ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗ್ನಗೊಂಡ ಕನ್ನಡದ ಚಹರೆಗಳ ಹುಡುಕಾಟ

ವಿಮರ್ಶೆ
Last Updated 30 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಸರಾಸರಿ ಅರ್ಧಶತಮಾನದ ಕಾಲದುದ್ದಕ್ಕೂ ಶಂಬಾ ತಡಕಾಡಿದ್ದು ಪ್ರಮುಖವಾಗಿ ಕನ್ನಡ ಭಾಷೆಯ ಎಡೆ ಹಾಗೂ ಹಿಂದೂಧರ್ಮದ ನಡೆ; ಇವೆರಡನ್ನೂ ಆತ್ಯಂತಿಕವಾಗಿ ಶೋಧಿಸಿದ ಶಂಬಾ ದೊಡ್ಡ ಮೀಮಾಂಸಕರೇ ಹೌದು’– ಇದು ಶಂಬಾರೊಡನೆ ಮೊಗಳ್ಳಿ ಗಣೇಶ್ ನಡೆಸಿದ ಅನುಸಂಧಾನಕ್ಕೆ ಗುರುತಿಸಿಕೊಂಡ ವೇದಿಕೆ. ಕನ್ನಡಿಗರೆಂದರೆ ಒಂದು ಭಾಷೆಯನ್ನಾಡುವ ಸಮೂಹವಷ್ಟೆ ಅಲ್ಲ. ಅದೊಂದು ಜೀವವೃಕ್ಷ.

ಅನೇಕ ಭಾಷಿಕ ಕವಲುಗಳೂ, ಜೀವನ ಮೀಮಾಂಸೆಯ ಅನೇಕ ಮಾರ್ಗಗಳೂ ಅಲ್ಲಿ ಫಲವಾಗಿವೆ. ಇಂತಹ ಕನ್ನಡ ಬದುಕಿನ ಚಹರೆಗಳನ್ನು ಗುರುತಿಸಿಕೊಳ್ಳುವಲ್ಲಿ ಅನುಸರಿಸುವ ಅನೇಕ ಮಾರ್ಗಗಳಿವೆ. ಅದು ಅಖಿಲವೂ ಅಲ್ಲದ, ಅಖಂಡವೂ ಅಲ್ಲದ, ಒಂದೂ ಅಲ್ಲದ ಭಾರತವೆಂಬ ಅನೇಕಗಳೊಡನೆ ರೂಪಿಸಿಕೊಳ್ಳುವ ಸಂಬಂಧವನ್ನು ವ್ಯಾಖ್ಯಾನಿಸುವ ಕ್ರಮವೂ ಹೌದು, ತನ್ನನ್ನು ತಾನು ಕಂಡುಕೊಳ್ಳುವ ಪ್ರಕ್ರಿಯೆಯೂ ಹೌದು.

ಇದರಿಂದಾಗಿ ದ್ರಾವಿಡವೆಂಬ ದಕ್ಷಿಣದ ಮೂಲಕ ಉತ್ತರವನ್ನು  ನೋಡುವ, ದೇಶ ಭಾಷೆಗಳ ಮೂಲಕ ಸಂಸ್ಕೃತವನ್ನು ನೋಡುವ, ದೇಸಿ ಮೀಮಾಂಸೆಗಳ ಮೂಲಕ ‘ಭಾರತೀಯ’ ಮೀಮಾಂಸೆಯನ್ನು ನೋಡುವ, ಸ್ಥಳೀಯ ದನಗಾಹಿ ಹಟ್ಟಿಕಾರರ ಸಂಸ್ಕೃತಿಯ ಮೂಲಕ ಹೊರಗಿನಿಂದ ಬಂದ ಆರ್ಯ ಸಂಸ್ಕೃತಿಯನ್ನು ಇದಿರಾಗುವ,  ಸ್ಥಳೀಯ ರಾಜಕೀಯ ಪಕ್ಷಗಳ ಮೂಲಕ ಉತ್ತರದ ಹೈಕಮಾಂಡುಗಳನ್ನು ಇದಿರಾಗುವ ಅನೇಕ ದೃಷ್ಟಿಕೋನಗಳು ಲಭ್ಯವಾಗುತ್ತವೆ. ತಮಿಳುನಾಡಿನ ರಾಜಕೀಯ ಅಧಿಕಾರ ಕೇಂದ್ರಗಳು ಉತ್ತರದ ಜೊತೆಗಿನ ರಾಜಕಾರಣವನ್ನು ನಿರ್ವಹಿಸುವಲ್ಲಿ, ಅತ್ಯಂತ ಎಚ್ಚರದಿಂದ ಈ ಸಂಬಂಧಗಳನ್ನು ಕಾಯ್ದುಕೊಳ್ಳುತ್ತಲೇ ಬಂದಿವೆ.

ಈ ಉತ್ತರ-ದಕ್ಷಿಣ ಮುಖಾಮುಖಿಯನ್ನು ಚರಿತ್ರೆಯುದ್ದಕ್ಕೂ ತುಂಬಾ ಸಡಿಲ ರೀತಿಯಲ್ಲಿ ಕನ್ನಡ ನಿರ್ವಹಿಸಿರುವ ಸಂಗತಿಯನ್ನು ಶಂಬಾ ಅವರು ತೋರಿಸಿಕೊಟ್ಟಿದ್ದಾರೆ. ಅವರು ಒದಗಿಸುವ ಭಾಷಿಕ ಪ್ರಮಾಣಗಳು, ಭಾಷೆಯ ಕುಲಮಂಡಲಗಳು, ಭಾಷೆಯ ಸಾಂಸ್ಕೃತಿಕ ಆಯಾಮಗಳು ಮುಂತಾಗಿ ಭಾಷೆಯ ಸುತ್ತಮುತ್ತಲಿನ ಕೆಲವು ಓಡಾಟಗಳನ್ನು ಈ ಕೃತಿಯಲ್ಲಿ ಮೊಗಳ್ಳಿ ನಡೆಸಿದ್ದಾರೆ. 

ಶಂಬಾ ಸಂಸ್ಕೃತಿ ಸಂಶೋಧಕರು. ಆರ್ಯ ದ್ರಾವಿಡ ತಾತ್ವಿಕ ಸಂಘರ್ಷದ ಸ್ವರೂಪವನ್ನು ಪುನಾರಚಿಸುವುದು ಅವರ ಗುರಿಯಾಗಿದೆ. ಇದರ ಒಂದು ಆಯಾಮವನ್ನು ಮೊಗಳ್ಳಿ ಹೀಗೆ ಗುರುತಿಸುತ್ತಾರೆ: ‘ಹಟ್ಟಿಕಾರರ ಕನ್ನಡವನ್ನು ಒಂದೆಡೆ ಹಿಡಿದು, ಸಂಸ್ಕೃತ ಭಾಷೆಯ ಮತ್ತೊಂದು ತುದಿಯನ್ನು ಆವಾಹಿಸಿಕೊಂಡು, ಹಟ್ಟಿಕಾರರು ಮತ್ತು ಸಂಸ್ಕೃತದ ಆರ್ಯರು ಒಂದೇ ಎಂದು ಬೃಹತ್ ಕಥನವನ್ನು ಮಂಡಿಸುವರು. ಅವರು ಹಟ್ಟಿಕಾರರ ಕನ್ನಡದ ಮೂಲಕ ಕನ್ನಡ ರಾಷ್ಟ್ರೀಯತೆಯನ್ನು ಪ್ರತಿಪಾದಿಸುತ್ತಲೇ ಸಂಸ್ಕೃತ ಭಾಷೆಯ ಮೂಲಕ ಭಾರತದ ಸಂಯುಕ್ತ ರಾಷ್ಟ್ರೀಯತೆಯನ್ನು ಪ್ರತಿಪಾದಿಸುವರು’. ಶಂಬಾ ಓದಿನ ಮೇಲ್ನೋಟಕ್ಕೆ ಇದು ಮೊಗಳ್ಳಿಯವರನ್ನು  ಕಾಡುವ ತೊಡಕು.

ಕನ್ನಡ ಸಂಸ್ಕೃತಿಯ ಪ್ರಮುಖ ಅಂಗಗಳಾದ, ನಾಗ ಸಂಸ್ಕೃತಿ, ಜಲಸಂಸ್ಕೃತಿ, ಶಿವ ಸಂಸ್ಕೃತಿ, ಚಾಂದ್ರ ಸಂಪ್ರದಾಯ, ಮಾತೃ ಸಂಸ್ಕೃತಿಗಳ ಶೋಧನೆಗೆ ತಮ್ಮ ಬದುಕನ್ನು ಕೊಟ್ಟುಕೊಂಡ ಶಂಬಾ ಕನ್ನಡದ ಮಹಾವಿದ್ವಾಂಸರು. ಸುಮಾರು 2000 ಪುಟಗಳ ಶಂಬಾ ಅವರ ಸಂಶೋಧನಾ ಸಾಹಿತ್ಯದ ಒಟ್ಟು ಕ್ಯಾನ್‌ವಾಸನ್ನು ಗಮನಿಸಿದಾಗ ದ್ರಾವಿಡ ಮತ್ತು ಆರ್ಯರ ನಡುವಿನ ಸಾಂಸ್ಕೃತಿಕ ಸಂಘರ್ಷವನ್ನು ಅನುಸಂಧಾನ ಮಾಡುತ್ತಿರುವ ಅವರ ನಿಲುವು, ಅವುಗಳ ಸಾಮರಸ್ಯದ ಉದ್ದೇಶದ್ದೋ, ಆರ್ಯಪರವಾದದ್ದೋ, ದ್ರಾವಿಡಪರವಾದದ್ದೋ, ಸಂಕಲನಾನುಸಂಧಾನದ್ದೋ ಅಥವಾ ನಿರ್ಲಿಪ್ತದ್ದೋ– ಎಂಬ ಪ್ರಶ್ನೆಯನ್ನು ಎದುರಾಗದಿರಲು ಸಾಧ್ಯವಿಲ್ಲ.

ಸರಳವಾಗಿ ಹೇಳುವುದಾದರೆ ಅವರು ಮಾಡುತ್ತಿರುವುದು ವೇದೋಪನಿಷತ್ತಿನ ಶಬ್ದ ಪ್ರತಿಮೆಗಳ ಮೂಲಕ ಒಂದು ಸನಾತನ ಜೀವನ ಮೀಮಾಂಸೆಯನ್ನು ಕಟ್ಟುವ ಪ್ರಯತ್ನ. ಈ ಪ್ರಯತ್ನದಲ್ಲಿ ಮೊದಲಿಗೆ ಎದ್ದು ಕಾಣುವ ಅಂಶವೆಂದರೆ ಭಾರತದ ಇತರ ಪ್ರಮುಖ ಶ್ರಮಣಧಾರೆಗಳು ನಡೆಸಿರುವ ತಾತ್ವಿಕ ಸಂಘರ್ಷ ಶಂಬಾ ಅವರಿಗೆ ಅಷ್ಟು ಪ್ರಮುಖವಲ್ಲ. 

ಶಂಬಾ ಅವರ ಸಂಶೋಧನೆಯ ಮಾರ್ಗದಲ್ಲಿ ಅವರು ಮುಂದಿಡುವ ಭಾರತೀಯ ಅಖಂಡತೆಯಲ್ಲಿ ಲಿಂಗತಾರತಮ್ಯವಾಗಲೀ, ಜಾತಿ ತಾರತಮ್ಯವಾಗಲೀ, ಸಂಸ್ಕೃತಿ ತಾರತಮ್ಯವಾಗಲೀ ಪರಿಶೀಲನೆಗೆ ಒಳಪಡುವುದಿಲ್ಲ ಎನ್ನುವುದು ಮೊಗಳ್ಳಿಯವರ ಪ್ರಮುಖ ತಕರಾರು. ಇದನ್ನು ಶಂಬಾ ನಿರ್ವಹಿಸುವ ಕ್ರಮ ಬೇರೆಯೇ ಇದೆ. ಸದ್ಯದ ಭಾರತದ ಸಾಮಾಜಿಕ ಬದುಕಿನ ಕೇಡಿಗೆ ಮನುಪ್ರಣೀತ ಜೀವನಕ್ರಮ ಎಂದು ಶಂಬಾ  ಹೇಳಲಾರರು.

ಬದಲಿಗೆ ವಿವಸ್ವನ್ ಮನುಪ್ರಣೀತ ಮಾನವಧರ್ಮವನ್ನು ಪಾಲಿಸದಿರುವುದೇ ಕಾರಣವೆಂದು ತಮ್ಮ ಸಂಶೋಧನಾ ಬರಹಗಳ ಉದ್ದಕ್ಕೂ ಪ್ರಸ್ತಾಪಿಸುತ್ತಲೇ ಇರುತ್ತಾರೆ. ಸದ್ಯದಲ್ಲಿ ಭಾರತೀಯರು ಪಾಲಿಸುತ್ತಿರುವ ಮನುಪ್ರಣೀತ ಜೀವನಕ್ರಮದಲ್ಲಿನ ಕೇಡುಗಳನ್ನು ಸಹಿಸಿಕೊಳ್ಳಲು ಕೋರುತ್ತಾರೆ. ಹಿಂದೂ ವರ್ಣವ್ಯವಸ್ಥೆಯ ಮೂಲ ಆಕರವೆಂದು ಗುರುತಿಸಲ್ಪಟ್ಟಿರುವ ಋಗ್ವೇದದ 10ನೆಯ ಮಂಡಲದ ಪುರುಷ ಸೂಕ್ತದ ಬಗೆಗೆ ಶಂಬಾ ಅವರ ನಿಲುವುಗಳು ಇವು: ಪುರುಷ ಸೂಕ್ತದಿಂದ ಆ ಕಾಲದವರು ಸೃಷ್ಟಿಕ್ರಮವು ಹೇಗಾಯಿತು ಎಂಬುದನ್ನು ಒಂದೆಡೆಗೆ ಹೇಳಿದ ಪ್ರಯತ್ನವಿದೆ. ಈ ಪ್ರಪಂಚವು ಸೂರ್ಯನಿಂದಾಯಿತು. ಸೂರ್ಯನೇ ಸೃಷ್ಟಿಕರ್ತನು.

ಅವನ ಒಂದು ಅಂಶವು ವಿಶ್ವಾಭೂತಾನಿ. ಈ ಜೀವನವು ಸುವ್ಯವಸ್ಥಿತವಾಗಬೇಕಾದರೆ ಯಾರು ಯಾವ ಕಾರ್ಯ ಮಾಡಬೇಕು. ಅವರು ಯಾವ ಸ್ಥಾನದವರು ಎಂಬುದನ್ನು ವರ್ಣವ್ಯವಸ್ಥೆಯ ಮಾತುಗಳಿಂದ ಹೇಳಲಾಗಿದೆ. ಸ್ಥಾನವು ಯಾವುದೇ ಇದ್ದರೂ ಅವರು ಪುರುಷನ ಅಂಶವೆಂದೇ ತಿಳಿಯಬೇಕು. ಕಾರ್ಯವಿಭಾಗವೇ ಹೊರತು ಯೋಗ್ಯತಾ ವಿಭಾಗವಲ್ಲ. ಪುರುಷ ಸೂಕ್ತವು ಪ್ರವೃತ್ತಿ ಮಾರ್ಗವಾದಿಯಾಗಿದೆಯೆಂಬುದು ಸುಳ್ಳಲ್ಲ. ವೇದದಲ್ಲಿಯ ವಿಚಾರವೇ ಹಾಗಿದೆ. ಪುರುಷಸೂಕ್ತದಲ್ಲಿ ಬಂದ ವರ್ಣನೆಯೂ ಗೀತೆಯಲ್ಲಿ ಹೇಳಿದ ಗುಣ ಕರ್ಮಗಳಿಂದ ಚಾತುರ್ವರ್ಣ್ಯಗಳುಂಟಾದುವೆಂಬುದನ್ನೇ ಪುಷ್ಟೀಕರಿಸುತ್ತದೆ. 

ಶಂಬಾ ಕಟ್ಟುತ್ತಲೇ ಭಂಜನೆಗೆ ತೊಡಗುವ ಸಂಪ್ರದಾಯಗಳೆಂದರೆ, ನಾಗ ಸಂಪ್ರದಾಯ, ಚಂದ್ರ ಸಂಪ್ರದಾಯ, ರಸ-ಜಲ ಸಂಪ್ರದಾಯ, ಆಗುವಿಕೆಯ ಸಂಬಂಧ ಸಂಪ್ರದಾಯ, ಗುರು ಸಂಪ್ರದಾಯ, ಮಾತೃ ಸಂಪ್ರದಾಯ ಮತ್ತು ಶೈವ ಸಂಪ್ರದಾಯ. ಇವುಗಳಲ್ಲಿ ನಾಗ ಸಂಪ್ರದಾಯವನ್ನು ಕೃಷ್ಣ ಸಂಪ್ರದಾಯದೊಡನೆ, ಚಂದ್ರ ಸಂಪ್ರದಾಯವನ್ನು ಸೂರ್ಯಸಂಪ್ರದಾಯದೊಡನೆ, ಅಪೋ ತತ್ವವನ್ನು ನಾರಾಯಣ ತತ್ವದೊಡನೆ, ಮಾತೃ ಸಂಪ್ರದಾಯವನ್ನು ಪಿತೃ ಸಂಪ್ರದಾಯದೊಡನೆ, ಶೈವ ಸಂಪ್ರದಾಯವನ್ನು ರುದ್ರ ಸಂಪ್ರದಾಯದೊಡನೆ ಸಂಕರಗೊಳಿಸಿಬಿಡುತ್ತಾರೆ.

ಅವೈದಿಕನಾದ ಶಿವನನ್ನು ಒಂದು ರೀತಿಯ ಸಂಕಲನಾನುಸಂಧಾನಕ್ಕೆ ಒಳಪಡಿಸಿ ವೇದದ ರುದ್ರನೊಡನೆ ಸಮೀಕರಿಸುವುದರ ಮೂಲಕ ಒಂದು ಹೊಸ ಹೈಬ್ರಿಡ್ ಪ್ರತಿಮೆ ರೂಪಿಸುತ್ತಾರೆ. ನಾಗ ಸಂಪ್ರದಾಯ ನಿಶ್ಚಯವಾಗಿಯೂ ವೈದಿಕರಲ್ಲಿ ಇರಲಿಲ್ಲ ಎನ್ನುತ್ತಲೆ ವೇದದಲ್ಲಿನ ಸೂಕ್ತವೊಂದನ್ನು ಉದಾಹರಿಸುತ್ತ ಅದು ಅಲ್ಲಿಯೂ ಇದ್ದಿರಬೇಕೆಂಬ ಸಂದೇಹವೊಂದನ್ನು ಸೃಷ್ಟಿಸುತ್ತಾರೆ. ಫಲ ಸಂಪ್ರದಾಯದ ಲಿಂಗಪೂಜೆ, ಇತ್ಯಾದಿ ರಸಸಂಕೇತಗಳಿಂದ ತುಂಬಿ ಹೋಗಿರುವ ಭಾರತೀಯ ದೈವ ಪ್ರತಿಮೆಗಳನ್ನು ತೀವ್ರವಾಗಿ ಅನುಮಾನಿಸುತ್ತಾರೆ.

ಶೈವ ವೈಷ್ಣವ ಎರಡೂ ಅಲ್ಲದ ಬೀರಪ್ಪ, ಖಂಡೋಬ, ಮೈಲಾರ, ವಿಠಲ ಬೀರಪ್ಪ, ಎಲ್ಲಮ್ಮ– ಈ ದೈವಗಳು ಹೈಜಾಕ್ ಅಗಿ ವಿಷ್ಣು, ಕೃಷ್ಣ, ಪಾರ್ವತಿಯರೊಡನೆ ಸಮೀಕರಣಗೊಂಡು ಕಳೆದುಹೋದ ಬಗೆಗಿನ ಚರಿತ್ರೆಯನ್ನು, ಬೌದ್ಧ ನಾಥ ಪಂಥಗಳ ನೂರಾರು ದೈವತಗಳು ಹಿಂದೂ ದೇವರುಗಳಾಗಿ ಸಮೀಕರಣಗೊಂಡ ಸಂಗತಿಗಳನ್ನು ನಿರ್ಣಾಯಕ ದನಿಯಲ್ಲಿ ಮಂಡಿಸುವುದಿಲ್ಲ. ಉಡುಪಿಯ ದೈವತವನ್ನು ಕೃಷ್ಣನೆಂದು ಪ್ರತಿಷ್ಠಾಪಿಸಲು ಅವರು ತೋರುವ ಜಾಣ್ಮೆ ಆಕರ್ಷಕವಾಗಿದೆ. ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ಅಗ್ನಿಪೂಜೆ ಪರೋಕ್ಷವಾಗಿ ಆರ್ಯಸಂಸ್ಕೃತಿಯಿಂದಲೇ ಎಂಬುದನ್ನು ನಿರ್ಣಾಯಕವಾಗಿ ಮುಂದಿಡುತ್ತಾರೆ.

ಹಾಗಾದರೆ ಇವರು ಕೆಡವುತ್ತಿರುವ ಕಟ್ಟಡ ಯಾವುದು? ಆರ್ಯರದ್ದೋ ದ್ರಾವಿಡರದ್ದೋ? ಒಂದಂಶವನ್ನು ಗಮನಿಸಬೇಕು. ಈ ಅವೈದಿಕ ಪರಂಪರೆಗಳೆಲ್ಲವೂ ಶಂಬಾರವರ ವ್ಯಾಖ್ಯಾನದಿಂದಾಗಿ ತಮ್ಮ ಅವೈದಿಕ ಸ್ವಂತಿಕೆಯನ್ನು ಕಳೆದುಕೊಂಡು ತೀವ್ರವಾದ ಅನುಮಾನಕೀಡಾಗುತ್ತವೆ. ಅಣಬೆ, ಲಿಂಗ, ಹುತ್ತ, ನಾಗ, ಕವಡೆ, ನೀರು, ಕೋಡಿ, ಬಸವ ಮುಂತಾದ ಫಲವಂತಿಕೆಯ ಸಂಕೇತಗಳನ್ನು ಆರಾಧಿಸಿಕೊಂಡು ಬಂದ ಸ್ಥಳೀಯ ಪರಂಪರೆಯ ಎಲ್ಲ ಸಂಕೇತಗಳು ಭ್ರಷ್ಟಗೊಳ್ಳುತ್ತವೆ.

ಈ ಪ್ರತಿಮೆಗಳನ್ನು ವೈದಿಕ ಪ್ರತಿಮೆಗಳೊಡನೆ ಸಂಯೋಜನೆಗೊಳಿಸುವ ಮೂಲಕ ಇವುಗಳ ಸ್ವತಂತ್ರಧ್ವನಿಯನ್ನು ಹತ್ತಿಕ್ಕುತ್ತಾರೆ. ಸಮೂಹದ ನಡುವೆ ಇಂದಿಗೂ ಜೀವಂತವಾಗಿರುವ ಅಗ್ನಿದ್ವೇಷ, ಜಲಪ್ರೀತಿ, ಉತ್ತರ ತಿರಸ್ಕಾರಗಳು ಶಂಬಾರವರ ಕಣ್ತಪ್ಪಿ ಹೋಗುತ್ತವೆ. ಈ ಸಂಕರ ಪ್ರಕ್ರಿಯೆಯಲ್ಲಿ ವೈದಿಕ ಪ್ರತಿಮೆಗಳು ಪುನರ್ ಪ್ರಜ್ವಲಿಸುವಂತಾಗಿ ನಿಸರ್ಗದೊಡನೆಯೇ ಬಾಳಿಕೊಂಡು ಬಂದ ‘ದಕ್ಷಿಣ-ಪ್ರತಿಮೆಗಳು’ ದುರ್ಬಲವಾಗುತ್ತಾ ಹೋಗುವುದನ್ನು ಶಂಬಾ ಪ್ರಯಾಣದಲ್ಲಿ ಕಾಣಬಹುದು.

ಆರ್ಯ ಸಂಸ್ಕೃತಿಯ ನಿರಾಕರಣೆಯ ಒಂದು ಸಾಲಿನ ಜೊತೆಗೆ ಅದನ್ನು ಸಹ್ಯಗೊಳಿಸಬಲ್ಲ ಹತ್ತು ಸಾಲುಗಳು ಪುನರಾವೃತಗೊಳ್ಳುವ ಕ್ರಮವನ್ನು ಅವರ ಬರವಣಿಗೆಯಲ್ಲಿ ಗುರುತಿಸಬಹುದು. ಈ ಪ್ರತಿಮಾ ಸಂಕೇತಗಳ ದ್ರಾವಿಡ ಚಹರೆಗಳನ್ನು ಅವರು ಅತಂತ್ರಗೊಳಿಸುತ್ತಾರೆ. ಮೊಗಳ್ಳಿಯವರ ಈ ಕೃತಿಯಲ್ಲಿ ಇದರ ಕೆಲವಂಶಗಳನ್ನು ಮಾತ್ರ ಗುರುತಿಸಿದ್ದಾರೆ.

ಶಂಬಾ ಭಾಷಾಕೋಶವನ್ನು, ಅರ್ಥಕೋಶವನ್ನು ತಮ್ಮ ಪ್ರಧಾನ ಆಕರವಾಗಿ ಬಳಸುತ್ತಾರೆ. ಇದನ್ನು ಈ ಕೃತಿಯುದ್ದಕ್ಕೂ ಮೊಗಳ್ಳಿ ಪ್ರಧಾನ ನೆಲೆಯಲ್ಲಿ ಚರ್ಚಿಸಿದ್ದಾರೆ. ಶಂಬಾ ಪದವೊಂದರ ನಿಷ್ಪತ್ತಿಯನ್ನನುಸರಿಸುತ್ತಾ ಅದರ ಜೊತೆ ಒಂದು ಹಿಂಪಯಣವನ್ನು ಕೈಗೊಳ್ಳುತ್ತಾರೆ. ಪ್ರತಿ ಪದವೂ ತಾನು ಹೊತ್ತೊಯ್ಯುತ್ತಿರುವ ಅರ್ಥಕೋಶವನ್ನು ಬಿಚ್ಚಿ ಹರಡುತ್ತದೆ. ಆದರೆ ಶಂಬಾ ತನಗೆ ಬೇಕಾದುದಷ್ಟನ್ನು ಎತ್ತಿಕೊಂಡು ಉಳಿದದ್ದನ್ನು ನಿಶ್ಚಿಂತೆಯಾಗಿ ಚೆಲ್ಲಿಬಿಡುತ್ತಾರೆ.

ಸಂಶೋಧನೆಯ ಇನ್ನೊಂದು ಚಟುವಟಿಕೆಯೆಂದರೆ ನಾವೀಗ ನಡೆದು ಬಂದಿರುವ ದಾರಿಯನ್ನು ಕಳಚುತ್ತಾ ನಿರಸನಗೊಳಿಸುತ್ತಾ ಹಿಂಪಯಣವೊಂದನ್ನು ಕೈಗೊಳ್ಳುವುದು. ಆದರೆ ಎಷ್ಟು ಹಿಂದಕ್ಕೆ ಎಂದರೆ ‘ಎಲ್ಲಿಯವರೆಗೆ ತಮ್ಮ ಪೂರ್ವ ನಿರ್ಧಾರಗಳಿಗೆ ಒಪ್ಪುವ ಅರ್ಥಗಳು ದೊರಕುತ್ತವೆಯೋ ಅಷ್ಟರವರೆಗೆ ಮಾತ್ರ’– ಇದು ಶಂಬಾ ಮಾದರಿ.  ಹೀಗೆ ಹಿಂದಕ್ಕೆ ಹೋಗುವಾಗ ಎದುರಾಗುವ ಅನೇಕ ಸಂಗತಿಗಳನ್ನು ನಿಭಾಯಿಸುವ ಅನೇಕ ಮಾದರಿಗಳಿವೆ. ಈ ಹಿಂಪಯಣದಲ್ಲಿ ಮತ್ತೆ ಎದುರಾಗುವ ಎಲ್ಲವನ್ನೂ ಅನುಸಂಧಾನ ಮಾಡುವುದೋ ಅಥವಾ ತನಗೆ ಬೇಕಾದುದನ್ನು ಮಾತ್ರ ಪುನರ್‌ವ್ಯಾಖ್ಯಾನಿಸುವುದೋ?

ತೀರ್ಮಾನಗಳನ್ನು ಈಗಾಗಲೇ ಸಿದ್ಧಗೊಳಿಸಿಕೊಂಡಿರುವ ಶಂಬಾ ತಮ್ಮ ತೀರ್ಮಾನವನ್ನು ಪ್ರಶ್ನಿಸುವ ಸಂಗತಿಗಳನ್ನು ಅನುಕೂಲಕರವಾಗಿ ನಿರ್ಲಕ್ಷಿಸುತ್ತಾರೆ. ಉದಾಹರಣೆಗೆ ಬೌದ್ಧ ಧರ್ಮದ ಕಾಲವನ್ನು ದಾಟಿ ಮುಂದಕ್ಕೆ ಹೋಗುವಾಗ ತಪ್ಪಿಯೂ ಅದನ್ನು ಮಾತನಾಡಿಸುವ ಗೋಜಿಗೆ ಹೋಗುವುದಿಲ್ಲ. ಗ್ರೀಕ್‌ನ ಅರಿಸ್ಟಾಟಲ್, ಪ್ಲೇಟೋ, ಪೈಥಾಗೊರಸ್ ಮಾತ್ರ ಎದುರಿಗೆ ಬರುತ್ತಾರೆ; ಪೂರ್ವದ ಲಾವೊತ್ಸು ಆಗಲೀ ಕನ್‌ಫ್ಯೂಷಿಯಸ್ ಆಗಲಿ ಎದುರಿಗೆ ಬರುವುದಿಲ್ಲ.

ಇನ್ನು ಇಡಿಯಾಗಿ ಭಾರತೀಯ ತಾತ್ವಿಕತೆಯ ಪ್ರಧಾನ ಭೂಮಿಕೆಯ ಸಿದ್ಧಪಂಥವೂ ಶಂಬಾ ಅವರಿಗೆ ಒಂದೆರಡು ಸಾಲಿನ ಉತ್ತರಕ್ಕೆ ಮಾತ್ರ ಅರ್ಹವೆನ್ನಿಸುತ್ತದೆ. ಅಲ್ಲಮ ಪದ ಕೊನೆಯವರೆಗೂ ಶಂಬಾ ಅವರನ್ನು ಕೆಣಕುತ್ತಲೇ ಇತ್ತು. ಅವನ ಅನೇಕ ಪಾಂಥಿಕ ಮೂಲಗಳು ಕೆಣಕುತ್ತಿದ್ದವು. ಅವನ ಹೆಸರಿನ ನಿಷ್ಟತ್ತಿಯ ಬಗೆಗೆ ಅಪಾರ ಕುತೂಹಲ ತೋರಿಸುವ ಶಂಬಾ ಅವರಿಗೆ ವಚನತಾತ್ವಿಕತೆಯಲ್ಲಿ ಅವನ ಭಿನ್ನ ದನಿಯ ಬಗೆಗೆ ಒಂದಿಷ್ಟು ಆಸಕ್ತಿಯೂ ಮೂಡುವುದಿಲ್ಲ. ಅವನ ವಚನಗಳನ್ನು ಅವರು ಎದುರಾಗುವುದೇ ಇಲ್ಲ. ‘ಅಲ್ಲ’ ಇದು ಸಂಪ್ರದಾಯವೆ? ಶೈವದ ಅನೇಕ ಶಾಖೆಗಳಲ್ಲಿ ಇದೂ ಒಂದೆ?  ಮಹಮ್ಮದೀಯರ ದೇವತಾನಾಮ ಇದೂ ಒಂದೆಯೆ? ಅವರ ಮನಸ್ಸು ಅದನ್ನು ಒಪ್ಪಲು ಹಿಂಜರಿಯುತ್ತದೆ! ಲ್ಹಾಮ ಎಂಬ ಪದವೇಕೆ ಅವರಿಗೆ ಹೊಳೆಯುವುದಿಲ್ಲವೋ ಕಾಣೆ.

ಇಂತಹ ಅನೇಕ ನಿಲುವುಗಳಿಂದಾಗಿ ಶಂಬಾ ತೀವ್ರವಾಗಿ ಪ್ರಶ್ನಿಸಬೇಕಾದ ವಿದ್ವಾಂಸರು. ಇಂತಹ ಪ್ರಯತ್ನಗಳು ಅವರ ಸಂಶೋಧನಾ ಬರಹಗಳ ಬಗೆಗೆ ಆಗಬೇಕಾಗಿತ್ತು. ಬದಲಿಗೆ ಶಂಬಾ ಅವರನ್ನೇ ಒಂದು ಪ್ರಮಾಣವನ್ನಾಗಿಸಿ ಪ್ರತಿಷ್ಠಾಪಿಸಲಾಗಿದೆ. ಇಷ್ಟಾಗಿ ಹೀಗೆ ಪ್ರಶ್ನಿಸುವ ಒಂದು ಪರಂಪರೆಯನ್ನು ಅವರೇ ಪೋಷಿಸಿದ್ದಾರೆ ಎನ್ನುವುದು ಅಷ್ಟೇ ಪ್ರಿಯವಾದ ಸಂಗತಿಯಾಗಿದೆ. ಮೊಗಳ್ಳಿಯವರ ಈ ಕೃತಿ ಅಂತಹ ಒಂದು ಗಂಭೀರ ಪ್ರಯತ್ನದ ಆರಂಭವೆನ್ನಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT