ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ‍ಪರಿಚಯ: ಕಲ್ಲೆ ಶಿವೋತ್ತಮ ರಾವ್‌ ಸಾಧನೆಯ ಮೆಲುಕು

Published 16 ಮಾರ್ಚ್ 2024, 23:41 IST
Last Updated 16 ಮಾರ್ಚ್ 2024, 23:41 IST
ಅಕ್ಷರ ಗಾತ್ರ

ಪ್ರಗತಿಪರ ಚಿಂತನೆಯ ಕಲ್ಲೆ ಶಿವೋತ್ತಮ ರಾವ್‌ 75 ವರ್ಷಗಳ ಕಾಲ ಪತ್ರಿಕಾ ವೃತ್ತಿಯನ್ನು ಮಾಡಿದ್ದಾರೆ. ಹಲವು ಪತ್ರಿಕೆಯಲ್ಲಿ ಬೇರೆ ಬೇರೆ ಹುದ್ದೆಯನ್ನು ಅವರು ನಿರ್ವಹಿಸಿದ್ದಾರೆ. ‘ಜನಪಗ್ರತಿ’ ವಾರ ಪತ್ರಿಕೆಯನ್ನು ಮೂವತ್ತು ವರ್ಷ ಸಂಪಾದಕರಾಗಿ (1960–90) ಮುನ್ನೆಡೆಸಿದ್ದಾರೆ. ಅವರ ಬದುಕು ಮತ್ತು ಕೊಡುಗೆಯನ್ನು ಸ್ಮರಿಸುವ ಕೃತಿ ‘ಕಲ್ಲೆ ಶಿವೋತ್ತಮ ರಾವ್‌: ಜನಪ್ರಗತಿಯ ಪಂಜು’. 

ಪತ್ರಿಕಾ ವೃತ್ತಿಯಿಂದ ನಿವೃತ್ತರಾಗಿರುವ ಶಿವೋತ್ತಮ ರಾವ್‌ ಈಗ ಬೆಂಗಳೂರಿನ ಯಲಹಂಕದಲ್ಲಿ ನೆಲೆಸಿದ್ದಾರೆ. ಅವರ ಮನೆಯೇ ಪತ್ರಿಕಾ ಮ್ಯೂಸಿಯಂ ರೀತಿ ಕಾಣುತ್ತದೆ ಎಂದು ಕೃತಿ ಸಂಪಾದಕ ಪಾರ್ವತೀಶ ಬಿಳಿದಾಳೆ ಸ್ಮರಿಸುತ್ತಾರೆ. ಕೃತಿ ಐದು ಭಾಗಗಳನ್ನು ಒಳಗೊಂಡಿದ್ದರೂ, ಬರಹದ ಆಶಯ ಮತ್ತು ಸಾರದಲ್ಲಿ ಏಕರೂಪತೆ ಇದೆ. ನಾಡಿನ ಪ್ರಮುಖ ಸಾಹಿತಿಗಳು, ಪತ್ರಕರ್ತರು ಕಲ್ಲೆ ಅವರನ್ನು ಭಿನ್ನ ಆಯಾಮದಲ್ಲಿ ಪರಿಚಯಿಸಿದ್ದಾರೆ. 

ಮೊದಲ ಲೇಖನ ‘ಕನ್ನಡ ಪತ್ರಿಕೋದ್ಯಮದ ಸವ್ಯಸಾಚಿ ಕಲ್ಲೆ ನಾರಾಯಣ ರಾಯರು (1901–1980)’ ಶಿವೋತ್ತಮ ಅವರ ತಂದೆ ಕೂಡ ಪತ್ರಕರ್ತರಾಗಿದ್ದರು. ಅವರ ತಂದೆಯನ್ನು ಈ ಲೇಖನ ನೆನಪಿಸುತ್ತದೆ. ಎಂ.ಎಚ್‌. ಕೃಷ್ಣಯ್ಯ ಅವರು ‘ಜನಪ್ರಗತಿ’ಯನ್ನು ಸೈದ್ಧಾಂತಿಕ ಹಿನ್ನೆಲೆಯಲ್ಲಿ ಹೇಗೆ ರೂಪಿಸಲಾಗಿತ್ತು ಎನ್ನುವುದನ್ನು ಸಂಕ್ಷಿಪ್ತವಾಗಿ ಕಟ್ಟಿಕೊಟ್ಟಿದ್ದಾರೆ. 

ಎರಡನೇ ಭಾಗದಲ್ಲಿ ‘ಕಲ್ಲೇ ಶಿವೋತ್ತಮ ರಾವ್‌: ಬೆಂಕಿ–ಬೆಳಕಿನ ಪಂಜು’ ಎಂಬ ಸಂಪಾದಕರ ದೀರ್ಘ ಲೇಖನವಿದೆ. ಇದು ಕನ್ನಡ ಪತ್ರಿಕೋದ್ಯಮದ ಪರಂಪರೆಯ ಅವಲೋಕನ ಮಾಡುವ ಜೊತೆಗೆ ಶಿವೋತ್ತಮ ಅವರ ಕಾಳಜಿ ಮತ್ತು ಸಮಾಜಮುಖಿ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. 

ನಾಲ್ಕನೇ ಭಾಗ ಜನಪ್ರಗತಿಯಲ್ಲಿ ಪ್ರಕಟಿಸಿದ ಕೆಲ ಸಂಪಾದಕೀಯ ಮತ್ತು ವ್ಯಕ್ತಿಚಿತ್ರಗಳನ್ನು ಒಳಗೊಂಡಿದೆ. 1971ರಲ್ಲಿ ಹರಿಜನೋದ್ಧಾರದ ಬಗ್ಗೆ ಪೇಜಾವರ ಮಠದ ಪೀಠಾಧೀಶರಾಗಿದ್ದ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ‘ಜನಪ್ರಗತಿ’ ಸಂಪಾದಕರ ನಡುವೆ ಪತ್ರಗಳ ಮೂಲಕ ನಡೆದ  ವಾದ–ಪತ್ರಿವಾದವನ್ನು ನೀಡಿದ್ದಾರೆ. ಇದರಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಸಂಬಂಧಿಸಿದಂತೆ ಪತ್ರಿಕೆಯ ನಿಲುವು ಅದಕ್ಕೆ ಸ್ವಾಮೀಜಿಗಳ ಸ್ಪಷ್ಟನೆಯ ಪತ್ರಗಳ ಸರಣಿ ಈ ಕೃತಿಯ ಆಕರ್ಷಣೀಯ ಅಂಶ.

ಐದನೇ ಭಾಗ ಚಿತ್ರಪಟವನ್ನು ಒಳಗೊಂಡಿದೆ. ಅದು ಅನೇಕ ಚಾರಿತ್ರಿಕ ಕ್ರಿಯೆ–ಪ್ರತಿಕ್ರಿಯೆಗಳಿಗೆ ಸಾಕ್ಷೀಭೂತವಾಗಿದೆ. ಶಿವೋತ್ತಮ ರಾವ್‌ ಅವರ ಕುಟುಂಬ ವರ್ಗವೂ ಸೇರಿ ಅಪರೂಪದ ಕೆಲವು ಚಿತ್ರಪಟವನ್ನು ಒಳಗೊಂಡಿದೆ. ‘ಜನಪ್ರಗತಿ’ ಬಳಗದ ಪ್ರಮುಖರ ಫೋಟೊಗಳೂ ಅಲ್ಲದೆ, ಪತ್ರಿಕೆಯ ಕೆಲ ಮುಖಪುಟಗಳಿವೆ. ಪತ್ರಿಕೆಯ ಅಡಿ ಬರಹ ‘ವಿಚಾರ ವಿಮರ್ಶೆಗೆ ಮೀಸಲಾದ ಸಚಿತ್ರ ಸಾಪ್ತಾಹಿಕ’ ಎಂದಿದೆ. ಪತ್ರಿಕೆಯ ಟ್ಯಾಗ್‌ಲೈನ್‌ಗೆ ತಕ್ಕಂತೆ ಸಂಪಾದಕರು ಆ ಪತ್ರಿಕೆಯನ್ನು ಪ್ರಕಟಿಸುತ್ತಿದ್ದರು ಎಂದು ಅನೇಕ ಲೇಖಕರು ಸೂಚ್ಯವಾಗಿ ನೆನಪಿಸಿದ್ದಾರೆ. ಶಿವೋತ್ತಮ ಅವರು ‘ಬೂಸಾ ಪ್ರಕರಣ’ದ ಸಂಬಂಧ ಉಂಟಾದ ಪರ–ವಿರೋಧದ ಚಳವಳಿಯಲ್ಲಿ ಬಸವಲಿಂಗಪ್ಪ ಅವರ ಪರವಾಗಿ ನಿಂತ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು ಎನ್ನುವುದೂ ಇಲ್ಲಿ ಉಲ್ಲೇಖವಾಗಿದೆ.

ಕಲ್ಲೆ ಶಿವೋತ್ತಮ ರಾವ್‌: ಜನಪ್ರಗತಿಯ ಪಂಜು

ಸಂ: ಪಾರ್ವತೀಶ ಬಿಳಿದಾಳೆ

ಪ್ರ: ಕರ್ನಾಟಕ ಅಧ್ಯಯನ ಕೇಂದ್ರ ಹಾರೋಹಳ್ಳಿ

ಬೆಲೆ: ರೂ. 300

ಪುಟ: 394

ಸಂ: 9448380637

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT