ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ನುಡಿ ಗೀತೆಗಳ ಸಮಗ್ರ ದರ್ಶನ

Published 16 ಮಾರ್ಚ್ 2024, 23:33 IST
Last Updated 16 ಮಾರ್ಚ್ 2024, 23:33 IST
ಅಕ್ಷರ ಗಾತ್ರ

ಎಲ್ಲಾದರು ಇರು; ಎಂತಾದರು ಇರು;

ಎಂದೆಂದಿಗು ನೀ ಕನ್ನಡವಾಗಿರು

ಕನ್ನಡ ಗೋವಿನ ಓ ಮುದ್ದಿನ ಕರು,

ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!

ಕರುನಾಡಿನ ವೈಭವವನ್ನು, ಹೆಮ್ಮೆಯನ್ನು ತಿಳಿಸುವ ರಾಷ್ಟ್ರಕವಿ ಕುವೆಂಪು ವಿರಚಿತ ಗೀತೆಯಿದು. ಕನ್ನಡ ನಾಡಿನಲ್ಲಿ ಬೇರೆ ಬೇರೆ ಸಂದರ್ಭದಲ್ಲಿ ಜನ್ಮತಳೆದ ಇಂತಹ ಸಾವಿರಾರು ನಾಡು–ನುಡಿ ಗೀತೆಗಳಿವೆ. ಭಾಷೆ, ನೆಲ, ಜಲದ ಕಿಡಿಯಾಗಿ ಹುಟ್ಟಿದ ಕವಿತಗಳಿವೆ. ನಾಡಿನ ಹಿರಿಮೆಯನ್ನು ಸಾರುವ ಇಂಥ ನುಡಿಗೀತೆಗಳನ್ನು ಒಂದೇ ಕಡೆ ತಂದಿರುವ ಕೃತಿ ‘ಸಮಗ್ರ ಕನ್ನಡ ನಾಡು ನುಡಿ ಗೀತೆಗಳು’. ಎರಡು ಸಂಪುಟಗಳಲ್ಲಿ ಕೃತಿ ಹೊರಬಂದಿದೆ. ಇದರ ಸಂಪಾದಕರಾದ ಕಾ.ವೆಂ.ಶ್ರೀನಿವಾಸಮೂರ್ತಿ ಮೂರು ದಶಕಗಳ ಕಾಲ ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ, ಮಾಹಿತಿಗಳನ್ನು ಸಂಗ್ರಹಿಸಿ ಕೃತಿಯನ್ನು ಹೊರತಂದಿದ್ದಾರೆ. ಒಂದು ಸಾವಿರ ಕವಿಗಳ ಐದಾರು ಸಾವಿರ ನುಡಿ ಗೀತೆಗಳು ಈ ಕೃತಿಯಲ್ಲಿರುವುದು ವಿಶೇಷ.

ಕರುನಾಡಿನ ನುಡಿ ಗೀತೆಗಳಿಗೆ ಭವ್ಯ ಇತಿಹಾಸವಿದೆ. ಹತ್ತಾರು ಹೋರಾಟಗಳ ಹಿನ್ನೆಲೆಯಿದೆ. ಕನ್ನಡದ ಅಸ್ಮಿತೆಯಾಗಿ ಹೊರಹೊಮ್ಮಿದೆ ಕವಿತೆಗಳಿವೆ. ಶಾಂತಕವಿ, ದ.ರಾ.ಬೇಂದ್ರೆ, ಕುವೆಂಪು, ಸಿದ್ಧಯ್ಯ ಪುರಾಣಿಕರಿಂದ ಹಿಡಿದು ಸಾಕಷ್ಟು ಕವಿಗಳು ಆಯಾ ಸಂದರ್ಭಕ್ಕೆ ಅನುಗುಣವಾಗಿ ನುಡಿ ಗೀತೆ ರಚಿಸಿದ್ದಾರೆ. ಅಂತಹ ಬಹುತೇಕ ಗೀತೆಗಳು ಇದರಲ್ಲಿವೆ. 

ಈ ನುಡಿಗೀತೆಗಳು ಹುಟ್ಟಿದ ಸಂದರ್ಭಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ. ಭಾಷಾ ಸಂಘರ್ಷ, ಸಾಮರಸ್ಯದ ಫಲವಾಗಿ ಜನ್ಮ ತಳೆದ ನುಡಿಗಳದ್ದು ಒಂದು ವಿಭಾಗ. ಮುಂಬೈ ಕರ್ನಾಟಕ ಭಾಗದಲ್ಲಿ ನವ್ಯ, ದಲಿತ ಬಂಡಾಯದ ಸಂದರ್ಭದಲ್ಲಿಯೂ ಕನ್ನಡದ ಅಸ್ಮಿತೆಯ ಗುರುತರ ಕಾವ್ಯಾಭಿವ್ಯಕ್ತಿಯಾಗಿ ನುಡಿಗೀತೆಗಳು ಹೇಗೆ ಕೆಲಸ ಮಾಡಿದವು ಎಂಬ ವಿವರ ಇಲ್ಲಿ ಸಿಗುತ್ತದೆ. ಬೆಂದ್ರೆ, ಬೆಟಗೇರಿ ಕೃಷ್ಣಶರ್ಮ, ಹುಯಿಲಗೋಳು ನಾರಾಯಣರಾವ್‌ ಮುಂತಾದ ಕವಿಗಳು ಈ ನಿಟ್ಟಿನಲ್ಲಿ ರಚಿಸದ ನಾಡು–ನುಡಿ ಗೀತೆಗಳನ್ನು ನೀಡಲಾಗಿದೆ. 

ಹೈದರಬಾದ್‌ ಕರ್ನಾಟಕದಲ್ಲಿ ನಿಜಾಮ್‌ ಸರ್ಕಾರದ ಉರ್ದು ಭಾಷೆಯ ಎದುರಿಗೆ ಕನ್ನಡ ನುಡಿ ಹೇಗೆ ಅಸ್ಮಿತೆ ಉಳಿಸಿಕೊಂಡು, ಯಾವ್ಯಾವ ಕವಿಗಳು ಕೊಡುಗೆ ನೀಡಿದರು ಎಂಬ ಸಂಕ್ಷಿಪ್ತ ವಿವರಣೆ ಸಿಗುತ್ತದೆ. ಮೈಸೂರು ಸಂಸ್ಥಾನದಲ್ಲಿ ಮೊಳಗಿದ ಕರುನಾಡಿನ ವೈಭವದ ಗೀತೆಗಳನ್ನು ಕಾಣಬಹುದು. ಮದ್ರಾಸ್‌ ಪ್ರೆಸಿಡೆನ್ಸಿಯಲ್ಲಿ ಎಂ.ಎನ್‌.ಕಾಮತ್‌, ಕಯ್ಯಾರ ಕಿಞ್ಞಣ್ಣ ರೈ ಮುಂತಾದವರು ಹೇಗೆ ಕನ್ನಡವು ಸರ್ವ ಮಾಧ್ಯಮ ಭಾಷೆಯೆಂದು ಹೋರಾಡಿದರು, ಯಾವೆಲ್ಲ ಗೀತೆಗಳನ್ನು ರಚಿಸಿದರು ಎಂಬ ವಿವರ ಕೃತಿಯಲ್ಲಿದೆ.

ಕರ್ನಾಟಕದ ಏಕೀಕರಣ ಸಂದರ್ಭದಲ್ಲಿ ಇಡೀ ರಾಜ್ಯದಲ್ಲಿ ನಮ್ಮ ಹೆಮ್ಮೆಯನ್ನು ಸಾರುವ ನುಡಿಗೀತೆಗಳು ಹುಟ್ಟಿದವು. ಅವುಗಳ ಇತಿಹಾಸದ ಮೆಲುಕನ್ನು ಇಲ್ಲಿ ಕಾಣಬಹುದು. ಬೆಂಗಳೂರು ದೂರದರ್ಶನದಲ್ಲಿ ಉರ್ದು ವಾರ್ತೆ ತಂದಾಗ ನಡೆದ ಹೋರಾಟ, ಕಾವೇರಿ ನದಿ ನೀರಿನ ಹೋರಾಟದ ಸಮಯದಲ್ಲಿ ಜನ್ಮ ತಳೆದ ಆಕ್ರೋಶದ ಗೀತೆಗಳನ್ನು ನೀಡಲಾಗಿದೆ. ಒಟ್ಟಾರೆಯಾಗಿ ಕರುನಾಡಿನ ಅಸ್ಮಿತೆಗೆ ಧಕ್ಕೆಯಾದಾಗ ಪ್ರತಿಭಟನೆಯ ಧ್ವನಿಯಂತೆ ಮೊಳಗಿದ ಹೆಮ್ಮೆಯ ನಾಡಗೀತೆಗಳ ಸಂಗ್ರಹವೇ ಇಲ್ಲಿದೆ. 

‘ದೀಕ್ಷೆಯ ತೊಡು ಇಂದೇ| ಕಂಕಣ ಕಟ್ಟಿಂದೆ| ಕನ್ನಡ ನಾಡೊಂದೆ| ಇನ್ನೆಂದೂ ತಾನೋಂದೇ| ಎಂದು ಅಂದು ಕುವೆಂಪು ಹಾಡಿದರು. ಅದನ್ನು ಇಂದಿಗೂ ನಾವು ಹಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಸಂಪಾದನಾ ಕಾರ್ಯ ಮತ್ತು ಅಧ್ಯಯನವಿದೆ’ ಎಂದು ಕಾ.ವೆಂ.ಶ್ರೀನಿವಾಸಮೂರ್ತಿ ಕೃತಿಯ ಪ್ರಸ್ತಾವನೆಯಲ್ಲಿ ಬರೆದಿದ್ದಾರೆ. ಕಾವ್ಯ ಮುಖೇನ ಕರುನಾಡಿನ ವೈಭವ ದರ್ಶನ ಮಾಡಿಸುವ ಕೃತಿಯಿದು. ಹತ್ತಾರು ತಲೆಮಾರಿಗೆ ಆಧಾರ, ಆಕರವಾಗಬಲ್ಲ ನಾಡು–ನುಡಿಯ ಐತಿಹಾಸಿಕ ಕೈಪಿಡಿಯೂ ಹೌದು. ಇದೊಂದು ಶ್ಲಾಘನೀಯ ಕೆಲಸ.

ಮುಖಪುಟ
ಮುಖಪುಟ

ಸಮಗ್ರ ಕನ್ನಡ ನಾಡು ನುಡಿ ಗೀತೆಗಳು‌

ಸಂಪುಟ 1 ಮತ್ತು 2

ಸಂ: ಕಾ.ವೆಂ.ಶ್ರೀನಿವಾಸಮೂರ್ತಿ

ಪ್ರ: ಪ್ರಿಯದರ್ಶಿನಿ ಪ್ರಕಾಶನ

ಸಂ:9845062549

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT