ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಮಾನತೆ ಅನಾವರಣದ ಹುಮ್ಮಸ್ಸು

Last Updated 23 ಜುಲೈ 2011, 19:30 IST
ಅಕ್ಷರ ಗಾತ್ರ

ಸಾಹಿತ್ಯ ಅಕಾಡೆಮಿ, ಪುಸ್ತಕ ಪ್ರಾಧಿಕಾರ ಮತ್ತು ಸಂಸ್ಕೃತಿ ಇಲಾಖೆಗಳು ಸಾಹಿತ್ಯ ಕಮ್ಮಟಗಳನ್ನು ಏರ್ಪಡಿಸುತ್ತವೆ ಮತ್ತು ಸಂಸ್ಕೃತಿ, ಪ್ರಕಾಶನಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಇವುಗಳಲ್ಲಿ ಸೃಜನಶೀಲತೆಗಾಗಿ ಏರ್ಪಡಿಸುವ ಕಮ್ಮಟಗಳಿಗೂ, ಉಳಿದ ಕಾರ್ಯಕ್ರಮಗಳಿಗೂ ವ್ಯತ್ಯಾಸವಿದೆ.

ಸಾಹಿತ್ಯ ಕಮ್ಮಟಗಳಿಂದ ಲೇಖಕರಾಗಿ ಕೆಲವರು ಹೊರಹೊಮ್ಮುತ್ತಿರುವುದು ನಿಜವಾಗಿಯೂ ಸಂತೋಷದ ಸಂಗತಿ. ಕಮ್ಮಟಗಳನ್ನು ನಡೆಯಿಸಿಕೊಡುವವರ ಅಭಿರುಚಿಗಳು ಇಂಥ ಲೇಖಕರ ಮೇಲೆ ಗಾಢವಾದ ಪ್ರಭಾವವನ್ನು ಬೀರಿರುತ್ತವೆ.

ಏಕೆಂದರೆ ಹೆಚ್ಚಿನ ಕಮ್ಮಟ ವಿದ್ಯಾರ್ಥಿಗಳಿಗೆ ಶಾಸ್ತ್ರೀಯವಾಗಿ ಸಾಹಿತ್ಯದ ಹಿನ್ನೆಲೆ ಇರುವುದಿಲ್ಲ. ಅಂಥ ಅಭ್ಯರ್ಥಿಗಳು ಕಮ್ಮಟಗಳನ್ನು ತಮ್ಮ ಸೃಜನಶೀಲತೆಯ ಪ್ರಾರಂಭದ ಬಿಂದುವೆಂದು ಮಾತ್ರ ಭಾವಿಸಿ, ಮುಂದೆ ತಮ್ಮತನವನ್ನು ಕಾಣುವ ಸಾಹಿತ್ಯ ರಚಿಸಿದರೆ ಕಮ್ಮಟಗಳು ಸಾರ್ಥಕಗೊಂಡಂತೆಯೇ.

ಕಲ್ಲೇಶ್ ಕುಂಬಾರರು ಇಂಥ ಸಾಹಿತ್ಯ ಕಮ್ಮಟಗಳಿಂದ ಹೊರಬಂದ ಲೇಖಕರಲ್ಲಿ ಒಬ್ಬರು. ಅವರಲ್ಲಿ ಸಾಮಾಜಿಕ ಅನ್ಯಾಯವನ್ನು ತೆರೆದು ತೋರಿಸಬೇಕೆಂಬ ಹುಮ್ಮಸ್ಸಿದೆ.

ಬಹುಸಂಖ್ಯಾತ ಜಾತಿಗೆ ಸೇರಿದ ಬಲಾಢ್ಯರು ಮತ್ತು ಮಠಾಧೀಶರು ಕೆಳವರ್ಗದವರನ್ನು ಹೇಗೆ ನಡೆಯಿಸಿಕೊಳ್ಳುತ್ತಾರೆಂಬುದನ್ನು ತೆರೆದು ತೋರಿಸಲೇಬೇಕೆಂಬ ಉದ್ದೇಶವೂ ಇದೆ. ಶೋಷಣೆ ಮುಕ್ತ ಸಮಾಜ ರಚನೆಯಾಗಬೇಕೆಂಬ ಬಯಕೆಯು ಮೂಲದಲ್ಲಿ ಒಂದು ಆರೋಗ್ಯಕರ ಸಿದ್ಧಾಂತವಾಗಿದೆ.

ಸೃಜನಶೀಲತೆಯ ಅಡಿಯಲ್ಲಿ ಈ ಸಿದ್ಧಾಂತವು ಬಂದೊಡನೆ ಲೇಖಕರು ರಚಿಸುವ ಪಾತ್ರಗಳಲ್ಲಿ ರಕ್ತ ಮಾಂಸಗಳು ತುಂಬಿಕೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಪಾತ್ರಗಳು ಹೆಚ್ಚಿನ ಅಂಶ ಪ್ರಾತಿನಿಧಿಕವಾಗುವ ಅಪಾಯವಿರುತ್ತದೆ. ಕಲ್ಲೇಶ್ ಕುಂಬಾರರು ಸೃಜನಶೀಲತೆಯ ಶಕ್ತಿ ಮತ್ತು ಪ್ರಾತಿನಿಧಿಕ ಸ್ವರೂಪದ ಮಧ್ಯೆ ನಡೆದು ತಮ್ಮ ದಾರಿಯನ್ನು ಕಂಡುಕೊಳ್ಳಲು ಈ ಸಂಕಲನದಲ್ಲಿ ಸಾಹಸಮಯ ಪ್ರಯತ್ನವನ್ನೇ ಮಾಡಿದ್ದಾರೆ.

ಲೇಖಕರ ಭಾಷೆಯಲ್ಲಿ ಪ್ರಾದೇಶಿಕತೆಯ ಸೊಗಡಿದೆ. ಹೀಗಾಗಿ ಪಾತ್ರಗಳು ಅವರು ನಿರ್ಮಿಸುವ ಸನ್ನಿವೇಶಗಳಲ್ಲಿ ಗಟ್ಟಿಯಾಗಿ ಸ್ಥಾಪಿತಗೊಳ್ಳುತ್ತವೆ. ಈ ಸಂಕಲನಕ್ಕೆ ಶೀರ್ಷಿಕೆಯಾಗಿ ಬಂದ `ಉರಿಯ ನಾಲಿಗೆಯ ಮೇಲೆ~ ಕಥೆಯಲ್ಲಿ ರತ್ನಪ್ಪನ ಪಾತ್ರ ಈ ರೀತಿಯಾಗಿ ಸ್ಥಾಪನೆಯಾಗುತ್ತದೆ. ಅವಳ ಮಗಳ ಮೇಲೆ ಆಸೆ ಪಟ್ಟಿರುವ ಮೇಲ್ವರ್ಗದ ಬಲಾಢ್ಯನೊಬ್ಬನಿಂದಾಗಿ ಬೆಂಕಿಯ ಕೊಂಡವನ್ನು ಹಾಯುವ ಅವಳ ವಾರ್ಷಿಕ ಧಾರ್ಮಿಕ ಸಂಪ್ರದಾಯಕ್ಕೆ ಅಡೆತಡೆ ಉಂಟಾಗಿದೆ.

ರತ್ನವ್ವನ ಮನೆತನದವರು ದೇವಿಯ ಆರಾಧಕರಾಗಿ ಬೆಳೆದ ಬಗೆಯನ್ನು ಕಥೆಗಾರರು ಬಹಳ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ದೈವದಲ್ಲಿಯ ಅವರ ವಿಶ್ವಾಸವು ಅವರನ್ನು ಶೋಷಣೆಯ ಬಗೆಗೆ ಕುರುಡರನ್ನಾಗಿಸಿದೆ ಎಂಬ ಧ್ವನಿಯು ಕಥೆಯಿಂದ ಹೊರಡುವುದರಲ್ಲಿಯೇ ಅದರ ಧ್ವನಿಪೂರ್ಣ ಸೃಜನಶೀಲತೆ ಅಡಗಿದೆ.

ಪ್ರತಿಭಟನೆಯ ನಿರ್ಧಾರದಿಂದ ಕಥೆ ಕೊನೆಗೊಳ್ಳುತ್ತದೇನೊ ನಿಜ. ಆದರೆ ಕೆಳವರ್ಗದವರ ಇಂಥ ಆಲೋಚನೆಯು ಕ್ರಿಯೆಯಾಗುವ ಮಟ್ಟಕ್ಕೆ ಬಂದೊಡನೆ ಇಲ್ಲಿಯ ಕೆಲವು ಕಥೆಗಳು ಏಕೆ ಸ್ಥಗಿತಗೊಳ್ಳುತ್ತವೆ ಎಂಬುದು ಅರ್ಥವಾಗುವುದಿಲ್ಲ.

`ಕೆಂಡದ ಮಳೆ ಕರೆವಲ್ಲಿ~ ಎನ್ನುವ ಕಥೆಯಲ್ಲಿ ಈ ಮೊದಲಿನ ಕಥೆಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಶೋಷಿತಳು ಗರ್ಭಿಣಿಯಾಗುವ ಚಿತ್ರವಿದೆ. ಇಲ್ಲಿಯೂ ಕೂಡ, ತಾಯಿಯು ಕುಡಗೋಲು ಹುಡುಕುವುದರೊಂದಿಗೆ ಕಥೆಯು ಮುಕ್ತಾಯವಾಗುತ್ತದೆ.

ಕ್ರಿಯೆಯಿಂದ ಕಥೆಯು ಹಿಂದೆ ಸರಿಯಲು ಕಾರಣ `ಕ್ರಿಯೆ~ಯು ಸಹಜವಾಗಿ ಹತ್ತಿಕ್ಕಲ್ಪಡುತ್ತದೆ ಎಂಬ ಭಾವನೆ ಇರಬಹುದೇ ಎಂಬ ಸಂಶಯ ಬರುತ್ತದೆ.

`ಅರಿವಿನ ಕೇಡು~ ಎನ್ನುವ ಕಥೆಯಲ್ಲಿ ತೋರಿಕೆಗೆ ಹಿಂದೂ ಮತ್ತು ಮುಸಲ್ಮಾನರ ಮಧ್ಯದ ಕೋಮುದ್ವೇಷವು ಕಾಣಿಸಿಕೊಂಡರೂ, ಕಥೆಯನ್ನು ಸೂಕ್ಷ್ಮವಾಗಿ ಪರೀಕ್ಷಿಸಿದಾಗ ಆ ದ್ವೇಷವು ನಿಮಿತ್ತ ಮಾತ್ರವಾಗಿದೆ.

ಮನುಷ್ಯನ ಮೂರ್ಖತನವೇ ಕಥೆಯ ಕೇಂದ್ರದಲ್ಲಿದೆ ಎನ್ನಿಸುತ್ತದೆ. ಕ್ಷುಲ್ಲಕವಾದ ಒಂದು ಕೋಳಿ, ತಿಪ್ಪೆಯಲ್ಲಿ ಬಿದ್ದು ಸಾಯುತ್ತಿರುವ ಒಂದು ಹಂದಿ ಮತ್ತು ಒಂದು ಕ್ಷುಲ್ಲಕ ಜಗಳ ಇವುಗಳಿಂದಾಗಿ ದುಡಿದು ತಿನ್ನುವ ಹೆಣ್ಣುಮಗಳೊಬ್ಬಳು ಪಡಬಾರದ ಪಾಡುಪಡುತ್ತಾಳೆ. ಹಾಗೆ ನೋಡಿದರೆ, ಕೊನೆಗೆ ಅವಳು ತನ್ನ ಮಗನೇ ಅಪರಾಧಿ ಎಂಬ ನಿರ್ಧಾರಕ್ಕೆ ಬರುವುದು ಕೂಡ ಅವಳ ದುಡಿತದ ಜೀವನದಿಂದಲೇ ಎದ್ದು ಬಂದ ನೈತಿಕ ಧೈರ್ಯವಾಗಿ ಕಾಣುತ್ತದೆ. ಕುಂಬಾರರ ಮೂಲ ಕಾಳಜಿ ಇರುವುದು ಹಳ್ಳಿಯಲ್ಲಿ ತಮ್ಮ ಹಕ್ಕುಗಳಿಗಾಗಿ ಆಗಾಗ ಹೋರಾಡುವ ಹೆಣ್ಣು ಮಕ್ಕಳ ಕುರಿತಾಗಿಯೇ.

`ಕಿಚ್ಚು~, `ಭವಕ್ಕೆ ಬೀಜವಾದದು~, `ಹಾದಿ~ ಮತ್ತು `ಕರ್ಪೂರದ ಉರಿ~- ಇವುಗಳು ಕೂಡ ಇಲ್ಲಿಯ ಶಕ್ತಿಯುತವಾದ ಕಥೆಗಳೇ. ಕುಂಬಾರರ ಭಾಷೆ ಶಕ್ತಿಯುತವಾಗಿದೆ ನಿಜ. ಆದರೆ ಒಂದು ಸನ್ನಿವೇಶದಲ್ಲಿ ಠೇಂಕಾರವನ್ನು ಹೊರಡಿಸುವ ಶಬ್ದಗಳಿಗೇ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟರೆ ಮೌನವಾಗಿ, ಸೌಮ್ಯವಾಗಿ ಮತ್ತು ಹದವಾಗಿ ಓದುಗರ ಹೃದಯವನ್ನು ತಟ್ಟುವ ಕ್ರಿಯೆಯು ಮಾಯವಾಗಿ ಬಿಡಬಹುದೆಂಬುದನ್ನು ಕೂಡ ಈ ಕಥೆಗಾರರು ಅರಿಯಬೇಕು. ದುಃಖದ ಹಲವು ಮುಖಗಳಲ್ಲಿ ಶಬ್ದರಾಹಿತ್ಯವೂ ಒಂದು ಮುಖ. ಅದರ ಸಂವಹನ ಶಕ್ತಿಯು ಹೆಚ್ಚು ಆಳವಾದದ್ದು.

ಇದು ಈ ಲೇಖಕರ ಪ್ರಥಮ ಕಥಾ ಸಂಕಲನವಾಗಿರುವುದರಿಂದ ಇಲ್ಲಿ ಹುಟ್ಟುವ ಭರವಸೆಗಳು ಕಾಲ ಕಳೆದಂತೆ ಮಾಗುತ್ತವೆ. ಅಂಥ ಲಕ್ಷಣಗಳು ಈ ಕಥಾಸಂಕಲನದಲ್ಲಿವೆ. ಈ ಸಂಕಲನಕ್ಕೆ ಪ್ರಹ್ಲಾದ ಅಗಸನಕಟ್ಟೆಯವರು ಒಳ್ಳೆಯ ವಿಮರ್ಶಾತ್ಮಕ ಮುನ್ನುಡಿ ಒದಗಿಸಿದ್ದಾರೆ. ಸೃಜನ್ ಅರ್ಥಪೂರ್ಣವಾದ ಮುಖಪುಟ ರಚಿಸಿದ್ದಾರೆ.

ಉರಿಯ ನಾಲಿಗೆಯ ಮೇಲೆ
ಲೇ: ಕಲ್ಲೇಶ್ ಕುಂಬಾರ್
ಪು: 160; ಬೆ: ರೂ. 100
ಪ್ರ: ರೂಪ ಪ್ರಕಾಶನ, ನಂ. 2407/ಕೆ-1, 1ನೇ ಕ್ರಾಸ್ ಹೊಸಬಂಡಿಕೇರಿ, ಮೈಸೂರು-570004

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT