ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಾನುಗತ ಸ್ವಗತ

Last Updated 2 ನವೆಂಬರ್ 2019, 19:30 IST
ಅಕ್ಷರ ಗಾತ್ರ

ಆಗಾಗ್ಗೆ ಅವುಗಳನು ಹರಡಿ ಕುಳಿತಾಗ
ಮಂಜುಗಣ್ಣಿಗೆ ಕಷ್ಟವಾಗುವುದು
ಓದಲು ಮತ್ತು ನೋಡಲೂ
ಅವುಗಳೆಂದರೆ ಅವುಗಳನೇ..
ಬಿಸಾಡಲಾಗದ ನನ್ನ ಖಾಸಗಿ ಪತ್ರಗಳು
ಹಳೆಯವು; ಓದಲು ತೆರೆದರೆ ಈ ಕ್ಷಣದಷ್ಟೇ
ಹೊಸತಾಗುವಂತಹವು

ನೀವು ಈ ಪತ್ರಗಳನು ಇಂಕುಮಸಿಯಲಿ
ಬರೆದು, ಅಕ್ಷರ ತುಂಬಿದ ಬರಿಯ
ಹಾಳೆಗಳೆಂದರೆ, ಮಾರುತ್ತರ ಕೊಡಲಾಗದು
ನನಗೆ
ಅವುಗಳೊಳಗೆ ಯಾವುದೋ
ಸಂಭ್ರಮಕ್ಕೆ ಹತ್ತಿದ ಅತ್ತರಿನ ವಾಸನೆ
ಮಿಂಚು-ಮೊರೆತ; ಬಂಡೆ ಭಾರ; ಹತ್ತಿ ಹಗೂರ;
ಜೇನು ಸಿಹಿ; ಒಗರು, ಹುಳಿ, ಖಾರ
ಹೂಮೃದು ಮತ್ತೂ ಆಗಾಗ್ಗೆ ಅದರ
ವಿರುದ್ಧದಷ್ಟು ಒರಟು.. ಕಾಣುತ್ತದೆಂದು
ನೀವು ಒಪ್ಪುವುದಿಲ್ಲವಾದರೂ ನಾನು
ಬಿಸುಡಲಾರೆ ಅವುಗಳನು

ಪದೇಪದೇ ಓದುತ್ತಿರುತ್ತೇನೆ...
ರಾತ್ರಿಯ ನೀರವದಲಿ, ಮುಂಜಾವಿನ
ಹಿತದ ಬೆಳಕು, ನಡು ಮಧ್ಯಾಹ್ನದ
ರೌದ್ರ ಬಿಸಿಲು, ಹೀಗೆ ಭಯಂಕರ
ಬದಲಾಗುವ ತಾಪಮಾನ; ಹಾಗೂ
ತಲ್ಲಣದ ಹವಾಮಾನಗಳ ವೈಪರೀತ್ಯ
ಸನ್ನಿವೇಶಗಳಲಿ ಒಂದು ವರದಿ
ಓದುವಂತೆ
ಅವು ಮಾತ್ರ ನಿಮ್ಮ ಈ ಜಗತ್ತಿಗೆ ಸಂಬಂಧಿಸಿದವುಗಳು ಆಗಿರುವುದಿಲ್ಲ
ಹಾಗಾಗಿ ಬಿಸುಟ್ಟರೂ ನಿಮಗೇನೂ
ಬೇಸರವಾಗುವುದಿಲ್ಲ, ಕ್ಷಮಿಸಿ, ನನಗೆ
ಮಾತ್ರ ಹಾಗೆ ಮಾಡಲಾಗುವುದಿಲ್ಲ...

ಗುಳಿಗೆ ಕಟ್ಟಿಕೊಡುತ್ತಿದ್ದ, ಕುಂಕುಮಾರ್ಚನೆ
ಮಾಡಿಸಿದ, ಆಗಾಗ್ಗೆ ಜತನದಿ ಆರಿಸಿ
ತಂದ ಚಿನ್ನದಂಗಡಿಯ ಮುತ್ತು, ರತ್ನ, ಹರಳುಗಲ್ಲಿನ
ಚೂರನ್ನಿಟ್ಟ ಪೊಟ್ಟಣಗಳಂತಾ ಪತ್ರಗಳವು
ನಾನವುಗಳನ್ನು ಹಾಗೆಯೇ ಕರೆಯುವುದು
ಗಣಿಗಳೆಂದು ನನ್ನ ಗುಳಿಗೆಗಳ ಗಣಿಗಳೆಂದು...

ನಿಮಗೆ ಅವು ಕಾಗದದ ಚೂರು ಮಾತ್ರ
ನನಗೆ ಬಾಲ್ಯದಲಿ ಪೆಪ್ಪರ್ಮೆಂಟು ಕಟ್ಟಿಕೊಟ್ಟಿದ್ದ
ಅಂಟುಮೆತ್ತಿದ ನಂಟುಳ್ಳವು, ಆಗಾಗ್ಗೆ
ಚಪ್ಪರಿಸಿಕೊಳ್ಳುವಂತಿರುವ ಹಳೆಯ ಪತ್ರಗಳು...

ಇಟ್ಟಲ್ಲೇ ಇದ್ದುಬಿಡುವ ಅವುಗಳನ್ನು ಕಂಡು
ನೀವೇನಾದರು ಬಿಸುಟರೆ, ನನಗಾದರೂ ಬಿಸಾಡಲು
ಹೇಳುವಿರೆಂದರೆ.., ಇದೋ ಈಗಲೀಗ ಅವು
ನನ್ನೊಡನೆ ಮಾತನಾಡುವುದನ್ನು ನಿಮಗೆ
ಹೇಳಬಲ್ಲೆ... ಸತ್ಯ ಪ್ರಾಮಾಣಿಸುತ್ತಾ

ನೋಡಿರಿ, ಅವುಗಳಲ್ಲಿ ಇನ್ನೂ ಉಸುರಿದೆ
ಮರುಹುಟ್ಟಾಗುವ ಬಸುರಿದೆ, ಹಳತಾದಷ್ಟೂ
ನನ್ನೊಳಗೆ ಚಿಗುರುವ ಫಲವಂತಿಕೆಯ
ಬೀಜಗಳನು ಅವು ಮತ್ತೆ ಮತ್ತೆ ಬಿತ್ತಬಹುದಾಗಿವೆ
ಭಾವನೆಯೇ ಭ್ರೂಣವಾಗಿ ಕಾವಿಗೆ ಕೂತರೆ
ಮರಿಯಾಗುವ ನಿಗೂಢ ಮೊಟ್ಟೆಗಳಂತಿವೆ
ಅವುಗಳನು ನಾನಾದರೂ ನೀವು ಹೇಳಿದ
ಮಾತ್ರಕ್ಕೆ ಹೇಗೆ ಬಿಸಾಡಲಿ ಹೇಳಿ...?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT