ತಾವು ಏರಲು ಶಕ್ಯವಾಗದೇನೋ ಎಂಬ ಶಂಕೆಯಿಂದಾಗಿ ಹೆಚ್ಚು ಬರೆಯಲು ಮನಸ್ಸು ಮಾಡಲಿಲ್ಲ. ಅಲ್ಲದೆ, ಯಾರಲ್ಲಿ ತಮಗೆ ಪ್ರೀತಿಯಿಲ್ಲವೋ ಅವರ ಬಗೆಗೆ ಬರೆಯದಿರಲು ನಿರ್ಧರಿಸಿದ್ದು ಹೆಚ್ಚಿಲ್ಲದ ಅವರ ಬರವಣಿಗೆಗೆ ಮುಖ್ಯ ಕಾರಣ. “Unless I like the author and the subject I don’t write’  ಎಂಬುದು ಅವರದೇ ಮಾತು (ಪ್ರತಿಭಾ ಸಂಪನ್ನರು - ಪು. 93).

ಮೊಕಾಶಿ ಮತ್ತು ಕುರ್ತಕೋಟಿ ಅವರಿಬ್ಬರಿಗಿಂತಲೂ ಪ್ರತಿಭಾವಂತರಾಗಿದ್ದ ಮಿಣಜಗಿ ಅವಕಾಶ ವಂಚಿತರೆಂಬುದು ಸಾಹಿತ್ಯ ವಲಯದ ಕೆಲವು ಹಿರಿಯರ ಖಾಸಗೀ ಅಭಿಮತ. ಅವರ ಮಾತು ನಿಜವೆನ್ನಿಸುವಷ್ಟು ಸಶಕ್ತವಾಗಿ ಮಿಣಜಗಿ ಅವರ ಬರವಣಿಗೆ ಇದೆ. ಒಂದು ಇಂಗ್ಲಿಷ್‌ ಹಾಗೂ ನಾಲ್ಕು ಕನ್ನಡದ ಕೃತಿಗಳಲ್ಲಿ ಅವರ ಬರವಣಿಗೆಯ ವಿಸ್ತಾರವಿದೆ.

‘ಮನ್ವಂತರ’ ಎಂಬ ವಿಷಯ ಕೇಂದ್ರಿತ ಸಾಹಿತ್ಯ ಪತ್ರಿಕೆ ‘ಮನೋಹರ ಗ್ರಂಥಮಾಲೆ’ ಈ ಹಿಂದೆ ನಡೆಸಿದ ಸಾಹಿತ್ಯದ ಪ್ರಯೋಗಗಳಲ್ಲಿ ವಿಶಿಷ್ಟವಾದದ್ದು. ವರ್ಷಕ್ಕೆ ಒಂದು ಸಂಚಿಕೆ, ಒಂದು ವಿಷಯ ಕುರಿತು ಆಳವಾದ ಅಧ್ಯಯನ ನಡೆಸುವ ವಿದ್ವಾಂಸರೊಬ್ಬರು ಬರೆಯುತ್ತಿದ್ದರು. ಆ ಮಾಲೆಯ ಮೂರನೇ ಸಂಪುಟವನ್ನು 1964ರಲ್ಲಿ ಮಿಣಜಗಿ ಅವರು ರಚಿಸಿದರು.

‘ಎಲಿಯೆಟ್‌ ಕವಿಯ ವಿಮರ್ಶೆಯ ವಿಚಾರಗಳು’ ಎಂಬ ಕೃತಿ ಮೈದಳೆಯಿತು. ಆ ಕಾಲಕ್ಕೆ ಅದೊಂದು ಅಪರೂಪದ ಕೃತಿ. ಎಲಿಯಟ್‌ನ ಕೃತಿಗಳು – ವಿಚಾರಗಳು ಕನ್ನಡಕ್ಕೆ ತೆರೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ, ಮಿಣಜಗಿ ಅವರ ಕೃತಿ ಎಲಿಯಟ್‌ನ ವಿಚಾರಗಳ ಸಂಗ್ರಹವಾಗದೆ ಅದನ್ನು  ಅರಗಿಸಿಕೊಂಡ ವಿದ್ವತ್‌ ವಿಮರ್ಶೆಯಾಗಿತ್ತು. 2010 ರಲ್ಲಿ ಅದೇ ಸಂಚಿಕೆ ಮತ್ತೆ ಪುಸ್ತಕವಾಗಿ ಮುದ್ರಿತಗೊಂಡಿದೆ. ಈ ಕೃತಿಯಲ್ಲಿ ಅವರು ಬಳಸಿದ ‘ಅನಾಥ ಪ್ರಜ್ಞೆ’ ಎಂಬ ನುಡಿಗಟ್ಟು ವಿಮರ್ಶಾ ವಲಯದಲ್ಲಿ ಬಹಳವಾಗಿ ಚಾಲ್ತಿಗೆ ಬಂದು ಬಳಕೆಗೊಂಡಿತು.

1978ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಟಿ.ಎಸ್‌. ಎಲಿಯಟ್‌ ಕುರಿತಾದ ಮತ್ತೊಂದು ವಿಭಿನ್ನ ಕೃತಿ ಪ್ರಕಟಗೊಂಡಿತು. ‘ಟಿ.ಎಸ್‌. ಎಲಿಯಟ್‌ ಕವಿ ಹಾಗೂ ನಾಟಕಕಾರ’ ಮೊದಲಿನದಕ್ಕಿಂತಲೂ ಭಿನ್ನವಾದ ಎಲಿಯಟ್‌ನ ಸಮಗ್ರವಾದ ನಾಟಕ ಹಾಗೂ ಕಾವ್ಯಗಳನ್ನು ಕುರಿತ ಕೃತಿ. ‘ಆಸ್ವಾದನೆ, ವಿಶ್ಲೇಷಣೆ, ಮತ್ತು ವಿಮರ್ಶೆಗಳು ಹದವರಿತು ಬೆರೆತ ಬರಹ’ ಎಂದು ಈ ಕೃತಿಯನ್ನು ಜಿ.ಎಸ್‌. ಶಿವರುದ್ರಪ್ಪ ಮೆಚ್ಚಿಕೊಂಡರು. ಈ ಕೃತಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಪಡೆಯಿತು. ಜಿ.ಎಸ್‌.ಎಸ್‌. ಗುರುತಿಸಿದ ಮೂರೂ ಗುಣಗಳು ಅವರ ಹಿಂದಿನ ಹಾಗೂ ಮುಂದಿನ ಕೃತಿಗಳಲ್ಲೂ ಹಾಸುಹೊಕ್ಕಾಗಿದ್ದವು.

1999 ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಮೇಕರ್ಸ್‌ ಆಫ್‌ ಮಾಡರ್ನ್ ಲಿಟರೇಚರ್‌’ ಮಾಲೆಗಾಗಿ ತಮ್ಮ ಗುರು ವಿ.ಕೃ. ಗೋಕಾಕರ ಬದುಕು – ಬರಹಗಳ ಕುರಿತು ಇಂಗ್ಲಿಷ್‌ನ ಕೃತಿಯೊಂದನ್ನು ಮಿಣಜಗಿ  ರಚಿಸಿದರು.  ‘ವಿನಾಯಕ ಕೃಷ್ಣ ಗೋಕಾಕ್‌’ ಗೋಕಾಕರ ಬದುಕು – ಬರಹಗಳ ಸಮರ್ಥ ಪರಿಚಯ ಹಾಗೂ ಸಮತೂಕದ ವಿಮರ್ಶೆ ಒಳಗೊಂಡ ಕೃತಿ.

ಮಿಣಜಗಿ ಅವರ ವಿಮರ್ಶಾ ಮಾರ್ಗದ ಸಿದ್ಧಿಯನ್ನು ತೋರುವ ಎರಡು ಕೃತಿಗಳು ‘ಸೃಜನಕ್ರಿಯೆ ಮತ್ತು ಸಂವೇದನೆ’ (2000) ಮತ್ತು ‘ಪ್ರತೀಯಮಾನ’ (2010). ‘ಸೃಜನಕ್ರಿಯೆ ಮತ್ತು ಸಂವೇದನೆ’ ಪುಸ್ತಕದ ಉಪಶೀರ್ಷಿಕೆ ‘ಯುಗದಂಚಿನ ತೌಲನಿಕ ನೋಟಗಳು’ ಎಂದಿದೆ. ಅರಿಸ್ಟಾಟಲ್‌ನ ‘ಪೊಯಟಿಕ್ಸ್’ ಹಾಗೂ ಭಾರತದ ಸಂಖ್ಯಾಶಾಸ್ತ್ರಗಳನ್ನು ಆಧರಿಸಿದ ಭಾರತೀಯ ಮತ್ತು ಪಾಶ್ಚಾತ್ಯ ಚಿಂತನೆಯ ಹಿನ್ನೆಲೆಯಲ್ಲಿ ‘ಸೃಜನಕ್ರಿಯೆ’ಯ ಸ್ವರೂಪವನ್ನು ಕುರಿತು ಚರ್ಚಿಸಲಾಗಿದೆ. ವಿಮರ್ಶನದ ಅಹಂಕಾರ ಇಲ್ಲದ ಈ ಕೃತಿ ವಿಮರ್ಶೆಯ ಪುಸ್ತಕವೊಂದನ್ನು ಓದುವಾಗಿನ ದಣಿವಿನ ಅನುಭವ ನೀಡುವುದಿಲ್ಲ.

ಆದರೆ ತಾರ್ಕಿಕವಾದ ಎಚ್ಚರವನ್ನು ಬೇಡುತ್ತದೆ. ಇದರ ಪ್ರಸ್ತಾವನೆಯಲ್ಲಿ ಮಿಣಜಗಿ ಅವರು ತಮ್ಮ ‘ಭಾರತೀಯ ಹಾಗೂ ಪಾಶ್ಚಾತ್ಯ ರಸ ಸಂವೇದನೆ ಮತ್ತು ಕಾವ್ಯ ಸ್ವರೂಪ’ ಎಂಬ ಲೇಖನದ ಬಗ್ಗೆ ವಿವರ ನೀಡುತ್ತಾ– ‘‘ಗುಪ್ತಗಾಮಿನಿಯಾಗಿ ಹರಿಯುತ್ತ ಬಂದ ಆ–ವೈದಿಕ ಕಾವ್ಯಶಾಸ್ತ್ರದ ಪರಿವೆಯೇ ಇಲ್ಲದೆ ನಮ್ಮದೆನ್ನುವ ಭಾರತೀಯ ರಸಶಾಸ್ತ್ರ ವಿಜೃಂಭಿಸಿದೆ ಎಂಬ ಸಂಗತಿ ಗುರು ಪರಂಪರೆಯ ಅಪ್ರಶ್ನಿತ ದಟ್ಟ ಪ್ರಭಾವದಲ್ಲಿ ನಾವುಗಳು ಬೆಳೆಯಿಸಿಕೊಂಡು ಬಂದ ನೆಮ್ಮದಿಪೂರ್ಣ ಕಲಾ ಸಂವೇದನೆಗೆ ದೊಡ್ಡ ಸಾಕ್ಷಿಯಾಗಿದೆ’’ ಎನ್ನುತ್ತಾರೆ. ಈ ಮಾತುಗಳಿಗೆ ವಿವರಣೆ ಬೇಕಿಲ್ಲ.

ವಿಮರ್ಶೆ ಎಂದರೆ, ‘ಕಾಲ, ದೇಶ, ಭಾಷೆಗಳ  ಸ್ಥಳೀಯ ಮತ್ತು ಸಾರ್ವತ್ರಿಕ/ ಐತಿಹಾಸಿಕ ಪರಿಪ್ರೇಕ್ಷ್ಯಗಳ ಹಿನ್ನೆಲೆಯಲ್ಲಿ ನಡೆಯುವ ಕೃತಿ ಹಾಗೂ ಕೃತಿಕಾರನ ಸಂವೇದನಾ ಮೌಲ್ಯಾಂಕನವಾಗಿದೆ. ನಿಗೂಢವಾದ ಗಣಿತದ ಸಮಸ್ಯೆಗಳನ್ನು ಬಿಡಿಸುವಾಗ ತರ್ಕ, ಪ್ರತಿಭಾನಗಳು ಉಪಯೋಗವಾಗುವಂತೆ ಇಲ್ಲಿಯೂ ಇವು ಕಾರ್ಯಗತವಾಗುತ್ತವೆ. ಇಲ್ಲಿನ ಎಂಟು ಬರಹಗಳು ಕಾವ್ಯಸ್ವರೂಪ, ಸೃಜನಕ್ರಿಯೆ ಹಾಗೂ ತೌಲನಿಕ ವಿವೇಚನೆಗಳನ್ನು ಒಳಗೊಂಡಿದೆ.

ಇನ್ನು ‘ಪ್ರತೀಯಮಾನ’ ಎಂಬ ಅವರ ಕೃತಿಯ ಉಪಶೀರ್ಷಿಕೆ ‘ಹೊಸ ವಿಮರ್ಶೆಯ ಹಾದಿಯಲ್ಲಿ’ ಎಂದಿದೆ. ಅವರು ರೂಪಿಸಿಕೊಂಡಿದ್ದ ವಿಮರ್ಶೆ ಮಾರ್ಗದ ಮತ್ತೊಂದು ಹೆಜ್ಜೆ ಗುರುತು ಈ ಕೃತಿಯಲ್ಲಿ ಕೇವಲ ಆರು ಬರಹಗಳಿವೆ. ವಿನಾಯಕರ ವಿಮರ್ಶೆ ಮಾರ್ಗ, ರಾಮಚಂದ್ರ ಶರ್ಮಾರ ನವ್ಯ ಕಾವ್ಯ, ಕಂಬಾರರ ‘ಶಿಖರ ಸೂರ್ಯ’, ರಂಗನಾಥರ ನೆನಪಿನ ನಂದನ, ಇ.ಎಂ. ಫಾಸ್ಟರ್‌ನ ‘ಹಾವರ್ಡ್ಸ್ ಎಂಡ್‌’, ಹಾಗೂ ಎ. ಕೆ. ರಾಮಾನುಜನ್‌ ಅವರ ಕಾವ್ಯ ಸೃಜನಕ್ರಿಯೆಯ ಬಗ್ಗೆ ‘ಪ್ರತೀಯಮಾನ’ ಚರ್ಚಿಸಿದೆ. ಈ ಕೃತಿಯ ಉದ್ದಕ್ಕೂ ಈ ಮೊದಲಿಗೆ ವಿವರಿಸಿದ ‘ಪ್ರತೀಯಮಾನ’ದ ಪರಿಕಲ್ಪನೆಯಲ್ಲಿ ಮಿಣಜಗಿಯವರ ವಿಶ್ಲೇಷಣೆ ಸಾಗುತ್ತದೆ. ಅವರ ಕೃತಿಗಳ ಓದುವಿಕೆ ಒಂದು ಖುಷಿ ಕೊಡುವ ಅನುಭವ; ಸಾಹಿತ್ಯ ಕೃತಿಯೊಂದರ ಜೊತೆಗಿನ ಅವರ ಅನುಸಂಧಾನ ಅಲ್ಲಮನ ‘ಬೆರಗಿನ ಬೆಳಗು’ ಹೌದು.

ಮಿಣಜಗಿ ಅವರ ಚಿಂತನೆಗಳು ಒಂದು ಚಿಂತನ ಚಳವಳಿಯಾಗಿ (ಸ್ಕೂಲ್ ಆಫ್ ಥಾಟ್) ಬೆಳೆಯ ಬಲ್ಲದೆ? ಎಂಬ ಪ್ರಶ್ನೆಯನ್ನು ವಿಮರ್ಶಕ ಎಸ್‌.ಆರ್. ವಿಜಯಶಂಕರ ಅವರು ಕೇಳಿಕೊಂಡಿದ್ದಾರೆ. ಈ ವಯಸ್ಸಿನಲ್ಲಿ ಅವರಿಗದು ಸುಲಭಸಾಧ್ಯವಲ್ಲ ಎನ್ನುವ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ವಿದ್ವತ್‌ ಎನ್ನುವುದು ಗೊಡ್ಡು ಎನ್ನುವ ಹಾಗೆ ಅಭಿಪ್ರಾಯಗಳು ಚಾಲ್ತಿಯಲ್ಲಿರುವ ಸಂದರ್ಭವಿದು. ವರ್ಷಗಟ್ಟಲೆ ಅಧ್ಯಯನ, ಮನನ, ಅನುಸಂಧಾನ ನಡೆಸಿದ ಮಿಣಜಗಿ ಹಾಗೂ ಅವರಂಥ ವಿಮರ್ಶಕರು ಮಂಕಾಗಿ, ಬೀಸು ಹೇಳಿಕೆಗಳ ಮಿಂಚು ಹುಳುಗಳು ಹೆಚ್ಚು ಪ್ರಕಾಶಿಸುತ್ತಿರುವ ಸಂದರ್ಭದಲ್ಲಿ ವಿಜಯಶಂಕರ್ ಅವರ ಅನುಮಾನ ಸಹಜವೇ. ವಿಮರ್ಶೆಯ ಬದಲಾದ ಅಭಿರುಚಿ ಹಾಗೂ ದಾರಿಗಳು, ಸಾಹಿತ್ಯೇತರ ಅಡ್ಡದಾರಿಗಳು ಮಿಣಜಗಿ ಥರದವರು ಮಿನುಗಲು ಅವಕಾಶಗಳನ್ನು ಕಿರಿದಾಗಿಸಿತು. ಇದಕ್ಕೆ ಕಳಸವಿಟ್ಟ ಹಾಗೆ ಅವರ ವಿಮುಖತೆ – ಹಿಂಜರಿಕೆಗಳಿಗೂ ಕಾರಣವಾದವು.

‘ಸಂಚಯ’ ಪತ್ರಿಕೆ ತಾನು ಪ್ರತಿ ವರ್ಷ ನಡೆಸುವ ‘ಕವಿದಿನ’ ಬೇಂದ್ರೆ ಹುಟ್ಟುಹಬ್ಬದಂದು ಒಬ್ಬ ಹಿರಿಯ ಲೇಖಕರನ್ನು ಗೌರವಿಸುವ ಪರಿಪಾಠ ಇಟ್ಟುಕೊಂಡಿದೆ. ಕೆಲವು ವರ್ಷಗಳ ಕೆಳಗೆ ಮಿಣಜಗಿ ಅವರ ಪುಸ್ತಕಗಳನ್ನೋದಿ ಅವರ ಬಗ್ಗೆ ಗೌರವ ಹುಟ್ಟಿ ಅವರನ್ನು ಭೇಟಿಯಾದೆ. ನಮ್ಮ ಪತ್ರಿಕೆಯ ಕಾರ್ಯಕ್ರಮಕ್ಕೆ ಬಂದು ಗೌರವಾರ್ಪಣೆ ಸ್ವೀಕರಿಸಲು ವಿನಯವಾಗಿ ಪ್ರಸ್ತಾಪಿಸಿದೆ. ಅವರು ಅದನ್ನು ನಿರಾಕರಿಸಿದರು. ‘ತನಗೆ ಇಂಥವುಗಳಲ್ಲಿ ಆಸಕ್ತಿ ಇಲ್ಲ, ತಾನು ಬರಲಾರೆ’ ಎಂದು ವಾಪಸ್ಸು ಕಳಿಸಿದರು. ಅರ್ಹತೆ – ವಿದ್ವತ್ತು ಎಲ್ಲವೂ ಇದ್ದು ನಮ್ಮ ಕೋರಿಕೆ ನಿರಾಕರಿಸಿದ ಅವರ ನಡವಳಿಕೆ ಆಶ್ಚರ್ಯ – ನಿರಾಶೆ ಹುಟ್ಟಿಸಿತ್ತು. 2012ರ ಜನವರಿ 31ರ ‘ಕವಿದಿನ’ದಂದು ಮಿಣಜಗಿ ಅವರು ‘ಬೇಂದ್ರೆ ಕಾವ್ಯ ಶಾಸ್ತ್ರ ಹಾಗೂ ಸೃಜನಕ್ರಿಯೆಯ ಮೂಲ ಸೆಲೆಗಳು’ ಎಂಬ ವಿಷಯ ಕುರಿತು ನಿರರ್ಗಳವಾಗಿ ಒಂದು ಗಂಟೆ ನಲವತ್ತು ನಿಮಿಷದ ಉಪನ್ಯಾಸ ನೀಡಿದರು.

ಹೊಸಕಾಲದ ಹೊಸ ಕವಿಗಳ ಎದುರು ತುಂಡು ಚೀಟಿಯ ನೆರವೂ ಇಲ್ಲದೆ ಬೇಂದ್ರೆ ಕಾವ್ಯದ ಸಾಲುಗಳನ್ನು ಉದ್ಧರಿಸಿ ಕೇಳುಗರು ಮಂತ್ರಮುಗ್ಧರಾಗುವ ಹಾಗೆ ಮಾತಾಡಿದರು. ಅವರ ವಯಸ್ಸು ಆಗ ಎಂಬತ್ತಾರು! ಅವರ ಜೊತೆಗೆ ಮತ್ತೊಬ್ಬ ಅತಿಥಿಯಾಗಿದ್ದ ಚಿರಂಜೀವಿ ಸಿಂಗ್‌– ‘ಬೇಂದ್ರೆಯವರದ್ದು ಕಾವ್ಯ ನಿಜ, ಮಿಣಜಗಿ ಅವರ ಭಾಷಣವೂ ಒಂದು ಕಾವ್ಯ’ ಎಂದು ಕೊಂಡಾಡಿದ್ದರು.

ಈಚೆಗೆ ಅವರದ್ದೊಂದು ಸಂದರ್ಶನಕ್ಕೆ ಹಿರಿಯರಾದ ಎಂ.ವಿ. ವೆಂಕಟೇಶಮೂರ್ತಿ ಅವರ ಮೂಲಕ ಪ್ರಸ್ತಾಪಿಸಿದ್ದೆ. ಹೊಸ ಹುಡುಗರ ಜೊತೆಗೆ ಚರ್ಚಿಸುವುದರಿಂದ ನನ್ನ ಆಲೋಚನೆಗಳು ಇನ್ನಷ್ಟು ಗಟ್ಟಿಯಾಗಬಹುದು ಎಂದು ಮಿಣಜಗಿ ಹೇಳಿದ್ದರಂತೆ. ಆದರೆ ಸಂದರ್ಶನದ ಬದಲಿಗೆ ಈಗ ನಾನು ಅವರ ಈ ಶ್ರದ್ಧಾಂಜಲಿ ಬರೆಯುತ್ತಿರುವೆ.

ಮಿಣಜಗಿಯ ಮಲ್ಲಿಗೆ
ಭರ್ಮಪ್ಪ ದೇವೇಂದ್ರಪ್ಪ ಮಿಣಜಗಿ ಹಾಗೂ ತಾರಾಬಾಯಿ ಅವರುಗಳು ಸುರೇಂದ್ರನಾಥ್ ಅವರ ತಂದೆ–ತಾಯಿ. ಇವರು ಮುದ್ದೇಬಿಹಾಳ ತಾಲ್ಲೂಕಿನ ಮಿಣಜಗಿ ಗ್ರಾಮದವರು. ಹಿಂದೆ ಪ್ರಮುಖ ಜೈನ ಕೇಂದ್ರವಾಗಿದ್ದ ಮುದ್ದೇಬಿಹಾಳದಿಂದ ಯಾವುದೋ ಒಂದು ಅಹಿತ ಸಂದರ್ಭದಲ್ಲಿ ಈ ಕುಟುಂಬ ಗುಳೇದಗುಡ್ಡಕ್ಕೆ ವಲಸೆ ಬಂದಿದೆ.

ಆದರೆ ಆ ವಂಶಜರ ಹೆಸರಿನ ಹಿಂದೆ ‘ಮಿಣಜಗಿ’ ಹಾಗೇ ಉಳಿಯಿತು. ಚೌಬೀನೇ (ಮರದ) ವ್ಯಾಪಾರಿಗಳಾಗಿದ್ದ ಭೀಮಪ್ಪನವರ ಏಳುಮಕ್ಕಳಲ್ಲಿ ಸುರೇಂದ್ರನಾಥರು ಎರಡನೆಯವರು. ಅವರ ಪೂರ್ವಿಕರು ಆದಿಕವಿ ಪಂಪನ ಪುಲಿಗೆಯವರು. ಸುರೇಂದ್ರನಾಥರು ಹುಟ್ಟಿದ್ದು ಅವರ ತಾಯಿಯ ತವರೂರಾದ ಲಕ್ಷ್ಮೇಶ್ವರದಲ್ಲಿ (5–9–1926). ತಂದೆ ಭರ್ಮಪ್ಪ ಹೆಚ್ಚು ವಿದ್ಯಾವಂತರಲ್ಲದಿದ್ದರೂ ಓದು ಬರಹ ಬಲ್ಲವರು. ಸಾಹಿತ್ಯಾಸಕ್ತರು. ಇಡೀ ಗುಳೇದಗುಡ್ಡದಲ್ಲಿ ‘ಜಯಂತಿ’ ಪತ್ರಿಕೆ ತರಿಸುತ್ತಿದ್ದವರು ಇವರೊಬ್ಬರೇ. ಸಹಜವಾಗಿ ತಂದೆಯಿಂದ ಸುರೇಂದ್ರನಾಥರಿಗೆ ಸಾಹಿತ್ಯದ ಆಸಕ್ತಿ ಮೊಳೆಯಿತು.

ಮಿಣಜಗಿ ಅವರ ಪ್ರಾಥಮಿಕ ವಿದ್ಯಾಭ್ಯಾಸ ಗುಳೇದಗುಡ್ಡದಲ್ಲಿ ಆಯಿತು. ಶಾಲಾ ವಿದ್ಯಾರ್ಥಿಯಾಗಿದ್ದಾಗ ಗೆಳೆಯರೊಬ್ಬರ ಜೊತೆಗೂಡಿ ‘ಅರಳು ಮಲ್ಲಿಗೆ’ ಎಂಬ ಪತ್ರಿಕೆ ಪ್ರಕಟಿಸಿದ್ದರು. ಆರಂಭಿಕ ಹಂತದಲ್ಲಿ ಸುರೇಂದ್ರನಾಥರೂ ಕವಿತೆಗಳನ್ನು ಬರೆದು ಕವಿಯಾಗಲು ಹೊರಟಿದ್ದರು. ಧಾರವಾಡದಲ್ಲಿ ಇಂಟರ್‌ ಓದಿದ ನಂತರ, ಮಹಾರಾಷ್ಟ್ರದ ಸಾಂಗ್ಲಿಯಲ್ಲಿನ ವಿಲ್ಲಿಂಗ್‌ಟನ್‌ ಕಾಲೇಜು ಸೇರಿದರು. ಗೋಕಾಕ್‌, ರಂ.ಶ್ರೀ ಮುಗಳಿ ಅವರ ಪಾಠ ಪ್ರವಚನಗಳ ಪ್ರಭಾವಕ್ಕೆ ಒಳಗಾದರು.

ಸು.ರಂ. ಎಕ್ಕುಂಡಿ, ವಿ.ಜಿ. ಭಟ್ಟರು ಇವರ ಹಿರಿಯ ಸಹಪಾಠಿಗಳು. ಇವರೆಲ್ಲರೂ ಗೋಕಾಕರ ಮಾರ್ಗದರ್ಶನದ ‘ವರುಣಕುಂಜ’ದ ಸದಸ್ಯರಾಗಿದ್ದರು. ಮುಂದೆ ಶಿಕ್ಷಕರಾದ ಮಿಣಜಗಿ, ಧಾರವಾಡ, ಯಾದಗಿರಿಗಳಲ್ಲಿ ಉಪನ್ಯಾಸಕ ವೃತ್ತಿಯಲ್ಲಿದ್ದರು. ಗೆಳೆಯ ಕುರ್ತಕೋಟಿ ಅವರ ಆಗ್ರಹದ ಮೇರೆಗೆ ಗುಜರಾತಿನ ವಲ್ಲಭ ವಿದ್ಯಾನಗರದಲ್ಲಿ, ಕುರ್ತಕೋಟಿ ಅವರ ಸಹೋದ್ಯೋಗಿಯಾಗಿ ಕೆಲವು ವರ್ಷ, ನಂತರ ಪ್ರಾಧ್ಯಾಪಕರಾಗಿ ನಳಿನಿ ಕಲಾ ಕಾಲೇಜಿನಲ್ಲಿ ಇಂಗ್ಲಿಷ್‌ ವಿಭಾಗದ ಮುಖ್ಯಸ್ಥರಾಗಿದ್ದರು. 1986ರಲ್ಲಿ ಸೇವಾ ನಿವೃತ್ತಿ ಹೊಂದಿದರು. ‘ಆಧುನಿಕ ಇಂಗ್ಲಿಷ್‌ ಕಾವ್ಯ ಪರಂಪರೆ ಮತ್ತು ಪ್ರಯೋಗ’ ಎಂಬ ವಿಷಯದ ಅವರ ಪ್ರೌಢ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯದಿಂದ 1975 ರಲ್ಲಿ ಪಿಎಚ್‌.ಡಿ. ದೊರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT